Tag: ಗ್ರಾಮೀಣ ಭಾರತ

  • ಕೆಲವರು ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣದ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ:  ಮೋದಿ

    ಕೆಲವರು ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣದ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ: ಮೋದಿ

    – ಗ್ರಾಮೀಣ ಭಾರತ ಉತ್ಸವಕ್ಕೆ ಚಾಲನೆ

    ನವದೆಹಲಿ: ಜಾತಿ ರಾಜಕಾರಣದ ಹೆಸರಿನಲ್ಲಿ ಕೆಲವರು ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ದೇಶದ ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಮೋದಿ ಕರೆ ನೀಡಿದ್ದಾರೆ.

    ಯಾವುದೇ ಹೆಸರನ್ನು ಉಲ್ಲೇಖಿಸದ ಮೋದಿ ಜಾತಿ ರಾಜಕಾರಣದ ವಿಷವನ್ನು ಹರಡುವ ಮೂಲಕ ಕೆಲವು ಜನರು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಗ್ರಾಮಗಳ ಶಾಂತಿ ಸೌಹಾರ್ದತೆಯ ಪರಂಪರೆಯನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

    ದೆಹಲಿ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಗ್ರಾಮೀಣ ಭಾರತ ಉತ್ಸವ (Grameen Bharat Mahotsav) 2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾರತ ಮಹೋತ್ಸವದ ಭವ್ಯವಾದ ಸಂಘಟನೆಯು ಭಾರತದ ಅಭಿವೃದ್ಧಿ ಪಯಣವನ್ನು ತೋರಿಸುತ್ತಿದೆ. ಇದನ್ನು ಆಯೋಜಿಸಿದ್ದಕ್ಕಾಗಿ ನಬಾರ್ಡ್ ಮತ್ತು ಇತರ ಪಾಲುದಾರರಿಗೆ ಅಭಿನಂದನೆಗಳು ಎಂದು ತಿಳಿಸಿದರು.

    ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಹಳ್ಳಿಯ ಪ್ರತಿಯೊಂದು ವಿಭಾಗವನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ನೀತಿಗಳನ್ನು ರೂಪಿಸುವುದು ಅವಶ್ಯಕ. ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಈ ಕೆಲಸ ಮಾಡುತ್ತಿದೆ. ಸಾವಿರಾರು ಗ್ರಾಮಗಳಲ್ಲಿರುವ ಲಕ್ಷಾಂತರ ಮನೆಗಳಿಗೆ ಶುದ್ಧ ಕುಡಿಯುವ ನೀರು (Drinking Water) ದೊರೆಯುವಂತೆ ಮಾಡಿದೆ, 1.5 ಲಕ್ಷ ಆಯುಷ್ಮಾನ್ (Ayushman) ಆರೋಗ್ಯ ಕೇಂದ್ರಗಳಲ್ಲಿ ಜನರು ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಉತ್ತಮ ವೈದ್ಯರಿಗೆ ಹಳ್ಳಿಗಳಿಗೆ ಸಂಪರ್ಕಿಸಿದೆ ಎಂದರು.

    ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಮೂಲಕ ದೇಶದ ರೈತರಿಗೆ 3 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ, ಕಳೆದ 10 ವರ್ಷಗಳಲ್ಲಿ ಕೃಷಿ ಸಾಲ ಮೂರುವರೆ ಪಟ್ಟು ಹೆಚ್ಚಾಗಿದೆ. ಈಗ ಜಾನುವಾರು ಮತ್ತು ಮೀನು ಸಾಕಣೆದಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಬೆಳೆಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಿದ್ದೇವೆ. ಗ್ರಾಮದ ಜನರಿಗೆ ಆಸ್ತಿ ದಾಖಲೆಗಳನ್ನು ನೀಡಲಾಗುತ್ತಿದೆ. ಮುದ್ರಾ ಯೋಜನೆ, ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾದಂತಹ ಯೋಜನೆಗಳ ಮೂಲಕ ಹಳ್ಳಿಯ ಯುವಕರಿಗೆ ಸಹಾಯ ಮಾಡಲಾಗುತ್ತಿದೆ. ರೈತರು ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡಲು 2021 ರಲ್ಲಿ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗಿದೆ ಎಂದರು.

    ಗ್ರಾಮೀಣ ಭಾರತ ಮಹೋತ್ಸವ ಜನವರಿ 4 ರಿಂದ ಜನವರಿ 9 ರವರೆಗೆ ನಡೆಯುತ್ತಿದೆ. ‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಚೇತರಿಸಿಕೊಳ್ಳುವ ಗ್ರಾಮೀಣ ಭಾರತವನ್ನು ನಿರ್ಮಿಸುವುದು 2047 ವಿಷಯದ ಆಧಾರದ ಮೇಲೆ ಉತ್ಸವವು ಗ್ರಾಮೀಣ ಭಾರತದ ಉದ್ಯಮಶೀಲತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುತ್ತದೆ.

    ಗ್ರಾಮೀಣ ಮೂಲಸೌಕರ್ಯವನ್ನು ಹೆಚ್ಚಿಸುವ, ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವ ಮತ್ತು ಗ್ರಾಮೀಣ ಸಮುದಾಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಹೋತ್ಸವವು ವಿವಿಧ ಚರ್ಚೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಉದ್ಯಮಶೀಲತೆಯ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

     

  • ಇಂದಿನಿಂದ 8 ದಿನಗಳ ಗ್ರಾಮಗಳೆಡೆಗೆ ನಡಿಗೆ ಆರಂಭ

    ಇಂದಿನಿಂದ 8 ದಿನಗಳ ಗ್ರಾಮಗಳೆಡೆಗೆ ನಡಿಗೆ ಆರಂಭ

    ಮೈಸೂರು: ಜಿಲ್ಲೆಯ ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್‍ನಿಂದ ಇವತ್ತಿನಿಂದ ಡಿಸೆಂಬರ್ 29ರವರೆಗೆ ನಮ್ಮೊಳಗಿನ ನಡಿಗೆ ಎಂಬ ಗ್ರಾಮೀಣ ಭಾರತ ನಡಿಗೆ ಶುರುವಾಗಿದೆ.

    ಸಂಸ್ಥೆಯ ಡಾ. ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ನಡಿಗೆ ಶುರುವಾಗಿದ್ದು, ಮೈಸೂರು ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಈ ನಡಿಗೆ ನಡೆಯಲಿದೆ. 8 ದಿನಗಳಲ್ಲಿ ಒಟ್ಟು 114 ಕಿ.ಮೀ. ನಡಿಗೆ ಸಾಗಲಿದೆ. ಗ್ರಾಮೀಣ ಜನರೊಂದಿಗೆ ಮಾತಕತೆ, ಗ್ರಾಮಗಳ ಸ್ಥಿತಿ, ಜನರ ಮನಸ್ಥಿತಿ ಅರಿಯುವುದು ಈ ನಡಿಗೆಯ ಉದ್ದೇಶ. ಈ ನಡಿಗೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳ, ದೆಹಲಿ ರಾಜ್ಯಗಳ ಜನರು ಈ ನಡಿಗೆಯಲ್ಲಿ ಭಾಗವಹಿಸಿದ್ದಾರೆ.

    ನಡಿಗೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರು ಸಂಸ್ಥೆಗೆ 10 ಸಾವಿರ ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣವನ್ನು ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಂಸ್ಥೆಗಳಿಗೆ ನೀಡಲಿದೆ. ಈ ನಡಿಗೆಗೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ನೀಡಿದರು. ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಎನ್‍ಆರ್ ಫೌಂಡೇಷನ್ ಅಧ್ಯಕ್ಷ ಗುರು ಉಪಸ್ಥಿತರಿದ್ದರು.