Tag: ಗ್ರಾಮಪಂಚಾಯಿತಿ

  • ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಗ್ರಾ.ಪಂ. ಸದಸ್ಯರು ಗೈರು – ಕಣ್ಣೀರಿಟ್ಟ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ

    ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಗ್ರಾ.ಪಂ. ಸದಸ್ಯರು ಗೈರು – ಕಣ್ಣೀರಿಟ್ಟ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ

    ಹಾಸನ: ಗ್ರಾಮ ಪಂಚಾಯಿತಿ (Gram Panchayat) ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಸದಸ್ಯರು ಭಾಗವಹಿಸಲಿಲ್ಲ ಎಂದು ಅಧ್ಯಕ್ಷೆ  (President) ಸ್ಥಾನದ ಆಕಾಂಕ್ಷಿ  ಕಣ್ಣೀರಿಟ್ಟಿರುವ ಘಟನೆ ಸಕಲೇಶಪುರ (Sakleshpura) ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ವನಜಾಕ್ಷಿ ಕಣ್ಣೀರಿಟ್ಟ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ. ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎಂಗೆ ಮೀಸಲಾಗಿತ್ತು. ಗ್ರಾಮ ಪಂಚಾಯಿತಿಯಲ್ಲಿ ವನಜಾಕ್ಷಿ ಏಕೈಕ ಎಸ್ಸಿ ಮಹಿಳಾ ಸದಸ್ಯರಾಗಿದ್ದಾರೆ. ಈ ಮೊದಲು ಜೆಡಿಎಸ್ ಬೆಂಬಲ ಪಡೆದಿದ್ದ ವನಜಾಕ್ಷಿ ಅವರು, ಇತ್ತೀಚೆಗೆ ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಇತರೆ ಯಾವ ಸದಸ್ಯರು ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಇದನ್ನೂ ಓದಿ: ಕೆರಗೋಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ – ಶಾಸಕ ಗಣಿಗ ರವಿ ಮನೆಗೆ ಭದ್ರತೆ ಹೆಚ್ಚಳ

    ಈ ಬೆಳವಣಿಗೆಯಿಂದ ಮನನೊಂದ ವನಜಾಕ್ಷಿ ಪಂಚಾಯಿತಿ ಆವರಣದಲ್ಲಿ ಕಣ್ಣೀರಿಟ್ಟು ಮಾತನಾಡಿ, ನಾನು ದಲಿತ ಮಹಿಳೆ ಎಂಬ ಕಾರಣಕ್ಕೆ ಇತರೆ ಸದಸ್ಯರು ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಲು ಬಾರದೆ ಕೋರಂ ಕೊರತೆಯಾಗುವಂತೆ ಮಾಡಿದ್ದಾರೆ. ದಲಿತ ಮಹಿಳೆ ಅಧ್ಯಕ್ಷ ಸ್ಥಾನ ಅಲಂಕರಿಸುವುದನ್ನು ನೋಡಲಾಗದ ಮನಸ್ಥಿತಿಯನ್ನು ಸದಸ್ಯರು ಹೊಂದಿದ್ದಾರೆ. ಈ ಹಿಂದೆ ಬೇರೆ ಸದಸ್ಯರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವಾಗ ನಾನು ಹಾಜರಿದ್ದು ಮತ ಚಲಾವಣೆ ಮಾಡಿದ್ದೇನೆ. ಇಂದು ಅವರು ನಡೆದುಕೊಂಡ ರೀತಿ ಮನಸ್ಸಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಜಿ.ಎಂ ಸಿದ್ದೇಶ್ವರ್ ವಿರುದ್ಧ ರೆಬಲ್ ಆದ ಮಾಜಿ ಸಚಿವ ರೇಣುಕಾಚಾರ್ಯ!

    ಚುನಾವಣಾ ಅಧಿಕಾರಿ ಆದಿತ್ಯ ಪ್ರತಿಕ್ರಿಯಿಸಿ, ಚುನಾವಣೆಗೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆರು ಜನ ಸದಸ್ಯರಲ್ಲಿ ಕೋರಂಗಾಗಿ ಮೂವರು ಸದಸ್ಯರ ಅಗತ್ಯವಿತ್ತು. ಇಬ್ಬರು ಮಾತ್ರ ಹಾಜರಿದ್ದ ಕಾರಣ ಅರ್ಧ ಗಂಟೆಗಳ ಕಾಲ ಹೆಚ್ಚುವರಿ ಸಮಯ ನೀಡಲಾಗಿತ್ತು. ಆದರು ಉಳಿದ ಸದಸ್ಯರು ಬಾರದೇ ಇರುವ ಕಾರಣ ಚುನಾವಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹದಿಹರೆಯದವರ ಮದ್ಯ ನಶೆಗೆ ಅಡ್ಡಾದಿಡ್ಡಿ ಓಡಿದ ಕಾರ್ – ಎಂಟು ಬೈಕ್‌ಗಳು ಜಖಂ

  • 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನೋಡಲು ಬರೋ ಭಕ್ತರಿಂದ ಹಣ ವಸೂಲಿ – ಗ್ರಾಪಂ ವಿರುದ್ಧ ಆರೋಪ

    112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನೋಡಲು ಬರೋ ಭಕ್ತರಿಂದ ಹಣ ವಸೂಲಿ – ಗ್ರಾಪಂ ವಿರುದ್ಧ ಆರೋಪ

    ಚಿಕ್ಕಬಳ್ಳಾಪುರ: ಇಶಾ ಫೌಂಡೇಷನ್ (Isha Foundation) ವತಿಯಿಂದ ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿ 112 ಅಡಿ ಎತ್ತರದ ಆದಿಯೋಗಿ (Adiyogi) ಶಿವನ ವಿಗ್ರಹ ನೋಡಲು ಬರುವ ಭಕ್ತರಿಂದ ಅವಲಗುರ್ಕಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಇಶಾ ಫೌಂಡೇಷನ್ ವತಿಯಿಂದ ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ 112 ಅಡಿ ಎತ್ತರದ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿದ್ದರಿಂದ ಪ್ರತಿದಿನ ಸಾವಿರಾರು ಶಿವನ ಭಕ್ತರು ಬೈಕ್ ಹಾಗೂ ಕಾರುಗಳಲ್ಲಿ ಆದಿಯೋಗಿ ಶಿವನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿಯೊಂದು, ತನಗೆ ಸಂಬಂಧವೇ ಇಲ್ಲದಿದ್ದರೂ, ರಸ್ತೆಯಲ್ಲಿ ನಿಂತು ಟೋಲ್ ಸುಂಕದ ರೀತಿಯಲ್ಲಿ ವಾಹನಗಳಿಗೆ ಹಣ ವಸೂಲಿ ಮಾಡುವುದರ ಮೂಲಕ ಆದಿಯೋಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ಆದಿಯೋಗಿ ಶಿವನನ್ನು ನೋಡಲು ಬೈಕ್ ಹಾಗೂ ಕಾರುಗಳಲ್ಲಿ ಪ್ರತಿ ದಿನ ಸಾವಿರಾರು ಜನ ಆಗಮಿಸುತ್ತಿದ್ದು, ಇದನ್ನೇ ತಮ್ಮ ಸೌಭಾಗ್ಯ ಎಂದುಕೊಂಡಿರುವ ಸ್ಥಳೀಯ ಅವಲಗುರ್ಕಿ ಗ್ರಾಪಂ ಕಾರ್ಯಾಲಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ವಡ್ರೇಪಾಳ್ಯದ ಕ್ರಾಸ್ ಬಳಿ ಇಶಾ ಪೌಂಡೇಷನ್‌ಗೆ ಹೋಗುವ ವಾಹನಗಳನ್ನು ತಡೆದು, ಬೈಕ್‌ಗೆ 10 ರೂಪಾಯಿ ಹಾಗೂ ಕಾರುಗಳಿಗೆ 30 ರೂಪಾಯಿ ಸುಂಕ ವಸೂಲಿ ಮಾಡುತ್ತಿದ್ದಾರೆ. ಅಸಲಿಗೆ ಪಂಚಾಯಿತಿಯಿಂದ ರಸ್ತೆಯಾಗಲಿ, ನೀರು, ಸ್ವಚ್ಛತೆ, ನೋಡಲು ಬರುವ ಸ್ಥಳ ಸಹ ಯಾವುದು ಸೇರಿಲ್ಲ, ಆದರೆ ಜನ ತಮ್ಮ ವ್ಯಾಪ್ತಿಯ ಏರಿಯಾದಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂಬ ಅನಧಿಕೃತವಾಗಿ ಸುಂಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅಂತಾರೆ, ಅವ್ರಿಗೇನು ಹೇಳೋರು ಕೇಳೋರಿಲ್ವಾ: ಈಶ್ವರಪ್ಪ ಪ್ರಶ್ನೆ

    ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಪಕ್ಕಾ ಖಾಸಗಿ ಜಮೀನಿನಲ್ಲಿ ಅಂದರೆ ಇಶಾ ಪೌಂಡೇಷನ್‌ಗೆ ಸೇರಿದ ಖಾಸಗಿ ಜಾಗದಲ್ಲಿ ಆದಿಯೋಗಿ ಪ್ರತಿಷ್ಠಾಪನೆ ಮಾಡಲಾಗಿದೆ. ರಸ್ತೆಗಳನ್ನು ಸಹ ಇಶಾ ಪೌಂಡೇಷನ್ ಅಭಿವೃದ್ಧಿ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಪಂಚಾಯಿತಿಯಿಂದ ಇದುವರೆಗೂ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಆದರೂ ಅವಲಗುರ್ಕಿ ಗ್ರಾಪಂನವರು ವಾಹನ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ.

    ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಕಚೇರಿಗೆ ಹೋದರೂ ಅಲ್ಲಿಯೂ ಬೀಗ ಹಾಕಲಾಗಿದೆ. ಒಟ್ಟಿನಲ್ಲಿ ವೀಕೆಂಡ್‌ನಲ್ಲಿ ನಂದಿ ಬೆಟ್ಟ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ದರ್ಶನಕ್ಕೆ ಆಗಮಿಸುತ್ತಿದ್ದಾರೆ, ಆದರೆ ಇದನ್ನೇ ಸೌಭಾಗ್ಯವೆಂದು ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಪಂಚಾಯಿತಿಯೊಂದು ಕಾನೂನುಬಾಹಿರ ವಸೂಲಿ ಮಾಡುತ್ತಿದ್ದು, ಇದು ಶಿವನ ಭಕ್ತರು ಹಾಗೂ ಇಶಾ ಫೌಂಡೇಷನ್‌ನ ಅಸಮಾಧಾನ ಆಕ್ರೋಶಕ್ಕೂ ಕಾರಣವಾಗಿದೆ. ಇದನ್ನೂ ಓದಿ: ಭವಾನಿಯವರಿಗೆ ಬಿಜೆಪಿ ಸೇರಲು ಆಹ್ವಾನಿಸಿದ್ದು ತಮಾಷೆಗೆ; ಅವರಿಗೆ ಹಾಸನ ಸುರಕ್ಷಿತ ಅಲ್ಲ – ಸಿ.ಟಿ.ರವಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ

    ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ

    – ಮೂರು ಕೋಟಿಗೂ ಅಧಿಕ ಬಿಲ್ ಬಾಕಿ!

    ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಬರೋಬ್ಬರಿ ಮೂರು ಕೋಟಿಗೂ ಅಧಿಕ ರೂ.ಗಳ ಬಿಲ್ ಮೊತ್ತವನ್ನು ಗ್ರಾಮ ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ.

    ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಕಳೆದ ಏಳೆಂಟು ವರ್ಷಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಶ್ರವಣಬೆಳಗೂಳಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು ಪೂರೈಸಬೇಕು. ಅದಕ್ಕಾಗಿ ಹೇಮಾವತಿ ನದಿಯಿಂದ ನೀರು ತರಲಾಗಿದ್ದು, ಬೃಹತ್ ಯಂತ್ರಗಳು ಚಾಲನೆಯಲ್ಲಿರುತ್ತವೆ.

    ಇಷ್ಟೇ ಅಲ್ಲದೇ ಮಹಾಮಸ್ತಕಾಭಿಷೇಕ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಎಲ್ಲ ಕಾರಣದಿಂದ ಶ್ರವಣಬೆಳಗೂಳ ಗ್ರಾಮಪಂಚಾಯಿತಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಗ್ರಾಮ ಪಂಚಾಯಿತಿಗೆ ಬರುವ ಕಡಿಮೆ ಆದಾಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಶ್ರವಣಬೆಳಗೂಳಕ್ಕೆ ಬಿಲ್ ಪಾವತಿ ಮಾಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯ ಶಾಸಕ ಬಾಲಕೃಷ್ಣ ಮನವಿ ಮಾಡಿದ್ದಾರೆ.

    ಪಂಚಾಯಿತಿಗೆ ಬರುವ ಆದಾಯದ ಇತಿಮಿತಿಯಲ್ಲಿ ತಿಂಗಳಿಗೆ ಎರಡು ಲಕ್ಷದಷ್ಟು ಬಿಲ್ ಕಟ್ಟುತ್ತಿದ್ದಾರೆ. ಆದರೆ ಒಂದು ತಿಂಗಳಿಗೆ ಸುಮಾರು 4 ಲಕ್ಷದವರೆಗೆ ಬಿಲ್ ಬರುವ ಕಾರಣ ಪ್ರತಿ ತಿಂಗಳು ವಿದ್ಯುತ್ ಬಿಲ್ ಬಾಕಿ ಉಳಿಯುತ್ತಲೇ ಇದೆ. ಕೆಇಬಿಯವರು ಕೂಡ ಹಲವಾರು ಬಾರಿ ಬಿಲ್ ಪಾವತಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶ್ರವಣಬೆಳಗೊಳ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವುದರಿಂದ ಸರ್ಕಾರ ಗ್ರಾಮ ಪಂಚಾಯಿತಿಗೆ ವಿದ್ಯುತ್ ಬಿಲ್ ಕಟ್ಟಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿರುವ ಬಾಹುಬಲಿ ಪ್ರತಿಮೆ ಸೇರಿದಂತೆ ಇನ್ನಿತರ ಇತಿಹಾಸ ಪ್ರಸಿದ್ಧ ಬಸದಿಗಳು ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸುತ್ತವೆ.

  • ಮಾಸ್ಕ್‌ ಧರಿಸದೇ ಎಂಟ್ರಿ – ಪ್ರಶ್ನಿಸಿದ್ದಕ್ಕೆ ಕಂಪ್ಯೂಟರ್‌ ಎತ್ತಿ, ಪೀಠೋಪಕರಣ ಧ್ವಂಸ

    ಮಾಸ್ಕ್‌ ಧರಿಸದೇ ಎಂಟ್ರಿ – ಪ್ರಶ್ನಿಸಿದ್ದಕ್ಕೆ ಕಂಪ್ಯೂಟರ್‌ ಎತ್ತಿ, ಪೀಠೋಪಕರಣ ಧ್ವಂಸ

    – ನಾನು ಮಾಸ್ಕ್‌ ಖರೀದಿಸಲ್ಲ
    – ಪಂಚಾಯತ್‌ ಮಾಸ್ಕ್‌ ನೀಡಲಿ

    ಹಾಸನ: ಪಾನಮತ್ತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಗ್ರಾಮ ಪಂಚಾಯಿತಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಆತಂಕ ಸೃಷ್ಟಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

    ಗುರುವಾರ ಬ್ಯಾಕರವಳ್ಳಿ ಗ್ರಾಮ ಪಂಚಾಯತಿಗೆ ನುಗ್ಗಿದ ಹರೀಶ್, ನನಗೆ ಹೆಲ್ತ್ ಕಾರ್ಡ್ ಮಾಡಿಕೊಡಬೇಕು ಎಂದು ಸಿಬ್ಬಂದಿಗೆ ಜೋರು ದನಿಯಲ್ಲಿ ಕೇಳಿದ್ದಾನೆ. ಆಗ ಸಿಬ್ಬಂದಿ ಹಿರಿಯ ಅಧಿಕಾರಿಗಳು ಹೊರಗೆ ಹೋಗಿದ್ದಾರೆ ಅವರು ಬಂದ ನಂತರ ಮಾತನಾಡಿ ಎಂದು ಹೇಳಿದ್ದಾರೆ. ಇದಕ್ಕೆ ಸುಮ್ಮನಾಗದ ಹರೀಶ್ ಅವಾಚ್ಯ ಪದಗಳಿಂದ ನಿಂದಿಸುತ್ತಾ, ಕಚೇರಿಯಲ್ಲಿದ್ದ ಕಂಪ್ಯೂಟರ್ ಮೇಲಕ್ಕೆತ್ತಿ ಎಸೆಯುವ ಪ್ರಯತ್ನ ಮಾಡಿದ್ದಾನೆ.

    ಈ ಸಂದರ್ಭದಲ್ಲಿ ಅಲ್ಲೇ ಇದ್ದ ಇಬ್ಬರು ಸಿಬ್ಬಂದಿ ಆತನನ್ನು ಸಮಾಧಾನಪಡಿಸಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ನಂತರ ಬಂದ ಅಧಿಕಾರಿಗಳು ಮಾಸ್ಕ್ ಧರಿಸದೆ ಇದ್ದದ್ದಕ್ಕೆ ಆತನಿಗೆ ಬುದ್ಧಿವಾದವನ್ನು ಹೇಳಿ ನಿಮ್ಮ ಸೇವೆಗೆ ನಾವಿರುವುದು. ಹೆಲ್ತ್ ಕಾರ್ಡ್ ಆಗಲಿ ಮತ್ತೊಂದಾಗಲಿ ಮಾಡಿಕೊಡುತ್ತೇವೆ. ಅರ್ಜಿಯನ್ನು ಸಲ್ಲಿಸಿ ಎಂದು ಹರೀಶ್ ನ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕುಪಿತಗೊಂಡ ಹರೀಶ್ ಕಾರ್ಯದರ್ಶಿಯ ನಿಂಗಯ್ಯ ಅವರಿಗೆ ಮಾಸ್ಕ್ ಗಳನ್ನು ನಾವು ತೆಗೆದುಕೊಳ್ಳುವುದಿಲ್ಲ ಪಂಚಾಯತಿಯಿಂದಲೇ ಕೊಡಬೇಕು ಎಂದು ಗಲಾಟೆ ಮಾಡಿದ್ದಾನೆ. ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

  • ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    – ಗ್ರಾಮ ಪಂಚಾಯಿತಿಯಿಂದ ವಿನೂತನ ಕ್ರಮ

    ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಲಾಕ್‍ಡಾನ್ ಜಾರಿ ಮಾಡಿದೆ. ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಮನೆಯಲ್ಲೇ ಉಳಿಯುವಂತೆ ಮಾಡಲು ಪೊಲೀಸರು, ಅಧಿಕಾರಿಗಳು ಹರ ಸಾಹಸ ಮಾಡುತ್ತಿದ್ದಾರೆ. ಆದರೆ ಕೇರಳದ ಗ್ರಾಮ ಪಂಚಾಯತಿಯೊಂದು ವಿಶೇಷ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದೆ.

    ಕೇರಳದ ಮಲಪ್ಪುರಂ ಜಿಲ್ಲೆಯ ತಜ್ಹೆಕ್ಕೊಡ್ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ನಿವಾಸಿಗಳಿಗೆ ಲಾಕ್‍ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಮನವಿ ಮಾಡಿದೆ. ಅಲ್ಲದೇ ಯಾರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಾರೋ ಅಂತಹವರಿಗೆ ಮೊದಲ ಮೂರು ಬಹುಮಾನಗಳಾಗಿ ಗೋಲ್ಡ್, ಫ್ರೀಡ್ಜ್ ಹಾಗೂ ವಾರ್ಷಿಂಗ್ ಮಿಷನ್ ನೀಡುವುದಾಗಿ ಹೇಳಿದೆ. ಅಲ್ಲದೇ ಇತರೇ 50 ಬಹುಮಾನಗಳನ್ನು ಕೂಡ ನೀಡುವುದಾಗಿ ತಿಳಿಸಿದೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಂಚಾಯತ್ ಅಧ್ಯಕ್ಷ ಎಕೆ ನಸಾರ್, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಕುಟುಂಗಳಿವೆ. ಕೆಲ ಮಂದಿಯನ್ನು ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸ್ವಯಂ ಸೇವಕರನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

    ಮೇ 3ರ ಬಳಿಕ ಲಾಕ್‍ಡೌನ್ ಅಂತ್ಯವಾಗುವ ಸೂಚನೆ ಇದೆ. ಆ ವೇಳೆಗೆ ಸ್ವಯಂ ಸೇವಕರಿಂದ ಮಾಹಿತಿ ಸಂಗ್ರಹಿಸಿ ಮನೆಯಿಂದ ಯಾರು ಹೊರಹೋಗಿಲ್ಲ ಎಂದು ಹೇಳುವ ಎಲ್ಲರಿಗೂ ಅಫಿಡವಿಡ್ ಕೇಳುತ್ತೇವೆ. ಅಂತಹ ಎಲ್ಲಾ ಕುಟುಂಗಳಿಗೂ ಕೂಪನ್ ನೀಡಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.

    ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ರಸ್ತೆ ಮೇಲೆ ಕೊರೊನಾ ಜಾಗೃತಿ ಚಿತ್ರ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೊರೊನಾದಂತೆ ವೇಷ ಧರಿಸಿ ಜಾಗೃತಿ ಮೂಡಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೂ ಸಾಕಷ್ಟು ಮಂದಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಕೇರಳದ ಗ್ರಾಮಪಂಚಾಯಿತಿ ಹೊಸ ಕಾರ್ಯಕ್ರಮಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಮಾದರಿಯಲ್ಲೇ ಮತ್ತೊಂದು ಹೋರಾಟಕ್ಕೆ ಸಿದ್ಧತೆ

    ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಮಾದರಿಯಲ್ಲೇ ಮತ್ತೊಂದು ಹೋರಾಟಕ್ಕೆ ಸಿದ್ಧತೆ

    ಮಡಿಕೇರಿ: ಕಳೆದ ನಾಲ್ಕು ವರ್ಷಗಳ ಹಿಂದೆ ದೇಶದ ಗಮನವನ್ನೇ ಸೆಳೆದಿದ್ದ ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರ ಹೋರಾಟ ಇನ್ನೂ ಮಾಸಿಲ್ಲ. ಆಗಲೇ ಇದೇ ಮಾದರಿಯ ಮತ್ತೊಂದು ಹೋರಾಟವನ್ನು ಬುಡಕಟ್ಟು ಮತ್ತು ದಲಿತ ಸಮುದಾಯದ 40 ಕುಟುಂಬಗಳು ನಡೆಸುತ್ತಿವೆ. ಆಹೋರಾತ್ರಿಯ ಈ ಹೋರಾಟಕ್ಕೆ ಅಧಿಕಾರಿಗಳು ಮಾತ್ರ ದರ್ಪ ತೋರಿಸುತ್ತಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನಲ್ಲಿ. 2016 ರಲ್ಲಿ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರು ಸ್ವಂತ ಸೂರಿಗಾಗಿ ಆಹೋರಾತ್ರಿ ಮತ್ತು ಬೆತ್ತಲೆ ಹೋರಾಟ ಮಾಡಿ ಇಡೀ ದೇಶದ ಗಮನಸೆಳೆದಿದ್ದರು. ಇದೀಗ ಪೆರಂಬಾಡಿ, ಕೆದಮುಳ್ಳೂರು, ಬಿಟ್ಟಂಗಾಲ, ಆರ್ಜಿ ಪಂಚಾಯಿತಿ ವ್ಯಾಪ್ತಿಯ 40 ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮುದಾಯದ ಕುಟುಂಬಗಳು ಹೋರಾಟ ನಡೆಸುತ್ತಿವೆ. ಬಾಳುಗೋಡಿನ ಸರ್ವೇನಂಬರ್ 337/1 ರಲ್ಲಿರುವ 30 ಎಕರೆ ಸರ್ಕಾರಿ ಪೈಸಾರಿ ಜಾಗದ ಪೈಕಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಕಳೆದ ಐದು ದಿನಗಳ ಹಿಂದೆ ಗುಡಿಸಲು ನಿರ್ಮಿಸಿ ವಾಸಿಸಲು ಮುಂದಾಗಿದ್ದರು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ಕಂದಾಯ ಅಧಿಕಾರಿ ಮತ್ತು ಪಂಚಾಯಿತಿಯ ಅಧಿಕಾರಿಗಳು ಗುಡಿಸಲುಗಳನ್ನು ಕಿತ್ತೆಸೆದು ದರ್ಪ ಮೆರೆದಿದ್ದಾರೆ. ಹೀಗಾಗಿ ಅಷ್ಟು ಕುಟುಂಬಗಳು ನಮಗೆ ಸ್ವಂತ ಮನೆ ನಿರ್ಮಿಸಿಕೊಡುವವರಗೆ ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ ಎನ್ನುತ್ತಿದ್ದಾರೆ.

    ತಂದೆ ಅಜ್ಜನ ಕಾಲದಿಂದಲೂ ಕಾಫಿ ಎಸ್ಟೇಟ್‍ನ ಲೈನ್‍ಮನೆಯಲ್ಲೇ ಬೆಳೆದಿದ್ದೇವೆ. ಅಲ್ಲಿಯ ಸಮಸ್ಯೆಗಳನ್ನು ಅನುಭವಿಸಿ ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿದ್ದೇವೆ. ಬಾಡಿಗೆ ಕಟ್ಟೋದಕ್ಕೆ ನಮ್ಮ ಬಳಿ ಹಣವೂ ಇಲ್ಲದೆ ಸೂರು ಕಲ್ಪಿಸಿಕೊಡುವಂತೆ ಹತ್ತು ವರ್ಷಗಳಿಂದ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿದರೆ ಅಧಿಕಾರಿಗಳು ಬಂದು ಎಲ್ಲವನ್ನು ಕಿತ್ತೆಸೆದು ದರ್ಪ ಮೆರೆಯುತ್ತಿದ್ದಾರೆ. ನಮಗೆ ಸ್ವಂತ ಸೂರು ನಿರ್ಮಿಸಿಕೊಡದ ಹೊರತ್ತು ಇಲ್ಲಿಂದ ಹೋಗೋದಿಲ್ಲ ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ.

    ಅಧಿಕಾರಿಗಳು ಮಾತ್ರ ಇದು ಸರ್ಕಾರಿ ಜಾಗ, ಅಲ್ಲಿ ಸ್ಮಶಾನಕ್ಕೆ ಜಾಗ ಕೊಡಬೇಕಾಗಿದೆ. ಜೊತೆಗೆ ವಿರಾಜಪೇಟೆ ನಗರದ ಕಸವಿಲೇವಾರಿಗೆ ಜಾಗಕೊಡಬೇಕಾಗಿದೆ. ಹೀಗಾಗಿ ಆ ಸ್ಥಳದಲ್ಲಿ ಯಾರನ್ನೂ ಕೂರಲು ಬಿಡುವುದಿಲ್ಲ. ಒಂದು ವೇಳೆ ಅವರ ಪ್ರತಿಭಟನೆ ಮುಂದುವರಿದು ಕುಳಿತರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲೆಲ್ಲಿಂದಲೋ ಜನರು ಬಂದು ಕುಳಿತಿದ್ದಾರೆ. ಅವರೆಲ್ಲರ ಪೂರ್ವಾಪರ ಪರಿಶೀಲನೆ ಮಾಡಿ, ಒಂದು ವೇಳೆ ನಿಜವಾಗಿಯೂ ಅವರು ನಿರಾಶ್ರಿತರೇ ಆಗಿದ್ದರೆ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಕೊಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಗ್ರಾ.ಪಂ ಸದಸ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಸ್‍ಐ

    ಗ್ರಾ.ಪಂ ಸದಸ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಸ್‍ಐ

    ಮೈಸೂರು: ಗಣಪತಿ ವಿಸರ್ಜನೆ ವಿಚಾರವಾಗಿ ಗ್ರಾ.ಪಂ ಸದಸ್ಯನಿಗೆ ದೂರವಾಣಿ ಕರೆ ಮಾಡಿದ ಎಸ್‍ಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿವೆ.

    ಸಿದ್ದರಾಜ್ ನಾಯಕ ರಾಮನಹಳ್ಳಿ ಗ್ರಾ.ಪಂ ಸದಸ್ಯ ಹಾಗೂ ಅಂಗವಿಕಲರಿಗೆ ಗಣೇಶ ವಿಸರ್ಜನೆಯ ವಿಚಾರವಾಗಿ ಇಲವಾಲ ಠಾಣೆ ಎಸ್‍ಐ ಮುದ್ದು ಮಾದಪ್ಪ ಅವಾಚ್ಯ ಶಬ್ದಗಳಿಂದ ಬೈದಿದ್ದಾರಂತೆ. ಅವಾಚ್ಯ ಶಬ್ದದಿಂದ ನಿಂದಿಸಿದ ಹಿನ್ನಲೆ ಗ್ರಾಮಸ್ಥರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆಗೆ ಮುಂದಾದರು.

    ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಹಿನ್ನೆಲೆ ಮೈಸೂರು ತಾಲೂಕಿನ ಇಲವಾಲ ಪೊಲೀಸ್ ಠಾಣೆ ಬಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿ, ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಘೊಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇನ್ಸ್‌ಪೆಕ್ಟರ್ ಮುದ್ದು ಮಾದಪ್ಪರನ್ನು ಕೂಡಲೇ ಸೇವೆಯಿಂದ ವಜಾಗೊಳಿಸುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv