Tag: ಗ್ರಾಮ

  • ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದ ಕಾಡಾನೆಗಳು

    ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದ ಕಾಡಾನೆಗಳು

    – ನೀರಿನ ದಾಹ ತೀರಿಸಿಕೊಳ್ಳಲು ಕಾಡಾನೆಗಳು ಗ್ರಾಮಕ್ಕೆ ಎಂಟ್ರಿ

    ಹಾಸನ: ಎರಡು ಕಾಡಾನೆಗಳು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೀರನ್ನು ಅರಸಿ ಗ್ರಾಮದೊಳಗೆ ಎಂಟ್ರಿಕೊಟ್ಟಿದ್ದು, ಕಾಫಿ ಎಸ್ಟೇಟ್ ಬಳಿಯ ಮನೆಯ ಸಮೀಪದ ಟ್ಯಾಂಕ್‍ನಿಂದ ನೀರು ಕುಡಿದು ದಾಹ ತೀರಿಸಿಕೊಂಡಿವೆ.

    ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ದೇವಿ ಎಸ್ಟೇಟ್ ನಲ್ಲಿರುವ ಕುಮಾರ್ ಅವರ ಮನೆಯ ಆವರಣಕ್ಕೆ ಕಾಡಾನೆಗಳು ಬಂದಿವೆ. ನಂತರ ಮನೆಯ ಸುತ್ತ ಸಾಗಿದ ಆನೆಗಳು, ಮನೆಯ ಹಿಂಭಾಗವಿರುವ ಸಿಮೆಂಟ್ ತೊಟ್ಟಿಯ ಬಳಿ ಬಂದು ನೀರು ಕುಡಿದು ಬಾಯಾರಿಸಿಕೊಂಡಿವೆ. ನೀರು ಕುಡಿದ ನಂತರ ಕಾಫಿ ತೋಟದೊಳಗೆ ಆನೆಗಳು ಸಾಗಿವೆ.

    ಕಾಡಾನೆ ಕಂಡು ಹೆದರಿ ಯುವತಿ ಮನೆಯೊಳಗೆ ಓಡಿದ್ದು, ಬಾಗಿಲು ಹಾಕಿಕೊಂಡಿದ್ದಾರೆ. ನಂತರ ಆನೆ ನೀರು ಕುಡಿಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಮನೆಯ ಸಮೀಪ ಬಂದು ನಿರ್ಭೀತಿಯಿಂದ ನೀರು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಭಾಗದಲ್ಲಿ ಕಾಡಾನೆಗಳ ದಾಳಿ ವಿಪರೀತವಾಗಿದ್ದು, ಹಲವರನ್ನು ತುಳಿದು ಸಾಯಿಸಿವೆ. ಹೀಗಾಗಿ ಆದಷ್ಟು ಬೇಗ ಕಾಡಾನೆಗಳು ಜಮೀನಿಗೆ ಬರದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕಾರು ಡಿಕ್ಕಿ ಬೈಕ್ ಸವಾರ ಸಾವು- ವಾಟ್ಸಪ್ ಸ್ಟೇಟಸ್ ಹುಟ್ಟಿಸಿತಾ ವೈಷಮ್ಯ?

    ಕಾರು ಡಿಕ್ಕಿ ಬೈಕ್ ಸವಾರ ಸಾವು- ವಾಟ್ಸಪ್ ಸ್ಟೇಟಸ್ ಹುಟ್ಟಿಸಿತಾ ವೈಷಮ್ಯ?

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷರ ಕಾರು ಡಿಕ್ಕಿಯಾಗಿ ಗ್ರಾಮಸ್ಥರೋರ್ವರು ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಇದು ಅಪಘಾತವಲ್ಲ ಕೊಲೆ ಎಂಬ ಆರೋಪ ಗ್ರಾಮಸ್ಥರಲ್ಲಿ ಕೇಳಿ ಬಂದಿದೆ.

    ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯತ್‍ನ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಅವರ ಕಾರು, ಇದೇ ಗ್ರಾಮದ ಉದಯ ಗಾಣಿಗ ಎಂಬವರ ಬೈಕ್ ನಡುವೆ ಅಪಘಾತವಾಗಿತ್ತು. ಬಳಿಕ ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದರು. ಅಪಘಾತದಲ್ಲಿ ಗಾಯಗೊಂಡ ಉದಯ ಗಾಣಿಗರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಅಂಬುಲೆನ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಅಪಘಾತ ಅಲ್ಲ ಕೊಲೆ ಎಂದು ಗ್ರಾಮದಲ್ಲಿ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಕೊಲೆ ಆರೋಪ ಬರಲು ಕಾರಣ?
    ಎಡಮೊಗೆ ಗ್ರಾಮದಲ್ಲಿ ಐವತ್ತಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಇರುವುದರಿಂದಾಗಿ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಬೆನ್ನಲ್ಲೇ ಪೊಲೀಸರು ಗ್ರಾಮದ ಸುತ್ತ ಬ್ಯಾರಿಕೇಡ್ ಇಟ್ಟು ನಾಕಾಬಂದಿ ಹಾಕಿದ್ದರು. ಅಧ್ಯಕ್ಷರು ಮತ್ತು ಅವರ ಬೆಂಬಲಿಗರು ಗ್ರಾಮಕ್ಕೆ ಪ್ರವೇಶ ಮಾಡುವ ಪ್ರಮುಖ ರಸ್ತೆಯಲ್ಲಿ ಪೊಲೀಸರು ಇರಿಸಿದ್ದ ಬ್ಯಾರಿಕೇಡ್ ಸಮೀಪ ಕೂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಬೆಳವಣಿಗೆ ನಂತರ ಉದಯ ಗಾಣಿಗ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದರು.

    ಗಾಣಿಗರ ಸ್ಟೇಟಸ್ ಏನಿತ್ತು?
    ಎರಡು ದಿನಗಳ ಹಿಂದೆ ಸ್ಟೇಟಸ್ ನಲ್ಲಿ ‘ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ’. ‘ಲಾಕ್ ಡೌನ್ ಮಾಡಿ ಪೋಸು ಕೊಡಬೇಡಿ’. ‘ಕೊರೋನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ’ ಅಂತ ಉದಯ ಗಾಣಿಗ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದು ಪ್ರಾಣೇಶ್ ಯಡಿಯಾಳ್ ವಿರುದ್ಧ ಎಂದು ಗ್ರಾಮದಲ್ಲಿ ಚರ್ಚೆಯಾಗಿತ್ತು.

    ಶನಿವಾರ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗರ ಬೈಕ್‍ಗೆ ಪ್ರಾಣೇಶ್ ಯಡಿಯಾಳ್ ಅವರ ಕಾರು ಡಿಕ್ಕಿಯಾಗಿದೆ. ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಕಾರುಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಪ್ರಾಣೇಶ್ ಯಡಿಯಾಳ್ ಇರಲಿಲ್ಲ ಎಂಬ ಬಗ್ಗೆಯೂ ಮಾಹಿತಿಯಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋವಿಡ್ ಟೆಸ್ಟ್‌ಗೆ ಸಹಕರಿಸದ ಹಾವೇರಿಯ ನಾಗಲಾಪೂರ ಜನ- ಗ್ರಾಮ ಸಂಪೂರ್ಣ ಲಾಕ್

