Tag: ಗೋವು ಕಳ್ಳತನ

  • ಕುತ್ತಿಗೆ ತಿರುವಿ, ಕೊಂಬನ್ನು ಎಳೆದಾಡಿ ಕಾರ್ಕಳ ರಸ್ತೆಯಲ್ಲಿ ಗೋವು ಕಳ್ಳತನ

    ಕುತ್ತಿಗೆ ತಿರುವಿ, ಕೊಂಬನ್ನು ಎಳೆದಾಡಿ ಕಾರ್ಕಳ ರಸ್ತೆಯಲ್ಲಿ ಗೋವು ಕಳ್ಳತನ

    ಉಡುಪಿ: ಜಿಲ್ಲೆಯಲ್ಲಿ ಸದಾ ಚಾಲ್ತಿಯಲ್ಲಿರುವ ಗೋವು ಕಳ್ಳತನ ಇಂದೂ ಮುಂದುವರೆದಿದೆ. ಕಾರ್ಕಳ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಗೋವು ಕಳ್ಳತನವಾಗುತ್ತಿದ್ದು ಯುಗಾದಿ ದಿನವೂ ದುಷ್ಟರ ಅಟ್ಟಹಾಸ ಮುಂದುವರಿದಿದೆ.

    ಸರ್ಕಾರಕ್ಕೆ ಕಾನೂನು-ಸುವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ರಾಜಾರೋಷವಾಗಿ ದನಕಳ್ಳತನವನ್ನು ದುಷ್ಕರ್ಮಿಗಳು ಉಡುಪಿ ಜಿಲ್ಲೆಯಲ್ಲಿ ಮುಂದುವರೆಸಿದ್ದಾರೆ. ಬೆಳಗ್ಗಿನ ಜಾವ 2.45ಕ್ಕೆ ದುಬಾರಿ ಕಾರಿನಲ್ಲಿ ಬಂದ ಗೋಕಳ್ಳರು ರಸ್ತೆ ಬದಿಯಲ್ಲಿದ್ದ ನಾಲ್ಕೈದು ದನಗಳನ್ನು ಕಳ್ಳತನ ಮಾಡಿದ್ದಾರೆ. ಈ ಪೈಕಿ ಒಂದು ದನ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಎಚ್‍ಡಿಕೆ ರಾಜಕೀಯ ಜೀವನವೇ ಒಂದು ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ: ಬಿಜೆಪಿ ಕಿಡಿ

    ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳಿಗೆ ಕದೀಮರು ಹಿಂಡಿ ಆಸೆ ತೋರಿಸಿದ್ದಾರೆ. ಬಕೆಟ್‍ನಲ್ಲಿ ಇದ್ದ ಹಿಂಡಿಯನ್ನು ಹಸು ತಿನ್ನುವ ಸಂದರ್ಭ ಅಮಾನುಷವಾಗಿ ಕುತ್ತಿಗೆಯನ್ನು ತಿರುವಿ, ಕೊಂಬು ಹಿಡಿದು ಎಳೆದಾಡಿ ಕಾರಿನ ಹಿಂಬದಿ ಸಿಟಿಗೆ ಹಸುವನ್ನು ತುಂಬಿಸಿದ್ದಾರೆ. ಕ್ಷಣಮಾತ್ರದಲ್ಲಿ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಉಡುಪಿ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಗೋ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ನಗರದಲ್ಲಿ ಎಗ್ಗಿಲ್ಲದೆ ಗೋವು ದರೋಡೆ ಪ್ರಕರಣಗಳು ನಡೆಯುತ್ತಿದ್ದರೂ, ಪೊಲೀಸರು ಈವರೆಗೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಬಹಳ ಸಂಶಯಕ್ಕೆ ಕಾರಣವಾಗಿದೆ.

