Tag: ಗ್ರಾಮ ಪಂಚಾಯ್ತಿ

  • ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೊರೊನಾ ವಾರಿಯರ್ಸ್: ಈಶ್ವರಪ್ಪ

    ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೊರೊನಾ ವಾರಿಯರ್ಸ್: ಈಶ್ವರಪ್ಪ

    ಶಿವಮೊಗ್ಗ: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು-ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಗ್ರಾಮೀಣ ಜನರ ಸಹಕಾರ ಪಡೆದು ಕೊರೊನಾ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

    ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೈಸೂರು ಮತ್ತು ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಆಯಾ ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

    ಕೋವಿಡ್ ನಿಯಂತ್ರಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಪ್ರಮುಖವಾದುದ್ದಾಗಿದೆ. ಕೊರೊನಾ 2ನೇ ಅಲೆಯು ಅತ್ಯಂತ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ. ಈ ಹಿಂದೆ ರಚಿಸಲಾಗಿದ್ದ ಕಾರ್ಯಪಡೆಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿದ್ದವು. ಈ ಕಾರ್ಯಪಡೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಿ ಹೆಚ್ಚಿನ ಜವಾಬ್ದಾರಿ ನೀಡಬೇಕಾದ ಅಗತ್ಯವಿದೆ. ಹಾಗಾದಾಗ ಸೋಂಕು ಹತೋಟಿಗೆ ಬರುವ ಸಾಧ್ಯತೆ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.

    ಈ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯ್ತಿ ಸಿಬ್ಬಂದಿ ಕೂಡ ಇತರೆ ಇಲಾಖೆಗಳ ಸಿಬ್ಬಂದಿಯಂತೆ ಕೊರೊನಾ ವಾರಿಯರ್ಸ್ ಗಳಾಗಿ ಪರಿಗಣಿಸಿ, ಅವರಿಗೆ ಎಲ್ಲಾ ರೀತಿಯ ನೆರವು ಸಹಕಾರ ಒದಗಿಸಲಾಗುವುದು ಎಂದರು. ಅಲ್ಲದೇ ಸೋಂಕು ನಿಯಂತ್ರಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯದ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯ್ತಿಯನ್ನು ಉತ್ತಮ ಗ್ರಾಮ ಪಂಚಾಯ್ತಿ ಹಾಗೂ ತಾಲೂಕಿನ ಮೂವರನ್ನು ಉತ್ತಮ ಸೇವಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗುವುದು.

    ವಿಡಿಯೋ ಸಂವಾದದಲ್ಲಿ ಪಂಚಾಯಿತ್ ರಾಜ್ ಇಲಾಖೆಯ ಆಯುಕ್ತ ಅತೀಕ್ ಅಹ್ಮದ್, ಕಾರ್ಯದರ್ಶಿ ಶ್ರೀಮತಿ ಉಮಾ ಮಹದೇವನ್ ಸೇರಿದಂತೆ ಇತರರು ಹಾಜರಿದ್ದರು.

  • ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

    ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಮಾರುಕಟ್ಟೆಯಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ಗೌರಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಡಿಕೇರಿಯಲ್ಲಿ ಶವಸಂಸ್ಕಾರ ಮಾಡಲು ಹಿಂದೇಟು ಹಾಕಲಾಗಿತ್ತು.

