Tag: ಗ್ರಾಮ

  • ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ಚಿಕ್ಕಮಗಳೂರು: ಕೆರೆ ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿದ್ದು, ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

    ಸಖರಾಯಪಟ್ಟಣದ ಅಯ್ಯನಕೆರೆ ನೀರನ್ನು ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ಹರಿಸಬಾರದೆಂದು ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಎರಡೂ ಗ್ರಾಮಗಳ ಗ್ರಾಮಸ್ಥರ ನಡುವೆ ಗಲಾಟೆ ನಡೆದು, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪ್ರಸ್ತುತ ತಹಶೀಲ್ದಾರ್ ಭಾಗ್ಯ ಅವರು ಈ ಪ್ರದೇಶದಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. ಇದೀಗ ಸಖರಾಯಪಟ್ಟಣ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಿದರೆ ಬೋರ್‍ವೆಲ್‍ಗಳು ಅಂತರ್ಜಾಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತು ಹೊಲಗದ್ದೆಗಳಿಗೂ ನೀರು ಲಭಿಸಲಿದೆ ಎಂದು ಗುರುವಾರ ಜಿಗಣೇಹಳ್ಳಿಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

    https://www.youtube.com/watch?v=AmB7U5-ug8o

  • ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

    ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

    ಚಿಕ್ಕಬಳ್ಳಾಪುರ: ವಿವಿಧ ಭಾಷೆ, ಧರ್ಮ, ಜಾತಿ, ಮತ, ಪಂಥ ಗಳನ್ನು ಮೀರಿದ ಏಕತೆಯ ರೂಪವಾಗಿ ಭವ್ಯ ಭಾರತವನ್ನು ಕಾಣಬಹುದು. ಆದರೆ ಇತ್ತೀಚೆಗೆ ಜಾತಿ-ಜಾತಿ, ಧರ್ಮಗಳ ನಡುವೆಯೇ ರಾಜಕೀಯ ವ್ಯಕ್ತಿಗಳು ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆಗೆ ಸ್ಪಷ್ಟ ಸಾಕ್ಷಿ ಎಂಬಂತೆ ಇಲ್ಲೊಂದು ಗ್ರಾಮದ ಜನರಿಗೆ ಜಾತಿ-ಧರ್ಮಗಳಿಗಿಂತ ರಾಜಕೀಯ ಪಕ್ಷವೇ ಶ್ರೇಷ್ಠವಾಗಿದೆ. ತಮ್ಮ ಒಣ ಪ್ರತಿಷ್ಠೆಗಾಗಿ ಗ್ರಾಮದ ದೇವರಿಗೆ ಪ್ರತ್ಯೇಕ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.

    ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹುಜಗೂರು ಗ್ರಾಮದಲ್ಲಿ ಇಂತಹ ಬೆಳವಣಿಗೆ ಸಾಕ್ಷಿಯಾಗಿದ್ದು, ಈ ಗ್ರಾಮದಲ್ಲಿ ವಾಸಿಸುವ 130 ಕುಟುಂಬ ಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ರಾಜಕೀಯ ಸಂಘರ್ಷಕ್ಕೆ ಹೆಸರು ಪಡೆದಿದೆ. ಗ್ರಾಮದ 130 ಕುಟುಂಬಗಳ ಪೈಕಿ 74 ಕುಟುಂಬಗಳು ಜೆಡಿಎಸ್ ಪಕ್ಷ ಬೆಂಬಲಿಸಿದರೆ, ಉಳಿದ 56 ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಈ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತರ ಮನೆಗಳು ಇರುವ ಬೀದಿಗೆ ಕಾಂಗ್ರೆಸ್ ನವರು ಹೆಜ್ಜೆ ಇಡಲ್ಲ. ಕಾಂಗ್ರೆಸ್ ಬೆಂಬಲಿತರ ಮನೆಯ ಇರುವ ಕಡೆಗೆ ಜೆಡಿಎಸ್ ನವರು ಹೆಜ್ಜೆ ಹಾಕಲ್ಲ. ಅಷ್ಟೇ ಅಲ್ಲದೇ ಪರಸ್ಪರರು ಮಾತಾಡೋದು ಅಷ್ಟಕ್ಕಷ್ಟೇ.

