Tag: ಗ್ರಹಣ

  • ಭಾನುವಾರ ರಾಹು ಗ್ರಸ್ತ ಚಂದ್ರಗ್ರಹಣ – ಯಾವ ರಾಶಿಗೆ ಏನು ಫಲ?

    ಭಾನುವಾರ ರಾಹು ಗ್ರಸ್ತ ಚಂದ್ರಗ್ರಹಣ – ಯಾವ ರಾಶಿಗೆ ಏನು ಫಲ?

    ಸೆಪ್ಟೆಂಬರ್ 7 ಭಾನುವಾರ ರಾತ್ರಿ ರಾಹು ಗ್ರಸ್ತ ಚಂದ್ರಗ್ರಹಣ ನಡೆಯಲಿದೆ. ರಾತ್ರಿ 09:45ರಿಂದ ಸೆ.8 ರ ನಸುಕಿನ ಜಾವ 1:27ರವರೆಗೆ ಗ್ರಹಣ ನಡೆಯಲಿದೆ. ಈ ಸಮಯದಲ್ಲಿ ದೇವರ ಜಪ, ಸ್ತೋತ್ರ ಪಠಣ, ಹೋಮ, ಪೂಜೆಗಳನ್ನು ಮಾಡಿದರೆ ಒಳ್ಳೆದಾಗುತ್ತದೆ. ಗ್ರಹಣಕ್ಕೆ ಸಂಬಂಧಿಸಿದಂತೆ ರಾಶಿಫಲಗಳನ್ನು ಇಲ್ಲಿ ನೀಡಲಾಗಿದೆ.

    ಮೇಷ: ಉದ್ಯೋಗದಲ್ಲಿ ಕಲಹ, ಆರೋಗ್ಯ ಸಮಸ್ಯೆ, ಗ್ರಹಣ ಬಳಿಕ ಇನ್ನಷ್ಟು ಸಂಕಷ್ಟ, ವ್ಯವಹಾರದಲ್ಲಿ ತೊಂದರೆ.

    ವೃಷಭ: ಯೋಚಿಸಿ ನಿರ್ಧಾರ ಕೈಗೊಳ್ಳಿ, ಅನಗತ್ಯ ಮಾತು ಬೇಡ, ಮಾತಿನ ಮೇಲೆ ನಿಗಾ ಇರಲಿ, ಆರೋಗ್ಯದ ಕಡೆ ಎಚ್ಚರವಿರಲಿ, ಮೊಣಕಾಲು, ಸೊಂಟ ನೋವಿನ ಬಾಧೆ, ರಕ್ತ ಸಂಬಂಧ ಕಾಯಿಲೆ ಬಗ್ಗೆ ಎಚ್ಚರ.

    ಮಿಥುನ: ಗ್ರಹಣದಿಂದ ಲಾಭವೂ ಇಲ್ಲ. ನಷ್ಟವೂ ಇಲ್ಲ, ಮಾನಸಿಕ ಕಿರಿಕಿರಿ, ಒತ್ತಡ, ಜೀವನದಲ್ಲಿ ಬದಲಾವಣೆಯ ಸಮಯ.

    ಕರ್ಕಾಟಕ: ಆರ್ಥಿಕ ಸಂಕಷ್ಟ ಎದುರಾಗಲಿದೆ, ಆಚಾತುರ್ಯ ನಡೆಯಬಹುದು, ಕಷ್ಟ-ಸುಖ ಸಮತೋಲನದಲ್ಲಿರಲಿದೆ.

    ಸಿಂಹ: ನಾನು, ನನ್ನದೆಂಬ ಮೊಂಡಾಟ ಬೇಡ, ಮೊಂಡು ಹಠ ಜಾಸ್ತಿ ಆಗಲಿದೆ, ಗ್ರಹಣದಿಂದ ವಿಶೇಷ ಲಾಭವಿಲ್ಲ, ಈ ರಾಶಿಯವರಿಗೆ ಗುರುಬಲ ಇದೆ. ಮಾನಸಿಕ ಸ್ಥಿತಿ ಹತೋಟಿಯಲ್ಲಿರಲಿದೆ.

    ಕನ್ಯಾ: ಗ್ರಹಣದಿಂದ ಕೊಂಚ ಒಳ್ಳೆಯದಾಗಲಿದೆ, ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆ.

    ತುಲಾ: ಕೆಲಸವನ್ನು ಮುನ್ನುಗ್ಗಿ ಮಾಡಬೇಕು, ದೇವರು ಕೊಟ್ಟ ವರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ನಿಮ್ಮ ಉದ್ಧಾರದ ಜೊತೆ ಬೇರೆಯವರ ಉದ್ಧಾರವೂ ಸಾಧ್ಯ, ನಿಮ್ಮ ಪ್ರಯತ್ನ ನಿರಂತರವಾಗಿರಲಿ.

    ವೃಶ್ಚಿಕ: ಸಮಾಧಾನರಾಗಿರಿ, ಸಂತೃಪ್ತರಾಗಿರಿ, ಕಿರಿಕಿರಿ ಬೇಡ, ದುಡ್ಡು ಬಾರದೇ ಸಮಸ್ಯೆ ಅನುಭವಿಸಿರುತ್ತೀರಿ, ಹಿರಿಯರ ಅನುಭವದ ಮಾತು ಪಾಲಿಸಿ.

    ಮಕರ: ಕಳೆದ ಆರು ತಿಂಗಳಿನಿಂದ ಸಮಸ್ಯೆ ಇದೆ, ಮಾಡದಿರುವ ತಪ್ಪುಗಳಿಗೆ ತಲೆಬಾಗಿಸುವ ಪರಿಸ್ಥಿತಿ ಇದೆ, ಗ್ರಹಣದಿಂದ ಮುಂದಿನ 6 ತಿಂಗಳು ಹುಷಾರಾಗಿರಬೇಕು, ಗುರು, ಶನಿ ವಕ್ರನಿರುವುದರಿಂದ ಸಮಸ್ಯೆ ಇರಲಿದೆ.

    ಧನುಸ್ಸು: ಮುಂದಿನ 3 ತಿಂಗಳು ಲಾಭದಾಯಕವಾಗಿಲ್ಲ, ಜೀವನದಲ್ಲಿ ಪರಿವರ್ತನೆ ಕಾಲ ಸಮೀಪಿಸುತ್ತಿದೆ.

    ಕುಂಭ: ಬಹಳಷ್ಟು ಸಮಸ್ಯೆಗಳಿವೆ, ವಿದ್ಯೆ, ಬುದ್ಧಿಯಿಂದ ಎಲ್ಲ ಸರಿಮಾಡಿಕೊಳ್ಳಬೇಕು, ಸಜ್ಜನರ ಜೊತೆಗೆ ಇರಬೇಕು, ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ.

