Tag: ಗ್ರಾಮ

  • ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

    ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

    ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿಯೇ ದೇಶ ಅಭಿವೃದ್ಧಿ ಅಂತ ಮಾಹತ್ಮಾ ಗಾಂಧೀಜಿ ಹೇಳಿದ್ದಾರೆ. ಆದರೆ ಇಂದಿಗೂ ಗ್ರಾಮೀಣ ಭಾಗದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದರೆ ಎಲ್ಲಿಯೂ ಅಭಿವೃದ್ಧಿಯಾಗಲಿಲ್ಲ. ಆದರೆ ಕೋಟೆನಾಡಿನ ಗ್ರಾಮವೊಂದು ನಗರ ಮಾದರಿಯಲ್ಲಿ ಅಭಿವೃದ್ಧಿ ಕಂಡಿದೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ದೊಡ್ಡ ಬೀರನಹಳ್ಳಿ ನಗರದಂತೆ ಅಭಿವೃದ್ಧಿಯಾಗಿದೆ. ಇಲ್ಲಿ ಗ್ರಾಮದ ಜನರ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ಸದಸ್ಯರು ಈ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದಾರೆ. ಪರಿಣಾಮ ಮಾಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಲ್ಲಿ ಮಾಡಿಸಲಾಗಿದೆ.

    ಗಲ್ಲಿ ಗಲ್ಲಿಯಲ್ಲೂ ಗುಣಮಟ್ಟದ ಸಿಮೆಂಟ್ ರಸ್ತೆಗಳು, ರಸ್ತೆಗಳ ತಿರುವಿನಲ್ಲಿ ಮಾರ್ಗ ಸೂಚಿಸುವ ನಾಮಪಲಕಗಳು ಹಾಗು ಚರಂಡಿ, ನೀರು ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳೂ ಇಲ್ಲಿ ಲಭ್ಯವಿದೆ. ಹೀಗಾಗಿ ನಗರಗಳಲ್ಲೇ ಆಗದ ಅಭಿವೃದ್ಧಿ ಈ ಊರಲ್ಲಿ ಆಗಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ಹೊಂದಿದ್ದೇ ಇದಕ್ಕೆ ಕಾರಣ ಅಂತ ಸ್ಥಳೀಯ ಓಂಕಾರಮೂರ್ತಿ ಹೇಳಿದ್ದಾರೆ.

    ಗ್ರಾಮದ ರಸ್ತೆಗಳಲ್ಲಿ ಅಳವಡಿಸಿದ್ದ ನಾಮಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ. ಗ್ರಾಮದಲ್ಲಿ ಕ್ರಾಸ್ ಹಾಗೂ ದೇಗುಲ ಸೇರಿದಂತೆ ಇತರೆ ಮಾಹಿತಿಯನ್ನು ನಾಮಫಲಕದ ಮೂಲಕ ತಿಳಿಯಬಹುದಾಗಿದೆ. ಅಂತೆಯೇ ನಾಮಫಲಕಗಳಲ್ಲಿ ಕಾನೂನು, ಪರಿಸರ ಸೇರಿದಂತೆ ಇತರೆ ಉತ್ತಮ ನುಡಿಗಳನ್ನು ಬರೆಸಲಾಗಿದೆ. ನಗರ ಪ್ರದೇಶಗಲ್ಲಿ ಕೆಲವೆಡೆ ಅಳವಡಿಸಿದ್ದನ್ನು ಕಂಡಾಗ ನಮ್ಮೂರಲ್ಲೇಕೆ ಈ ಮಾದರಿಯ ನಾಮಫಲಕಗಳನ್ನು ಅಳವಡಿಸಬಾರದು ಎಂದು ಈ ನಿರ್ಧಾರ ಕೈಗೊಂಡೆವು ಎಂದು ಗ್ರಾ.ಪಂ. ಸದಸ್ಯ ಧನಂಜಯ ತಿಳಿಸಿದ್ದಾರೆ.

