Tag: ಗ್ರಾಮ ಪಂಚಾಯ್ತಿ

  • ತಪಾಸಣೆ ಮಾಡದೇ ಕೈಗಾ ಪ್ರವೇಶಕ್ಕೆ ಹೊರರಾಜ್ಯದವರಿಗೆ ಅನುಮತಿ – 26 ಗ್ರಾ.ಪ ಸದಸ್ಯರಿಂದ ರಾಜೀನಾಮೆ

    ತಪಾಸಣೆ ಮಾಡದೇ ಕೈಗಾ ಪ್ರವೇಶಕ್ಕೆ ಹೊರರಾಜ್ಯದವರಿಗೆ ಅನುಮತಿ – 26 ಗ್ರಾ.ಪ ಸದಸ್ಯರಿಂದ ರಾಜೀನಾಮೆ

    ಕಾರವಾರ: ಲಾಕ್‍ಡೌನ್ ನಡುವೆಯೇ ಕೈಗಾ ಅಣು ಸ್ಥಾವರಕ್ಕೆ ಹೊರರಾಜ್ಯದ ಕೆಲಸಗಾರರಿಗೆ ತಪಾಸಣೆ ಮಾಡದೇ ಕೆಲಸ ನಿರ್ವಹಿಸಲು ಪ್ರವೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿಯ 26 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

    ಅನುಮತಿ ಇಲ್ಲದಿದ್ದರೂ ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶಕ್ಕೆ ಉತ್ತರಾಖಂಡ್ ರಾಜ್ಯದ ಕೆಲಸಗಾರರನ್ನು ಎರಡು ವಾಹನಗಳಲ್ಲಿ ಚಾಲಕರ ಸಹಿತ ಎಂಟು ಮಂದಿಯನ್ನು ಕರೆಸಲಾಗಿತ್ತು. ಅಲ್ಲದೇ ಅವರಿಗೆ ಯಾವುದೇ ವೈದ್ಯಕೀಯ ತಪಾಸಣೆ ಮಾಡದೇ ಕೈಗಾ ಅಣು ಸ್ಥಾವರದ ಒಳಗಡೆ ಹೋಗಲು ಅವಕಾಶ ನೀಡಲಾಗಿತ್ತು. ಹೀಗಾಗಿ ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರನ್ನೊಳಗೊಂಡ ಟಾಸ್ಕ್ ಪೋರ್ಸ್ ಸಮಿತಿ ಜಿಲ್ಲಾಡಳಿತಕ್ಕೆ ದೂರು ನೀಡಿ, ಹೊರ ರಾಜ್ಯದಿಂದ ಬಂದ ಕೆಲಸಗಾರರ ವೈದ್ಯಕೀಯ ತಪಾಸಣೆ ಮಾಡುವಂತೆ ಮನವಿ ಮಾಡಿತ್ತು.

    ಆದರೇ ಈ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ಸ್ಥಳೀಯರಿಗೊಂದು ನ್ಯಾಯ ಹೊರ ರಾಜ್ಯದವರಿಗೊಂದು ನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ, ಅಧಿಕಾರಿಗಳ ತಾರತಮ್ಯಕ್ಕೆ ಕಾರವಾರದ ಮಲ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ 26 ಜನ ಗ್ರಾಮ ಪಂಚಾಯ್ತಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ರಾಮನಗರ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ದೇಶವೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ನಿರ್ಗತಿಕರು, ಬಡವರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯ್ತಿ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ಪಿಡಿಓ ಯತೀಶ್ ತಮ್ಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ನಡೆಸಿ ಇಂತಹದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

    ಚಕ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತೀ ಬಡವರು, ನಿರ್ಗತಿಕರನ್ನು ಗುರುತಿಸಲಾಗಿದ್ದು, ಮೊದಲ ಹಂತವಾಗಿ 146 ಕುಟುಂಬದವರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಹುರುಳಿ ಕಾಳು, ರವೆ, ಸಕ್ಕರೆ ಸೇರಿದಂತೆ ಸುಮಾರು 600 ರೂ. ಮೌಲ್ಯದ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

    ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸ್ಥಿತಿವಂತರನ್ನು ಬಿಟ್ಟು ಉಳಿದವರಿಗೆಲ್ಲಾ ಅಗತ್ಯ ವಸ್ತುಗಳ ವಿತರಣೆ ಮಾಡುವುದಾಗಿ ಪಂಚಾಯ್ತಿ ಪಿಡಿಓ ಯತೀಶ್ ತಿಳಿಸಿದರು.

  • ಸತತ 4 ಬಾರಿ ಪಂಚಾಯ್ತಿ ಸಭೆಗೆ ಗೈರು- ಸದಸ್ಯತ್ವದಿಂದ ನಾಲ್ವರು ಅನರ್ಹ

    ಸತತ 4 ಬಾರಿ ಪಂಚಾಯ್ತಿ ಸಭೆಗೆ ಗೈರು- ಸದಸ್ಯತ್ವದಿಂದ ನಾಲ್ವರು ಅನರ್ಹ

    ನೆಲಮಂಗಲ: ಇಷ್ಟು ದಿನ ಅನರ್ಹ ಶಾಸಕರರ ಸುದ್ದಿ ನೋಡಿದ್ದೀರಿ. ಇದೀಗ ಪಂಚಾಯ್ತಿ ಸದಸ್ಯರನ್ನು ಅನರ್ಹ ಮಾಡಿರುವ ಘಟನೆಯೊಂದು ನಡೆದಿದೆ.

    ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯ್ತಿಯ ನಾಲ್ವರ ಸದಸ್ಯತ್ವ ರದ್ದಾಗಿದೆ. ಗ್ರಾಮ ಪಂಚಾಯ್ತಿಯ ನಾಲ್ಕು ಸಭೆಗಳಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ನಾಲ್ವರನ್ನ ಸದಸ್ಯತ್ವದಿಂದ ಅನರ್ಹ ಮಾಡಿ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.

    ಎಲ್ಲಾ ವಿಚಾರಣೆಗಳ ಬಳಿಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ಅಧಿನಿಯಮ 1993ರ 43(ಎ)(111)ರಡಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸಾವಿತ್ರಮ್ಮ, ನರಸಮ್ಮ, ಹನುಮಂತರಾಯಪ್ಪ, ಶಾಂತಮ್ಮ ಇವರುಗಳ ಸದಸ್ಯತ್ವ ರದ್ದು ಮಾಡಿದೆ.

    ಒಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಸಭೆಗಳ ಬಗ್ಗೆ ನಿರ್ಲಕ್ಷ್ಯವಹಿಸಿ ಬೇಕಾಬಿಟ್ಟಿ ಸಭೆಗಳಿಗೆ ಆಗಮಿಸುತ್ತಿದ್ದ, ಗೈರಾಗುತ್ತಿದ್ದ ಎಲ್ಲಾ ಪಂಚಾಯ್ತಿಯ ಸದಸ್ಯರಿಗೂ ಎಚ್ಚರಿಕೆಯ ಕರೆ ಗಂಟೆಯಾಗಿದೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮಪಂಚಾಯತ್ ಸದಸ್ಯನ ಕೊಲೆಗೆ ಯತ್ನ

    ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮಪಂಚಾಯತ್ ಸದಸ್ಯನ ಕೊಲೆಗೆ ಯತ್ನ

    ಚಿಕ್ಕಬಳ್ಳಾಪುರ: ಬೈಕಿನಲ್ಲಿ ತೆರಳುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ಬಳಿ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತರಬಹಳ್ಳಿ ಗ್ರಾಮದ ಗ್ರಾಮಪಂಚಾಯತ್ ಸದಸ್ಯ ತ್ಯಾಗರಾಜ್ ಹಲ್ಲೆಗೊಳಗಾದವ. ಬೆಳಗ್ಗೆ ಎಚ್ ಕ್ರಾಸ್‍ನಿಂದ ಸ್ವಗ್ರಾಮ ತರಬಹಳ್ಳಿಗೆ ತೆರಳುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯನ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಮನಸ್ಸೋ ಇಚ್ಚೆ ಲಾಂಗ್‍ನಿಂದ ಅಟ್ಯಾಕ್ ಮಾಡಿ ಹೊಟ್ಟೆಯ ಹಿಂಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