    ಗ್ರಾಮದ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೂ ಅವರ ಪಕ್ಷದವರು ಇವರ ಮನೆಯ ಬಳಿ ಹೋಗಲ್ಲ. ಕೊನೆಗೆ ಶುಭ ಸಮಾರಂಭಗಳಿಗೂ ಹೋಗಲ್ಲ. ಚುನಾವಣೆ ಬರಲಿ – ಮುಗಿಯಲಿ, ವರ್ಷ ಪೂರ್ತಿಯೂ ಹಾವು ಮುಂಗುಸಿಯಂತೆ ಇರುತ್ತಾರೆ ಈ ಗ್ರಾಮದ ಕುಟುಂಬಗಳು.

    ಇವರ ಪಕ್ಷ ರಾಜಕೀಯ ಕಾದಾಟ ಕೇವಲ ಬರೀ ಮಾತಿನಲ್ಲಿ ನಿಲ್ಲದೇ ಹಬ್ಬ ಹರಿದಿನಗಳ ದೇವರ ಕಾರ್ಯದಲ್ಲೂ ನಡೆಯುತ್ತದೆ. ಯಾವುದೇ ಹಬ್ಬ, ರಾಷ್ಟ್ರೀಯ ಆಚರಣೆಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನವನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಗ್ರಾಮದಲ್ಲಿ ನಡೆಯುವ ಗಣೇಶ ಹಬ್ಬದಂದು ಬೇರೆ ಬೇರೆಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಸಂಕ್ರಾಂತಿ ಹಬ್ಬದಂದು ಪ್ರತ್ಯೇಕ ದೇವರ ಗುಡಿಗಳನ್ನು ನಿರ್ಮಿಸಿ ರಾಸುಗಳಿಗೆ ಕಿಚ್ಚು ಹಾಯಿಸಿ ಪೂಜೆ ನೇರವೇರಿಸಿದ್ದಾರೆ.

    ಈ ಗ್ರಾಮದಲ್ಲಿರುವ ಆಂಜನೇಯಸ್ವಾಮಿಗೆ ಶನಿವಾರ ಜೆಡಿಎಸ್ ಬೆಂಬಲಿತರು ಪೂಜೆ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತರು ಸೋಮವಾರ ಪೂಜೆ ಸಲ್ಲಿಸುತ್ತಾರೆ. ವಿಶೇಷ ಏನೆಂದರೆ ಕಾಂಗ್ರೆಸ್ ನವರು ಪ್ರತಿಷ್ಠಾಪಿಸಿರುವ ನವಗ್ರಹ ಕಲ್ಲುಗಳಿಗೆ ಜೆಡಿಎಸ್ ನವರು ನಮಸ್ಕಾರ ಹಾಕುವುದು ವಿರಳಾತಿ ವಿರಳ. ಅಲ್ಲದೇ ಆಟೋಗಳ ಮೂಲಕ ಪಟ್ಟಣಕ್ಕೆ ತೆರಳುವಾಗಲೂ ಸಹ ನಾವು ಕಾಂಗ್ರೆಸ್ ನೀವು ಜೆಡಿಎಸ್ ಎನ್ನುವ ಬೇಧ ಭಾವ ಕಾಣಸಿಗುತ್ತದೆ. ಇಂತಹ ಭೇದ ಭಾವಗಳು ಸದ್ಯ ಶಾಲೆಗೆ ಹೋಗುವ ಸಣ್ಣ ಮಕ್ಕಳಿಗೂ ತಟ್ಟಿದ್ದು ಅವರು ಕೂಡ ನಾವು ಜೆಡಿಎಸ್, ನಾವು ಕಾಂಗ್ರೆಸ್ ಪಕ್ಷ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