    ಕೋಟೆನಾಡು ಚಿತ್ರದುರ್ಗದ ದೊಡ್ಡ ಬೀರನಹಳ್ಳಿ ಈಗ ಅಭಿವೃದ್ಧಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಇತರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಸದಸ್ಯರು ನಮ್ಮೂರಲ್ಲೇಕೆ ಈ ರೀತಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದರ ಬಗ್ಗೆ ಚಿಂತಿಸಬೇಕಿದೆ. ಆ ಮೂಲಕ ಗಾಂಧೀಜಿಯವರ ಗ್ರಾಮ ಭಾರತದ ಕನಸು ನನಸಾಗಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗದಗ: ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಜಿಲ್ಲಾಧಿಕಾರಿ ಎಂಜಿ ಹಿರೇಮಠ್ ನೇತೃತ್ವದಲ್ಲಿ ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜನಸ್ಪಂದನಾ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಡೀ ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಜಿಲ್ಲಾಡಳಿತವೇ ತಮ್ಮ ಗ್ರಾಮಕ್ಕೆ ಬರುವುದರಿಂದ ನಮ್ಮ ಸಮಸ್ಯೆಗಳು ಇಲ್ಲಿಗೆ ಮುಗಿಯಲಿವೆ ಅಂತ ಅಲ್ಲಿನ ಜನರು ನಂಬಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಪ್ರವಾಸಿ ಮಂದಿರದ ಎ.ಸಿ ರೂಂನಲ್ಲೇ ವಾಸ್ತವ್ಯ ಹೂಡಿ, ಮೃಷ್ಟಾನ್ನ ಭೋಜನ ಸವಿದರು. ಡಿಸಿ ಎಂ.ಜಿ ಹಿರೇಮಠ್ ನೇತೃತ್ವದ ಅಧಿಕಾರಿಗಳು ಉತ್ತರ ಕರ್ನಾಟಕದ ಭಾರೀ ಭೋಜನ ಮಾಡಿ, ಬಾಳೆ ಹಣ್ಣು, ಸೇಬುಗಳನ್ನ ಜೇಬಿಗಿಳಿಸಿ ತಿಂದು ತೇಗಿ ಎಸಿ ರೂಮ್ ನಲ್ಲಿ ಹಾಯಾಗಿ ಮಲಗಿದ್ದಾರೆ. ಡಿಸಿ ಎಂ.ಜಿ ಹಿರೇಮಠ್, ಜಿಲ್ಲಾ ಪಂಚಾಯತ್ ಸಿಇಒ ಮಂಜುನಾಥ್ ಚವ್ಹಾಣ, ಅಪರ ಡಿಸಿ ಶಿವಾನಂದ, ಎಸಿ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಿದ್ದರು.

    ಎಲ್ಲ ಅಧಿಕಾರಿಗಳಿಗೆ ಹೈಫ್ ಕಾಟ್, ಬೆಡ್‍ಶಿಟ್, ತಲೆದಿಂಬು, ಬ್ಲಾಂಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಗದಗ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ಅಸಲಿ ಕಥೆ ಆಗಿದೆ. ಇನ್ನು ಈ ಕುರಿತು ಡಿಸಿ ಅವರನ್ನು ಕೇಳಿದರೆ 52 ಅರ್ಜಿಗಳು ಬಂದಿದ್ದು, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಕೆಲ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

    ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

    ಚಿಕ್ಕಮಗಳೂರು: ರಾಷ್ಟ್ರಪಕ್ಷಿ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಕಂಡುಬಂದಿದೆ.

    ನವಿಲು ಆಗಾಗ ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಗ್ರಾಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಕಾಡಿನಲ್ಲಿ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿಯ ಮೊಟ್ಟೆಯ ಜೊತೆ ನವಿಲಿನ ಮೊಟ್ಟೆ ಇಟ್ಟಿದ್ದರು.

    ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು. ನಂತರ ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ.

    ನವಿಲು ನಾಟ್ಯವಾಡುತ್ತಿದ್ದರೆ ಇಡೀ ಗ್ರಾಮದ ಜನ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಹಲವು ಬಾರಿ ಸೋಮಶೇಖರ್ ನವಿಲನ್ನು ಕಾಡಿಗೆ ಬಿಟ್ಟು ಬಂದರು ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=HaNd7CEO0aM&feature=youtu.be