    ಕಾರ್ಯಪ್ರವೃತ್ತರಾದ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪೌರಕಾರ್ಮಿಕ ರಾಮಚಂದ್ರ ಮತ್ತು ಇತರ ಸಿಬ್ಬಂದಿ ಮೃತದೇಹವನ್ನು ಶನಿವಾರ ಸುಂಟಿಕೊಪ್ಪಕ್ಕೆ ತಂದು ಹಿಂದೂ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಬೂದಿ ಮುಚ್ಚಿದ ಶಬೀರ್: ಹಿಂದೂ ಪದ್ಧತಿಯಂತೆ ಸತ್ತ ಮೂರನೇ ದಿನಕ್ಕೆ ಬೂದಿ ಮುಚ್ಚುವ ಕಾರ್ಯ ನಡೆಯಬೇಕು. ಗೌರಮ್ಮ ಅವರು ಅನಾಥರಾಗಿದ್ದರಿಂದ ಕುಟುಂಬಸ್ಥರ ಬದಲಾಗಿ ಗ್ರಾಮ ಪಂಚಾಯತಿಯೇ ಅದರ ಹೊಣೆಗಾರಿಕೆ ಹೊತ್ತುಕೊಂಡಿತು. ಭಾನುವಾರ ಬೆಳಗ್ಗೆ ಮುಸ್ಲಿಂ ಸಮುದಾಯದ ಗ್ರಾಮ ಪಂಚಾಯತಿ ಸದಸ್ಯ ಎ. ಶಬೀರ್ ಅವರು ಬೂದಿಯನ್ನು ರಾಶಿ ಮಾಡಿ ಹಿಂದೂ ಪದ್ದತಿಯಂತೆ ಕಾರ್ಯವನ್ನು ತಮಗೆ ಗೊತ್ತಿದ್ದ ಮಟ್ಟಿಗೆ ನೆರವೇರಿಸಿದರು. ಅಲ್ಲದೇ ಜಗತ್ತಿನಲ್ಲಿ ಎಲ್ಲರೂ ಒಂದೇ ಹಿಂದೂ ಮುಸ್ಲಿಂ ಎಂದು ಭೇದಭಾವ ಮಾಡಬರದು ಸತ್ತ ದೇಹದ ಗೌರವ ಕೊಡುವುದು ಮುಖ್ಯ ಎಂದು ಹೇಳಿ ವಿಧದ ನೇರವೇರಿದರು.

    ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಕೆ. ಪ್ರಸಾದ್, ಸದಸ್ಯ ಹೆಚ್.ಯು. ರಫೀಕ್ ಖಾನ್, ಪೌರಕಾರ್ಮಿಕ ರಾಮಚಂದ್ರ ರವರು ಈ ವಿಧಿವಿಧಾನದಲ್ಲಿ ಕೈ ಜೋಡಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

  • ಸೊಕ್ಕೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

    ಸೊಕ್ಕೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

    ದಾವಣಗೆರೆ: ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿ 16 ಕಾಂಗ್ರೆಸ್ ಒಂದು ಇದರಲ್ಲಿ ಕಾಂಗ್ರೆಸ್ ಕೈ ಜೋಡಿಸಿದ್ದು ಸ್ವಾತಿ ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

  • ಗ್ರಾಮ ಪಂಚಾಯ್ತಿ ಚುನಾವಣೆ ವಿಚಾರ – ಸೋತ ಗುಂಪಿನಿಂದ ಹಲ್ಲೆ, ನಿವೃತ್ತ ಶಿಕ್ಷಕ ಸಾವು

    ಗ್ರಾಮ ಪಂಚಾಯ್ತಿ ಚುನಾವಣೆ ವಿಚಾರ – ಸೋತ ಗುಂಪಿನಿಂದ ಹಲ್ಲೆ, ನಿವೃತ್ತ ಶಿಕ್ಷಕ ಸಾವು

    ದಾವಣಗೆರೆ: ಗ್ರಾಮ ಪಂಚಾಯ್ತಿ ಚುನಾವಣೆಯ ಹಿನ್ನೆಲೆ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಕೃಷ್ಣಪ್ಪ (68) ಸಾವನ್ನಪ್ಪಿದ ನಿವೃತ್ತ ಶಿಕ್ಷಕ. ಇವರ ಪುತ್ರ ವಿಜಯೇಂದ್ರಗೆ ತೀವ್ರ ಗಾಯಗಳಾಗಿವೆ. ಗಾಯಾಳುವನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    ದೇವಿಕೆರೆ ಪಂಚಾಚಾಯ್ತಿ ವ್ಯಾಪ್ತಿಯ ಮಿನಿಗರಹಳ್ಳಿ ಗ್ರಾಮದಲ್ಲಿ ಸೋತ ಗುಂಪಿನಿಂದ ಕೃಷ್ಣಪ್ಪ ಮೇಲೆ ಕಟ್ಟಿಗೆಯಿಂದ ಮೇಲೆ ಹಲ್ಲೆ ಮಾಡಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡು ಕೃಷ್ಣಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೃತ ಕೃಷ್ಣಪ್ಪ ಸಂಬಂಧಿ ಗೆಲುವು ಸಾಧಿಸಿದ್ದರು. ಸೋಲು ಕಂಡವರು ಇಂದು ಉದ್ದೇಶ ಪೂರ್ವಕವಾಗಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಇನ್ನು ಕೃಷ್ಣಪ್ಪ ಶವವನ್ನು ಮರಣೋತ್ತರ ಪರೀಕ್ಷೆಗೆ ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ, ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ.