    ಮೀನಾ: ದೂರದ ಪ್ರಯಾಣ ಬೇಡ, ಕೊಟ್ಟಿರೋದನ್ನು ವಾಪಸ್ ತೆಗೆದುಕೊಳ್ಳೋದು ಕಷ್ಟ, ಗ್ರಹಣ ಛಾಯೆಯಿಂದ ಕೆಲ ತೊಂದರೆ ಎದುರಾಗಬಹುದು, ಆರು ತಿಂಗಳ ಬಳಿಕ ಒಳಿತಾಗಲಿದೆ.

  • ರಾಹುಗ್ರಸ್ತ ರಕ್ತ ಚಂದ್ರಗ್ರಹಣಕ್ಕೆ ಕ್ಷಣಗಣನೆ – ರಾಜ್ಯದ ಪ್ರಸಿದ್ಧ ದೇವಾಲಯಗಳು ಬಂದ್

    ರಾಹುಗ್ರಸ್ತ ರಕ್ತ ಚಂದ್ರಗ್ರಹಣಕ್ಕೆ ಕ್ಷಣಗಣನೆ – ರಾಜ್ಯದ ಪ್ರಸಿದ್ಧ ದೇವಾಲಯಗಳು ಬಂದ್

    – ಗ್ರಹಣ ದಿನ ದೇವರಿಗೂ `ದರ್ಬೆ’ ದಿಗ್ಬಂಧನ

    ಬೆಂಗಳೂರು: ನಾಳೆ (ಸೆ.7ರ) ರಾತ್ರಿ ನಭೋ ಮಂಡಲದಲ್ಲಿ ಖಗೋಳ ಕೌತುಕ ಸಂಭವಿಸಲಿದೆ. ಈ ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣ (Lunar Eclipse) ನಡೆಯುತ್ತಿದೆ. ಸುದೀರ್ಘ ಮೂರೂವರೆ ಗಂಟೆಗಳ ಕಾಲ ನಡೆಯುವ ಭೂಮಿ (Earth), ಸೂರ್ಯ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ಗ್ರಹಣದ ವೇಳೆ ನಮ್ಮಲ್ಲಿ ಗ್ರಹಗತಿಗಳ ಬದಲಾವಣೆ ಆಗುತ್ತೆ ಅನ್ನೋ ನಂಬಿಕೆ ದಟ್ಟವಾಗಿದೆ. ಅದೇ ರೀತಿ ಗ್ರಹಣದ ದಿನ ದೇವರಿಗೂ ದರ್ಬೆಯಿಂದ ದಿಗ್ಬಂಧನ ಮಾಡಲಾಗುತ್ತದೆ.

    ಚಂದ್ರಗ್ರಹಣದ ಪ್ರಭಾವ ದೇವಾಲಯದ (Famous Temples) ಮೇಲೆ ಬೀರಬಾರದು ಎಂಬ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳ ದರ್ಶನದ ಅವಧಿ ಬದಲಾಗಲಿದೆ. ಗ್ರಹಣ ಆರಂಭಕ್ಕೂ ಮುನ್ನವೇ ಬೆಂಗಳೂರಿನ ಬಹುತೇಕ ದೇವಾಲಯಗಳ (Bengaluru Temples) ಬಾಗಿಲು ಮುಚ್ಚಲಾಗುತ್ತದೆ. ಯಾವ್ಯಾವ ದೇಗುಲಗಳು ಯಾವ ಸಮಯಕ್ಕೆ ಬಂದ್ ಆಗಲಿದೆ ಎಂಬ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಮುಂದೆ ಓದಿ…

    ಯಾವ ದೇವಸ್ಥಾನ ಎಷ್ಟು ಗಂಟೆಗೆ ಬಂದ್?‌
    ಗಾಳಿ ಆಂಜನೇಯ (ಬೆಂಗಳೂರು)
    ಮಧ್ಯಾಹ್ನ 3.00 ಗಂಟೆ

    ಬನಶಂಕರಿ (ಬೆಂಗಳೂರು)
    ಸಂಜೆ 6.00 ಗಂಟೆ

    ಕಾಡುಮಲ್ಲೇಶ್ವರ (ಮಲ್ಲೇಶ್ವರಂ)
    ಮಧ್ಯಾಹ್ನ – 12.20 ಗಂಟೆ

    ಗವಿಗಂಗಾಧರ (ಗವಿಪುರಂ)
    ಬೆಳಗ್ಗೆ- 11.00

    ಅಣ್ಣಮ್ಮ ದೇವಾಲಯ (ಮೆಜೆಸ್ಟಿಕ್)
    ಸಂಜೆ- 08.00 ಗಂಟೆ

    ಬಂಡೆ ಮಹಾಕಾಳಿ (ಚಾಮರಾಜಪೇಟೆ)
    ಸಂಜೆ – 07.30 ಗಂಟೆ

    ರಾಜರಾಜೇಶ್ವರಿ (ಆರ್.ಆರ್ ನಗರ)
    ಸಂಜೆ – 08.00 ಗಂಟೆ

    ಇಸ್ಕಾನ್ (ರಾಜಾಜಿನಗರ)
    ರಾತ್ರಿ – 9:00 ಗಂಟೆಗೆ ಬಂದ್‌ ಆಗಲಿದೆ. ಇನ್ನು ಬಂಡೆ ಮಹಾಕಾಳಿ ದೇವಾಲಯದ ದರ್ಶನದ ಅವಧಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಎಂದಿನಂತೆ ಭಕ್ತರಿಗೆ ದರ್ಶನ ಭಾಗ್ಯ ಇರಲಿದೆ.

    ಚಾಮುಂಡಿ ದೇಗುಲ, ಘಾಟಿ ಸುಬ್ರಹ್ಮಣ್ಯವೂ ಬಂದ್..!
    ಗ್ರಹಣ ಹಿನ್ನೆಲೆ ಬೆಂಗಳೂರಿನ ಬಹುತೇಕ ದೇಗುಲಗಳಿಗೆ ಗ್ರಹಣದ ದಿನ ದಿಗ್ಬಂಧನ ಏರ್ಪಟ್ಟರೆ. ಜಿಲ್ಲಾವಾರು ಇರುವ ಪ್ರಸಿದ್ಧ ಶಕ್ತಿ ದೇವತೆಗಳು, ಶಕ್ತಿ ದೇವಾಲಯಗಳಿಗೂ ಬೀಗ ಹಾಕಲಾಗ್ತಿದೆ.

