Tag: ಗ್ರಾಮ ಪಂಚಾಯತ್ ಚುನಾವಣೆ

  • ಗ್ರಾಮ ಸಮರದಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ

    ಗ್ರಾಮ ಸಮರದಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ

    – ಹಳ್ಳಿ ಮಟ್ಟದಲ್ಲೂ ಆಪರೇಷನ್ ಕಮಲ?

    ಬೆಂಗಳೂರು: ಹಳ್ಳಿ ಫೈಟ್‍ನಲ್ಲಿ ನಿರೀಕ್ಷೆಯಂತೆಯೇ ಆಡಳಿತಾರೂಢ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸದ್ಯದ ಟ್ರೆಂಡ್ ಗಮನಿಸಿದರೆ ಅರ್ಧಕ್ಕಿಂತ ಹೆಚ್ಚು ಗ್ರಾಮಪಂಚಾಯ್ತಿಗಳಲ್ಲಿ ಅಧಿಕಾರಕ್ಕೆ ಏರುವುದು ಖಚಿತವಾಗಿದೆ.

    ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕೂಡ ಹಲವೆಡೆ ಗೆದ್ದು ಬೀಗಿದ್ದಾರೆ. ಬ್ಯಾಲೆಟ್ ಪೇಪರ್ ಕಾರಣ ಮತ ಎಣಿಕೆ ಕಾರ್ಯದಲ್ಲಿ ವಿಳಂಬ ಆಗಿದ್ದು,  ಇನ್ನೂ ಬಹುತೇಕ ಕಡೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

    ಪಕ್ಷದ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿವ ಅಶೋಕ್ ಎಲ್ಲಾ ಕಡೆ ಬಿಜೆಪಿ ಶಕ್ತಿ ಎದ್ದು ಕಾಣ್ತಿದೆ ಎಂದಿದ್ದಾರೆ. ಸಿದ್ದರಾಮಯ್ಯ ಮಾತ್ರ ಮತದಾರರ ವಿಶ್ವಾಸ ಗೆಲ್ಲಲಾಗದ ಬಿಜೆಪಿ ಹಲವೆಡೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಮತ ಎಣಿಕೆ ಕೇಂದ್ರಗಳ ಬಳಿ ಕೋವಿಡ್ ನಿಯಮಗಳ ಉಲ್ಲಂಘನೆ ರಾಜಾರೋಷವಾಗಿ ನಡೆಯಿತು. ನಂಜನಗೂಡು ಮತ ಎಣಿಕೆ ಕೇಂದ್ರದಲ್ಲಿ ಜನರನ್ನು ನಿಯಂತ್ರಿಸಲಾಗದೇ ಪೊಲೀಸರು ಪರದಾಡಿದರು. ಬಳ್ಳಾರಿಯ ಹೊಸಪೇಟೆಯಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಬ್ಯಾರಿಕೇಡ್ ದಾಟಿ ಬಂದಿದ್ದ ವ್ಯಕ್ತಿಗೆ ಹೊಸಪೇಟೆಯ ಡಿವೈಎಸ್‍ಪಿ ರಘುಕುಮಾರ್ ಕಪಾಳಮೋಕ್ಷ ಮಾಡಿದ್ದಾರೆ.

    ಮಂಡ್ಯದ ಜಕ್ಕನಹಳ್ಳಿಯಲ್ಲಿ ಚುನಾಣೋತ್ತರ ಘರ್ಷಣೆ ಸಂಭವಿಸಿದೆ. ಮಾಜಿ ಸಚಿವ ಪುಟ್ಟರಾಜು ಬೆಂಬಲಿಗರು ಮತ್ತು ರೈತ ಸಂಘದ ಕಾರ್ಯಕರ್ತರು ದೊಣ್ಣೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಎರಡೂ ಕಡೆಯವರಗೂ ಗಾಯಗಳಾಗಿವೆ.

    ಗ್ರಾಮ ಸಮರ ಫಲಿತಾಂಶ
    * ಒಟ್ಟು ಗ್ರಾಮ ಪಂಚಾಯತ್‌ – 5,728
    * ಒಟ್ಟು ಗ್ರಾ.ಪಂ ಸ್ಥಾನಗಳು – 82,616
    * ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು – 13,107 ಗೆಲುವು
    * ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು – 9,998 ಗೆಲುವು
    * ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು – 4,458 ಗೆಲುವು
    * ಇತರರು – 3,836

  • ಮುತ್ತಿಗೆ ಹಾಕುವುದು ಒಂದು ರೀತಿಯ ಭಯೋತ್ಪಾದನೆಯೇ: ನಳಿನ್ ಕುಮಾರ್

    ಮುತ್ತಿಗೆ ಹಾಕುವುದು ಒಂದು ರೀತಿಯ ಭಯೋತ್ಪಾದನೆಯೇ: ನಳಿನ್ ಕುಮಾರ್

    – ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ

    ಉಡುಪಿ: ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ. ಈ ರೀತಿಯ ಯಾವುದೇ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಿಎಫ್‍ಐ ಕಾರ್ಯಕರ್ತರು ಅವರ ಕಚೇರಿಗೆ ಮುತ್ತಿಗೆ ಹಾಕಿದ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ. ಕಾನೂನು ತನ್ನದೇ ಕ್ರಮಕೈಗೊಳ್ಳುತ್ತದೆ. ಈ ತರದ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಬಂಧನ ಆದಾಗ ಕಾನೂನು ಪ್ರಕಾರ ಹೋರಾಟ ಮಾಡಬೇಕೇ ಹೊರತು ಮುತ್ತಿಗೆ ಹಾಕುವುದಲ್ಲ. ಮುತ್ತಿಗೆ ಹಾಕುವುದೇ ಒಂದು ರೀತಿಯ ಭಯೋತ್ಪಾದನಾ ಚಟುವಟಿಕೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಗಂಭೀರತೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

    ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಗೋಡೆ ಬರಹದಲ್ಲಿ ಬರೆಯಲಾಗಿತ್ತು. ಎಲ್ಲ ಕೃತ್ಯದ ಹಿಂದೆ ಭಯೋತ್ಪಾದನಾ ಚಟುವಟಿಕೆ ಇದೆ ಅನ್ನಿಸುತ್ತಿದೆ. ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಎಲ್ಲದಕ್ಕೂ ಉತ್ತರ ನೀಡಲು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದರು.

    ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಉತ್ತಮ ಪೂರ್ವತಯಾರಿ ಮಾಡಿಕೊಂಡಿತ್ತು. ಬಿಜೆಪಿ ಹಮ್ಮಿಕೊಂಡ ಕುಟುಂಬ ಮಿಲನ, ಪಂಚರತ್ನ ಯೋಜನೆಗಳು ಯಶಸ್ವಿಯಾಗಿವೆ. ನಮ್ಮ ಕಾರ್ಯಕರ್ತರಿಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ. ರಾಜ್ಯಾದ್ಯಂತ ಬಿಜೆಪಿ ಪರ ಒಲವು ಕಂಡುಬರುತ್ತಿದೆ. ಎರಡೂ ಹಂತದ ಚುನಾವಣೆಯಲ್ಲಿ ಉತ್ತಮ ಶೇಕಡಾವಾರು ಮತದಾನ ಆಗಿದೆ ಎಂದರು.

    ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳಿಗೆ ಕೊರತೆಯಾಗಿತ್ತು. ಮತಗಟ್ಟೆಯಲ್ಲಿ ಕೆಲಸ ಮಾಡಲು ಕಾರ್ಯಕರ್ತರೇ ಇರಲಿಲ್ಲ. ಸದ್ಯ ಕಾಂಗ್ರೆಸ್ ಮುಳುಗುವ ಹಡಗು ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಕ್ಸಿಜನ್‍ನಲ್ಲಿದೆ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

  • ಚುನಾವಣೆಗೂ ಮುನ್ನ ಆಪರೇಷನ್‌ ಕಮಲ – ಬಿಜೆಪಿ ಸೇರಿದ ಕೈ ಅಭ್ಯರ್ಥಿ

    ಚುನಾವಣೆಗೂ ಮುನ್ನ ಆಪರೇಷನ್‌ ಕಮಲ – ಬಿಜೆಪಿ ಸೇರಿದ ಕೈ ಅಭ್ಯರ್ಥಿ

    ಮಂಗಳೂರು: ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣಾ ಕಾವು ಹೆಚ್ಚಾಗಿದ್ದು,ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ. ಇದರ‌ ನಡುವೆ ಕಾಂಗ್ರೆಸ್ ಬೆಂಬಲಿತ ಮಹಿಳಾ ಅಭ್ಯರ್ಥಿ ಚುನಾವಣೆ ನಡೆಯುವ ಮೊದಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಅಚ್ಚರಿಯ ಘಟನೆ ಪುತ್ತೂರಿನಲ್ಲಿ‌ ನಡೆದಿದೆ.

    ಚುನಾವಣೆ ಬಂದಾಗ ಪಕ್ಷಾಂತರ ಆಗೋದು ಮಾಮೂಲಿ‌ ಆದರೂ ಇಲ್ಲಿ ಅಭ್ಯರ್ಥಿಯೇ ಪಕ್ಷಾಂತರ ಆಗುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕ್ಷೇತ್ರಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಅನಿತಾ ಕೂವೆಂಜ ನಾಮಪತ್ರ ಸಲ್ಲಿಸಿದ್ದರು.

    ಕಳೆದ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೀಗ ಕಾಂಗ್ರೆಸ್‌ ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದ ಅನಿತಾ ಚುನಾವಣೆ ನಡೆಯಲು ಇನ್ನೂ ಕೆಲ ದಿನ‌ ಬಾಕಿ ಇರುವಾಗಲೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿ ಕಾಂಗ್ರೆಸ್‌ ನಾಯಕರಿಗೆ ಶಾಕ್‌ ಕೊಟ್ಟಿದ್ದಾರೆ.

    ಇಂದು ಬಿಜೆಪಿಯ ಪುತ್ತೂರು ಕಚೇರಿಯಲ್ಲಿ ಕಾಣಿಸಿಕೊಂಡ ಅನಿತಾರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಪಕ್ಷದ ಧ್ವಜ ನೀಡುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.

  • 2 ಹಂತದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ – ಯಾವ ದಿನಾಂಕ ಏನು?

    2 ಹಂತದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ – ಯಾವ ದಿನಾಂಕ ಏನು?

    – ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ
    – ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ

    ಬೆಂಗಳೂರು: ಉಪಚುನಾವಣೆ ಮುಗಿದ ಬೆನ್ನಲ್ಲೇ ಲೋಕಲ್‌ ಫೈಟ್‌ಗೆ ದಿನಾಂಕ ನಿಗದಿಯಾಗಿದೆ.  ಡಿಸೆಂಬರ್‌ನಲ್ಲಿ 2 ಹಂತದಲ್ಲಿ ಗ್ರಾಮಪಂಚಾಯತ್‌ ಚುನಾವಣೆ ನಡೆಯಲಿದ್ದು, ಡಿ. 30 ರಂದು ಮತ ಎಣಿಕೆ ನಡೆಯಲಿದೆ.

    ಇಂದು ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿತು. ಒಟ್ಟು  5,762 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಡಿ.22 ರಂದು ಮೊದಲ ಹಂತದ ಚುನಾವಣೆ ನಡೆದರೆ ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

     

     

    ಮೊದಲ ಹಂತದಲ್ಲಿ 113 ತಾಲ್ಲೂಕುಗಳ 2,930 ಗ್ರಾಮ ಪಂಚಾಯತ್‌ಗಳು ಹಾಗೂ ಎರಡನೇ ಹಂತದಲ್ಲಿ 113 ತಾಲ್ಲೂಕುಗಳ 2,832 ಗ್ರಾಮ ಪಂಚಾಯಿತ್‌ಗಳಿಗೆ ಚುನಾವಣೆ ನಡೆಯಲಿದೆ.