    ಕೋವಿಡ್ ಟೆಸ್ಟ್‌ಗೆ ಸಹಕರಿಸದ ಹಾವೇರಿಯ ನಾಗಲಾಪೂರ ಜನ- ಗ್ರಾಮ ಸಂಪೂರ್ಣ ಲಾಕ್

    ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ಹಾಗೂ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ನಾಗಲಾಪೂರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ತಪಾಸಣೆಗೆ ನಿರಾಕರಿಸುತ್ತಿರುವುವುದು ಕಂಡುಬರುತ್ತಿದೆ. ಇಂತಹ ಗ್ರಾಮಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಎಚ್ಚರಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ತಪಾಸಣೆಗೆ ಸಹಕರಿಸದೇ, ಆರೋಗ್ಯ ಸಿಬ್ಬಂದಿ ತಪಾಸಣೆಗೆ ತೆರಳಿದರೆ ಮನೆಯೊಳಗೆ ಸೇರಿಕೊಂಡು ಪ್ರತಿಭಟಿಸುತ್ತಿರುವುದು ಕಂಡುಬಂದಿದೆ. ಬ್ಯಾಡಗಿ ತಾಲೂಕಿನ ನಾಗಲಾಪೂರ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು, ಇಡಿ ಗ್ರಾಮವನ್ನು ಲಾಕ್‍ಡೌನ್ ಮಾಡುವಂತೆ ಘೋಷಿಸಲಾಗಿದೆ. ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಓಡಾಟವನ್ನು ಪೂರ್ಣ ನಿರ್ಬಂಧಿಸಲಾಗಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮಗಳಲ್ಲಿ ಮುಂದುವರೆದರೆ ಇಡಿ ಗ್ರಾಮವನ್ನು ಲಾಕ್‍ಡೌನ್ ಮಾಡಲಾಗುವುದು ಎಂದು ಎಚ್ಚರಿಸಿದರು.

    ಗ್ರಾಮೀಣ ಪ್ರದೇಶದಲ್ಲಿ ಸರ್ವೇ, ಪರೀಕ್ಷೆ ಹಾಗೂ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ಗ್ರಾಮೀಣ ಟಾಸ್ಕ್ ಫೋರ್ಸ್ ಕೋವಿಡ್ ನಿಯಂತ್ರಣದ ಪೂರ್ಣ ಜವಾಬ್ದಾರಿ ನೀಡಲಾಗಿದೆ. ಆದರೆ ನಾಗಲಾಪೂರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿರುವುದಿಲ್ಲ. ಯಾವುದೇ ಗ್ರಾಮಗಳಲ್ಲಿ ಈ ರೀತಿಯ ಬೆಳವಣಿಗೆ ನಡೆದರೆ ಆಯಾ ಗ್ರಾಮದ ಗ್ರಾಮೀಣ ಟಾಸ್ಕ್ ಫೋರ್ಸ್ ಕೋವಿಡ್ ಪೆಂಡ್‍ಮಿಕ್ ಕಾಯ್ದೆ ಅನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

  • ಒಂದೇ ಗ್ರಾಮದ 91 ಮಂದಿಗೆ ಕೊರೊನಾ ಪಾಸಿಟಿವ್

    ಒಂದೇ ಗ್ರಾಮದ 91 ಮಂದಿಗೆ ಕೊರೊನಾ ಪಾಸಿಟಿವ್

    ಹಾಸನ: ಒಂದೇ ಗ್ರಾಮದ 91 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ.

    ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಲ್ಯ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದ್ದು, ಕಳೆದ ಒಂದೂವರೆ ತಿಂಗಳಲ್ಲಿ 91 ಪಾಸಿಟಿವ್ ಕೇಸ್ ಬಂದಿವೆ. ಹೀಗಾಗಿ ಅಧಿಕಾರಿಗಳು ಗ್ರಾಮವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿ, ಸೀಲ್ ಡೌನ್ ಮಾಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಸಂಚಾರ – ಪಾಸಿಟಿವ್ ವ್ಯಕ್ತಿಯ ಕುಟುಂಬವೇ ಆಸ್ಪತ್ರೆಗೆ ಶಿಫ್ಟ್

    50 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 50 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕೆಲವರು ಖಾಸಗೀ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಕೋವಿಡ್ ನಿಂದ ಒಬ್ಬರು ಮೃತಪಟ್ಟಿದ್ದು, ಗ್ರಾಮಕ್ಕೆ ಯಾರೂ ಬರದಂತೆ ಹಾಗೂ ಗ್ರಾಮದಿಂದ ಯಾರೂ ಹೋರ ಹೋಗದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

  • ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ಮಾಡಿ ಪೂಜೆ ಮಾಡಿದ ಗ್ರಾಮಸ್ಥರು

    ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ಮಾಡಿ ಪೂಜೆ ಮಾಡಿದ ಗ್ರಾಮಸ್ಥರು

    ಚಿತ್ರದುರ್ಗ: ದೇಶದಾದ್ಯಂತ ಕೊರೊನಾ ಸೋಂಕಿನಿಂದ ಜನರ ಪರಿಸ್ಥಿತಿ ಕಂಡು ಬೇಸತ್ತಿರುವ ಗ್ರಾಮಸ್ಥರು, ಕೊರೊನಾ ತೊಲಗಲಿ ಎಂದು ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿಗೆ ಪೂಜೆ ಮಾಡಿ ಮೌಢ್ಯಾಚರಣೆಯ ಮೊರೆ ಹೋಗಿರುವ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.