  • ಸಾಕು ಪ್ರಾಣಿಗಳನ್ನು ಕೊಲ್ಲುತ್ತಿರುವ ಮಂಗ-ಕೋತಿಯಿಂದ ಭಯಬೀತರಾದ ಗ್ರಾಮಸ್ಥರು

    ಸಾಕು ಪ್ರಾಣಿಗಳನ್ನು ಕೊಲ್ಲುತ್ತಿರುವ ಮಂಗ-ಕೋತಿಯಿಂದ ಭಯಬೀತರಾದ ಗ್ರಾಮಸ್ಥರು

    ಬೆಂಗಳೂರು: ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಒಂದು ಕೋತಿಯೊಂದು ಸಾಕ್ಷಾತ್ ಹನುಮನ ರೀತಿಯಲ್ಲಿ ಎಂಟ್ರಿ ಕೊಟ್ಟಿತ್ತು. ಊರಿನ ಮಗನಾಗಿ ಬೆಳದಿದ್ದ ಮಂಗ, ಕಳೆದ ಎರಡು ತಿಂಗಳಿಂದ ಗ್ರಾಮದಲ್ಲಿ ತನ್ನ ಉಪಟಳ ಆರಂಭಿಸಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದ ಗ್ರಾಮಸ್ಥರು ಕೋತಿಯ ಉಪಟಳದಿಂದ ಬೇಸತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಮಕ್ಕಳು ಮಂದಿಯನ್ನದೆ ಸಾಕು ಪ್ರಾಣಿಗಳ ಮೇಲೆರಗಿ ಹಿಂಸೆ ಕೊಡ ತೊಡಗಿದೆ. ಇದೀಗ ನಾಯಿ, ಕೋಳಿ ಕುರಿ, ಬೆಕ್ಕುಗಳ ಮೇಲೆ ದಾಳಿ ನಡೆಸುವಷ್ಟು ಉಗ್ರ ರೂಪಿಯಾಗಿದೆ.

    ಇತ್ತೀಚೆಗೆ ಹೂತಿಟ್ಟ ಮೇಕೆ ಮೃತದೇಹವನ್ನ ಊರಿಗೆ ತಂದು ಭಕ್ಷಿಸಿದೆ. ಒಟ್ಟಾರೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿರುವ ಈ ಗ್ರಾಮದ ಕೋತಿಯ ಕಾಟ ತಪ್ಪಿದರೆ ಸಾಕು ಎಂದು ಗ್ರಾಮಸ್ಥರು ಹೇಳ್ತಿದ್ದಾರೆ. ದಿನೇ ದಿನೇ ನಾಯಿ ಮರಿಗಳನ್ನ ತಿನ್ನಲು ಯತ್ನಿಸಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೋತಿಯನ್ನ ಹಿಡಿದು ಕಾಡಿಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿ ತಿಂಗಳಿಗೊಂದು ಸಾವು – ಇರೋ ಕುಟುಂಬಗಳಲ್ಲಿ ಸಾವಿಲ್ಲದ ಮನೆಯೇ ಇಲ್ಲ

    ಗ್ರಾಮದಲ್ಲಿ ತಿಂಗಳಿಗೊಂದು ಸಾವು – ಇರೋ ಕುಟುಂಬಗಳಲ್ಲಿ ಸಾವಿಲ್ಲದ ಮನೆಯೇ ಇಲ್ಲ

    – ಇಡೀ ಊರಲ್ಲೀಗ ನರಪಿಳ್ಳೆಯೂ ಸಿಗಲ್ಲ

    ರಾಯಚೂರು: ಸಾವಿಲ್ಲದ ಮನೆಯಿಲ್ಲ ಅನ್ನೋದು ಸರ್ವ ಸತ್ಯವಾದ ಮಾತು ನಿಜ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೊಗಡಿಗೋಟ ತಾಂಡದಲ್ಲಿ ತಿಂಗಳಿಗೆ ಒಬ್ಬರು ಸಾಯದ ಮನೆಯಿಲ್ಲ ಅನ್ನೋ ಮಾತು ಪ್ರತಿ ತಿಂಗಳು ಸತ್ಯವಾಗಿದೆ. ಅಚ್ಚರಿಯಾದ್ರೂ ನೀವೂ ನಂಬಲೇಬೇಕು ಇಲ್ಲಿನ ಪ್ರತಿ ಮನೆಯಲ್ಲಿ ತಿಂಗಳಿಗೊಬ್ಬರು ಸಾಯುತ್ತಾರೆ. ಅದರಲ್ಲೂ ಯುವಕರ ಸಾವೇ ಹೆಚ್ಚು. ಸಾವಿಗೆ ಹೆದರಿದ ಗ್ರಾಮಸ್ಥರು ಮನೆ ಖಾಲಿ ಮಾಡಿ ಗ್ರಾಮವನ್ನೇ ತೊರೆಯುತ್ತಿದ್ದಾರೆ.

    30 ಮನೆಗಳಿರುವ ಈ ಗ್ರಾಮದ ಪ್ರತಿ ಮನೆಯಲ್ಲಿ ಕಳೆದ ಎರಡು ವರ್ಷದಲ್ಲಿ ಕನಿಷ್ಠ ಐದಾರು ಜನ ಸಾವನ್ನಪ್ಪಿದ್ದಾರೆ. ಇಡೀ ಗ್ರಾಮದಲ್ಲಿ ಕಳೆದ ಒಂದೂವರೆ ಎರಡು ವರ್ಷದಲ್ಲಿ ವಿವಿಧ ಕಾರಣಗಳಿಂದ 70 ಕ್ಕೂ ಹೆಚ್ಚು ಜನ ಮರಣಹೊಂದಿದ್ದಾರೆ. ದೈವದ ಕಾಟವೂ, ದೆವ್ವದ ಕಾಟವೂ ತಿಳಿಯದೇ ಗುರುಗಳೊಬ್ಬರ ಮಾತಿನಂತೆ ಮೂರು ತಿಂಗಳ ಕೆಳಗೆ ಒಂದೇ ದಿನದಲ್ಲಿ ಇಡೀ ಗ್ರಾಮವನ್ನೇ ಖಾಲಿ ಮಾಡಿ ಬೆಟ್ಟದ ಮೇಲೆ ಟಿನ್ ಶಡ್‍ಗಳನ್ನ ಹಾಕಿಕೊಂಡು ಬದುಕುತ್ತಿದ್ದಾರೆ. ಮೂರು ತಿಂಗಳಿಂದ ಯಾವುದೇ ಸಾವು ಆಗಿಲ್ಲ. ಇದನ್ನು ನೋಡಿದ್ರೆ ನಮ್ಮೂರಿಗೆ ಶಾಪ ಇದೆ ಅನ್ನೋದು ಗೊತ್ತಾಗುತ್ತೆ ಎಂದು ಗ್ರಾಮಸ್ಥೆ ಮಂಕಮ್ಮ ಹೇಳುತ್ತಾರೆ.

    ನಿರಂತರ ಸಾವುಗಳ ಕಾರಣ ಗ್ರಾಮದ ಜನಸಂಖ್ಯೆ 300 ಇದ್ದದ್ದು ಈಗ 200 ಕ್ಕೆ ಬಂದಿದೆ. ಅನಕ್ಷರಸ್ಥರಾದ್ರೂ ವ್ಯವಸಾಯ ಹಾಗೂ ಕೂಲಿ ಕೆಲಸ ಮಾಡುವ ಗ್ರಾಮಸ್ಥರು ಮನೆಗಳನ್ನ ಚೆನ್ನಾಗಿಯೇ ಕಟ್ಟಿಕೊಂಡು ಬದುಕುತ್ತಿದ್ದರು. ಸರ್ಕಾರಿ ಸೌಲಭ್ಯಗಳು ಸಹ ಪುಟ್ಟ ಗ್ರಾಮಕ್ಕೆ ತಲುಪಿದ್ದು ರಸ್ತೆ, ನೀರು, ಶೌಚಾಲಯದ ವ್ಯವಸ್ಥೆಯೂ ಇತ್ತು. ಆದರೆ ನಿಗೂಢ ಸಾವುಗಳು ಮಾತ್ರ ಇದುವರೆಗೂ ಅರ್ಥವಾಗಿಲ್ಲ. ವಯಸ್ಸಿಗೆ ಬಂದ ಮಕ್ಕಳನ್ನ ಕಳೆದುಕೊಂಡು ವೃದ್ಧರೂ ಗೋಳಿಡುತ್ತಿದ್ದಾರೆ.

    ವಿಚಿತ್ರವೊ ,ವಿಸ್ಮಯವೊ, ಕಾಕತಾಳೀಯವೊ ಅಥವಾ ವೈಜ್ಞಾನಿಕ ಕಾರಣವೇನಾದರೂ ಇದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಬೊಗಡಿಗೋಟ ಗ್ರಾಮವನ್ನ ಬಿಟ್ಟು ಬೆಟ್ಟದ ಮೇಲೆ ಬಂದು ವಾಸಿಸುತ್ತಿರುವ ಜನ ಈಗ ಆರಾಮಾಗಿದ್ದಾರೆ. ಸುಮಾರು 70 ಜನರ ಸರಣಿ ಸಾವಾದರೂ ಇದೂವರೆಗೆ ತಾಲೂಕು ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ಇದು ನಿಜಕ್ಕೂ ದುರದೃಷ್ಠಕರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣಾ ಎಡದಂಡೆ ಕಾಲುವೆ ಒಡೆದು ನುಗ್ಗಿದ ನೀರು: ಕೆರೆಯಂತಾದ ಹಾವಿನಾಳ ಗ್ರಾಮ!

    ಕೃಷ್ಣಾ ಎಡದಂಡೆ ಕಾಲುವೆ ಒಡೆದು ನುಗ್ಗಿದ ನೀರು: ಕೆರೆಯಂತಾದ ಹಾವಿನಾಳ ಗ್ರಾಮ!

    ಯಾದಗಿರಿ: ಕೃಷ್ಣಾ ಎಡದಂಡೆ ಕಾಲುವೆ ಒಡೆದ ಪರಿಣಾಮ ಜಿಲ್ಲೆಯ ಸುರಪುರ ತಾಲೂಕಿನ ಹಾವಿನಾಳ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಇಡೀ ಹಳ್ಳಿ ಕೆರೆಯಂತೆ ನಿರ್ಮಾಣವಾಗಿದೆ.

    ಸುರಪುರ ತಾಲೂಕಿನ ನಾರಾಯಣಪೂರ ಗ್ರಾಮದ ಬಸವಸಾಗರ ಜಲಾಶಯದ ಕೃಷ್ಣಾ ಎಡದಂಡೆ ಮುಖ್ಯ ಕಾಲುವೆಯು ಕಳೆದ ಮೂರು ದಿನಗಳ ಹಿಂದೆ ಒಡೆದು ಹೋಗಿದೆ. ಇದರಿಂದಾಗಿ ಹಾವಿನಾಳ ಗ್ರಾಮಕ್ಕೆ ನೀರು ನುಗ್ಗಿದೆ. ನೀರು ನುಗ್ಗಿದ್ದರ ಪರಿಣಾಮ ಇಡೀ ಹಳ್ಳಿಯು ಕೆರೆಯಂತಾಗಿದ್ದು, ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.

    ಬಸವಸಾಗರ ಎಡದಂಡೆಯ ಮುಖ್ಯ ಕಾಲುವೆಯು ಕಳಪೆ ಕಾಮಗಾರಿಯಿಂದ ನಿರ್ಮಿಸಿದ್ದರಿಂದ ಕಾಲುವೆ ಒಡೆದಿದ್ದು, ಅಪಾರ ಪ್ರಮಾಣ ನಷ್ಟವಾಗಿದೆ. ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಬೀದಿ ಬೀದಿಗಳಲ್ಲಿ ನೀರು ನಿಂತಿದೆ. ಇದರಿಂದಾಗಿ ಗ್ರಾಮಸ್ಥರು ಓಡಾಡಲು ಸಹ ಕಷ್ಟವಾಗಿದೆ. ಗ್ರಾಮದ ಪ್ರಮುಖ ರಸ್ತೆ, ಶಾಲೆ ಹಾಗೂ ದೇವಸ್ಥಾನದ ಆವರಣಗಳ ಸುತ್ತಲೂ ನೀರು ನಿಂತಿದೆ ಎಂದು ಹಾವಿನಾಳ ಗ್ರಾಮಸ್ಥರು ಹೇಳಿದ್ದಾರೆ.

    ಬಸವಸಾಗರ ಜಲಾಶಯದಿಂದ ಕಾಲುವೆಗೆ ಸ್ವಲ್ಪ ಪ್ರಮಾಣದ ನೀರು ಹರಿಸಿದಕ್ಕೆ ಇಷ್ಟು ಪ್ರಮಾಣದ ಹಾನಿಯಾಗಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆಗೆ ನೀರನ್ನು ಹರಿಸಿದರೆ ಭಾರೀ ಅನಾಹುತವಾಗುತಿತ್ತು. ಈಗಾಗಲೇ ಗ್ರಾಮದಲ್ಲಿ ನೀರು ನುಗ್ಗಿದ್ದರಿಂದ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಹಾಳಾಗಿವೆ. ಈಗಲಾದರೂ ಕೆಬಿಜೆಎನ್‍ಎಲ್(ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ) ಅಧಿಕಾರಿಗಳು ಒಡೆದಿರುವ ಕಾಲುವೆ ದುರಸ್ಥಿ ಮಾಡಿ ಗ್ರಾಮಕ್ಕೆ ನೀರು ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮಂಜುನಾಥ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಟ್ಟೆ ಗ್ರಾಮಕ್ಕೆ ಕಾಡೆಮ್ಮೆಯೊಂದು ರಾಜಗಾಂಭೀರ್ಯವಾಗಿ ಓಡಾಡುತ್ತಿದೆ.

    ಕಳೆದೊಂದು ತಿಂಗಳಿಂದ ಈ ಕಾಡೆಮ್ಮೆ ಆಗಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದೆ. ಕಾಡೆಮ್ಮೆ ಬಂದು ಹೋಗೋದನ್ನು ಜನ ನಿಂತು ನೋಡುತ್ತಿದ್ದಾರೆ. ಕಾಡೆಮ್ಮೆ ಅತೀ ಸೂಕ್ಷ್ಮವಾದ ಪ್ರಾಣಿ. ಜನರನ್ನ ಕಂಡರೆ ಹೆದರಿ ಓಡಿ ಹೋಗುತ್ತದೆ. ಆದರೆ ಈ ಕಾಡೆಮ್ಮೆ ಆಗಲ್ಲ. ಗ್ರಾಮಕ್ಕೆ ಬಂದು ಒಂದು ರೌಂಡ್ ಹಾಕಿ ಹೋಗುತ್ತದೆ.

    ಕಳೆದೊಂದು ತಿಂಗಳಿಂದ ಆಗಾಗ ಗ್ರಾಮದ ಮುಖ್ಯ ರಸ್ತೆಗೆ ಬರುತ್ತಿರುವ ಈ ಕಾಡೆಮ್ಮೆ ಇಂದಿಗೂ ಯಾರಿಗೂ ಏನು ಮಾಡಿಲ್ಲ. ಸುಮ್ಮನೆ ಬಂದು ಹೋಗುತ್ತಿದೆ. ಬಸರೀಕಟ್ಟೆ ಕಾಡಂಚಿನ ಗ್ರಾಮವಾಗಿರುವುದರಿಂದ ಸುಮಾರು 20 ರಿಂದ 25 ಕಾಡೆಮ್ಮೆಗಳು ಬಂದಿವೆ. ಆದರೆ ಊರೊಳಗೆ ಬರುವುದು ಇದೊಂದೆ. ಉಳಿದವು ಕಾಡಂಚಿನಲ್ಲೇ ಇರುತ್ತವೆ. ಗ್ರಾಮಕ್ಕೆ ಈ ಕಾಡೆಮ್ಮೆ ಬಂದು ಏನು ತಿನ್ನೋದೂ ಇಲ್ಲ. ಅಕ್ಕ-ಪಕ್ಕ ನೋಡೋದು ಇಲ್ಲ. ರಾಜಗಾಂಭೀರ್ಯವಾಗಿ ನಡೆಯಂತೆ ಸುಮ್ಮನೆ ಹೋಗುತ್ತೆ. ಈ ವಿಚಿತ್ರ ಕಾಡೆಮ್ಮಯನ್ನ ಕಂಡ ಬಸರೀಕಟ್ಟೆ ಜನ ಆಶ್ಚರ್ಯಕ್ಕೀಡಾಗಿದ್ದಾರೆ.

    https://www.youtube.com/watch?v=ggLOcvSx75g

  • ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

    ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

    ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಗೀಕಹಳ್ಳಿ ಗ್ರಾಮದಲ್ಲಿ ಕುಟುಂಬವೊಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದೆ.

    ಗೀಕಹಳ್ಳಿ ಗ್ರಾಮದ ಮಹದೇವ್ ಎಂಬವರ ಕುಟುಂಬಕ್ಕೆ ಇಂತಹ ದುಃಸ್ಥಿತಿ ಬಂದಿದೆ. ಕಳೆದ ಎರಡು ವರ್ಷಗಳಿಂದ ಗ್ರಾಮದ ಮುಖಂಡರ ಆಕ್ರೋಶಕ್ಕೆ ಸಿಲುಕಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಮಹದೇವ್, ಬಿಳಿಗೆರೆ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ.

    ಐದು ವರ್ಷದ ಹಿಂದೆ ಗ್ರಾಮದ ಮುಖಂಡರ ಜೊತೆ ಜಾಗ ಖರೀದಿ ವಿಚಾರದಲ್ಲಿ ಮಹದೇವ ಜಗಳ ಮಾಡಿಕೊಂಡಿದ್ದರು. ಈ ವಿಚಾರ ಮುಂದಿಟ್ಟುಕೊಂಡ ಗ್ರಾಮದ ಇನ್ನಿತರ ಮುಖಂಡರು ಮಹದೇವ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ರು. ಬಹಿಷ್ಕಾರದ ಎಫೆಕ್ಟ್ ಇವರ ಮಗಳ ಕುಟುಂಬದ ಮೇಲೂ ಬೀರಿದೆ. ಅಳಿಯ ಮಗಳನ್ನು ಇದೇ ಕಾರಣಕ್ಕೆ ಬಿಟ್ಟು ಹೋಗಿದ್ದಾನೆ. ಹಬ್ಬಗಳಲ್ಲಿ ಭಾಗವಹಿಸುವಂತಿಲ್ಲ, ಅಂಗಡಿಗಳಲ್ಲಿ ಪದಾರ್ಥ ಕೊಂಡುಕೊಳ್ಳುವಂತಿಲ್ಲ, ಮತ್ತೊಬ್ಬರ ಮನೆಯಲ್ಲಿ ನೀರೂ ಕುಡಿಯುವಂತಿಲ್ಲ ಇಂತಹ ಪರಿಸ್ಥಿತಿ ಮಹದೇವ್ ಅವರ ಕುಟುಂಬಕ್ಕೆ ಬಂದಿದೆ. ಗ್ರಾಮದ ಹೊರವಲಯದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಹದೇವನ ಕುಟುಂಬಕ್ಕೆ ಸದ್ಯ ಜೀವ ಭಯ ಉಂಟಾಗಿದೆ.

  • ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಚಿಕ್ಕಮಗಳೂರು: ಜ್ಯೋತಿಷ್ಯಕ್ಕೆ ಹೆದರಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಹೊರಟು ಹೋದ ಘಟನೆ ಜಿಲ್ಲೆಯ ಎನ್.ಆರ್.ಪುರದ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

    ಶಿಗುವಾನಿ ಗ್ರಾಮಸ್ಥರೇ ಮೂಢನಂಬಿಕೆಗೆ ಒಳಗಾದವರು. ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ಹಾವುಗೊಲ್ಲರು, ಹಕ್ಕಿಪಿಕ್ಕಿ ಕುಟುಂಬಗಳು ವಾಸವಾಗಿದ್ದವು. ಆದರೆ ಕಳೆದ 8 ದಿನಗಳಿಂದ 25 ಪುರುಷರು, ನಾಲ್ವರು ಮಹಿಳೆಯರು ಮೃತಪಟ್ಟಿದ್ದರು.

    ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಯಿತು.

    ಕೊನೆಯ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದರಂತೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಆಗಿದೆ. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ಹಾವು ಹಿಡಿಯುವುದು, ಹಕ್ಕಿಪುಕ್ಕ ಸೇರಿಸಿ ಮಾರುವುದು ಶಿಗುವಾನಿ ಗ್ರಾಮಸ್ಥರ ಮೂಲ ವೃತ್ತಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಗಾರೆ ಕೆಲಸ, ಕಾಫಿ ತೋಟ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿರಂತರ ಸಾವಿನ ಸಂಗತಿಯಿಂದ ಬೆಚ್ಚಿಬಿದ್ದು ಗ್ರಾಮವನ್ನು ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿದ್ದರು. ಸದ್ಯ ಅವರು ಕುದುರೆಮುಖ, ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಎನ್ನಲಾಗುತ್ತಿದೆ.