     

    ರಾಜ್ಯದ 6,006 ಗ್ರಾಮ ಪಂಚಾಯತಿಗಳ ಪೈಕಿ ಒಟ್ಟು 5,762 ಗ್ರಾಮ ಪಂಚಾಯತ್‌ಗಳ ಒಟ್ಟು 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾ.ಪಂ ಚುನಾವಣೆಗೆ ಒಟ್ಟು 11,949 ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.

     

     

     

    ಒಟ್ಟು ಮತದಾರರ ಸಂಖ್ಯೆ 2,96,15,048 ಇದ್ದು, ಒಟ್ಟು 45,125 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತಗಟ್ಟೆಗೆ ಬರುವ ಮತದಾರರಿಗೆ ಮಾಸ್ಕ್ ಧರಿಸುವುದನ್ನು  ಕಡ್ಡಾಯ ಮಾಡಲಾಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನೂಕು ನುಗ್ಗಲು ತಪ್ಪಿಸಲು ಒಂದು ಮತಗಟ್ಟೆಯಲ್ಲಿ ಗರಿಷ್ಠ ಒಂದು ಸಾವಿರ ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗಿದೆ.

     

     

    ಯಾವ ದಿನ ಏನು?
    ಮೊದಲ ಹಂತದ ‌ಮತದಾನ ಡಿ. 22ರಂದು ನಡೆಯಲಿದ್ದು ಅಧಿಸೂಚನೆ  ಡಿ. 7 ರಂದು ಪ್ರಕಟವಾಗಲಿದೆ. ಡಿ.11ರಂದು ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು. ಡಿ.14ರಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ.

    ಎರಡನೇ ಹಂತದ ಚುನಾವಣೆ  ಡಿ.27 ರಂದು ನಡೆಯಲಿದ್ದು ಡಿ.11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಡಿ. 19 ರಂದು ನಾಮಪತ್ರ ಪಡೆಯಲು ಕೊನೆ ದಿನಾಂಕವಾಗಿದೆ.

    ಬೀದರ್ ನಲ್ಲಿ ಮಾತ್ರ ಇವಿಎಂ ಮೂಲಕ ಮತದಾನ ನಡೆದರೆ,  ಬೇರೆ ಜಿಲ್ಲೆಗಳಲ್ಲಿ  ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ

  • ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

    ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

    ತಿರುನಂತಪುರಂ: ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನಿಂದಾಗಿ ಮಗುವನ್ನು ಕಳೆದುಕೊಂಡಿದ್ದ ಮಹಿಳೆ ಈಗ ಕೇರಳ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

    ಜ್ಯೋತ್ಸ್ನಾ ಜೋಸ್‌ 2018ರ ಫೆಬ್ರವರಿಯಲ್ಲಿ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದರು. ಈ ಸಮಯದಲ್ಲಿ ಗಲಾಟೆ ಪ್ರಕರಣದಲ್ಲಿ ಸಿಪಿಎಂ ಮುಖಂಡ ಥಾಂಬೆ ಹೊಟ್ಟೆಯ ಮೇಲೆ ಒದ್ದಿದ್ದ. ಈತನ ಕೃತ್ಯದಿಂದ ಜ್ಯೋತ್ಸ್ನಾ ಅವರಿಗೆ ಗರ್ಭಪಾತವಾಗಿತ್ತು. ಈಗ ಇವರು ಕಲ್ಲಿಕೋಟೆಯ ಬಾಲುಸ್ಸೆರಿ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

    ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರು, ಸಿಪಿಎಂ ಆಡಳಿತಕ್ಕೆ ಕೊನೆ ಹಾಡಲು ಜ್ಯೋತ್ಸ್ನಾ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

     

    ಅಂದು ಏನಾಗಿತ್ತು?
    ಜ್ಯೋತ್ಸ್ನಾ ಜೋಸ್‌ ಪತಿ ಮತ್ತು ಪಕ್ಕದ ಮನೆಯ ಪುರುಷನೋರ್ವನ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಆಗ ಇನ್ನಿಬ್ಬರು ಪುರುಷರು ಅಲ್ಲಿಗೆ ಬಂದು ಹಲ್ಲೆ ನಡೆಸಿದ್ದರು. ಈ ವೇಳೆ ತಡೆಯಲು ಬಂದ ಜ್ಯೋತ್ಸ್ನಾ ಮೇಲೆ ಪುರುಷರಲ್ಲಿ ಒಬ್ಬನಾದ ಸ್ಥಳೀಯ ಸಿಪಿಎಂ ನಾಯಕ ಥಾಂಬೆ ಹೊಟ್ಟೆಗೆ ಒದ್ದಿದ್ದ.

    ಪರಿಣಾಮ ಜ್ಯೋತ್ಸ್ನಾಗೆ ಸ್ಥಳದಲ್ಲೇ ರಕ್ತಸ್ರಾವ ಆರಂಭವಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜ್ಯೋತ್ಸ್ನಾ ಅವರ ಆರೋಗ್ಯ ಗಂಭೀರವಾಗಿದ್ದ ಕಾರಣ ವೈದ್ಯರು ಅನಿವಾರ್ಯವಾಗಿ ಗರ್ಭಪಾತ ಮಾಡಿದ್ದರು.

    ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಜ್ಯೋತ್ಸ್ನಾ ಕುಟುಂಬದವರು ಅಂದು ಆರೋಪಿಸಿದ್ದರು.

  • ನಳಿನ್ ಕುಮಾರ್ ಕಟೀಲ್ ಬೆರಳು ಕಚ್ಚಿದ ಕೃಷ್ಣಮಠದ ಗೋವು

    ನಳಿನ್ ಕುಮಾರ್ ಕಟೀಲ್ ಬೆರಳು ಕಚ್ಚಿದ ಕೃಷ್ಣಮಠದ ಗೋವು

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಹಸುವೊಂದು ನಳಿನ್ ಕುಮಾರ್ ಕಟೀಲ್ ಕೈಗೆ ಕಚ್ಚಿದೆ.

    ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಭೆಗಳನ್ನು ಆರಂಭಿಸಿದೆ. 31 ಜಿಲ್ಲೆಗಳಲ್ಲಿ 62 ಸಮಾವೇಶಗಳನ್ನು ನಡೆಸಲು ಪಕ್ಷ ನಿರ್ಧರಿಸಿದೆ. ಉಡುಪಿ ಕೃಷ್ಣಮಠದಲ್ಲಿ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯ್ತು.

    ಮಠದ ಗೋಶಾಲೆಗೆ ತೆರಳಿದ ಬಿಜೆಪಿ ನಾಯಕರು ಗೋವುಗಳಿಗೆ ಪೂಜೆ ಸಲ್ಲಿಸಿದರು ಹಾರ, ಶಾಲು ಸಲ್ಲಿಸಿದರು. ಗೋವಿಗೆ ಬಾಳೆಹಣ್ಣು ತಿನ್ನಿಸಿದ ನಳಿನ್ ಕುಮಾರ್ ಕಟೀಲ್ ಅವರ ಕೈಯನ್ನು ಹಸು ಕಚ್ಚಿದ ಘಟನೆ ನಡೆಯಿತು. ಒಮ್ಮೆ ನೋವಾದರೂ ನಗುತ್ತ ಮುಂದಕ್ಕೆ ಸಾಗಿದ ಕಟೀಲ್ ಹತ್ತಾರು ಗೋವುಗಳಿಗೆ ಹಣ್ಣು ನೀಡಿದರು. ಕುಂದಾಪುರದಲ್ಲಿ ಮತ್ತು ಉಡುಪಿಯಲ್ಲಿ ಇಂದು ಎರಡು ಸಮಾವೇಶಗಳು ನಡೆಯಲಿದೆ.

    ಡಿಸಿಎಂ ಅಶ್ವತ್ಥನಾರಾಯಣ, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ ಮೊದಲು ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗೌರವ ಸಲ್ಲಿಕೆ ಮಾಡಿದರು. ನಂತರ ಕೆಲ ಕಾಲ ಮಾತುಕತೆ ನಡೆಸಿ ಶ್ರೀಗಳ ಆಶೀರ್ವಾದವನ್ನು ಪಡೆದರು. ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.