Tag: ಗೋ-ಕಾರ್ಟ್

  • ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

    ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

    – ಸಂಘಟಕರ ವಿರುದ್ಧ ಪೋಷಕರು ಗಂಭೀರ ಆರೋಪ

    ಹೈದರಾಬಾದ್: ವಿದ್ಯಾರ್ಥಿನಿಯೊಬ್ಬಳ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಮೀರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರ್ರಾಮ್ ಗುಡಾದಲ್ಲಿರುವ ಗೋ-ಕಾರ್ಟಿಂಗ್ ಪ್ಲೇ ಝೋನ್ ನಲ್ಲಿ ಈ ಅವಘಡ ಸಂಭವಿಸಿದೆ.

    ಮೃತ ದುರ್ದೈವಿಯನ್ನು ವರ್ಷಿಣಿ ಎಂದು ಗುರುತಿಸಲಾಗಿದ್ದು, ಈಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗುರುವಾರ ಸಂಜೆ ಗುರ್ರಾಮ್ ಗುಡಾದ ಗೋ-ಕಾರ್ಟಿಂಗ್ ಪ್ಲೇ ಝೋನ್ ಗೆ ತೆರಳಿದ್ದಳು. ಅಲ್ಲದೆ ಗೋ-ಕಾರ್ಟಿಂಗ್ ಮಾಡುತ್ತಿದ್ದ ವೇಳೆ ಅದರ ಚಕ್ರಕ್ಕೆ ವರ್ಷಿಣಿ ಕೂದಲು ಸಿಲುಕಿಕೊಂಡು ತಲೆಗೆ ಗಂಭೀರ ಗಾಯಗಳಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ವರ್ಷಿಣಿ ಕೂದಲು ಚಕ್ರಕ್ಕೆ ಸಿಲುಕಿಕೊಂಡ ಕೂಡಲೇ ಗೋ-ಕಾರ್ಟ್ ಅಪಘಾತಕ್ಕೀಡಾಗಿದೆ. ಪರಿಣಾಮ ಆಕೆ ಧರಿಸಿದ್ದ ಹೆಲ್ಮೆಟ್ ಕೂಡ ಪುಡಿಯಾಗಿದೆ. ಘಟನೆ ನಡೆದ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಇತ್ತ ಘಟನೆಯಿಂದ ಮಗಳನ್ನು ಕಳೆದುಕೊಳ್ಳುತ್ತಿದ್ದಂತೆಯೇ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗೋ-ಕಾರ್ಟ್ ಪ್ಲೇ ಝೋನ್ ಸಂಘಟಕರ ನಿರ್ಲಕ್ಷ್ಯವೇ ನಮ್ಮ ಮಗಳ ಸಾವಿಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಹೈದರಾಬಾದ್ ನ ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಂಘಟಕರ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.

    ಈ ಹಿಂದೆ ಅಂದರೆ 2018ರಲ್ಲಿ ಹರಿಯಾಣದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. 29 ವರ್ಷದ ಪುನೀತ್ ಕೌರ್ ಎಂಬ ಮಹಿಳೆಯ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ಇದನ್ನೂ ಓದಿ: ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ 28ರ ಮಹಿಳೆ ದುರ್ಮರಣ

  • ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ 28ರ ಮಹಿಳೆ ದುರ್ಮರಣ

    ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ 28ರ ಮಹಿಳೆ ದುರ್ಮರಣ

    ಚಂಡೀಗಢ: ಬಥಿಂಡಾದ ಮಹಿಳೆಯೊಬ್ಬರು ಗೋ-ಕಾರ್ಟ್‍ನ ಚಕ್ರಕ್ಕೆ ಕೂದಲು ಸಿಲುಕಿಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಪಂಜಾಬ್‍ನ ಪಿಂಜೋರ್ ನಗರದಲ್ಲಿ ನಡೆದಿದೆ.

    28 ವರ್ಷದ ಪುನೀತ್ ಕೌರ್ ಮೃತ ದುರ್ದೈವಿ. ಈ ಘಟನೆ ಬುಧವಾರ ಮಧ್ಯಾಹ್ನ ಪಿಂಜೋರ್‍ನಲ್ಲಿರುವ ಯಾದವಿಂದ್ರ ಉದ್ಯಾನವನದ ಪಕ್ಕದ ಅಮ್ಯೂಸ್ ಮೆಂಟ್ ಪಾರ್ಕ್‍ನಲ್ಲಿ ನಡೆದಿದೆ. ಪುನೀತ್ ಕೌರ್ ಬಥಿಂಡಾದ ರಾಮ್‍ಪುರ ಪೂಲ್ ನ ನಿವಾಸಿಯಾಗಿದ್ದಾರೆ. ಇವರು ಆಕ್ವಾದ ಗ್ರಾಮದಲ್ಲಿದ್ದ ಪಾರ್ಕ್‍ಗೆ ಪತಿ ಅಮರ್‍ದೀಪ್, ಎರಡು ವರ್ಷದ ಮಗು ಮತ್ತು ಇತರೆ ಕುಟುಂಬ ಸದಸ್ಯರ ಜೊತೆ ಬಂದಿದ್ದರು.

    ಪುನೀತ್ ಕೌರ್ ಕುಟುಂಬವು ಮಂಗಳವಾರ ರಾತ್ರಿ ಖಾರ್ರಾಗೆ ಹೋಗಿದ್ದಾರೆ. ಬುಧವಾರ ಬೆಳಿಗ್ಗೆ ಪರ್ವಾನೂನಲ್ಲಿರುವ ಟಿಂಬರ್ ಟ್ರೈಲ್ ಗೆ ಭೇಟಿ ನೀಡಲು ನಿರ್ಧರಿಸಿದ್ದರು. ಅದರಂತೆ ಟಿಂಬರ್ ಟ್ರೈಲ್ ನೋಡಿ ಹಿಂದಿರುಗುತ್ತಿದ್ದಾಗ ಅವರು ಅಮ್ಯೂಸ್ ಮೆಂಟ್ ಪಾರ್ಕ್‍ಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಟುಂಬವು ನಾಲ್ಕು ಗೋ-ಕಾರ್ಟ್‍ಗಳನ್ನು ಬುಕ್ ಮಾಡಿದೆ. ನಂತರ ಪುನೀತ್ ಕೌರ್ ಮತ್ತು ಪತಿ ಅಮರ್‍ದೀಪ್ ಒಂದು ಕಾರ್ಟ್‍ನಲ್ಲಿ ಕುಳಿತುಕೊಂಡಿದ್ದು, ಅವರ ಮಗ ಇನೊಂದು ಕಾರ್ಟ್‍ನಲ್ಲಿ ಅಜ್ಜಿಯೊಂದಿಗೆ ಕುಳಿತುಕೊಂಡಿದ್ದನು. ಬಳಿಕ ಒಂದೆರಡು ಬಾರಿ ಸುತ್ತಾಡಿದ ನಂತರ ಆಕೆಯ ಕೂದಲು ಗೋ-ಕಾರ್ಟ್‍ನ ಚಕ್ರದಲ್ಲಿ ಸಿಲುಕಿಕೊಂಡಿದ್ದು, ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣ ಪತಿ ಗೋ-ಕಾರ್ಟ್ ನಿಲ್ಲಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪುನೀತ್ ಕೌರ್‍ನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಪಂಚಕುಲಕ್ಕೆ ಕರೆಕೊಂಡು ಹೋಗುವಂತೆ ಹೇಳಿದ್ದಾರೆ.

    ಪಂಚಕುಲ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಚಿಕಿತ್ಸೆ ಫಲಕಾರಿಯಾದೇ ಪುನೀತ್ ಕೌರ್ ಮೃತಪಟ್ಟಿದ್ದಾರೆ. ನಂತರ ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಕುಟುಂದವರ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹರಿಯಾಣ ಪ್ರವಸೋದ್ಯಮ ಇಲಾಖೆ ಈ ಅಮ್ಯೂಸ್ ಮೆಂಟ್ ಪಾರ್ಕ್ ನನ್ನು 2013 ರಲ್ಲಿ 10 ವರ್ಷಗಳ ಕಾಲ ಖಾಸಗಿ ಗುತ್ತಿಗೆದಾರರಿಗೆ ನೀಡಿದೆ.