Tag: ಗ್ರಾಮ ಪಂಚಾಯಿತಿ

  • ವ್ಯರ್ಥವಾಗಿ ಹರಿಯುತ್ತಿದ್ದ ನೀರಿನ ಸದ್ಬಳಕೆ, ಎರಡು ಕೆರೆ ತುಂಬಿಸಿದ ಗ್ರಾಮ ಪಂಚಾಯಿತಿ

    ವ್ಯರ್ಥವಾಗಿ ಹರಿಯುತ್ತಿದ್ದ ನೀರಿನ ಸದ್ಬಳಕೆ, ಎರಡು ಕೆರೆ ತುಂಬಿಸಿದ ಗ್ರಾಮ ಪಂಚಾಯಿತಿ

    – ಸದಸ್ಯರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

    ಚಾಮರಾಜನಗರ: ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಕೇವಲ 4 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕೆರೆಗಳಿಗೆ ತುಂಬಿಸಿ ಕಾಡಂಚಿನ ಗ್ರಾಮ ಪಂಚಾಯತಿಯೊಂದು ಮಾದರಿಯಾಗಿದೆ.

    ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ಬಿಳಗಿರಿರಂಗನಬೆಟ್ಟದ ಪಕ್ಕದಲ್ಲೇ ಇದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೆರೆಗಳು ಹಲವಾರು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿವೆ. ಹೀಗಾಗಿ ಬಿಳಗಿರಿರಂಗನಬೆಟ್ಟದಿಂದ ಹರಿದು ಈ ಪಂಚಾಯತಿ ವ್ಯಾಪ್ತಿಯ ಮಸಕತ್ತಿ ಹಳ್ಳದ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರಿನಿಂದಲೇ ಕೆರೆಗಳನ್ನು ತುಂಬಿಸಲು ಗ್ರಾಮಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಸದಸ್ಯರು ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಸ್ಥಳೀಯವಾಗಿ ಒಂದು ಕ್ರಿಯಾ ಯೋಜನೆ ರೂಪಿಸಿ ಮಸಕತ್ತಿ ಹಳ್ಳದಲ್ಲಿ 12 ಹೆಚ್.ಪಿ. ಮೋಟರ್ ಅಳವಡಿಸಿ ಎರಡೂವರೆ ಕಿಲೋಮೀಟರ್ ಪೈಪ್ ಲೈನ್ ಹಾಕಿ ಸೂಲಿಕೆರೆಗೆ ನೀರು ಹರಿಸಿದ್ದಾರೆ. ಇನ್ನೊಂದೆಡೆ 7.5 ಹೆಚ್.ಪಿ ಮೋಟರ್ ಅಳವಡಿಸಿ 1 ಕಿಲೋ ಮೀಟರ್ ಪೈಪ್ ಲೈನ್ ಹಾಕಿ ಉಯಿಲಿನತ್ತ ಕೆರೆಗೆ ನೀರು ತುಂಬಿಸಿದ್ದಾರೆ.

    ಕೇವಲ ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡೂ ಕೆರೆ ತುಂಬಿಸಿದ್ದು, ಈ ಕೆರೆಗಳ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿದೆ. ಕೆರೆಗಳು ತುಂಬಿದ ಖುಷಿಗೆ ಗ್ರಾಮಸ್ಥರು ಗಂಗೆ ಪೂಜೆ ನೆರವೇರಿಸಿದ್ದಾರೆ. ಈ ಕೆರೆಗಳು ತುಂಬಿರುವುದರಿಂದ ದನಕರುಗಳಿಗೆ ಕುಡಿಯುವ ನೀರು ಲಭಿಸುವಂತಾಗಿದೆ. ಅಲ್ಲದೆ ಸುತ್ತಮುತ್ತ ಅಂತರ್ಜಲ ವೃದ್ಧಿಯಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ಉಳಿದ ಎಂಟು ಕೆರೆಗಳನ್ನು ತುಂಬಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ನೀರು ತುಂಬಿದ ಕೆರೆಗಳನ್ನು ಮೀನುಗಾರಿಕೆಗೆ ಟೆಂಡರ್ ನೀಡಬಹುದಾಗಿದೆ. ಇದರಿಂದಲೇ ಕೆರೆ ತುಂಬಿಸುವ ಯೋಜನೆಯ ವೆಚ್ಚವನ್ನು ಒಂದೇ ವರ್ಷದಲ್ಲಿ ಭರಿಸಿಕೊಳ್ಳಬಹುದು ಎಂಬುದು ಗ್ರಾಮಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ನಿರೀಕ್ಷೆಯಾಗಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಯಾವೆಲ್ಲಾ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದಾರೆ.

  • ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

    ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

    ಚಾಮರಾಜನಗರ: ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರನ್ನು ನೀವು ಯಾವ ಪಕ್ಷ ಎಂದು ಕೇಳಿದ ಜಿಲ್ಲಾ ಪಂಚಾಯಿತಿ ಸಿಇಒಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ನರೇಗಾದಡಿ ಜಲಶಕ್ತಿ ಯೋಜನೆಗಳ ಪರಿಶೀಲನೆಗೆ ಹನೂರು ತಾಲೂಕು ಹೂಗ್ಯಂ ಗ್ರಾಮಕ್ಕೆ ತೆರಳಿದ್ದ ಚಾಮರಾಜನಗರ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್‍ಗೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯೆಯನ್ನು ಸಿಇಒ ನೀವು ಯಾವ ಪಕ್ಷ ಎಂದು ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ನಾವು ಯಾವ ಪಕ್ಷವಾದರೇನು? ಕೆಲಸ ಮಾಡಲು ಬಂದಿದ್ದೀರಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.

    ಬಿಜೆಪಿಯಾದರೆ ಒಂದು ರೀತಿ, ಕಾಂಗ್ರೆಸ್ ಆದರೆ ಮತ್ತೊಂದು ರೀತಿ ಕೆಲಸ ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರಿಸಲಾಗದೆ ಸಿಇಒ ತಬ್ಬಿಬ್ಬಾಗಿದ್ದಾರೆ. ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    – ಗ್ರಾಮಸ್ಥರೇ ಕಚೇರಿಗೆ ಬೀಗ ಹಾಕಿದ್ರು

    ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿ ಬಾಗಿಲನ್ನೂ ಹಾಕದೆ ಬಾಗಿಲ ಬಳಿಯೇ ನಿದ್ದೆಗೆ ಜಾರಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಮಾರ್ಚ್ 7 ಭಾನುವಾರವಾದ್ದರಿಂದ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಅರುಣ್ ಹಾಗೂ ಅಟೆಂಡರ್ ಅವಿನಾಶ್ ಗ್ರಾಮ ಪಂಚಾಯಿತಿಯಲ್ಲೇ ಸಂಡೇ ಸ್ಪೆಷಲ್ ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಬಳಿಕ ಫುಲ್ ಟೈಟ್ ಆದ ಇಬ್ಬರೂ ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲನ್ನೂ ಹಾಕಿಲ್ಲ. ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಿದ್ದೆಗೆ ಜಾರಿದ್ದಾರೆ.

    ರಾತ್ರಿ 11 ಗಂಟೆಯಾದರೂ ಗ್ರಾಮ ಪಂಚಾಯಿತಿ ಬಾಗಿಲು ಹಾಕದ್ದನ್ನ ಗಮನಿಸಿದ ಸ್ಥಳೀಯರು, ಹೋಗಿ ನೋಡಿದ್ದಾರೆ. ಸಿಬ್ಬಂದಿ ನಶೆಯಲ್ಲಿ ತೇಲುತ್ತಿದ್ದು, ಗಾಢ ನಿದ್ದೆಗೆ ಜಾರಿದ್ದರು. ಇದನ್ನು ಕಂಡ ಸ್ಥಳಿಯರೇ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿಕೊಂಡು ಬಂದಿದ್ದಾರೆ. ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇಬ್ಬರನ್ನೂ ಕೆಲಸದಿಂದ ವಜಾಗಿಳಿಸುವಂತೆ ಆಗ್ರಹಿಸಿದ್ದಾರೆ.

  • ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು- ಗೆದ್ದ ಮಹಿಳೆಯ ಮಗನನ್ನೇ ಕೊಂದ ಪಾಪಿ

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು- ಗೆದ್ದ ಮಹಿಳೆಯ ಮಗನನ್ನೇ ಕೊಂದ ಪಾಪಿ

    ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷ ಹಿನ್ನೆಲೆ ಯುವಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಶರಣಬಸವ (28) ಕೊಲೆಯಾದ ಯುವಕ. ಚುನಾವಣೆಯಲ್ಲಿ ಸೋತ ಹಿನ್ನೆಲೆ ದ್ವೇಷದಿಂದ ಸೋತ ಜಗದೀಶ್ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದವರ ಮಗನನ್ನೇ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.

    ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಜಗದೀಶ್ ನಿಂದ ಶರಣಬಸವನ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಕಳೆದ ಚುನಾವಣೆಯಲ್ಲಿ ಶರಣಬಸವನ ತಾಯಿ ಹನುಮಂತಮ್ಮ ಗೆದ್ದಿದ್ದಳು, ಈ ಬಾರಿ ಚುನಾವಣೆಯಲ್ಲಿ ಸದಸ್ಯ ಸ್ಥಾನ ಬಿಟ್ಟು ಕೊಡಿ ಎಂದು ಜಗದೀಶ್ ಕುಟುಂಬದವರು ಕೇಳಿದ್ದರು. ಆದರೆ ಶರಣಬಸವ ಕುಟುಂಬ ಚುನಾವಣೆಯಿಂದ ಹಿಂದೆ ಸರಿದಿರಲಿಲ್ಲ. ಇದರಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ನಿನ್ನೆ ರಾತ್ರಿ ಮನೆಯ ಮುಂದೆ ಕುಳಿತಿರುವಾಗ ಹತ್ತು ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ.

    ಗಲಾಟೆಯಲ್ಲಿ ಶರಣಬಸವನಿಗೆ ಗಂಭೀರ ಗಾಯವಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಹನುಮಂತಮ್ಮ, ಅಮರೇಶ ಗಾಯಗೊಂಡಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಜಗದೀಶ್ ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

  • ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ವೈಷಮ್ಯ- ಸಿನಿಮಾ ಸ್ಟೈಲಲ್ಲಿ ಸ್ಕೆಚ್ ಹಾಕಿ ಕೊಲೆ

    ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ವೈಷಮ್ಯ- ಸಿನಿಮಾ ಸ್ಟೈಲಲ್ಲಿ ಸ್ಕೆಚ್ ಹಾಕಿ ಕೊಲೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೋಗೇನಹಳ್ಳಿ ಬಳಿ ಫೆಬ್ರವರಿ 6 ರಂದು ಲಕ್ಷ್ಮೀನರಸಿಂಹಪ್ಪರನ್ನ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ತನಿಖೆ ನಡೆಸಿದ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ, ಆರೋಪಿಗಳಾದ ರಾಜಾರೆಡ್ಡಿ, ಶ್ರೀರಾಮರೆಡ್ಡಿ, ನರಸಿಂಹರೆಡ್ಡಿಯನ್ನ ಬಂಧಿಸಿದ್ದು, ಮತ್ತೋರ್ವ ಆರೋಪಿ ಮಂಜುನಾಥ ನಾಪತ್ತೆಯಾಗಿದ್ದಾನೆ.

    ಕೊಲೆ ಮಾಡಿದ್ದು ಹೇಗೆ?
    ಕೊಲೆಯಾದ ಲಕ್ಷ್ಮೀನರಸಿಂಹಪ್ಪ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆರೋಪಿ ಶ್ರೀರಾಮರೆಡ್ಡಿ ಪತ್ನಿ ವಿರುದ್ಧ ಮತ್ತೋರ್ವ ಅಭ್ಯರ್ಥಿಯನ್ನ ಕಣಕ್ಕಿಳಿಸಿ ರಾಜಕೀಯ ಸೆಣಸಾಟ ನಡೆಸಿದ್ದ. ಆದರೂ ಚುನಾವಣೆಯಲ್ಲಿ ಶ್ರೀರಾಮರೆಡ್ಡಿ ಪತ್ನಿಯೇ ಜಯಶಾಲಿಯಾಗಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರ ದ್ವೇಷದಿಂದ ಇಬ್ಬರೂ ಕಿತ್ತಾಡಿದ್ದರು. ಈ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜೀ ಪಂಚಾಯಿತಿ ಮೂಲಕ ಬಗೆಹರಿದಿತ್ತು.

    ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಚು ರೂಪಿಸಿದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳ ಜೊತೆ ಸೇರಿ ಲಕ್ಷ್ಮೀನರಸಿಂಹಪ್ಪ ಕೊಲೆ ಮಾಡಿದ್ದಾನೆ. ಲಕ್ಷ್ಮೀನರಸಿಂಹಪ್ಪ ವಿರುದ್ದ ಒಳಗೊಳಗೆ ದ್ವೇಷ ಕಾರುತ್ತಿದ್ದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳಾದ ಮಂಜುನಾಥ ರೆಡ್ಡಿ, ರಾಜಾರೆಡ್ಡಿ ಹಾಗೂ ನರಸಿಂಹರೆಡ್ಡಿ ಜೊತೆ ಲಕ್ಷ್ಮೀನರಸಿಂಹಪ್ಪ ಕೊಲೆಗೆ ಸಿನಿಮಾ ಶೈಲಿಯಲ್ಲಿ ಪಕ್ಕಾ ಪ್ಲಾನ್ ಮಾಡಿದ್ದಾನೆ.