    ಮಾರಕಾಸ್ತ್ರಗಳನ್ನು ತೋರಿಸಿ, ಐಷಾರಾಮಿ ಕಾರುಗಳನ್ನು ಬಳಸಿ, ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಿಗೆ ಗೋಕಳ್ಳರು ದಾಳಿ ಮಾಡುತ್ತಿದ್ದಾರೆ. ಹಟ್ಟಿಗೆ ನುಗ್ಗಿ ದನಗಳನ್ನು ಕದ್ದೊಯ್ಯುತ್ತಿದ್ದಾರೆ. ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಹಲವು ಕಡೆ ಆಹೋರಾತ್ರಿ ಪ್ರತಿಭಟನೆಗಳು ನಡೆದರೂ, ಗೋ ಕಳ್ಳತನ ಮಾಡುವವರ ಬಗ್ಗೆ ನಿಖರ ಮಾಹಿತಿಯಿದ್ದರೂ ಕಠಿಣ ಕ್ರಮ ಕೈಗೊಳ್ಳದಿರುವ ದರ ಬಗ್ಗೆ ಬಲವಾದ ಸಂಶಯವಿದೆ. ರಕ್ಷಕ ವರ್ಗ ಕೂಡ ಇದರಲ್ಲಿ ಶಾಮಿಲ್ ಆಗಿರುವ ಬಗ್ಗೆ ಗುಮಾನಿ ಇದೆ ಎಂದು ಕಾರ್ಕಳದ ಹಿಂದೂಜಾಗರಣ ವೇದಿಕೆಯ ಕಾರ್ಯಕರ್ತ ಉಮೇಶ್ ಬಂಗ್ಲೆಗುಡ್ಡೆ ಹೇಳಿದ್ದಾರೆ.

    ಸರ್ಕಾರ, ಮತ್ತು ಪೊಲೀಸರ ವೈಫಲ್ಯತೆಗೆ ಹಿಂದೂ ಜಾಗರಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ಕಾರಿನಲ್ಲಿ ಸಾಗಾಟವಾಗುತ್ತಿದ್ದ ದನ, ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಘಟನೆ ಬಗ್ಗೆ ಈವರೆಗೆ ಪ್ರಕರಣ ದಾಖಲಾಗಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯನ್ನು ರಾಜ್ಯ ಸರ್ಕಾರ ಜಾರಿಗೆ ತಂದರೂ ಅದನ್ನು ಅನುಷ್ಠಾನ ಮಾಡದೇ ಇರುವುದು ವಿಪರ್ಯಾಸ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

  • ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ

    ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ

    ಉಡುಪಿ: ಜಿಲ್ಲೆಯಾದ್ಯಂತ ಗೋವು ಕಳ್ಳತನ ವಿಪರೀತವಾಗಿ ಹೆಚ್ಚಿದೆ. ದುಷ್ಕರ್ಮಿಗಳು ತಲವಾರುಗಳನ್ನು ಜಳಪಿಸಿ ಹಟ್ಟಿಗೆ ನುಗ್ಗಿ ಹಸುಗಳನ್ನು ಕದ್ದೊಯ್ಯುತ್ತಿದ್ದಾರೆ. ಕಾನೂನು-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸರಿಗೆ ದನಕಳ್ಳರು ತಲೆನೋವಾಗಿ ಪರಿಣಮಿಸಿದ್ದಾರೆ.

    ರಾಜ್ಯದಲ್ಲಿ ಕಳೆದ ಜನವರಿ ತಿಂಗಳಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗಿತ್ತು. ಕಾನೂನು ಜಾರಿಯಾದ ನಂತರ ಕಸಾಯಿಖಾನೆಗಳಿಗೆ ಬೀಗ ಬಿದ್ದಿದೆ. ಹಸುವಿನ ಮಾಂಸ ಕಸಾಯಿಖಾನೆಯಲ್ಲಿ ಸಿಗದ ಕಾರಣ ಗೋಮಾಂಸ ಪ್ರಿಯರು ದನ ಕದಿಯುವ ಚಾಳಿಯನ್ನು ಶುರುಮಾಡಿದ್ದಾರೆ. ಬಿಡಾಡಿ ದನಗಳನ್ನು ಕಟ್ಟಿ ಹಾಕಿ ವಾಹನಗಳಲ್ಲಿ ತುಂಬಿ ಪರಾರಿಯಾಗುತ್ತಿದ್ದಾರೆ. ನಿರ್ಜನ ಪ್ರದೇಶದ ಕಾಡುಗಳಲ್ಲಿ ಹಸುವಿನ ಹತ್ಯೆ ಮಾಡಿ ಮಾಂಸ ಮಾಡುವ ಘಟನೆಗಳು ಉಡುಪಿಯಲ್ಲಿ ನಡೆದಿದೆ. ಇದನ್ನೂ ಓದಿ:  ಅಂಗನವಾಡಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಕ್ಸ್