  • ಜೀವ ಕೈಯಲ್ಲಿ ಹಿಡಿದು ಶಾಲೆಗೆ ಪಯಣ – ಊರಿಗೆ ಹೋಗಲು ಗ್ರಾಮಸ್ಥರ ಹಗ್ಗಜಗ್ಗಾಟ!

    ಜೀವ ಕೈಯಲ್ಲಿ ಹಿಡಿದು ಶಾಲೆಗೆ ಪಯಣ – ಊರಿಗೆ ಹೋಗಲು ಗ್ರಾಮಸ್ಥರ ಹಗ್ಗಜಗ್ಗಾಟ!

    ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮಸ್ಥರು ಗ್ರಾಮದಿಂದ ಬೇರೆಡೆಗೆ ಹೋಗಲು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡ್ತಿದ್ದಾರೆ. ಯಾಕಂದ್ರೆ ಗ್ರಾಮದಿಂದ ರಟ್ಟೀಹಳ್ಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಸಮಸ್ಯೆ ಎದುರಾಗಿದೆ. ಸೂಕ್ತ ರಸ್ತೆ ಇಲ್ಲದ್ದಕ್ಕೆ ಗ್ರಾಮಸ್ಥರು ತುಂಬಿ ಹರಿಯೋ ಕುಮುದ್ವತಿ ನದಿಯಲ್ಲಿ ತೆಪ್ಪದ ಮೂಲಕ ನದಿ ದಾಟಿ ಹೋಗುತ್ತಿದ್ದಾರೆ.

    ನದಿಯ ಎರಡೂ ಕಡೆಗಳಲ್ಲಿ ಹಗ್ಗವನ್ನ ಕಟ್ಟಿ ಹಗ್ಗದ ಸಹಾಯದಿಂದ ತೆಪ್ಪದಲ್ಲಿ ಪಯಣಿಸಬೇಕಾದ ದುಃಸ್ಥಿತಿ ಬಂದಿದೆ. ಶಾಲಾ ಕಾಲೇಜು ಸೇರಿದಂತೆ ಗ್ರಾಮಸ್ಥರು ಎಲ್ಲದಕ್ಕೂ ರಟ್ಟೀಹಳ್ಳಿ ಗ್ರಾಮವನ್ನೇ ಅವಲಂಬಿಸಿರೋದ್ರಿಂದ ಅರ್ಧ ಕಿ.ಮೀ.ನಷ್ಟು ತೆಪ್ಪದಲ್ಲಿ ನದಿ ದಾಟಿಕೊಂಡು ಹೋಗ್ತಿದ್ದಾರೆ. ಇದನ್ನೂ ಓದಿ: ಶಿಥಿಲಗೊಂಡ ಸೇತುವೆ- ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

    ನದಿಗೆ ಬ್ರಿಡ್ಜ್ ನಿರ್ಮಾಣ ಆಗಿದ್ರೂ ಸೇತುವೆಗೆ ಹೋಗಲು ರಸ್ತೆ ಇಲ್ಲದ್ದರಿಂದ ಗ್ರಾಮಸ್ಥರು ತೆಪ್ಪದಲ್ಲಿ ಪಯಣಿಸ್ತಿದ್ದಾರೆ. ಸ್ವಲ್ಪವೇ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರಂಟಿ ಅನ್ನೋ ಹಾಗೆ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ತೆಪ್ಪದ ಮೂಲಕ ಪ್ರಯಾಣ ಮಾಡ್ತಿದ್ದಾರೆ.

    ತೆಪ್ಪ ಬಿಟ್ಟು ಬೇರೆ ಮಾರ್ಗದ ಮೂಲಕ ಗ್ರಾಮಸ್ಥರು ರಟ್ಟೀಹಳ್ಳಿ ತಲುಪಬೇಕಾದ್ರೆ ಹನ್ನೆರಡು ಕಿ.ಮೀ ದೂರ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅನಿವಾರ್ಯ ಎಂಬಂತೆ ಗ್ರಾಮಸ್ಥರು ತೆಪ್ಪವನ್ನೆ ನದಿ ದಾಟಲು ಅವಲಂಭಿಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಟ್ಟು ತೆಪ್ಪದ ಪ್ರಯಾಣ ತಪ್ಪಿಸಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೋಟ್ ನಲ್ಲಿಯೇ ಸಾಗುತ್ತಿದೆ 6 ಗ್ರಾಮಗಳ ಗ್ರಾಮಸ್ಥರ ಜೀವ