Tag: ಗ್ರಾಮ ವಾಸ್ತವ್ಯ

  • ಸಿಎಂ ಎಚ್‍ಡಿಕೆ ಗ್ರಾಮವಾಸ್ತವ್ಯ ಹೊಸ ನಾಟಕ – ಬಿಎಸ್‍ವೈ ಕಿಡಿ

    ಸಿಎಂ ಎಚ್‍ಡಿಕೆ ಗ್ರಾಮವಾಸ್ತವ್ಯ ಹೊಸ ನಾಟಕ – ಬಿಎಸ್‍ವೈ ಕಿಡಿ

    ಬೆಂಗಳೂರು: ಕಳೆದ ಒಂದು ವರ್ಷದಿಂದ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಗ್ರಾಮವಾಸ್ತವ್ಯ ಎಂಬ ಹೊಸ ನಾಟಕವನ್ನು ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂಗೆ ಒಂದು ಕಿವಿಮಾತು ಹೇಳುತ್ತೇನೆ. ಮುಖ್ಯಮಂತ್ರಿಗಳು ಒಂದು ವರ್ಷ ಫೈವ್ ಸ್ಟಾರ್ ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ನಾವು ಎಷ್ಟೇ ಹೇಳಿದರು ಅವರು ಕೇಳಲಿಲ್ಲ. ಒಂದು ವರ್ಷ ವ್ಯರ್ಥ ಆಯ್ತು. ಈಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಒಳಜಗಳ. ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟದಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಸಿಎಂ ಹೆದರಿ ಈಗ ಸ್ವಂತ ಮನೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಆದರೆ ಅವರು ನಿಜಕ್ಕೂ ಮಾಡಬೇಕಾಗಿದ್ದದ್ದು ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಫದಿಸುವಂತೆ ಅಧಿಕಾರಿಗಳಿಗೆ ಚಾಟಿ ಬೀಸಿ ಜಿಲ್ಲಾ ಪ್ರವಾಸ ಕೈಗೊಳ್ಳುವಂತೆ ಕಳಿಸಲಿ. ಖುದ್ದು ಸಿಎಂ ಸಹ ಜಿಲ್ಲೆಗಳಿಗೆ ಭೇಟಿ ಮಾಡಲಿ. ಈ ಕಾರ್ಯವನ್ನು ಮಾಡದೇ ಸಿಎಂ ಕೇವಲ ಗ್ರಾಮ ವಾಸ್ತವ್ಯವನ್ನು ಜನ ಮೆಚ್ಚಲ್ಲ ಎಂದು ತಿಳಿಸಿದರು.

    ಜೂನ್ 5 ರ ನಂತರ ಬಿಜೆಪಿ ನಾಯಕರು ಬರಪರಿಶೀಲನೆ ಮಾಡುತ್ತೇವೆ. ಬರಪೀಡಿತ ಜಿಲ್ಲೆಗಳಿಗೆ ನಾವು ಪ್ರವಾಸ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರದ ಮುಂದಿಡುತ್ತೇವೆ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ಅವರು, ಒಂದು ವರ್ಷ ಆದ ಮೇಲೆ ಸಿಎಂಗೆ ಜ್ಞಾನೋದಯವಾಗಿದೆ. ಒಂದು ವರ್ಷದಿಂದ ಯಾವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಮೊದಲು ಬರ ಪೀಡಿತ ಪ್ರದೇಶಗಳಿಗೆ ಸಿಎಂ ಪ್ರವಾಸ ಮಾಡಲಿ. ಆ ನಂತರ ಅವರು ಗ್ರಾಮವಾಸ್ತವ್ಯವಾದರೂ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

  • ಕ್ಷೇತ್ರಕ್ಕೆ ಬಂದು ಗ್ರಾಮ ವಾಸ್ತವ್ಯ ಹೂಡಿ: ಸಿಎಂಗೆ ಮೂಡಿಗೆರೆ ಶಾಸಕ ಮನವಿ

    ಕ್ಷೇತ್ರಕ್ಕೆ ಬಂದು ಗ್ರಾಮ ವಾಸ್ತವ್ಯ ಹೂಡಿ: ಸಿಎಂಗೆ ಮೂಡಿಗೆರೆ ಶಾಸಕ ಮನವಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾಮಳೆಯಿಂದ ಉಂಟಾಗಿರುವ ಅತಿವೃಷ್ಟಿ ಪರಿಶೀಲನೆ ನಡೆಸಲು ಕ್ಷೇತ್ರಕ್ಕೆ ಬಂದು ಗ್ರಾಮವಾಸ್ತವ್ಯ ನಡೆಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಶಾಸಕರು, ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸಿಎಂ ಆಗಿ ನೀವು ಶಕ್ತಿ ಮೀರಿ ಕೆಲಸ ಮಾಡಿದ್ದೀರಿ. ನಿಮಗೇ ಧನ್ಯವಾದ. ಆದರೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಗೆ ಅಪಾರ ನಷ್ಟವಾಗಿದೆ. ಅಲ್ಲದೇ ರೈತರು ಬೆಳೆದಿರುವ ಬೆಳೆ ನಾಶವಾಗಿದ್ದು, ಹಲವು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಅದ್ದರಿಂದ ನೀವು ಇಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ.

    ಇದೇ ವೇಳೆ ಈ ಹಿಂದೆ ಮೂಡಿಗೆರೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಕಾರ್ಯಕ್ರಮ ನಿಗದಿಯಾಗಿದ್ದನ್ನು ನೆನಪಿಸಿರುವ ಅವರು, ಹಲವು ಕಾರಣಗಳಿಂದ ಅಂದು ಕಾರ್ಯಕ್ರಮ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಗ್ರಾಮವಾಸ್ತವ್ಯ ಮಾಡಲು ಅವಕಾಶವಿದೆ. ಅದ್ದರಿಂದ ಶೀಘ್ರವೇ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಮನವಿ ಮಾಡಿದ್ದಾರೆ. ಇದನ್ನು ಓದಿ: ಭೂಕುಸಿತದಿಂದ ಕಂಗೆಟ್ಟ ಚಿಕ್ಕಮಗ್ಳೂರಿನ ಜನ- ಭವಿಷ್ಯದ ಆತಂಕದಲ್ಲಿ ಮಲೆನಾಡಿನ ಮಂದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.facebook.com/mp.kumaraswamy/videos/317705765642706/

  • ಆಸ್ಪತ್ರೆ, ಬ್ಯಾಂಕು, ಎಟಿಎಂ, ಶಾಲೆ-ಕಾಲೇಜು ಎಲ್ಲಾ ಇರೋ ಊರಲ್ಲೇ ಜೆಡಿಎಸ್ ಸಚಿವರಿಂದ ಗ್ರಾಮವಾಸ್ತವ್ಯ!

    ಆಸ್ಪತ್ರೆ, ಬ್ಯಾಂಕು, ಎಟಿಎಂ, ಶಾಲೆ-ಕಾಲೇಜು ಎಲ್ಲಾ ಇರೋ ಊರಲ್ಲೇ ಜೆಡಿಎಸ್ ಸಚಿವರಿಂದ ಗ್ರಾಮವಾಸ್ತವ್ಯ!

    ಮೈಸೂರು: ಸಕಲ ಸೌಕರ್ಯವೂ ಇರೋ ಹಳ್ಳಿಯಲ್ಲಿ ಜೆಡಿಎಸ್ ಸಚಿವರ ರಾತ್ರಿ ವಾಸ್ತವ್ಯ ಹೂಡಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ.

    ಹರದನಹಳ್ಳಿಗ್ರಾಮ ಈಗಾಗಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಶಾಲೆಗಳು ಲಭ್ಯ. ಪದವಿ ಪೂರ್ವ ಕಾಲೇಜು, ಮೆಟ್ರಿಕ್‍ನಂತರ ಹಾಸ್ಟೆಲ್ ಸಹ ಕಾರ್ಯನಿರ್ವಹಿಸುತ್ತಿವೆ. ಸುಸಜ್ಜಿತ ರಸ್ತೆ, ಕೃಷಿ ಸಹಕಾರಿ ಪತ್ತಿನ ಸಂಘ, ಪಶು ಆರೋಗ್ಯ ಕೇಂದ್ರವು ಗ್ರಾಮದಲ್ಲಿದೆ. ಗ್ರಾಮವಾಸ್ತವ್ಯ ಮಾಡುತ್ತಿರುವ ಗ್ರಾಮದಲ್ಲಿ ಎಟಿಎಂ ಸಹ ಲಭ್ಯವಿದೆ.

    ಮೈಸೂರಿನ ಕೆ.ಆರ್.ನಗರದ ಹರದನಹಳ್ಳಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರನ್ನು ಗ್ರಾಮದ ಜೆಡಿಎಸ್ ಮುಖಂಡರು ಅದ್ಧೂರಿ ಸ್ವಾಗತ ಮಾಡಿದ್ರು. ಬಳಿಕ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಿದ ಸಚಿವ ಸಾ.ರಾ.ಮಹೇಶ್ ತಮ್ಮ ಮೊಬೈಲ್‍ನಲ್ಲಿ ಪಟ್ಟಿ ಮಾಡಿಕೊಂಡ ಅಧಿಕಾರಿಗಳ ಹೆಸರುಗಳನ್ನು ತಾವೇ ಕೂಗಿ ಹಾಜರಿ ಪಡೆದುಕೊಂಡರು. ಅಧಿಕಾರಿಗಳ ಸಭೆಯ ಮುಕ್ತಾಯದ ಬಳಿಕ ಜೆಡಿಎಸ್ ಮುಖಂಡ ವಿಜಯಕುಮಾರ್ ಮನೆಯಲ್ಲಿ ಭರ್ಜರಿ ಊಟ ಮಾಡಿದರು.

    ಬಳಿಕ ಮಾತನಾಡಿದ ಸಚಿವರು, ನನ್ನ ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿಯವರೇ ಆದರ್ಶವೆಂದು ಹೇಳಿದರು. ಸರ್ಕಾರದ ಬಳಿಗೆ ಜನರು ಬರೋದಕ್ಕಿಂತ ಜನರ ಬಳಿಗೆ ಸರ್ಕಾರ ಬರಬೇಕು ಅನ್ನೋದೆ ನಮ್ಮ ಉದ್ದೇಶವಾಗಿದೆ. ಸಿಎಂ ಕುಮಾರಸ್ವಾಮಿಯವರು ಸಹ ಶಿಘ್ರದಲ್ಲೇ ಗ್ರಾಮವಾಸ್ತವ್ಯವನ್ನ ಮತ್ತೆ ಪ್ರಾರಂಭಿಸುತ್ತಾರೆ ಅಂದ್ರು.

    ಹರದನಹಳ್ಳಿ ಗ್ರಾಮ ಸಚಿವ ಸಾ.ರಾ.ಮಹೇಶ್ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಗ್ರಾಮವಾಗಿದ್ದು, ತನ್ನದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಹೆಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಉದ್ದೇಶ ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಮಾಡುವುದಾಗಿದೆ. ಆದ್ರೆ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯದ ಉದ್ದೇಶ ಏನು ಅನ್ನೋದೆ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಎಲ್ಲ ವ್ಯವಸ್ಥೆ ಇರುವ ಗ್ರಾಮದಲ್ಲಿ ವಾಸ್ತವ್ಯ ಯಾಕಾಗಿ ಅಂತ ಅಧಿಕಾರಿಗಳಲ್ಲೂ ಗೊಂದಲದ ಪ್ರಶ್ನೆಯೊಂದು ಮೂಡಿದೆ.

  • ಮತ ಬೇಟೆಗಾಗಿ ಪರಮೇಶ್ವರ್ ಕಸರತ್ತು-ಕೆಪಿಸಿಸಿ ಅಧ್ಯಕ್ಷರ ಮೂರನೇ ಗ್ರಾಮವಾಸ್ತವ್ಯ

    ಮತ ಬೇಟೆಗಾಗಿ ಪರಮೇಶ್ವರ್ ಕಸರತ್ತು-ಕೆಪಿಸಿಸಿ ಅಧ್ಯಕ್ಷರ ಮೂರನೇ ಗ್ರಾಮವಾಸ್ತವ್ಯ

    ತುಮಕೂರು: ಮತ ಬೇಟೆಗಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಕಸರತ್ತು ಮುಂದುವರೆದಿದೆ. ಕೊರಟಗೆರೆ ಕ್ಷೇತ್ರದ ಕೋಳಾಲ ಹೋಬಳಿಯ ಎನ್.ಬೇವಿನಹಳ್ಳಿಯಲ್ಲಿ ಪರಮೇಶ್ವರ್ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಗ್ರಾಮವಾಸ್ತವ್ಯ ಪರಿಕಲ್ಪನೆ ಸಮಾಜಮುಖಿಯಾಗಿದೆ. ಗ್ರಾಮವಾಸ್ತವ್ಯದಿಂದ ಗ್ರಾಮದ ಸಮಸ್ಯೆ, ಹಳ್ಳಿ ಜನರ ಕಷ್ಟನಷ್ಟ ತಿಳಿಯುತ್ತದೆ. ಹೀಗಾಗಿ ಮುಂದಿನ ದಿನದಲ್ಲಿ ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಲಾಗುವುದು ಎಂದರು. ಎನ್.ಬೇವಿನಹಳ್ಳಿ ಗ್ರಾಮದ ರೈತ ರಂಗಧಾಮಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಪರಮೇಶ್ವರ್ ಮುದ್ದೆ ಊಟ ಸೇವಿಸಿದ್ರು. ಬಳಿಕ ನೆಲದ ಮೇಲೆ ಚಾಪೆ ಹಾಸಿ ಮಲಗಿದ್ರು.

    ಬಿಜೆಪಿ ಒಳಂಗಿಂದೊಳಗೆ ಓವೈಸಿ ಜೊತೆ ಮಾತುಕತೆ ನಡೆಸುತಿರುವುದು ನಮಗೆ ಮೊದಲೇ ಗೊತ್ತಿತ್ತು. ಮುಸ್ಲಿಂರನ್ನು ದ್ವೇಷಿಸುವ ಬಿಜೆಪಿ ಓವೈಸಿ ಸಖ್ಯ ಬೆಳೆಸಿದೆ. ಅವರಿಗೆ ನೈತಿಕತೆಯೇ ಇಲ್ಲ ಎಂದುಪರಮೇಶ್ವರ್ ಬಿಜೆಪಿ ವಿರುದ್ಧ ಹರಿಹಾಯ್ದರು.

  • ಸದ್ದಿಲ್ಲದೇ ಗ್ರಾಮ ವಾಸ್ತವ್ಯಕ್ಕೆ ಮುಂದಾದ ನಟ ಉಪೇಂದ್ರ- ಚಾಮರಾಜನಗರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ

    ಸದ್ದಿಲ್ಲದೇ ಗ್ರಾಮ ವಾಸ್ತವ್ಯಕ್ಕೆ ಮುಂದಾದ ನಟ ಉಪೇಂದ್ರ- ಚಾಮರಾಜನಗರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ

    ಚಾಮರಾಜನಗರ: ಪ್ರಜಾಕೀಯ ಪಕ್ಷಕ್ಕೆ ರೈತರನ್ನು ಹಾಗೂ ಗ್ರಾಮೀಣ ಭಾಗದ ಜನರನ್ನು ಸೆಳೆಯುವ ಉದ್ದೇಶದಿಂದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸದ್ದಿಲ್ಲದೇ ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಹೂಡಿ ರೈತರ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.

    ಶುಕ್ರವಾರ ರಾತ್ರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಉಪ್ಪಿ, ಬೆಳಗ್ಗೆ ಗ್ರಾಮಸ್ಥರ ಜೊತೆ ಹಾಗೂ ರೈತರೊಂದಿಗೆ ಸಭೆ ನಡೆಸಿ, ರೈತರಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ರು.

    ಇದೇ ವೇಳೆ ಮಾತನಾಡಿದ ಉಪೇಂದ್ರ, ಚಾಮರಾಜನಗರ ಭದ್ರಕೋಟೆ ಎಂದು ನಾನು ಇಲ್ಲಿಗೆ ಬಂದಿಲ್ಲ. ಇಲ್ಲಿನ ಜನರ ಸಮಸ್ಯೆ ತಿಳಿಯಲು, ಗ್ರೌಂಡ್ ರಿಯಾಲಿಟಿ ಚೆಕ್ ಮಾಡಲು ಬಂದಿದ್ದೇನೆ. ಇಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರವನ್ನು ಪಟ್ಟಿ ಮಾಡಲು ಇಲ್ಲಿನ ಜನರಿಗೆ ಹೇಳಿದ್ದೇನೆ ಎಂದ್ರು.

    ಈ ಭಾಗದಲ್ಲಿ ಯಾವ ಪಕ್ಷ ಇದೆ, ಇಲ್ಲಿ ಯಾರು ಅಭ್ಯರ್ಥಿ ಎಂಬುದು ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳೋದಕ್ಕೆ ನಾನು ಇಲ್ಲಿ ಬಂದಿಲ್ಲ. ನನ್ನ ನಾಲ್ಕೈದು ಟೀಂಗಳು ಗ್ರೌಂಡ್ ರಿಯಾಲಿಟಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅಂದ್ರೆ ಕೃಷಿ, ಆರೋಗ್ಯ, ಕೆರೆ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಹೀಗಾಗಿ ನಾನು ಬಂದು ಅದರ ರಿಯಾಲಿಟಿ ನೋಡ್ತಾ ಇದ್ದೀನಿ. ಇಲ್ಲಿನ ಕೆರೆಗಳು ಹೇಗಿವೆ, ಅವುಗಳನ್ನು ಹೇಗೆ ಸರಿಪಡಿಸಬಹುದು, ಜನರು ಅದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುವುದರ ಬಗ್ಗೆ ನೋಡಲು ಬಂದಿದ್ದೇನೆ. ಯಾವುದೇ ಬೇರೆ ಉದ್ದೇಶ ನನಗಿಲ್ಲ ಅಂತ ಹೇಳಿದ್ರು.

    ಇದನ್ನೂ ಓದಿ: ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಸತ್ಯದ ದಾರಿಗೆ ನಾವು ಬರಲೇ ಬೇಕು. ಇದೇ ರೀತಿ ಸುಳ್ಳಿನ ಜೀವನದಲ್ಲಿ ಎಷ್ಟು ದಿನ ಅಂತ ಇರಕ್ಕಾಗುತ್ತೆ. ಗೊತ್ತಿದ್ದರೂ ಕೂಡ ಇದೇ ಸತ್ಯ ಅಂತ ಹೇಳಿಕೊಂಡು ತಿರುಗುತ್ತೇವೆ. ಇದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಅಂತ ಪರಿಸ್ಥಿತಿ ಬರೋದು ತುಂಬಾ ದುರದೃಷ್ಟಕರವಾದುದು. ಮುಂದಿನ ಜನಾಂಗದ ದೃಷ್ಟಿಯಿಂದ ನಾವು ಇದನ್ನೆಲ್ಲಾ ಯೋಚನೆ ಮಾಡಬೇಕು ಅಂತ ಹೇಳಿದ್ರು.

    ಒಬ್ಬ ನಾಯಕನನ್ನು ಆಯ್ಕೆ ಮಾಡಿದ ಮೇಲೆ ಕೆಲವು ಕೆಲಸಗಳನ್ನು ಮಾಡೋದಕ್ಕಷ್ಟೆ ಹೊರತು ಬೇರೆ ವಿಷಯಗಳಲ್ಲಿ ಭಾಗಿಯಾಗೋದಕ್ಕಲ್ಲ, ಇಬ್ಭಾಗ ಮಾಡೋದಕ್ಕಲ್ಲ. ಬೇಸರದ ವಿಷಯಗಳನ್ನು ಮಾತನಾಡೋದಕ್ಕಲ್ಲ, ದೂಷಿಸೋದಕ್ಕಲ್ಲ. ಹೀಗಾಗಿ ಇಲ್ಲಿ ಪ್ರಜೆಗಳ ಬಗ್ಗೆ ಯೋಚನೆ ಮಾಡೋಣ. ಇದು ಎಲ್ಲರ ದೇಶ. ಹೀಗಾಗಿ ಎಲ್ಲರೂ ಪ್ರಯತ್ನ ಪಡಲೇಬೇಕು. ಅದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ಯಾರನ್ನೂ ವಿರೋಧಿಸುವುದಿಲ್ಲ ಎಂದು ತಿಳಿಸಿದ್ರು.

    ಇಲ್ಲಿ ದುಡ್ಡು ಮಾಡಿ ವಿದೇಶಕ್ಕೆ ಹೋಗಿ ದುಡ್ಡು ವೇಸ್ಟ್ ಮಾಡಿ ಒಂದು ತಿಂಗ್ಳು ಇದ್ದು, ಎಂಜಾಯ್ ಮಾಡಿ ಬರೋ ಬದಲು ವರ್ಷಾನುಗಟ್ಟಲೇ ಇರೋ ನಮ್ಮ ದೇಶವನ್ನೇ ಫಾರಿನ್ ಕಂಟ್ರಿಯನ್ನಾಗಿ ಮಾಡೋಣ ಅಂತ ಅಂದ್ರು.

    ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ನಾಯಕರಾಗಬೇಕು, ಬೆಂಬಲಿಗರಾಗಬೇಡಿ. ಯಾಕಂದ್ರೆ ದೇವರು ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಾಮಥ್ರ್ಯ ಕೊಟ್ಟಿರುತ್ತಾನೆ. ಇದು ಪ್ರಜಾಕಾರಣ, ರಾಜಕಾರಣ ಅಲ್ಲ. ನಿಮ್ಮ ಕೊಡುಗೆ ಅತ್ಯಮೂಲ್ಯವಾದುದು. ಹೀಗಾಗಿ ನಾನು ಯಾವತ್ತೂ ಹೇಳ್ತಾ ಇರೋದು ನನಗೆ ನಾಯಕರು ಬೇಕು ಅಂತ ಹೇಳಿದ್ರು.

  • ನಾಳೆ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ- ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಹೆಚ್‍ಡಿಕೆ

    ನಾಳೆ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ- ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಹೆಚ್‍ಡಿಕೆ

    ಚಿಕ್ಕಮಗಳೂರು: ನಾಳೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಅವರು ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ನಂತರ ಚಿಕ್ಕಮಗಳೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    2018ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಹಾರ್ಟ್ ಆಪರೇಷನ್ ಬಳಿಕ ವಿಶ್ರಾಂತಿ ಮುಗಿಸಿ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ರಾಜ್ಯ ಪ್ರವಾಸಕ್ಕೆ ರೆಡಿಯಾಗಿದ್ದಾರೆ. ನವೆಂಬರ್ 7ರಂದು ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ ನೀಡಲಿರೋ ಕುಮಾರಸ್ವಾಮಿ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮುಗುಳುವಳ್ಳಿಯ ದಲಿತ ಧರ್ಮಪಾಲ್ ಎಂಬವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ಆಗಮಿಸಿ, ನಗರದ ಆಜಾದ್ ವೃತ್ತದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನ ಪ್ರಚಾರಕ್ಕೆ ಬಳಸಲಿರುವ ಕುಮಾರಸ್ವಾಮಿ ಚಿಕ್ಕಮಗಳೂರಿಂದ ಶಿವಮೊಗ್ಗ ತೆರಳಲಿದ್ದಾರೆ.

    ಕಾಫಿನಾಡು ಚಿಕ್ಕಮಗಳೂರು ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಹೆಗ್ಗಳಿಕೆ ಹೊಂದಿದ್ದು, ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಹೊರಟಿರುವ ಕುಮಾರಸ್ವಾಮಿಗೆ ಆಸರೆಯಾಗುತ್ತಾ ಕಾದು ನೋಡಬೇಕಿದೆ.

  • ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ತಮಟೆ ಬಾರಿಸಿ ಡ್ಯಾನ್ಸ್, ಆದ್ರೆ ಹೇಳಿದ್ದೊಂದೂ ಮಾಡ್ಲಿಲ್ಲ- ಸಚಿವ ಆಂಜನೇಯ 1 ರಾತ್ರಿಯ ವಾಸ್ತವ್ಯಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?

    ಚಿಕ್ಕಮಗಳೂರು: ತಮಟೆ ಬಾರಿಸಿದ್ದೇನು, ಡ್ಯಾನ್ಸ್ ಮಾಡಿದ್ದೇನು. ನೆಲದ ಮೇಲೆ ಮಲಗಿ ಪೋಸ್ ಕೊಟ್ಟಿದ್ದೇನು. ಅಬ್ಬಬ್ಬಾ ನಮ್ಮ ಸಮಾಜ ಕಲ್ಯಾಣ ಸಚಿವರ ಹಾಡಿ ವಾಸ್ತವ್ಯ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು. ಇವರು ಬಂದಾಗ ನಮ್ಮ ಸಮಸ್ಯೆ ದೂರವಾಗುತ್ತೆ ಅಂತ ಜನ ಕನಸು ಕಂಡಿದ್ರು. ಆದ್ರೆ ಆಗಿದ್ದೇ ಬೇರೆ. ಊರು ಉದ್ದಾರ ಆಗ್ಲಿಲ್ಲ. ಸಚಿವ ಆಂಜನೇಯ ಬರುವಾಗ ಹಾಕಿದ್ದ ರಸ್ತೆ, ಲೈಟ್ ಉಳಿದಿದ್ದು ಎರಡೇ ದಿನ.

    ಇಷ್ಟೇ ಆಗಿದ್ರೆ ಈ ರಾಜಕಾರಣಿಗಳ ಹಣೆಬರಹನೇ ಇಷ್ಟು ಅನ್ಕೊಂಡು ಸುಮ್ಮನಿರಬಹುದಿತ್ತು. ಆದ್ರೆ ಈ ಒಂದು ರಾತ್ರಿಯ ವಾಸ್ತವ್ಯಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ ಮೂರು ಲಕ್ಷ.

    ಹೌದು. ಬೋಗಸ್ ಬಿಲ್ ಮಾಡಿ ಸಚಿವರ ಹೆಸರಲ್ಲಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಭ್ರಷ್ಟರು. ಅವರ ಬಿಲ್‍ನಲ್ಲಿ ಯಾವುದಕ್ಕೆ ಎಷ್ಟೆಲ್ಲಾ ಖರ್ಚಾಗಿದೆ ಅಂತಾ ನೋಡೋದಾದ್ರೆ: ಕುಡಿಯೋ ನೀರಿಗೆ 4,800 ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್‍ಗೆ 4,400 ರೂಪಾಯಿ, ಫ್ಲೆಕ್ಸ್‍ಗೆ 56,000 ರೂಪಾಯಿ, ಊಟ-ತಿಂಡಿಗೆ 1.20 ಲಕ್ಷ ರೂಪಾಯಿ, ಶಾಮಿಯಾನ ಹಾಗೂ ಲೈಟಿಂಗ್ಸ್‍ಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ.

    ರಸ್ತೆ, ಅಂಗನವಾಡಿ, ಸಮುದಾಯ ಭವನ ಎಲ್ಲವೂ ಆಗ್ಬೇಕಿತ್ತು. ಆದ್ರೆ ಯಾವುದೂ ಮಾಡಿಕೊಟ್ಟಿಲ್ಲ. ಇಲ್ಲಿ ಬಂದು ಹೋಗಿ ಆಶ್ವಾಸನೆ ಕೊಟ್ಟಿದ್ದು ಯಾವುದೂ ಆಗಿಲ್ಲ. 3 ಸ್ಟ್ರೀಟ್ ಲೈಟ್, 2 ಹೋಮ್ ಲೈಟ್ ಹಾಕಿದ್ರು. ಎರಡು ತಿಂಗಳು ಉರಿಯಿತು. ಆಮೇಲೆ ಯಾವುದೂ ಉರೀತಿಲ್ಲ ಎಂದು ಸ್ಥಳೀಯರಾದ ಮಹೇಶ್ ಹೇಳಿದ್ದಾರೆ.

    ಮನೆ ಮಾಡಿಕೊಡ್ತೀನಿ ಎಂದು ಹೇಳಿದ್ರು. 32 ಮನೆ ಕೊಡ್ತೀವಿ ಎಂದಿದ್ರು. ಯಾರಿಗೂ ಮನೆ ಕೊಟ್ಟಿಲ್ಲ. ನಿಮ್ಮಲ್ಲಿ ಯಾರಾದ್ರೂ ಅಂಗನವಾಡಿ ಟೀಚರ್ ಆಗ್ಬೇಕು ಎಂದಿದ್ರು. ಟೀಚರ್ ಬಿಡಿ, ಮಕ್ಕಳಿಗೆ ಅಂಗನವಾಡಿ ಮಾಡಿಕೊಟ್ಟಿದ್ರೆ ಎಷ್ಟೋ ಸಹಾಯವಾಗ್ತಿತ್ತು ಅಂತ ಮತ್ತೊಬ್ಬ ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಒಟ್ನಲ್ಲಿ ಸಚಿವರು ಗ್ರಾಮವಾಸ್ತವ್ಯದ ವೇಳೆ ಕ್ಯಾಮೆರಾ ಮುಂದೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಬುರುಡೆ ಬಿಟ್ರೆ, ಅಧಿಕಾರಿಗಳು ಸಚಿವರ ಹೆಸರಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾರೆ. ಇದನ್ನೆಲ್ಲಾ ನೋಡಿ ಹಾಡಿ ಜನ ತಲೆ ಚಚ್ಚಿಕೊಳ್ತಿದ್ದಾರೆ.