    ಮನೆಯೊಂದು ಮೂರು ಬಾಗಿಲು ಎಂಬಂತೆ ಗ್ರಾಮವೊಂದು ಎರಡು ಮನಸ್ಥಿತಿಗಳು ಎಂಬಂತಾಗಿ ಕಾಂಗ್ರೆಸ್, ಜೆಡಿಎಸ್ ಎಂದು ವಿಭಜನೆಯಾಗಿದೆ. ಆದರೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಗ್ರಾಮದ ಮುಂದಿನ ಮಕ್ಕಳ ಭವಿಷ್ಯ ಸ್ಥಿತಿ ಏನಾಗಬಹುದು ಎಂಬುದು ಹಲವರ ಚಿಂತೆ. ಆದರೆ ರಾಜಕೀಯ ಪಕ್ಷಗಳಿಗೆ ಮಾತ್ರ ಈ ಗ್ರಾಮದಲ್ಲಿ ಚುನಾವಣೆಗಾಗಿ ಹಣ ಖರ್ಚು ಮಾಡುವುದು ಬೇಡ, ಚುನಾವಣಾ ಪ್ರಚಾರ ಮಾಡುವುದು ಬೇಡ. ಗ್ರಾಮಸ್ಥರ ಮತಗಳು ತಮ್ಮ ಪಕ್ಷಕ್ಕೆ ಬಂದೇ ಬರುತ್ತವೆ ಎನ್ನುವ ಲೆಕ್ಕಾಚಾರ ರಾಜಕೀಯ ಪಕ್ಷಗಳ ನಾಯಕರದ್ದು. ಆದರೆ ರಾಜಕೀಯ ಬೇಗುದಿಯ ವಿಷ ಬೀಜ ಬೆಳೆಯುತ್ತಿರುವ ಮಕ್ಕಳಲ್ಲಿ ಮೂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.

  • ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ನವದೆಹಲಿ: ದೇಶದ ಟಾಪ್ 10 ಗ್ರಾಮಗಳ ಪಟ್ಟಿಯಲ್ಲಿ ರಾಜ್ಯದ ಐದು ಗ್ರಾಮಗಳು, ಟಾಪ್ 11-20ರ ಪಟ್ಟಿಯಲ್ಲಿ 41 ಗ್ರಾಮಗಳು ಸ್ಥಾನ ಪಡೆದಿವೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, 100ರಲ್ಲಿ 87 ಅಂಕ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ದೇಶದಲ್ಲೇ ಐದನೇ ಸ್ಥಾನ ಪಡೆದಿದೆ.

    ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳನ್ನು ಪರಿಗಣಿಸಿ ಒಟ್ಟು 41,617 ಗ್ರಾ.ಪಂ.ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 92 ಅಂಕ ಪಡೆದ ತೆಲಂಗಾಣದ ತೆಲ್ಲಾಪುರ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಆಂಧ್ರದ ಚಿತ್ತೂರು ಜಿಲ್ಲೆಯ ಕಲಿಕಿರಿ ಜಿಲ್ಲೆಯ ಪರಪಟ್ಲಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

    100 ಅಂಕ ಹೇಗೆ?
    ಪ್ರಾಥಮಿಕ ಅಂಶ 4, ಮೂಲ ಸೌಕರ್ಯ 64, ಆರ್ಥಿಕ ಅಭಿವೃದ್ಧಿ 4, ಆರೋಗ್ಯ 18, ಮಹಿಳಾ ಸಬಲೀಕರಣ 7, ಆರ್ಥಿಕ ಒಳಗೊಳ್ಳುವಿಕೆ 3 ಅಂಕ ನಿಗದಿ ಪಡಿಸಲಾಗಿತ್ತು.

    ಪಟ್ಟಿಯಲ್ಲಿರುವ ರಾಜ್ಯದ ಗ್ರಾಮಗಳು:
    ಟಾಪ್ -10 ಪಟ್ಟಿ
    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ 87 ಅಂಕಗಳೊಂದಿಗೆ 5ನೇ ಸ್ಥಾನ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ 85 ಅಂಕಗಳೊಂದಿಗೆ 7ನೇ ಸ್ಥಾನ, ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು 84 ಅಂಕಗಳೊಂದಿಗೆ 8ನೇ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿ ಮತ್ತು ಮಂಡ್ಯದ ಕೆರಗೋಡು 83 ಅಂಕಗಳೊಂದಿಗೆ 9ನೇ ಸ್ಥಾನ ಪಡೆದುಕೊಂಡಿವೆ.

     

     

    ಕರ್ನಾಟಕದ ಟಾಪ್ 20 ಗ್ರಾಮಗಳು
    ಅಗ್ರ 20ರೊಳಗೆ ರಾಜ್ಯದ 41 ಗ್ರಾಮಗಳಿದ್ದು ದಕ್ಷಿಣ ಕನ್ನಡದ 14, ಉಡುಪಿಯ 10 ಮತ್ತು ಮಂಡ್ಯದ 6 ಗ್ರಾಮಗಳು ಸ್ಥಾನ ಪಡೆದುಕೊಂಡಿವೆ. ಬಾಗಲಕೋಟೆಯ ಕಲದಗಿ 80 ಅಂಕಗಳೊಂದಿಗೆ 12ನೇ ಸ್ಥಾನ ಸಿಕ್ಕಿದರೆ, ಉಡುಪಿಯ ಕೆಮ್ಮಣ್ಣು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲವೂರು 79 ಅಂಕಗಳೊಂದಿಗೆ 13ನೇ ಸ್ಥಾನ ಪಡೆದಿದೆ.