    ಉಡುಪಿ ಜಿಲ್ಲೆಯ ಕುಂದಾಪುರ ಬೈಂದೂರು ಕಾರ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಗೋವು ಕಳ್ಳತನ ಆಗುತ್ತಿದೆ. ಬಿಡಾಡಿ ದನಗಳನ್ನು ಕದ್ದು ಮುಗಿಸಿರುವ ದುಷ್ಕರ್ಮಿಗಳು ಇದೀಗ ಹಟ್ಟಿಗೆ ನುಗ್ಗಿ ಹಸುಗಳನ್ನು ಕದ್ದೊಯ್ಯುತ್ತಿದ್ದಾರೆ. ಕಳೆದ ಭಾನುವಾರ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಎರಡು ಗೋವುಗಳನ್ನು ಮಾರುತಿ ಕಾರಿನಲ್ಲಿ ತುಂಬಿ ಕದಿಯಲು ಯತ್ನ ಮಾಡಿದ್ದರು. ಹಿಂದೂ ಜಾಗರಣ ವೇದಿಕೆ ಅಡ್ಡಗಟ್ಟಿ ಕಾರು ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಘಟನೆ ನಡೆದು ಮೂರು ದಿನವಾದರೂ ಹಸುಗಳನ್ನು ಕದ್ದ ಆರೋಪಿಗಳ ಬಂಧನವಾಗಿಲ್ಲ.

    ಅಜೆಕಾರು ಪೊಲೀಸರಿಗೆ ದೂರು ನೀಡಿದ್ದ ಹಿಂದೂ ಜಾಗರಣ ವೇದಿಕೆ, ಠಾಣೆಯ ಅಂಗಳದಲ್ಲಿ ಪ್ರತಿಭಟನಾರ್ಥವಾಗಿ ‘ಅಹೋರಾತ್ರಿ ಭಜನೆ’ ಮಾಡುತ್ತಿದೆ. ಆರೋಪಿಗಳು ಬಂಧನವಾಗದಿದ್ದರೆ ನಿರಂತರ ಭಜನಾ ಸಪ್ತಾಹವನ್ನು ಪೊಲೀಸ್ ಠಾಣೆ ಮುಂದೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಠಾಣಾ ಎಸ್‍ಐ ಇನ್ಸ್ಪೆಕ್ಟರ್ ಮನವೊಲಿಸಿದರೂ ಜಾಗರಣ ವೇದಿಕೆ ನಿರಂತರವಾಗಿ ಭಜನೆ ಮುಂದುವರೆಸಿದೆ. ಇದನ್ನೂ ಓದಿ:  ಅಮೆರಿಕದಲ್ಲಿ ಕೋವಿಡ್ 19, ಭಯೋತ್ಪಾದನೆ, ಹವಾಮಾನ ವೈಪರೀತ್ಯ ಬಗ್ಗೆ ಮಾತನಾಡುತ್ತೇನೆ – ಮೋದಿ

    ಹೇಗೆ ಕಳ್ಳತನ ನಡೆಯುತ್ತೆ?
    ಹಸುಗಳು ಇರುವ ಮನೆಗಳನ್ನು ಕಳ್ಳರಿಗೆ ಸ್ಥಳೀಯ ಯುವಕರು ಗೊತ್ತು ಮಾಡಿಕೊಡುತ್ತಾರೆ. ಗೋಕಳ್ಳರು ಅಲ್ಲಲ್ಲಿ ದಲ್ಲಾಳಿಗಳನ್ನು ನೇಮಕ ಮಾಡಿ, ಹಸುಗಳಿರುವ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡುತ್ತಾರೆ. ಯಾರು ಇಲ್ಲದ ಸಂದರ್ಭದಲ್ಲಿ ಹಟ್ಟಿ ಗಳಿಂದಲೇ ಗೋವುಗಳನ್ನು ಸಾಗಿಸುತ್ತಾರೆ. ಗೋ ಕಳ್ಳತನದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ಪ್ರತಿಭಟನೆಯ ರೀತಿಯೇ ಬೇರೆಯಾಗುತ್ತದೆ. ಇದಕ್ಕೆ ಆಸ್ಪದ ಕೊಡಬೇಡಿ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಗ್ರಿಲ್ ಹಾಕಿದ್ದರಿಂದಲೇ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ – ಅಪಾರ್ಟ್‍ಮೆಂಟ್ ನಿವಾಸಿ

  • ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

    ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

    ಮಂಗಳೂರು: ಗೋವುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಮನೆ ಮನೆಯ ಹೆಂಗಸರು ತಲವಾರುಗಳನ್ನು ಹಿಡಿದುಕೊಂಡು ಉತ್ತರ ನೀಡಲು ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮುಖಂಡ ಮುರಳಿಕೃಷ್ಣ ಹಸಂತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ವಾಮಂಜೂರಿನಲ್ಲಿ ನಡೆದ ಗೋವು ಕಳ್ಳತನ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೋವು ಕಳ್ಳತನ ಮಾಡುವ ಒಬ್ಬ ಮತಾಂಧನಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಮಹಿಳೆಯರನ್ನು ತಯಾರು ಮಾಡಲು ಹಿಂದೂ ಸಮಾಜ ಶ್ರಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಗೋವುಗಳ ರಕ್ತ ಭೂಮಿಗೆ ಬಿದ್ದರೆ, ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ಆಗುತ್ತದೆ. ಕೊನೆಗೆ ರಕ್ತಪಾತ ಆಯಿತು ಅಂತಾ ನಮ್ಮನ್ನು ದೂರಬೇಡಿ ಎಂದು ಹೇಳಿದ್ದಾರೆ.

    ಗೋವಿನ ರಕ್ಷಣೆಗಾಗಿ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಒಬ್ಬ ಹಿಂದೂ ವ್ಯಕ್ತಿಯ ಕೆನ್ನೆ ಹೊಡೆದು ಯಾರು ನಮ್ಮ ತಂಟೆಗೆ ಬರುತ್ತಾರೋ, ಅವರ ಹತ್ತು ಕೆನ್ನೆಗಳಿಗೆ ಹೊಡೆಯುವ ಮೂಲಕ ಪ್ರತ್ಯುತ್ತರ ನೀಡುವ ಸಂಕಲ್ಪವನ್ನು ಹಿಂದೂ ಸಮಾಜ ಮಾಡುತ್ತದೆ ಎಂದು ಹೇಳಿದ್ದಾರೆ.

  • ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕಾರವಾರ: ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ವಶಪಡಿಸಿಕೊಂಡ ಘಟನೆ ಕುಮಟಾದ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್‍ನಲ್ಲಿ ನಡೆದಿದೆ.

    ಆರೋಪಿಗಳು ತಪ್ಪಿಸಿಕೊಂಡಿದ್ದು, ಮಾರುತಿ ಇಗ್ನೀಸ್ ಕಾರನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡ ರಕ್ಷಿಸಿದೆ.

    ಶುಕ್ರವಾರ ಮುಂಜಾನೆ ರಿಜಿಸ್ಟರ್ ಆಗದ ಹೊಸ ಮಾರುತಿ ಇಗ್ನೀಸ್ ಕಾರಿನಲ್ಲಿ ಕಳ್ಳರು ಬಂದಿದ್ದರು. ಕುಮಟಾದ ಹರಕಾರ್ ನ ಹರಿಕಾಂತ್ರ ಕೇರಿಯಲ್ಲಿ ಹಸುಗಳನ್ನು ಕದ್ದು, ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ರಾತ್ರಿ ಪಾಳೆಯ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡವು ಇದನ್ನು ಗಮನಿಸಿ ಕಾರನ್ನು ಬೆನ್ನು ಹತ್ತಿದ್ದರು. ಆದರೆ ದಾರಿ ಮಧ್ಯದಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಅಲ್ಲಿಯೇ ಬಿಟ್ಟು ಕಳ್ಳರು ತಪ್ಪಿಸಿಕೊಂಡಿದ್ದಾರೆ.

    ಸದ್ಯ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಹಸುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.