    ಸ್ಥಳಕ್ಕೆ ಜಗಳೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶಕ್ಕೆ ಕೌಂಟ್‍ಡೌನ್

    ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶಕ್ಕೆ ಕೌಂಟ್‍ಡೌನ್

    ಬೆಂಗಳೂರು: ಹಳ್ಳಿ ಫೈಟ್‍ನ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ ಆಗಲಿದ್ದು, ರಾತ್ರಿ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

    ರಾಜ್ಯದ 5,728 ಗ್ರಾಮಪಂಚಾಯ್ತಿಗಳ 82,616 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಶೇ.82ರಷ್ಟು ಮತದಾನವಾಗಿತ್ತು. 2,22,814 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ರು. 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಚಿನ್ಹೆ ಗೊಂದಲದ ಕಾರಣ ಮಂಗಳವಾರ ಬೆಳಗಾವಿಯ ಕದಂಪುರ ಮತ್ತು ಬಾಗಲಕೋಟೆಯ ಕಲಾದಗಿಯಲ್ಲಿ ಮರುಮತದಾನ ನಡೆದಿದೆ.

    ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಕಡೆ ಗೆಲುವು ಸಾಧಿಸುತ್ತಾರೆ. ಬಹುತೇಕ ಗ್ರಾಮಪಂಚಾಯ್ತಿಗಳಲ್ಲಿ ಕಮಲ ಅರಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕೂಡ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ.

  • 113 ತಾಲೂಕುಗಳಲ್ಲಿ ಮೊದಲ ಹಂತದ ಲೋಕಲ್ ಫೈಟ್ – ಸಂಜೆ 5 ಗಂಟೆವರೆಗೆ ಮತದಾನ

    113 ತಾಲೂಕುಗಳಲ್ಲಿ ಮೊದಲ ಹಂತದ ಲೋಕಲ್ ಫೈಟ್ – ಸಂಜೆ 5 ಗಂಟೆವರೆಗೆ ಮತದಾನ

    ಬೆಂಗಳೂರು: ಇಂದು ಲೋಕಲ್ ಕದನಕ್ಕೆ ಮತದಾರನ ಮುನ್ನುಡಿ ಹಾಕಲಿದ್ದಾನೆ. ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಇಂದು ನಡೆಯುತ್ತಿದೆ. 113 ತಾಲೂಕುಗಳ 2,930 ಗ್ರಾಮ ಪಂಚಾಯ್ತಿಗಳಿಗೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ. ಸಂಜೆ 4 ರಿಂದ 5 ಗಂಟೆವರೆಗೆ ಕೊರೊನಾ ಸೋಂಕಿತರ ಮತದಾನ ಇರಲಿದೆ.

    ಉಪಚುನಾವಣೆಗೆ ನಿಗದಿಪಡಿಸಿದ ಮಾರ್ಗಸೂಚಿಯೇ ಈ ಚುನಾವಣೆಗೂ ಅನ್ವಯವಾಗಲಿದೆ. ಕೊರೊನಾ ಮುಂಜಾಗ್ರತೆಗಳೊಂದಿಗೆ ‘ಹಳ್ಳಿ ಫೈಟ್’ ನಡೆಯುತ್ತಿದೆ. ಚುನಾವಣಾ ಸಿಬ್ಬಂದಿ, ಮತದಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮತದಾನ ವೇಳೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

    ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಇಂದು ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ 43,238 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಖಾಡದಲ್ಲಿ ಒಟ್ಟು 1,21,760 ಮಂದಿ ಸ್ಪರ್ಧೆ ನಡೆಯುತ್ತಿದೆ. ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿಯಿಂದ ಅದೃಷ್ಟ ಪರೀಕ್ಷೆ ನಡೆಯಲಿದೆ. ಇಂದು ವೇತನಸಹಿತ ರಜೆ ಹಿನ್ನೆಲೆ, ಹಳ್ಳಿಗಳತ್ತ ಮತದಾರರು ಹೆಜ್ಜೆ ಹಾಕುತ್ತಿದ್ದಾರೆ. ಡಿಸೆಂಬರ್ 30ರಂದು ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

  • 72 ವರ್ಷಗಳಿಂದ ಚುನಾವಣೆ ಇಲ್ಲದೆ ಗ್ರಾಮ ಪಂಚಾಯ್ತಿಗೆ ಅವಿರೋಧ ಆಯ್ಕೆ

    72 ವರ್ಷಗಳಿಂದ ಚುನಾವಣೆ ಇಲ್ಲದೆ ಗ್ರಾಮ ಪಂಚಾಯ್ತಿಗೆ ಅವಿರೋಧ ಆಯ್ಕೆ

    – ಈ ಬಾರಿಯೂ 33 ಸ್ಥಾನಗಳಿಗೆ ಅವಿರೋಧ ಆಯ್ಕೆ

    ಚಿಕ್ಕೋಡಿ(ಬೆಳಗಾವಿ): ಚುನಾವಣೆ ಘೊಷಣೆ ಆಗ್ತಿದ್ದಂತೆ ಒಂದೇ ಗಲ್ಲಿಯಲ್ಲಿ ಬೆಳೆದ ಗೆಳೆಯರು ಪರಸ್ಪರ ವಿರೋಧಿಗಳಾಗೋದು ಕಾಮನ್. ಕೆಲವೊಂದು ಬಾರಿ ಅಣ್ಣ ತಮ್ಮಂದಿರಲ್ಲಿಯೇ ಕಲಹ ಶುರುವಾಗಿಬಿಡುತ್ತೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಜನ ಕಳೆದ 7 ದಶಕಗಳಿಂದ ಗ್ರಾ.ಪಂ ಚುನಾವಣೆ ಮಾಡಿ ಕೈಗೆ ಶಾಯಿ ಹಾಕಿಕೊಂಡ ಉದಾಹರಣೆಯೇ ಇಲ್ಲ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬ್ಯಾಲೇಟ್ ಪೇಪರ್ ನೋಡೆ ಇಲ್ಲ. ಬದಲಾಗಿ ಕತ್ತಿ ಸಹೋದರರು ಗ್ರಾಮದ ಸದಸ್ಯರನ್ನು ಸೇರಿಸಿ ತೆಗೆದುಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬದ್ಧವಾಗಿ ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

    ಗ್ರೂಪ್ ಪಂಚಾಯ್ತಿ, ಮಂಡಲ ಪಂಚಾಯ್ತಿ ಕಾಲದಿಂದಲೂ ಸಹ ಬೆಲ್ಲದ ಬಾಗೇವಾಡಿಯಲ್ಲಿ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ. 1977ರಲ್ಲಿ ಗ್ರಾಮದಲ್ಲಿ ಒಂದು ಬಾರಿ ಒಂದೇ ವಾರ್ಡಿಗೆ ಚುನಾವಣೆ ನಡೆದಿದ್ದು, ಬಿಟ್ಟರೆ ಇಲ್ಲಿಯವರೆಗೂ ಸಹ ಗ್ರಾಮಸ್ಥರು ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದಾರೆ.

    ಸದ್ಯ ಗ್ರಾಮದ 9 ವಾರ್ಡುಗಳಿಗೆ 33 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ಸ್ವಗೃಹಕ್ಕೆ ಕರೆಸಿ ಸನ್ಮಾನ ಮಾಡಿ ಗ್ರಾಮದ ಏಳ್ಗೆಗಾಗಿ ಶ್ರಮಿಸುವಂತೆ ಮನವಿ ಮಾಡಿದರು. ಅವಿರೋಧ ಆಯ್ಕೆಯಾದ ಸದಸ್ಯರು ಮಾತನಾಡಿ ಕತ್ತಿ ಸಹೋದರರ ಪ್ರಯತ್ನದಿಂದ ಅವಿರೋಧ ಆಯ್ಕೆ ಆಗಿದ್ದು, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.

  • ಮಂಡ್ಯ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನ ಹರಾಜು

    ಮಂಡ್ಯ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನ ಹರಾಜು

    ಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಕ್ರಿಯೆಗಳು ಜರುಗುತ್ತಿದ್ದು, ಈ ಮೂಲಕ ಲೋಕಲ್ ವಾರ್ ಗರಿಗೆದರಿದೆ. ಇನ್ನೊಂದೆಡೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ನೆಪ ಇಟ್ಟುಕೊಂಡು ಗ್ರಾಮ ಪಂಚಾಯ್ತಿಗಳಲ್ಲಿ ಅಭ್ಯರ್ಥಿ ಸ್ಥಾನವನ್ನು ಹರಾಜು ಹಾಕಲಾಗುತ್ತಿದೆ. ಹರಾಜು ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ಕುರಿ-ಕೋಳಿಗಳ ರೀತಿ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ಹರಾಜು ಹಾಕುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಲಕ್ಷಾಂತ ರೂಪಾಯಿಗಳಿಗೆ ಗ್ರಾಮ ಪಂಚಾಯ್ತಿ ಸ್ಥಾನವನ್ನು ಲಾಳನಕೆರೆ ಗ್ರಾಮಸ್ಥರು ಮನೆಯೊಂದರಲ್ಲಿ ಬಿಡ್ ಮೂಲಕ ಹರಾಜು ಹಾಕಿದ್ದಾರೆ.

    ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಯವರೆಗೆ ಸವಲತ್ತುಗಳು ದೊರಕಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಭಾರತ ದೇಶದಲ್ಲಿ ಮಾಡಕೊಳ್ಳಲಾಗಿದೆ. ಆದರೆ ಇದೀಗ ಗ್ರಾಮ ಪಂಚಾಯ್ತಿ ಸ್ಥಾನಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಹರಾಜು ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗುತ್ತಿದೆ.

  • ಲಾಕ್‍ಡೌನ್‍ನಿಂದ ಮರಳಿದ್ದ ಕೂಲಿಕಾರರಿಗೆ ರಾಯಚೂರಿನಲ್ಲಿ ಕೈ ತುಂಬಾ ಕೆಲಸ

    ಲಾಕ್‍ಡೌನ್‍ನಿಂದ ಮರಳಿದ್ದ ಕೂಲಿಕಾರರಿಗೆ ರಾಯಚೂರಿನಲ್ಲಿ ಕೈ ತುಂಬಾ ಕೆಲಸ

    ರಾಯಚೂರು: ಒಂದೋ ಬರಗಾಲ ಇಲ್ಲ ಅತೀವೃಷ್ಠಿ ಇದು ರಾಯಚೂರು ಜಿಲ್ಲೆಯ ಜನರಿಗೆ ತಟ್ಟಿರೋ ಶಾಪ. ಹೀಗಾಗಿ ಬಿಸಿಲನಾಡಿನ ಗ್ರಾಮೀಣ ಭಾಗದ ಜನ ಪ್ರತೀ ವರ್ಷ ಗುಳೆ ಹೋಗುವುದು ಸರ್ವೆ ಸಾಮಾನ್ಯ. ಆದ್ರೆ ಕೊರೊನಾ ಲಾಕ್‍ಡೌನ್‍ನಿಂದ ಸ್ವಗ್ರಾಮಗಳಿಗೆ ಮರಳಿದ್ದ ಜನ ನಿರುದ್ಯೋಗಿಗಳಾಗಿರಬಾರದು ಅಂತ ರಾಯಚೂರು ತಾಲೂಕಿನ ಯರಗೇರಾ ಗ್ರಾಮ ಪಂಚಾಯ್ತಿ ಎಲ್ಲರಿಗೂ ಕೆಲಸ ನೀಡಿ ಮಾದರಿಯಾಗಿದೆ.

