Tag: ಗ್ರಾಮ ಪಂಚಾಯ್ತಿ ಎಲೆಕ್ಷನ್

  • ಕೊಪ್ಪಳದಲ್ಲಿ ಮತವನ್ನ ಸ್ಕೇಲ್‍ನಿಂದ ಅಳೆದ ಸಿಬ್ಬಂದಿ

    ಕೊಪ್ಪಳದಲ್ಲಿ ಮತವನ್ನ ಸ್ಕೇಲ್‍ನಿಂದ ಅಳೆದ ಸಿಬ್ಬಂದಿ

    ಕೊಪ್ಪಳ: ಬ್ಯಾಲೆಟ್ ಪೇಪರ್ ನ್ನು ಚುನಾವಣಾ ಸಿಬ್ಬಂದಿ ಸ್ಕೇಲ್ ನಿಂದ ಅಳೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಅಭ್ಯರ್ಥಿಗಳ ಚಿಹ್ನೆ ನಡುವೆ ಮತದಾರರ ಮತ ಚಲಾಯಿಸಿದ್ದರು.

    ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆ ನಡೆದಿತ್ತು. ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದ. ಈ ಮತ ಎಣಿಕೆಯಿಂದ ಹೊರ ಗಿಟ್ಟು ಮತ ಎಣಿಕೆ ಮಾಡಲಾಗಿತ್ತು.

    ಕೊನೆಗೆ ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ಸ್ಕೇಲ್ ನಿಂದ ಅಳತೆ ಮಾಡಲಾಯ್ತು. ಟಿವಿ ಚಿನ್ಹೆಗೆ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆ ಗಾಳೆಪ್ಪ ಪೂಜಾರ ಅವರಿಗೆ ಮತ ಎಂದು ಘೋಷಣೆ ಮಾಡಲಾಯ್ತು.

     

  • ಇಂದು 2ನೇ ಹಂತದ ಗ್ರಾ.ಪಂ. ಚುನಾವಣೆ – 2,709 ಗ್ರಾಮಗಳಲ್ಲಿ ಮತದಾನ

    ಇಂದು 2ನೇ ಹಂತದ ಗ್ರಾ.ಪಂ. ಚುನಾವಣೆ – 2,709 ಗ್ರಾಮಗಳಲ್ಲಿ ಮತದಾನ

    ಬೆಂಗಳೂರು: ಗ್ರಾಮ ಪಂಚಾಯ್ತಿಗೆ ಇಂದು 2ನೇ ಹಂತದ ಮತದಾನ. 109 ತಾಲೂಕುಗಳ 2,709 ಗ್ರಾಮ ಪಂಚಾಯ್ತಿಗಳ 39,378 ಸ್ಥಾನಗಳಿಗೆ ಮತದಾನ ಶುರುವಾಗಿದೆ.

    2,832 ಪಂಚಾಯ್ತಿಗಳ ಪೈಕಿ 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ರೆ, 216 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. 1 ಲಕ್ಷದ 2 ಸಾವಿರದ 432 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕೊರೊನಾ ಸೋಂಕು ತಡೆ, ಸುಗಮ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

    ವಿಜಯಪುರ ಜಿಲ್ಲೆಯ ನಾಗಠಾಣದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರ ಸಹೋದರಿಯರು ಪರಸ್ಪರ ಅಖಾಡಕ್ಕೆ ಇಳಿದಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿಯ ವಾರ್ಡ್ ನಂಬರ್ 4ರಲ್ಲಿ ಸಹೋದರಿಯರಾದ ನೀಲಾಬಾಯಿ ಮತ್ತು ಕಸ್ತೂರಿ ಬಾಯಿ ಫೈಟ್ ಮಾಡ್ತಿದ್ದಾರೆ. ನಂಜನಗೂಡಿನ ಹಾರೋಪುರದ ತಾಯೂರು ಗ್ರಾಮ ಪಂಚಾಯ್ತಿ ಮತಕೇಂದ್ರದ ಮುಂದೆ ವಾಮಾಚಾರ ಮಾಡಲಾಗಿದೆ.

    ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬೆಳ್ಳಾಲ ಮೂಡುಮುಂದ ವಾರ್ಡ್ ನಲ್ಲಿ ತಮ್ಮ ಮತ ಚಲಾಯಿಸಿದರು. ಬೆಳ್ಳಂಬೆಳಗ್ಗೆ ಬಂದು ಸಾಲಿನಲ್ಲಿ ನಿಂತಿದ್ದ ಶಾಸಕ ಸುಕುಮಾರ ಶೆಟ್ಟಿ ಮತಗಟ್ಟೆಯಲ್ಲಿ ಮೊದಲ ವೋಟ್ ಮಾಡಿದರು.

  • ಗ್ರಾ.ಪಂ. ಎಲೆಕ್ಷನ್- ರಾತ್ರಿ ಗ್ರಾಮದ ಪ್ರತಿ ಮನೆಗೆ ಕುಂಕುಮ ಎರಚಿದ್ರು

    ಗ್ರಾ.ಪಂ. ಎಲೆಕ್ಷನ್- ರಾತ್ರಿ ಗ್ರಾಮದ ಪ್ರತಿ ಮನೆಗೆ ಕುಂಕುಮ ಎರಚಿದ್ರು

    ವಿಜಯಪುರ: ಜಿಲ್ಲೆಯಲ್ಲಿ 111 ಗ್ರಾಮ ಪಂಚಾಯತಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಇದರ ಬೆನ್ನಲ್ಲೆ ಗ್ರಾಮ ಚುನಾವಣೆಗೆ ವಾಮಾಚಾರದ ಬಿಸಿ ತಟ್ಟಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ವಾರ್ಡ್ ನಂಬರ್ 2ರ ಮನೆಮನೆಗೆ ಕಿಡಗೇಡಿಗಳು ಕುಂಕುಮ ಎರಚಿದ್ದಾರೆ. ನಾಳೆ ಮತದಾನ ನಡೆಯಲಿದ್ದು ಗ್ರಾಮದಲ್ಲಿ ವಾಮಾಚಾರದ ಶಂಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

    ಹಡಲಗೇರಿ ಗ್ರಾಮದಲ್ಲಿ 2 ಸ್ಥಾನಗಳಿಗೆ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾ. ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿಯೇ ಒಬ್ಬರು ಹೀಗೆ ಮಾಡಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

    ಏಳೂ ಜನ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನ ಗ್ರಾಮಾಸ್ಥರು ನೀಡಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಸದ್ಯ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್‍ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ

    ಗ್ರಾಮ ಪಂಚಾಯ್ತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಪಿ.ಪಿ.ಬೋಪಣ್ಣ ಜೈಲಿನಿಂದ ನಾಮಪತ್ರ ಸಲ್ಲಿಸಿದ್ದಾರೆ. ಕೊಡಗಿನ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ವಿದ್ಯಮಾನ ನಡೆದಿದೆ. ಎರಡು ಅವಧಿಗೆ 10 ವರ್ಷ ಪಾಲಿಬೆಟ್ಟ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಬೋಪಣ್ಣ ಸೇವೆ ಸಲ್ಲಿಸಿದ್ರು.

    ಈ ಬಾರಿ ಚುನಾವಣೆಗೆ ನಿಲುವ ಎಲ್ಲಾ ತಯಾರಿಸುತ್ತಿರುವ ಹಿನ್ನೆಲೆಯಲ್ಲಿ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಅದರೂ ಪಂಚಾಯತಿ ಚುನಾವಣೆಗೆ ನಿಲ್ಲಬೇಕು ನಾಮಪತ್ರ ಸಲ್ಲಿಕೆ ಮಾಡಲು ಅಸಾಧ್ಯವಾಗಿತ್ತು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಅವರ ಮೂಲಕ ಜಾಮೀನು ಪಡೆಯಲು ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿದರು. ಜಾಮೀನು ಸಿಗದ ಹಿನ್ನೆಲೆ ನ್ಯಾಯಾಲಯದ ಒಪ್ಪಿಗೆ ಪಡೆದು ಜೈಲಿನಿಂದಲೇ ಬೋಪಣ್ಣ ಸೂಚಕರ ಸಹಾಯದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಜಿಲ್ಲಾ ಪಂಚಾಯತಿ ಸದಸ್ಯ ಧರ್ಮಜ ಉತ್ತಪ್ಪ ನಾಮಪತ್ರ ಸಲ್ಲಿಕೆ ಮಾಡುವ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಿದ್ರು. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಮಾತಾನಾಡಿ, ಅಭಿವೃದ್ಧಿಗೆ ಕೆಲಸ ಮಾಡಿರುವ ಬೋಪಣ್ಣ ಅವರು ರಾಷ್ಟ್ರ ಮಟ್ಟದಲ್ಲಿ ಪಂಚಾಯತಿ ಗೆ ಪ್ರಶಸ್ತಿ ಬರಲು ಶ್ರಮಿಸಿದ್ದರು ಎಂದು ಹೇಳಿದ್ದಾರೆ.

  • ಗ್ರಾ.ಪಂ. ಸ್ಥಾನಕ್ಕೆ ಬಹಿರಂಗ ಹರಾಜು – ತಿರುಗಿಬಿದ್ದ ಗ್ರಾಮದ ಯುವಕರು

    ಗ್ರಾ.ಪಂ. ಸ್ಥಾನಕ್ಕೆ ಬಹಿರಂಗ ಹರಾಜು – ತಿರುಗಿಬಿದ್ದ ಗ್ರಾಮದ ಯುವಕರು

    ರಾಯಚೂರು: ಗ್ರಾಮ ಪಂಚಾಯತಿ ಸ್ಥಾನಗಳನ್ನ ಹರಾಜು ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡುವಂತ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಇ.ಜೆ.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಆದ್ರೆ ಗ್ರಾಮದ ಯುವಕರು ಹರಾಜಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಹಾರಾಜಿನ ಆಯ್ಕೆಯನ್ನ ರದ್ದುಮಾಡಿ ಗ್ರಾಮದಲ್ಲಿ ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ.

    ಗ್ರಾಮದಲ್ಲಿ ಸಭೆ ಸೇರಿ ಇಜೆ ಹೊಸಳ್ಳಿಯ 4 ಸ್ಥಾನಗಳನ್ನ ಪ್ರತಿ ಸದಸ್ಯತ್ವಕ್ಕೆ 3 ಲಕ್ಷ 10 ಸಾವಿರ ರೂಪಾಯಿಯಂತೆ ಹರಾಜು ಹಾಕಲಾಗಿತ್ತು. ಹೊಸಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 30 ಸ್ಥಾನಗಳಿದ್ದು ಇಜೆ ಹೊಸಳ್ಳಿ ಗ್ರಾಮದ 4 ಸ್ಥಾನಗಳಿಗೆ ಹರಾಜು ನಡೆದಿತ್ತು. ಗ್ರಾಮದ ದುರ್ಗಾದೇವಿ ಗುಡಿಯ ಕಲ್ಯಾಣ ಮಂಟಪಕ್ಕಾಗಿ ಹರಾಜಿಗೆ ಗ್ರಾಮಸ್ಥರು ಮುಂದಾಗಿದ್ದರು.

    ಎರಡನೇ ಹಂತದಲ್ಲಿ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಮತದಾನ ನಡೆಯದೆ ಸದಸ್ಯರನ್ನ ಆಯ್ಕೆ ಮಾಡಲು ಗ್ರಾಮಸ್ಥರು ಮುಂದಾಗಿದ್ದರು. ಸದಸ್ಯ ಸ್ಥಾನಕ್ಕೆ ಹರಾಜು ಕೂಗಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.