    ಮಂಡ್ಯದ ಮಳವಳ್ಳಿಯ ಹಲಗೂರು 78 ಅಂಕಗಳೊಂದಿಗೆ 14ನೇ ಶ್ರೇಯಾಂಕ, ಉಡುಪಿಯ ಚೆರ್ಕಾಡಿ, ಮೈಸೂರಿನ ನಂಜನಗೂಡು ತಾಲೂಕಿನ ಹದಿನಾರು, ಗದಗದ ಹುಲ್ಕೋಟಿ, ದಕ್ಷಿಣ ಕನ್ನಡದ ಬಂಟ್ವಾಳದ ಕೋಳ್ನಾಡು, ಮಂಗಳೂರು ತಾಲೂಕಿನ ಪಾವೂರು 15ನೇ ಸ್ಥಾನ ಪಡೆದಿವೆ.

    16ನೇ ಸ್ಥಾನ:
    ಮಂಡ್ಯದ ಶ್ರೀರಂಗಪಟ್ಟಣದ ಬೆಳಗೊಳ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ, ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಉಜಿರೆ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ, ಬೆಂಗಳೂರಿನ ಎಚ್. ಗೊಲ್ಲಹಳ್ಳಿ, ಬೆಳಗಾವಿಯ ಅಥಣಿ ತಾಲೂಕಿನ ಶಿರಗುಪ್ಪಿ 16 ಅಂಕಗಳೊಂದಿಗೆ 16ನೇ ಶ್ರೇಯಾಂಕ ಸಿಕ್ಕಿದೆ.

    17ನೇ ಸ್ಥಾನ:
    ಉಡುಪಿಯ ಬೆಳಪು, ಹಾಸನದ ಬೇಲೂರು ತಾಲೂಕಿನ ಘಟ್ಟದಹಳ್ಳಿ, ಚಾಮರಾಜನಗರದ ಯಳಂದೂರು ವಿಭಾಗದ ಹೊನ್ನೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ, ಮಂಡ್ಯದ ಕೀಲಾರ, ದಕ್ಷಿಣ ಕನ್ನಡದ ಬಂಟ್ವಾಳದ ಕುರ್ನಾಡು, ಉಡುಪಿಯ ಮುದರಂಗಡಿ 75 ಅಂಕಗಳೊಂದಿಗೆ 17ನೇ ಸ್ಥಾನವನ್ನು ಪಡೆದುಕೊಂಡಿದೆ.

    18ನೇ ಸ್ಥಾನ:
    ಉಡುಪಿಯ ಕುಂದಾಪುರ ತಾಲೂಕಿನ ಅಂಪಾರು, ಬೆಂಗಳೂರಿನ ಆನೇಕಲ್‍ನ ದೊಮ್ಮಸಂದ್ರ, ಬೀದರ್‍ನ ಬಸವಕಲ್ಯಾಣದ ಗೊರ್ತ ಬಿ, ಧಾರವಾಡದ ಹೆಬ್ಬಳ್ಳಿ, ಮೈಸೂರು ಜಿಲ್ಲೆಯ ಟಿ.ನರಸೀಪುರದ ಹೊಳೆಸಾಲು, ಉಡುಪಿಯ ಪಡುಬಿದ್ರಿ ಮತ್ತು ಪೆರ್ಡೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು 74 ಅಂಕಗಳೊಂದಿಗೆ 18ನೇ ಶ್ರೇಯಾಂಕ ಪಡೆದಿದೆ.

    19ನೇ ಸ್ಥಾನ:
    ದಕ್ಷಿಣ ಕನ್ನಡದ ಮಂಗಳೂರಿನ ಅಂಬ್ಲಾ ಮೊಗ್ರು, ಸುಳ್ಯ ತಾಲೂಕಿನ ಸಂಪಾಜೆ, ಗದಗದ ಮುಂಡರ್ಗಿಯ ದಂಬಾಲ್, ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಷಾಲ್, ಉಡುಪಿಯ ಉದ್ಯಾವರ 73 ಅಂಕಗಳನ್ನು ಪಡೆದು 19ನೇ ಶ್ರೇಯಾಂಕ ಪಡೆದಿದೆ.

    20ನೇ ಸ್ಥಾನ
    ಮಂಡ್ಯದ ಮದ್ದೂರಿನ ಬೆಸಗರಹಳ್ಳಿ, ಉಡುಪಿಯ ಉದ್ಯಾವರ ಮತ್ತು ಕುರ್ಕಾಲು, ಕುಂದಾಪುರದ ವಂಡ್ಸೆ , ದ.ಕ ದ ಬಂಟ್ವಾಳದ ಪುದು ಮತ್ತು ರಾಯಿ, ಮಂಗಳೂರಿನ ಪೆರ್ಮುದೆ ಗ್ರಾಮಗಳು 72 ಅಂಕ ಪಡೆದು ಪಟ್ಟಿಯಲ್ಲಿ 20ನೇ ಸ್ಥಾನ ಸಿಕ್ಕಿದೆ.

  • ಇದೊಂದು ಊರಾದ್ರೂ, ಸರ್ಕಾರಿ ಕಡತಗಳಲ್ಲಿ ಈ ಗ್ರಾಮವೇ ಮಿಸ್ಸಿಂಗ್!

    ಇದೊಂದು ಊರಾದ್ರೂ, ಸರ್ಕಾರಿ ಕಡತಗಳಲ್ಲಿ ಈ ಗ್ರಾಮವೇ ಮಿಸ್ಸಿಂಗ್!

    -ನಮ್ಮ ಗ್ರಾಮವನ್ನು ಹುಡುಕಿಕೊಡಿ ಎಂದು ಗ್ರಾಮಸ್ಥರ ಮನವಿ

    ಕೋಲಾರ: ಇದೊಂದು ಊರಾದರೂ, ಈ ಗ್ರಾಮ ಇದೇ ಎಂದು ಹೇಳಲು ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಈ ಕುರಿತು ಪ್ರಶ್ನಿಸಿದರೆ ಬ್ರಿಟಿಷ್ ರೆವಿನ್ಯೂ ದಾಖಲೆಗಳಲ್ಲಿರುವ ಗ್ರಾಮವನ್ನು ಅಧಿಕಾರಿಗಳು ತೋರಿಸುತ್ತಿದ್ದಾರೆ. ಆದರೆ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪಬ್ಲಿಕ್ ಟಿವಿ ಯ ಬೆಳಕಿನ ಆಸರೆ ಕೇಳಿದ್ದಾರೆ.

    ಈ ಗ್ರಾಮದಲ್ಲಿ ಅಚ್ಚು ಕಟ್ಟಾದ ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ ಸೇರಿದಂತೆ ಹಲವು ಮನೆಗಳು ಗ್ರಾಮದಲ್ಲಿವೆ. ಆದರೆ ಗ್ರಾಮದ ಮಾಹಿತಿ ಹಕ್ಕು ಹೋರಾಟಗಾರರು ಮಾತ್ರ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎನ್ನುತ್ತಿದ್ದಾರೆ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳಿ ಗ್ರಾಮದ ವಸ್ತು ಸ್ಥಿತಿ ಇದು. ಈ ಗ್ರಾಮ ಭೌಗೋಳಿಕವಾಗಿ ಇದೇ ಆದರೂ, ಜಿಲ್ಲಾ ಪಂಚಾಯತಿ, ತಾಲೂಕು ಕಚೇರಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲ. ಗ್ರಾಮಕ್ಕೆ ಸಂಬಂಧಿಸಿದ ಸೂಕ್ತ ನಿಗದಿತ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಈ ಕುರಿತು 75 ವರ್ಷಗಳ ಹಿಂದಿನ ನಕ್ಷೆ ಹಾಗೂ ದಾಖಲೆಗಳನ್ನು ನೀಡುತ್ತಾರೆ.

