Tag: ಗ್ರಾಮ ಪಂಚಾಯತ್

  • ಗ್ರಾಮಪಂಚಾಯತ್‍ನಲ್ಲಿ ಅಕ್ರಮ ಪ್ರಶ್ನಿಸಲು ಬಂದ ಗ್ರಾಮಸ್ಥರನ್ನು ಕಂಡು ಓಡಿ ಹೋದ PDO

    ಗ್ರಾಮಪಂಚಾಯತ್‍ನಲ್ಲಿ ಅಕ್ರಮ ಪ್ರಶ್ನಿಸಲು ಬಂದ ಗ್ರಾಮಸ್ಥರನ್ನು ಕಂಡು ಓಡಿ ಹೋದ PDO

    ತುಮಕೂರು: ತಾಲೂಕಿನ ಮಲ್ಲಸಂದ್ರ ಗ್ರಾಮ ಪಂಚಾಯತ್‌ನಲ್ಲಿ ಮಿತಿಮೀರಿದ ಅಕ್ರಮ ನಡೆಯುತಿದ್ದು, ಅದನ್ನು ಪ್ರಶ್ನಿಸಿಲು ಸಾರ್ವಜನಿಕರು ಗ್ರಾ.ಪಂ. ಕಚೇರಿಗೆ ಹೋಗುತಿದ್ದಂತೆ ಪಿಡಿಒ ಎದ್ನೋ ಬಿದ್ನೋ ಎಂದು ಓಡಿ ಹೋದ ಘಟನೆ ನಡೆದಿದೆ.

    ಪಿಡಿಒ ಮಂಜಣ್ಣ ಗ್ರಾಮ ಪಂಚಾಯತ್‍ನಲ್ಲಿ ಅಕ್ರಮ ಖಾತೆ ಮಾಡಿಕೊಡುವುದು. ಒಬ್ಬರ ಜಮೀನು ಇನ್ನೊಬ್ಬರಿಗೆ ಖಾತೆ ಮಾಡಿಕೊಡಲಾಗುತ್ತಿದೆ ಅನ್ನೋದು ಸ್ಥಳೀಯರ ಆರೋಪ. ಅಲ್ಲದೇ ಅಬ್ಬತನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ಜಮೀನನ್ನು ಖಾಸಗಿ ಅವರಿಗೆ ಲಂಚದ ಹಣ ಪಡೆದು ಮಾರಾಟ ಮಾಡಿದ ಅರೋಪವಿದೆ. ಜೊತೆಗೆ ಹಾಲನೂರು ಗ್ರಾಮದ ಪಾರ್ವತಮ್ಮ ಎನ್ನುವವರ ಸೈಟನ್ನು ಗೋವಿಂದ ಹಾಗೂ ವೆಂಕಟಪ್ಪ ಎನ್ನುವವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆ ಕೂಡ ಮಂಜಣ್ಣರ ಮೇಲಿದೆ. ಇದನ್ನೂ ಓದಿ: ಜಡ್ಜ್ ಭೇಟಿ ವೇಳೆ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್

    ಈ ಎಲ್ಲಾ ಅಕ್ರಮಗಳನ್ನು ಪ್ರಶ್ನಿಸಲು ಗ್ರಾಮಸ್ಥರು ಗ್ರಾಮ ಪಂಚಾಯತ್‍ಗೆ ತೆರಳಿದ್ದಾರೆ. ಮಂಜಣ್ಣ ಅಕ್ರಮ ಎಸಗಿದಕ್ಕೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ಅಕ್ರಮಗಳ ಸೂಕ್ತ ದಾಖಲೆ ತೋರಿಸಿ ಹಗರಣ ಬಯಲಿಗೆ ತರುತ್ತಿದ್ದಂತೆ ಪಿಡಿಒ ಕಕ್ಕಾಬಿಕ್ಕಿಯಾಗಿದ್ದಾರೆ. ಉತ್ತರ ಕೊಡಲಾಗದೆ ತತ್ತರಿಸಿದ್ದಾರೆ. ಫೋನ್ ಕರೆ ಬಂದ ನೆಪದಲ್ಲಿ ಮಾತನಾಡುತ್ತಾ ಬೈಕ್ ಹತ್ತಿ ತಪ್ಪಿಸಿಕೊಂಡು ಓಡಿಹೋಗಿದ್ದಾರೆ.

    ಕಳೆದ 7 ವರ್ಷದಿಂದ ಇದೇ ಗ್ರಾಮ ಪಂಚಾಯತ್‍ನಲ್ಲಿ ಮಂಜಣ್ಣ ಠಿಕಾಣಿ ಹೂಡಿದ್ದು, ರಾಜಕೀಯ ಪ್ರಭಾವದಿಂದ ವರ್ಗಾವಣೆಯೂ ಆಗದೇ ಅಕ್ರಮ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರ ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

  • ಮಳೆನೀರು ಕೊಯ್ಲು ಅಳವಡಿಸಿಕೊಳ್ಳದಿದ್ರೆ ಭವಿಷ್ಯವಿಲ್ಲ: ಜಲತಜ್ಞ ಜೋಸೆಫ್ ರೆಬೆಲ್ಲೋ

    ಮಳೆನೀರು ಕೊಯ್ಲು ಅಳವಡಿಸಿಕೊಳ್ಳದಿದ್ರೆ ಭವಿಷ್ಯವಿಲ್ಲ: ಜಲತಜ್ಞ ಜೋಸೆಫ್ ರೆಬೆಲ್ಲೋ

    ಉಡುಪಿ: ನಮ್ಮ ಜಲಜಾಗೃತಿಯ ಕೊರತೆಯಿಂದಾಗಿ ಅತ್ಯಂತ ಹೆಚ್ಚು ಮಳೆಯಾಗುವ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳೂ ಸಹ ನೀರಿನ ಸಮಸ್ಯೆ ಎದುರಿಸುತ್ತಿರುವುದು ಕಳವಳಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳದಿದ್ದರೆ ಭವಿಷ್ಯವಿಲ್ಲ ಎಂದು ಜಲತಜ್ಞ ಜೋಸೆಫ್ ರೆಬೆಲ್ಲೋ ಎಚ್ಚರಿಕೆ ನೀಡಿದ್ದಾರೆ.

    ಉಡುಪಿ ಜಿಲ್ಲೆಯ ಮಂದರ್ತಿ ಸಮೀಪದ ಕಾಡೂರು ಗ್ರಾಮ ಪಂಚಾಯತ್ ನಲ್ಲಿ ಜರುಗಿದ ಮಳೆನೀರು ಕೊಯ್ಲು ಕಲಿಕಾ ಭೇಟಿ ಹಾಗೂ ಪ್ರಾತ್ಯಕ್ಷಿಕೆ ಮತ್ತು ಘನ ಸಂಪನ್ಮೂಲ ನಿರ್ವಹಣೆ ಕುರಿತು ಮಾಹಿತಿ ನೀಡಿದ ಜೋಸೆಫ್ ರೆಬೆಲ್ಲೋ ಅವರು, ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಅಳವಡಿಸಿಕೊಂಡಲ್ಲಿ ಅಂತರ್ಜಲ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಇಲ್ಲದೆ ಇದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಮೆಸ್ಕಾಂ ಸಿಬ್ಬಂದಿ ಜೊತೆ ಸಚಿವ ಸುನೀಲ್ ಕುಮಾರ್ ಹುಟ್ಟುಹಬ್ಬದ ಸಿಹಿಯೂಟ

    ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಶೆಟ್ಟಿ ನಡೂರು ಮಾತನಾಡಿ, ಇಂತಹ ಕಲಿಕಾಭೇಟಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಿಂದ ತ್ಯಾಜ್ಯ ವಿಲೇವಾರಿ ಹಾಗೂ ಜಲಸಂರಕ್ಷಣೆ ನಿಟ್ಟಿನಲ್ಲಿ ಮಾಹಿತಿ ವಿನಿಮಯ ಹಾಗೂ ಅನುಷ್ಠಾನಕ್ಕೆ ಸಹಕಾರಿ ಎಂದರು. ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾತನಾಡಿ ಗ್ರಾಮ ಪಂಚಾಯತ್ ಮೂಲಕ ನೀರಿನ ಸಂರಕ್ಷಣೆ ಹಾಗೂ ದ್ರವತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ಮೂಲಕ ಅವಕಾಶವಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅಗತ್ಯವಿದೆ ಎಂದರು.

    ಜಿಲ್ಲಾ ಪಂಚಾಯತ್ ಉಡುಪಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ,ಪುಣ್ಯ ಕೋಟಿ ಸಂಸ್ಥೆ(ರಿ) ಮತ್ತು ಕಾಡೂರು ಪಂಚಾಯತ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೆಗ್ಗುಂಜೆ, ಕೊಕ್ಕರ್ಣೆ, ನೀಲಾವರ, ಹನೇಹಳ್ಳಿ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ನೀರು ನೈರ್ಮಲ್ಯ ಸಮಿತಿಯ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪುಣ್ಯಕೋಟಿ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿಗಳಾದ ನೇತ್ರಾವತಿ, ಪಾಂಡು, ದಿವಾಕರ್ ಮತ್ತು ಎಸ್‍ಎಲ್‍ಆರ್‍ಎಮ್ ಘಟಕದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು. ಇದನ್ನೂ ಓದಿ: ಯಡಿಯೂರಪ್ಪನವರ ಆಶೀರ್ವಾದದಿಂದ ಗೃಹಸಚಿವನಾಗಿದ್ದೇನೆ: ಅರಗ ಜ್ಞಾನೇಂದ್ರ

  • ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

    ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

    ತುಮಕೂರು: ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮೇಲೆ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮಂಗಳಮುಖಿಯರು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ.

    ಮಂಗಳಮುಖಿಯರು ಹಣ ಕೇಳಿದಾಗ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಕೋಡ್ಲಾಪುರ ಗ್ರಾಮಪಂಚಾಯತ್ ಸದಸ್ಯ ರಂಗನಾಥ್ ಹಲ್ಲೆಗೊಳಗಾಗಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಬಟ್ಟೆ ಹರಿದಾಡ್ಕೊಂಡು ಮಂಗಳಮುಖಿಯರ ಮಾರಾಮಾರಿ

    ರಂಗನಾಥ್ ಅವರ ಬೈಕನ್ನು ಅಡ್ಡಗಟ್ಟಿ ಇಬ್ಬರು ಮಂಗಳಮುಖಿಯರು ಹಣ ಕೇಳಿದ್ದಾರೆ. ರಂಗನಾಥ್ ಹಣ ನೀಡಲು ನಿರಾಕರಿಸಿದಾಗ ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಧುಗಿರಿ ಪಟ್ಟಣದಲ್ಲಿ ಮಂಗಳ ಮುಖಿಯರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರ ಮೇಲೆ ಇಂತಹ ಹಲ್ಲೆಗಳು ಮೇಲಿಂದ ಮೇಲೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೊರೊನಾ ವಿರುದ್ಧದ ಹೋರಾಟ – ದೇಶದ ಗಮನ ಸೆಳೆಯಿತು ದಕ್ಷಿಣ ಕನ್ನಡದ ಗ್ರಾಮ

    ಕೊರೊನಾ ವಿರುದ್ಧದ ಹೋರಾಟ – ದೇಶದ ಗಮನ ಸೆಳೆಯಿತು ದಕ್ಷಿಣ ಕನ್ನಡದ ಗ್ರಾಮ

    ಮಂಗಳೂರು: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿಗೆ ಕಡಿವಾಣ ಹಾಕಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ, ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಆದರೆ ಕೋವಿಡ್‍ನನ್ನು ನಿಯಂತ್ರಿಸಬೇಕಾದ ಪ್ರಮುಖ ಜವಾಬ್ದಾರಿ ಇರುವುದು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್‍ಗಳದ್ದು. ಈ ನಿಟ್ಟಿನಲ್ಲಿ ಬೆಸ್ಟ್ ಪ್ರಾಕ್ಟಿಸ್ ಮೂಲಕ ಕೋವಿಡ್ -19 ಎಂಬ ಮಹಾಕಂಟಕವನ್ನು ಎದುರಿಸಿದ ಕರ್ನಾಟಕದ ಮೂರು ಗ್ರಾಮ ಪಂಚಾಯತ್‍ಗಳು ರಾಷ್ಟ್ರದ ಗಮನಸೆಳೆದಿವೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಒಂದು ಕೂಡ ಸೇರಿದೆ.

    ಕೋವಿಡ್‍ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸಾಥ್ ನೀಡಬೇಕಾದವರು ಜನತೆಯ ಜೊತೆಗೆ ಗ್ರಾಮ ಪಂಚಾಯತ್‍ಗಳು. ದೇಶದಲ್ಲಿ ಕೊರೋನಾಗೆ ನಿಯಂತ್ರಣ ಹೇರುವಲ್ಲಿ ಗ್ರಾಮ ಪಂಚಾಯತ್‍ಗಳು ಪ್ರಮುಖ ಪಾತ್ರ ವಹಿಸಬೇಕೆಂದು ಸರ್ಕಾರ ಮೊದಲೇ ಸೂಚನೆ ನೀಡಿತ್ತು. ಅದರಂತೆ ಪಂಚಾಯತ್‍ಗಳ ಮೂಲಕ ಆಗಿರುವ ಕೆಲಸಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಸರ್ವೇ ಮಾಡಿದೆ. ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮ ಪಂಚಾಯತ್ ಕೂಡ ಸೇರಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಅನ್‍ಲಾಕ್- ವೀಕೆಂಡ್ ಕರ್ಫ್ಯೂ ಮುಂದುವರಿಕೆ

    ಕೋವಿಡ್ ಕಷ್ಟಕಾಲದಲ್ಲಿ ಈ ಪಂಚಾಯತ್‍ಗಳು ಮಾಡಿರುವ ಸಕಾಲಿಕ ಕಾರ್ಯಗಳಿಂದಾಗಿ ಮನ್ನಣೆಗೆ ಪಾತ್ರವಾಗಿವೆ. ಕೋವಿಡ್ ನಿರ್ವಹಣೆಗೆ ಪರಿಣಾಮಕಾರಿ ಹೆಜ್ಜೆಯನ್ನಿಟ್ಟ ಬಾಳೆಪುಣಿ ಗ್ರಾಮ ಪಂಚಾಯತು ಈಗ ರಾಷ್ಟಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದು ಬಂಟ್ವಾಳ ತಾಲೂಕಿಗೆ ಒಳಪಟ್ಟಿದೆ. ಕೈರಂಗಳ ಮತ್ತು ಬಾಳೆಪುಣಿ ಕಂದಾಯ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯತ್ ಆಡಳಿತ 2020 ರ ಮಾರ್ಚ್ ನಿಂದಲೇ ಕೋವಿಡ್ ಸೋಂಕನ್ನು ಎದುರಿಸುವಲ್ಲಿ ಪರಿಣಾಮಕಾರಿ ಹೆಜ್ಜೆ ಇಟ್ಟಿತ್ತು. ಸಮಾಜ ಕಾರ್ಯ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಸಮಾನ ಮನಸ್ಕರ ತಂಡ ಪಂಚಾಯತು ಆಡಳಿತದೊಂದಿಗೆ ಕೈಜೋಡಿಸಿತ್ತು. ಆಯುಷ್ ಇಲಾಖೆ, ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜಿನ ಬೆಂಬಲವೂ ಇತ್ತು. ಜಾಗೃತಿ ಮೂಡಿಸಿದ ಪಂಚಾಯತು ಮೊದಲಿನಿಂದಲೇ ಮಾಹಿತಿ, ಶಿಕ್ಷಣ ಮತ್ತು ಸಂವಹನಕ್ಕೆ ಒತ್ತು ನೀಡಲಾಗಿತ್ತು. ನಾಲ್ಕು ಕೋವಿಡ್ ತಪಾಸಣಾ ಶಿಬಿರಗಳನ್ನು ಸಂಘಟಿಸುವಲ್ಲಿ ಗ್ರಾಮ ಪಂಚಾಯತ್ ಯಶಸ್ವಿಯಾಗಿತ್ತು.

    ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಕ್ಕೂ ಕೊರೋನಾಗೆ ಕಡಿವಾಣ ಹಾಕಲು ಸಿದ್ಧತೆಗಳು ನಡೆಯುತ್ತಿವೆ. ಜನಶಿಕ್ಷಣ ಟ್ರಸ್ಟ್ ಬಾಳೆಪುಣಿ ಗ್ರಾಮಪಂಚಾಯತ್ ಮತ್ತು ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಕೋವಿಡ್ ಸಮಾಲೋಚನಾ ಕೇಂದ್ರವನ್ನು ಕೂಡಾ ತೆರೆಯಲಾಗಿದೆ. ಇದೆಲ್ಲವನ್ನು ಗಮನಿಸುತ್ತಾ ಬಂದಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ’ ಬಾಳೆಪುಣಿ ಗ್ರಾಮ ಪಂಚಾಯತು ಮಾದರಿಯನ್ನು ಗುರುತಿಸಿದೆ. ಅದರಿಂದ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇದು ಮುಂದಕ್ಕೂ ಮುಂದುವರಿಯಲಿ ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.

  • ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿ – ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಕ್ರಿಯೆ

    ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿ – ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಕ್ರಿಯೆ

    ಹಾವೇರಿ: ಜಿಲ್ಲೆಯ ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ ಅವರನ್ನು ಗ್ರಾಮದ ಬಳಿ ಎರಡು ಎಕರೆ ಜಮೀನಿನಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಇಂದು ಮೃತ ಮಹಿಳೆಯೊಬ್ಬರನ್ನು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಗ್ರಾಮದ ವ್ಯಕ್ತಿಯೋರ್ವ ಅಡ್ಡಿಪಡಿಸಿದ ಕಾರಣಕ್ಕೆ ಪಂಚಾಯತ್ ಮುಂದೆ ಶವ ಸುಡಲು ಮೃತಳ ಕುಂಟುಂಬದವರು ಮುಂದಾಗಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹನುಮವ್ವ ಅಣ್ಣಿಗೇರಿ(45) ಎಂಬವರು ಇಂದು ಮೃತಪಟ್ಟಿದ್ದರು. ಬಳಿಕ ಅಂತ್ಯಸಂಸ್ಕಾರಕ್ಕೆ ಮೃತಳ ಸಂಬಂಧಿಕರು ಸಿದ್ಧತೆ ಮಾಡಲು ಸ್ಮಶಾನಕ್ಕೆ ಕಟ್ಟಿಗೆ ತಗೆದುಕೊಂಡು ಹೋಗುತ್ತಿದ್ದರು. ಆಗ ವ್ಯಕ್ತಿಯೋರ್ವ ಮೃತಳ ಕುಟುಂಬದವರಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಸ್ಮಶಾನ ನಮ್ಮ ಹೆಸರಿನಲ್ಲಿದೆ, ನೀವು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು ಎಂದು ತಡೆಯೊಡ್ಡಿದ್ದಾರೆ. ಇದರಿಂದ ಕಂಗಾಲಾದ ಮೃತಳ ಕುಟುಂಬಸ್ಥರು ಗ್ರಾಮ ಪಂಚಾಯತ್ ಮುಂದೆ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

    ಹನುಮವ್ವ ಅಣ್ಣಿಗೇರಿಯ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡುತ್ತಿರುವ ವಿಷಯ ತಿಳಿದ ಗ್ರಾಮದ ವ್ಯಕ್ತಿಯೊಬ್ಬ ದಾರಿಗೆ ದೊಡ್ಡದಾದ ಗುಂಡಿ ತೋಡಿ, ಗುಂಡಿಗೆ ನೀರು ತುಂಬಿಸಿ ಅಡ್ಡಿ ಮಾಡಿದ್ದಾನೆ. ಹೀಗಾಗಿ ಮೃತಳ ಕುಟುಂಬದವರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಕಟ್ಟಿಗೆ ಇಟ್ಟು ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೋಲಿಸರು ಮೃತಳ ಕುಟುಂಬಸ್ಥರು ಹಾಗೂ ಅಡ್ಡಿಪಡಿಸಿದ ವ್ಯಕ್ತಿಗೆ ಪಂಚಾಯತ್ ಮುಂದೆ ಅಂತ್ಯಸಂಸ್ಕಾರ ಮಾಡದಂತೆ ಮತ್ತು ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಮನವೊಲಿಸಿದ್ದಾರೆ.

  • ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಒಂದು ವಾರ ಸೀಲ್‍ಡೌನ್

    ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಒಂದು ವಾರ ಸೀಲ್‍ಡೌನ್

    ಮಂಗಳೂರು: ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‍ನ್ನು ಒಂದು ವಾರಗಳ ಕಾಲ ಸಂಪೂರ್ಣ ಸೀಲ್‍ಡೌನ್ ಮಾಡಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

     

    ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ 17 ಗ್ರಾಮ ಪಂಚಾಯತ್‍ಗಳಲ್ಲಿ 50ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ತಾಲೂಕಿನ ನೀರುಮಾರ್ಗ ಹಾಗೂ ಕೊಣಾಜೆ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯುರು, ಮಿತ್ತಬಾಗಿಲು, ಮಾಲಾಡಿ, ನೆರಿಯಾ, ಲಾಯಿಲಾ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು. ಕಡಬ ತಾಲೂಕಿನ ಸುಬ್ರಹ್ಮಣ್ಯ, ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್

    ಜೂ.14ರ ಬೆಳಗ್ಗೆ 9 ಗಂಟೆಯಿಂದ ಜೂ. 21 ರ ಬೆಳಗ್ಗೆ 9 ಗಂಟೆವರೆಗೆ ಸೀಲ್‍ಡೌನ್ ಮಾಡಿ ಆದೇಶ ಮಾಡಲಾಗಿದ್ದು, ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಗ್ರಾಮಕ್ಕೆ ಒಳ ಪ್ರವೇಶ ಮತ್ತು ನಿರ್ಗಮನ ಸಂಪೂರ್ಣ ಬಂದ್ ಆಗಲಿದೆ. ಈ ಗ್ರಾಮ ಪಂಚಾಯತ್‍ನ ಜನರಿಗೆ ಅಗತ್ಯ ವಸ್ತು ಪೂರೈಸಲು ಪಾವತಿ ಆಧಾರದ ಮೇಲೆ ಕಾರ್ಯಪಡೆ ರಚಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

  • ಗ್ರಾಮ ಪಂಚಾಯತ್‌ನಲ್ಲಿ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

    ಗ್ರಾಮ ಪಂಚಾಯತ್‌ನಲ್ಲಿ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

    ಹುಬ್ಬಳ್ಳಿ: ಗ್ರಾಮ ಪಂಚಾಯತವೊಂದರಲ್ಲಿ ಪತ್ನಿ ಅಧ್ಯಕ್ಷೆಯಾಗಿ ಪತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಬರೆದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮ ಪಂಚಾಯತಿಯ ಸದಸ್ಯರಾಗಿ ದಂಪತಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷೆಯಾಗಿ ಪತ್ನಿ, ಉಪಾಧ್ಯಕ್ಷ ಸ್ಥಾನದಲ್ಲಿ ಪತಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ವಿಶಾಲಾಕ್ಷಿ ಚೆನ್ನಬಸನಗೌಡ ಹನಮಂತಗೌಡ್ರ ಅಧ್ಯಕ್ಷೆಯಾಗಿಯೂ, ಇವರ ಪತಿ ಚೆನ್ನಬಸಬನಗೌಡ ಹನಮಂತಗೌಡ್ರ ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ದಂಪತಿ ಆಯ್ಕೆ ಮಾಡಲು ವರೂರು ಹಾಗೂ ಕಂಪ್ಲಿಕೊಪ್ಪ ಗ್ರಾಮದ ಸ್ಥಳೀಯರು ಶ್ರಮಿಸಿದ್ದು, ಯಾವುದೇ ರೀತಿಯ ತೊಂದರೆಗಳಿಲ್ಲದೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಪಂಚಾಯತಿಗೆ ಆಯ್ಕೆಯಾದ ನೂತನ ಸದಸ್ಯರು ಹಾಗೂ ಗ್ರಾಮಸ್ಥರು ಪಕ್ಷಾತೀತವಾಗಿ ಪತಿ- ಪತ್ನಿಯನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ದಂಪತಿಯಿಂದ ಆಶಿಸುತ್ತಿದ್ದಾರೆ.

  • ಹ್ಯಾಟ್ರಿಕ್ ಜಯ – ಗ್ರಾ.ಪಂ. ಸದಸ್ಯನಿಗೆ ಬೆಂಬಲಿಗರಿಂದ ಬುಲೆಟ್ ಗಿಫ್ಟ್

    ಹ್ಯಾಟ್ರಿಕ್ ಜಯ – ಗ್ರಾ.ಪಂ. ಸದಸ್ಯನಿಗೆ ಬೆಂಬಲಿಗರಿಂದ ಬುಲೆಟ್ ಗಿಫ್ಟ್

    ಚಾಮರಾಜನಗರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸದಸ್ಯನಿಗೆ, ಬುಲೆಟ್ ಬೈಕ್‍ನ್ನು ಉಡುಗೊರೆಯಾಗಿ ನೀಡುವ ಮೂಲಕವಾಗಿ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಬೆಂಬಲಿಗರು ಸುದ್ದಿಯಾಗಿದ್ದಾರೆ.

    ಗ್ರಾಮ ಪಂಚಾಯತ್ ಸದಸ್ಯನಾಗಿರುವ ತಾವರಕಟ್ಟೆಮೋಳೆ ಗ್ರಾಮದ ಮಹೇಶ್, ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ಈ ಬಾರಿ ಬೆಂಬಲಿಗರು ಹಾಗೂ ಅಭಿಮಾನಿಗಳು ಚಂದಾ ಹಣವನ್ನು ಸಂಗ್ರಹಿಸಿ ಬುಲೆಟ್ ಖರೀದಿಸಿ ಕೊಟ್ಟಿದ್ದಾರೆ. ಮಹೇಶ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಬುಲೆಟ್ ನೀಡಿದ್ದಾರೆ.

    ಮಹೇಶ್ ಕಳೆದ ಎರಡು ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ಹಳ್ಳಿಗೆ ಅಗತ್ಯ ಇರುವ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಇವರು ಮಾಡಿರುವ ಕೆಲಸಗಳನ್ನು ಮೆಚ್ಚಿದ ಊರಿನ ಗ್ರಾಮಸ್ಥರು ಇವರನ್ನು ಮೂರನೇ ಬಾರಿ ಪಂಚಾಯತ್ ಚುನಾವಣೆಯಲ್ಲಿ ಮತಗಳನ್ನು ಹಾಕಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಮಹೇಶ್ ಅವರಿಗೆ ಬೆಂಲಿಗರು ಸಂತೋಷದಿಂದ ಬುಲೆಟ್ ಊಡುಗೊರೆಯಾಗಿ ನೀಡಿದ್ದಾರೆ.

    ಬೆಂಬಲಿಗರೆ ಹಣ, ಮತ ಎರಡನ್ನೂ ಕೊಟ್ಟು ಆಯ್ಕೆ ಮಾಡಿದ್ದರು. ಬಹುತೇಕ ಕೂಲಿಕಾರ್ಮಿಕರೇ ಇರುವ ತಾವರೆಕಟ್ಟೆಮೋಳೆ ಗ್ರಾಮದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ ಬುಲೆಟ್ ಉಡುಗೊರೆ ನೀಡುವುದಾಗಿ ಬೆಂಬಲಿಗರು ಹಾಗೂ ಅಭಿಮಾನಿಗಳು ವಾಗ್ದಾನ ಮಾಡಿದ್ದರು. ಅದರಂತೆ ಪ್ರತಿಯೊಬ್ಬರು ಹಣವನ್ನು ಹಾಕಿ, ಸಂಗ್ರಹಿಸಿದ ಮೊತ್ತದಿಂದ ಜನನಾಯಕನಿಗೆ ಬುಲೆಟ್‍ನ್ನು ಊಡುಗೊರೆಯಾಗಿ ನೀಡಿದ್ದಾರೆ.

  • ಗ್ರಾ.ಪಂ. ಎಲೆಕ್ಷನ್ ವಿಜಯೋತ್ಸವದ ವೇಳೆ ವಾಹನ ಪಲ್ಟಿ – ಓರ್ವ ಸಾವು

    ಗ್ರಾ.ಪಂ. ಎಲೆಕ್ಷನ್ ವಿಜಯೋತ್ಸವದ ವೇಳೆ ವಾಹನ ಪಲ್ಟಿ – ಓರ್ವ ಸಾವು

    ಮಂಗಳೂರು: ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ನೆಟ್ಲ ನಿವಾಸಿ ನರೇಶ್ (30) ಎಂದು ಗುರುತಿಸಲಾಗಿದೆ. ನಿನ್ನೆ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಅಂತೆಯೇ ಗೋಳ್ತಮಜಲು ಗ್ರಾಮ ಪಂಚಾಯ್ತಿಯಲ್ಲಿ ಗೆದ್ದವರಿಂದ ಸಂಭ್ರಮಾಚರಣೆ ನಡೆಸಲಾಗುತ್ತಿತ್ತು.

    ಸಂಭ್ರಮದ ವೇಳೆ ಜೀಪ್ ಪಲ್ಟಿಯಾಗಿದೆ. ಪರಿಣಾಮ ನರೇಶ್ ಸಾವನ್ನಪ್ಪಿದ್ರೆ, ಜೀಪ್ ನಲ್ಲಿದ್ದ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ ಹಾಗೂ ಯೋಗೀಶ್ ಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗ್ರಾಮ ಪಂಚಾಯತ್‌ ಚುನಾವಣೆ ಸ್ಪರ್ಧೆಗಿಳಿದ ಅಂಕೋಲದ ಎಂಎಲ್‌ಎ

    ಗ್ರಾಮ ಪಂಚಾಯತ್‌ ಚುನಾವಣೆ ಸ್ಪರ್ಧೆಗಿಳಿದ ಅಂಕೋಲದ ಎಂಎಲ್‌ಎ

    ಕಾರವಾರ: ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಎಂಎಲ್ಎ ಬದಲಾಗ್ತಾರೆ. ಆದ್ರೆ ಆಯ್ಕೆಯಾದ ಎಂಎಲ್ಎಗಳು ಗ್ರಾಮಕ್ಕೆ ಭೇಟಿ ನೀಡುವುದು ಕೂಡ ಅಪರೂಪ. ಆದರೆ ಅಂಕೋಲಾದ ಗ್ರಾಮವೊಂದರಲ್ಲಿ 75 ವರ್ಷದ ʼಎಂಎಲ್‌ಎʼ ಆರನೇ ಬಾರಿ ಲೋಕಲ್ ದಂಗಲ್‌ಗೆ ಧುಮುಕಿದ್ದಾರೆ.

    ಅಂಕೋಲಾದ ಮಂಜುಗುಣಿ ಗ್ರಾಮದ ಲೀಲಾವತಿ ನಾಯ್ಕ ಸತತ ಆರನೇ ಬಾರಿ ಸ್ಪರ್ಧೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 1993 ರಿಂದ ಇಲ್ಲಿಯವರೆಗೆ ಇವರು ಲೋಕಲ್ ಅಖಾಡಕ್ಕೆ ಧುಮುಕಿ ಸಕ್ಸಸ್ ಆಗಿದ್ದಾರೆ. ಒಮ್ಮೆ ಉಪಾಧ್ಯಕ್ಷೆಯಾಗಿ ಕಳೆದ ಬಾರಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಲೀಲಾವತಿ ಮಂಜುಗುಣಿ ಭಾಗದ ಖಾಯಂ ಎಂಎಲ್ಎ ಎಂದೇ ಪ್ರಸಿದ್ಧರಾಗಿದ್ದಾರೆ.

    ಯಾವುದೇ ಕೆಲಸ ಇರಲಿ ತಕ್ಷಣವೇ ಓಡಿ ಬರುವ ಲೀಲಾವತಿ, ಊರವರ ಪಾಲಿನ ಎಂಎಲ್ಎ ಕೂಡ ಹೌದು. ತಮ್ಮ ಹೆಸರಿನ ‘ಎಂಎಲ್ಎ’ ಎಂಬ ವಿಸಿಟಿಂಗ್ ಕಾರ್ಡ್ ಹಿಡಿದು ಆಯಾ ಇಲಾಖೆಗೆ ತೆರಳಿ ಗ್ರಾಮದ ಯಾವುದೇ ಕೆಲಸ ಇರಲಿ ಮಾಡಿಯೇ ಮುಗಿಸುವುದು  ಇವರ ವಿಶೇಷ.

    ಲೀಲಾವತಿ ಓದಿದ್ದು ಮೂರನೇ ತರಗತಿ. ಹೆಚ್ಚಾಗಿ ಅಕ್ಷರಭ್ಯಾಸ ಪಡೆಯದ ಇವರು ಈ ಹಿಂದೆ ಬೆಳಂಬಾರ ಗ್ರಾಮ ಪಂಚಾಯತ್ ಇದ್ದಾಗ 1993ರಲ್ಲಿ ಮಂಜುಗುಣಿ ಭಾಗದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2015ರಲ್ಲಿ ಊರ ಹತ್ತಿರವೇ ಹೊನ್ನೆಬೈಲ್ ಗ್ರಾಮ ಪಂಚಾಯತ್ ಆಗುವಲ್ಲಿ ಇವರ ಶ್ರಮ ಕೂಡ ಇದೆ ಎನ್ನುತ್ತಾರೆ ಸ್ಥಳೀಯರು.

    ಗ್ರಾಮಕ್ಕೆ ಬೇಕಾಗುವ ರಸ್ತೆ, ವಿದ್ಯುತ್, ಬಸ್ ವ್ಯವಸ್ಥೆ ಸೇರಿದಂತೆ ಊರ ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸಿದ ಕಾರಣಕ್ಕೆ ಊರಲ್ಲಿಯೇ ಲೀಲಾವತಿ ಉತ್ತಮ ಜನನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಇಲ್ಲಿಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾರು ಕಾಲಿಡುವುದಿಲ್ಲ. ಊರವರಿಗೆ ಲೀಲಾವತಿಯವರೇ ಎಲ್ಲಾ. ಹೀಗಾಗಿ ಲೀಲಾವತಿ ಈ  ಚುನಾವಣೆಯಲ್ಲೂ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಇಲ್ಲಿನ ಜನತೆ.

    ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯೆಯಾದರೂ ಇವರು ಸ್ವಂತ ಮನೆ ಮಾಡಿಕೊಂಡಿಲ್ಲ. ಚಿಕ್ಕದಾದ ಮನೆಯಲ್ಲಿಯೇ ವಾಸವಾಗಿದ್ದಾರೆ. ಯಾವುದೇ ಸ್ವಾರ್ಥ ಹೊಂದದೇ ಗ್ರಾಮದ ನಾಗರಿಕರಿಗೆ ಬೇಕಾಗುವ ವಸತಿ ಯೋಜನೆ, ಶೌಚಾಲಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ತಲುಪಿಸುತ್ತಿದ್ದಾರೆ. ಗ್ರಾಮದ ನಾಗರಿಕರು ಫಲಾನುಭವಿಯಾಗಲು ಬೇಕಾಗುವ ಕೆಲಸವನ್ನ ಮಾಡಿಕೊಡುತ್ತಿದ್ದಾರೆ. ತಮ್ಮೂರಿನಲ್ಲಿ ಇನ್ನೂ ಕೆಲಸ ಕೆಲಸಗಳು ಬಾಕಿ ಇದೆ. ಈ ಬಾರಿ ಆಯ್ಕೆಯಾದಲ್ಲಿ ಖಂಡಿತವಾಗಿಯೇ ಅವೆಲ್ಲಾ ಕೆಲಸಗಳನ್ನ ಮಾಡಿಕೊಡಬೇಕು ಅಂತಾರೆ ಲೀಲಾವತಿ.

    ಅಕ್ಷರ ಜ್ಞಾನ ಹೆಚ್ಚಿಲ್ಲದಿದ್ದರೂ ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಏನೂ ಬೇಕಾದರೂ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸೋಲಿಲ್ಲದೇ ಸತತ ಗೆಲುವು ಕಾಣುತ್ತಿರುವ ಲೀಲಾವತಿಯೇ ಸಾಕ್ಷಿಯಾಗಿದ್ದಾರೆ.