Tag: ಗೋಲ್ಡನ್ ಬಾಬಾ

  • ಕೆ.ಜಿ ಗಟ್ಟಲೇ ಚಿನ್ನ ಧರಿಸ್ತಿದ್ದ ಗೋಲ್ಡನ್ ಬಾಬಾ ಸಾವು

    ಕೆ.ಜಿ ಗಟ್ಟಲೇ ಚಿನ್ನ ಧರಿಸ್ತಿದ್ದ ಗೋಲ್ಡನ್ ಬಾಬಾ ಸಾವು

    – 27 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್
    – ಬಿಎಂಡಬ್ಲ್ಯು, ಫಾರ್ಚೂನರ್, ಆಡಿ ಕಾರ್‌ಗಳ ಮಾಲೀಕ

    ನವದೆಹಲಿ: ಪೂರ್ವ ದೆಹಲಿಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದ ಸುಧೀರ್ ಕುಮಾರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ನಿಧನರಾಗಿದ್ದಾರೆ.

    ಬಾಬಾ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೋಲ್ಡನ್ ಬಾಬಾ ಮೃತಪಟ್ಟಿದ್ದಾರೆ.

    ಕೊನೆಯ ಬಾರಿಗೆ ಬಾಬಾ 20 ಕೆಜಿ ಚಿನ್ನದ ಆಭರಣಗಳನ್ನು ಧರಿಸಿ ಕನ್ವರ್ ಯಾತ್ರೆಗೆ ಹೋಗಿದ್ದರು. ಐಷಾರಾಮಿ ವಸ್ತುಗಳನ್ನು ಇಷ್ಟಪಡುವ ಗೋಲ್ಡನ್ ಬಾಬಾ 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಮತ್ತು ಬಿಎಂಡಬ್ಲ್ಯು, ಫಾರ್ಚೂನರ್ ಮತ್ತು ಆಡಿ ಕಾರುಗಳನ್ನು ಇಟ್ಟುಕೊಂಡಿದ್ದರು. ಬಾಬಾಗೆ ಐಷಾರಾಮಿ ಜೀವನದ ಮೇಲೆ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಉಂಗುರು, ಕುತ್ತಿಗೆಗೆ ಅನೇಕ ಸರ, ವಾಚ್, ಬಾಬಾ ಚಿನ್ನದ ಜಾಕೆಟ್ ಕೂಡ ಧರಿಸಿದ್ದರು.

    ಗೋಲ್ಡನ್ ಬಾಬಾ ಮೂಲತಃ ಘಾಜಿಯಾಬಾದ್‍ನವರಾಗಿದ್ದು, ಸನ್ಯಾಸತ್ವ ಸ್ವೀಕರಿಸುವ ಮೊದಲು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಸನ್ಯಾಸಿಯಾದ ಮೇಲೆ ಗಾಂಧಿ ನಗರದದಲ್ಲಿ ಬಾಬಾ ಆಶ್ರಮ ನಿರ್ಮಿಸಿದ್ದರು. ಬಾಬಾ ಕನ್ವರ್ ಯಾತ್ರೆಗೆ ಪ್ರಯಾಣಿಸುವಾಗಲೆಲ್ಲಾ ಅಪಾರ ಚಿನ್ನ ಧರಿಸಿಕೊಂಡು ಹೊರಗೆ ಹೋಗುತ್ತಿದ್ದರು. ಈ ವೇಳೆ ಸುಮಾರು 30 ಮಂದಿ ಅಂಗರಕ್ಷಕರು ಅವರ ರಕ್ಷಣೆಗೆಂದು ಹೋಗುತ್ತಿದ್ದರು.

    ಬಾಬಾ ಮೇಲೆ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ ಅಪಹರಣ, ಬೆದರಿಕೆ, ಸುಲಿಗೆ, ಕೊಲೆ ಮುಂತಾದ ಹಲವಾರು ಪ್ರಕರಣಗಳು ದಾಖಲಾಗಿವೆ. ಬಾಬಾ ದೇಹದ ಮೇಲೆ ಯಾವಾಗಲೂ ಅಪಾರ ಚಿನ್ನದ ಆಭರಣಗಳು ಇರುತ್ತಿದ್ದವು.

    ಬಾಬಾ ಕನ್ವಾರ ಯಾತ್ರೆಗಾಗಿ ಪ್ರತಿವರ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಅಷ್ಟು ಹಣ ಎಲ್ಲಿಂದ ಬರುತ್ತದೆ ಎಂದು ಯಾರಾದರೂ ಬಾಬಾರನ್ನು ಕೇಳಿದಾಗ, ಅವರಿಗೆ ಭೋಲೆನಾಥ್ ಅವರ ಅನುಗ್ರಹ ಎಂದು ಉತ್ತರ ಕೊಡುತ್ತಿದ್ದರಂತೆ. ಘಾಜಿಯಾಬಾದ್‍ನ ಇಂದಿರಾಪುರಂನಲ್ಲಿ ಬಾಬಾಗೆ ಮನೆ ಇದೆ.

  • 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    ಹರಿದ್ವಾರ: ಉತ್ತರಾಖಂಡ ಪ್ರಸಿದ್ಧ ಕನ್ವರ ಯಾತ್ರೆ ಆರಂಭವಾಗಿದ್ದು, ಪ್ರತಿ ಬಾರಿ ಯಾತ್ರೆಯಲ್ಲಿ ಕೇಂದ್ರ ಬಿಂದುವಾಗುವ ಗೋಲ್ಡನ್ ಬಾಬಾ ಈ ಬಾರಿಯೂ ತಾವು ಧರಿಸುವ ಚಿನ್ನಾಭರಣದಿಂದ ಎಲ್ಲರ ಗಮನ ಸೆಳೆದಿದ್ದಾರೆ.

    56 ವರ್ಷದ ಗೋಲ್ಡನ್ ಬಾಬಾ ಖ್ಯಾತಿಯ ಪುರಿ ಮಹಾರಾಜ್ ಅವರು ಈ ಬಾರಿ ಸುಮಾರು 6 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನಾಭರಣವನ್ನು ಧರಿಸಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಯಾತ್ರೆಯ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದು, ಜನರು ನಾನು ತೆರಳುವ ಎಲ್ಲಾ ಸ್ಥಳಗಳಿಗೆ ಆಗಮಿಸುತ್ತಾರೆ. ಯಾತ್ರೆ ವೇಳೆ ಪೊಲೀಸರು ನನಗೆ ರಕ್ಷಣೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಕಾರು ಹಾಗೂ ಚಿನ್ನದ ಮೇಲಿನ ಆಕರ್ಷಣೆ ನಾನು ಮೃತ ಪಡುವವರೆಗೂ ಹೋಗುವುದಿಲ್ಲ. ಅಲ್ಲದೇ ನಾನು 25 ಬಾರಿ ಕನ್ವರ್ ಯಾತ್ರೆ ಮಾಡುತ್ತಿದ್ದು, ಇದು ಕೊನೆಯ ಯಾತ್ರೆಯಾಗಿದೆ. ಈ ಯಾತ್ರೆಯ ಅವಧಿಯಲ್ಲಿ ಮಾತ್ರ ಚಿನ್ನಾಭರಣಗಳನ್ನು ಧರಿಸುತ್ತೇನೆ. ಹೆಚ್ಚಿನ ತೂಕದ ಅಭರಣ ಧರಿಸುವುದರಿಂದ ನನ್ನ ದೇಹದ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದ್ದಾರೆ.

    ಅಂದಹಾಗೇ ಪುರಿ ಮಹಾರಾಜ್ ಬಾಬಾ ಆಗುವ ಮುನ್ನ ದೆಹಲಿಯಲ್ಲಿ ಉದ್ಯಮಿಯಾಗಿದ್ದು, ಬಳಿಕ ಬಾಬಾ ಆಗಿ ಪರಿವರ್ತನೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಪುರಿ ಮಹಾರಾಜ್ 25 ಬಾರಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಅವರೊಂದಿಗೆ ಭಾಗವಹಿಸುವ ಇತರೇ ಮಂದಿಗೆ 1.25 ಕೋಟಿ ರೂ. ಖರ್ಚು ಮಾಡಿದ್ದಾರೆ. ಅವರೊಂದಿಗೆ ಬರುವ 250 ರಿಂದ 300 ಮಂದಿ ಯಾತ್ರಿಗಳ ಊಟ, ವಸತಿ, ಆಹಾರ, ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

    ಕೇವಲ ಚಿನ್ನಾಭರಣಗಳನ್ನ ಮಾತ್ರ ಧರಿಸದೇ ಬಾಬಾ 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಸಹ ಹೊಂದಿದ್ದು, ಸ್ವತಃ ಬಿಎಂಡಬ್ಲೂ, 3 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ಯಾತ್ರೆಯ ವೇಳೆ ಜಾಗ್ವಾರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಸಹ ಪಡೆಯುತ್ತಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.