    ವಿಶೇಷತೆ ಎಂದರೆ ಗ್ರಾಮ 1948 ಕ್ಕೂ ಮೊದಲು ಪಾತೂರು ಎಂದು ಇತ್ತು, ಅದಾದ ನಂತರ ಅಲ್ಲಿ ವಾಸವಿದ್ದ ಸಾಕಷ್ಟು ಜನರು ಒಂದು ಕಿ.ಮೀ ದೂರವಿರುವ ಸರ್ವೇ ನಂ 24, 25, 26 ಹಾಗೂ 27 ರಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಠಾಣೆಗೆ ಸಂಬಂಧಿಸಿಲ್ಲ, ಹೀಗಾಗಿ ಗ್ರಾಮದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗಿದೆ.

    ಇನ್ನೂ ಮಾರೇನಹಳ್ಳಿ ಗ್ರಾಮ ಕಂದಾಯ ಇಲಾಖೆ ಸರ್ವೇ ನಂ ನಲ್ಲಿರುವುದರಿಂದ ಗ್ರಾಮ ತಮಗೇ ಸೇರಿದ್ದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೇ ಗ್ರಾಮದಲ್ಲಿ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ಕೈ ವಶದಲ್ಲಿದೆ. ನಮ್ಮ ಗ್ರಾಮವನ್ನು ಹುಡುಕಿಕೊಟ್ಟು ನಮಗೆ ನೆಮ್ಮದಿಯ ಜೀವನ ಮಾಡಲು ಅನುವು ಮಾಡಿಕೊಡಬೇಕಿದೆ. ಕಂದಾಯ ಇಲಾಖೆ ಕೇಳಿದರೆ ಅಧಿಕಾರಿಗಳು ಗ್ರಾಮ ಠಾಣೆ ಮೇಲೆ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳ ಬಳಿ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ, ಬ್ರಿಟಿಷ್ ರೆವಿನ್ಯೂ ದಾಖಲೆಗಳ ಪ್ರಕಾರ ಮೈಸೂರು ರಾಜ್ಯವಿದ್ದಾಗ ಇರುವ ನಕ್ಷೆ ಕೊಟ್ಟು ಗ್ರಾಮ ಬೇರೆಡೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಪರಿತಪಿಸುವಂತಾಗಿದೆ. ಗ್ರಾಮದಲ್ಲಿರುವ ಅಭದ್ರತೆ ಹಾಗೂ ಗ್ರಾಮಸ್ಥರ ಆತಂಕವನ್ನು ಅಧಿಕಾರಿಗಳು ನಿವಾರಣೆ ಮಾಡಿ, ಗ್ರಾಮವನ್ನು ಗ್ರಾಮ ಠಾಣೆಗೆ ಸೇರಿಸಿ ಭದ್ರತೆ ಕಲ್ಪಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

  • ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಈ ಊರಲ್ಲಿ ಎಲ್ಲಾ ಇದೆ ಆದ್ರೆ ಅದಕ್ಕಿಲ್ಲ ದಾಖಲೆ- ಗ್ರಾಮ ಹುಡುಕಿಕೊಡುವಂತೆ ಸ್ಥಳೀಯರ ಮನವಿ

    ಕೋಲಾರ: ಅದೊಂದು ಊರಾದರೂ ಗ್ರಾಮ ಇದೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಬ್ರಿಟೀಷ್ ರೆವಿನ್ಯೂ ದಾಖಲೆಗಳಲ್ಲಿರುವ ಊರನ್ನು ತೋರಿಸುತ್ತಿದ್ದಾರೆ ಅಧಿಕಾರಿಗಳು. ಹೀಗಾಗಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದೇವಾಲಯ, ಹಾಲಿನ ಡೈರಿ, ಸರ್ಕಾರಿ ಶಾಲೆ, ಮನೆಗಳು ಇವೆಲ್ಲಾ ಇದೆ ಅಂದಮೇಲೆ ಅದೊಂದು ಊರು ಅಲ್ವಾ. ಆದರೆ ಮಾಹಿತಿ ಹಕ್ಕು ಹೋರಾಟಗಾರ ರವಿ ನಮ್ಮ ಗ್ರಾಮ ಕಾಣೆಯಾಗಿದೆ ಹುಡುಕಿಕೊಡಿ ಎಂದು ಧ್ವನಿ ಎತ್ತಿದ್ದಾರೆ. ಇದಕ್ಕೆ ಕಾರಣ ದಾಖಲಾತಿ.

    ಕೋಲಾರ ತಾಲೂಕಿನ ಹೋಳೂರು ಬಳಿ ಇರುವ ಮಾರೇನಹಳ್ಳ ಗ್ರಾಮ ಭೌಗೋಳಿಕವಾಗಿದ್ದರೂ ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಹೀಗೆ ಯಾವ ವ್ಯಾಪ್ತಿಯಲ್ಲೂ ದಾಖಲೆಗಳನ್ನೇ ಹೊಂದಿಲ್ಲ. ಹೀಗಾಗಿ ಈ ಊರಿಗೆ ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ.

    ಮಾರೇನಹಳ್ಳಿ ಕಂದಾಯ ಇಲಾಖೆ ಸರ್ವೆ ನಂಬರ್ ನಲ್ಲಿರುವುದರಿಂದ ಗ್ರಾಮ ನಂದು ಎಂದು ಈ ಹಿಂದೆ ಖಾಸಗಿ ಜಮೀನಿನ ವ್ಯಕ್ತಿ ಒಬ್ಬರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಗ್ರಾಮದಲ್ಲಿನ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಕೂಡ ಖಾಸಗಿ ವ್ಯಕ್ತಿಗಳ ದರ್ಬಾರ್ ನಲ್ಲಿದೆ. ಈ ಬಗ್ಗೆ ಕಂದಾಯ ಇಲಾಖೆಯವರನ್ನು ಕೇಳಿದರೆ ಬ್ರಿಟೀಷ್ ರೆವಿನ್ಯೂ ದಾಖಲೆ ತೋರಿಸಿ ಮೈಸೂರು ರಾಜ್ಯದ ನಕ್ಷೆ ತೋರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಒಟ್ಟಿನಲ್ಲಿ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಮಸ್ಥರು ಪರಿತಪಿಸುವಂತಾಗಿದೆ.

     

  • ಹಳ್ಳಕ್ಕೆ ಮೇಲ್ಸೇತುವೆಯಿಲ್ಲದೇ ವೃದ್ಧರನ್ನು ಹೊತ್ತು ಹಳ್ಳ ದಾಟಿಸ್ತಾರೆ..!

    ಹಳ್ಳಕ್ಕೆ ಮೇಲ್ಸೇತುವೆಯಿಲ್ಲದೇ ವೃದ್ಧರನ್ನು ಹೊತ್ತು ಹಳ್ಳ ದಾಟಿಸ್ತಾರೆ..!

    – ಹಳ್ಳ ದಾಟಲು ಶಾಲಾ ಮಕ್ಕಳು ಹರಸಾಹಸ

    ಹಾವೇರಿ: ಹಳ್ಳದಲ್ಲಿ ನೀರು ಹರಿಯುತ್ತಿರೋ ಕಾರಣ ಆಸ್ಪತ್ರೆಗೆ ಹೋಗುವ ವಯೋವೃದ್ಧೆಯನ್ನು ಹೊತ್ತುಕೊಂಡು ಹಳ್ಳವನ್ನು ದಾಟಿಸುವ ಹೃದಯ ವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ಬಳಿ ನಡೆದಿದೆ.

    ಹಳ್ಳಕ್ಕೆ ಮೇಲ್ಸೇತುವೆ ಇಲ್ಲದ ಕಾರಣ ಹಳ್ಳ ದಾಟಲು ಜನರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೊರವಲಯದಲ್ಲಿ ತುಂಗಾ ಮೇಲ್ದಂಡೆ ಕಾಲುವೆ ನೀರು ತುಂಬಿ ಹರಿಯೋದ್ರಿಂದ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತದೆ.

    ಆಗ ಗ್ರಾಮದಿಂದ ಬೇರೆ ಕಡೆ ತೆರಳಲು ಆಸ್ಪತ್ರೆಗೆ ಹೋಗುವ ವೃದ್ಧರು ಮತ್ತು ಶಾಲಾ ಮಕ್ಕಳು ಹರಸಾಹಸ ಪಡುತ್ತಾರೆ. ವೃದ್ಧರನ್ನು ಯುವಕರು ಹೊತ್ತುಕೊಂಡು ಹಳ್ಳ ದಾಟಿಸಬೇಕಾದ ದುಃಸ್ಥಿತಿ ಎದುರಾಗಿದೆ. ಸಾಕಷ್ಟು ಬಾರಿ ಗ್ರಾಮಸ್ಥರು ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದರು ಪ್ರಯೋಜನವಾಗಿಲ್ಲ.

    ಈ ಗ್ರಾಮ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಇನ್ನಾದರೂ ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರು ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.