    ಚಾಮುಂಡಿ ದೇಗುಲ (ಮೈಸೂರು)
    ರಾತ್ರಿ 9.30 ಗಂಟೆಗೆ ಬಂದ್‌

    ಕುಕ್ಕೆ ಸುಬ್ರಹ್ಮಣ್ಯ (ದ.ಕನ್ನಡ)
    ಸಂಜೆ 5 ಗಂಟೆಗೆ ಬಂದ್‌

    ಧರ್ಮಸ್ಥಳ ದೇಗುಲ (ದ.ಕನ್ನಡ)
    ಸಂಜೆ 7 ಗಂಟೆಗೆ ಬಂದ್‌

    ಕುದ್ರೋಳಿ ದೇಗುಲ (ಮಂಗಳೂರು)
    ರಾತ್ರಿ 8 ಗಂಟೆಗೆ ಬಂದ್‌

    ಕದ್ರಿ ದೇಗುಲ (ಮಂಗಳೂರು)
    ಸಂಜೆ 6.30 ಗಂಟೆಗೆ ಬಂದ್‌

    ಘಾಟಿ ಸುಬ್ರಹ್ಮಣ್ಯ (ಚಿಕ್ಕಬಳ್ಳಾಪುರ)
    ಸಂಜೆ 4.00 ಗಂಟೆಗೆ ಬಂದ್‌

    ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ)
    ಮಧ್ಯಾಹ್ನ 12.30 ಗಂಟೆಗೆ ಬಂದ್‌

    ಹುಲಗೆಮ್ಮ ದೇಗುಲ (ಕೊಪ್ಪಳ)
    ಸಂಜೆ 5.00 ಗಂಟೆಗೆ ಬಂದ್‌

    ಅಂಜನಾದ್ರಿ ಬೆಟ್ಟ (ಗಂಗಾವತಿ)
    ಸಂಜೆ 5.00 ಗಂಟೆಗೆ ಬಂದ್‌

    ಚನ್ನಕೇಶವ ದೇಗುಲ (ಬೇಲೂರು)
    ಮಧ್ಯಾಹ್ನ 3 ಗಂಟೆಗೆ ಬಂದ್‌

    ಚಲುವನಾರಾಯಣಸ್ವಾಮಿ, (ಮೇಲುಕೋಟೆ)
    ಮಧ್ಯಾಹ್ನ 1:00 ಗಂಟೆಗೆ ಬಂದ್‌

    ನಿಮಿಷಾಂಭ ದೇಗುಲ (ಶ್ರೀರಂಗಪಟ್ಟಣ)
    ಮಧ್ಯಾಹ್ನ 12:00 ಗಂಟೆಗೆ ಬಂದ್‌

    ಶ್ರೀರಂಗನಾಥ ದೇಗುಲ (ಶ್ರೀರಂಗಪಟ್ಟಣ)
    ಸಂಜೆ 5:00 ಗಂಟೆಗೆ ಬಂದ್‌

    ಶ್ರೀಕೃಷ್ಣ ಮಠದಲ್ಲಿ ಗ್ರಹಣ ಶಾಂತಿ ಹೋಮ
    ಈ ಎಲ್ಲ ದೇಗುಲಗಳಿಗೆ ಗ್ರಹಣ ವೇಳೆ ಬೀಗ ಹಾಕಿದ್ರೆ. ಇನ್ನುಳಿದಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ ಹೋಮ ನಡೆಸಲಾಗುತ್ತದೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಗ್ರಹಣದ ವೇಳೆ ಯಾವುದೇ, ಪೂಜೆ ಪುನಸ್ಕಾರಗಳಿಲ್ಲ. ಎಂದಿನಂತೆ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತದೆ. ಶೃಂಗೇರಿ ಶಾರದಾ ದೇಗುಲ, ಬೆಳಗಾವಿ ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ಎಂದಿನಂತೆ ಪೂಜೆ ಇರಲಿದೆ.

    ಇನ್ನು ಯುಪಿಯ ಅಯೋಧ್ಯೆಯ ರಾಮಮಂದಿರ ನಾಳೆ ಮಧ್ಯಾಹ್ನ 12:30ಕ್ಕೆ ಬಂದ್ ಆದರೆ, ಆಂಧ್ರಪ್ರದೇಶದ ತಿರುಪತಿ ದೇಗುಲ ನಾಳೆ ಮಧ್ಯಾಹ್ನದಿಂದ ಸೋಮವಾರ ಬೆಳಗ್ಗೆ 3 ಗಂಟೆ ವರೆಗೆ ಬಂದ್ ಆಗಲಿದೆ. ಸೋಮವಾರ ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

  • ಮಹದೇಶ್ವರ ಬೆಟ್ಟದಲ್ಲಿ ಹಾಲರುವೆ ಉತ್ಸವ – ಗ್ರಹಣ ವೇಳೆಯೂ ಮಾದಪ್ಪನ ದರ್ಶನ

    ಮಹದೇಶ್ವರ ಬೆಟ್ಟದಲ್ಲಿ ಹಾಲರುವೆ ಉತ್ಸವ – ಗ್ರಹಣ ವೇಳೆಯೂ ಮಾದಪ್ಪನ ದರ್ಶನ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Temple) ದೀಪಾವಳಿ (Diwali) ಜಾತ್ರೆಯ ಎರಡನೇ ದಿನವಾದ ಇಂದು ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಸಮುದಾಯಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆಹಳ್ಳದಿಂದ ಬರಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡಿದರು.

    ಬೇಡಗಂಪಣ ಜನಾಂಗದ ಹನ್ನೊಂದು ವರ್ಷದೊಳಗಿನ 101 ಹೆಣ್ಣುಮಕ್ಕಳು ಉಪವಾಸವಿದ್ದು, ಹಾಲಹಳ್ಳಕ್ಕೆ ಬಂದು ಸ್ನಾನ ಮಾಡಿ ಹಳ್ಳದಲ್ಲಿ ಹರಿಯುವ ನೀರು ಹೊತ್ತು ತಂದರು. ಬರಿಗಾಲಲ್ಲಿ ಒಂಬತ್ತು ಕಿ.ಮೀ ಬೆಟ್ಟ, ಗುಡ್ಡ ಹತ್ತಿ ಬಂದ ಇವರನ್ನು ಮಂಗಳವಾದ್ಯ ಸಮೇತ ದೇವಸ್ಥಾನಕ್ಕೆ ಕರೆದೊಯ್ದು ಬಾಲೆಯರು ಕುಂಭದಲ್ಲಿ ತಂದ ನೀರನ್ನು ಮಹದೇಶ್ವರನಿಗೆ ಅಭಿಷೇಕ ಮಾಡಲಾಯಿತು. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ

    ಬಳಿಕ ಅಭಿಷೇಕದ ನೀರನ್ನು ಭಕ್ತರಿಗೆ ತೀರ್ಥ ರೂಪದಲ್ಲಿ ನೀಡಲಾಯಿತು. ಈ ತೀರ್ಥ ಸ್ವೀಕರಿಸಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ಇನ್ನೂ ಸೂರ್ಯ ಗ್ರಹಣದ (Solar Eclipse) ನಡುವೆಯೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ

    Live Tv
    [brid partner=56869869 player=32851 video=960834 autoplay=true]

  • ನಾಳೆ ಈ ವರ್ಷದ ಕೊನೆಯ ಚಂದ್ರ ಗ್ರಹಣ – ಒಳಿತು, ಕೆಡುಕುಗಳು ಏನು?

    ನಾಳೆ ಈ ವರ್ಷದ ಕೊನೆಯ ಚಂದ್ರ ಗ್ರಹಣ – ಒಳಿತು, ಕೆಡುಕುಗಳು ಏನು?

    ಬೆಂಗಳೂರು: ನಾಳೆ ಕಾರ್ತಿಕ ಗ್ರಹಣ ನಡೆಯಲಿದೆ. ವರ್ಷದ ಕೊನೆಯ ಚಂದ್ರ ಗ್ರಹಣದತ್ತ ಜನರ ಚಿತ್ತ ನೆಟ್ಟಿದೆ. ಹೀಗಾಗಿ ಈಗ ಗ್ರಹಣ ಒಳಿತೋ? ಕೆಡುಕೋ ಎಂಬುದರ ಬಗ್ಗೆ ಆನಂದ್ ಗುರೂಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಕಾರ್ತಿಕ ಹುಣ್ಣಿಮೆ ವರ್ಷದ ಕೊನೆಯ ಗ್ರಹಣ ತುಂಬಾ ವಿಶೇಷವಾಗಿದೆ. ಕೆಲವರು ಗ್ರಹಣ ಇದೆ ಅಂತಾರೆ, ಮತ್ತೆ ಕೆಲವೊಬ್ಬರು ಇಲ್ಲ ಎನ್ನುತ್ತಾರೆ. ಮಧ್ಯಾಹ್ನವಾದರೂ ಕೂಡಾ ಚಂದ್ರಗೆ ಗ್ರಹಣ ಹಿಡಿಯಲಿದೆ ಆದರೆ ನಮ್ಮ ದೇಶದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಅಮೆರಿಕಾದಲ್ಲಿ ಗ್ರಹಣ ಕಾಣುತ್ತದೆ

    ಪ್ರಕೃತಿ ಮೇಲೆ ಗ್ರಹಣದ ಪರಿಣಾಮ:
    ಚಂದ್ರನಿಗೆ ಕೆಲವು ಸಂಕಷ್ಟಗಳು ಇರುತ್ತವೆ ಮತ್ತು ಪ್ರಕೃತಿಯಲ್ಲಿ ಕೆಲವೊಂದಿಷ್ಟು ವೈಪರಿತ್ಯಗಳು ಆಗಲಿದೆ. ಈ ಗ್ರಹಣವು ನೈಸರ್ಗಿಕವಾಗಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಗ್ರಹಣವು ಸಮಸ್ಯೆಯನ್ನು ಹೊತ್ತು ಬರುತ್ತದೆ. ವರ್ಷದ ಕಡೆಯ ಗ್ರಹಣ ಇದಾಗಿದೆ. ಹೀಗಾಗಿ ಎಚ್ಚರಿಕೆವಹಿಸಬೇಕಾಗಿರುವುದು ಅಗತ್ಯವಾಗಿದೆ.

    ಯಾರು ಎಚ್ಚರದಲ್ಲಿರಬೇಕು?
    ಗೃಹಿಣಿಯರು ತುಂಬಾ ಎಚ್ಚರಿಕೆಯಿಂದ ಇರಬೇಕು. ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಗ್ರಹಣದಿಂದಾಗಿ ವಿಶೇಷ ಗುಣ ಉಳ್ಳವರು, ಪ್ರಮುಖರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

    ಏನು ಮಾಡಬೇಕು:
    ಕೊರೋನಾ ಎರಡನೇ ಅಲೆ ಅಷ್ಟು ತೀವ್ರವಾಗಿರಲ್ಲ. ಆದರೂ ಎಚ್ಚರಿಕೆ ವಹಿಸಬೇಕು. ಯೋಗ, ಧ್ಯಾನ ಮಾಡುವುದರ ಜೊತೆ ಗ್ರಹಣದ ವೇಳೆ ಚಂದ್ರಶೇಖರ ಮತ್ತು ಶಿವನನ್ನು ಆರಾಧಿಸಬೇಕು. ಗ್ರಹಣದ ಬಳಿಕ ಶಿವ ದೇವಾಲಯಕ್ಕೆ ಹೋಗಬೇಕು.

  • ಗ್ರಹಣ ಯಾವಾಗ, ಭಾರತದಲ್ಲಿ ಎಲ್ಲೆಲ್ಲಿ ಗೋಚರ?- ಯಾರ್ಯಾರಿಗೆ ಶುಭ, ಅಶುಭ?

    ಗ್ರಹಣ ಯಾವಾಗ, ಭಾರತದಲ್ಲಿ ಎಲ್ಲೆಲ್ಲಿ ಗೋಚರ?- ಯಾರ್ಯಾರಿಗೆ ಶುಭ, ಅಶುಭ?

    ಬೆಂಗಳೂರು: ಜೂನ್ 21ರಂದು ನಭೋ ಮಂಡಲದಲ್ಲಿ ಅಪರೂಪದ ಸೂರ್ಯ ಗ್ರಹಣವಾಗಲಿದ್ದು, ಉಡುಪಿಯಲ್ಲಿ ಪಾಶ್ರ್ವ ಸೂರ್ಯ ಗ್ರಹಣ 40 ಅಂಶ ಗೋಚರವಾಗಲಿದೆ. ಡೆಹ್ರಾಡೂನ್‍ನ ಕುರುಕ್ಷೇತ್ರದಲ್ಲಿ ಸುಮಾರು 180 ಕಿ.ಮೀ.ವ್ಯಾಪ್ತಿಯಲ್ಲಿ ಸಂಪೂರ್ಣ ಕಂಕಣ ಗ್ರಹಣ ಕಾಣಲಿದೆ. ರಾಜಸ್ಥಾನ, ಹರಿಯಾಣ, ಉತ್ತರಾಖಂಡಗಳ ಕೆಲವು ಪ್ರದೇಶಗಳಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರವಾಗಲಿದೆ. ಉಳಿದ ಪ್ರದೇಶದಲ್ಲಿ ಪಾಶ್ರ್ವ ಸೂರ್ಯ ಗ್ರಹಣ ಗೋಚರವಾಗಲಿದೆ.

    ಗ್ರಹಣ ಯಾವಾಗ?
    ಗ್ರಹಣ ಸ್ಪರ್ಶ ಕಾಲ – ಬೆಳಗ್ಗೆ 9.15
    ಗ್ರಹಣ ಮಧ್ಯಕಾಲ – ಮಧ್ಯಾಹ್ನ 12.10
    ಗ್ರಹಣ ಮೋಕ್ಷ ಕಾಲ – ಮಧ್ಯಾಹ್ನ 3.04

    ಯಾರ್ಯಾರಿಗೆ ಶುಭ, ಅಶುಭ?
    ಮಿಥುನ ರಾಶಿಯಲ್ಲಿ ಗ್ರಹಣ ಗೋಚರ
    ಶುಭ ಫಲ – ಮೇಷ, ಸಿಂಹ, ಕನ್ಯಾ, ಮಕರ
    ಅಶುಭ ಫಲ – ಮಿಥುನ, ಕರ್ಕಾಟಕ, ವೃಶ್ಚಿಕ, ಮೀನ
    ಮಿಶ್ರ ಫಲ – ವೃಷಭ, ತುಲಾ, ಧನಸ್ಸು, ಕುಂಭ

    ವಿಶ್ವದ ಎಲ್ಲೆಲ್ಲಿ ಗೋಚರ?
    ಈ ಗ್ರಹಣವು ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ, ಹಿಂದೂ ಮಹಾಸಾಗರ, ಪೆಸಿಫಿಕ್ ಸಾಗರಗಳಲ್ಲಿ ಸ್ಪಷ್ಟವಾಗಿ ಗೋಚರವಾಗಲಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ನೇಪಾಳ, ಸೌದಿ ಅರೇಬಿಯಾ, ಯುರೋಪ್‍ನ ಕೆಲ ಭಾಗಗಳಲ್ಲಿ ಗ್ರಹಣ ಕಾಣಬಹುದು.

    ಮೇಷ ರಾಶಿ:
    ಉದ್ಯೋಗದಲ್ಲಿ ಹೆಚ್ಚಾಗಿ ಅಭಿವೃದ್ಧಿ ಪ್ರಾಪ್ತಿಯಾಗುತ್ತದೆ. ಮಾಡುವ ಕೆಲಸದಲ್ಲಿ ಹೆಚ್ಚಿಗೆ ಲಾಭ ಸಿಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭಸುದ್ದಿ ಬರುತ್ತದೆ. ವ್ಯವಹಾರದಲ್ಲಿ ಜಯ ನಿಮ್ಮದಾಗುತ್ತದೆ. ಹೊಸ ಯೋಜನೆ ಆರಂಭಕ್ಕೆ ಶುಭಕಾಲವಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ.

    ವೃಷಭ ರಾಶಿ:
    ಇತರರ ಕೋಪಕ್ಕೆ ಬೇಗ ತುತ್ತಾಗುತ್ತೀರಿ. ಆದಷ್ಟು ಎಚ್ಚರವಾಗಿ ಕೆಲಸ ಮಾಡಿ. ವ್ಯವಹಾರದಲ್ಲಿ ನಷ್ಟವಾಗಬಹುದು. ನಿಮ್ಮ ಸೋದರ ಸಂಬಂಧಿಗಳಿಂದ ಹೆಚ್ಚಿನ ಲಾಭವಾಗುತ್ತದೆ. ಶ್ರೀ ವಿಷ್ಣುಸಹಸ್ರನಾಮ ಪಠಿಸಿ.

    ಮಿಥುನ ರಾಶಿ:
    ಆಗಾಗ್ಗೆ ಕಲಹಗಳು ಸಂಭವಿಸಬಹುದು. ಸಂಬಂಧಗಳಲ್ಲಿ ಸಂಘರ್ಷವನ್ನು ತಪ್ಪಿಸಿಕೊಳ್ಳಿ. ಎಲ್ಲರೊಂದಿಗೂ ನಾಜೂಕಾಗಿ ವ್ಯವಹಾರ ನಡೆಸಿ. ಆರೋಗ್ಯ ಹದಗೆಡಬಹುದು, ಎಚ್ಚರದಿಂದಿರಿ. ಅನಾರೋಗ್ಯ ನಿಮ್ಮನ್ನು ಹೆಚ್ಚಾಗಿ ಬಾಧಿಸಬಹುದು. ಗಾಯಗಳಾಗುವ ಸಾಧ್ಯತೆ ಹೆಚ್ಚು. ಗಾಯದಂತಹ ಕೆಲಸದಿಂದ ದೂರವಿರಿ. ಕಬ್ಬಿಣದ ಕೆಲಸದಿಂದ ಎಚ್ಚರವಹಿಸಿ. ಶ್ರೀ ವಿಷ್ಣುಸಹಸ್ರನಾಮ ಪಠಿಸಿ.

    ಕರ್ಕಾಟಕ ರಾಶಿ:
    ಧಾರ್ಮಿಕ ಕಾರ್ಯಗಳಲ್ಲಿ ಅಭಿವೃದ್ಧಿಯಾಗುತ್ತದೆ. ಧಾರ್ಮಿಕ ಕೆಲಸದತ್ತ ಹೆಚ್ಚು ನಿರತರಾಗುತ್ತೀರಿ. ಸ್ನೇಹಿತರಿಂದ ಹೆಚ್ಚಿನ ಬೆಂಬಲ ಸಿಗುತ್ತದೆ. ಉದ್ಯೋಗಿಗಳಿಗೆ ಹೆಚ್ಚಿನ ಯಶಸ್ಸು ಪ್ರಾಪ್ತಿಯಾಗುತ್ತದೆ. ಸ್ಥಗಿತಗೊಂಡ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಗಾಯಗಳು ಹೆಚ್ಚಾಗಿ ಸಂಭವಿಸಬಹುದು. ಬೆಲ್ಲವನ್ನು ದಾನ ಮಾಡಿ.

    ಸಿಂಹ ರಾಶಿ:
    ಕೆಲಸದಲ್ಲಿ ಉತ್ತಮ ಯೋಗ ಸಿಗುತ್ತದೆ. ನಿರ್ಧರಿಸಿದ ಕೆಲಸ-ಕಾರ್ಯಗಳು ಪೂರ್ಣಗೊಳ್ಳುತ್ತದೆ. ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಿಗುತ್ತದೆ. ಆರ್ಥಿಕವಾಗಿ ಹೆಚ್ಚು ಸಂತೋಷ ಅನುಭವಿಸ್ತೀರಿ. ತಂದೆಯಿಂದ ಮಕ್ಕಳಿಗೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಯೋಗ, ಧ್ಯಾನ ಹೆಚ್ಚು ಮಾಡಬೇಕು.

    ಕನ್ಯಾರಾಶಿ:
    ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯಾಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಶುಭಸುದ್ದಿ ಕೇಳಿ ಬರುತ್ತದೆ. ಆರ್ಥಿಕ ಪ್ರಗತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶುಭಯೋಗ ಪ್ರಾಪ್ತವಾಗುತ್ತದೆ.

    ತುಲಾ:
    ಸೂರ್ಯಗ್ರಹಣದಿಂದ ತುಲಾ ರಾಶಿಯವರಿಗೆ ಮಿಶ್ರಫಲ. ನೀವು ಕೆಲಸದ ಬಗ್ಗೆ ಉದ್ವಿಗ್ನರಾಗಿರುತ್ತೀರಿ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. ಹರಳಾಗಿಸಿದ ನೀರನ್ನು ಪಕ್ಷಿಗಳಿಗೆ ನೀಡಬೇಕು. ಆರ್ಥಿಕ ವ್ಯವಹಾರದಲ್ಲಿ ಎಚ್ಚರವಿರಲಿ. ಯೋಚಿಸಿ ಖರ್ಚು ಮಾಡುವುದು ಉತ್ತಮ.

    ವೃಶ್ಚಿಕ ರಾಶಿ:
    ವೃತ್ತಿಪರ ಚಿಂತನೆ ಹೆಚ್ಚಾಗುತ್ತದೆ. ಉದ್ಯೋಗಗಳಲ್ಲಿ ಉದ್ವೇಗ ಹೆಚ್ಚಾಗಬಹುದು. ವ್ಯವಹಾರಗಳಲ್ಲಿ ನಷ್ಟ ಸಾಧ್ಯತೆ ಹೆಚ್ಚಿಗೆ ಸಂಭವಿಸಬಹುದು. ಕಲಹಗಳು ಹೆಚ್ಚಾಗಬಹುದು. ವ್ಯವಹಾರದ ವೇಳೆ ಎಚ್ಚರ ಇರಲಿ. ಹನುಮಾನ್ ಚಾಲಿಸ ಪಠಿಸಿ.

    ಧನು ರಾಶಿ:
    ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಮಾಡಿದ ಕೆಲಸದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆರ್ಥಿಕವಾಗಿ ಪ್ರಗತಿ ಸಿಗುತ್ತದೆ. ತಾಪತ್ರಯದಿಂದ ನಿಂತು ಹೋಗಿದ್ದ ಕೆಲಸ ಪೂರ್ಣವಾಗುತ್ತದೆ. ಅನಿರೀಕ್ಷಿತವಾಗಿ ಹಣ ಬರುತ್ತದೆ. ಸಂಗಾತಿ ಆರೋಗ್ಯದ ಬಗ್ಗೆ ಎಚ್ಚರವಿರಲಿ.

    ಮಕರ ರಾಶಿ:
    ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಸ್ಥಗಿತಗೊಂಡ ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತದೆ. ವ್ಯಾಪಾರ-ವಹಿವಾಟು ವೇಳೆ ಎಚ್ಚರವಿರಲಿ.

    ಕುಂಭ ರಾಶಿ:
    ಆಧ್ಯಾತ್ಮಿಕವಾಗಿ ಹೆಚ್ಚಿನ ಸಂತೋಷ ಪ್ರಾಪ್ತಿಯಾಗುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಮಾನಸಿಕವಾಗಿ ಉದ್ವೇಗ ಹೆಚ್ಚಾಗುತ್ತದೆ. ಎಳ್ಳು ದಾನ ಮಾಡಿ.

    ಮೀನ ರಾಶಿ:
    ಕೆಲಸದಲ್ಲಿ ಹೆಚ್ಚಿನ ಪ್ರಗತಿ ಸಿಗುತ್ತದೆ. ಉನ್ನತ ಅಧಿಕಾರಿಗಳಿಂದ ಶುಭಸುದ್ದಿ ಸಿಗುತ್ತದೆ. ಅನಾರೋಗ್ಯ ಬಾಧಿಸಬಹುದು, ಎಚ್ಚರದಿಂದಿರಿ. ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ. ಶ್ರೀ ವಿಷ್ಣುಸಹಸ್ರನಾಮ ಪಠಿಸಿ.

    ಗ್ರಹಣದ ವಿಶೇಷತೆ?
    ಬೆಳಗ್ಗೆ 11:37ಕ್ಕೆ ಗ್ರಹಣ ಪ್ರಮಾಣ ಹೆಚ್ಚು ಗೋಚರ. ಜೂನ್ 21ರ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹುದು. ಕಂಕಣ ಗ್ರಹಣ ಮತ್ತೆ 2064ಕ್ಕೆ ಸಂಭವಿಸಲಿದೆ.

  • ಶುಕ್ರವಾರ ಸಂಭವಿಸಲಿದೆ ಚಂದ್ರ ಗ್ರಹಣ – ವರ್ಷದ 2ನೇ ಚಂದ್ರಗ್ರಹಣ ಹೇಗಿರಲಿದೆ?

    ಶುಕ್ರವಾರ ಸಂಭವಿಸಲಿದೆ ಚಂದ್ರ ಗ್ರಹಣ – ವರ್ಷದ 2ನೇ ಚಂದ್ರಗ್ರಹಣ ಹೇಗಿರಲಿದೆ?

    ಬೆಂಗಳೂರು: ಶುಕ್ರವಾರ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣವೂ ಸಂಪೂರ್ಣವಾಗಿ ಭಿನ್ನವಾಗಿರಲಿದ್ದು, ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಇರಲ್ಲ. ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣದೇ ತನ್ನ ಪೂರ್ಣ ಗಾತ್ರದಲ್ಲೇ ಚಲಿಸಲಿದ್ದಾನೆ.

    ಈ ಚಂದ್ರಗ್ರಹಣವೂ ಕೂಡ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ. ಇದು ಆರಂಭದ ಎರಡು ಗ್ರಹಣಗಳಂತೆ ನೆರಳು ಚಂದ್ರಗ್ರಹಣವಾಗಿರುತ್ತದೆ. ಆದ್ದರಿಂದ ಈ ಗ್ರಹಣವು ಭಾರತದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಈ ಗ್ರಹಣ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ ಎಂದು ನಂಬಲಾಗುತ್ತಿದ್ದು, ದೇಗುಲ ಬಂದ್ ಮಾಡೋದು, ಆಹಾರ ಸೇವನೆ ಮುಂತಾದ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರಲ್ಲ. ಅರೆನೆರಳಿನ ಚಂದ್ರಗ್ರಹಣವನ್ನು ಸೂತಕ ಎಂದು ತಿಳಿಯಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.

    ಗ್ರಹಣ ಕಾಲ: 2020ರ ಮೊದ ಚಂದ್ರಗ್ರಹಣ ಜನವರಿ 10ರಂದು ಸಂಭವಿಸಿತ್ತು. ಜೂನ್ 5ರಂದು ಮತ್ತೊಂದು ಚಂದ್ರ ಗ್ರಹಣ ಸಂಭವಿಸಲಿದೆ. ಇದೇ ತಿಂಗಳಿನಲ್ಲಿ ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ನಾಳೆಯ ಚಂದ್ರಗ್ರಹಣ ರಾತ್ರಿ 11.16ಕ್ಕೆ ಆರಂಭಗೊಂಡು 02.32ಕ್ಕೆ ಅಂತ್ಯವಾಗಲಿದೆ. ರಾತ್ರಿ 12.54ಕ್ಕೆ ಪೂರ್ಣ ಗ್ರಹಣ ಘೋಚರವಾಗಲಿದೆ. ಇದೇ ವರ್ಷ ಡಿಸೆಂಬರ್ 14ರಂದು ಇನ್ನೊಂದು ಸೂರ್ಯಗ್ರಹಣ ಗತಿಸಲಿದೆ.

    ಎಲ್ಲೆಲ್ಲಿ ಗೋಚರ?: ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಅರೆ ನೆರಳಿನ ಚಂದ್ರಗ್ರಹಣ ಇದಾಗಿದ್ದರಿಂದ ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆಗಳು ಇರಲ್ಲ. ಆದ್ರೆ ಚಂದ್ರನ ಚಿತ್ರಣವು ಅಥಾವ ಪ್ರಭಾವಳಿ ನಮಗೆ ಮುಸುಕಾಗಿ ಕಾಣುತ್ತದೆ.

    ಗ್ರಹಣಕ್ಕೂ ಮುನ್ನ ಚಂದ್ರ ಭೂಮಿಯ ನೆರಳನ್ನು ಪ್ರವೇಶ ಮಾಡುತ್ತಾನೆ. ಈ ಪ್ರವೇಶಕ್ಕೆ ಚಂದ್ರ ಮಾಲಿನ್ಯ (ಪೆನುಂಬ್ರಾ) ಎನ್ನಲಾಗುತ್ತೆ. ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸಿದಾಗ ಸಹಜವಾಗಿ ಶಶಿಯ ಕಾಂತಿಯ ಕಡಿಮೆಯಾದಂತೆ ಕಾಣುತ್ತದೆ.

  • ಗ್ರಹಣದಂದೇ ಉಡಸಲಮ್ಮ ದೇವಸ್ಥಾನದ ಅರ್ಚಕ ನೇಣಿಗೆ ಶರಣು

    ಗ್ರಹಣದಂದೇ ಉಡಸಲಮ್ಮ ದೇವಸ್ಥಾನದ ಅರ್ಚಕ ನೇಣಿಗೆ ಶರಣು

    ತುಮಕೂರು: ಸೂರ್ಯ ಗ್ರಹಣದಂದೇ ದೇವಾಲಯದ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.

    ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರೋ ಹೊನವಳ್ಳಿ ಉಡಸಲಮ್ಮ ದೇವಾಲಯದ ಪೂಜಾರಿ ಕೆಂಪರಾಜು (29) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ರೂಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಳೆದ ತಿಂಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಇವರ ಬಳಿ ಭವಿಷ್ಯ ಕೇಳಿ ಹೋಗಿದ್ದರು. ಅರ್ಚಕರ ಸಾವಿನ ವಿಷಯ ತಿಳಿದು ಸುತ್ತಮುತ್ತಲಿನ ನೂರಾರು ಮಂದಿ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದಾರೆ. ದೇವಿಯ ಅರ್ಚಕರೇ ಸೂರ್ಯ ಗ್ರಹಣದ ದಿನವೇ ಅನುಮಾನಾಸ್ಪದವಾಗಿ ಮೃತಪಟ್ಟಿರೋದು ಸ್ಥಳೀಯರ ಆತಂಕ ಹೆಚ್ಚಿಸಿದೆ.

    ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತರಿಗೆ ಪತ್ನಿ, ಹೆಣ್ಣು ಮಗುವಿದೆ. ಘಟನಾ ಸ್ಥಳಕ್ಕೆ ಹೊನವಳ್ಳಿ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಚಿಕ್ಕಮಗಳೂರು: ಈ ಶತಮಾನದ ಕೊನೆಯ ಸೂರ್ಯ ಗ್ರಹಣದಂದು ಯಾವುದೇ ಹೆದರಿಕೆ, ಅಂಜಿಕೆ ಇಲ್ಲದೆ ಗ್ರಹಣದ ಸಮಯದಲ್ಲಿ ಸ್ಮಶಾನದಲ್ಲಿ ಊಟ ಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ನಿವಾಸಿಗಳಾದ ಮೋಹನ್ ಹಾಗೂ ಪರಶುರಾಮ ಎಂಬವರು ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಕೂತು ತಿಂಡಿ ತಿಂದಿದ್ದಾರೆ. ಅಷ್ಟೇ ಅಲ್ಲದೆ ಗ್ರಹಣ ಆರಂಭವಾದಾಗಿನಿಂದ ಸ್ಮಶಾನದಲ್ಲೇ ಇದ್ದು, ಸ್ಮಶಾನವನ್ನು ಶುಚಿ ಮಾಡಿದ್ದಾರೆ.

    ಮೋಹನ್ ಹಾಗೂ ಪರಶುರಾಮ ಸ್ಮಶಾನದಲ್ಲಿ ಅಲ್ಲಲ್ಲೇ ಬಿದ್ದಿದ್ದ ಪೇಪರ್, ಪ್ಲಾಸ್ಟಿಕ್, ಕಸ-ಕಡ್ಡಿಯನ್ನೆಲ್ಲಾ ಒಂದೆಡೆ ಹಾಕಿ ಬೆಂಕಿ ಹಾಕಿದ್ದಾರೆ. ಗ್ರಹಣ ಮುಗಿಯೋವರೆಗೂ ಸ್ಮಶಾನದಲ್ಲೇ ಇದ್ದು 12 ಗಂಟೆ ನಂತರ ಮನೆಗೆ ಹಿಂದಿರುಗಿದ್ದಾರೆ.

    ಸ್ಮಶಾನ, ಅಮವಾಸ್ಯೆ, ಗ್ರಹಣ ಇವ್ಯಾವು ನರಮಾನವನಷ್ಟು ಕ್ರೂರಿ ಅಲ್ಲ ಎನ್ನುವುದು ಈ ಯುವಕರ ನಂಬಿಕೆಯಾಗಿದೆ. ಇವುಗಳಿಗೆ ಮನುಷ್ಯನಲ್ಲಿರುವಷ್ಟು ಕೆಟ್ಟ ಯೋಚನೆ, ಆಲೋಚನೆ ಹಾಗೂ ಚಿಂತನೆಗಳಿಲ್ಲ ಎಂಬುದು ಇವರ ಧೃಡ ನಂಬಿಕೆಯಾಗಿದೆ. ಒಳ್ಳೆಯದ್ದನ್ನ ಯೋಚಿಸುವವರಿಗೆ ಒಳ್ಳೆಯದ್ದೆ ಆಗಲಿದ್ದು, ಕೆಟ್ಟ ಯೋಚನೆ ಇರುವವರಿಗೆ ಆಗುವುದೆಲ್ಲಾ ಕೆಟ್ಟದ್ದೇ ಎಂದು ಹೇಳಿದ್ದಾರೆ.

    ಅಲ್ಲದೆ ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟ ಚೆನ್ನಾಗಿದ್ದರೆ ಆಗುವುದೆಲ್ಲಾ ಒಳ್ಳೆಯದ್ದೆ. ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಇದ್ಯಾವುದು ಕೆಟ್ಟದ್ದು ಮಾಡುವುದಿಲ್ಲ ಎಂದು ಮೋಹನ್ ಹಾಗೂ ಪರಶುರಾಮ ನಂಬಿದ್ದಾರೆ.

  • ರಾಜ್ಯಾದ್ಯಂತ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಣೆ

    ರಾಜ್ಯಾದ್ಯಂತ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಣೆ

    ಬೆಂಗಳೂರು: ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀರಿನಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಲಾಯಿತು.

    ಚಾಮರಾಜನಗರ ತಾಲೂಕಿನ ಮೂಡ್ಲುಪುರದಲ್ಲಿ ಸೂರ್ಯಗ್ರಹಣ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ಒನಕೆ ಇಟ್ಟು ಪರೀಕ್ಷೆ ನಡೆಸಲಾಗಿದೆ. ಗ್ರಹಣದ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ನಿಂತು ಗ್ರಹಣ ಮೋಕ್ಷವಾಗುತ್ತಿದ್ದಂತೆ ಕೆಳಕ್ಕೆ ಬಿದ್ದು ಅಚ್ಚರಿ ಮೂಡಿಸಿದೆ. ಗ್ರಹಣದ ವೇಳೆ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದ ಒನಕೆ ನೇರವಾಗಿ ನಿಲ್ಲುತ್ತದೆಂಬುದು ಪೂರ್ವಜರ ನಂಬಿಕೆಯಾಗಿದೆ. ಇದನ್ನು ಪರೀಕ್ಷೆಗೆ ಒಳಪಡಿಸಿ ಗ್ರಾಮಸ್ಥರು ಖಚಿತಪಡಿಸಿಕೊಂಡಿದ್ದಲ್ಲದೇ ಅಚ್ಚರಿಗೊಳಗಾಗಿದ್ದರೆ.

    ಗ್ರಾಮದ ನಂದೀಶ್ ಎಂಬವರ ಮನೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿ ಪರೀಕ್ಷೆ ನಡೆಸಿದರು, ಗ್ರಹಣದ ವೇಳೆ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದ ಒನಕೆ ನೀರಿನಲ್ಲಿ ನಿಂತಿದ್ದು ಗ್ರಹಣ ಮೋಕ್ಷದ ನಂತರ ಬಿದ್ದ ಹೋಗಿದೆ. ಇದರಿಂದ ಮನೆಯವರು, ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.

    ಬಾಗಲಕೋಟೆ ನಗರ ಹಾಗೂ ತೇರದಾಳ ಪಟ್ಟಣದಲ್ಲೂ ತಾಮ್ರದ ತಟ್ಟೆಯ ತಳಭಾಗದಲ್ಲಿ ನೀರು ಹಾಕಿ, ಒನಕೆಯನ್ನು ನೇರವಾಗಿ ಆ ತಟ್ಟೆಯ ಮೇಲಿಟ್ಟು ಪರೀಕ್ಷೆ ಮಾಡಲಾಯಿತು. ತಾಮ್ರದ ಪ್ಲೇಟ್‍ನಿಂದ ಒನಕೆ ನೇರವಾಗಿ ನಿಲ್ಲುವ ತನಕ ಗ್ರಹಣ ಇರುತ್ತದೆ. ಗ್ರಹಣ ಮೋಕ್ಷಗೊಂಡ ಕಾಲಕ್ಕೆ ಒನಕೆ ಕೆಳಗಡೆ ಬೀಳುತ್ತೆ ಎಂಬುದು ಜನರ ನಂಬಿಕೆ. ಹಾಗಾಗಿ ಇಂದು ತೇರದಾಳ ಪಟ್ಟಣದ ಅಮೀತ್ ಮಾಳೇದ್ ಹಾಗೂ ಬಾಗಲಕೋಟೆ ನಗರದ ಸುರೇಶ್ ಮಜ್ಜಗಿ ಅವರ ಮನೆಯಲ್ಲಿ ಈ ಪ್ರಯೋಗ ಮಾಡಲಾಯಿತು.

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಮತ್ತು ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ನಿವಾಸಿಗಳು ಗ್ರಹಣ ಹಿಡಿದಾಗ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿಟ್ಟಿದರು. ಒನಕೆ ನಿಲ್ಲಿಸಿದ ನಂತರ ಗ್ರಹಣ ವೀಕ್ಷಣೆ ಮಾಡಿದರು.

    ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೂ ತಾಮ್ರದ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಪರೀಕ್ಷಿಸಲಾಯಿತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮೇಟಿ ಎಂಬವರ ಮನೆಯಲ್ಲಿ ಈ ಪರೀಕ್ಷೆ ನಡೆಸಲಾಯಿತು. ಸೂರ್ಯ ಗ್ರಹಣ ಮುಕ್ತಾಯದ ವರೆಗೆ ತಾಮ್ರದ ಪಾತ್ರೆಯಲ್ಲಿ ಒನಕೆ ನಿಲ್ಲಿಸಲಾಗಿತ್ತು.

  • ಗ್ರಹಣ ಆರಂಭವಾಗುತ್ತಿದ್ದಂತೆ ಹೋಮ-ಹವನ ಆರಂಭ

    ಗ್ರಹಣ ಆರಂಭವಾಗುತ್ತಿದ್ದಂತೆ ಹೋಮ-ಹವನ ಆರಂಭ

    ಚಿಕ್ಕಬಳ್ಳಾಪುರ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಿದರೆ, ಚಿಕ್ಕಬಳ್ಳಾಪುರ ನಗರದ ಮರಳುಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ಎಂದಿನಂತೆ ತೆರೆದಿದೆ.

    ಗ್ರಹಣ ಸ್ಪರ್ಶ ಕಾಲ ಆರಂಭವಾಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಗ್ರಹಣ ದೋಷ ನಿವಾರಣಾ ಹೋಮ ನೆರವೇರಿಸಲಾಗುತ್ತಿದೆ. ಹೋಮ ಹವನದಲ್ಲಿ ಭಕ್ತರು ಪಾಲ್ಗೊಂಡು ಹೋಮ ಕುಂಡಕ್ಕೆ ದವಸಧಾನ್ಯ, ನವಧಾನ್ಯಗಳನ್ನ ಅರ್ಪಣೆ ಮಾಡಿ ಗ್ರಹಣ ದೋಷ ನಿವಾರಣೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

    ಗ್ರಹಣದ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚಿ ದೇವರಿಗೆ ದಿಗ್ಬಂಧನ ವಿಧಿಸಿ ಗ್ರಹಣ ಸಮಯದ ನಂತರ ಎಲ್ಲಾ ದೇವಾಲಯಗಳ ಬಾಗಿಲು ತೆರೆದರೆ ಈ ದೇವಾಲಯದಲ್ಲಿ ಮಾತ್ರ ಗ್ರಹಣ ಸಮಯದಲ್ಲೇ ಹೋಮ-ಹವನ, ಪೂಜೆ ಕೈಂಕರ್ಯಗಳು ನೆರವೇರುತ್ತಿದ್ದು ಗ್ರಹಣ ಮೋಕ್ಷ ಕಾಲದ ನಂತರ ದೇವಾಲಯದ ಬಾಗಿಲು ಬಂದ್ ಆಗಲಿದೆ.

    ಈಶ್ವರನಿಗೆ ಗ್ರಹಣದ ಎಫೆಕ್ಟ್ ಇರುವುದಿಲ್ಲ ಹಾಗೂ ಗ್ರಹಣದ ಸಮಯದಲ್ಲಿ ಹೋಮ ಹವನ ಮಾಡುವುದರಿಂದ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ.