Tag: ಗೌತಮ್ ಗಂಭೀರ್

  • ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

    ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

    ಇತ್ತೀಚೆಗೆ ಭಾರತೀಯ ಪುರುಷರ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನ 2-0 ಅಂತರದಲ್ಲಿ ಸೋಲನುಭವಿಸಿತು. ಈ ಸರಣಿಯೊಂದಿಗೆ ನಿವೃತ್ತಿಯ ಅಂಚಿನಲ್ಲಿರುವ ಸ್ಟಾರ್‌ ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ಮಣ್ಣಿಗೆ ವಿದಾಯ ಹೇಳಿದರು. ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್‌ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ವಿರುದ್ಧ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ತಂಡದ ಆಯ್ಕೆ ಮತ್ತು ತಂತ್ರಗಾರಿಕೆಯಲ್ಲಿ ಲೋಪಗಳಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಿರಿಯ ಆಟಗಾರರ ಅನುಭವವನ್ನು ಬಳಸಿಕೊಳ್ಳದಿರುವುದು ಕೂಡ ಟೀಕೆಗೆ ಗುರಿಯಾಗಿದೆ. ಇಬ್ಬರೂ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರೆ ತಂಡದ ಭವಿಷ್ಯ ಸುಗಮವಾಗಲಿದೆ ಎಂಬುದು ಕೂಡ ಕ್ರಿಕೆಟ್‌ ತಜ್ಞರ ಅಭಿಪ್ರಾಯವಾಗಿದೆ.

    ಅಷ್ಟಕ್ಕೂ ಟೀಂ ಇಂಡಿಯಾದಲ್ಲಿ ಏನಾಗ್ತಿದೆ? ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌, ರೋಹಿತ್‌ ಶರ್ಮಾ ನಡುವಿನ ಮುನಿಸು ಇನ್ನೂ ಬಗೆಹರಿದಿಲ್ಲವೇ? ಆಯ್ಕೆಯಲ್ಲಿ ಅನುಭವಿಗಳನ್ನೇ ಕಡೆಗಣಿಸುತ್ತಿರುವುದು ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

    ಗಂಭಿರ್‌ ಕೋಚ್‌ ಆದ ಆರಂಭದಲ್ಲೇ ವಿಘ್ನ!
    ಹೌದು.. 2024ರ ವರ್ಷ ಟೀಂ ಇಂಡಿಯಾಕ್ಕೆ ಅವಿಸ್ಮರಣೀಯ ಕ್ಷಣಗಳನ್ನ ತಂದುಕೊಟ್ಟಿತ್ತು. ಟೀಂ ಇಂಡಿಯಾ ಮಾಜಿ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದು ಬೀಗಿತ್ತು. ಈ ವಿಶ್ವಕಪ್‌ನೊಂದಿಗೆ ರಾಹುಲ್‌ ದ್ರಾವಿಡ್‌ ಕೋಚ್‌ ಹುದ್ದೆಗೆ ಗುಡ್‌ಬೈ ಹೇಳಿದ್ರು. ಹಾಗೆಯೇ ಲೆಜೆಂಡ್‌ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು. 2024ರ ಜುಲೈ ಅಂತ್ಯದಿಂದ ಗೌತಮ್‌ ಗಂಭೀರ್‌ ಟೀಂ ಇಂಡಿಯಾ ಮುಖ್ಯಕೋಚ್‌ ಆಗಿ ಆಯ್ಕೆಯಾದರು. ಗಂಭೀರ್‌ ಸಾರಥ್ಯ ವಹಿಸಿಕೊಂಡ ನಂತರ ಟಿ20 ಸರಣಿಯಲ್ಲಿ ಸಾಲು ಸಾಲು ಗೆಲುವು ಸಾಧಿಸಿಸುತ್ತಿದ್ದ ಭಾರತ ನಿರ್ಣಾಯಕ ಏಕದಿನ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೀನಾಯ ಸೋಲು ಅನುಭವಿಸುತ್ತಲೇ ಬಂದಿತು.

    ಕೋಚ್‌ ಆದ ಆರಂಭದಲ್ಲೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ಬಳಿಕ ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿ ಸೋತಿತು. ಆ ಬಳಿಕ ಭಾರತಕ್ಕೆ ಪ್ರತಿಷ್ಠೆಯ ಸರಣಿಯಾಗಿದ್ದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲೂ ಭಾರತ 1-4 ಅಂತರದಲ್ಲಿ ಹೀನಾಯ ಸೋಲು ಕಂಡಿತು.

    ಗಂಭೀರ್‌ಗೆ ಬಲ ತುಂಬಿದ ʻಚಾಂಪಿಯನ್ಸ್‌ ಟ್ರೋಫಿʼ
    ಯೆಸ್‌. ಸಾಲು ಸಾಲು ಸರಣಿಗಳನ್ನ ಸೋತು ಭಾರೀ ಟೀಕೆಗೆ ಗುರಿಯಾಗಿದ್ದ ಗಂಭೀರ್‌ ಅವರ ನಾಯಕತ್ವಕ್ಕೆ ಬಲ ತುಂಬಿದ್ದು 2025ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಈ ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನೂ ಸೋಲದೇ ಟ್ರೋಫಿ ಎತ್ತಿ ಹಿಡಿಯಿತು. ಇದು ಗಂಭೀರ್‌ ನಾಯಕತ್ವದಲ್ಲಿ ಭಾರತ ಗೆದ್ದ ಮೊದಲ ಐಸಿಸಿ ಟ್ರೋಫಿ. ಅಲ್ಲದೇ ಕಳೆದ ತಿಂಗಳಷ್ಟೇ ನಡೆದ ಟಿ20 ಏಷ್ಯಾಕಪ್‌ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿತು. ಇದ್ರ ಹೊರತಾಗಿಯೂ ಇತ್ತೀಚಿನ ಟೂರ್ನಿಗಳಲ್ಲಿ ಗೌತಮ್‌ ಗಂಭಿರ್‌ ಹಾಗೂ ಆಯ್ಕೆಯ ಸಮಿತಿ ನಿರ್ಧಾರಗಳು ಟೀಂ ಇಂಡಿಯಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಎರಡು ಸ್ಥಾನಗಳಲ್ಲೇ ಇರುತ್ತಿದ್ದ ಟೀಂ ಇಂಡಿಯಾ ಈಗ ಐಸಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಟಿ20 ಕ್ರಿಕೆಟ್‌ನಲ್ಲಿ ನಂ.1 ರ‍್ಯಾಂಕಿಗ್‌ ಇದ್ದರೂ, ರೇಟಿಂಗ್ಸ್‌ ಕಡಿಮೆ ಅಂತರದಲ್ಲೇ ಇದೆ. ಇದಕ್ಕೆ ಅನುಭವಿಗಳನ್ನ ಕಡೆಗಣಿಸುತ್ತಿರುವುದೇ ಕಾರಣ ಅಂತ ಗಂಭೀರ್‌ ಹಾಗೂ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.

    ಇನ್ನೂ ಕೊನೆಯಾಗಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?
    ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ ಗೌತಮ್‌ ಗಂಭೀರ್‌, ಕೊಹ್ಲಿ ನಡುವೆ ಈಗಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋದು ಕೆಲವರ ಅಭಿಪ್ರಾಯ. 2009ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ತಮ್ಮ ಮ್ಯಾನ್‌ ಆಫ್‌ದಿ ಮ್ಯಾಚ್‌ (ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಆದ್ರೆ 2013ರ ಐಪಿಎಲ್‌ ಟೂರ್ನಿವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ವೇಳೆ ವಿರಾಟ್‌ ಹಾಗೂ ಗಂಭೀರ್‌ ನಡುವೆ ಫಸ್ಟ್‌ ಟೈಂ ವಾಗ್ವಾದ ಏರ್ಪಟ್ಟಿತು. ಬಳಿಕ ಇದು ದೊಡ್ಡಾಗುತ್ತಲೇ ಸಾಗಿತು. ಗಂಭೀರ್‌, ಕೊಹ್ಲಿ ಇರುವ ತಂಡಗಳು ಪರಸ್ಪರ ಮುಖಾಮುಖಿಯಾದಾಗೆಲ್ಲ ಪರಸ್ಪರ ಕೌಂಟರ್‌ಗಳು ಮುಂದುವರಿಯಿತು. 2023ರ ಐಪಿಎಲ್‌ನಲ್ಲಿ ಗಂಭೀರ್‌ ಲಕ್ನೋ ಸೂಪರ್‌ ಜೈಂಟ್ಸ್‌ ಮೆಂಟರ್‌ ಆಗಿದ್ದಾಗ ಕೊಹ್ಲಿ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದರು, ಇದಕ್ಕೆ ಕೊಹ್ಲಿಗೆ ನೀಡಿದ ಕೌಂಟರ್‌ ಕೊಟ್ಟಾಗ ವಿವಾದ ದೊಡ್ಡಾಗಿತ್ತು. ಇದು ಈ ಇಬ್ಬರ ವೈಮನಸ್ಯ ಮುಂದುವರಿಯಲು ಕಾರಣವಾಗಿದೆ ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಕೊಹ್ಲಿ-ರೋಹಿತ್‌-ಗಂಭೀರ್‌ ನಡುವೆ ಹೊಂದಾಣಿಕೆ ಇದ್ದಂತೆ ಕಂಡುಬಂದರೂ ಮುಸುಕಿನ ಗುದ್ದಾಟ ನಿಂತಿಲ್ಲ ಎನ್ನುತ್ತಿವೆ ಆಪ್ತ ಮೂಲಗಳು. ಮತ್ತೊಂದೆಡೆ ಈಗಾಗಲೇ 38 ವರ್ಷ ವಯಸ್ಸಿನ ರೋಹಿತ್‌, 37 ವರ್ಷದ ಕೊಹ್ಲಿಗೆ 2027ರ ವಿಶ್ವಕಪ್‌ಗೆ ಅವಕಾಶ ಸಿಗಲಿದೆಯೇ ಎಂಬುದನ್ನ ಕಾದುನೋಡಬೇಕಿದೆ.

    ರಾಹುಲ್‌, ಅಯ್ಯರ್‌ ಬಿಟ್ಟು ಗಿಲ್‌ಗೆ ಮಣೆಹಾಕಿದ್ದೇಕೆ?
    ಯೆಸ್‌. ಮತ್ತೊಂದು ಕಡೆ ಶುಭಮನ್‌ ಗಿಲ್‌ ಅವರನ್ನ ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಮಾಡಿದ್ದು, ಕೆಲವರಲ್ಲಿ ಬೇಸರ ತರಿಸಿದೆ. ಏಕೆಂದ್ರೆ 33 ವರ್ಷದ ಕೆ.ಎಲ್‌ ರಾಹುಲ್‌, 30 ವರ್ಷದ ಶ್ರೇಯಸ್‌ ಅಯ್ಯರ್‌ ತಂಡದಲ್ಲಿ ಅನುಭವಿಗಳಿದ್ದಾರೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶ್ರೇಯಸ್‌ ಅಯ್ಯರ್‌ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನದೊಂದಿಗೆ ಗರಿಷ್ಠ ರನ್‌ ಗಳಿಸಿದ್ರು. ಇನ್ನೂ ಕೆ.ಎಲ್‌ ರಾಹುಲ್‌ ಮ್ಯಾಚ್‌ ಫಿನಿಷರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೇ 2023ರಲ್ಲೂ ರಾಹುಲ್‌ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆಲ್ಲಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಕೆಲವರು ಕೆ.ಎಲ್‌ ರಾಹುಲ್‌ಗೆ ನಾಯಕತ್ವ ಸಿಗುತ್ತೇ ಎಂದೇ ಭಾವಿಸಿದ್ದರು. ಇನ್ನೂ ಕೆಲವರು ಶ್ರೇಯಸ್‌ ಅಯ್ಯರ್‌ ಅವರಿಗೆ ಅವಕಾಶ ಸಿಗಲಿದೆ ಅಂದುಕೊಂಡಿದ್ದರು. ಏಕೆಂದ್ರೆ 26 ವರ್ಷದ ಗಿಲ್‌ಗೆ ಇನ್ನೂ 8-10 ವರ್ಷ ಆಡುವ ಅವಕಾಶವಿದೆ. ಆದ್ರೆ ಗಂಭೀರ್‌ ಅವರ ಮಾಸ್ಟರ್‌ ಪ್ಲ್ಯಾನ್‌ ಬೇರೆಯೇ ಇತ್ತು. ಏಕಾಏಕಿ ಗಿಲ್‌ ಅವರಿಗೆ ನಾಯಕತ್ವದ ಹಣೆಪಟ್ಟಿ ಕಟ್ಟಿದರು. ಇದು ರಾಹುಲ್‌, ಅಯ್ಯರ್‌ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ.

    ಆಸಿಸ್‌ ವಿರುದ್ಧ ಸರಣಿಯಲ್ಲಿ ಗಂಭೀರ್‌ ಮಾಡಿದ ತಪ್ಪುಗಳೇನು?
    SENA ದೇಶಗಳಲ್ಲಿ ಅಂದ್ರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ದೇಶಗಳಲ್ಲಿನ ಕ್ರಿಕೆಟ್ ಪಿಚ್‌ಗಳು ಒಂದೇ ರೀತಿಯ ಭೌಗೋಳಿಕ – ಪ್ರಾಕೃತಿಕ ಮೂಲಗುಣಗಳನ್ನ ಹೊಂದಿರುತ್ತವೆ. ಹಾಗಾಗಿ, ಆ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಸರಣಿಗಳಿಗೆ ಹೋಗುವ ಭಾರತ ತಂಡವನ್ನು ಅತ್ಯಂತ ಜಾಣತನದಿಂದ ಆಯ್ಕೆ ಮಾಡಬೇಕಾಗುತ್ತದೆ. ಆದರೆ, ಇದೇ ವರ್ಷ ನಡೆದಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ನಡೆದಿರುವ ಸರಣಿಗಳಿಗಾಗಿ ಆಯ್ಕೆ ಮಾಡಿರುವ ಭಾರತ ತಂಡಕ್ಕೆ ಸೂಕ್ತ ಆಟಗಾರರನ್ನ ಆಯ್ಕೆ ಮಾಡದಿರುವುದು ಗೌತಮ್ ಗಂಭೀರ್ ಮೇಲಿರುವ ಪ್ರಮುಖವಾದ ಆಪಾದನೆಯಾಗಿದೆ. ಅಂಥ ತಪ್ಪುಗಳನ್ನು ಹೀಗೆ ಪಟ್ಟಿ ಮಾಡಬಹುದು.

    * ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿದ್ದು,
    * ಇಂಗ್ಲೆಂಡ್ ವಿರುದ್ಧ ಕುಲ್‌ದೀಪ್‌ ಯಾದವ್ ಅವರ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿದ್ದರೂ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಯ‌ಲ್ಲಿ ಪ್ಲೇಯಿಂಗ್‌-11ನಿಂದ ಹೊರಗಿಟ್ಟಿದ್ದು,
    * ಆಸ್ಟ್ರೇಲಿಯಾದಲ್ಲಿನ ಗ್ರೀನ್-ಟಾಪ್ ಪಿಚ್ ಗಳಲ್ಲಿ ಇಬ್ಬರು ಸ್ಪಿನ್ನರ್ ಗಳನ್ನು ತಂಡದಲ್ಲಿ ಆಡಿಸಿದ್ದು,
    * ಆಸೀಸ್ ಪಿಚ್‌ಗಳಲ್ಲಿ ಇನ್ನೂ ನುರಿತಿರಲಾರದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಅವರನ್ನ ಕಣಕ್ಕಿಳಿಸಿದ್ದು.

    AUS vs IND 2nd ODI

    ಇದನ್ನು ಹೊರತುಪಡಿಸಿಯೂ, ಗಂಭೀರ್ ಅವರ ತಪ್ಪು ಆಯ್ಕೆಗಳಿಂದಾಗಿ ತಂಡದ ಪ್ರದರ್ಶನದ ಕಳಪೆಯಾದಾಗ ಯಾರಾದರೂ ಆ ಬಗ್ಗೆ ಮಾತನಾಡಿದರೆ ಅವರಿಗೆ ಧಿಮಾಕಿನ ಉತ್ತರ ಕೊಡುವುದು ಗಂಭೀರ್ ಅವರ ಮತ್ತೊಂದು ಗುಣ. ಕ್ರಿಸ್ ಶ್ರೀಕಾಂತ್ ಅವರು ಹಿಂದೆ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದಾಗ ಅವರು ಲೆಜೆಂಡ್ ಎಂಬುದನ್ನೂ ಕೇರ್ ಮಾಡದೇ ಒರಟಾಗಿ ಉತ್ತರ ಕೊಟ್ಟಿದ್ದರು ಗಂಭೀರ್. ಅದೂ ಅಲ್ಲದೆ, ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳು, ಸರ್ಫರಾಜ್ ಖಾನ್ ಅವರ ವಿರುದ್ಧ ಧೋರಣೆ… ಇವೆಲ್ಲದರ ಬಗ್ಗೆಯೂ ಈಗ ಅಸಮಾಧಾನ ಭುಗಿಲೆದ್ದಿದೆ. ಇದಕ್ಕೆ ಬಿಸಿಸಿಐ ಯಾವ ರೀತಿ ಮದ್ದು ಅರೆಯುತ್ತದೆ ಎಂಬುದನ್ನ ಇನ್ನಷ್ಟೇ ಕಾದುನೋಡಬೇಕಿದೆ.

  • ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ

    ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ

    ನವದೆಹಲಿ: ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ (Pahalgam) ಭಯೋತ್ಪಾದಕರು ಹಿಂದೂಗಳ ನರಮೇದ ನಡೆಸಿದ ದಿನವೇ ಟೀಂ ಇಂಡಿಯಾ ಮುಖ್ಯಕೋಚ್‌ ಗೌತಮ್‌ ಗಂಭೀರ್‌ (Gautam Gambhi) ಅವರಿಗೆ 2 ಬಾರಿ ಜೀವ ಬೆದರಿಕೆ ಸಂದೇಶ ಬಂದಿತ್ತು ಎಂದು ವರದಿಯಾಗಿದೆ.

    2 ಇ-ಮೇಲ್‌ಗಳ ಮೂಲಕ ʻನಿನ್ನನ್ನು ಕೊಲ್ಲುತ್ತೇವೆʼ ಎನ್ನುವ ಬೆದರಿಕೆ ಸಂದೇಶಗಳು ಬಂದಿವೆ. ಈ ಸಂಬಂಧ ಗೌತಮ್‌ ಗಂಭೀರ್‌ ಅವರ ಕಾರ್ಯದರ್ಶಿ ದೆಹಲಿ ಪೊಲೀಸರಿಗೆ (Delhi Police) ದೂರು ನೀಡಿದ್ದು, ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇ-ಮೇಲ್‌ ವಿಳಾಸದ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ

    ಬಿಜೆಪಿ ಮಾಜಿ ಸಂಸದರೂ ಆಗಿರುವ ಗೌತಮ್‌ ಗಂಭೀರ್‌ ಅವರಿಗೆ ಇದೇ ಏಪ್ರಿಲ್‌ 22ರಂದು ಮಧ್ಯಾಹ್ನ 2:07ರ ಸುಮಾರಿಗೆ jigneshsinhsodhaparmar14@gmail.com ಎಂಬ ಇಮೇಲ್ ಐಡಿಯಿಂದ ಮೊದಲ ಇಮೇಲ್ ಬೆದರಿಕೆ ಬಂದಿತ್ತು. ಸಂಜೆ 7:09 ಗಂಟೆ ವೇಳೆಗೆ chandressodha3@gmail.com ಎಂಬ ಐಡಿಯಿಂದ 2ನೇ ಬೆದರಿಕೆ ಸಂದೇಶ ಬಂದಿತ್ತು. ಈ ಹಿನ್ನೆಲೆ ಗಂಭೀರ್‌ ಅವರಿಗೂ ಸೂಕ್ತ ಭದ್ರತೆ ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ (ಕೇಂದ್ರ) ಹರ್ಷ ವರ್ಧನ್ ಹೇಳಿದ್ದಾರೆ. ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಪತ್ತೆ ಕೇಸ್; 2 ವರ್ಷ ಜೈಲುಶಿಕ್ಷೆ ಅನುಭವಿಸಿ ನಿರಪರಾಧಿಯಾಗಿ ಬಿಡುಗಡೆಯಾದ ಸುರೇಶ್

  • ಗಂಭೀರ್‌ಗೆ ಪಿಚ್ ಬಗ್ಗೆ ಗೊತ್ತಿಲ್ಲ, ಕ್ರಿಕೆಟ್‍ನ ಅರಿವಿಲ್ಲ: ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

    ಗಂಭೀರ್‌ಗೆ ಪಿಚ್ ಬಗ್ಗೆ ಗೊತ್ತಿಲ್ಲ, ಕ್ರಿಕೆಟ್‍ನ ಅರಿವಿಲ್ಲ: ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

    ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ಸೋತ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಗಂಭೀರ್‌ಗೆ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿಲ್ಲ. ಭಾರತದ ಕೋಚ್‌ಗೆ ಪಿಚ್ ಬಗ್ಗೆ ಏನೂ ತಿಳಿದಿಲ್ಲ. ಪಿಚ್‌ನ್ನು ಅರ್ಥಮಾಡಿಕೊಳ್ಳುವಲ್ಲಿ ಕೋಚ್ ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡಿದ್ದು, ಪರ್ತ್‌ನಲ್ಲಿ ರವಿಚಂದ್ರನ್ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದು ಬಾಲಿಶ ನಿರ್ಧಾರಗಳಾಗಿವೆ. ಇದು ಕೋಚ್ (ಗಂಭೀರ್) ಗೆ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಎತ್ತಿ ತೋರಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

    ಐಪಿಎಲ್ ಗೆದ್ದ ನಂತರ, ಪಿಆರ್ ಏಜೆನ್ಸಿ ಗೌತಮ್‌ಗಿಂತ ಉತ್ತಮ ಕೋಚ್ ಇಲ್ಲ ಎಂಬ ವಾತಾವರಣವನ್ನು ಸೃಷ್ಟಿಸಿತು. ಆದರೆ ಎಲ್ಲಾ ಕ್ರೆಡಿಟ್‌ಗಳು ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್‌ಗೆ ಸಲ್ಲಬೇಕಿತ್ತು. ಹಿರಿಯ ಆಟಗಾರನನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಅಶ್ವಿನ್ ನಿವೃತ್ತಿಗೆ ಕೋಚ್ ಕೂಡ ಕಾರಣ ಎಂದು ಅವರು ಹೇಳಿದ್ದಾರೆ.

    ಗಂಭೀರ್ ಜುಲೈ 2024 ರಿಂದ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡರು. ಇದಾದ ನಂತರ, ಟೀಂ ಇಂಡಿಯಾ ಮೊದಲು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋತಿತ್ತು. ಇದರ ನಂತರ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋತಿತ್ತು.

  • ಸತತ ಸೋಲಿನ ಬಳಿಕ ಬಿಸಿ ಮುಟ್ಟಿಸಿದ ಬಿಸಿಸಿಐ – ಟೀಂ ಇಂಡಿಯಾ ಆಟಗಾರರಿಗೆ ಮತ್ತೊಂದು ಟಫ್‌ ರೂಲ್ಸ್‌

    ಸತತ ಸೋಲಿನ ಬಳಿಕ ಬಿಸಿ ಮುಟ್ಟಿಸಿದ ಬಿಸಿಸಿಐ – ಟೀಂ ಇಂಡಿಯಾ ಆಟಗಾರರಿಗೆ ಮತ್ತೊಂದು ಟಫ್‌ ರೂಲ್ಸ್‌

    ಮುಂಬೈ: 2024ರ ಟಿ20 ವಿಶ್ವಕಪ್‌ (T20 World Cup) ಟೂರ್ನಿ ಬಳಿಕ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಟೀಂ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಬಿಸಿಸಿಐ (BCCI) ಆಟಗಾರರಿಗೆ ಬಿಸಿಮುಟ್ಟಿಸಲು ಮುಂದಾಗಿದೆ.

    ಇತ್ತೀಚೆಗಷ್ಟೇ ವಿದೇಶ ಪ್ರವಾಸಗಳಿಗೆ ಪತ್ನಿ ಮತ್ತು ಕುಟುಂಬಸ್ಥರನ್ನು ಕರೆದೊಯ್ಯುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನ ಬಿಸಿಸಿಐ ಜಾರಿಗೊಳಿಸಿತು. ಇದೀಗ ಆಟಗಾರರು ವಿದೇಶಿ ಪ್ರವಾಸಕ್ಕೆ ತಮ್ಮ ವೈಯಕ್ತಿಕ ಅಡುಗೆಯವರು, ಕೇಶ ವಿನ್ಯಾಸಕರು, ಸ್ಟೈಲಿಸ್ಟ್ ಮತ್ತು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನ ಕರೆದೊಯ್ಯುವಂತಿಲ್ಲ ಎಂಬ ನಿಯಮವನ್ನು ಜಾರಿಗೋಳಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: IPL 2025: ಮಾರ್ಚ್‌ 23 ರಿಂದ ಐಪಿಎಲ್‌ ಆರಂಭ: ಬಿಸಿಸಿಐ ಉಪಾಧ್ಯಕ್ಷ ಘೋಷಣೆ

    ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025), ಟಿ20 ವಿಶ್ವಕಪ್‌ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಆಟಗಾರರಲ್ಲಿ ಶಿಸ್ತು ತರಲು ಹಾಗೂ ಉತ್ತಮ ಪ್ರದರ್ಶನ ನೀಡುವಂತೆ ಮಾಡಲು ಈ ಕಠಿಣ ನಿಯಮ ಜಾರಿಗೊಳಿಸಿದೆ. ಇದರೊಂದಿಗೆ ಆಟಗಾರರ ಫಿಟ್‌ನೆಸ್‌ ಬಗ್ಗೆಯೂ ಬಿಸಿಸಿಐ ನಿಗಾ ವಹಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪಾಕ್‌ಗೆ ಭೇಟಿ – ಯಾಕೆ?

    ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾಕ್ಕೆ ಗ್ರಹಣ:
    2024ರ ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾಕ್ಕೆ ಗ್ರಹಣ ಹಿಡಿದಿದೆಯಾ ಅನ್ನೋ ಪ್ರಶ್ನೆಯನ್ನ ಅಭಿಮಾನಿಗಳು ಎತ್ತಿದ್ದಾರೆ. ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ಏಕೆಂದರೆ ಮುಖ್ಯಕೋಚ್‌ ಆಗಿ ಗೌತಮ್‌ ಗಂಭೀರ್‌ (Gautam Gambhir) ಅಧಿಕಾರ ವಹಿಸಿಕೊಂಡ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದರೂ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪೇಲವ ಪ್ರದರ್ಶನ ತೋರುತ್ತಾ ಬರುತ್ತಿದೆ. ಟಿ20 ವಿಶ್ವಕಪ್‌ ಗೆದ್ದ ಬಳಿಕ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ, ನ್ಯೂಜಿಲೆಂಡ್‌ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಆಸೀಸ್‌ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ಹೀನಾಯ ಸೋಲು ಕಂಡಿದ್ದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಗಳಿಗೆ ಕತ್ತರಿ ಹಾಕಿದ ಬಿಸಿಸಿಐ ಇದೀಗ ಆಟಗಾರರಿಗೂ ಕಠಿಣ ರೂಲ್ಸ್‌ ಜಾರಿಗೊಳಿಸಿದೆ. ‌

  • ಗಂಭೀರ್ ಅಧಿಕಾರಕ್ಕೆ ಕತ್ತರಿ –  ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಶಾಕ್‌!

    ಗಂಭೀರ್ ಅಧಿಕಾರಕ್ಕೆ ಕತ್ತರಿ – ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಶಾಕ್‌!

    ಮುಂಬೈ: ಟೀಂ ಇಂಡಿಯಾ (Team India) ಸತತವಾಗಿ ಪೇಲವ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ಎಚ್ಚೆತ್ತಿದ್ದು, ಆಟಗಾರರಿಗೆ ಬಿಗ್ ಶಾಕ್ ನೀಡಲು ಮುಂದಾಗುತ್ತಿದೆ. ವಿದೇಶ ಪ್ರವಾಸಗಳಿಗೆ ಪತ್ನಿ ಮತ್ತು ಕುಟುಂಬಸ್ಥರನ್ನು ಕರೆದೊಯ್ಯುವಂತಿಲ್ಲ. ಈ ಸಂಬಂಧ ಐದು ವರ್ಷಕ್ಕೆ ಮೊದಲು ಇದ್ದ ನಿಯಮವನ್ನು ಮರು ಜಾರಿ ಮಾಡಲು ಚಿಂತನೆ ನಡೆಸಿದೆ.

    ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ಅಧಿಕಾರಗಳಿಗೆ ಕತ್ತರಿ ಹಾಕಿದೆ. ಇನ್ನು ಮುಂದೆ ಯಾವುದೇ ನಿರ್ಣಯಗಳನ್ನು ಅವರು ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ ಎಂದಿದೆ. ಇದನ್ನೂ ಓದಿ: ಪ್ರೇಯಸಿ ಜೊತೆಗೆ ಮನಸ್ತಾಪ – ಖಾಸಗಿ ವಿಡಿಯೋ ಹಂಚಿಕೊಂಡು ಯುವಕ‌ ಆತ್ಮಹತ್ಯೆ

    ಗಂಭೀರ್ ಮ್ಯಾನೇಜರ್ ಗೌರವ್‌ಗೆ ನೀಡಿದ್ದ ಸವಲತ್ತುಗಳನ್ನು ಹಿಂಪಡೆದಿದೆ. ಅಲ್ಲದೇ ಸಹಾಯಕ ಸಿಬ್ಬಂದಿ ಪದವಿ ಅವಧಿಯನ್ನು ಮೂರು ವರ್ಷಕ್ಕೆ ಇಳಿಸಲು ಮುಂದಾಗಿದೆ ಎನ್ನಲಾಗಿದೆ.

     

  • ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನೂತನ ಕಾರ್ಯದರ್ಶಿಯಾಗಿ ಅಸ್ಸಾಂನ ಮಾಜಿ ಕ್ರಿಕೆಟಿಗ ದೇವಜಿತ್‌ ಸೈಕಿಯಾ (Devajit Saikia) ನೇಮಕವಾಗಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿ ಜಯ್‌ ಶಾ (Jay Shah) ಆಯ್ಕೆಯಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಒಂದು ತಿಂಗಳ ಬಳಿಕ ಸೈಕಿಯಾ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ.

    ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ (Roger Binny), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಭೆಯಲ್ಲಿ ಇತ್ತೀಚಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಟೀಂ ಇಂಡೀಯಾ ಸೋಲಿಗೆ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಾಯಿತು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣಗಳೇನೆಂಬುದನ್ನು ಚರ್ಚಿಸಲಾಯಿತು. ಜೊತೆಗೆ ಮುಂದಿನ ಸವಾಲುಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಮಾತುಕತೆ ನಡೆಸಲಾಯಿತು.

    ದೇವಜಿತ್ ಸೈಕಿಯಾ ಯಾರು?
    ಸೈಕಿಯಾ ಅಸ್ಸಾಂ ಮೂಲದ ಮಾಜಿ ಕ್ರಿಕೆಟರ್‌. 1990 – 1991ರ ನಡುವೆ‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಪಂದ್ಯಗಳನ್ನಾಡಿದ್ದ ಸೈಕಿಯಾ ವಿಕೆಟ್‌ ಕೀಪರ್‌ ಆಗಿದ್ದರು. ಈ ಪಂದ್ಯದಲ್ಲಿ 53 ರನ್‌ ಗಳಿಸಿದ್ದ ಅವರು 9 ವಿಕೆಟ್‌ ಪಡೆದಿದ್ದರು. ಬಳಿಕ ಕಾನೂನು ವೃತ್ತಿಯಲ್ಲಿ ಮುಂದುವರಿಯಲು ಪ್ರಾರಂಭಿಸಿದರು. 28ನೇ ವಯಸ್ಸಿನಲ್ಲಿ ಗುವಾಹಟಿ ಹೈಕೋರ್ಟ್‌ ವಕೀಲರಾಗಿ ಅಭ್ಯಾಸ ಆರಂಭಿಸಿದರು. ಇದಕ್ಕೂ ಮುನ್ನ ಸ್ಪೋರ್ಟ್ಸ್‌ ಕೋಟಾ ಮೂಲಕ ಉತ್ತರ ಗಡಿನಾಡು ರೈಲ್ವೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಸೇವೆ ಸಲ್ಲಿಸಿದ್ದರು.

    ನಂತರ 2019ರಲ್ಲಿ ಮತ್ತೆ ಕ್ರೀಡಾಲೋಕಕ್ಕೆ ಮರಳಿದರು. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ​​(ACA)ನ ಆರು ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ಅಸ್ಸಾಂ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಬಳಿಕ 2022ರಲ್ಲಿ ಬಿಸಿಸಿಐ ಹಂಟಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

  • ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    – ಸಿಡ್ನಿಯಲ್ಲಿ ಸುನೀಲ್‌ ಗವಾಸ್ಕರ್‌ಗೆ ಅಪಮಾನ

    ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ಮುಕ್ತಾಯಗೊಂಡಿದ್ದು, ಭಾರತ ಹೀನಾಯ ಸೋಲಿನೊಂದಿಗೆ ಸರಣಿ ಸೋಲುಕಂಡಿದೆ. ಇದರೊಂದಿಗೆ ಟಿ20 ವಿಶ್ವಕಪ್‌ ಗೆದ್ದ ಬಳಿಕ ಏಕದಿನ ಮತ್ತು ಟೆಸ್ಟ್‌ನಲ್ಲಿ ಸತತ 3ನೇ ಸರಣಿಯಲ್ಲಿ ಭಾರತ ಸೋಲು ಕಂಡಿದೆ. ಟೀಂ ಇಂಡಿಯಾದ ಕಳಪೆ ಬ್ಯಾಟಿಂಗ್‌ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ (Sunil Gavaskar) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬ್ಯಾಟಿಂಗ್‌ ಕೋಚ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಂದ್ಯದ ಬಳಿಕ ಸ್ಟಾರ್‌ಸ್ಫೋರ್ಟ್ಸ್‌ ಜೊತೆಗೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ನಾನು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಬಗ್ಗೆ ಮಾತನಾಡುತ್ತಿಲ್ಲ. ಆದ್ರೆ ಟೀಂ ಇಂಡಿಯಾ ಬ್ಯಾಟಿಂಗ್‌ ಕೋಚ್‌ಗಳು ಏನ್‌ ಮಾಡ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಭಾರತ 46 ರನ್‌ಗಳಿಗೆ ಆಲೌಟ್‌ ಆಗಿದ್ದನ್ನು ನೋಡಿದ್ದೇವೆ. ಅಲ್ಲದೇ ಆ ಸರಣಿಯಲ್ಲೂ ಭಾರತ ಸೋಲು ಅನುಭವಿಸಿತು. ಬೌಲಿಂಗ್‌ ಪ್ರದರ್ಶನ ಉತ್ತಮವಾಗಿದೆ. ಆದ್ರೆ ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ. ನಾನೊಬ್ಬ ಟೆಸ್ಟ್‌ ಪ್ಲೇಯರ್‌ ಆಗಿ ಇದನ್ನ ಮಾತನಾಡ್ತಿದ್ದೇನೆ. ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ 2 ತಿಂಗಳ ಅಭ್ಯಾಸ ಇತ್ತು. ಈಗ ಕೋಚ್‌ಗಳು ಬ್ಯಾಟಿಂಗ್‌ನಲ್ಲಿ ಏನ್‌ ಇಂಪ್ರೂವ್ಮೆಂಟ್‌ ಆಗಿದೆ ಅಂತ ಹೇಳಲಿ ಎಂದು ಕಿಡಿಕಾರಿದ್ದಾರೆ.

    ಸಿಡ್ನಿಯಲ್ಲಿ ಸುನೀಲ್‌ ಗವಾಸ್ಕರ್‌ಗೆ ಅಪಮಾನ
    ಇನ್ನೂ ಸರಣಿ ಅಂತ್ಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್‌ಗೆ ಆಯೋಜಕರು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಸುನಿಲ್ ಗವಾಸ್ಕರ್ ಅವರಿಗೆ ಆಯೋಜಕರು ಅಪಮಾನ ಮಾಡಿದ್ದು, ಅವರ ಗೈರಿನಲ್ಲೇ ಪ್ರಶಸ್ತಿ ಪ್ರದಾನ ಮಾಡಿರುವ ಘಟನೆ ನಡೆದಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೆ ಹೀನಾಯ ಸೋಲು – ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌‌ ಫೈನಲ್‌ಗೆ ಆಸೀಸ್‌ ಲಗ್ಗೆ

    ಆಸ್ಟ್ರೇಲಿಯಾದ ಅಲನ್ ಬಾರ್ಡರ್‌ ಹಾಗೂ ಭಾರತದ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಈ ಸರಣಿ ನಡೆದಿತ್ತು. ಸರಣಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಬಾರ್ಡರ್ ಅವರು ಟ್ರೋಫಿಯನ್ನು ನೀಡಿದರು. ಆದ್ರೆ ಅದೇ ಸಮಯದಲ್ಲಿ ಗವಾಸ್ಕರ್, ಸ್ಥಳದಲ್ಲಿದ್ದರೂ ಅವರನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಭಾರತ ವಿರುದ್ಧ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ನೀಡಲು ತಮ್ಮನ್ನು ಆಹ್ವಾನಿಸದಿದ್ದಕ್ಕಾಗಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಟದ ಮಧ್ಯೆಯೇ ಮೈದಾನ ತೊರೆದ ಬುಮ್ರಾ – ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ! 

  • ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಗ್ಗೆ ಕೋಚ್‌ ಗೌತಮ್‌ ಗಂಭೀರ (Gautam Gambhir) ಮೌನ ಮುರಿದಿದ್ದಾರೆ. ಮುಂದೆ ನಡೆಯಲಿರುವ ಸಿಡ್ನಿ ಟೆಸ್ಟ್‌ (Sydney Test) ಕ್ರಿಕೆಟ್‌ಗೆ ಪ್ರಮುಖ ಆಟಗಾರರ ಕೈಬಿಡುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.

    ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಮುನ್ನಡೆಸುತ್ತಾರೆಯೇ ಎಂಬುದನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿಲ್ಲ. ಇದನ್ನೂ ಓದಿ: ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

    ರೋಹಿತ್ ಜೊತೆಯಲ್ಲಿ ಎಲ್ಲವೂ ಚೆನ್ನಾಗಿದೆ. ಪಿಚ್ ನೋಡಿದ ನಂತರ ನಾವು ನಾಳೆ (ಜ.11) ಘೋಷಿಸುತ್ತೇವೆ ಎಂದು ಗಂಭೀರ್ ಹೇಳಿದ್ದಾರೆ. ನಾಳೆ ತಂಡದ ಆಟಗಾರರ ಅಂತಿಮ ಪಟ್ಟಿ ಹೊರಬೀಳಲಿದೆ

    ರೋಹಿತ್ ಆ ತಂಡದಲ್ಲಿ ಇರುತ್ತಾರೆಯೇ ಎಂದು ನಿರ್ದಿಷ್ಟವಾಗಿ ಕೇಳಿದಾಗ, ‘ನಾನು ಹೇಳಿದಂತೆ, ನಾವು ವಿಕೆಟ್ ಅನ್ನು ನೋಡಲಿದ್ದೇವೆ ಎಂದು ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್‌ ತಂಡದಲ್ಲಿ ಇರುತ್ತಾರೆಯೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

    ನಾಯಕ ರೋಹಿತ್ ಆಸ್ಟ್ರೇಲಿಯಾ ವಿರುದ್ಧ ನಡೆದ ಐದು ಪಂದ್ಯಗಳ ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ರನ್‌ಗಾಗಿ ಹೆಣಗಾಡಿದ್ದಾರೆ. ಈ ವಾರದ ಆರಂಭದಲ್ಲಿ ಮೆಲ್ಬರ್ನ್‌ನಲ್ಲಿ ಭಾರತ ಸೋತ ನಂತರ 2-1 ರಿಂದ ಹಿನ್ನಡೆಯಲ್ಲಿದೆ.

  • ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    ಬ್ರಿಸ್ಬೇನ್: ಬಾರ್ಡರ್‌ ಗವಾಸ್ಕರ್‌ ಟ್ರೋಫಿ 3ನೇ ಟೆಸ್ಟ್‌ ಪಂದ್ಯದ ಕೊನೆಯ ದಿನವೂ ಮಳೆ ಆಟವೇ ಮುಂದುವರಿದಿದ್ದು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಭಾರತಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಹಾದಿ ಕೊಂಚ ಸುಗಮವಾದಂತಾಗಿದೆ. ಸದ್ಯ ಮೂರು ಪಂದ್ಯಗಳ ಪೈಕಿ 1-1ರಲ್ಲಿ ಸರಣಿ ಸಮಬಲಗೊಂಡಿದೆ. ಉಳಿದ 2 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದರೆ, WTC ಫೈನಲ್‌ ತಲುಪಲಿದೆ.

    ವೂಲೂಂಗಬ್ಬಾದ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4ನೇ ದಿನದ ಅಂತ್ಯಕ್ಕೆ ಭಾರತ 9 ವಿಕೆಟ್‌ ನಷ್ಟಕ್ಕೆ 252 ರನ್‌ ಗಳಿಸಿ, ಫಾಲೋ ಆನ್‌ ಭೀತಿಯಿಂದ ಪಾರಾಗಿತ್ತು. ಕೊನೆಯ ಕ್ರೀಸ್‌ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ 185 ರನ್‌ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 7 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಭಾರತಕ್ಕೆ 275 ರನ್‌ಗಳ ಗುರಿ ನೀಡಿತು. ಇತ್ತ ಭಾರತ 2.1 ಓವರ್‌ಗಳಲ್ಲಿ 8 ರನ್‌ ಗಳಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ನಿರಂತರವಾಗಿ ಸುರಿಯುತ್ತಿದ್ದರಿಂದ ಪಂದ್ಯ ಡ್ರಾನತ್ತ ತಿರುಗಿತು.

    ಭಾರತವನ್ನು ಕಾಪಾಡಿದ ಆಕಾಶ್‌ ದೀಪ್‌:
    ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 3ನೇ ದಿನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 51 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. 4ನೇ ದಿನ ಆರಂಭಿಕ ಕೆ.ಎಲ್ ರಾಹುಲ್ 84 ರನ್, ರವೀಂದ್ರ ಜಡೇಜಾ 77 ರನ್‌ಗಳ ಕೊಡುಗೆ ನೀಡಿದರೂ, ಫಾಲೋ ಆನ್‌ಗೆ ತುತ್ತಾಗುವ ಭೀತಿಯಲ್ಲಿತ್ತು. ಆದ್ರೆ ಕೊನೇ ಕ್ಷಣದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಆಕಾಶ್ ದೀಪ್, ಪ್ಯಾಟ್ ಕಮ್ಮಿನ್ಸ್ ಅವರ ಪಾಲಿನ 21ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಟೀಂ ಇಂಡಿಯಾವನ್ನು ಫಾಲೋ ಆನ್‌ನಿಂದ ಕಾಪಾಡಿದರು. ಜಸ್ಪ್ರೀತ್ ಬುಮ್ರಾ ಸಹ ಬ್ಯಾಟಿಂಗ್‌ನಲ್ಲಿ ನೆರವಾದರು.

    ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ 84 ರನ್ (139 ಎಸೆತ, 8 ಬೌಂಡರಿ), ರವೀಂದ್ರ ಜಡೇಜಾ 77 ರನ್ (123 ರನ್, 7 ಬೌಂಡರಿ, 1 ಸಿಕ್ಸರ್), ರೋಹಿತ್ ಶರ್ಮಾ 10 ರನ್, ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಆಕಾಶ್ ದೀಪ್ 31 ರನ್ ಗಳಿಸಿದ್ರೆ, ಜಸ್ಪ್ರೀತ್ ಬುಮ್ರಾ 10 ರನ್‌ ಗಳಿಸಿದರು.

    ಭಾರತದ WTC ಫೈನಲ್‌ ಹಾದಿ ಹೇಗಿದೆ?
    ಇದೇ ಡಿ.26ರಿಂದ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನದ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಈ ಸರಣಿಯ ಒಂದು ಪಂದ್ಯದಲ್ಲಿ ಪಾಕ್‌ ಗೆಲ್ಲಬೇಕು. ಇದೇ ವೇಳೆ ಆಸೀಸ್‌ ವಿರುದ್ಧ ಸರಣಿಯನ್ನು ಭಾರತ 3-1 ಅಂತರದಲ್ಲಿ ಗೆದ್ದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಅಥವಾ ಭಾರತವು ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದರೆ, ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಆಸೀಸ್‌ 1-1 ಅಥವಾ ಲಂಕಾ 1-0 ಅಂತರದಲ್ಲಿ ಕೊನೆಯಗೊಳ್ಳಬೇಕು. ಅಥವಾ ಭಾರತ ಆಸೀಸ್‌ ವಿರುದ್ಧ 2-2 ಅಂತರಲ್ಲಿ ಗೆದ್ದರೆ, ಲಂಕಾ, ಆಸೀಸ್‌ ಇರುದ್ಧ 1-0 ಅಥವಾ 2-0 ವಿರುದ್ಧ ಗೆದ್ದರೆ ಮಾತ್ರ ಭಾರತ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳಿವೆ.

    ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ, ಗಂಭೀರ್ ಸಂಭ್ರಮ:
    213 ರನ್‌ಗಳಿಗೆ ಭಾರತ ತನ್ನ 9ನೇ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ ಫಾಲೋ ಆನ್‌ಗೆ ತುತ್ತಾಗಿ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದ್ರೆ ಕೊನೆಯ ವಿಕೆಟ್‌ಗೆ ಜೊತೆಗೂಡಿದ ಬುಮ್ರಾ, ಆಕಾಶ್‌ದೀಪ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. ಪ್ಯಾಟ್ ಕಮ್ಮಿನ್ಸ್ ಅವರ 21ನೇ ಓವರ್‌ನ 4ನೇ ಎಸೆತವನ್ನು ಆಕಾಶ್ ದೀಪ್ ಬೌಂಡರಿಗೆ ಅಟ್ಟುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಹಿರಿಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್, ರೋಹಿತ್ ಶರ್ಮಾ, ಪರಸ್ಪರ ಕೈಕುಲುಕಿ ಸಂಭ್ರಮಿಸಿದ್ದರು.

  • ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

    ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

    ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ (Ind vs Ban) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ (ಸೆ.19) ಆರಂಭವಾಗುತ್ತಿದೆ. ಚೆನ್ನೈನ ಎಂ.ಎ ಚಿದಂಬರಂ @ಚೆಪಾಕ್ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದೆ.‌ 2023-25ನೇ ಸಾಲಿನ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಭಾಗವಾಗಿ ನಡೆಯುತ್ತಿರುವ ಟೆಸ್ಟ್‌ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.

    ಪ್ರಸಕ್ತ ವರ್ಷದ ಆರಂಭದಲ್ಲಿ ಭಾರತವು ಆಡಿದ್ದ ಕೊನೆಯ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿತ್ತು. ಅದಾದ ಬಳಿಕ ಟೆಸ್ಟ್‌ ಸರಣಿಯಲ್ಲಿ ತಂಡ ಕಣಕ್ಕಿಳಿದಿಲ್ಲ. ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಗೆಲುವು ಸಾಧಿಸಿದ್ದ ಭಾರತ, ಏಕದಿನ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿತ್ತು. ಏಕದಿನ ಸರಣಿ ಸೋತಿದ್ದ ನಾಯಕ ರೋಹಿತ್‌ ಶರ್ಮಾ (Rohit Sharma) ಪಡೆ, ಇದೀಗ ನಜ್ಮುಲ್ ಹೊಸೈನ್ ಶಾಂಟೊ ಬಳಗದ ವಿರುದ್ಧ ತವರಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: Asian Champions Trophy| ಅತಿಥೇಯ ಚೀನಾಗೆ ಸೋಲು – 5ನೇ ಬಾರಿ ಭಾರತ ಚಾಂಪಿಯನ್‌

    ನೂತನ ಮುಖ್ಯ ಕೋಚ್‌ ಆಗಿ ನೇಮಕಗೊಂಡ ಬಳಿಕ, ಗೌತಮ್‌ ಗಂಭೀರ್‌ ಅವರಿಗೆ ಇದು ಮೊದಲ ಟೆಸ್ಟ್‌ ಸರಯಾಗಿದ್ದು ಸವಾಲಿನದ್ದು ಸಹ ಆಗಿದೆ. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಇದುವರೆಗೂ ಟೆಸ್ಟ್‌ ಸರಣಿ ಗೆದ್ದಿಲ್ಲ. ಹಾಗಂತ, ಬಾಂಗ್ಲಾ ಹುಲಿಗಳನ್ನು ರೋಹಿತ್ ಶರ್ಮಾ ಪಡೆ ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಇತ್ತೀಚೆಗೆ ಬಾಂಗ್ಲಾದೇಶವು ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಿದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನವನ್ನು ಅವರ ತವರಲ್ಲೇ ಬಗ್ಗು ಬಡಿದು 2-0 ಅಂತರದಲ್ಲಿ ವೈಟ್‌ ವಾಶ್‌ ಮಾಡಿತ್ತು. ಅಲ್ಲಿಂದ ಬಾಂಗ್ಲಾ ಆಟಗಾರರು ಭಾರತ ವಿರುದ್ಧವೂ ಸರಣಿ ಗೆಲುವಿನ ಗುರಿಯೊಂದಿಗೆ ಚೆನ್ನೈಗೆ ಆಗಮಿಸಿದ್ದಾರೆ. ‌

    ಭಾರತವೇನಾದರೂ ಚೆನ್ನೈ ಟೆಸ್ಟ್‌ ಗೆದ್ದರೆ, ಟೆಸ್ಟ್‌ ಸ್ವರೂಪದಲ್ಲಿ ಇದೇ ಮೊದಲ ಬಾರಿಗೆ ಸೋಲಿಗಿಂತ ಹೆಚ್ಚು ಗೆಲುವು ಸಂಪಾದಿಸಿದ ಸಾಧನೆ ಮಾಡಿದಂತಾಗುತ್ತದೆ. ಇದನ್ನೂ ಓದಿ: ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಚೆನ್ನೈ ಹವಾಮಾನ ವರದಿ ಹೇಗಿದೆ?
    ಇಂದು (ಸೆ.19) ಚೆನ್ನೈನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದೆ. 1% ಮಳೆ ಸಾಧ್ಯತೆಯಿದ್ದು, 78%, ಆದ್ರತೆ ಇರಲಿದೆ. 11 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ: ತೇಜಸ್ವಿ ಯಾದವ್‌