    ಡಾಬಾದಲ್ಲಿ ಮದ್ಯ ಸೇವಿಸುತ್ತಾ ಪ್ಲಾನ್ ಮಾಡಿದ ನಾಲ್ವರು, ಪ್ಲಾನ್ ನಂತೆ ಲಕ್ಷ್ಮೀನರಸಿಂಹಪ್ಪನಿಗೆ ರಾಜಾರೆಡ್ಡಿ ಕರೆ ಮಾಡಿ ವರದಯ್ಯಗಾರಿಪಲ್ಲಿಯಲ್ಲಿದ್ದ ಲಕ್ಷ್ಮೀನರಸಿಂಹಪ್ಪನನ್ನು ಆತನ ಬೈಕ್ ಮೂಲಕವೇ ಏನೂ ಅರಿಯದಂತೆ ಕರೆದುಕೊಂಡು ಬಂದಿದ್ದಾನೆ. ಮೊದಲೇ ಪ್ಲಾನ್ ಮಾಡಿದಂತೆ ಲಕ್ಷ್ಮೀನರಸಿಂಹಪ್ಪ ಬರೋ ದಾರಿ ಮಧ್ಯೆ ಮೋರಿ ಕೆಳಗೆ ಅವಿತು ಕೂತಿದ್ದ ಶ್ರೀರಾಮರೆಡ್ಡಿ ಹಾಗೂ ನರಸಿಂಹರೆಡ್ಡಿ, ಲಕ್ಷ್ಮೀನರಸಿಂಹಪ್ಪನ ಬೈಕ್ ಅಡ್ಡ ಹಾಕಿ ದಾಳಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಈ ವೇಳೆ ಲಕ್ಷ್ಮೀನರಸಿಂಹಪ್ಪನನ್ನು ಕರೆದುಕೊಂಡು ಬಂದ ರಾಜಾರೆಡ್ಡಿಯೇ ಆತನ ತಲೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀ ನರಸಿಂಹಪ್ಪ ತಮ್ಮ ವಿರುದ್ಧ ಬೇರೆ ಅಭ್ಯರ್ಥಿ ಕಣಕ್ಕಿಳಿಸಿದ ಪರಿಣಾಮ ಚುನಾವಣೆಯಲ್ಲಿ ಲಕ್ಷ ಲಕ್ಷ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂತು. ಅಲ್ಲದೆ ಸದಾ ಲಕ್ಷ್ಮೀನರಸಿಂಹಪ್ಪ ನಮಗೆ ರಾಜಕೀಯ ಎದುರಾಳಿಯಾಗಿ ನಮ್ಮ ವಿರುದ್ಧ ನಿಲ್ಲುತ್ತಾನೆ ಎಂದು ಲಕ್ಷ್ಮೀನರಸಿಂಹರೆಡ್ಡಿಯನ್ನ ಕೊಂದು ಹಾಕಿದ್ದಾರೆ. ಸದ್ಯ ಮೂವರು ಆರೋಪಿಗಳನ್ನ ಬಂಧಿಸಿರುವ ಗುಡಿಬಂಡೆ ಪೊಲೀಸರು ನಾಪತ್ತೆಯಾಗಿರೋ ಮಂಜುನಾಥ್‍ಗಾಗಿ ಬಲೆ ಬೀಸಿದ್ದಾರೆ.

  • ಚುನಾವಣೆ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ: ಸಿದ್ದಲಿಂಗ ಸ್ವಾಮೀಜಿ

    ಚುನಾವಣೆ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ: ಸಿದ್ದಲಿಂಗ ಸ್ವಾಮೀಜಿ

    ಮಡಿಕೇರಿ: ಇಂದಿನ ದಿನಗಳಲ್ಲಿ ಚುನಾವಣೆ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಹಣವಿಲ್ಲದೆ ಏನೂ ಇಲ್ಲ ಎನ್ನುವಂತಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ಬೇರು ಮಟ್ಟದಲ್ಲಿ ಭದ್ರಗೊಳ್ಳಬೇಕೆಂದು ಗ್ರಾಮಪಂಚಾಯಿತಿ ಚುನಾವಣೆ ಮಾಡಲಾಗುತ್ತದೆ. ಆದರೆ ಹಣವಿಲ್ಲದೆ ಗೆದ್ದವರು ಯಾರಿದ್ದಾರೆ? ಮತದಾರರೇ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಕಡಿವಾಣವೆಲ್ಲಿ ಎಂದು ಪ್ರಶ್ನಿಸಿದರು.

    ಜಿಲ್ಲಾ, ತಾಲೂಕು ಪಂಚಾಯಿತಿಗಿಂತ ಗ್ರಾಮ ಪಂಚಾಯಿತಿ ಚುನಾವಣೆಗೆ ಪೈಪೋಟಿ ಹೆಚ್ಚಿದೆ. ಈ ಬಾರಿ ಅನುದಾನ ಹೆಚ್ಚು ಬರುತದೆ ಎಂದು ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡುವವರಿಗಿಂತ ಗ್ರಾಮ ಪಂಚಾಯಿತಿ ಚುನಾವಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

    ಪ್ರಧಾನಿ ಮೋದಿಯವರ ಆಶಯದಂತೆ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಬರಬೇಕು. ಆಗ ರಾಷ್ಟ್ರದ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

  • ಸಮಸ್ಯೆ ಹೇಳಿದ ಗ್ರಾ.ಪಂ. ಸದಸ್ಯನನ್ನ ವೇದಿಕೆಯಿಂದ ಇಳಿಸಿದ ಸಿದ್ದರಾಮಯ್ಯ

    ಸಮಸ್ಯೆ ಹೇಳಿದ ಗ್ರಾ.ಪಂ. ಸದಸ್ಯನನ್ನ ವೇದಿಕೆಯಿಂದ ಇಳಿಸಿದ ಸಿದ್ದರಾಮಯ್ಯ

    ಬಾಗಲಕೋಟೆ: ಸಮಸ್ಯೆ ಹೇಳಿದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಮಾಜಿ ಸಿಎಂ, ಬದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬಲವಂತವಾಗಿ ವೇದಿಕೆಯಿಂದ ಕೆಳಗೆ ಇಳಿಸಿದ್ದಾರೆ.

    ಜಿಲ್ಲೆಯ ಬದಾಮಿ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಅಯೋಜಿಸಲಾಗಿತ್ತು. ಈ ಸಭೆಗೆ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದರು. ವೇದಿಕೆಯಲ್ಲೇ ಸಿದ್ದರಾಮಯ್ಯನವರ ಎದುರೇ ಕಿತ್ತಲಿ ಗ್ರಾಮದ ಗ್ರಾಪಂ ಸದಸ್ಯ ಸಂಗಣ್ಣ ಜಾಬಣ್ಣವರ್ ಅಸಮಧಾನ ಹೊರಹಾಕಿದರು.

    ಯಾರೂ ಸಹ ಹಳ್ಳಿ ಭಾಗದ ಕಡೆಗೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ದರಾಮಯ್ಯನವರು ಬಂದು ಪಿಡಿಒಗಳಿಗೆ ಎಚ್ಚರಿಕೆ ನೀಡಿದರೂ ಏನು ಬದಲಾವಣೆಯಾಗಿಲ್ಲ. ಹಳ್ಳಿಗಳ ಕಡೆಗೆ ಬಂದು ಜನ್ರು ಸಮಸ್ಯೆಯನ್ನ ಆಲಿಸಬೇಕು ಎಂದು ಭಾಷಣದದಲ್ಲಿ ಸಂಗಣ್ಣ ಜಾವಣ್ಣವರ್ ಹೇಳಿದರು.

    ಸಂಗಣ್ಣ ಜಾವಣ್ಣವರ್ ಸಮಸ್ಯೆ ಹೇಳುತ್ತಿದ್ದಂತೆ ಕೋಪಗೊಂಡ ಸಿದ್ದರಾಮಯ್ಯನವರು ಸದಸ್ಯನ ಬಳಿ ಬಂದು ಬಲವಂತವಾಗಿ ವೇದಿಕೆಯಿಂದ ಕೆಳಗೆ ಇಳಿಸಿದರು. ದಿಢೀರ್ ಘಟನೆಯಿಂದ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಯಿತು.

  • ಕೊಳಗೇರಿಯಲ್ಲಿದ್ದು ಪದವಿ ಪಡೆದಿದ್ದ ಮಮತಾ ಈಗ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯೆ

    ಕೊಳಗೇರಿಯಲ್ಲಿದ್ದು ಪದವಿ ಪಡೆದಿದ್ದ ಮಮತಾ ಈಗ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯೆ

    – 10 ವರ್ಷ ಬೀದಿ ಬದಿ, ಶೌಚ ಕೊಠಡಿ, ಹಟ್ಟಿಯಲ್ಲೇ ಜೀವನ

    ಮಂಗಳೂರು: ಕಷ್ಟ, ನೋವುಗಳನ್ನು ದಿಟ್ಟವಾಗಿ ಎದುರಿಸಿ ಮೇಡಿಕಲ್ ಬಿಎಸ್‍ಸಿ ಪಡೆದು ತನ್ನ ಕರ್ಮಭೂಮಿಯಲ್ಲೇ ರಾಜಕೀಯ ಪ್ರವೇಶಿಸಿಸಿದ್ದ ಮಮತಾ ಇದೀಗ ಪಾವೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

    ಪಾವೂರಿನ ಜನತೆ ತಮ್ಮ ಕಣ್ಣೆದುರೇ ಕಷ್ಟ ಪಟ್ಟು ಬೆಳೆದ ಮಮತಾಳನ್ನು ಇಂದು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆಯನ್ನಾಗಿ ಆರಿಸಿದ್ದಾರೆ. ಕಳೆದ 3-4 ಚುನಾವಣೆಗಳಲ್ಲಿ ಈ ವಾರ್ಡ್‍ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಗಳೇ ಜಯಗಳಿಸುತ್ತಿದ್ದರು. ಇದೇ ಮೊದಲ ಬಾರಿ ಬಿಜೆಪಿ ಬೆಂಬಲಿತ ಮಮತಾ ಅವರನ್ನು ತಮ್ಮ ಪ್ರತಿನಿಧಿಯಾಗಿ ಗ್ರಾ.ಪಂ.ಗೆ ಪಾವೂರಿನ ಜನತೆ ಮಹುಮತ ನೀಡಿ ಆಯ್ಕೆ ಮಾಡಿದ್ದಾರೆ.

    ಉಡುಪಿ ಮೂಲದವರಾದ ಇವರ ತಂದೆ ಕೃಷ್ಣಪ್ಪ, ತಾಯಿ ಪ್ರೇಮ ವಲಸೆ ಕಾರ್ಮಿಕರಾಗಿ ಊರುರು ಸುತ್ತಿ ಬೀದಿ ಬದಿ ಡೇರೆ ಹಾಕಿ ಜೀವನ ನಡೆಸುತ್ತಿದ್ದರು. 1995ರ ಸಮಯ ಏಕಾಏಕಿ ಕಾಣೆಯಾದ ತಂದೆಯ ನೆನಪಲ್ಲೇ ತಾಯಿ ಪ್ರೇಮ ಹಾಗೂ ಅವರ ಮೂವರು ಮಕ್ಕಳಾದ ಶಿವ, ಬೋಜ ಮತ್ತು ಮಮತಾ ಉಳ್ಳಾಲ ಸಮೀಪದ ಪಜೀರು ಹಾಗೂ ಪಾವೂರು, ಇನೋಳಿಯ ರಸ್ತೆ ಬದಿ, ಶೌಚ ಕೊಠಡಿ, ದನದ ಹಟ್ಟಿಯಲ್ಲಿ ವಾಸವಾಗಿದ್ದರು. ಶಿವ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದಿದ್ದರೆ, ಬೋಜ ಹಾಗೂ ಮಮತಾ ಅವರನ್ನು ಸ್ಥಳೀಯ ಶಿಕ್ಷಕ ಮಧು ಮೇಷ್ಟು ತಮ್ಮದೇ ಮುತುವರ್ಜಿಯಲ್ಲಿ ಮಲಾರ್ ಪದವಿ ಶಾಲೆಗೆ ಸೇರಿಸಿದ್ದರು.

    ಡೇರೆಯಲ್ಲೇ ವಾಸ
    ಪತಿ ನಾಪತ್ತೆಯಾದ ದುಃಖದ ನಡುವೆಯೂ ತಾಯಿ ಪ್ರೇಮ ಸ್ಥಳೀಯ ಕೋರೆ, ಮನೆ ಮನೆ ತೆರಳಿ ಕಾರ್ಮಿಕರಾಗಿ ದುಡಿದು ವಿದ್ಯಾಭ್ಯಾಸ ನಡೆಸುವ ಮಕ್ಕಳ ಜತೆ ಡೇರೆಯಲ್ಲೇ ದಿನ ಕಳೆದಿದ್ದರು. 2006ರಿಂದ ಮಮತಾ ಅವರು ಮಚ್ಚಿನ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ದೇರಳಕಟ್ಟೆ ಮೊರಾರ್ಜಿ ದೇಸಾಯಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿದ್ದರು. ನಂತರ ಮಂಗಳೂರಿನ ಕೊಲಾಸೋ ವಿದ್ಯಾಸಂಸ್ಥೆಯಲ್ಲಿ ಲ್ಯಾಬ್ ಟೆಕ್ಟಿಷಿನ್ ಡಿಪ್ಲಮಾ ಪದವಿ ಪೂರೈಸಿದ್ದರು.

    ಕೊಳಗೇರಿಯಲ್ಲಿದ್ದು ಮೆಡಿಕಲ್ ಬಿಎಸ್‍ಸಿ ಪದವಿ
    ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ ಸ್ಥಳೀಯ ಪತ್ರಕರ್ತರ ಹಾಗೂ ದಾನಿಗಳ ಸಹಕಾರದಿಂದ ಬೆಂಗಳೂರಿಗೆ ಆಗಮಿಸಿದ ಮಮತಾ 4 ವರ್ಷಗಳ ಕಾಲ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿ ಬಿಎಸ್‍ಸಿ ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಶಿಕ್ಷಣ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಬೆಂಗಳೂರಿನ ಆನೆಪಾಳ್ಯ ಎಂಬ ಕೊಳೆಗೇರಿ ಪ್ರದೇಶದಲ್ಲೇ ವಾಸಿಸುತ್ತಲೇ ಮಮತಾ ಅವರು ಮೆಡಿಕಲ್ ಬಿಎಸ್‍ಸಿ ಪದವಿಧರೆಯಾಗಿದ್ದಾರೆ ಎಂಬುದೇ ವಿಶೇಷ.

    ನನ್ನ ಜೀವನ ನನಗೆ ಬದುಕುವ ಪಾಠ ಕಲಿಸಿದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆ, ಬಳಕೆಯಾಗದಿರುವುದರಿಂದಲೇ ಹಳ್ಳಿಯ ಜನರು ಬಡತನದಲ್ಲೇ ಕಳೆಯುವಂತಾಗಿದೆ. ನನಗೆ ನನ್ನ ಜೀವನ ರೂಪಿಸುವಂತಹ ಶಿಕ್ಷಣ ದೊರಕಿದ್ದರೇನಂತೆ ಗ್ರಾಮೀಣ ಜನತೆ ಇನ್ನೂ ತಮ್ಮ ಸ್ಪಷ್ಟ ಜೀವನ ರೂಪಿಸುವಂತಹ ವ್ಯವಸ್ಥೆಯಾಗಿಲ್ಲ. ಈ ನಿಟ್ಟಿನಲ್ಲಿ ನಾನು ಓಡಾಡಿ ಬೆಳೆದ ಹಳ್ಳಿಗೆ ಮತ್ತೆ ಹಿಂತಿರುಗುವ ಯೋಜನೆ ಮಾಡಿದೆ. ಪ್ರಸ್ತುತ ನನ್ನ ಯೋಜನೆಗೆ ರಾಜಕೀಯ ಬೆಂಬಲವೂ ಸಿಕ್ಕಿದೆ. ನಾನು ನಡೆದು ಬಂದ ಅಲೆಮಾರಿ ಜೀವನ, ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಸೆಯೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ ಎಂದು ಪಾವೂರು ಗ್ರಾ.ಪಂ.ನ ನೂತನ ಸದಸ್ಯೆ ಮಮತಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

  • ಗ್ರಾಮ ಪಂಚಾಯಿತಿ ಚುನಾವಣೆ ಕೆಲಸ ಮಾಡೋ ಸಿಬ್ಬಂದಿಗಿಲ್ಲ ಊಟ- ತಟ್ಟೆ ಹಿಡಿದು ಪ್ರತಿಭಟನೆ

    ಗ್ರಾಮ ಪಂಚಾಯಿತಿ ಚುನಾವಣೆ ಕೆಲಸ ಮಾಡೋ ಸಿಬ್ಬಂದಿಗಿಲ್ಲ ಊಟ- ತಟ್ಟೆ ಹಿಡಿದು ಪ್ರತಿಭಟನೆ

    ಹಾವೇರಿ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಬಂದ ಸಿಬ್ಬಂದಿಗೆ ಊಟ, ತಿಂಡಿ ಇಲ್ಲದೆ ಪರದಾಡಿದ್ದಾರೆ. ಹೀಗಾಗಿ ಆಕ್ರೋಶಗೊಂಡು ತಟ್ಟೆ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

    ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಜೆಎಂಜೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಭಾನುವಾರ ಶಿಗ್ಗಾಂವಿ, ಬ್ಯಾಡಗಿ, ಸವಣೂರು ಮತ್ತು ಹಾನಗಲ್ ತಾಲೂಕಿನ 105 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.

    ಮತ ಪೆಟ್ಟಿಗೆ ಒಯ್ಯಲು ಸೇರಿದಂತೆ ವಿವಿಧ ರೀತಿಯ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಬಂದಿರೋ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿಯೇ ಸಿಬ್ಬಂದಿಯನ್ನು ಪೊಲೀಸ್ ಅಧಿಕಾರಿಗಳು ಮನವೊಲಿಸಿದ್ದಾರೆ.

  • ರಸ್ತೆಗಾಗಿ 5 ಚುನಾವಣೆ ಬಹಿಷ್ಕಾರ- ಈ ಬಾರಿಯೂ ಮತದಾನ ಮಾಡದ ಗ್ರಾಮಸ್ಥರು

    ರಸ್ತೆಗಾಗಿ 5 ಚುನಾವಣೆ ಬಹಿಷ್ಕಾರ- ಈ ಬಾರಿಯೂ ಮತದಾನ ಮಾಡದ ಗ್ರಾಮಸ್ಥರು

    ಕೋಲಾರ: ರಸ್ತೆಗಾಗಿ ಗ್ರಾಮ ಪಂಚಾಯಿತಿ ಮತದಾನದಿಂದ ದೂರ ಉಳಿಯುವ ಮೂಲಕ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ಗ್ರಾಮಸ್ಥರು 5 ಚುನಾವಣೆ ಬಹಿಷ್ಕರಿಸಿದಂತಾಗಿದೆ.

    ಜಿಲ್ಲೆಯ ಮಾಲೂರು ತಾಲೂಕಿನ ಮತಗಟ್ಟೆ ಸಂಖ್ಯೆ 17 ಕಂಬಿಪುರ ಗ್ರಾಮಸ್ಥರು ಮತದಾನದಿಂದ ದೂರ ಉಳಿಯುವ ಮೂಲಕ ಬಹಿಷ್ಕಾರ ಹಾಕಿದರು. ಬೆಳಗ್ಗೆ 9 ಗಂಟೆಯಾದರೂ ಮತ ಕೇಂದ್ರದತ್ತ ಸುಳಿಯದ ಮತದಾರರು, ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದರ ಹಿನ್ನೆಲೆಯಲ್ಲಿ ಮತಗಟ್ಟೆ ಖಾಲಿ ಖಾಲಿಯಾಗಿತ್ತು. ಇನ್ನೊಂದೆಡೆ ಮತದಾರರಿಗಾಗಿ ಚುನಾವಣಾ ಸಿಬ್ಬಂದಿ ಕಾದು ಕುಳಿತಿದ್ದರು.

    ಸ್ಥಳಕ್ಕೆ ಮಾಲೂರು ಪೊಲೀಸರು ಹಾಗೂ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಕಾರ್ಯ ನಡೆಸಿದರು. ಆದರೂ ಪಟ್ಟು ಬಿಡದ ಗ್ರಾಮಸ್ಥರು ಮತ ಬಹಿಷ್ಕಾರ ಮಾಡಿದ್ದಾರೆ. ಈ ಮೂಲಕ ಗ್ರಾಮಸ್ಥರು 5 ಚುನಾವಣೆಗಳನ್ನು ಬಹಿಷ್ಕರಿಸಿದಂತಾಗಿದೆ. ಈ ಹಿಂದೆ ವಿಧಾನಸಭೆ, ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು. ಗ್ರಾಮಕ್ಕೆ ಸಂಚರಿಸಬೇಕಾದರೆ 20 ಕಿ.ಮೀ.ಸುತ್ತಿಕೊಂಡು ಬರಬೇಕು. ಹೀಗಾಗಿ ಬೇರೆ ರಸ್ತೆ ಮಾಡಿಸಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.