    ಕೊರೊನಾ ತೊಲಗಲಿ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದುಗ್ಗಾವರ ಗ್ರಾಮದ ಗ್ರಾಮಸ್ಥರು, ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ರಚಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ಮಧ್ಯಭಾಗದಲ್ಲಿ ಮೂರ್ತಿ ಸ್ಥಾಪಿಸಿ ಪೂಜೆ ನೆರವೇರಿಸಿದ ಗ್ರಾಮಸ್ಥರು ಕುರಿ, ಕೋಳಿ, ಮೊಸರನ್ನು ನೈವೇದ್ಯ ಅರ್ಪಣೆ ಮಾಡಿ ಮೌಢ್ಯಾಚರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ. ಕೊರೊನಾದಿಂದ ಪಾರಾಗಲು ಪೂಜೆ, ಪುನಸ್ಕಾರ – ಹಳ್ಳಿಗಳಲ್ಲಿ ನಡೀತಿದೆ ಶಾಂತಿ ಪೂಜೆ, ಹೋಮ

    ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಇದ್ದರು ಕೂಡ ಕೊರೊನಾ ಭೀತಿ ಮರೆತು ಮಾಸ್ಕ್, ದೈಹಿಕ ಅಂತರ ಪಾಲನೆ ಮಾಡದೆ ನೂರಾರು ಜನ ಮೌಢ್ಯಾಚರಣೆ ಮೊರೆಹೋಗಿದ್ದಾರೆ. ಗ್ರಾಮಸ್ಥರ ನಂಬಿಕೆ ಪ್ರಕಾರ ಈ ರೀತಿ ಪೂಜೆ, ನೈವೇದ್ಯ ಅರ್ಪಣೆ ಮಾಡಿ ಕೊರೊನಮ್ಮ ಮೂರ್ತಿ ಊರ ಸೀಮೆ ದಾಟಿಸಿದರೆ ಕೊರೊನಾ ಗ್ರಾಮಕ್ಕೆ ಬರುವುದಿಲ್ಲ ಎಂದು ನಂಬಿಕೆ ಇಟ್ಟುಕೊಂಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಉಪವಿಭಾಗಾಧಿಕಾರಿಗಳಿಂದ ಉತ್ನಾಳ್ ತಾಂಡಾ ಎಲ್‍ಟಿ 2 ಗ್ರಾಮಕ್ಕೆ ಭೇಟಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಉಪವಿಭಾಗಾಧಿಕಾರಿಗಳಿಂದ ಉತ್ನಾಳ್ ತಾಂಡಾ ಎಲ್‍ಟಿ 2 ಗ್ರಾಮಕ್ಕೆ ಭೇಟಿ

    ವಿಜಯಪುರ: ಜಿಲ್ಲೆಯ ಉತ್ನಾಳ್ ತಾಂಡಾ ಎಲ್‍ಟಿ 2 ಗ್ರಾಮದಲ್ಲಿ ಕೋವಿಡ್ ಸೋಂಕಿತರಿಗೆ ಸರಿಯಾದ ಔಷಧಿ ವಿತರಣೆ ಆಗುತ್ತಿಲ್ಲ ಎಂಬ ಪಬ್ಲಿಕ್ ಟಿವಿಯ ವಿಸ್ತøತ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿ ಪಿ,ಸುನಿಲ್ ಕುಮಾರ್ ಅವರ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ ಅವರು ಉತ್ನಾಳ್ ತಾಂಡಾ ಎಲ್‍ಟಿ2 ಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದ್ದಾರೆ.

    ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿದ ಬಲರಾಮ್ ಲಮಾಣಿ, ಕೊರೊನಾ ಪಾಸಿಟಿವ್ ಬಂದವರು, ಕುಟುಂಬದ ಉಳಿದ ಸದಸ್ಯರಿಂದ ಪ್ರತ್ಯೇಕವಾಗಿ ವಾಸಿಸಲು ಗ್ರಾಮಸ್ಥರಲ್ಲಿ ಮನವರಿಕೆ ಮಾಡಿದರು. ಪ್ರತ್ಯೇಕ ಕೋಣೆ ಇರದೇ ಇದ್ದ ಪಕ್ಷದಲ್ಲಿ ಗ್ರಾಮದಲ್ಲಿರುವ ಶಾಲೆಯಲ್ಲಿ ವಾಸವಾಗುವಂತೆ ಸೂಚನೆ ನೀಡಿದರು.

    ವೈದ್ಯರು ನೀಡಿದ ಮಾತ್ರೆಗಳನ್ನು ತಪ್ಪದೇ ಸೇವಿಸುವಂತೆ ಮತ್ತು ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಸೂಕ್ತ ತಿಳುವಳಿಕೆ ನೀಡಿ, ಗ್ರಾಮಸ್ಥರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸರಿಯಾದ ಕ್ರಮ ಪಾಲಿಸುವಂತೆ ಮನವಿ ಮಾಡಿಕೊಂಡರು.

  • ಲಾಕ್‍ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಮಾರಿ ಹಬ್ಬ

    ಲಾಕ್‍ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಮಾರಿ ಹಬ್ಬ

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ಕಾಣುತ್ತಿದ್ದರೂ ಕೂಡ ಜನ ಮಾತ್ರ ಬುದ್ಧಿ ಕಲಿತಿಲ್ಲ. ಲಾಕ್‍ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಮಾರಿ ಹಬ್ಬ ಆಚರಿಸಿ ಸಾವಿರಾರು ಕೋಳಿಗಳನ್ನು ಬಲಿ ಕೊಟ್ಟಿದ್ದಾರೆ.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರು ಕೊರೊನಾ ಹೋಗಲಾಡಿಸಲು ಬಲಿ ಪೂಜೆ ಆಚರಣೆ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಂಡು ಬಂದರೂ ಜನ ಮಾತ್ರ ಕ್ಯಾರೆ ಎನ್ನದೇ ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಪ್ರತಿ ವರ್ಷ ಗ್ರಾಮದಲ್ಲಿ ಮಾರಿ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೂ ಗ್ರಾಮದ ಕೆಲವರು ನಿಯಮ ಉಲ್ಲಂಘಿಸಿ ಕೋಳಿ ಬಲಿಕೊಟ್ಟು ಕೊರೊನಾ ಮುಕ್ತವಾಗಲಿ ಗ್ರಾಮಕ್ಕೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ.

  • ಎರಡು ಅಲೆಗಳಲ್ಲಿಯೂ ಈ ಗ್ರಾಮಗಳಿಗೆ ಕೊರೊನಾ ನೋ ಎಂಟ್ರಿ- ಎಂಥ ಕಟ್ಟುನಿಟ್ಟಿನ ನಿಯಮ ಪಾಲಿಸ್ತಿದ್ದಾರೆ ಗೊತ್ತಾ?

    ಎರಡು ಅಲೆಗಳಲ್ಲಿಯೂ ಈ ಗ್ರಾಮಗಳಿಗೆ ಕೊರೊನಾ ನೋ ಎಂಟ್ರಿ- ಎಂಥ ಕಟ್ಟುನಿಟ್ಟಿನ ನಿಯಮ ಪಾಲಿಸ್ತಿದ್ದಾರೆ ಗೊತ್ತಾ?

    – ನಗರ ಪ್ರದೇಶಗಳಿಗೇ ತೆರಳಲ್ಲಿ ಇಲ್ಲಿನ ಗ್ರಾಮಸ್ಥರು

    ಧಾರವಾಡ: ಕೊರೊನಾ ಮೊದಲನೇ ಅಲೆ ಮಾತ್ರವಲ್ಲ ಇಷ್ಟೆಲ್ಲ ಪ್ರಕರಣಗಳು ವರದಿಯಾಗಿ ಪರಿಸ್ಥಿತಿ ಗಂಭಿರವಾದರೂ ಜಿಲ್ಲೆಯ ಈ ಗ್ರಾಮಗಳಿಗೆ ಮಾತ್ರ ಕೊರೊನಾ ಎಂಟ್ರಿ ಕೊಟ್ಟಿಲ್ಲ.

    ನಗರದಿಂದ 30 ಕಿ.ಮೀ. ದೂರಲ್ಲಿರುವ ಹುಣಶಿಕುಮರಿ ಹಾಗೂ ಶಿವನಗರ ಗ್ರಾಮಗಳಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಕೇಸ್ ಬಂದಿಲ್ಲ. ಈ ಗ್ರಾಮಗಳಲ್ಲಿ 100 ರಿಂದ 150 ಮನೆಗಳಿದ್ದು, 800 ರಿಂದ 1000 ಜನಸಂಖ್ಯೆ ಇದೆ. ಈ ಗ್ರಾಮದ ಜನ ಎರಡಲೇ ಅಲೆ ಆರಂಭವಾದಾಗಿನಿಂದ ನಗರಕ್ಕೆನೇ ಬಂದಿಲ್ಲ. ಏನಾದರೂ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ದಿನಸಿ ಹಾಗೂ ತರಕಾರಿ ತರುತಿದ್ದಾರೆ.

    ನಗರಗಳ ಕಡೆ ಯಾರೂ ಹೋಗದಂತೆ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ನಗರದಿಂದ ಗ್ರಾಮಕ್ಕೆ ಬಂದವರಿಗೆ ಪ್ರವೇಶ ನೀಡುತ್ತಿಲ್ಲ. ಜಾನುವಾರು ಸಾಕಿ ಜೀವನ ನಡೆಸುವ ಇವರು, ಸದ್ಯ ಹೊಲ ಗದ್ದೆ ಕೆಲಸವನ್ನ ಮಾಡುತ್ತಲೇ ಜೀವನ ನಡೆಸುತಿದ್ದಾರೆ. ಇನ್ನು ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಮಾಡದಂತೆ ಎಚ್ಚರಿಕೆ ನೀಡಿರುವ ಗ್ರಾಮದ ಹಿರಯರು, ಹೊರ ಗ್ರಾಮಗಳಲ್ಲಿ ಕೂಡಾ ಕಾರ್ಯಕ್ರಮ ಇದ್ದರೆ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

    ಅಲ್ಲದೆ ಹಾಲು ಹಾಕಲು ಬೇರೆ ಗ್ರಾಮಕ್ಕೆ ತೆರಳಲು ಗ್ರಾಮದ ಇಬ್ಬರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ಅದೇ ಇಬ್ಬರು ದಿನಸಿ ಕೂಡ ತಂದು ಕೊಡಬೇಕು. ಈ ರೀತಿಯಾಗಿ ನಿಮಯ ಮಾಡಿ ಗ್ರಾಮಕ್ಕೆ ಕೊರೊನಾ ಎಂಟ್ರಿ ಕೊಡದಂತೆ ಎಚ್ಚರಿಕೆ ವಹಿಸಿದ್ದಾರೆ.

  • ಕೊರೊನಾದಿಂದ ವ್ಯಕ್ತಿ ಸಾವು- ಊರೊಳಗೆ ಶವ ತರಲು ಸ್ಥಳೀಯರ ವಿರೋಧ

    ಕೊರೊನಾದಿಂದ ವ್ಯಕ್ತಿ ಸಾವು- ಊರೊಳಗೆ ಶವ ತರಲು ಸ್ಥಳೀಯರ ವಿರೋಧ

    ಗದಗ: ಕೊರೊನಾ ಶಂಕೆ ಇರುವ ಮೃತ ವ್ಯಕ್ತಿಯ ಶವ ಊರೊಳಗೆ ತರದಂತೆ ಸ್ಥಳೀಯರು ತಾಕೀತು ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬಾಸಲಾಪೂರದಲ್ಲಿ ನಡೆದಿದೆ.

    ಗ್ರಾಮದ 62 ವರ್ಷದ ನಿವೃತ ಪೊಲೀಸ್ ಸಿಬ್ಬಂದಿಯೋರ್ವ ಬಾದಾಮಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಆದ್ರೆ ಕೊರೊನಾ ರಿಪೋರ್ಟ್ ಬರುವುದು ತಡವಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್‍ನ ಯಾವುದೇ ನಿಯಮ ಪಾಲಿಸದೆ, ಶವ ಹಸ್ತಾಂತರಿಸಿದ್ದಾರೆ. ಶವವನ್ನು ಹಾಸಿಗೆ ಹಾಗೂ ಹೊದಿಕೆಯಲ್ಲಿ ಸುತ್ತಿ ಹಾಗೇ ಕೊಟ್ಟಿದ್ದಾರೆ.

    ಖಾಸಗಿ ಆಸ್ಪತ್ರೆಯ ಎಡವಟ್ಟು ನಿಂದ ಕುಟುಂಬಸ್ಥರು ಶವ ಊರಲ್ಲಿರುವ ಮನೆ ಬಳಿ ತರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆಂದು ಬಂದ ಕುಟುಂಬಸ್ಥರಿಗೆ ಗ್ರಾಮಸ್ಥರು ಗ್ರಾಮದೊಳಗೆ ಬಿಡುತ್ತಿಲ್ಲ. ಅಂಬುಲೆನ್ಸ್‌ನಲ್ಲಿ ಬಂದ ಶವ ಊರಾಚೆ ಗಂಟೆಗಟ್ಟಲೆ ಕಾದಿದ್ದಾರೆ.

    ರಸ್ತೆಯಲ್ಲಿಯೇ ಶವದ ಜೊತೆಗೆ ಕುಟುಂಬಸ್ಥರು ಕಣ್ಣೀರು ಹಾಕುವಂತಾಯಿತು. ಇಂದಲ್ಲಾ ನಾಳೆ ರಿಪೋರ್ಟ್ ಬರಬಹುದು. ಆದರೆ ಕೊರೊನಾ ಎಲ್ಲಾ ಲಕ್ಷಣಗಳು ಇರುವುದರಿಂದ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಬಿಡೋದಿಲ್ಲ ಎಂದು ಸ್ಥಳಿಯರು ಪಟ್ಟು ಹಿಡಿದಿದ್ದಾರೆ. ನಂತರ ಸ್ಥಳಕ್ಕೆ ಪಿಡಿಓ, ಆರ್.ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಸ್ಥಿತಿ ತಿಳಿಗೊಳಿಸಿದರು. ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಪ್ರಕಾರ ಊರಾಚೆ ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದಾರೆ.

  • ಕೊರೊನಾ ಭೀತಿ – ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು

    ಕೊರೊನಾ ಭೀತಿ – ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು

    ಚಿತ್ರದುರ್ಗ: ಕೊರೊನಾ ಸೋಂಕಿನ ಭೀತಿಯಿಂದಾಗಿ ಬೆಚ್ಚಿರುವ ಜಿಲ್ಲೆಯ ಗ್ರಾಮಸ್ಥರು ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿ ಮೌಢ್ಯದ ಮೊರೆ ಹೋಗಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಮನ್ನೇಕೋಟೆ ಗ್ರಾಮದಲ್ಲಿ ಕೊರೊನಾ ಸೋಂಕಿನಿಂದಾಗಿ 25 ದಿನಗಳ ಅಂತರದಲ್ಲಿ 15 ಜನರ ಸರಣಿ ಸಾವಾಗಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರು, ಈ ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿ ಕಟ್ಟಿ ದಿಗ್ಬಂಧನ ಹಾಕಿದ್ದಾರೆ.

    ಈ ಮೂಲಕ ಕೊರೊನಾ ಗ್ರಾಮದೊಳಗೆ ಬರುವುದಿಲ್ಲ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಸುಮಾರು ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮವಾಗಿರುವ ಮನ್ನೇಕೋಟೆಯಲ್ಲಿ, ಕಳೆದ ಒಂದು ತಿಂಗಳಿಂದ 450ಕ್ಕೂ ಹೆಚ್ಚು ಜನರು ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ.

    ಗ್ರಾಮದಲ್ಲಿ 5 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, ಉಳಿದ 10 ಮಂದಿ ಇನ್ನಿತರೆ ರೋಗಗಳಿಗೆ ತುತ್ತಾಗಿದ್ದಾರೆ. ಆದರೆ ಸೌಜನ್ಯಕ್ಕೂ ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಮೌಢ್ಯದ ಮೊರೆ ಹೋಗಿದ್ದಾರೆ. ಕೊರೊನಾ ನಿಯಮ ಪಾಲಿಸದೇ ಮೂಢನಂಬಿಕೆ ಮೊರೆಹೋದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸದ ಜಿಲ್ಲಾಡಳಿತದ ವಿರುದ್ಧ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.