Tag: ಗ್ರಾಮಸ್ಥ

  • ಗ್ರಾಮಸ್ಥರಿಂದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

    ಗ್ರಾಮಸ್ಥರಿಂದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

    ಹಾವೇರಿ: ಸತತವಾಗಿ 17 ವರ್ಷಗಳ ಕಾಲ ದೇಶ ಸೇವೆ ಮುಗಿಸಿ ನಿವೃತ್ತಿಯಾದ ಯೋಧನನ್ನು ಅದ್ಧೂರಿಯಾಗಿ ಮೆರವಣಿಗೆ ನಡೆಸಿ ಗ್ರಾಮಸ್ಥರು ಬರಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೇರೂರು ಗ್ರಾಮದಲ್ಲಿ ನಡೆದಿದೆ.

    ಯೋಧ ಮಹೇಶ್ ಬಣಕಾರ 17 ವರ್ಷಗಳ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ, ಜಮ್ಮುಕಾಶ್ಮೀರ ಸೇರಿದಂತೆ ವಿವಿಧ ಗಡಿಭಾಗದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಇವತ್ತು ನಿವೃತ್ತಿ ಹೊಂದ ಸ್ವ-ಗ್ರಾಮಕ್ಕೆ ಆಗಮಿಸಿದ್ದಾರೆ.

    ಹಾವೇರಿ ನಗರ ಮತ್ತು ಹೇರೂರು ಗ್ರಾಮದಲ್ಲಿ ಯೋಧ ಮಹೇಶವರನ್ನ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ಅಭಿಮಾನಿಗಳು ಹಾಗೂ ದೇಶಾಭಿಮಾನಿಗಳು ಹಾರ ಹಾಗೂ ಸನ್ಮಾನಿಸಿ ಸ್ವಾಗತ ಮಾಡಿಕೊಂಡರು. ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಜಿಲ್ಲೆಯ ಯೋಧನನ್ನ ಆತ್ಮೀಯವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

  • ಸಚಿವ ಪುಟ್ಟರಾಜು, ಗ್ರಾಮಸ್ಥನ ನಡುವೆ ಮಾತಿನ ಚಕಮಕಿ?- ವಿಡಿಯೋ ವೈರಲ್

    ಸಚಿವ ಪುಟ್ಟರಾಜು, ಗ್ರಾಮಸ್ಥನ ನಡುವೆ ಮಾತಿನ ಚಕಮಕಿ?- ವಿಡಿಯೋ ವೈರಲ್

    ಮಂಡ್ಯ: ಜಿಲ್ಲೆಯ ಸೋಲಿನ ಸಿಟ್ಟು ಜೆಡಿಎಸ್ ನಾಯಕರಲ್ಲಿ ಇನ್ನೂ ಆರಿಲ್ಲ. ಸಚಿವ ಡಿ.ಸಿ ತಮ್ಮಣ್ಣ ಬೆನ್ನಲ್ಲೇ ಸಚಿವ ಪುಟ್ಟರಾಜು ಕೂಡ ಸಮಸ್ಯೆ ಹೇಳಿದ ಗ್ರಾಮಸ್ಥನ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ಕೆರೆ ನೀರು ತುಂಬಿಸುವ ವಿಷಯವಾಗಿ ಸಚಿವ ಪುಟ್ಟರಾಜು ಮತ್ತು ಗ್ರಾಮಸ್ಥರೊಬ್ಬರ ನಡುವೆ ನಡೆದಿದೆ ಎನ್ನಲಾದ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಭೆಯೊಂದರಲ್ಲಿ ಭಾಗವಹಿಸಿದ ಸಚಿವ ಪುಟ್ಟರಾಜು ವಿರುದ್ಧ ಗ್ರಾಮಸ್ಥರೊಬ್ಬರು ಕೆರೆಗೆ ನೀರು ತುಂಬಿಸುವ ವಿಚಾರವಾಗಿ ಆಕ್ರೋಶ ಹೊರಹಾಕಿದ್ದಾರೆ. ಸಮಸ್ಯೆ ಕೇಳುವ ಸಲುವಾಗಿಯೇ ನಿಮ್ಮ ಊರಿಗೆ ಬಂದಿದ್ದೇನೆ ಎಂದು ಸಚಿವರು ಹೇಳಿದರೂ ಗ್ರಾಮಸ್ಥ ಮತ್ತೆ ಗರಂ ಆಗಿದ್ದಾರೆ.

    ಇದರಿಂದ ಕೆರಳಿದ ಸಚಿವ ಪುಟ್ಟರಾಜು, ಸಮಸ್ಯೆ ಕೇಳಲು ಬಂದಿದ್ದೇನೆ ಅಂದರೂ ಕೇಳುತ್ತಿಲ್ಲವಲ್ಲ ಯಾಕೆ. ನನ್ನನ್ನು ನಿಮ್ಮ ಊರಿಗೆ ಕರೆಸಿ ಅವಮಾನ ಮಾಡಲು ಹೀಗೆ ಕೂಗಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ಕೂಡ ತಮ್ಮ ಊರಿನ ವ್ಯಕ್ತಿಯನ್ನು ಊರಿಗೆ ಕರೆಸಿದಾಗ ಸಮಸ್ಯೆ ಹೇಳುವುದು ಬಿಟ್ಟು ಈ ರೀತಿ ಕೂಗಾಡಿ ಅವಮಾನ ಮಾಡಬಾರದು ಎಂದು ತಿಳಿ ಹೇಳಿದ್ದಾರೆ.

    ಇಷ್ಟಾದರೂ ಇಬ್ಬರ ನಡುವಿನ ಮಾತಿನ ಚಕಮಕಿ ತಣ್ಣಗಾಗದಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇವಿಷ್ಟು ಘಟನೆಯ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಇಂದು ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದ್ದು ಎಂಬುದು ತಿಳಿದು ಬಂದಿಲ್ಲ.

  • ಚುನಾವಣಾ ಖರ್ಚಿಗೆ ನಿಖಿಲ್‍ಗೆ ಹಣ ನೀಡಿದ ಗ್ರಾಮಸ್ಥ

    ಚುನಾವಣಾ ಖರ್ಚಿಗೆ ನಿಖಿಲ್‍ಗೆ ಹಣ ನೀಡಿದ ಗ್ರಾಮಸ್ಥ

    ಮಂಡ್ಯ: ಚುನಾವಣಾ ಖರ್ಚಿಗಾಗಿ ಕೆ.ಆರ್ ಪೇಟೆಯ ದೊಡ್ಡಕೊಪ್ಪಲು ಗ್ರಾಮಸ್ಥ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹಣ ನೀಡಿದ್ದಾರೆ.

    ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ದೊಡ್ಡ ಕೊಪ್ಪಲು ಗ್ರಾಮದಿಂದ ನಿಖಿಲ್ ಪ್ರಚಾರ ಶುರು ಮಾಡಿದ್ದರು. ಈ ವೇಳೆ ದೊಡ್ಡಕೊಪ್ಪಲು ಗ್ರಾಮಸ್ಥ ಕವರ್‍ನಲ್ಲಿ ಹಣ ಹಾಕಿ ಚುನಾವಣಾ ಖರ್ಚಿಗೆಂದು ನಿಖಿಲ್ ಕೈಗೆ ಹಣ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಬೇಕು ಎಂದು ಆಶೀರ್ವಾದಿಸಿ ಆ ಹಣವನ್ನು ನೀಡಿದ್ದಾರೆ.

    ಈ ಹಿಂದೆ ಚುನಾವಣಾ ಸಮಯದಲ್ಲಿ ಆ ಕ್ಷೇತ್ರದ ಅಭ್ಯರ್ಥಿಗೆ ಜನ ಹಣ ನೀಡುತ್ತಿದ್ದರಂತೆ. ಆದರೆ ಈಗ ದೊಡ್ಡಕೊಪ್ಪಲು ಗ್ರಾಮಸ್ಥ ನೇರವಾಗಿ ನಿಖಿಲ್ ಅವರಿಗೆ ಈ ಹಣ ನೀಡಿ ಆಶೀರ್ವಾದ ಮಾಡಿದ್ದಾರೆ. ಗ್ರಾಮಸ್ಥ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ನಿಖಿಲ್ ಬಹಿರಂಗ ಮಾಡಿಲ್ಲ. ಅವರು ಎಷ್ಟೇ ಹಣ ನೀಡಲಿ, ಅವರು ಪ್ರೀತಿಯಿಂದ ನೀಡಿದ್ದಾರೆ. ಅವರು ಚುನಾವಣಾ ಖರ್ಚಿಗೆಂದು ಹಣ ನೀಡಿದ್ದಾರೆ. ಅವರ ಅಭಿಮಾನದಿಂದ ಮುಂದೆ ಚುನಾವಣೆ ಗೆಲ್ಲಬಹುದು ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.

    ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್ ಶುರು ಮಾಡಿಕೊಂಡಿದ್ದಾರೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಿಖಿಲ್‍ಗೆ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು.

    ಕೆಆರ್ ನಗರ ವಿಧಾನಸಭಾ ಕ್ಷೇತ್ರದ ದೊಡ್ಡಕೊಪ್ಪಲು ಗ್ರಾಮದಿಂದ ನಿಖಿಲ್ ಪ್ರಚಾರ ಶುರು ಮಾಡಿದ್ದಾರೆ. ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ನಿಖಿಲ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರಕ್ಕೆ ಎಐಸಿಸಿ ವಕ್ತಾರೆ ಐಶ್ವರ್ಯ ಮಹಾದೇವ್ ಸಾಥ್ ನೀಡಿದ್ದಾರೆ.

  • ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

    ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

    ಚಿಕ್ಕಮಗಳೂರು: ಜ್ಯೋತಿಷಿಯ ಮಾತು ಕೇಳಿ ಊರು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 50ಕ್ಕೂ ಹೆಚ್ಚು ಕುಟುಂಬಗಳು ಎನ್.ಆರ್.ಪುರಕ್ಕೆ ವಾಪಸ್ ಮರಳಿವೆ.

    ಊರುಬಿಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು, 50 ಕುಟುಂಬಗಳನ್ನು ಮನವೊಲಿಸುವಲ್ಲಿ ಶೃಂಗೇರಿ ಶಾಸಕ ರಾಜೇಗೌಡ ಯಶಸ್ವಿಯಾಗಿದ್ದಾರೆ.

    ಸಭೆಯಲ್ಲಿ ತಾತ್ಕಲಿಕವಾಗಿ ಎನ್‍ಆರ್ ಪುರ ದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಬೇರೆ ಕಡೆ ಜಾಗ ನೀಡುವುದಾಗಿ ಶಾಸಕರು ಹಾಗೂ ತಾಲೂಕು ಆಡಳಿತದಿಂದ ಭರವಸೆ ನೀಡಲಾಗಿದೆ. ಹೀಗಾಗಿ ಶಾಸಕರ ಮಾತಿಗೆ ಬೆಲೆಕೊಟ್ಟು 50 ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ.

    ಇತ್ತೀಚೆಗಷ್ಟೇ ಜ್ಯೋತಿಷಿಯೊಬ್ಬರ ಮಾತು ಕೇಳಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬ ಶಿಗುವಾನಿ ಗ್ರಾಮದಿಂದ ರಾತ್ರೋರಾತ್ರಿ ಹೋಗಿದ್ದರು. 8 ವರ್ಷದಲ್ಲಿ 25 ಜನ ನಿಧನ ಹೊಂದಿದ್ದರು. ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಯ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿತ್ತು. ಕೊನೆ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದ.

    ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಮಾಡಿದ್ದರು. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದರು.