Tag: ಗ್ರಾಮ ಪಂಚಾಯಿತಿ ಅಧ್ಯಕ್ಷೆ

  • ಮನೆ ಸೌಂದರ್ಯಕ್ಕೆ ಅಡ್ಡಿ- ಸರ್ಕಾರಿ ಬಸ್ ನಿಲ್ದಾಣ ಧ್ವಂಸ ಮಾಡಿದ ಗ್ರಾ.ಪಂ.ಅಧ್ಯಕ್ಷೆ

    ಮನೆ ಸೌಂದರ್ಯಕ್ಕೆ ಅಡ್ಡಿ- ಸರ್ಕಾರಿ ಬಸ್ ನಿಲ್ದಾಣ ಧ್ವಂಸ ಮಾಡಿದ ಗ್ರಾ.ಪಂ.ಅಧ್ಯಕ್ಷೆ

    ಚಿಕ್ಕಮಗಳೂರು: ರಸ್ತೆ ಪಕ್ಕದಲ್ಲಿರುವ ಮನೆ ಕಾಣವುದಿಲ್ಲ. ಬಸ್ ನಿಲ್ದಾಣ ಮನೆಯ ಸೌಂದರ್ಯಕ್ಕೆ ಅಡ್ಡಿಯಾಗುತ್ತೆಂದು ಗ್ರಾಮೀಣ ಭಾಗದ ಸರ್ಕಾರಿ ಬಸ್ ನಿಲ್ದಾಣವನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.

    ಎಸ್.ಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ಈ ನಡೆದಿದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ದ್ರಾಕ್ಷಾಯಣಮ್ಮ ಹಾಗೂ ಅವರ ಮಕ್ಕಳು ಸರ್ಕಾರಿ ಬಸ್ ನಿಲ್ದಾಣವನ್ನ ಧ್ವಂಸ ಮಾಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರ ಸ್ಥಾನವನ್ನ ದುರುಪಯೋಗಪಡಿಸಿಕೊಂಡು ಬಸ್ ನಿಲ್ದಾಣವನ್ನೇ ಧ್ವಂಸ ಮಾಡಿದ್ದಾರೆಂದು ಸ್ಥಳೀಯರು ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಮ್ಮ ಮನೆಗೆ ದಾರಿ ಇರಲಿಲ್ಲ. ಸಾಲದಕ್ಕೆ ರಸ್ತೆ ಪಕ್ಕದ ಮನೆಗೆ ಬಸ್ ನಿಲ್ದಾಣ ಅಡ್ಡವಾಗಿತ್ತು. ಇದರಿಂದ ಮನೆಯೂ ಕಾಣಿಸುತ್ತಿರಲಿಲ್ಲ. ಮನೆಯ ಸೌಂದರ್ಯವೂ ಕಾಣುತ್ತಿರಲಿಲ್ಲ ಎಂದು ಅಧ್ಯಕ್ಷೆ ದ್ರಾಕ್ಷಾಯಣಮ್ಮ ಹಾಗೂ ಅವರ ಮಕ್ಕಳಾದ ಪ್ರಭಾಕರ್, ಜಗದೀಶ್ ಜೆಸಿಬಿ ಮತ್ತು ಟ್ರ್ಯಾಕ್ಟರ್ ತಂದು ಬಸ್ ನಿಲ್ದಾಣವನ್ನ ನೆಲಮಗೊಳಿಸಿದ್ದಾರೆ.

    ಇದೀಗ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿರುವ ಸಿದ್ದಾಪುರ ಜನ ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲದೇ ದ್ರಾಕ್ಷಾಯಣಮ್ಮ ಸದಸ್ಯತ್ವನ್ನ ರದ್ದು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಜೊತೆಗೆ ಬಸ್ ನಿಲ್ದಾಣ ತೆರವುಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದಾರೆ.

  • ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

    ಬೇರೆ ಕಡೆ ಅನುದಾನ ನೀಡಲು ಮುಂದಾದ ಅಧಿಕಾರಿ – ಗ್ರಾ.ಪಂ ಅಧ್ಯಕ್ಷೆಯಿಂದ ತರಾಟೆ

    ಚಿಕ್ಕೋಡಿ/ಬೆಳಗಾವಿ: ದಲಿತರಿಗೆ ಬಂದಿದ್ದ ಅನುದಾನವನ್ನ ಬೇರೆ ಕಡೆ ನೀಡಲು ಬಂದಿದ್ದ ಅಧಿಕಾರಿಯನ್ನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ.

    ಎಲಿಮುನ್ನೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ತಿಪ್ಪಾಗೋಳ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹುಕ್ಕೇರಿ ತಾಲೂಕು ಪಂಚಾಯಿತಿ ಕಿರಿಯ ಅಭಿಯಂತರಾದ ಆರ್.ಬಿ.ಶ್ರೀಖಂಡೆ ಎಲಿಮುನ್ನೋಳಿ ಗ್ರಾಮದ ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನ ಬೇರೆ ಕಡೆ ವರ್ಗಾವಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ವಿಚಾರಿಸಲು ತಾಲೂಕು ಪಂಚಾಯ್ತಿ ಕಚೇರಿಗೆ ಬಂದಿದ್ದರು. ಈ ವೇಳೆ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಅಭಿಯಂತರರ ವಿರುದ್ಧ ಗರಂ ಆದ ಅಧ್ಯಕ್ಷರು ಶ್ರೀಖಂಡೆರನ್ನು ತರಾಟೆಗೆ ತೆಗೆದುಕೊಂಡರು.

    ಇದನ್ನೆಲ್ಲಾ ಗಮನಿಸಿ ತೆಪ್ಪಗಾದ ಶ್ರೀಖಂಡೆ, ನೀವು ಎಲ್ಲಿ ಹೇಳುತ್ತೀರೋ ಅಲ್ಲಿಯೇ ಬೋರ್ ವೆಲ್ ಕೊರೆಸಿ ಕೊಡುತ್ತೇನೆ ಹೋಗಿ ಎಂದು ಸಮಾಧಾನ ಮಾಡಲು ಮುಂದಾಗಿದ್ದರು. ಅಧ್ಯಕ್ಷರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತರ ಮೇಲೂ ದರ್ಪ ತೋರಿದ್ದಾರೆ. ಮುಂದೆ ಬನ್ನಿ ಇನ್ನೂ ಚೆನ್ನಾಗಿ ಬರುತ್ತೆ ಎಂದು ಉಡಾಫೆಯಾಗಿ ಮಾತಾಡಿದ್ದಾರೆ. ಆಗ ಅಲ್ಲಿದ್ದ ಪತ್ರಕರ್ತರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ತೆಪ್ಪಗಾಗಿ ಕುಳಿತ ಅಧಿಕಾರಿ ಇರುಸು ಮುರಿಸುಗೊಂಡು ತಮ್ಮ ಕಾರ್ಯವನ್ನ ಆರಂಭಿಸಿದರು.