Tag: ಗೌರಿ ಡೇ

  • ಧೂಮಪಾನ ಆರೋಗ್ಯಕ್ಕೆ ಹಾನಿಕರ ಅನ್ನುವಂತೆ ಇರುತ್ತೆ ಮೋದಿ ಹೇಳಿಕೆ: ಪ್ರಕಾಶ್ ರೈ

    ಧೂಮಪಾನ ಆರೋಗ್ಯಕ್ಕೆ ಹಾನಿಕರ ಅನ್ನುವಂತೆ ಇರುತ್ತೆ ಮೋದಿ ಹೇಳಿಕೆ: ಪ್ರಕಾಶ್ ರೈ

    ಬೆಂಗಳೂರು: ಪ್ರಗತಿಪರರ ಹತ್ಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು ಸಹ ಅವರ ಮೌನದಲ್ಲಿ ಒಳಸಂಚಿರಲಿಲ್ಲ. ಈಗಿರುವ ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ಕುರಿತು ಮೌನವಹಿಸಿದ್ದಾರೆ. ಆದರೆ ಅವರ ಮೌನದಲ್ಲಿ ರಾಕ್ಷಸ ಅಡಗಿದ್ದಾನೆ ಎಂದು ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.

    ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗೌರಿ ಲಂಕೇಶ್ ಸ್ಮರಣಾರ್ಥ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಗತಿಪರರ ಬಾಯಿ ಮುಚ್ಚಿಸಲು ಬೇಕಂತಲೇ ಕೇಸುಗಳನ್ನು ಹಾಕಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೊಲೆಗಳನ್ನು ಮಾಡಬಾರದು ಅಂತಾ ಹೇಳಿಕೆಗಳನ್ನು ನೀಡುತ್ತಾರೆ. ಅವರ ಹೇಳಿಕೆಗಳು ಯಾವ ರೀತಿ ಇರುತ್ತವೆ ಅಂದರೆ ಸಿನಿಮಾದಲ್ಲಿ ಸಿಗರೇಟ್ ಸೇದುವ ದೃಶ್ಯಾವಳಿಗಳಲ್ಲಿ ಬರೆದಿರುವ `ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎನ್ನುವ ರೀತಿಯಲ್ಲಿ ಇರುತ್ತವೆ. ಅಲ್ಲದೇ ಕೆಲವು ಹಿಂದೂ ಸಂಘಟನೆಗಳು ಹಿಂದೂಗಳನ್ನು ಕುರಿಗಳನ್ನಾಗಿ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.

    ಈ ಮೊದಲು ಪ್ರಗತಿಪರರ ಹತ್ಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು, ಸಹ ಅವರ ಮೌನದಲ್ಲಿ ಒಳಸಂಚಿರಲಿಲ್ಲ. ಆದರೆ ಈಗಿರುವ ಪ್ರಧಾನಿಯವರು ಸಹ ಮೌನವಹಿಸಿದ್ದಾರೆ. ಆದರೆ ಅವರ ಮೌನದಲ್ಲಿ ರಾಕ್ಷಸ ಅಡಗಿದ್ದಾನೆ. ಹೀಗಾಗಿ ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರೋಣ. ಮೈಮರೆಯುವುದು ಬೇಡ. ಅಲ್ಲದೇ ಇವುಗಳನ್ನು ನಾವುಗಳು ಜನಸಾಮಾನ್ಯರಿಗೆ ತೋರಿಸಬೇಕಾಗಿದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

    ಗೌರಿ ಲಂಕೇಶ್ ಕುರಿತು ಮಾತನಾಡಿದ ಅವರು, ಗೌರಿ ನಮ್ಮನ್ನ ಬಿಟ್ಟು ಒಂದು ವರ್ಷ ಆಗಿ ಹೋಗಿದೆ. ಇದರಿಂದಾಗಿ ಸಾಕಷ್ಟು ಧ್ವನಿಗಳು ಹುಟ್ಟಿಕೊಂಡಿವೆ. ಸಾಕಷ್ಟು ನೋವು, ತುಡಿತಗಳನ್ನು ನಾವು ಅನುಭವಿಸಿದ್ದೇವೆ. ಈ ಬಗ್ಗೆ ಒಂದು ವರ್ಷ ಬಹಳ ಮಾತುಕತೆ ನಡೆಸಿದ್ದೇವೆ. ನಾವು ಇದನ್ನು ಬೇರೆ ಥರ ತನಿಖೆಗೆ ತೆಗೆದುಕೊಂಡು ಹೋಗಬೇಕಾಗಿದೆ. ನಾವು ನಮ್ಮ ನೋವನ್ನು ಮರೆತು, ಗೌರಿಯನ್ನು ಮರೆತು ಮಾತನಾಡಬೇಕಾಗಿದೆ. ಗೌರಿ ಒಂದು ಮುಗಿಯದ ಕಥೆಯಾಗಿದ್ದಾಳೆ. ತಾನು ಬಲಿಯಾಗುವ ಮೂಲಕ ಹಲವಾರು ಅನ್ಯಾಯಗಳನ್ನು ಹೊರಕ್ಕೆ ತಂದಿದ್ದಾಳೆ. ಕಲ್ಬುರ್ಗಿ, ಪನ್ಸಾರೆಯವರನ್ನು ಕೊಂದವರು ಬಯಲಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

    ನಾವು ಈ ಬಗ್ಗೆ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಿಳಿಸಬೇಕಿದೆ. ಇಂದಿನ ದಿನಗಳಲ್ಲಿ ಮನುಷ್ಯ ಜನ್ಮವನ್ನು ಮಾತ್ರವಲ್ಲದೇ ಹಿಂದೂ ಧರ್ಮವನ್ನು ಕಾಪಾಡಬೇಕಿದೆ. ದಾಬೋಲ್ಕರ್, ಕಲ್ಬುರ್ಗಿ ಹಾಗೂ ಪನ್ಸಾರೆಯವರ ಸಾವು ನಮಗೆ ನೋವು ಮಾಡುತ್ತಿದೆ. ಅದು ಸಾವಲ್ಲ ಅದೊಂದು ಕೊಲೆ. ಇದರ ವಿರುದ್ಧ ನಾವು ಹೋರಾಡಬೇಕಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಗೌರಿ ಹತ್ಯೆಯ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆಯನ್ನು `ನ್ಯಾಯಪತ’ ಹೆಸರಿನಲ್ಲಿ ಪುನರ್ ಚಾಲನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ನಾಡಲ್ಲಿ ಸರ್ಕಾರ ಉರುಳ್ಸೋ ತಯಾರಿ ನಡಿತೈತೆ: ಯತ್ನಾಳ್

    ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ನಾಡಲ್ಲಿ ಸರ್ಕಾರ ಉರುಳ್ಸೋ ತಯಾರಿ ನಡಿತೈತೆ: ಯತ್ನಾಳ್

    ವಿಜಯಪುರ: ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ನಾಡು ಆಗಿರುವ ಬೆಳಗಾವಿಯಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸುವ ತಯಾರಿ ಜೋರಾಗಿ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸಮ್ಮಿಶ್ರ ಸರ್ಕಾರ ಸದ್ಯದಲ್ಲಿಯೇ ಉರುಳಲಿದೆ. ನಾನು ಹೇಳಿದ ಭವಿಷ್ಯ ಸತ್ಯವಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ನಾಡು ಬೆಳಗಾವಿಯಲ್ಲಿ ಸರ್ಕಾರ ಉರುಳಿಸುವ ತಯಾರಿ ಜೋರಾಗಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ಜಾರಕಿಹೊಳಿ ಬ್ರದರ್ಸ್ ಹಾಗೂ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಸಮ್ಮಿಶ್ರ ಸರ್ಕಾರ ಪತನಕ್ಕೆ ಮುನ್ನುಡಿಯಾಗಲಿದೆ ಎಂದು ಭವಿಷ್ಯ ನುಡಿದರು.

    ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳೊದು ಗ್ಯಾರಂಟಿಯಾಗಿದೆ. ಏಕೆಂದರೆ ಇವರಿಗೆ ಶ್ರದ್ಧಾ ಕೇಂದ್ರಗಳ ಪಾವಿತ್ರ್ಯತೆ ಬಗ್ಗೆ ಗೊತ್ತಿಲ್ಲ. ಪವಿತ್ರ ಸ್ಥಾನಗಳಿಗೆ ಭೇಟಿ ನೀಡಿ ಚಿಕನ್ ಸೂಪ್ ತಿಂದರೇ ಹೇಗೆ? ಹೀಗಾಗಿ ರಾಹುಲ್ ಭೇಟಿ ನೆಗಟಿವ್ ಆಗಲಿದೆ ಎಂದು ವ್ಯಂಗ್ಯವಾಡಿದರು.

    ಈ ವೇಳೆ ಪ್ರಧಾನಿ ಹತ್ಯೆಗೆ ಸಂಚು ಮಾಡಿದವರ ಪರವಾಗಿ ಮಾತನಾಡಿದವರ ವಿರುದ್ಧ ಹರಿಹಾಯ್ದ ಅವರು, ಮೋದಿಯವರ ಹತ್ಯೆಗೆ ಸ್ಕೆಚ್ ಹಾಕಿದವರನ್ನು ಚಿಂತಕರು ಎನ್ನುತ್ತಿದ್ದಾರೆ. ಅದೇ ರಾಜೀವ್ ಗಾಂಧಿಯವರನ್ನು ಕೊಂದವರನ್ನು ಭಯೋತ್ಪಾದಕರು ಎನ್ನುತ್ತಾರೆ. ಅಂದರೆ ಇವರಿಗೆ ಪ್ರಧಾನಿಗಳಲ್ಲಿ ವ್ಯತ್ಯಾಸವಿದೆಯಾ ಎಂದು ಪ್ರಶ್ನಿಸಿದರು.

    ಗೌರಿ ಡೇ ಆಚರಣೆ ಕುರಿತು ಪ್ರತಿಕ್ರಿಯಿಸಿ, ದೇಶದ ಹಲವು ಕಡೆ ಹಿಂದೂಗಳ ಹತ್ಯೆ ನಡೆದಿದೆ. ಈ ಕುರಿತು ಯಾರಾದರೂ ಡೇ ಆಚರಣೆ ಮಾಡಿದ್ದಾರಾ. ಗೌರಿ ಡೇ ಆಚರಣೆ ಮಾಡುವುದು ನಾಚಿಕೆಗೇಡು ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೌರಿ ಲಂಕೇಶ್ ಜನ್ಮದಿನ: ಬೆಂಗ್ಳೂರಿನಲ್ಲಿ  ಇಂದು ಗೌರಿದಿನ ಆಯೋಜನೆ

    ಗೌರಿ ಲಂಕೇಶ್ ಜನ್ಮದಿನ: ಬೆಂಗ್ಳೂರಿನಲ್ಲಿ ಇಂದು ಗೌರಿದಿನ ಆಯೋಜನೆ

    ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ಗೆ ಇಂದು ಜನ್ಮದಿನ. ಹೀಗಾಗಿ ಇಂದು ನಗರದ ಟೌನ್‍ಹಾಲ್‍ನಲ್ಲಿ `ಗೌರಿ ದಿನ’ ಆಯೋಜನೆ ಮಾಡಲಾಗಿದೆ.

    ಗೌರಿ ಹತ್ಯೆಗೆ ನ್ಯಾಯ ಕೇಳಿ ‘ಗೌರಿ ಸ್ಮಾರಕ’ ಇಂದು ಬೀದಿಗಿಳಿದು ಹೋರಾಟ ಮಾಡಲಿದ್ದು, ಈ ಮೂಲಕ `ನಾನು ಗೌರಿ’ ಅನ್ನೋ ಹೋರಾಟವನ್ನ ಮತ್ತೆ ಶುರುಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಗ್ನೇಶ್ ಮೇವಾನಿ, ಕನ್ನಯ್ಯ ಕುಮಾರ್, ದೊರೆಸ್ವಾಮಿ, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ಸಾಹಿತಿಗಳು ಆಗಮಿಸಲಿದ್ದಾರೆ. ಇಂದು ಗೌರಿ ಲಂಕೇಶ್ ಕುರಿತಾದ ಪುಸ್ತಕ ಕೂಡ ಬಿಡುಗಡೆಯಾಗಲಿದೆ.

    ಸೆಪ್ಟೆಂಬರ್ 5 2017 ಮಂಗಳವಾರ ರಾತ್ರಿ 7.30 ರ ಸುಮಾರಿಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು.

    ತನಿಖೆಯ ನಂತರ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದರು. ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.

    ಪ್ರಕರಣದ ಕುರಿತು ಮತ್ತಷ್ಟು ಸುಳಿವನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದ್ದು, ತನಿಖಾ ತಂಡ ಹಂತಕರನ್ನು ಹುಡುಕುವ ಕಾರ್ಯಾಚರಣೆ ಮಾಡುತ್ತಿದೆ. ಇದನ್ನು ಓದಿ: ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?