Tag: ಗ್ರಾಮವಾಸ್ತವ್ಯ

  • ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್

    ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್

    ರಾಯಚೂರು: ಗ್ರಾಮ ವಾಸ್ತವ್ಯದಿಂದ ನಮಗೆ ನ್ಯಾಯ ಸಿಗುತ್ತದೆ ಅನ್ನೋ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿ ಮೂಡುತ್ತಿದೆ. ಅಧಿಕಾರಿಗಳು ಇನ್ನಷ್ಟು ಶ್ರಮಪಟ್ಟರೆ ಜನರಿಗೆ ಇನ್ನೂ ಅನುಕೂಲವಾಗುತ್ತದೆ ಅಂತ ಕಂದಾಯ ಸಚಿವ ಆರ್.ಅಶೋಕ್ (Revenue Minister R. Ashok) ಹೇಳಿದ್ದಾರೆ.

    ಜಿಲ್ಲೆಯ ದೇವದುರ್ಗದ (Devadurga) ಅರಕೇರಾದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ಗ್ರಾಮವಾಸ್ತವ್ಯ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ಗ್ರಾಮ ವಾಸ್ತವ್ಯ ವೇಳೆಯೇ ಸೈನಿಕರಿಗೆ ಆರೂವರೆ ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

    ಅರಕೇರಾ ನೂತನ ತಾಲೂಕಿಗೆ ಅಧಿಕಾರಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡುತ್ತೇವೆ. ಇಲ್ಲಿನ ಜನ ಮನೆಗಳನ್ನು ಕೇಳುತ್ತಿದ್ದಾರೆ. ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಈಗ 300 ಮನೆಗಳನ್ನು ನೀಡುತ್ತಿದ್ದೇವೆ. 2 ಸಾವಿರ ಅರ್ಜಿಗಳು ಬಂದಿವೆ ಅವುಗಳನ್ನು ಶೀಘ್ರ ವಿಲೇವಾರಿ ಮಾಡುತ್ತೇವೆ ಎಂದರು.

    ಇದೇ ವೇಳೆ ಸಚಿವ ಸಂಪುಟದ ವಿಸ್ತರಣೆ, ಈ ಭಾಗಕ್ಕೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ನಾನು ಅದರ ಬಗ್ಗೆ ಪ್ರತಿಕ್ರಿಯೆ ಕೊಡುವುದು ಏನೂ ಇಲ್ಲ ಅಂತ ಅಶೋಕ್ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    ರಾಯಚೂರಿಗೆ ಏಮ್ಸ್ ನೀಡುವ ಬಗ್ಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ರಾಯಚೂರನ್ನು ಮಹಾನಗರ ಪಾಲಿಕೆ ಮಾಡಬೇಕಿದೆ. ವಿಮಾನ ನಿಲ್ದಾಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನ ಮೊದಲು ಕಲ್ಪಿಸಬೇಕಿದೆ. ಎಲ್ಲಾ ಅಗತ್ಯ ಸೌಲಭ್ಯಗಳನ್ನ ನೀಡಿದ ಮೇಲೆ ಏಮ್ಸ್‌ಗೆ ಒತ್ತಾಯ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಬೀದರ್‌ನಲ್ಲಿ ಇಂದು ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

    ಬೀದರ್‌ನಲ್ಲಿ ಇಂದು ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

    ಬೀದರ್: ಗಡಿ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಗ್ರಾಮದಲ್ಲಿಂದು ರಾತ್ರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಸಾವಿರಾರು ಜನರ ಅಹವಾಲುಗಳನ್ನು ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಿಕ್ಕೆ ಕಲಾ ತಂಡಗಳು, ಅಲಂಕೃತ ಎತ್ತಿನ ಬಂಡಿ ಸಿದ್ದವಾಗಿವೆ. ಇದನ್ನೂ ಓದಿ: ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಮುಖ ಆರೋಪಿ ಅರೆಸ್ಟ್

    ಜಿಲ್ಲೆಯಾದ್ಯಂತ 25 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆಯಿದೆ. ಆರ್ ಅಶೋಕ್ ಅವರ ಅಷ್ಟೇ ಅಲ್ಲದೇ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸರಿಗಮಪ ಖ್ಯಾತಿಯ ಹನುಮಂತ ಲಂಬಾಣಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತಿದೆ. ಇದನ್ನೂ ಓದಿ: ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

  • ಆರ್.ಅಶೋಕ್ ಗ್ರಾಮ ವಾಸ್ತವ್ಯ- ಎತ್ತಿನ ಗಾಡಿಯಲ್ಲಿ ಸಂಚಾರ

    ಆರ್.ಅಶೋಕ್ ಗ್ರಾಮ ವಾಸ್ತವ್ಯ- ಎತ್ತಿನ ಗಾಡಿಯಲ್ಲಿ ಸಂಚಾರ

    ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ನಡೆಸಿದ್ದು, ಗ್ರಾಮದಲ್ಲಿ ಎತ್ತಿನಗಾಡಿಯಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್‍ಗೆ ಪೂರ್ಣ ಕುಂಭ, ಜಾನಪದ ಕಲಾತಂಡಗಳೊಂದಿಗೆ ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ. ಎತ್ತಿನಗಾಡಿಯಲ್ಲೇ ವಾಸ್ತವ್ಯದ ಸ್ಥಳಕ್ಕೆ ತೆರಳಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವ ಆರ್.ಅಶೋಕ್‍ಗೆ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಶ್ರೀನಿವಾಸ್, ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬುದು ಸಚಿವ ಆರ್.ಅಶೋಕ್ ಕನಸಿನ ಕಾರ್ಯಕ್ರಮವಾಗಿದ್ದು, ಇದನ್ನು ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯಲ್ಲಿ ಉದ್ಘಾಟನೆ ಮಾಡಲಾಯಿತು. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದು, ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ನಡೆಸಲಾಗುತ್ತಿದೆ.

  • ಪತ್ರಕರ್ತರ ಗ್ರಾಮ ವಾಸ್ತವ್ಯ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಉದ್ಘಾಟನೆ

    ಪತ್ರಕರ್ತರ ಗ್ರಾಮ ವಾಸ್ತವ್ಯ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಉದ್ಘಾಟನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ರಕ್ತದಾನ ಶಿಬಿರ ಉದ್ಘಾಟನೆ ನಡೆಯಿತು.

    ಇಂದು ನಡೆಯುತ್ತಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆಗೊಂಡಿತು. ದಕಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಉದ್ಘಾಟಿಸಿದರು. ಇದೇ ಸಂದರ್ಭ ವಿವಿಧ ಇಲಾಖೆಗಳ ಸ್ಟಾಲ್ ಗಳನ್ನು ಉದ್ಘಾಟಿಸಲಾಯಿತು.

    ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಹಾಗೂ ಇತರ ಅತಿಥಿಗಳನ್ನು ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

  • ಪತ್ರಕರ್ತರ ಗ್ರಾಮ ವಾಸ್ತವ್ಯ ಪೂರ್ವ ತಯಾರಿ ಸಭೆ

    ಪತ್ರಕರ್ತರ ಗ್ರಾಮ ವಾಸ್ತವ್ಯ ಪೂರ್ವ ತಯಾರಿ ಸಭೆ

    ಮಂಗಳೂರು: ಸರಕಾರಿ ಕಾರ್ಯಕ್ರಮಗಳನ್ನು ಜನರ ಬಳಿ ತಲುಪಿಸಲು ಅಧಿಕಾರಿಗಳ ಹಾಗೂ ಜನಸಹಭಾಗಿತ್ವದ ಗ್ರಾಮ ವಾಸ್ತವ್ಯ ಮಹತ್ವದ ಕಾರ್ಯಕ್ರಮ ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

    ಅವರು ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು, ಕಡಬ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಜ.31 ರಂದು ಕಡಬದ ಕೊಂಬಾರು ಹಿ.ಪ್ರಾ ಶಾಲೆಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದ್ದು ಈ ನಿಟ್ಟಿನಲ್ಲಿ ಪತ್ರಕರ್ತರು ಸ್ವಯಂ ಪ್ರೇರಿತರಾಗಿ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

    ಈಗಾಗಲೇ ಸರಕಾರದ ಕಂದಾಯ ಸಚಿವರು ನೀಡಿದ ಸೂಚನೆಯ ಪ್ರಕಾರ ಪ್ರತಿ ತಿಂಗಳ ಮೂರನೇ ಶನಿವಾರ ಕಂದಾಯ ಇಲಾಖೆಗೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಿಂದ ಜನರ ಸಮಸ್ಯೆ ಪರಿಹರಿಸಲು ಸಹಕಾರಿಯಾಗಲಿದೆ ಎಂದು ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ಅನಂತ ಶಂಕರ,ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಗೆ,ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ ಬಿ.ಎನ್, ಕಾರ್ಯದರ್ಶಿ ಸಿದ್ದಿಕ್ ನೀರಾಜೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಎನ್.ಕೆ, ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ, ಮೊದಲಾದವರು ಉಪಸ್ಥಿತರಿದ್ದರು.

  • ಗ್ರಾಮದ ಜನರ ಸಮಸ್ಯೆ ಗೊತ್ತಾಗಬೇಕಿದ್ರೆ ಗ್ರಾಮವಾಸ್ತವ್ಯ ಸಹಕಾರಿ: ಡಾ.ಡಿ.ವೀರೇಂದ್ರ ಹೆಗ್ಗಡೆ

    ಗ್ರಾಮದ ಜನರ ಸಮಸ್ಯೆ ಗೊತ್ತಾಗಬೇಕಿದ್ರೆ ಗ್ರಾಮವಾಸ್ತವ್ಯ ಸಹಕಾರಿ: ಡಾ.ಡಿ.ವೀರೇಂದ್ರ ಹೆಗ್ಗಡೆ

    ಮಂಗಳೂರು: ಗ್ರಾಮದ ಜನರ ಸಮಸ್ಯೆಗಳನ್ನು ಅರಿಯಲು ಗ್ರಾಮವಾಸ್ತವ್ಯ ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

    ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜ.31 ರಂದು ಕಡಬದ ಕೊಂಬಾರು ಹಿ.ಪ್ರಾ ಶಾಲೆಯಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಂದು ಬಿಡುಗಡೆಗೊಳಿಸಿ ಮಾತನಾಡಿದರು.

    ಪತ್ರಕರ್ತರು ಸಾಮಾನ್ಯವಾಗಿ ಗ್ರಾಮದ ಜನರ ಸಮಸ್ಯೆಗಳನ್ನು ವರದಿ ಮಾಡಿ ಅದರ ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ಇದೀಗ ಪತ್ರಕರ್ತರೇ ಗ್ರಾಮಕ್ಕೆ ತೆರಳಿ ಜನರ ಬಳಿಗೆ ಹೋಗುವುದರಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಮೂಕವೇದನೆಯನ್ನು ಹೇಳಿಕೊಳ್ಳಲು ಜನರಿಗೆ ಅವಕಾಶ ಸಿಕ್ಕಂತಾಗುತ್ತದೆ. ಜೊತೆಗೆ ಪತ್ರಕರ್ತರಿಗೂ ಜನರ ಸಮಸ್ಯೆಯನ್ನು ತಿಳಿದುಕೊಳ್ಳಲು ಒಂದು ಅವಕಾಶವಾಗುತ್ತದೆ. ಈ ರೀತಿಯ ಪತ್ರಕರ್ತರ ಗ್ರಾಮವಾಸ್ತವ್ಯ ಗ್ರಾಮಾಭಿವ್ರದ್ಧಿಗೆ ಪೂರಕ ಎಂದು ಅವರು ಶುಭ ಹಾರೈಸಿದ್ದಾರೆ.

    ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ ಬಿ.ಎನ್, ಗ್ರಾಮಾಂತರ ಕಾರ್ಯದರ್ಶಿ ಸಿದ್ದಿಕ್ ನೀರಾಜೆ, ಕಾರ್ಯಕಾರಿ ಸದಸ್ಯರಾದ ಭಾಸ್ಕರ ರೈ ಕಟ್ಟ, ಅತಿಥೇಯ ಕಡಬದ ಅಧ್ಯಕ್ಷ ನಾಗರಾಜ ಎನ್.ಕೆ, ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ, ಬೆಳ್ತಂಗಡಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಾರಪ್ಪ ಪೂಜಾರಿ ಬೆಳಾಲು, ಸದಸ್ಯರಾದ ಆರ್.ಎನ್ ಪೂವಣಿ, ಧನಕೀರ್ತಿ ಆರಿಗ ಮೊದಲಾದವರು ಉಪಸ್ಥಿತರಿದ್ದರು.

  • ಗ್ರಾಮಗಳು ಅಭಿವೃದ್ಧಿಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ: ಸಿಂಧೂ ರೂಪೇಶ್

    ಗ್ರಾಮಗಳು ಅಭಿವೃದ್ಧಿಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ: ಸಿಂಧೂ ರೂಪೇಶ್

    – ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮವಾಸ್ತವ್ಯ

    ಮಂಗಳೂರು: ಕೆಳ ಹಂತಗಳಲ್ಲಿ ಬದಲಾವಣೆಗಳು ಆಗಬೇಕು. ಒಂದೊಂದು ಗ್ರಾಮಗಳು ಅಭಿವೃದ್ಧಿಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ.

    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ದ.ಕ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್ ಹಾಗೂ ಮಡಪ್ಪಾಡಿ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಜನಸಾಮಾನ್ಯರು ಪತ್ರಕರ್ತರಲ್ಲಿ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಹೀಗಾಗಿ ಅವರ ಮೂಲಕ ಇಂಥ ಕಾರ್ಯಕ್ರಮಗಳು ನಡೆಯುತ್ತಿರುವುದು ಔಚಿತ್ಯಪೂರ್ಣ ಎಂದು ಅವರು ಅಭಿಪ್ರಾಯಪಟ್ಟರು. ಹಾಗೆಯೇ ಮಂಗಳೂರಿನಲ್ಲಿ ನಡೆದ ಗಲಭೆ, ಹಿಂಸಾಚಾರ ಘಟನೆಯ ಸಂದರ್ಭ ಮಾಧ್ಯಮಗಳು ಜವಾಬ್ದಾರಿ ಮಾಧ್ಯಮವಾಗಿ ಕೆಲಸ ಮಾಡಿದ್ದೀರಿ ಎಂದು ಅವರು ಪ್ರಶಂಸಿಸಿದರು.

    ವೈದ್ಯಕೀಯ ಶಿಬಿರವನ್ನು ಸುಳ್ಯ ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ಕಳೆದ ವರ್ಷ ಕುತ್ಲೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯದ ಮಾಹಿತಿ ಪತ್ರವನ್ನೂ ಅವರು ಬಿಡುಗಡೆಗೊಳಿಸಿದರು. ಮೂಲಭೂತ ಅಗತ್ಯಗಳಿಗೆ ಸಮರ್ಪಕವಾಗಿ ಯೋಜನೆಗಳನ್ನು ಮಾಡದಿರುವುದೇ ಕೆಲಸ ಪೂರ್ಣಗೊಳ್ಳದಿರಲು ಕಾರಣ. ಗ್ರಾಮಾಭಿವೃದ್ದಿಯ ಮೂಲಕ ದೇಶದ ಅಭಿವೃದ್ದಿ ಸಾಧ್ಯವಾಗಲಿ ಎಂದು ಆಶಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು. ಗ್ರಾಮ ವಾಸ್ತವ್ಯದಲ್ಲಿ ಬಂದ ಮನವಿಗಳನ್ನು ವಿಶೇಷ ಪ್ರಕರಣ ಎಂದು ಭಾವಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಆಸಕ್ತಿ ವಹಿಸಬೇಕು ಎಂದು ಅವರು ಹೇಳಿದರು.

    ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ಕೇವಳ, ಉಪಾಧ್ಯಕ್ಷ ಎಂಟಿ. ಹೊನ್ನಪ್ಪ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವಿಕ್ರಂ ಅಮ್ಟೆ, ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್,ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಮಹಮ್ಮದ್, ಜಿ. ಪಂ.ಸದಸ್ಯರಾದ ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ, ಎಸ್.ಎನ್.ಮನ್ಮಥ, ತಾ.ಪಂ.ಉಪಾಧ್ಯಕ್ಷೆ ಶುಭದಾ ರೈ, ತಾ.ಪಂ.ಸದಸ್ಯ ಉದಯಕುಮಾರ್ ಕೊಪ್ಪಡ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಎ.ಪಿ.ಎಂ.ಸಿ. ನಿರ್ದೇಶಕ ವಿನಯಕುಮಾರ್ ಮುಳುಗಾಡು, ಮಡಪ್ಪಾಡಿ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಂ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಆಶಯ ಭಾಷಣ ಮಾಡಿದರು. ಈ ಕಾರ್ಯಕ್ರಮದ ಮೂಲಕ ಮಡಪ್ಪಾಡಿಯಲ್ಲಿ ಅಂತರ್ಜಲ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ಯೋಜನೆ ಇದೆ ಎಂದು ಅವರು ಹೇಳಿದರು.

    ಜಿಲ್ಲಾ ಕಾರ್ಯಕಾರಣಿ ಸದಸ್ಯ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಳೆದ ಬಾರಿ ಗ್ರಾಮವಾಸ್ತವ್ಯ ನಡೆದ ಕುತ್ಲೂರಿನ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಮಚಂದ್ರ ಭಟ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳಂಜ ಅವರನ್ನು ಗೌರವಿಸಲಾಯಿತು. ರಾಮಚಂದ್ರ ಭಟ್ ಅನುಭವ ವ್ಯಕ್ತಪಡಿಸಿದರು.

  • ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು  ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.

    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

    ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

    ನಂತರ ಬಸ್‍ನಲ್ಲೇ ಕುಳಿತು ಮನವಿ ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು, ಮಾನ್ವಿ ತಾಲೂಕಿನ ಕಲ್ಲೂರಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಮತ್ತು ಪದವಿ ಕಾಲೇಜು ತೆರಯುವ ಭರವಸೆ ನೀಡಿದರು. ಇದೇ ವೇಳೆ ಕಿವಿ ಕೇಳದ ಗ್ರಾಮದ ಮಗುವೊಂದರ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದರು.

  • ಸಿಎಂ ಗ್ರಾಮವಾಸ್ತವ್ಯ- ಬಿಜೆಪಿ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ

    ಸಿಎಂ ಗ್ರಾಮವಾಸ್ತವ್ಯ- ಬಿಜೆಪಿ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ

    ಯಾದಗಿರಿ: ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯವನ್ನು ಕೊಂಡಾಡಿದ್ದ ಕಮಲ ನಾಯಕರು ಈಗ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಬಿಜೆಪಿಯವರು ಸಿಎಂ ಅವರನ್ನು ಕೊಂಡಾಡಿದ್ದರು. ಆದರೆ ಈಗ ಟೀಕೆ ಮಾಡುತ್ತಿದ್ದಾರೆ, ಇದಕ್ಕೇನು ಹೇಳಬೇಕು? ಎಂದು ಸಚಿವ ಸಾ.ರಾ ಮಹೇಶ್ ಸಿಎಂ ಗ್ರಾಮವಾಸ್ತವ್ಯದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ:ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ

    ಮುಖ್ಯಮಂತ್ರಿಗಳ ಎರಡನೇ ದಿನದ ಗ್ರಾಮ ವಾಸ್ತವ್ಯಕ್ಕೆ ವರುಣನ ಅಡ್ಡಿಯಾಗಿದೆ. ಹೀಗಾಗಿ ಕಲಬುರಗಿಯ ಅಫಜಲಪುರ ತಾಲೂಕಿನ ಹೆರೂರು(ಬಿ) ಗ್ರಾಮ ಇಂದಿನ ವಾಸ್ತವ್ಯ ಭಾರೀ ಮಳೆಯಿಂದ ರದ್ದಾಗಿದೆ. ಸುಮಾರು 13 ವರ್ಷಗಳ ಬಳಿಕ ಸಿಎಂ ಕೈಗೊಂಡ ಮೊದಲ ದಿನದ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಿಎಂ ಗ್ರಾಮವಾಸ್ತವ್ಯದ ಕಾರಣ ಇಡೀ ಚಂಡರಕಿ ಗ್ರಾಮ ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಚಂಡರಕಿಯಲ್ಲಿ ಜನತಾದರ್ಶನ 3 ಗಂಟೆ ತಡವಾಗಿ ಆರಂಭವಾಗಿದ್ದು, ರಾತ್ರಿ 8 ಗಂಟೆ ತನಕವೂ ಸಿಎಂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಇದನ್ನೂ ಓದಿ:ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ

    ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ನಂತರ ಮಕ್ಕಳೊಂದಿಗೆ ರಾತ್ರಿಯ ಭೋಜನ ಸವಿದರು. ರಾತ್ರಿಯ ಭೋಜನದ ಬಳಿಕ ಗ್ರಾಮಸ್ಥರು, ಶಾಲಾ ಮಕ್ಕಳ ಜೊತೆಗೆ ಫೋಟೋ ಸೆಷನ್ ಕೂಡ ನಡೆಯಿತು. ಸಿಎಂಗೆ ಶಾಲೆಯ ಕೊಠಡಿಯಲ್ಲಿ ಯಾವುದೇ ಹಾಸಿಗೆ ಇಲ್ಲದೆ ಚಾಪೆ, ದಿಂಬು, ಹೊದಿಕೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಮುಖ್ಯಮಂತ್ರಿಗಳ 2ನೇ ದಿನದ ಗ್ರಾಮವಾಸ್ತವ್ಯ ಕಲಬುರಗಿ ಜಿಲ್ಲೆ ಅಫ್ಜಲಪುರದ ಬಿ.ಹೇರೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆದರೆ ರಾತ್ರಿಯಿಡೀ ಹೆರೂರಿನಲ್ಲಿ ಭಾರೀ ಮಳೆಯಾಗಿದ್ದು, ಸಿಎಂ ಜನತಾದರ್ಶನಕ್ಕಾಗಿ ಹಾಕಿದ್ದ ಪೆಂಡಾಲ್ ಹಾಳಾಗಿದೆ. ಇಂದು ಕೂಡ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತ ಸಿಎಂ ಅವರ ಹಳ್ಳಿ ವಾಸವನ್ನು ಮುಂದೂಡಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ

    ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ

    ಯಾದಗಿರಿ: ಕಲಬುರಗಿಯ ಹೇರೂರಿನಲ್ಲಿ ಗ್ರಾಮ ವಾಸ್ತವ್ಯ ಮಳೆಯಿಂದ ರದ್ದಾಗಿದೆ. ಆದರೆ ನಿನ್ನೆ ಅಂದರೆ ಮೊದಲ ದಿನದ ಸಿಎಂ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಲವು ದೂರು-ದುಮ್ಮಾನಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳಿಗೆ ಸಿಹಿ-ಕಹಿಯ ಮಿಶ್ರ ಸ್ಪಂದನೆ ವ್ಯಕ್ತವಾಯ್ತು.

    ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಜನಪ್ರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿರುವ ಮುಖ್ಯಮಂತ್ರಿಗಳು, ಮೊದಲ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಯಾದಗಿರಿಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿಎಂ ರಾತ್ರಿ ವಾಸ್ತವ್ಯ ಮಾಡಿದರು. ಸಾಮಾನ್ಯರಂತೆ ಶಾಲೆಯ ಕೊಠಡಿಯಲ್ಲಿ ನೆಲದ ಮೇಲೆ ಚಾಪೆ ಹಾಸಿಕೊಂಡು, ತಲೆಗೊಂದು ದಿಂಬು, ಹಾಕಿಕೊಂಡು ರಾತ್ರಿಯಿಡೀ ಕಳೆದರು.

    ಮುಖ್ಯಮಂತ್ರಿಗಳಿಗೆ ಎಂಎಲ್‍ಸಿ ಭೋಜೇಗೌಡ ಕೂಡ ಸಾಥ್ ನೀಡಿದರು. ಸತತ 8 ಗಂಟೆಗಳ ಕಾಲ ಜನತಾದರ್ಶನ ಮಾಡಿದ ಸಿಎಂಗೆ ಹಲವು ದೂರು ದುಮ್ಮಾನಗಳು ಕೇಳಿಬಂತು. ಬಿಸಿಲ ತಾಪ, ಮಳೆ ನಡುವೆಯೂ ಜನರಿಂದ ಅಹವಾಲು ಸ್ವೀಕರಿಸಿದರು. ಮುನಗಲ್ ಗ್ರಾಮದ ಪೋಷಕರು ಅಪಘಾತದಿಂದ ದೇಹದ ಸ್ವಾಧೀನ ಕಳೆದುಕೊಂಡಿದ್ದ ಮಗನನ್ನು ಕರೆತಂದಿದ್ದರು. ಸುಮಾರು 30 ಲಕ್ಷ ವೆಚ್ಚ ಮಾಡಿದ್ರೂ ಮಗ ಸರಿಹೋಗಲಿಲ್ಲ ಎಂದು ತಂದೆ-ತಾಯಿ ಅಳಲು ತೋಡಿಕೊಂಡರು. ಈ ವೇಳೆ ಜನತಾ ದರ್ಶನದ ವೇದಿಕೆ ಮಮ್ಮಲ ಮರುಗಿತು. ತಕ್ಷಣ ಜನತಾ ದರ್ಶನದಲ್ಲಿ ಸ್ಥಳದಲ್ಲೇ ಸಿಎಂ 5 ಲಕ್ಷ ಘೋಷಿಸಿದರು.

    ಸಿಎಂಗೆ ಶಾಲಾ ಮಕ್ಕಳು ಗಣಪತಿ ಮೂರ್ತಿ ಗಿಫ್ಟ್ ಕೊಟ್ಟರು. ಇದೇ ವೇಳೆ ಮಕ್ಕಳು ಜನತಾದರ್ಶನದ ವೇದಿಕೆ ಮೇಲೆ ಹತ್ತಿ ಸಿಎಂ ಜೊತೆ ಸೆಲ್ಫಿ ತೆಗೆದುಕೊಂಡರು. ಜನತಾದರ್ಶನ ಬಳಿಕ ಮಾತನಾಡಿದ ಸಿಎಂ, ನನ್ನ ದೇಹಕ್ಕೆ ಏನೇ ದಂಡನೆ ಆಗಲಿ. ನನ್ನ ಆರೋಗ್ಯ ಪರಿಸ್ಥಿತಿ ಹೇಗೇ ಇರಲಿ. ನಾನು ಸ್ವೀಕರಿಸಿರುವ ಮತ್ತೊಂದು ಸವಾಲನ್ನು ಎದುರಿಸುತ್ತೇನೆ. ಉತ್ತರ, ದಕ್ಷಿಣ, ಹೈದರಾಬಾದ್, ಮುಂಬೈ ಅಂತ ನನಗೆ ಭೇದ ಇಲ್ಲ. ನನಗೆ ಅಖಂಡ ಕರ್ನಾಟಕದ ಅಭಿವೃದ್ಧಿ ಮುಖ್ಯ ಎಂದರು.

    ಯಾದಗಿರಿ ಜಿಲ್ಲೆ ಸೇರಿದಂತೆ ಚಂಡರಕಿ ಗ್ರಾಮಕ್ಕೂ ಪ್ರತ್ಯೇಕವಾಗಿ ಹಲವು ಯೋಜನೆಗಳನ್ನು ಘೋಷಿಸಿದರು. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತೆ ಅನ್ನೋದನ್ನ ಕಾದು ನೋಡ್ಬೇಕು. ಒಟ್ಟಾರೆ ಐಶಾರಾಮಿ ವಾಸ್ತವ್ಯ ಎಂದಿದ್ದ ಟೀಕಿಸಿದ್ದ ಪ್ರತಿಪಕ್ಷಗಳಿಗೆ ಸಿಎಂ ಸರಳ ವಾಸ್ತವ್ಯದ ಮೂಲಕ ತಿರುಗೇಟು ನೀಡಿದ್ರು.

    ಜಿಲ್ಲೆಗೆ ಸಿಎಂ ಘೋಷನೆ:
    * ಯಾದಗಿರಿ ಜಿಲ್ಲಾ ಆಸ್ಪತ್ರೆಯನ್ನು 100 ಬೆಡ್‍ನಿಂದ 300 ಬೆಡ್‍ಗೆ ಪರಿವರ್ತಿಸಲು ನಿರ್ದೇಶನ
    * ಯಾದಗಿರಿ ಜಿಲ್ಲಾ ಆಸ್ಪತೆಗೆ ಸಂಪರ್ಕ ರಸ್ತೆ ಕಲ್ಪಿಸಲು 1.5 ಕೋಟಿ ರೂ. ಬಿಡುಗಡೆ
    * ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತಕ್ಷಣ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಚನೆ
    * ಯಾದಗಿರಿ ನಗರದಲ್ಲಿ ಅಪೂರ್ಣವಾಗಿರುವ ಒಳಚರಂಡಿ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಲು ಸೂಚನೆ

    * 1 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಹಳ್ಳಿಗೆ ಜಲಧಾರೆ ಯೋಜನೆ ನದಿಯ ಮೂಲದಿಂದ ಕುಡಿಯುವ ನೀರು ಪೂರೈಕೆ
    * ಗ್ರಾಮ ವಾಸ್ತವ್ಯದ ಹಿನ್ನೆಯಲ್ಲಿ ಕಳೆದ 10 ದಿನಗಳಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ಅದಾಲತ್
    * 104 ಪಿಂಚಣಿ, 126 ಪಡಿತರ ಚೀಟಿ, 500ಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಮಾಡಲಾಗಿದೆ
    * ಜನತಾದರ್ಶನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 8.30 ಗಂಟೆಯವರೆಗೆ ಸುಮಾರು 4,000 ಅರ್ಜಿ ಸ್ವೀಕಾರ
    * ಅರ್ಜಿಗಳನ್ನು ಇಲಾಖಾವಾರು ವಿಂಗಡಿಸಿ, ಆದ್ಯತೆಯ ಮೇರೆಗೆ ಪರಿಹಾರ ನೀಡಲು ಸೂಚನೆ
    * ಅಂಗವಿಕಲರ ರಿಯಾಯತಿ ದರದ ಕೆಎಸ್‍ಆರ್‍ಟಿಸಿ ಬಸ್ ಪಾಸ್ ಮುಂದುವರಿಸಲು ಸೂಚನೆ
    * ಪಹಣಿ ತಿದ್ದುಪಡಿ, ವೈದ್ಯಕೀಯ ಚಿಕಿತ್ಸಾ ವೆಚ್ಚ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ಸಾಲಮನ್ನಾ

    * ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧ ಸುಮಾರು 2 ಸಾವಿರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲು ಸೂಚನೆ
    * ಅಪಘಾತದಲ್ಲಿ ಗಾಯಗೊಂಡಿರುವ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರಿಗೆ ತಕ್ಷಣ 5 ಲಕ್ಷ ರೂ.ಗಳ ಪರಿಹಾರಕ್ಕೆ ಸೂಚನೆ

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]