    ಸದ್ಯ ಗಾಯಾಳು ಗ್ರಾಮಪಂಚಾಯ್ತಿ ಸದಸ್ಯನನ್ನು ಹೊಸಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಂತರ ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಪಿಎಸ್‍ಐ ಹರೀಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದ ದುಷ್ಕರ್ಮಿಗಳು ಯಾರೆಂಬುದು ಬಯಲಾಗಬೇಕಿದೆ.

  • ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂ. ಅಕ್ರಮ- ತನಿಖಾ ವರದಿಯ ಕಡತಗಳೇ ಮಾಯ

    ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂ. ಅಕ್ರಮ- ತನಿಖಾ ವರದಿಯ ಕಡತಗಳೇ ಮಾಯ

    ರಾಯಚೂರು: ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತಿಯಲ್ಲಿ ನಡೆದ ಅಕ್ರಮ ಕುರಿತ ತನಿಖಾ ವರದಿಯ ಕಡತಗಳ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲೇ ಮಾಯಾವಾಗಿರುವ ಘಟನೆ ನಡೆದಿದೆ. ಪಿಡಿಓ ಶರಫನ್ನೂಶಾ ಬೇಗಂ ವಿರುದ್ಧ ಚಂದ್ರಬಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಲಿಗೆಮ್ಮ ದೂರು ನೀಡಿದ್ದರು. ದೂರಿನ ಹಿನ್ನೆಲೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿವೆ.

    13 ಮತ್ತು 14ನೇ ಹಣಕಾಸು ಯೋಜನೆಯ ಹಣ ದುರ್ಬಳಕೆಯಾಗಿದ್ದು, 28 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು ತನಿಖೆ ವೇಳೆ ಬಯಲಾಗಿತ್ತು. ಕ್ರಿಯಾಯೋಜನೆಗೆ ಅನುಮೋದನೆ ಪಡೆಯದೇ ಹಣ ಖರ್ಚು ಮಾಡಿ ಅಕ್ರಮ ಎಸಗಲಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೂಲಿ ಮಾಡದವರಿಗೂ ಹಣ ಪಾವತಿಸಿ ಅಕ್ರಮ ಎಸಗಲಾಗಿತ್ತು. ಕೂಲಿ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡದೇ ವಂಚಿಸಿರೋದು ತನಿಖೆಯಿಂದ ಬಯಲಾಗಿತ್ತು.

    2011 ರಿಂದ ನಡೆದ ಅಕ್ರಮದ ಬಗ್ಗೆ 2015 ರಲ್ಲಿ ತನಿಖಾಧಿಕಾರಿಗಳು ಜಿಲ್ಲಾ ಪಂಚಾಯತಿಗೆ ತನಿಖಾ ವರದಿ ಸಲ್ಲಿಸಿದ್ರು. ಆದ್ರೆ ಆ ತನಿಖಾ ವರದಿ ಕಾಣೆಯಾದ ಹಿನ್ನೆಲೆ ಇದುವರೆಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿನ ಕೆಲ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳೇ ಈ ಅಕ್ರಮ ಮುಚ್ಚಿ ಹಾಕುವ ಯತ್ನ ನಡೆಸ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ಪ್ರಕರಣವನ್ನ ಜಿ.ಪಂ.ಸಿಇಓ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

  • ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

    ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

    – ಕಲಬುರಗಿಯ ಸಿದ್ಧಾರೂಢ ಇವತ್ತಿನ ಪಬ್ಲಿಕ್ ಹೀರೋ

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮನ್ನಹಳ್ಳಿ ಗ್ರಾಮಪಂಚಾಯ್ತಿ ವಿದ್ಯಾರ್ಥಿನಿಯರಿಗಾಗಿ ಉಚಿತ ಬಸ್ ಸೇವೆಯನ್ನು ಒದಗಿಸಿದೆ. ಗ್ರಾಮದ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಪಂಚಾಯ್ತಿ ಹೊಸ ಬಸ್ ಖರೀದಿಸಿದೆ.

    ಈ ಬಸ್ ಸೌಕರ್ಯದಿಂದ ಶಿಕ್ಷಣ ವಂಚಿತರಾಗಿದ್ದ ವಿದ್ಯಾರ್ಥಿನಿಯರು ಇದೀಗ ಇದೀಗ ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆ. ಗ್ರಾಮಪಂಚಾಯ್ತಿ ಅಧ್ಯಕ್ಷ ಸಿದ್ದಾರೂಢರು ವಿಶೇಷ ಆಸ್ಥೆ ವಹಿಸಿ ಪಂಚಾಯತ್ ಅನುದಾನದಲ್ಲಿ 2 ತಿಂಗಳ ಹಿಂದೆ ಈ ಬಸ್ ವ್ಯವಸ್ಥೆ ಮಾಡಿಸಿ ಕೊಟ್ಟಿದ್ದಾರೆ. ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇದರಿಂದಾಗಿ ಇಲ್ಲಿನ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಿರಾಳರಾಗಿ ಆಳಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿ ಬರುತ್ತಿದ್ದಾರೆ.

    ಸದ್ಯ ಮೂರು ತಿಂಗಳ ಮಟ್ಟಿಗೆ ಈ ಬಸ್‍ನ ಸೌಕರ್ಯವನ್ನು ವಿದ್ಯಾರ್ಥಿನಿಯರಿಗೆ ಕಲ್ಪಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕರೆ ಮುಂಬರುವ ದಿನಗಳಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗಲು ಪಂಚಾಯ್ತಿ ಸದಸ್ಯರು ಚಿಂತನೆ ನಡೆಸಿದ್ದಾರೆ.

  • ಸಾರ್ವಜನಿಕರ ಹಣ ದುರುಪಯೋಗ- 15 ಮಂದಿಯ ಪಂಚಾಯ್ತಿ ಸದಸ್ಯತ್ವ ರದ್ದು

    ಸಾರ್ವಜನಿಕರ ಹಣ ದುರುಪಯೋಗ- 15 ಮಂದಿಯ ಪಂಚಾಯ್ತಿ ಸದಸ್ಯತ್ವ ರದ್ದು

    ರಾಯಚೂರು: ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎನ್ನುವ ಹಾಗೇ ಕೇವಲ ಸಾವಿರಾರು ರೂಪಾಯಿ ಆಸೆಗೆ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡು ಜಿಲ್ಲೆಯ ಎಲೆಬಿಚ್ಚಾಲಿ ಗ್ರಾಮ ಪಂಚಾಯ್ತಿಯ 15 ಸದಸ್ಯರು ತಮ್ಮ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ.

    ಎಲೆ ಬಿಚ್ಚಾಲಿ ಗ್ರಾಮ ಪಂಚಾಯ್ತಿಯಲ್ಲಿ 2016-2017ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಅನುದಾನವನ್ನು ಅಧ್ಯಕ್ಷೆಯ ಪತಿ, ಮಾವ ವೈಯಕ್ತಿಕ ಹೆಸರಿನಲ್ಲಿ ಚೆಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿ ಒಟ್ಟು 15 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಹಣ ದುರುಪಯೋಗದ ಬಗ್ಗೆ ತನಿಖೆ ನಡೆಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2018 ಡಿಸೆಂಬರ್ 14ರಂದು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪ್ರಾದೇಶಿಕ ಆಯುಕ್ತರು 15 ಜನರ ಸದಸ್ಯತ್ವ ರದ್ದುಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸ್ಸಿನ ಆಧಾರದ ಮೇಲೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರ ಅಡಿಯಲ್ಲಿ ಸದಸ್ಯತ್ವವನ್ನ ರದ್ದುಗೊಳಿಸಲಾಗಿದೆ.

    ಗ್ರಾ.ಪಂ ಸದಸ್ಯರುಗಳಾದ ಮಲ್ಲೇಶ 9,400 ರೂ., ವೀರನಗೌಡ 17,200 ರೂ., ಹನುಮಂತ 8,000 ರೂ., ಕಾಮಾಕ್ಷಮ್ಮ 10,900 ರೂ., ಜಯಶೀಲ 3,600 ರೂ. ಪಡೆದುಕೊಂಡಿದ್ದು, ಉಳಿದ 3 ಸಾವಿರ ಹಣವನ್ನ ಸಹ ಮರಳಿ ಖಾತೆಗೆ ಜಮಾ ಮಾಡಿಲ್ಲ. ಬಸಪ್ಪ 16,700 ರೂ., ರಮೇಶ್ 3,100 ರೂ., ದೌಲತ್ ಸಾಬ್ 4,800 ರೂ., ಚೆಕ್ ಪಡೆದ್ದುಕೊಡಿದ್ದರು. ಇದನ್ನ ವಾಪಾಸ್ ಡಿಡಿ ಮೂಲಕ ನೀಡುವುದಾಗಿ ತಿಳಿಸಿದ್ದರು. ಇನ್ನುಳಿದ ಏಳು ಜನರಲ್ಲಿ ಚೆಕ್ ಮೂಲಕ ಪಂಚಾಯ್ತಿ ಅಧ್ಯಕ್ಷೆ ಮಹಾಂತಮ್ಮ 4,500 ರೂಪಾಯಿ, ಉಪಾಧ್ಯಕ್ಷೆ ಯಲ್ಲಮ್ಮ 4,900 ರೂ., ಪಾರ್ವತಮ್ಮ 4,900 ರೂ., ಸುಜಾತ ಹಾಗೂ ಹುಲಿಗೆಮ್ಮ ತಲಾ 8,900 ರೂ., ಅಮೀನಾ ಬೇಗಂ 4,500 ರೂ., ಸುಶೀಲಮ್ಮ 6,000 ರೂ. ಹಣ ಪಡೆದಿರುವುದು ಖಾತರಿಯಾಗಿದೆ.

    ಗ್ರಾಮ ಪಂಚಾಯ್ತಿಯ 17 ಜನ ಸದಸ್ಯರ ಪೈಕಿ 15 ಜನ ಸದಸ್ಯರು ಭ್ರಷ್ಟಾಚಾರ ಆರೋಪದ ಮೇಲೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಇಷ್ಟು ಜನ ಸದಸ್ಯತ್ವ ಕಳೆದುಕೊಳ್ಳುವ ಮೂಲಕ ಗ್ರಾಮ ಪಂಚಾಯ್ತಿ ಅಪಖ್ಯಾತಿಗೆ ಒಳಗಾಗಿದೆ.

  • ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಪ್ರೇಮಪಲ್ಲಂಗಕ್ಕೆ ಅಮಾಯಕ ಮಹಿಳೆ ಆತ್ಮಹತ್ಯೆ

    ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಪ್ರೇಮಪಲ್ಲಂಗಕ್ಕೆ ಅಮಾಯಕ ಮಹಿಳೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಘಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಧಾ(27) ಆತ್ಮಹತ್ಯೆಗೆ ಶರಣಾದ ಮಹಿಳೆ. 2010ರಲ್ಲೇ ರಾಧಾಳಿಗೆ ಮದುವೆಯಾಗಿತ್ತು. ಮದುವೆಯಾದ ಹೊಸದರಲ್ಲೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ರಾಧಾ ತನ್ನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ ಕಳೆದ 3-4 ವರ್ಷಗಳಿಂದ ಇಡಗೂರು ಗ್ರಾಮ ಪಂಚಾಯಯ್ತಿಯ ಕಾರ್ಯದರ್ಶಿ ಕಾರ್ತಿಕ್ ಜೊತೆ ಪ್ರೀತಿ-ಪ್ರೇಮ ಸಂಬಂಧ ಬೆಳೆಸಿದ್ದಳು.

    ಜಮೀನು ಅಳತೆ ದಾಖಲೆ ವಿಚಾರವಾಗಿ ಗ್ರಾಮಕ್ಕೆ ಬಂದಿದ್ದ ಕಾರ್ತಿಕ್, ರಾಧಾಳಿಗೆ ಪತಿಯಿಲ್ಲ ಎನ್ನುವ ಅಸಹಾಯಕತೆಯನ್ನಿ ಬಂಡವಾಳ ಮಾಡಿಕೊಂಡು ಆಕೆಯ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದನು. ಹೀಗಾಗಿ ತನ್ನನ್ನು ಕಾರ್ತಿಕ್ ಮದುವೆಯಾಗ್ತಾನೆ ಎಂದು ರಾಧಾ ನಂಬಿದ್ದಳು. ಆದರೆ ಕಳೆದ ಒಂದು ವರ್ಷದ ಹಿಂದೆಯೇ ಕಾರ್ತಿಕ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.

    ಆ ವಿಷಯ ಸಹ ಇತ್ತೀಚೆಗೆ ರಾಧಾಳಿಗೆ ಗೊತ್ತಾಗಿದೆ. ಜೋರಾಗಿ ದಬಾಯಿಸಿ ಕೇಳಿದ್ದಕ್ಕೆ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಏನ್ ಮಾಡ್ಕೋತಿಯಾ ಮಾಡ್ಕೋ ಹೋಗು ಎಂದು ಆವಾಜ್ ಹಾಕಿದ್ದನು. ಈ ನಡುವೆ ಕಾರ್ತಿಕ್‍ನ ಸಂಬಂಧದ ಬಗ್ಗೆ ಪತ್ನಿಗೂ ಸಹ ಗೊತ್ತಾಗಿ ಎರಡು ಮನೆಯವರು ಸೇರಿ ರಾಜೀ ಪಂಚಾಯತಿ ಸಹ ಮಾಡಿದ್ದರು. ಕೊನೆಗೆ ಒಂದಷ್ಟು ಹಣ ಕೊಟ್ಟು ರಾಧಾಳ ಸಂಬಂಧ ಕಡಿದುಕೊಳ್ಳೋಕೆ ಕಾರ್ತಿಕ್ ಮುಂದಾಗಿದ್ದನು. ಇದೇ ನೋವಿನಲ್ಲಿದ್ದ ರಾಧಾ ತನ್ನ ಬಾಳು ಹಿಂಗಾಯತಲ್ಲಾ ಎಂದು ಇಂದು ಬೆಳಗ್ಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ರಾಧಾ ಆತ್ಮಹತ್ಯೆ ಸುದ್ದಿ ತಿಳಿದ ಕಾರ್ತಿಕ್ ನಾಪತ್ತೆಯಾಗಿದ್ದು, ಗೌರಿಬಿದನೂರು ಪೊಲೀಸರು ಹುಟುಕಾಟ ನಡೆಸಿದ್ದಾರೆ. ಸದ್ಯ ಮಗಳ ಸಾವಿನಿಂದ ಕಂಗಲಾಗಿರುವ ತಾಯಿ ನಾಗಮ್ಮ ಕಾರ್ತಿಕ್ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

  • ಹಣ ಹಾಕಿದ್ರೂ ನೀರು ಬರಲ್ಲ- ಬಾಗಿಲು ಮುಚ್ಚಿತು ಕುಡಿಯುವ ನೀರಿನ ಘಟಕ

    ಹಣ ಹಾಕಿದ್ರೂ ನೀರು ಬರಲ್ಲ- ಬಾಗಿಲು ಮುಚ್ಚಿತು ಕುಡಿಯುವ ನೀರಿನ ಘಟಕ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುನಗನಕೊಪ್ಪ ಎಸ್.ಸಿ ಕೇರಿಯಲ್ಲಿ 2017-18ನೇ ಸಾಲಿನಲ್ಲಿ ಸ್ಥಾಪನೆಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೇವಲ ಒಂದೇ ವರ್ಷದಲ್ಲಿ ಬಾಗಿಲು ಮುಚ್ಚಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ, ಸಾರ್ವಜನಿಕರಿಗೆ ಉಪಯೋಗಕ್ಕೂ ಬಾರದೆ ಹಾಳು ಬಿದ್ದಿದೆ.

    ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಹೆಗಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಿತ್ತು.

    ಸಾರ್ವಜನಿಕರು 1 ರೂ. ನಾಣ್ಯವನ್ನು ಬಳಸಿ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಈ ಘಟಕದಿಂದ ಪಡೆಯಲು ಸೌಲಭ್ಯವಿತ್ತು. ಆದರೆ, ಇದರ ಜವಾಬ್ದಾರಿಯನ್ನು ಪಡೆದ ಇಲಾಖೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನವನ್ನು ಸಾರ್ವಜನಿಕರಿಗೆ ದೊರೆಯದಂತೆ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

    ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿ ವರ್ಷಗಳೇ ಕಳೆದಿದೆ. ಇದುವರೆಗೂ ಜನರಿಗೆ ಮಾತ್ರ ಇದರ ಪ್ರಯೋಜನ ಸರಿಯಾಗಿ ದೊರೆಯುತ್ತಿಲ್ಲ. ಅಲ್ಲದೇ ಈ ಘಟಕಕ್ಕೆ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ. ನೀರಿನ ಘಟಕದ ನಿರ್ಮಾಣಕ್ಕೂ ಪೂರ್ವದಲ್ಲೇ ಈ ಬಗ್ಗೆ ಚಿಂತಿಸಿ, ಸೂಕ್ತ ಸ್ಥಳವನ್ನು ನಿಗದಿಗೊಳಿಸಬಹುದಿತ್ತು ಅಥವಾ ಪರ್ಯಾಯವಾಗಿ ಈಗಿರುವ ಸ್ಥಳದಲ್ಲೇ ಕೊಳವೆಬಾವಿ ಕೊರೆಸಿ, ಕುಡಿಯುವ ನೀರಿನ ಘಟಕಕ್ಕೆ ನೀರಿನ ಪೂರೈಕೆ ಮಾಡಬಹುದಿತ್ತು. ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆದಷ್ಟು ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನವನ್ನು ಸಾರ್ವಜನಿಕರಿಗೆ ಲಭಿಸುವಂತೆ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

    ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಘಟಕವನ್ನು ಇದುವರೆಗೂ ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಿಲ್ಲ. ಹಸ್ತಾಂತರದ ಬಳಿಕವೇ ಪಂಚಾಯ್ತಿ ನಿರ್ವಹಣೆ ಮಾಡಬೇಕೆಂಬ ನಿಬಂಧನೆ ಇದೆ. ಇಲಾಖೆ ಇದೀಗ ಕೊಳವೆಬಾವಿ ಕೊರೆಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗೆ ಚಿಂತನೆ ನಡೆಸಲಾಗಿದೆ ಎಂದು ಹೆಗಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್ ಪಟಗಾರ ತಿಳಿಸಿದರು.

    ನಿರ್ಮಾಣಗೊಂಡು ವರ್ಷ ಕಳೆದರು ಸಾರ್ವಜನಿಕರಿಗೆ ನೀರಿನ ಘಟಕದ ಪ್ರಯೋಜನ ದೊರೆಯುತ್ತಿಲ್ಲ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಸ್ಥಳೀಯರು ಈ ಘಟಕದ ಪ್ರಯೋಜನವನ್ನು ಪಡೆಯುವಂತಾಗಲು ಸಂಬಂಧಿಸಿದ ಇಲಾಖೆ ಶೀಘ್ರದಲ್ಲಿ ಇದನ್ನು ಬಳಕೆಗೆ ಬರುವಂತೆ ಮಾಡಬೇಕಿದೆ ಎಂದು ಹೆಗಡೆ ನಿವಾಸಿ ಲಿಂಗು ಗದ್ದೆಮನೆ ಅವರು ಹೇಳಿದರು.

  • ಹೊಸದಾಗಿ ನಿಯೋಜನೆಗೊಂಡ ಪಿಡಿಒಗೆ ಹಾಜರಾತಿ ನೀಡದ ಸಿಬ್ಬಂದಿ

    ಹೊಸದಾಗಿ ನಿಯೋಜನೆಗೊಂಡ ಪಿಡಿಒಗೆ ಹಾಜರಾತಿ ನೀಡದ ಸಿಬ್ಬಂದಿ

    – ಗೋಡೆ ಮೇಲೆಯೇ ಹಾಜರಾತಿ ಬರೆಯುತ್ತಿರುವ ಪಿಡಿಒ

    ದಾವಣಗೆರೆ: ಹೊಸದಾಗಿ ನಿಯೋಜನೆಗೊಂಡ ಗ್ರಾಮ ಪಂಚಾಯ್ತಿ ಪಿಡಿಒಗೆ ಅಧ್ಯಕ್ಷರು ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ ನೀಡದ ಹಿನ್ನೆಲೆಯಲ್ಲಿ ಗೋಡೆಯ ಮೇಲೆಯೇ ಹಾಜರಾತಿ ಬರೆದು ಹೋದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮ ಪಂಚಾಯ್ತಿಗೆ ಗೋವರ್ಧನ್ ಎಂಬವರು ಪಿಡಿಒ ಇದ್ದು, ಈಗ ಹೆಚ್ಚುವರಿ ಪಿಡಿಒ ಆಗಿ ಗಾಯತ್ರಿ ಎಂಬವರನ್ನು ನೇಮಕ ಮಾಡಿದ್ದಾರೆ. ಇದರಿಂದ ಹೆಚ್ಚುವರಿಯಾಗಿ ನೇಮಕವಾದ ಪಿಡಿಒ ಅವರನ್ನು ವಿರೋಧಿಸಿ ದೇವಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

    ಗಾಯತ್ರಿ ಅವರನ್ನು ನೇಮಕ ಮಾಡಿರುವ ಇಒ ಆದೇಶ ಸರಿಯಲ್ಲ. ಕೆಲವೆಡೆ ಅಧಿಕಾರಿಗಳಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಅಂತಹ ಸ್ಥಳದ ಬದಲು ಪಿಡಿಒ ಇರುವಲ್ಲಿ ಮತ್ತೊಬ್ಬರನ್ನು ನಿಯೋಜಿಸಿರುವ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಸದಸ್ಯರು ಆರೋಪಿಸಿದರು.

    ಅಲ್ಲದೆ ಮೂರ್ನಾಲ್ಕು ವರ್ಷಗಳ ಹಿಂದೆ ಗಾಯತ್ರಿ ಅವರು ದೇವಿಕೆರೆ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸರಿಯಾಗಿ ಕಚೇರಿಗೆ ಬಾರದೆ ಜನರ ಕೈಗೂ ಸಿಗದ ಕಾರಣ ಇಲ್ಲಿಂದ ವರ್ಗಾವಣೆ ಮಾಡಲಾಗಿತ್ತು ಈಗ ಮತ್ತೆ ಪಿಡಿಒ ಆಗಿ ಬಂದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದ್ದಾರೆ.

    ಹೊಸದಾಗಿ ನೇಮಕವಾದ ಪಿಡಿಒ ಗಾಯತ್ರಿ ಯವರು ಗ್ರಾಮ ಪಂಚಾಯತಿಗೆ ಬಂದು ಗೋಡೆಯ ಮೇಲೆ ತಮ್ಮ ಹಾಜರಾತಿ ಯನ್ನು ಬರೆದು ವಾಟ್ಸಾಪ್ ನಲ್ಲಿ ಇಒ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.