Tag: ಗ್ರಾಮ ಪಂಚಾಯ್ತಿ ಅಧ್ಯಕ್ಷೆ

  • 20 ವರ್ಷದಿಂದ ಟೀ ಮಾರಿ ಜೀವನ ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆ!

    20 ವರ್ಷದಿಂದ ಟೀ ಮಾರಿ ಜೀವನ ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆ!

    ತುಮಕೂರು: ಆಕೆ ಪ್ರಧಾನಿ ಮೋದಿಯ (Narendra Modi) ಅಪ್ಪಟ ಅಭಿಮಾನಿ. ಈ ಹಿಂದೆ ಮೋದಿ ಅವರು ಟೀ ಮಾರಿದಂತೆ (Tea Sale) ಈ ಅಭಿಮಾನಿಯೂ ಟೀ ಮಾರುತಿದ್ದಾಳೆ. ಟೀ ಮಾರಿ 20 ವರ್ಷದಿಂದ ಜೀವನ ಕಟ್ಟಿಕೊಂಡಿದ್ದಾಳೆ. ಅಷ್ಟೇ ಅಲ್ಲಾ ಟೀ ಮಾರಿದ ಮೋದಿ ಪಾರ್ಲಿಮೆಂಟ್ ಗೆ ಪ್ರಧಾನಿ ಆದ್ರೆ, ಈ ಅಭಿಮಾನಿ ಪಂಚಾಯತಿಗೆ ಅಧ್ಯಕ್ಷೆಯಾಗಿದ್ದಾರೆ. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗಿನ ಟೀ ಮಹಾತ್ಮೆಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

    ಟೀ ಮಾರೋರೆಲ್ಲಾ ಪ್ರಧಾನಿಯಾಗಲ್ಲ, ಚಹಾ ಮಾರಿ ಜೀವನ ಕಟ್ಟಿಕೊಂಡವರೆಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲ್ಲ. ಆದರೆ ಅವರ ಪರಿಶ್ರಮ, ಏನಾದರೂ ಸಾಧನೆ ಮಾಡಬೇಕು ಅನ್ನೋ ಛಲ ಅವರನ್ನು ಉತ್ತುಂಗಕ್ಕೇರಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದ್ದು ತುಮಕೂರಿನ ಊರ್ಡಿಗೆರೆ ಗ್ರಾಮ ಪಂಚಾಯ್ತಿ. ಈ ಗ್ರಾಮ ಪಂಚಾಯ್ತಿಯಲ್ಲಿ ಚಹಾ ಮಾರುವ ಮಹಿಳೆಯೋರ್ವಳು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ದೇವರಾಯನದುರ್ಗ ದೇವಸ್ಥಾನದ ಬಳಿ ಪುಟ್ಟ ಟೀ ಅಂಗಡಿ ಇಟ್ಟುಕೊಂಡು ಕಳೆದ 20 ವರ್ಷದಿಂದ ಬದುಕು ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆಯಾಗಿ (Grama Panchayat President) ಹೊರಹೊಮ್ಮಿದ್ದಾರೆ. 2 ನೇ ಅವಧಿಗೆ ಗುರುವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಊರ್ಡಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 21 ಸದಸ್ಯರ ಸಂಖ್ಯೆ ಇದೆ. ಇದರಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯೆ 10, ಜೆಡಿಎಸ್ ಬೆಂಬಲಿತರ ಸಂಖ್ಯೆ 11 ಇದೆ. ಅನ್ನಪೂರ್ಣಮ್ಮ ಬಿಜೆಪಿ ಬೆಂಬಲಿತ ಸದಸ್ಯೆ. ಆದರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್‍ನಲ್ಲಿ ನಾಲ್ಕು ಜನ ಮುಸ್ಲಿಂ ಮಹಿಳೆಯರೂ ಇದ್ದರು. ಆದರೂ ಅವರೆಲ್ಲರೂ ಸೇರಿ ಟೀ ಮಾರುವ ಅನ್ನಪೂರ್ಣಮ್ಮರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡರ ಪ್ಲಾನ್ ಇಲ್ಲಿ ಫಲಿಸಿದೆ.

    ನೂತನವಾಗಿ ಅಧ್ಯಕ್ಷೆಯಾದ ಅನ್ನಪೂರ್ಣಮ್ಮ ಮಹಿಳಾಪರ ಹಲವು ಕನಸು ಕಂಡಿದ್ದಾರೆ. ತಮ್ಮ ಪಂಚಾಯ್ತಿ ವ್ಯಾಪ್ತಿಯ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುವ ವಾಗ್ದಾನ ಮಾಡಿದ್ದಾರೆ. ಒಟ್ಟಾರೆ ಟೀ ಮಾರೋ ಮಹಿಳೆ ಅಧ್ಯಕ್ಷೆ ಗಾದಿಗೆ ಏರಿರುವ ಯಶೋಗಾಥೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಬಳ್ಳಾರಿ: ಜನ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಬಳ್ಳಾರಿಯಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆಯಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕಾಗಿ ತಮ್ಮ ಜಾತಿ ಪ್ರಮಾಣ ಪತ್ರವನ್ನೇ ಬದಲಿಸಿ, ಕಳೆದ ನಾಲ್ಕು ವರ್ಷಗಳಿಂದ ಸುಳ್ಳು ಪ್ರಮಾಣ ಪತ್ರ ನೀಡಿ ಅಧ್ಯಕ್ಷೆಯಾಗಿ ಅಧಿಕಾರ ಅನುಭವಿಸಿದ್ದರೂ ಆ ಸ್ಥಾನವನ್ನು ಮಹಿಳೆಯೊಬ್ಬರು ಬಿಟ್ಟು ಕೊಡುತ್ತಿಲ್ಲ. ಜೊತೆಗೆ ಹೈಕೋರ್ಟ್ ಆದೇಶ ಮಾಡಿದ್ದರೂ ಕ್ಯಾರೇ ಎನ್ನುತ್ತಿಲ್ಲ.

    ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಆದರೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾತ್ರ ತಮಗೂ ಹೈಕೋರ್ಟ್ ಆದೇಶಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದು ನ್ಯಾಯಾಲಯದ ಆದೇಶ ಪಾಲಿಸದೆ ದರ್ಪ ತೋರುತ್ತಿದ್ದಾರೆ. ಈ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಪ್ರವರ್ಗ 2ಎ ಗೆ ಮೀಸಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷೆ ಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ನಕಲಿ ಪ್ರಮಾಣ ಪತ್ರ ಎನ್ನುವುದು ಗ್ರಾಮದ ಎಲ್ಲರಿಗೂ ಗೊತ್ತಿದ್ದರೂ ಏನು ಮಾಡದ ಪರಿಸ್ಥಿತಿ ಇತ್ತು. ಆದರೆ ಪ್ರವರ್ಗ 2ಎ ಗೆ ಸೇರಿದ ಮತ್ತೊಬ್ಬ ಗ್ರಾಮ ಪಂಚಾಯ್ತಿ ಸದಸ್ಯೆ ರೇಖಾ ಸೊನ್ನದ ಅವರು ಇದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಧಾರವಾಡ ಹೈಕೋರ್ಟ್ ಬೆಂಚ್ ರೇಖಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಯರಳ್ಳಿ ರತ್ನಮ್ಮಾ ಅವರು ಸಲ್ಲಿಸಿದ್ದ ನಕಲಿ ಜಾತಿ ಪ್ರಮಾಣ ಪತ್ರವನ್ನು ನಕಲಿ, ಕೂಡಲೇ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತ್ತು.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳು ಕಳೆದರೂ ಈ ಆದೇಶವನ್ನು ಯಾರು ಪಾಲಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಕೂಡ ಅಧ್ಯಕ್ಷೆ ಸ್ಥಾನವನ್ನು ಬಿಟ್ಟು ಕೊಡಲು ತಯಾರಿಲ್ಲ. ಇತ್ತ ಹೂವಿನಹಡಗಲಿ ತಾಲೂಕಿನ ಮಾನ್ಯ ತಹಶೀಲ್ದಾರರು ಸಹ ಹೈಕೋರ್ಟ್ ಆದೇಶ ಪಾಲಿಸದೆ ತಮಗೂ ಆದೇಶಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳೇ ಕಳೆದಿವೆ. ಜೊತೆಗೆ ಇನ್ನು ಎರಡು ತಿಂಗಳಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ನಿಗದಿ ಆಗಲಿದೆ. ಆದರೆ ಎರಡು ತಿಂಗಳಾದರೂ ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡಲಿ ಎಂಬುದು ರೇಖಾ ಅವರ ವಾದವಾಗಿದ್ದು, ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲ ಎಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

  • ಜಾಯಿಂಟ್ ಅಕೌಂಟೇ ವರವಾಯ್ತು- ನಕಲಿ ಬಿಲ್ ತೋರಿಸಿ ಲಕ್ಷ ಲಕ್ಷ ಲೂಟಿ..!

    ಜಾಯಿಂಟ್ ಅಕೌಂಟೇ ವರವಾಯ್ತು- ನಕಲಿ ಬಿಲ್ ತೋರಿಸಿ ಲಕ್ಷ ಲಕ್ಷ ಲೂಟಿ..!

    ಚಿಕ್ಕಮಗಳೂರು: ಜಾಯಿಂಟ್ ಅಕೌಂಟ್ ಇದ್ದಿದ್ದೇ ವರವಾಯ್ತು. 150 ಲೈಟ್‍ಗೆ 12 ಲಕ್ಷ, ನೈಸರ್ಗಿಕವಾಗಿ ಹರಿಯೋ ನೀರಿಗೆ ಲಕ್ಷ-ಲಕ್ಷ. ಖರ್ಚಿನ ಲೆಕ್ಕ ನೋಡೋಕೆ ಪಾಸ್ ಬುಕ್ ಕೇಳದ್ರೆ ಸದಸ್ಯರೇ ಅಲಕ್ಷ್ಯ. ಸಿಎಂ, ಡಿಸಿ, ಸಿಇಓ, ಇಓ, ಎಸಿಬಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದ್ರೂ ಅವರ್ಯಾರು ಹತ್ತಿರವೂ ಸುಳಿಯಲಿಲ್ಲ. ಅಧ್ಯಕ್ಷೆ ಹಾಗೂ ಪಿಡಿಓ ಬಾಯ್ಬಿಟ್ರೆ ಸಿಗಲಿದೆ ಎಲ್ಲದಕ್ಕೂ ಉತ್ತರ. ಇದು ಕಾಫಿನಾಡಿನ ಗ್ರಾಮ ಪಂಚಾಯಿತಿ ಸದಸ್ಯರ ನೋವಾಗಿದೆ.

    ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಗ್ರಾಮ ಪಂಚಾಯಿತಿಗೆ ಸೇರಿದ ಹಣವನ್ನು ಲೂಟಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ ಹಾಗೂ ಪಿಡಿಓ ಮಹೇಶ್ ಹೆಸರಲ್ಲಿ ಬ್ಯಾಂಕ್‍ನಲ್ಲಿ ಜಂಟಿ ಖಾತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ಇಬ್ಬರೂ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನ ಸ್ವಾಹ ಮಾಡಿದ್ದಾರೆ.

    ಪಂಚಾಯಿತಿ ವ್ಯಾಪ್ತಿಯಲ್ಲಿ 300 ಲೈಟ್ ಪಾಯಿಂಟ್‍ಗಳಿವೆ. ಇದಕ್ಕಾಗಿ 2 ವರ್ಷದಲ್ಲಿ ಬಲ್ಬ್ ಗಾಗಿಯೇ 12 ಲಕ್ಷ ಬಿಲ್ ಮಾಡಿದ್ದಾರೆ. 25 ಸಾವಿರ ರೂಪಾಯಿ ಮೌಲ್ಯದ ಪೈಪ್ ತಂದು 1 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಗ್ರಾಮಪಂಚಾಯ್ತಿ ಸದಸ್ಯ ಮಂಜುನಾಥ್ ಈ ಹಿಂದಿನ ಪಿಡಿಓ ಮಹೇಶ್ ಹಾಗೂ ಹಾಲಿ ಅಧ್ಯಕ್ಷೆ ಸುಮಿತ ವಿರುದ್ಧ ಆರೋಪಿಸಿದ್ದಾರೆ.

    ಈ ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡವಿಲ್ಲ. ಇರೋ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. 2 ವರ್ಷದಿಂದ ತಿಂಗಳಿಗೆ 6.500 ರೂಪಾಯಿಯ ಬಾಡಿಗೆ ಕಟ್ಟಡದಲ್ಲಿದ್ದಾರೆ. ಪಂಚಾಯ್ತಿಗೆ ಒಂದು ಲಕ್ಷ ಅನುದಾನ ಬರುತ್ತದೆ. ಅದರಲ್ಲಿ 25 ಸಾವಿರ ಅಭಿವೃದ್ಧಿ ಪಾಲಾದ್ರೆ, ಉಳಿದ 75 ಸಾವಿರ ಅಧ್ಯಕ್ಷೆ ಹಾಗೂ ಪಿಡಿಓಗೆ ಸೇರುತ್ತದೆ. ಅಭಿವೃದ್ಧಿಯ ಸಭೆಗೆ ಗೈರಾಗುವ ಪಿಡಿಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ 2015 ರಿಂದ 2017ನೇ ಸಾಲಿನಲ್ಲಿ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ ಅಂತ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

    ಒಟ್ಟಾರೆ ಸರ್ಕಾರದಿಂದ ಬರುವ ಅನುದಾನದಲ್ಲಿ ಪಂಚಾಯ್ತಿ ಅಭಿವೃದ್ಧಿ ಮಾಡುವ ಬದಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮತ್ತು ಪಿಡಿಓ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಇನ್ನಾದರೂ ಡಿಸಿ ಹಣವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews