Tag: ಗೋ ಹತ್ಯೆ

  • ಬಾಗಲಕೋಟೆ: ಅಕ್ರಮ ಕಸಾಯಿಖಾನೆ ತೆರೆದು ಗೋವುಗಳ ಮಾರಣಹೋಮ

    ಬಾಗಲಕೋಟೆ: ಅಕ್ರಮ ಕಸಾಯಿಖಾನೆ ತೆರೆದು ಗೋವುಗಳ ಮಾರಣಹೋಮ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಪಟ್ಟಣದ ಕಟಾಪೆ ಪ್ಲಾಟ್‍ನಲ್ಲಿ ಗೋಹತ್ಯೆ ನಡೆದಿರೋದು ಬೆಳಕಿಗೆ ನಡೆದಿದೆ.

    ಬೇಪಾರಿ ಜನಾಂಗದವರು ಅಕ್ರಮ ಕಸಾಯಿಖಾನೆ ತೆರೆದು ಗೋಹತ್ಯೆ ಮಾಡಿದ್ದಾರೆಂದು ಆರೋಪಗಳು ಕೇಳಿಬಂದಿವೆ. ಕಸಾಯಿಖಾನೆಯಲ್ಲಿ ಈಗಾಗಲೇ ಐದು ಗೋವು ಹಾಗು ಒಂದು ಎಮ್ಮೆ ಕೊಲ್ಲಲ್ಪಟ್ಟಿವೆ. ಕಸಾಯಿಖಾನೆಯಲ್ಲಿದ್ದ 19 ಆಕಳುಗಳನ್ನು ರಕ್ಷಣೆ ಮಾಡಲಾಗಿದೆ.

    ವಿಷಯ ತಿಳಿದು ಸ್ಥಳಕ್ಕೆ ಜಮಖಂಡಿ ಕಮಿಷನರ್ ಜೆ.ಎಚ್.ಕಾಸೆ, ಸಿಪಿಐ ಸುನಿಲ್ ಕುಮಾರ್ ನಂದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಅಧಿಕಾರಿಗಳು ಸ್ಥಳಕ್ಕಾಗಮಿಸುತ್ತಿದ್ದಂತೆ ಗೋವುಗಳ ಹತ್ಯೆ ಮಾಡಿದ್ದಾರೆ ಎನ್ನಲಾದ ಬೇಪಾರಿ ಜನಾಂಗದವರು ಪರಾರಿಯಾಗಿದ್ದಾರೆ.

     

  • ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ರಾಜಸ್ಥಾನ ಹೈಕೋರ್ಟ್

    ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ರಾಜಸ್ಥಾನ ಹೈಕೋರ್ಟ್

    ಜೈಪುರ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂದು ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ ಹೈಕೋರ್ಟ್ ಶಿಫಾರಸು ಮಾಡಿದೆ.

    ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನು ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಮೊನ್ನೆಯಷ್ಟೇ ಮದ್ರಾಸ್ ಹೈಕೋರ್ಟ್ ಕೇಂದ್ರದ ನಿರ್ಧಾರಕ್ಕೆ ಒಂದು ತಿಂಗಳ ತಡೆಯಾಜ್ಞೆ ನೀಡಿತ್ತು.

    ಈ ನಡುವೆ ರಾಜಸ್ಥಾನ ಹೈಕೋರ್ಟ್ ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ವೇಳೆ ಗೋ ಹತ್ಯೆ ಮಾಡಿದವರಿಗೆ ಈಗ ಇರುವ ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಬೇಕು ಎಂದು ಹೇಳಿದೆ.

    ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ, ಗೋಹತ್ಯೆ ನಿಷೇಧ ಆದೇಶಕ್ಕೆ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ವಿಧಿಸಿತ್ತು. ಅಲ್ಲದೆ ಈ ಕುರಿತು ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಆಹಾರ ಮನುಷ್ಯರ ಮೂಲ ಹಕ್ಕಾಗಿದ್ದು, ಇದರಲ್ಲಿ ಮಧ್ಯಪ್ರವೇಶ ಬೇಡ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

    https://twitter.com/mayhempsingh/status/869827993618665472

  • ಬೆಂಗ್ಳೂರು ಬೀಫ್ ಫೆಸ್ಟ್ ಗೆ ಪೊಲೀಸರ ಬ್ರೇಕ್!

    ಬೆಂಗ್ಳೂರು ಬೀಫ್ ಫೆಸ್ಟ್ ಗೆ ಪೊಲೀಸರ ಬ್ರೇಕ್!

    ಬೆಂಗಳೂರು: ಕೇಂದ್ರ ಸರ್ಕಾರದ ಜಾನುವಾರು ಹತ್ಯೆ ಹಾಗು ಮಾರಾಟ ನಿಷೇಧ ಆದೇಶ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇವತ್ತು ಭಾರೀ ಗೋ ಜಟಾಪಟಿ ನಡೀತು. ಟೌನ್‍ಹಾಲ್ ಮುಂದೆ ಎಸ್‍ಎಫ್‍ಐ ಪ್ರತಿಭಟನೆಗೆ ಅನುಮತಿ ಕೇಳಿತ್ತು. ಆದ್ರೆ, ಕೇರಳ ಮಾದರಿ ಬೀಫ್ ಫೆಸ್ಟ್ ನಡೆಸಲು ಮುಂದಾದಾಗ ಪೊಲೀಸರು ಅನುಮತಿ ನೀಡಿರಲಿಲ್ಲ. ಆದ್ರೆ ಸಂಜೆ ಹೊತ್ತಿಗೆ ಆಗಮಿಸಿದ ಎಸ್‍ಎಫ್‍ಐ ಕಾರ್ಯಕರ್ತರು ಬೀಫ್ ತಿಂದು ಪ್ರತಿಭಟನೆ ನಡೆಸಲು ಮುಂದಾದ್ರು. ತಡೆಯಲು ಬಂದ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು.

    ಇದಕ್ಕೂ ಮುನ್ನ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ಮಾಡ್ತಿದ್ದಾರೆ ಎಂದು ವಿಷಯ ತಿಳಿದು ಎಸ್‍ಎಫ್‍ಐ ವಿರುದ್ಧವಾಗಿ ಪ್ರತಿಭಟನೆಗೆ ಗೋ ಪರಿಪಾಲಕ ಸಂಘಟನೆಯವರು ಆಗಮಿಸಿದರು. ಎಸ್‍ಎಫ್‍ಐ ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಆಗಮಿಸಿದ ಇವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ಸಂಘಟನೆಯ ಜೊತೆಯಲ್ಲಿ ಬಂದಿದ್ದ ಮಹಿಳೆಯರನ್ನೂ ಪೊಲೀಸರು ಬಂಧಿಸಿದರು. ಒಂದು ಹಂತದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವಂತ ಸನ್ನಿವೇಶ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದಾಗ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದ್ರು. ಈ ಮೂಲಕ ಬೆಂಗಳೂರು ಬೀಫ್ ಫೆಸ್ಟ್ ನಡೆಸಲು ಮುಂದಾಗಿದ್ದ ಎಸ್‍ಎಫ್‍ಐ ಹಾಗೂ ಎಡಪಕ್ಷಗಳ ಕಾರ್ಯಕ್ರಮ ಠುಸ್ ಆಯಿತು.

    ದೇಶದ ಬೇರೆ ಕಡೆ ಏನಾಯ್ತು?: ದೇಶಾದ್ಯಂತ ವಿರೋಧ-ಪರವಾದ ನಡೀತಿದೆ. ವಿಶೇಷ ಏನಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಆದೇಶವನ್ನ ಪಾಲನೆ ಮಾಡೋಕೆ ಆಗಲ್ಲ. ಮೇಘಾಲಯದ ಬಿಜೆಪಿಯವರೆಲ್ಲಾ ದನದ ಮಾಂಸ ತಿಂತೇವೆ. ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದನದ ಮಾಂಸ ಮಾರಾಟವನ್ನ ಇನ್ನಷ್ಟು ಸರಳ ಮಾಡ್ತೇವೆ ಅಂತ ಬಿಜೆಪಿ ಮುಖಂಡ ಬರ್ನಾಡ್ ಮರಾಕ್ ಹೇಳಿದ್ದಾರೆ.

    ಕೇಂದ್ರದ ಆದೇಶದ ವಿರುದ್ಧವಾಗಿ ಕೇರಳ ರಾಜ್ಯ ತನ್ನದೇ ಪ್ರತ್ಯೇಕ ಕಾನೂನು ಜಾರಿಗೆ ಮುಂದಾಗಿದೆ. ನಾವೇನು ತಿನ್ನಬೇಕು ಅನ್ನೋದನ್ನ ದೆಹಲಿ ಅಥವಾ ನಾಗಪುರ ನಿರ್ಧರಿಸಲು ಸಾಧ್ಯವಿಲ್ಲ. ಅವರು ನಿರ್ಧರಿಸಿದರೆ ಅದನ್ನು ನಾವು ಪಾಲನೆ ಮಾಡಲ್ಲ ಅಂತ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಇನ್ನು ಕೇಂದ್ರ ರಾಜ್ಯದ ಅಧಿಕಾರವನ್ನ ಕತ್ತರಿಸ್ತಿದೆ. ರಾಜ್ಯಗಳ ವಿಚಾರದಲ್ಲಿ ಅನವಶ್ಯಕ ಮೂಗು ತೂರಿಸೋದು ಬೇಡ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಎಚ್ಚರಿಸಿದ್ರು. ಆದ್ರೆ, ಕೇರಳದ ಕಣ್ಣೂರಿನಲ್ಲಿ ನಿನ್ನೆ ಸಾರ್ವಜನಿಕವಾಗಿ ದನ ಕಡಿದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ನಡೆಯನ್ನ ರಾಹುಲ್ ಗಾಂಧಿ ಖಂಡಿಸಿದ್ದು, ಕೆಲ ಕಾರ್ಯಕರ್ತರನ್ನ ಪಕ್ಷದಿಂದ ವಜಾ ಮಾಡಿದ್ದಾರೆ. ಇನ್ನು, ಚೆನ್ನೈನಲ್ಲಿ ಪ್ರಗತಿಪರರು ಹಾಗೂ ಅಲ್ಪಸಂಖ್ಯಾತ ಸಮುದಾಯ ಜನ ಮಳೆಯ ಮಧ್ಯೆನೂ ಭಾರಿ ಪ್ರತಿಭಟನೆ ನಡಿಸಿದ್ರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ಕೆಲವು ಮಹತ್ವದ ಬದಲಾವಣೆಗೆ ಮುಂದಾಗಿದೆ. ಜಾನುವಾರುಗಳ ಪಟ್ಟಿಯಿಂದ ಎಮ್ಮೆ, ಕೋಣಗಳನ್ನ ಹೊರಗಿಡಲು ನಿರ್ಧರಿಸಿದೆ ಅಂತ ಮೂಲಗಳಿಂದ ತಿಳಿದುಬಂದಿದೆ.

     

  • ಬಜರಂಗದಳ ಶಿವಮೊಗ್ಗ ಜಿಲ್ಲಾ ಸಂಚಾಲಕನ ಮೇಲೆ ಕೇಸ್

    ಬಜರಂಗದಳ ಶಿವಮೊಗ್ಗ ಜಿಲ್ಲಾ ಸಂಚಾಲಕನ ಮೇಲೆ ಕೇಸ್

    ಶಿವಮೊಗ್ಗ: ನಗರದಲ್ಲಿ ನಡೆದ ಗೋ ಸತ್ಯಾಗ್ರಹದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಕೋಮು ಪ್ರಚೋದಕ ಭಾಷಣ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ನಗರದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಎಫ್‍ಐಆರ್ ಸಲ್ಲಿಸಲಾಗಿದೆ.

    ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಸಾಧುಸಂತರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗೋ ಸತ್ಯಾಗ್ರಹದದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಭಾನುಪ್ರಕಾಶ್ ಸೇರಿದಂತೆ ಹಲವಾರು ಮುಖಂಡರು ಮಾತನಾಡಿದ್ದರು. ಹಿರಿಯೂರು ಮಠದ ಲಕ್ಷ್ಮಣಾರ್ಯ ಸ್ವಾಮೀಜಿ, ಭದ್ರಗಿಗಿರಿಯ ಮುರುಗೇಶ್ ಸ್ವಾಮೀಜಿ, ಗೊಂದಿ ಮಠದ ನಾಮಾನಂದ ಸ್ವಾಮೀಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿಗಳು ಸಾನಿಧ್ಯದಲ್ಲಿ ಗೋ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಅವರು, ನಗರದಲ್ಲಿ 60 ಕಸಾಯಿ ಖಾನೆಗಳಿವೆ. ಇವುಗಳನ್ನು ತೆರವುಗೊಳಿಸುವಲ್ಲಿ ಜಿಲ್ಲಾಧಿಕಾರಿ, ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ನಾವು ನೀಡಿದ ಮನವಿಗೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ಒಂದು ಕೋಮಿನ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿ, ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ ಎಂದು ಎಫ್‍ಐಆರ್ ನಲ್ಲಿ ಹೇಳಲಾಗಿದೆ.

    ದೀನ ದಯಾಳು ಅವರು, ಶಿವಮೊಗ್ಗದಂತ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆ ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಸಭೆ ಸಮಾರಂಭಗಳಲ್ಲಿ ಕೋಮು ಪ್ರಚೋದಕ ಭಾಷಣ ಮಾಡಿ, ಶಾಂತಿ- ಸುವ್ಯವಸ್ಥೆಗೆ ಧಕ್ಕೆ ತರುವ, ಪ್ರಾಣ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡುವ ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳು ಹೆಚ್ಚಿವೆ ಎಂದು ಎಫ್‍ಐಆರ್ ನಲ್ಲಿ ನಮೂದಿಲಾಗಿದೆ.

    ಶಿವಮೊಗ್ಗ ನಗರದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಹಾಗೂ ದಯಾಳು ಅವರ ಸದ್ವರ್ತನೆಗಾಗಿ ಸಿಆರ್‍ಪಿಸಿ 108 ಕಲಂ ಅನ್ವಯ ಒಂದು ವರ್ಷದ ಜಾಮೀನಿನ ಮುಚ್ಚಳಿಕೆ ಪಡೆಯುವಂತೆ ಎಫ್‍ಐಆರ್‍ನಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.

    ಮಾಡಿದವರಿಗೆ ಶಿಕ್ಷೆ ಇಲ್ಲ- ಆಡಿದವರಿಗೆ ಶಿಕ್ಷೆಯೇ?
    ಶಿವಮೊಗ್ಗದಲ್ಲಿ 60 ಅಕ್ರಮ ಕಸಾಯಿಖಾನೆಗಳಿವೆ. ಇವುಗಳನ್ನು ತಕ್ಷಣ ನಿಲ್ಲಿಸಿ ಎಂದು ನಾನು ಭಾಷಣದಲ್ಲಿ ಹೇಳಿದ್ದೆ. ಗೋಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸರು ಕ್ರಮಕೈಗೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಗೋಹತ್ಯೆ ಮಾಡಿದವರಿಗೆ ಯಾವುದೇ ಶಿಕ್ಷೆ ಇಲ್ಲ. ಈ ಬಗ್ಗೆ ಮಾತನಾಡಿದ ನನಗೆ ಶಿಕ್ಷೆಯೇ? ಎಂದು ಬಜರಂಗದಳ ಜಿಲ್ಲಾ ಸಂಚಾಲಕ ದೀನ ದಯಾಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಸತ್ಯವನ್ನೇ ಮಾತಾನಾಡಿದ್ದೇನೆ. ಈ ಸತ್ಯಕ್ಕೆ ಶಿಕ್ಷೆ ನೀಡಲು ಹೊರಟಿರುವ ಪೊಲೀಸರ ಕ್ರಮ ಸರಿಯಲ್ಲ. ಬೇಕಾದರೆ ನಾನು ಶಿವಮೊಗ್ಗದಲ್ಲಿ ಇರುವ ಕಸಾಯಿಖಾನೆಗಳ ವಿವರ ಕೊಡುವೆ. ಪೊಲೀಸ್ ಇಲಾಖೆ ನನ್ನೊಂದಿಗೆ ಈ ವಿಷಯವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಹೇಳಿದ್ದಾರೆ.