Tag: ಗ್ರಾಮೀಣಾಭಿವೃದ್ಧಿ ಸಚಿವ

  • ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    – ಡಿಸಿಎಂ ಆಸೆ ಹೊಂದಿರುವ ಅನರ್ಹ ಶಾಸಕರಿಗೆ ಈಶ್ವರಪ್ಪ ಟಾಂಗ್

    ಬೆಂಗಳೂರು: ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಡಿ.9 ರಂದು ಪ್ರಕಟವಾಗಲಿದ್ದು, ಆ ಬಳಿಕ ರಾಜ್ಯದಲ್ಲಿರುವ ಅತಂತ್ರ ರಾಜಕಾರಣ ಪರಿಸ್ಥಿತಿ ದೂರವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಮೂರುವರೇ ವರ್ಷ ಬಿಜೆಪಿ ಸರ್ಕಾರ ಇರುತ್ತೆ. ಇದು ಜನರ ಅಭಿಪ್ರಾಯ ಕೂಡ ಆಗಿತ್ತು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ. ಉಪಚುನಾವಣೆಯ ನಡೆದ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅನರ್ಹರ ಶಾಸಕರು ರಾಜೀನಾಮೆ ಕೊಡಲಿಲ್ಲ ಎಂದಿದ್ದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಅವರ ಋಣ ತೀರಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ಅವರಿಗೆ ನಾವು ಅನ್ಯಾಯ ಮಾಡುವುದಿಲ್ಲ. ಗೆದ್ದ ಎಲ್ಲರನ್ನು ಮಂತ್ರಿ ಮಾಡುತ್ತೇವೆ. ಆದರೆ ಸೋತವರಿಗೆ ಏನು ಇಲ್ಲ. ಈಗಾಗಲೇ ಈ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದು, ಎಂಎಲ್‍ಸಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದೇವು. ಆದರೆ ಅವರು ಚುನಾವಣೆ ಎದುರಿಸಿ ಮಂತ್ರಿಯಾಗುತ್ತೇವೆ ಎಂದರು. ಹೀಗಾಗಿ ಗೆದ್ದರೆ ಮಾತ್ರ ಅವರನ್ನು ಮಂತ್ರಿ ಮಾಡುತ್ತೇವೆ ಎಂದರು.

    ಬೆಳಗಾವಿಯ ಎಲ್ಲಾ ಅನರ್ಹರನ್ನು ಮಂತ್ರಿ ಮಾಡುತ್ತೇವೆ. ಈಗಾಗಲೇ ಲಕ್ಷ್ಮಣ್ ಸವದಿ ಅವರ ವಿಚಾರ ಸ್ಪಷ್ಟವಾಗಿದ್ದು, ಅವರು ಡಿಸಿಎಂ ಆಗಿಯೇ ಮುಂದುವರಿಯುತ್ತಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಅನರ್ಹ ಶಾಸಕರನ್ನು ಡಿಸಿಎಂ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಆಗಲು ರಾಜಕಾರಣದಲ್ಲಿ ಯಾರಿಗೆ ಇಷ್ಟ ಇರಲ್ಲ ಹೇಳಿ? ವಯಸ್ಸಿಗೆ ಬಂದಂತವರು ಇದ್ದಕ್ಕಿದ್ದಂತೆ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ. ಆದರೆ ಐಶ್ವರ್ಯ ರೈ ಇರುವುದು ಒಬ್ಬರೇ ತಾನೇ. ಇದರಂತೆ ಡಿಸಿಎಂ ಸ್ಥಾನಕ್ಕೆ ಹಲವರು ಅಪೇಕ್ಷೆ ಪಡುತ್ತಾರೆ, ಆದರೆ ಅವರಿಗೆ ಅವಕಾಶ ಆಗಬೇಕಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹರಿಗೆ ಏನೇನು ಹುದ್ದೆ ಕೊಡುತ್ತಾರೆ ನನಗೆ ಗೊತ್ತಿಲ್ಲ. ಅದನ್ನು ಸಿಎಂ ಬಿಎಸ್‍ವೈ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಕನಸ್ಸು ಕಾಣುತ್ತಿರುವ ಗೋಕಾಕ್ ಸಾಹುಕಾರ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಅವರಿಗೆ ಈಶ್ವರಪ್ಪ ಅವರು ಪರೋಕ್ಷ ಟಾಂಗ್ ನೀಡಿದರು.

    ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಕೈಗೊಂಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಚಿವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವಿಶೇಷವಾದ ಯೋಜನೆ ರೂಪಿಸಲಾಗಿದೆ. ಪ್ರತಿ ಪಂಚಾಯಿತಿಗೂ ಈಗಾಗಲೇ ಕೇಂದ್ರ ಸರ್ಕಾರದಿಂದ 20 ಲಕ್ಷ ಬಿಡುಗಡೆ ಮಾಡಿದ್ದಾರೆ. 6,021 ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಜಾರಿಗೆ ತಂದು, ಕಸ ಇಲ್ಲದೆ ರೀತಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಮತ್ತೊಂದು ಯೋಜನೆ ಮೂಳಕ ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ ಕಾರ್ಯಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದರು.

  • ಖರ್ಗೆರನ್ನು ಕರ್ನಾಟಕಕ್ಕೆ ಅಥವಾ ಬೇರೆ ರಾಜ್ಯಕ್ಕೆ ಸಿಎಂ ಮಾಡ್ತಾರಾ?: ಕೆಎಸ್ ಈಶ್ವರಪ್ಪ

    ಖರ್ಗೆರನ್ನು ಕರ್ನಾಟಕಕ್ಕೆ ಅಥವಾ ಬೇರೆ ರಾಜ್ಯಕ್ಕೆ ಸಿಎಂ ಮಾಡ್ತಾರಾ?: ಕೆಎಸ್ ಈಶ್ವರಪ್ಪ

    ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಮುಂದಿನ ಮೂರುವರೆ ವರ್ಷ ಬಿಎಸ್ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿ ಬಿಎಸ್‍ವೈ ಇದ್ದಾರೆ. ಸಿಎಂ ಸ್ಥಾನದಲ್ಲಿ ಒಬ್ಬರು ಇರುವಾಗಲೇ ಇನ್ನೋಬ್ಬರನ್ನು ವಿರೋಧ ಪಕ್ಷಗಳು ಸಿಎಂ ಮಾಡಲು ಹೊರಟಿವೆ ಎಂದು ವ್ಯಂಗ್ಯವಾಡಿದರು.

    ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡೋದಕ್ಕೆ ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತಿದ್ದೇವೆ ಎಂಬ ಮಾತನ್ನು ನಾನು ಗಮನಿಸಿದೆ. ಆದರೆ ಖರ್ಗೆಯವರನ್ನು ಕರ್ನಾಟಕಕ್ಕೆ ಸಿಎಂ ಮಾಡ್ತಾರಾ ಅಥವಾ ಬೇರೆ ರಾಜ್ಯಕ್ಕೆ ಸಿಎಂ ಮಾಡ್ತಾರಾ ಎಂದು ತಿಳಿಯುತ್ತಿಲ್ಲ ಎಂದರು.

    ರಾಜ್ಯದಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ. ಸುಮ್ಮನೆ ದಲಿತ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಖರ್ಗೆಯವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಜಾತಿ ಹೆಸರೇಳಿ ರಾಜಕಾರಣ ಮಾಡಲಿಲ್ಲ ಎಂದರೆ ಅವರಿಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ಸಿಎಂ ಈಡಿ ರಾಜ್ಯದ ಸಿಎಂ ಯಾವುದೇ ಜಾತಿಗೆ ಸೀಮಿತವಾದ ಸ್ಥಾನ ಅಲ್ಲ. ಆದರೆ ಕಾಂಗ್ರೆಸ್ ನವರು ಲಿಂಗಾಯ್ತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ, ದಲಿತ ಸಿಎಂ ಎಂದು ಜಾತಿ ಎಳೆದು ತರುತ್ತಿದ್ದಾರೆ ಇದು ಸರಿಯಲ್ಲ. ಚುನಾವಣೆ ನಂತರ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.

    ಚುನಾವಣಾ ಫಲಿತಾಂಶದ ನಂತರ ಇನ್ನಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ. ಆದರೆ ನಾವೇನು ಆಪರೇಷನ್ ಕಮಲ ಮಾಡೋದಿಲ್ಲ. ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಸೀಮಿತ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಹೇಳಿದ್ದರು. ಆದರೆ ಬಿಜೆಪಿ 25 ಸ್ಥಾನ ಪಡೆಯಿತು. ಲೋಕಸಭಾ ಫಲಿತಾಂಶ ಉಪ ಚುನಾವಣೆಯಲ್ಲಿ ಇದು ಪುನರವರ್ತನೆಯಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೊಂದು ಸ್ಥಾನ ಪಡೆದರು ಆಶ್ಚರ್ಯವಿಲ್ಲ, ಬಿಜೆಪಿಗೆ ಹೆಚ್ಚಿನ ಸ್ಥಾನ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಾಡಗೀತೆ ವೇಳೆ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಫುಲ್ ಬ್ಯುಸಿ

    ನಾಡಗೀತೆ ವೇಳೆ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಫುಲ್ ಬ್ಯುಸಿ

    ತುಮಕೂರು: ಗ್ರಾಮೀಣಾಭಿವೃದ್ಧಿ ಸಚಿವರು ನಾಡಗೀತೆಗೆ ಅಗೌರವ ತೋರಿದ ಘಟನೆ ತುಮಕೂರಿನ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.

    ಸಭೆಯ ಆರಂಭದ ಮುನ್ನ ಸಂಪ್ರದಾಯದಂತೆ ನಾಡಗೀತೆ ಹಾಡಲಾಯಿತು. ಆದರೆ ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡರು ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ನಾಡಗೀತೆ ಆರಂಭದಿಂದ ಕೊನೆಯವರೆಗೂ ಮೊಬೈಲ್ ವೀಕ್ಷಣೆಯಲ್ಲಿ ಸಚಿವರು ಬ್ಯುಸಿಯಾಗಿದ್ದರು.

    ಸಚಿವರ ಈ ವರ್ತನೆ ಕೆಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನಾಡಗೀತೆಗೆ ಗೌರವ ನೀಡದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಕೃಷ್ಣ ಬೈರೇಗೌಡ ಕ್ಷೇತ್ರದಲ್ಲಿ ಸಿಂಗಾಪುರ ಕೆರೆ ಮುಚ್ಚಿ ರಸ್ತೆ ನಿರ್ಮಾಣ!

    ಸಚಿವ ಕೃಷ್ಣ ಬೈರೇಗೌಡ ಕ್ಷೇತ್ರದಲ್ಲಿ ಸಿಂಗಾಪುರ ಕೆರೆ ಮುಚ್ಚಿ ರಸ್ತೆ ನಿರ್ಮಾಣ!

    ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ, ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಮೇಲೆ ಕೆರೆಯನ್ನು ಒತ್ತುವರಿ ಆರೋಪ ಕೇಳಿಬಂದಿದೆ.

    ಬ್ಯಾಟರಾಯಣಪುರ ಮತಕ್ಷೇತ್ರದ ಸಿಂಗಾಪುರ ಕೆರೆ ಸಮೀಪದಲ್ಲಿಯೇ ಹೊಸ ಅಪಾರ್ಟ್ ಮೆಂಟ್ ನಿರ್ಮಾಣವಾಗುತ್ತಿದ್ದು, ಈ ಕಾರಣಕ್ಕೆ ಕೆರೆಯನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಾಣವಾಗುತ್ತಿದೆ. ಸದ್ಯ ಸಿಂಗಾಪುರ ಕೆರೆಯ ಎರಡು ಬದಿಗಳಲ್ಲಿ 25 ಅಡಿ ಮಣ್ಣಿನ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೆರೆ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆದು, ಅಭಿವೃದ್ಧಿ ಕಾರ್ಯದಲ್ಲಿ ಕೆರೆ ಒತ್ತುವರಿ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿ ಮಾಡಿತ್ತು. ಹೀಗಾಗಿ ಈಗೆ ಕೆರೆ ಒತ್ತುವರಿಯಾಗಿ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಗೆ ಸಚಿವರ ಸಹಕಾರ ಇದೆ ಎನ್ನುವ ಆರೋಪ ಕೇಳಿಬಂದಿದೆ.

    ಸರ್ಕಾರದಿಂದ ಕಾಯ್ದೆ ತಿದ್ದುಪಡಿ!
    ರಾಜ್ಯದ ಕೆರೆಗಳ ಮೀಸಲು ಪ್ರದೇಶದ 30 ಮೀ. ವ್ಯಾಪ್ತಿಯ ಒಳಗೂ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ನೀಡಬಹುದು ಎನ್ನುವ ಕಾಯ್ದೆ ತಿದ್ದುಪಡಿಗೆ 2018ರ ಪ್ರಾರಂಭದ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿತ್ತು. ಹೀಗಾಗಿ ‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೆಲವು ನಿಯಮಗಳು-2018’ ಮಸೂದೆಗೆ ಫೆಬ್ರವರಿಯ ಅಧಿವೇಶನಲ್ಲಿ ಅನುಮೋದನೆ ನೀಡಲಾಗಿತ್ತು. ಅನುಮೋದನೆ ಪರಿಶೀಲಿಸಿ ರಾಜ್ಯಪಾಲರು ಕೂಡ ಇದಕ್ಕೆ ಸಹಿ ಹಾಕಿದ್ದು, ಕಾಯ್ದೆ ರೂಪ ಪಡೆದಿದೆ. ಮಾರ್ಚ್ 26ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಮೀಸಲು ಪ್ರದೇಶದ 30 ಮೀ. ಒಳಗೆ ರಸ್ತೆ, ಸೇತುವೆ ಹಾಗೂ ಇತರೆ ಕಾಮಗಾರಿಗಳನ್ನು ನಡೆಸಬಹುದು. ಇಂತಹ ಕಾಮಗಾರಿಗಳಿಂದ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಂಡು ಪ್ರಾಧಿಕಾರ ಅನುಮತಿ ನೀಡಬಹುದು ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

    ಎನ್‍ಜಿಟಿ ಹೇಳಿದ್ದು ಏನು?
    2016 ಮೇ 4 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ), “ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಬಾರದು ಎಂದು ಆದೇಶ ಹೊರಡಿಸಿತ್ತು.

  • 3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    ಗದಗ: ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿರೋ ರಸ್ತೆ ಒಂದೆಡೆಯಾದ್ರೆ ವಾಹನ ಓಡಿಸಲು ಪ್ರಯಾಸ ಪಡ್ತಿರೋ ಸವಾರರು ಇನ್ನೊಂದೆಡೆ. ಪಂಕ್ಚರ್ ಆದ ಬೈಕನ್ನು ತಳ್ತಿರೋ ಸವಾರ ಮತ್ತೊಂದೆಡೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಕ್ಷೇತ್ರದ ರಸ್ತೆಯ ಪರಸ್ಥಿತಿ.

    ಗದಗದಿಂದ 5 ಕಿಲೋಮೀಟರ್ ದೂರದಲ್ಲಿರೋ ಸಂಭಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಿಎಂಜಿಎಸ್‍ವೈ ಇಲಾಖೆ ಉಸ್ತುವಾರಿಯಲ್ಲಿ 4 ಕೋಟಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಯೋಜನೆ ಪ್ರಕಾರ ಇದು 2016 ಜುಲೈ 3ರಂದು ಮುಗಿಯಬೇಕಾಗಿತ್ತು. ಆದ್ರೆ ಮೂರು ತಿಂಗಳ ಹಿಂದಷ್ಟೆ ಮುಕ್ತಾಯವಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಓಡಾಡ್ತಾರೆ. ಆದ್ರೆ ಕೆಲಸ ಮುಗಿದ ಮೂರೇ ತಿಂಗಳಿಗೆ ಈ ರಸ್ತೆ ತನ್ನ ನಿಜ ರೂಪವನ್ನು ತೋರಿಸಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

    ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕಾಮಗಾರಿ ಬಗ್ಗೆ ದೂರುಗಳಿವೆ. ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಆಗಿರೋ ತಪ್ಪನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿ ಅಂತಾ ತಿಪ್ಪೇ ಸಾರಿಸುತ್ತಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡೋ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕಾಮಗಾರಿ ನಡೀತಿದ್ರೂ ಸಚಿವರೂ ಸೇರಿದಂತೆ ಯಾರೂ ಇತ್ತ ತಿರುಗಿ ನೋಡದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.