    ಪ್ರತೀ ವರ್ಷ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜನ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ಇತರೆ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಆದ್ರೆ ಈ ವರ್ಷ ಕೊರೊನಾ ಲಾಕ್‍ಡೌನ್ ನಿಂದಾಗಿ ಗುಳೆಹೋದ ಜನರೆಲ್ಲಾ ಗ್ರಾಮಕ್ಕೆ ಮರಳಿದ್ದರು. ಇದರಲ್ಲಿ ಬಹುತೇಕರು ಕೆಲಸವೇ ಇಲ್ಲದೆ ಪರದಾಡಿದರು, ಕೆಲವರು ಕೃಷಿಗೆ ಮರಳಿದರು. ಸರ್ಕಾರವೇನೋ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಗುಳೆ ಹೋಗಿ ಮರಳಿದ ಎಲ್ಲರಿಗೂ ಕೆಲಸ ಕೊಡಬೇಕು ಅಂತ ಜಿಲ್ಲೆಗಳಿಗೆ ಸೂಚಿಸಿತ್ತು. ಎಷ್ಟು ಜಿಲ್ಲೆಗಳು ಇದನ್ನ ಸಮರ್ಪಕವಾಗಿ ಪಾಲಿಸಿದವೋ ಗೊತ್ತಿಲ್ಲ. ಆದ್ರೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿ ಮಾತ್ರ ಎಲ್ಲಾ ಕೂಲಿಕಾರರಿಗೆ ಕೆಲಸ ಕೊಟ್ಟಿದೆ. ಲಾಕ್‍ಡೌನ್ ಬಳಿಕ ಪುನಃ ಗುಳೆ ಹೋಗದಂತೆ ಪಂಚಾಯತಿ ವ್ಯಾಪ್ತಿಯ ಕೂಲಿಕಾರರನ್ನ ತಡೆಹಿಡಿದಿದೆ.

    ಕೂಲಿಕಾರರಿಗೆ ಕೆಲಸ ಕೊಡಬೇಕು ಅಂತಲೇ 1 ಕೋಟಿ 27 ಲಕ್ಷ ರೂಪಾಯಿ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಸುಮಾರು 22 ಸಾವಿರ ಮಾನವ ದಿನಗಳ ಸೃಷ್ಠಿ ಮಾಡಿ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಕೆರೆ ಹೂಳು, ಗ್ರಾಮಪಂಚಾಯ್ತಿ ಕಟ್ಟಡ ನಿರ್ಮಾಣ, ಗೋದಾಮು ಕಟ್ಟಡ, ಐದು ಅಂಗನವಾಡಿ ಕೇಂದ್ರಗಳ ನಿರ್ಮಾಣ, ಕಲ್ಯಾಣಿ ಅಭಿವೃದ್ಧಿ, ಬಿಸಿಯೂಟ ಕೋಣೆಗಳನ್ನ ನಿರ್ಮಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಸಹಕಾರದಿಂದ ಪುನಃ ಗುಳೆ ಹೋಗುವವರು ಸಹ ಬಹುತೇಕರು ಗ್ರಾಮದಲ್ಲೇ ಉಳಿದಿದ್ದಾರೆ.

    ಒಟ್ನಲ್ಲಿ ಗ್ರಾಮದಲ್ಲಿ ಕೃಷಿಯನ್ನ ನಂಬಿ ಬದುಕಲು ಸಾಧ್ಯವಿಲ್ಲ ಅಂತ ನಗರ ಪ್ರದೇಶಗಳಿಗೆ ಗುಳೆ ಹೋದ ಜನ ಲಾಕ್‍ಡೌನ್ ನಿಂದ ತತ್ತರಿಸಿ ಹೋಗಿದ್ದರು. ಕೆಲಸವಿಲ್ಲದೆ ಮರಳಿದ್ದ ಕೂಲಿಕಾರರಿಗಾಗಿ ವಿವಿಧ ಕಾಮಗಾರಿ ಕೈಗೆತ್ತಿಕೊಂಡು ಕೆಲಸ ನೀಡಿದ ಯರಗೇರಾ ಗ್ರಾಮ ಪಂಚಾಯತಿ ಭೇಷ್ ಎನಿಸಿಕೊಂಡಿದೆ.

  • ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ: ಈಶ್ವರಪ್ಪ

    ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ: ಈಶ್ವರಪ್ಪ

    ಶಿವಮೊಗ್ಗ: ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ ಚುನಾವಣೆ ನಡೆಸುವುದಾಗಲಿ, ಕೋವಿಡ್ ಆಗಲಿ ನಮ್ಮ ಕೈಯಲ್ಲಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ, ಆಯೋಗದ ನಿಲುವು ಏನು ಎಂಬ ಪ್ರಶ್ನೆ ಮಾಡಿತ್ತು. ಹೀಗಾಗಿ ಚುನಾವಣಾ ಆಯೋಗ ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದೆ ಎಂದರು.

    ಆದರೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದರೂ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಯಾವಾಗ ಮುಗಿಯುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಕೊರೊನಾ ಮುಗಿಯುತ್ತಿದ್ದಂತೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದರು.