Tag: ಗ್ಯಾಸ್ ಸಿಲಿಂಡರ್

  • ಇನ್ಮುಂದೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು

    ಇನ್ಮುಂದೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕ ಎಲ್‍ಪಿಜಿ ಸಿಲಿಂಡರ್‍ಗಳನ್ನ ಬುಕ್ ಮಾಡುವ ವ್ಯವಸ್ಥೆಯನ್ನ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪರಿಚಯಿಸಿದೆ.

    ಈವರೆಗೆ ಗ್ರಾಹಕರು ಫೋನ್ ಅಥವಾ ಮೆಸೇಜ್ ಮೂಲಕ ಗ್ಯಾಸ್ ಸಿಲಿಂಡರ್‍ಗಳನ್ನ ಬುಕ್ ಮಾಡಬಹುದಿತ್ತು. ಇನ್ಮುಂದೆ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ.

    ಪ್ರಧಾನಿ ಮೋದಿ ಡಿಜಿಟಲೈಸೇಷನ್‍ಗೆ ಒತ್ತು ನೀಡುತ್ತಿರೋ ಸಮಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಡಿಜಿಟಲ್ ಬುಕಿಂಗ್ ಸೇವೆಯನ್ನ ಆರಂಭಿಸಿದೆ. ಈ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್, ತೈಲೋತ್ಪನ್ನ ಕಂಪನಿಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರೀಫಿಲ್ಲಿಂಗ್ ಸೇವೆ ಒದಗಿಸುತ್ತಿರೋ ಮೊದಲ ಸಂಸ್ಥೆ ಎನಿಸಿಕೊಂಡಿದೆ.

    ಫೇಸ್‍ಬುಕ್ ಮೂಲಕ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
    * ಫೇಸ್‍ಬುಕ್‍ಗೆ ಲಾಗಿನ್ ಆಗಬೇಕು.
    * ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಅಧಿಕೃತ ಫೇಸ್‍ಬುಕ್ ಪೇಜ್ IndianOilCorpLimited ಗೆ ಭೇಟಿ ನೀಡಿ.
    * ಬುಕ್ ನೌ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    ಟ್ವಿಟ್ಟರ್‍ನಲ್ಲಿ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
    * ರೀಫಿಲ್ @indianoilcorplimited ಎಂದು ಟ್ವೀಟ್ ಮಾಡಿ
    * ಮೊದಲ ಬಾರಿಯ ರಿಜಿಸ್ಟ್ರೇಷನ್‍ಗಾಗಿ ರಿಜಿಸ್ಟರ್ ಎಲ್‍ಪಿಜಿಐಡಿ ಎಂದು ಟ್ವೀಟ್ ಮಾಡಿ.

  • ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಿಸ್ತಿದ್ದಾತನ ಬಂಧನ

    ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಿಸ್ತಿದ್ದಾತನ ಬಂಧನ

    ಬೆಂಗಳೂರು: ಬಾಳೆಹಣ್ಣು, ಕಿತ್ತಳೆ ಆಯ್ತು ಇದೀಗ ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಿಲಿಂಡರಿನಲ್ಲಿ ಗಾಂಜಾ ಪ್ಯಾಕ್ ಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇದೀಗ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ಆರೋಪಿ ಸಿಲಿಂಡರ್ ನ ಕೆಳಭಾಗವನ್ನು ಕತ್ತರಿಸಿ ಅದರೊಳಗಡೆ ಗಾಂಜಾ ಇಟ್ಟು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಿತರಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಮಾರು 576 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇಲ್ಲಿಯವರೆಗೆ ಒಟ್ಟು 318 ಕೇಸ್ ದಾಖಲಾಗಿವೆ. ಅಲ್ಲದೇ ಆರೋಪಿಗಳಿಂದ ಸುಮಾರು 500 ಕೆ.ಜಿ ಗಾಂಜಾ, ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ.

    ಕಳೆದ ವರ್ಷ 138 ಕೇಸ್ ಗಳು ದಾಖಲಾಗಿದ್ದು, 305 ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಇನ್ನು ಬಂಧಿತರಿಂದ 275 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮೀಟರ್ ಬಡ್ಡಿದಂಧೆ!

  • ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಹೀಗೆ ಮಾಡಿ- ದೆಹಲಿ ಪೊಲೀಸ್ ಹೇಳಿಕೊಟ್ಟ ಐಡಿಯಾ ವೈರಲ್

    ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಹೀಗೆ ಮಾಡಿ- ದೆಹಲಿ ಪೊಲೀಸ್ ಹೇಳಿಕೊಟ್ಟ ಐಡಿಯಾ ವೈರಲ್

    ನವದೆಹಲಿ: ಏಕಾಏಕಿ ಗ್ಯಾಸ್ ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಮನೆ ಮಂದಿ ಗಾಬರಿಯಾಗಿ ದಿಕ್ಕುಪಾಲಾಗುವುದು ಸಹಜ. ಆದ್ರೆ ದೆಹಲಿಯ ಪೊಲೀಸರೊಬ್ಬರು ಬೆಂಕಿ ನಂದಿಸಲು ಸುಲಭವಾದ ಉಪಾಯವನ್ನು ಹೇಳಿಕೊಟ್ಟಿದ್ದಾರೆ. ಅವರು ಹೇಳಿಕೊಟ್ಟ ಐಡಿಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

    ಏನಿದು ಹೊಸ ಐಡಿಯಾ: ದೆಹಲಿಯ ಕಾಲೊನಿಯೊಂದರಲ್ಲಿ ನೆರೆದ ಜನರ ಗುಂಪಿನ ಮಧ್ಯೆ ಸಿಲಿಂಡರ್‍ನ ಇಟ್ಟು ಅದರಿಂದ ಗ್ಯಾಸ್ ಲೀಕ್ ಆಗುವಂತೆ ಮಾಡಿದ್ರು. ಈ ವೇಳೆ ಮತ್ತೊಬ್ಬ ಪೊಲೀಸ್ ಅದಕ್ಕೆ ಬೆಂಕಿ ಕೊಟ್ಟಿದ್ದಾರೆ. ಕೂಡಲೇ ಗ್ಯಾಸ್ ಸಿಲಿಂಡರ್ ಉರಿಯಲು ಪ್ರಾರಂಭವಾಯಿತು. ತಕ್ಷಣವೇ ಪೊಲೀಸ್ ಅದರ ಮೇಲೆ ಒದ್ದೆ ಬಟ್ಟೆ ಹಾಕಿ ಗಟ್ಟಿಯಾಗಿ ಮುಚ್ಚಿದ್ದಾರೆ. ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ನಂದಿ ಹೋಗಿದೆ. ನಂತ್ರ ಬಟ್ಟೆಯನ್ನು ತೆಗೆದು ಗ್ಯಾಸ್ ಆಫ್ ಮಾಡಿದ್ದಾರೆ.

    ಈ ವೀಡಿಯೋವನ್ನು ಪೊಲೀಸ್ ಸುಶೀಲ್ ಕುಮಾರ್ ತಮ್ಮ ಫೇಸ್ಬುಕ್ ವಾಲ್‍ನಲ್ಲಿ ಮಾರ್ಚ್ 19ರಂದು ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು 60 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲದೇ 2 ಲಕ್ಷಕ್ಕೂ ಅಧಿಕ ಶೇರ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸ್‍ನ ಈ ಕಾರ್ಯಕ್ಕೆ ಹಲವು ಮಂದಿ ಭೇಷ್ ಅಂದಿದ್ದಾರೆ. `ನಿಮ್ಮ ಈ ಹೊಸ ಪ್ರಯೋಗ ಚಿಂತನಾತ್ಮಕವಾದುದು. ಇದೊಂದು ಸಾವು-ಬದುಕಿನ ವಿಚಾರವಾಗಿದ್ದು, ಎಲ್ಲರೂ ತಿಳಿದುಕೊಳ್ಳಲೇ ಬೇಕು ಅಂತಾ ಕಮೆಂಟ್ ಮೂಲಕ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=50v7HKeHHXw

  • ವೀಡಿಯೋ: ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಹೊರಗೆಳೆದು ತಂದ ಪೊಲೀಸ್

    ವೀಡಿಯೋ: ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಹೊರಗೆಳೆದು ತಂದ ಪೊಲೀಸ್

    ಬೀಜಿಂಗ್: ಪೊಲೀಸ್ ಅಧಿಕಾರಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಧರಧರನೆ ಹೊರಗೆಳೆದು ತಂದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಇಲ್ಲಿನ ಜಿಯಾಂಗ್ಸು ಪ್ರದೇಶದ ಮನೆಯೊಂದರಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ವಿಷಯ ತಿಳಿದು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದ್ರು. ತೇವವಾದ ಟವೆಲ್‍ನಿಂದ ಮೂಗು ಮುಚ್ಚಿಕೊಂಡು ಒಳಹೋದ ಅಧಿಕಾರಿಗಳಿಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಕಾಣಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ಕಾಯುವಷ್ಟು ಸಮಯವಿಲ್ಲ ಎಂದು ಯೋಚಿಸಿ ಯುವ ಅಧಿಕಾರಿ ಯೇಓರು ಸಿಲಿಂಡರನ್ನು ಕಟ್ಟಡದಿಂದ ಹೊರಗೆ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಿದ್ರು.

    ಕೆಲವೇ ನಿಮಿಷಗಳಲ್ಲಿ ಯೇಓರು ತೇವವಾದ ಟವೆಲನ್ನು ಕೈಗೆ ಸುತ್ತಿಕೊಂಡು ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರನ್ನು ಮಹಡಿಯಿಂದ ಧರಧರನೆ ಎಳೆದುತಂದರು. ಗ್ಯಾಸ್ ಸಿಲಿಂಡರ್‍ನ ತೂಕದಿಂದ ಆಯಾಸವಾಗಿ ಅವರು ಅಲ್ಲಲ್ಲಿ ನಿಲ್ಲುವುದನ್ನು ವೀಡಿಯೋದಲ್ಲಿ ನೋಡಬಹುದು.

    ಸಿಲಿಂಡರ್ ಹೊರಗೆಳೆದು ತಂದ ಯೇಓರು ಅವರ ಕೈಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರ ಸಮವಸ್ತ್ರ ಕೂಡ ಸ್ವಲ್ಪ ಮಟ್ಟಿಗೆ ಸುಟ್ಟುಹೋಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಯೇಓರು, ನನಗೆ ಆ ಸಂದರ್ಭದಲ್ಲಿ ಏನು ಮಾಡಬೇಕು ಅನ್ನಿಸ್ತೋ ಅದನ್ನು ಮಾಡಿದೆ ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಯೇಓರು ಪೊಲೀಸ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿ ಕೇವಲ ಒಂದು ವರ್ಷವಷ್ಟೇ ಆಗಿದೆ ಎಂದು ವರದಿಯಾಗಿದೆ.

  • ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಓರ್ವ ಸಾವು

    -ಶಾಲೆಗೆ ಹೋಗುತ್ತಿದ್ದ ಬಾಲಕಿಯರ ಮೇಲೂ ಬಿದ್ದ ಸಿಲಿಂಡರ್‍ಗಳು

    ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಾಣದಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಬಸವರಾಜ್ (42) ಮೇಲೆ ಗ್ಯಾಸ್ ಸಿಲಿಂಡರ್‍ಗಳು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ವೇಳೆ ಶಾಲೆಗೆ ತೆರಳುತ್ತಿದ್ದ ಶಾಲಾ ಬಾಲಕಿಯರ ಮೇಲೆಯೂ ಗ್ಯಾಸ್ ಸಿಲಿಂಡರ್‍ಗಳು ಬಿದ್ದದರಿಂದ ಅಕ್ಷತಾ ಮತ್ತು ತನುಶ್ರೀ ಎಂಬ ಇಬ್ಬರು ಶಾಲಾ ಬಾಲಕಿಯರಿಗೆ ಗಂಭೀರ ಗಾಯಗಳಾಗಿವೆ. ಅಕ್ಷತಾಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮತ್ತು ತನುಶ್ರೀಯನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

    ಬೆಳಗ್ಗೆ ಮಂಜು ಕವಿದಿದ್ದರಿಂದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಲಾರಿ ಭದ್ರಾವತಿಯಿಂದ ಚನ್ನಗಿರಿ ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚನ್ನಗಿರಿ ಠಾಣಾ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಲಾರಿಯಿಂದ ಬಿದ್ದ ಗ್ಯಾಸ್ ಸಿಲಿಂಡರ್‍ಗಳು ಲೀಕ್ ಆಗುತ್ತಿರುವುದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.