Tag: ಗ್ರಾಮ ಪಂಚಾಯತ್

  • ಗ್ರಾಮ ಪಂಚಾಯತಿ ಚುನಾವಣೆ – ಪತಿ ವಿರುದ್ಧ ನಿಂತ ಪತ್ನಿ

    ಗ್ರಾಮ ಪಂಚಾಯತಿ ಚುನಾವಣೆ – ಪತಿ ವಿರುದ್ಧ ನಿಂತ ಪತ್ನಿ

    ಮಡಿಕೇರಿ: ಗ್ರಾಮ ಪಂಚಾಯತ್‌ ಚುನಾವಣಾ ಕಣ ರಂಗೇರುತ್ತಿದ್ದು ಕೊಡಗಿನಲ್ಲಿ ಗಂಡನ ವಿರುದ್ಧವಾಗಿ ಹೆಂಡತಿ ಸ್ಪರ್ಧಿಸುತ್ತಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್ ಆದ ಕಂಬಿಬಾಣೆಯಲ್ಲಿ ಕಿಶೋರ್ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ.

    22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ ಮನೆಯಲ್ಲಿ ಅಷ್ಟೇ ನಾವು ಪತಿ ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಬೇಕಾಗಿದೆಯೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

    ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಾಗಿದೆ.

  • ಗ್ರಾ.ಪಂ ಚುನಾವಣೆಗೆ ಪತ್ನಿ ಅವಿರೋಧ ಆಯ್ಕೆಯಾದ ಮರುದಿನವೇ ಪತಿ ನೇಣಿಗೆ ಶರಣು!

    ಗ್ರಾ.ಪಂ ಚುನಾವಣೆಗೆ ಪತ್ನಿ ಅವಿರೋಧ ಆಯ್ಕೆಯಾದ ಮರುದಿನವೇ ಪತಿ ನೇಣಿಗೆ ಶರಣು!

    ಚಾಮರಾಜನಗರ: ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈ ಮಧ್ಯೆ ಕೆಲವೆಡೆಗಳಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿದೆ. ಇದೀಗ ಪತ್ನಿ ಗ್ರಾಮ ಪಂಚಾಯತ್ ಚುನಾವಣೆಗೆ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಿಂಗರಾಜು(27) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಪತ್ನಿ ಅವಿರೋಧವಾಗಿ ಆಯ್ಕೆಯಾದ ಮರುದಿನವೇ ನೇಣಿಗೆ ಶರಣಾಗಿದ್ದಾರೆ. ಚಾಮರಾಜನಗರ ತಾಲೂಕಿನ ದೊಡ್ಡರಾಯ ಪೇಟೆಯಲ್ಲಿ ಈ ಘಟನೆ ನಡೆದಿದೆ.

    ಪತ್ನಿ ಗಗನ ಗ್ರಾ.ಪಂ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಯ್ಕೆಯಾದ ಮರುದಿನವೇ ಪತಿ ನೇಣಿಗೆ ಶರಣಾಗಿದ್ದಾರೆ. ನಿನ್ನೆ ರಾತ್ರಿ ಸ್ನೇಹಿತರಿಗೆ ಪಾರ್ಟಿ ಕೊಟ್ಟು ನಿಂಗರಾಜು ಮನೆಗೆ ಬಂದಿದ್ದಾರೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮದುವೆಯಾಗಿ 4 ವರ್ಷವಾದರೂ ಈ ದಂಪತೊಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ಮಕ್ಕಳಾಗಲಿಲ್ಲ ಎಂದು ಮನನೊಂದು ನೇಣಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ತಾಯಿ ಮಹದೇವಮ್ಮ, ಪತ್ನಿ ಗಗನ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಧ ವ್ಯಕ್ತಿಯಿಂದ ನಾಮಪತ್ರ – ಉತ್ಸಾಹಕ್ಕೆ ಪಕ್ಷಗಳ ಬೆಂಬಲ

    ಅಂಧ ವ್ಯಕ್ತಿಯಿಂದ ನಾಮಪತ್ರ – ಉತ್ಸಾಹಕ್ಕೆ ಪಕ್ಷಗಳ ಬೆಂಬಲ

    ಕಾರವಾರ: ಶಿರಸಿ ತಾಲೂಕಿನ ಕಾನಗೋಡು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅಂಧ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಕೆ ಮಾಡಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

    ಕಾನಗೋಡು ಗ್ರಾಮಪಂಚಾಯ್ತಿಯ ಬಿಸಲಕೊಪ್ಪದ ರಾಘವೇಂದ್ರ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರ ಈ ಉತ್ಸಾಹಕ್ಕೆ ಸ್ಥಳೀಯವಾಗಿ ಬಿಜೆಪಿ ಪಕ್ಷ ಸಹ ಬೆಂಬಲ ನೀಡಿದೆ.

    ಇವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ 500 ಕ್ಕೂ ಹೆಚ್ಚು ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಸ್ಪರ್ಧಿಸಿದ್ದ ಇವರು ಕೇವಲ ಒಂದು ಮತದಲ್ಲಿ ಸೋಲು ಕಂಡಿದ್ದರು. ಆದರೆ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿರುವ ಇವರು ಮನೆ ಮನೆಗೆ ತೆರಳಿ ಮತಪ್ರಚಾರದಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಇವರು ನಾನು ಅಂಧನಾಗಿದ್ದರೂ ಸ್ವಂತ ಕಾಲಮೇಲೆ ನಿಂತು ಬೀದಿ ನಾಟಕಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜೀವನ ಕಟ್ಟಿಕೊಂಡಿದ್ದೇನೆ. ಅಂಧನೆಂಬ ನೋವು ನನಗಿಲ್ಲ. ಸಮಾಜಸೇವೆ ಮಾಡುವ ಹಂಬಲ ನನಗಿದೆ. ಅಂಧರೂ ಸಭಲರು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ನಮ್ಮಿಂದನೂ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸುವುದೇ ನನ್ನ ಉದ್ದೇಶ. ಸಮಾಜದಲ್ಲಿ ಅಂಗ ನೂನ್ಯತೆಯಿಂದ ತಿರಸ್ಕಾರಕ್ಕೊಳಗಾದವರಿಗೆ ಸಹಾಯ ಮಾಡುವ ಹಂಬಲ ನನಗಿದೆ ಎಂದರು.

    ಈಗಾಗಲೇ ಇಡೀ ಗ್ರಾಮದಲ್ಲಿ ಇವರಿಗೆ ಜನರು ಬೆಂಬಲ ನೀಡುತ್ತಿದ್ದು ಗೆಲ್ಲಿಸುವ ಭರವಸೆ ಮೂಡಿದೆ. ಜೊತೆಗೆ ಹಲವಾರು ಆಕಾಂಕ್ಷಿಗಳಿರುವ ಈ ಕ್ಷೇತ್ರದಲ್ಲಿ ಇವರು ನಿಂತಿರುವುದಕ್ಕೆ ಬೆಂಬಲ ನೀಡಿ ಹಲವರು ನಾಮಪತ್ರ ಸಲ್ಲಿಸದೆ ಬೆಂಬಲ ನೀಡಿದ್ದು ಇವರಿಗೆ ಆನೆ ಬಲ ಬಂದಂತಾಗಿದೆ.

  • ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಹಾಕಿದ್ದ 44 ಮಂದಿ ಮೇಲೆ ಕೇಸ್

    ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಹಾಕಿದ್ದ 44 ಮಂದಿ ಮೇಲೆ ಕೇಸ್

    ಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಕ್ರಿಯೆಗಳು ಜರುಗುತ್ತಿದ್ದು, ಈ ಮೂಲಕ ಲೋಕಲ್ ವಾರ್ ಗರಿಗೆದರಿದೆ. ಈ ಮಧ್ಯೆ ಮಂಡ್ಯದಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ ಅಭ್ಯರ್ಥಿ ಸ್ಥಾನವನ್ನು ಹರಾಜು ಹಾಕಲಾಗಿದ್ದು, ಇದೀಗ 44 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಹೌದು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ಕುರಿ-ಕೋಳಿಗಳ ರೀತಿ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ಹರಾಜು ಹಾಕಲಾಗಿತ್ತು. ಲಕ್ಷಾಂತ ರೂಪಾಯಿಗಳಿಗೆ ಗ್ರಾಮ ಪಂಚಾಯ್ತಿ ಸ್ಥಾನವನ್ನು ಲಾಳನಕೆರೆ ಗ್ರಾಮಸ್ಥರು ಮನೆಯೊಂದರಲ್ಲಿ ಬಿಡ್ ಮೂಲಕ ಹರಾಜು ಹಾಕಿದ್ದರು.

    ಗ್ರಾಮದ ಅಭಿವೃದ್ಧಿ, ದೇವಸ್ಥಾನದ ನಿರ್ಮಾಣದ ಹೆಸರಿನಲ್ಲಿ ಮೂರು ಸ್ಥಾನಗಳಿಗೆ ಒಟ್ಟು 17.40 ಲಕ್ಷ ರೂ.ಗೆ ಈ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

    ಸದ್ಯ ಬಿಂಡಿಗನವಿಲೆ ಠಾಣೆಯಲ್ಲಿ 44 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

  • ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಮನೆ ಮುಂದೆ ಧರಣಿ ಎಚ್ಚರಿಕೆ

    ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಮನೆ ಮುಂದೆ ಧರಣಿ ಎಚ್ಚರಿಕೆ

    ಚಿಕ್ಕಮಗಳೂರು:ಗ್ರಾಮ ಪಂಚಾಯತ್‌ ಚುನಾವಣೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಅಂತವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆನ್‌ಲೈನ್‌ ಸೇರಿದಂತೆ ಯಾವುದೇ ವಿಧದಲ್ಲೂ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದು ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ಸರ್ವಜನಿಕರು ಸೂಚಿಸಿದ್ದಾರೆ.

    ಶತಮಾನಗಳ ಬದುಕೆ ಬೀದಿಗೆ ಬೀಳುವಾಗ ಚುನಾವಣೆ ಬೇಕೇ ಎಂಬ ಪ್ರಶ್ನೆ ಮಲೆನಾಡಿಗರಲ್ಲಿ ಮೂಡಿದೆ. ಈಗಾಗಲೇ ಮಲೆನಾಡಿಗರ ಬದುಕಿನ ಮೇಲೆ ಹುಲಿ ಯೋಜನೆ, ಬಫರ್ ಝೋನ್‌, ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ತೂಗುಗತ್ತಿ ತೂಗುತ್ತಿದೆ. ಸರ್ಕಾರದ ಈ ಯೋಜನೆಗಳಿಂದ ಜಿಲ್ಲೆಯ ಮಲೆನಾಡು ಭಾಗದ ನೂರಾರು ಗ್ರಾಮಗಳೇ ಕಣ್ಮರೆಯಾಗಲಿವೆ. ಈ ಕಾರಣಕ್ಕೆ ಮಲೆನಾಡಿಗರು ಚುನಾವಣಾ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.

    ಖಾಂಡ್ಯ ಹೋಬಳಿಯ ಕಡವಂತಿ, ಹುಯಿಗೆರೆ, ದೇವದಾನ ಹಾಗೂ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಲ್ಲಲ್ಲಿ ಬ್ಯಾನರ್ ಕಟ್ಟಿದ್ದು, ಚುನಾವಣೆಗಿಂತ ಬದುಕು ದೊಡ್ಡದ್ದಾಗಿರುವ ಕಾರಣ ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಜೋರಾಗಿದೆ.

    ಈಗಾಗಲೇ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತೀ ಭೂತ್ ಗೆ ಒಂದೊಂದು ಬ್ಯಾನರ್ ಕಟ್ಟಲು ಮುಂದಾಗಿದ್ದಾರೆ. ಯಾರೂ ನಾಮಪತ್ರ ಸಲ್ಲಿಸದೇ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು ಮುಂದಾಗಿದ್ದಾರೆ. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆ. ಜೀವನವನ್ನ ಬಲಿ ಕೊಡುವ ಬದಲು ಚುನಾವಣೆ ಬಹಿಷ್ಕಾರ ಮಾಡಿ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ.

    ಐದು ವರ್ಷಗಳ ಅವಧಿಯ ಸದಸತ್ವಕ್ಕೆ ಬದುಕನ್ನ ಬಲಿ ಕೊಡುವ ಬದಲು ಸರ್ಕಾರಕ್ಕೆ ಎಚ್ಚರಿಕೆ ನೀಡೋಣ ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಮುಂದಾಗಿದೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಮತದಾರರು ಮತದಾನ ಮಾಡದೆ ಚುನಾವಣೆ ಬಹಿಷ್ಕಾರಕ್ಕೆ ಬೆಂಬಲ ನೀಡಬೇಕೆಂದು ಖಾಂಡ್ಯ ಹೋಬಳಿ ಹಿತರಕ್ಷಣಾ ಸಮಿತಿ ಮತದಾರರಲ್ಲಿ ಮನವಿ ಮಾಡಿದೆ.

  • ಹೊರ ಜಿಲ್ಲೆ, ಊರಿನಿಂದ ಬಂದ್ರೆ ಕಡ್ಡಾಯ ಕ್ವಾರಂಟೈನ್- ಗ್ರಾಮ ಪಂಚಾಯತ್‍ನಿಂದ ಊಟದ ವ್ಯವಸ್ಥೆ

    ಹೊರ ಜಿಲ್ಲೆ, ಊರಿನಿಂದ ಬಂದ್ರೆ ಕಡ್ಡಾಯ ಕ್ವಾರಂಟೈನ್- ಗ್ರಾಮ ಪಂಚಾಯತ್‍ನಿಂದ ಊಟದ ವ್ಯವಸ್ಥೆ

    ಚಾಮರಾಜನಗರ: ಜಿಲ್ಲೆಯ ಒಂದು ಗ್ರಾಮಕ್ಕೆ ಅಕ್ಕಪಕ್ಕದ ಹಳ್ಳಿಯವರು ಸಹ ಬರುವಂತಿಲ್ಲ. ಒಂದು ವೇಳೆ ಬಂದ್ರೆ ಗ್ರಾಮದ ಯಜಮಾನರಿಗೆ ವಿಷಯ ತಿಳಿಸುವುದು ಕಡ್ಡಾಯ. ಸಂಜೆ 6 ಗಂಟೆಯ ನಂತರ ಇಡೀ ಗ್ರಾಮವೇ ಸ್ವಯಂಲಾಕ್ ಡೌನ್. ಕೊರೊನಾದಿಂದ ಸ್ವಯಂ ರಕ್ಷಣೆಗೆ ಮುಂದಾಗಿದುವ ಮೂಲಕ ಚಾಮರಾಜನಗರ ಜಿಲ್ಲೆಗೆ ಮಾದರಿಯಾಗಿದೆ ಈ ಗ್ರಾಮ.

    ಹಸಿರುವಲಯದಲ್ಲಿದ್ದ ಚಾಮರಾಜನಗರಲ್ಲಿ ಸದ್ಯ ಕೋವಿಡ್ -19 ದ್ವಿಶತಕ ದಾಟಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ಕೊರೊನಾದಿಂದ ಮೂವರು ಸಾವ್ನಪ್ಪಿದ್ದು, 40 ಸಕ್ರೀಯ ಪ್ರಕರಣಗಳಿವೆ. ತಾಲೂಕಿನ ಹಲವು ಗ್ರಾಮಗಳಿಗೆ ಹೊರಗಿನಿಂದ ಬಂದವರಿಗೆ ನಿಷೇದ ಹೇರಲಾಗಿದೆ. ಆದರೆ ಮುಳ್ಳೂರು ಗ್ರಾಮ ಬೇರೆ ಗ್ರಾಮಗಳಿಗೆ ಹೋಲಿಸಿದ್ರೆ ಡಿಫರೆಂಟ್.

    ಈ ಗ್ರಾಮದಲ್ಲಿ ಸುಮಾರು 10ರಿಂದ 12ಸಾವಿರ ಜನರು ವಾಸ ಮಾಡುತ್ತಿದ್ದಾರೆ. ಅಲ್ಲದೆ 14 ವಿವಿಧ ಜಾತಿಯ ಜನರಿದ್ದಾರೆ. ಎಲ್ಲರೂ ಸಹ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಇಲ್ಲಿವರೆಗೂ ಮುಳ್ಳೂರು ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಗ್ರಾಮಕ್ಕೆ ಅಕ್ಕ ಪಕ್ಕದ ಗ್ರಾಮಗಳಿಂದ ಬರುವವರ ಮಾಹಿತಿಯನ್ನ ಮುಖಂಡರಿಗೆ ನೀಡುವುದು ಕಡ್ಡಾಯವಾಗಿದೆ. ಯಾರೇ ಹೊರಗಿನಿಂದ ಬಂದ್ರು 14 ದಿನಗಳ ಕಾಲ ಕ್ವಾರೈಂಟನ್ ಆಗುವುದು ಕಡ್ಡಾಯವಾಗಿದ್ದು, ಅವರಿಗೆಲ್ಲಾ ಊಟದ ವ್ಯವಸ್ಥೆಯನ್ನ ಪಂಚಾಯಿತಿ ಮೂಲಕ ಪೂರೈಸಲಾಗುತ್ತಿದೆ.

    ಗ್ರಾಮದಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಾತ್ರ ಅಂಗಡಿ-ಮುಂಗಟ್ಟು ಮತ್ತು ಇನ್ನಿತರೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದ್ದು, ನಂತರ ಸ್ವಯಂ ಇಡೀ ಗ್ರಾಮವೇ ಲಾಕ್‍ಡೌನ್ ಆಗುತ್ತದೆ. ಮುಖಕ್ಕೆ ಮಾಸ್ಕ್ ಧರಿಸದಿದ್ದರೆ 100 ರೂಪಾಯಿ ದಂಡ ಜೊತೆಗೆ ಗ್ರಾಮದಲ್ಲಿ ಗುಂಪುಗೂಡುವುದನ್ನ ನಿಷೇಧಿಸುವ ಮೂಲಕ ಚಾಮರಾಜನಗ ಜಿಲ್ಲೆಯ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

    ಗ್ರಾಮದ ಮುಖಂಡರ ಈಗಾಗಲೇ ಗ್ರಾಮದಲ್ಲಿ ಗ್ರಾಮಸಭೆ ನಡೆಸಿದ್ದು, ಈ ಮೇಲಿನ ಎಲ್ಲಾ ನಿರ್ಣಯಗಳಿಗೆ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡಿದ್ದಾರೆ. ಇದಕ್ಕೆ ಗ್ರಾಮದ ಜನರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕೊರೊನಾ ಬರದಿರಲಿ ಎಂದು ಮುಖಂಡರು ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

  • ಇನ್ನೂ 10 ಜನ್ಮ ಬಂದ್ರೂ ಎಚ್‍ಡಿಕೆ ಸಿಎಂ ಆಗಲ್ಲ: ಸಚಿವ ಈಶ್ವರಪ್ಪ ಲೇವಡಿ

    ಇನ್ನೂ 10 ಜನ್ಮ ಬಂದ್ರೂ ಎಚ್‍ಡಿಕೆ ಸಿಎಂ ಆಗಲ್ಲ: ಸಚಿವ ಈಶ್ವರಪ್ಪ ಲೇವಡಿ

    ಶಿವಮೊಗ್ಗ: ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕೆಲ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಪಕ್ಷ ಇನ್ನು ಬದುಕಿದೆ, ರಾಜಕೀಯದಲ್ಲಿ ಇದ್ದೀನಿ ಎಂದು ತೋರಿಸುವ ಸಲುವಾಗಿ ಈ ವಿಡಿಯೋಗಳನ್ನು ಅವರು ಬಿಡುಗಡೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಅವರು ಎಷ್ಟೇ ವಿಡಿಯೋ ರಿಲೀಸ್ ಮಾಡಿದರೂ, ಇನ್ನೂ ಹತ್ತು ಜನ್ಮ ಬಂದರೂ ಮತ್ತೆ ಮುಖ್ಯಮಂತ್ರಿಗಳಾಗಲು ಆಗುವುದಿಲ್ಲ ಎಂದರು.

    ಜೆಡಿಎಸ್ ಪಕ್ಷದವರು ಅಲ್ಲೊಂದು, ಇಲ್ಲೊಂದು ಶಾಸಕರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಹ ಬಿಜೆಪಿ ಸೇರಲಿದ್ದಾರೆ. ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ವಿಡಿಯೋ ರಿಲೀಸ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಗೂಂಡಾಗಳು ಮಂಗಳೂರಿನಲ್ಲಿ ಸಂಚು ನಡೆಸಿ ಗಲಭೆ ನಡೆಸಿದರು ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬಳಸಿದ್ದನ್ನು ಕುಮಾರಸ್ವಾಮಿ ನಂಬುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಜನ ಮಾತ್ರ ಈ ಘಟನೆಯನ್ನು ನೋಡಿದ್ದಾರೆ ಎಂದರು.

    ಮಂಗಳೂರಿನಲ್ಲಿ ವ್ಯವಸ್ಥಿತ ಸಂಚು ನಡೆಸಿ ಗಲಭೆ ನಡೆಸಿದ ಕುತಂತ್ರಿಗಳ ಬಗ್ಗೆ ಎಚ್‍ಡಿಕೆ ಮಾತನಾಡುತ್ತಿದ್ದಾರೆ. ಈ ಕುತಂತ್ರ ರಾಜಕಾರಣವನ್ನು ರಾಜ್ಯದ ಜನ ನಂಬಲ್ಲ. ನೀವು ಎಷ್ಟೇ ಆರೋಪ ಮಾಡಿದರೂ, ಆರೋಪವನ್ನು ನಾವು ಒಪ್ಪುವುದಿಲ್ಲ. ಗಲಭೆಯಲ್ಲಿ ವ್ಯವಸ್ಥಿತ ಸಂಚು ನಡೆದಿರುವ ಬಗ್ಗೆ ನ್ಯಾಯಾಂಗ ತನಿಖೆಯ ನಂತರ ತಿಳಿಯಲಿದೆ. ಆ ಬಳಿಕ ಗಲಭೆಯಲ್ಲಿ ಇನ್ನು ಯಾರು ಇದ್ದಾರೆ ಎಂದು ಬಹಿರಂಗಗೊಳ್ಳಲಿದೆ ಎಂದು ತಿಳಿಸಿದರು.

    ಗ್ರಾಮೀಣ ಸಮಸ್ಯೆ ಗಮನಕ್ಕೆ ತನ್ನಿ: ನಗರದ ರಂಗಾಯಣ ಸಭಾಂಗಣದಲ್ಲಿ ಪಂಚಾಯತ್‍ರಾಜ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳ ಅನುಷ್ಟಾನದಲ್ಲಿನ ತೊಂದರೆಗಳ ಬಗ್ಗೆ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

    ರೈತರ ಅಭಿವೃದ್ಧಿಯಾದರೆ ಮಾತ್ರ ಹಳ್ಳಿಗಳ ಅಭಿವೃದ್ಧಿಯಾಗಲು ಸಾಧ್ಯ. ಹಳ್ಳಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುವುದು. ಗ್ರಾಮೀಣ ಅಭಿವೃದ್ಧಿ ಕಾರ್ಯಗಳ ಅನುಷ್ಟಾನದಲ್ಲಿ ಪಂಚಾಯತ್ ರಾಜ್ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾದುದು. ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ಪಿಡಿಒಗಳು ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ನೇರವಾಗಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಸರಿಪಡಿಸಬೇಕು. ಪಿಡಿಒಗಳ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

    ಎಲ್ಲಾ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಜಿಲ್ಲೆಯ 271 ಗ್ರಾಮ ಪಂಚಾಯತ್‍ಗಳ ಪೈಕಿ ಕೇವಲ 19 ಪಂಚಾಯತ್ ವ್ಯಾಪ್ತಿಯಲ್ಲಿ ವಿಲೇವಾರಿ ಘಟಕಕ್ಕೆ ಜಮೀನು ಗುರುತಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಜಮೀನು ಗುರುತಿಸಿ ಘಟಕವನ್ನು ಆದಷ್ಟು ಬೇಗನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ಗ್ರಾಮೀಣ ಭಾಗದಲ್ಲಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಪ್ರತಿ ಗ್ರಾಮ ಪಂಚಾಯತ್ ಹೊರಗೆ ಬೋರ್ಡ್ ಹಾಕಿ ಮಾಹಿತಿ ಪ್ರಕಟಿಸಬೇಕು. ಹೊಸದಾಗಿ ಘಟಕ ಅಗತ್ಯ ಇರುವ ಕಡೆಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಬಜೆಟ್‍ನಲ್ಲಿ ಶೌಚಾಲಯ ನಿರ್ಮಾಣದ ಸಹಾಯಧನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಇದೇ ರೀತಿ ಸಾಮೂಹಿಕ ಶೌಚಾಲಯಗಳ ನಿರ್ವಹಣೆಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

    ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯ ವೀರಭದ್ರಪ್ಪ ಪೂಜಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ಕೇಶವ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  • ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

    ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

    ರಾಮನಗರ: ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.

    ಮುದುಗೆರೆ ಗ್ರಾಮ ಪಂಚಾಯತ್‍ನ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಎಸಿಬಿ ಬಲೆಗೆ ಬಿದ್ದವರು. ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ನಿವಾಸಿಯೊಬ್ಬರು ಮುದುಗೆರೆ ಗ್ರಾಮ ಪಂಚಾಯತಿಯಿಂದ ನರೇಗಾ ಯೋಜನೆಯ ಪೈಪ್‍ಲೈನ್ ಕಾಮಗಾರಿ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿದ್ದರು. ಆದರೆ ಅವರಿಗೆ ಕಾಮಗಾರಿಯ 65 ಸಾವಿರ ಬಿಲ್ ಹಣವನ್ನ ಮಂಜೂರು ಮಾಡಲು ಶೇ.17ರಷ್ಟು ಕಮಿಷನ್ ನೀಡುವಂತೆ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಪಿಡಿಓ ಬಳಿ ಪ್ರಶ್ನಿಸಿದರೆ ಮಹೇಶ್ ಹೇಳಿದಂತೆ ಮಾಡು. ಕಮಿಷನ್ ಕೊಟ್ಟು ಬಿಲ್ ಮಂಜೂರು ಮಾಡಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಗುತ್ತಿಗೆದಾರ ರಾಮನಗರ ಎಸಿಬಿ ಅಧಿಕಾರಿಗಳಿಗೆ ಸಲ್ಲಿಸಿದ್ದ.

    ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಮಂಗಳವಾರ ಲಂಚವಾಗಿ 11 ಸಾವಿರ ರೂಪಾಯಿ ಪಡೆಯುತ್ತಿದ್ದರು. ಈ ವೇಳೆ ಎಸಿಬಿ ಡಿವೈಎಸ್‍ಪಿ ಮಲ್ಲೇಶ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಕ್ರಮ ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ

    ಅಕ್ರಮ ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ

    ಮಂಗಳೂರು: ಬಸವ ವಸತಿ ಯೋಜನೆಯ ಅಕ್ರಮವನ್ನು ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನೊಬ್ಬನ ಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿಸಿ ನೀರು ಎರಚಿ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದಿದೆ.

    ಉಜಿರೆ ಗ್ರಾಮ ಪಂಚಾಯತ್‍ಯ ವಿನುತಾ ರಜತ್ ಗೌಡ ಬಿಸಿ ನೀರು ಎರಚಿದ ಉಪಾಧ್ಯಕ್ಷೆ. ಇಂದು ವಿನುತಾ ಅವರ ಮನೆಗೆ ಅಧಿಕಾರಿಗಳ ಜೊತೆಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಆರ್‌ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್(41) ಅವರ ಹಲ್ಲೆ ಮಾಡಿದ್ದಾರೆ.

    ಬಸವ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ರಾಜೀವ ಗಾಂಧಿ ವಸತಿ ನಿಗಮಕ್ಕೆ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ತಾಲೂಕು ಪಂಚಾಯತ್ ಇಓ ಕುಸುಮಾಧರ್ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆಗೆ ಆಗಮಿಸಿದ್ದರು. ಉಜಿರೆ ಗ್ರಾಮದ ಮಲೆಬೆಟ್ಟಿನಲ್ಲಿರುವ ಉಪಾಧ್ಯಕ್ಷೆಯ ಮನೆಯ ಅಂಗಳದಲ್ಲಿ ವಿಚಾರಣೆ ನಡೆಯುತ್ತಿತು. ಈ ವೇಳೆ ವಿನುತಾ ರಜತ್ ಗೌಡ ಮನೆಯ ಒಳಗಿಂದ ಬಿಸಿನೀರು ತಂದು ಬಾಲಸುಬ್ರಹ್ಮಣ್ಯ ಭಟ್ ಮೇಲೆ ಎರಚಿದ್ದಾರೆ.

    ಬಾಲಸುಬ್ರಹ್ಮಣ್ಯ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚುಕಿತ್ಸೆ ಅಗತ್ಯವಾಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಜಿರೆ ಗ್ರಾಮ ಪಂಚಾಯತ್‍ನಲ್ಲಿ ಅನೇಕ ಅಕ್ರಮಗಳು ನಡೆದಿವೆ. ಈ ಕುರಿತು ನಾನು ದೂರು ನೀಡಿದ್ದರಿಂದ ನನ್ನ ಮೇಲೆ ಬಿಸಿ ನೀರು ಎರಚಿದ್ದಾರೆ. ಬೆನ್ನಿನ ಎಡಭಾಗದಲ್ಲಿ ಗುಳ್ಳೆಗಳಾಗಿದ್ದು, ಉರಿಯಲು ಆರಂಭಿಸಿವೆ ಎಂದು ಬಾಲಸುಬ್ರಹ್ಮಣ್ಯ ಭಟ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫ್ರಾನ್ಸ್ ಮೂಲದ ತಾಯಿಯ ಮಗಳು ಕೊಪ್ಪಳದ ಗ್ರಾಮ ಪಂಚಾಯತ್ ಅಧ್ಯಕ್ಷೆ!

    ಫ್ರಾನ್ಸ್ ಮೂಲದ ತಾಯಿಯ ಮಗಳು ಕೊಪ್ಪಳದ ಗ್ರಾಮ ಪಂಚಾಯತ್ ಅಧ್ಯಕ್ಷೆ!

    ಕೊಪ್ಪಳ: ಫ್ರಾನ್ಸ್ ಮೂಲದ ತಾಯಿಯೊಬ್ಬರ ಮಗಳು ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಹೌದು, ಪ್ರವಾಸಕ್ಕೆಂದು ಭಾರತಕ್ಕೆ ಬಂದ ಫ್ರಾನ್ಸ್ ಮಹಿಳೆ ಆ ಸ್ಥಳದ ಐತಿಹಾಸಿಕ ಹಿನ್ನೆಲೆ ಕೇಳಿ ಅಲ್ಲೇ ವಾಸವಾದರು. ಬಳಿಕ ಸ್ಥಳೀಯರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಹುಟ್ಟಿದ ಮಗಳು ಇಂದು ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

    ಅಂಜನಾದೇವಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ. ಮೂಲತಃ ಆನೆಗೊಂದಿಯಲ್ಲಿ ಹುಟ್ಟಿ ಬೆಳದ ಅಂಜನಾದೇವಿಯವರು ಕನ್ನಡ ಸೇರಿದಂತೆ ನಾಲ್ಕೈದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಇವರ ಕುಟುಂಬ ಸದಸ್ಯರು ಇಂದಿಗೂ ಫ್ರಾನ್ಸ್ ನಲ್ಲಿ ವಾಸವಿದ್ದಾರೆ. ವಿದೇಶಿ ಮೂಲದ ಮಹಿಳೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನಿಜಕ್ಕೂ ವಿಶೇಷವಾಗಿದೆ.

    ಮೊದಲಿನಿಂದಲೂ ಸಾಮಾಜಿಕ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದ ಅಂಜನಾದೇವಿಯವರು, 2015ರಲ್ಲಿ ಗ್ರಾಮ ಪಂಚಾಯಿತಿಯ 2ನೇ ವಾರ್ಡಿನಲ್ಲಿ ಸಾಮಾನ್ಯ ಮಹಿಳಾ ಖೋಟಾದಡಿ ಸ್ಪರ್ಧಿಸಿ ಗೆದ್ದಿದ್ದರು. ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ ಕಾರಣ ಆನೆಗೊಂದಿಯ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಹೀಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರು ಅವಿರೋಧವಾಗಿ ಅಂಜನಾದೇವಿಯನ್ನು ಆಯ್ಕೆ ಮಾಡಿದ್ದಾರೆ. 14 ಜನ ಸಂಖ್ಯಾಬಲ ಹೊಂದಿದ ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಆನೆಗೊಂದಿ, ಕಡೇಬಾಗಿಲು, ಚಿಕ್ಕರಾಂಪುರ್ ಹಾಗೂ ಬಸವನದುರ್ಗ ಗ್ರಾಮಗಳು ಸೇರುತ್ತವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಂಜನಾದೇವಿ, ನಮ್ಮ ತಾಯಿ ಶಾರದಾ(ಫ್ರಾನ್ಸುವಾ) ಮೂಲತಃ ಫ್ರಾನ್ಸ್ ಮೂಲದವರಾಗಿದ್ದು, 1965ರಲ್ಲಿ ಭಾರತದ ಪ್ರವಾಸಕ್ಕೆಂದು ಬಂದು ಇಲ್ಲಿಯೇ ನೆಲೆಸಿದ್ದರು. ನಂತರ ಸ್ಥಳೀಯರಾದ ಶಾಂತಮೂರ್ತಿ ಎಂಬವರನ್ನು ವಿವಾಹವಾಗಿದ್ದರು. ತಂದೆ-ತಾಯಿ ಅಂಜನಾದ್ರಿ ಬೆಟ್ಟದ ಸಮೀಪವೇ ವಾಸವಾಗಿದ್ದರು. ಹೀಗಾಗಿ ನನಗೆ ಅಂಜನಾದೇವಿ ಎಂದೇ ಹೆಸರನ್ನು ಇಟ್ಟಿದ್ದರು. ನಾನು ಹುಟ್ಟಿ, ಬೆಳೆದಿದ್ದು ಎಲ್ಲಾ ಆನೆಗೊಂದಿಯಲ್ಲಿಯೇ. ಈಗಲೂ ನನ್ನ ಅಜ್ಜಿ ಫ್ರಾನ್ಸ್ ನಲ್ಲಿ ಇದ್ದಾರೆ. ಅವರನ್ನು ಸಹ ನೋಡಿಕೊಂಡು ಬಂದಿದ್ದೇನೆ. ಆದರೆ ನನಗೆ ನನ್ನ ಭಾರತವೇ ತುಂಬಾ ಇಷ್ಟ. ಅಲ್ಲಿನ ವಾತಾವರಣ ನನಗೆ ಹಿಡಿಸಲಿಲ್ಲ. ಇಲ್ಲಿಯೇ ನೆಮ್ಮದಿಯಾಗಿದ್ದೇನೆಂದು ಹೇಳಿದರು.

    ಮೊದಲಿನಿಂದಲೂ ನಾನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ, ಅಲ್ಲದೇ ನನ್ನ ಹಳ್ಳಿಗೆ ಏನಾದರೂ ಮಾಡಬೇಕೆಂದು ಪ್ರಯತ್ನಪಡುತ್ತಲೇ ಇದ್ದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ನಿಂತು ಜಯ ಸಾಧಿಸಿದ್ದೆ. ಈಗ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ನನ್ನ ಮೇಲಿಟ್ಟುರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಗ್ರಾಮದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

    ಗ್ರಾಮಸ್ಥರಾದ ಷಣ್ಮುಖರವರು ಮಾತನಾಡಿ, ಅಂಜನಾದೇವಿಯವರನ್ನು ಹುಟ್ಟಿನಿಂದಲೂ ನಾವು ನೋಡಿಕೊಂಡು ಬಂದಿದ್ದೇವೆ. ಗ್ರಾಮ ಅಭಿವೃದ್ದಿಯಾಗಬೇಕು ಎನ್ನುವ ಉದ್ದೇಶದಿಂದ ವಿದ್ಯಾವಂತ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದೇವೆಂದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews