ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಮುಸ್ಲಿಂ ಮುಖಂಡ ಮೃತಪಟ್ಟವರ ಬೆನ್ನಿಗೆ ನಿಂತಿದ್ದಾರೆ.
ಹೌದು. ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಗೋಲಿಬಾರ್ ನಲ್ಲಿ ಸತ್ತವರಿಗೆ ಎರಡು ಲಕ್ಷ ಘೋಷಣೆ ಮಾಡಿದ್ದಾರೆ. ಈ ಕುರಿತು ಫೇಸ್ ಬುಕ್‍ನಲ್ಲಿ ಬರೆದುಕೊಂಡಿರುವ ಇಮ್ರಾನ್ ಪಾಷಾ, ಮೃತರಿಗೆ 2 ಲಕ್ಷ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ ಶಾಸಕ ಜಮೀರ್ ಗೋಲಿಬಾರ್ ನಲ್ಲಿ ಸತ್ತವರಿಗೆ 5 ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪಾಲಿಕೆ ಸದಸ್ಯ ಎರಡು ಲಕ್ಷ ಘೋಷಣೆ ಮಾಡಿದ್ದಾರೆ.
ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಕೊಡುವುದಾಗಿ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದರು. ಆದರೆ ಅನಗತ್ಯ ಗಲಭೆ ಮಾಡಿದವರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಬೇರೆಯದ್ದೇ ಸಂದೇಶ ರವಾನೆ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬುದ್ಧಿ ಹೇಳಿದ್ದಾರೆ ಎನ್ನಲಾಗಿತ್ತು. ಇದನ್ನೂ ಓದಿ: ಜಮೀರ್ ಇನ್ ಟ್ರಬಲ್ – ಪಕ್ಷದ ನಾಯಕರಿಂದ ಎಚ್ಚರಿಕೆ
ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಾದರೆ ಕೊಡಿ. ಆದರೆ ಈ ವಿಷಯ ಮಾತ್ರ ಬಹಿರಂಗ ಆಗಬಾರದು ಎಂದು ಕಾಂಗ್ರೆಸ್ ನಾಯಕರು ಎಂದಿದ್ದಾರೆ. ಎಲ್ಲಿಯೂ ಸಹ ಪರಿಹಾರ ಕೊಟ್ಟೆ ಅಂತ ಹೇಳಬಾರದು ಎಂದು ಬಹಿರಂಗವಾಗಿ ಹೇಳುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು.
ಚಿಕ್ಕಮಗಳೂರು: ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಅವರೇ ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ರೆ ನಟರು ಯಾರೆಂದು ಗೊತ್ತೇ ಗೊತ್ತಿರುತ್ತೆ ಅದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಮೀರ್ ಅಹಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಮೀರ್ ಅಹಮದ್ ಗೋಲಿಬಾರ್ ನಲ್ಲಿ ಮೃತರಾದವರ ಮನೆಗೆ ಹೋಗಿ ಚೆಕ್ ನೀಡಿ ಬಂದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು ಎಂದು ಕಿಡಿಕಾರಿದ್ದಾರೆ. ಈಗ ಜಮೀರ್ ಅಹಮದ್ ಎಲ್ಲ ಜಿಪಿಎ ತೆಗೆದುಕೊಂಡಿರುವುದರಿಂದ ಏನ್ ನಷ್ಟ ಆಗಿದೆ ಅದನ್ನು ಜಮೀರ್ ಅಹಮದ್‍ರಿಂದ ವಸೂಲಿ ಕ್ರಮ ತೆಗೆದುಕೊಳ್ಳೋಣ ಎಂದರು.
ನೀವು ಸಹಾಯ ಮಾಡುವುದು ಮಾನವೀಯ ಧರ್ಮ ಇರಬಹುದು. ಯಾವ ಸಂದರ್ಭದಲ್ಲಿ ಸಹಾಯ ಮಾಡ್ತಿದ್ದೀರಾ, ಯಾರಿಗೆ ಸಹಾಯ ಮಾಡ್ತಿದ್ದೀರಾ ಎಂಬುದು ಮುಖ್ಯವಾಗುತ್ತೆ. ಅದು ಕೊಡುವ ಮೆಸೇಜ್ ಮಾನವೀಯ ಮೆಸೇಜ್ ಕೊಡುವುದಿಲ್ಲ. ಯಾರು ಏನೇ ಮಾಡಿದರು, ನಾನು ನಿಮ್ಮ ಜೊತೆ ಇದ್ದೀನಿ ಎಂಬ ಮೇಸೆಜ್ ಕೊಡುತ್ತೆ. ಇದರ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದರು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರು ಜೈಲಿನಿಂದ ಬಂದರೆ ಅವರಿಗೆ ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಅವರಿಗೆ ಪ್ರಚೋದಿಸುವ ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ ಎಂದರು.
ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರೋರು. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಆ ವಾಹನ ಸುಟ್ಟವರು ಯಾರು ಹೇಳಲಿ ಹಾಗಾದರೆ. ಇವರು ಅಮಾಯಕರಾದರೆ ಆ ಕಿರಾತಕರು ಯಾರು. ಜಮೀರ್ ಅಹಮದ್ ಖಾನ್‍ಗೆ ಚೆನ್ನಾಗಿ ಗೊತ್ತಿರುತ್ತೆ ಎಂದಿದ್ದಾರೆ. ನಷ್ಟ ವಸೂಲಿ ಕೆಲಸ ಆಗಲೇಬೇಕು. ಈಗಿನ ಕಾಂಗ್ರೆಸ್ ಒಳ ರಾಜಕಾರಣ ನೋಡಿದರೆ ಅವರು ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದರು.
ಬೆಂಗಳೂರು ಗಲಭೆಯನ್ನು ಲೀಡ್ ಮಾಡಿರೋದು ಎಸ್.ಡಿ.ಪಿ.ಐ. ಅದರಲ್ಲಿ ನಟನೆ ಮಾಡಿ 300ಕ್ಕೂ ಹೆಚ್ಚು ವಾಹನ ಸುಟ್ಟಿರೋರು ಈ ಜನ. ಅವರಿಗೆ ಗೊತ್ತಿರುತ್ತೆ ಸ್ಪಷ್ಟಪಡಿಸಲಿ ಎಂದಿದ್ದಾರೆ. ನಾನು ಆರಂಭದಿಂದ ಹೇಳಿದ್ದೇನೆ. ಕಾಂಗ್ರೆಸ್ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟೋ ಕೆಲಸ ಮಾಡುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವುದು ಅದನ್ನೇ ಎಂದು ಕಾಂಗ್ರೆಸ್ ಹಾಗೂ ಜಮೀರ್ ಅಹಮದ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು: ಇಂದಿನ ವಿಧಾನಸಭೆ ಕಲಾಪದಲ್ಲಿ ನಿರೀಕ್ಷೆಯಂತೆಯೇ ಸಿಎಎ ವಿಚಾರ ಪ್ರತಿಧ್ವನಿಸಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದರು. ಮಂಗಳೂರು ಗೋಲಿಬಾರ್ ಪ್ರಕರಣ, ಬೀದರ್‍ನ ಶಾಹೀನ್ ಪ್ರಕರಣ, ಮೈಸೂರಿನ ನಳಿನಿ ಪ್ರಕರಣ ಪ್ರಸ್ತಾಪಿಸಿದರು. ನೌಶೀನ್, ಜಲೀಲ್‍ನನ್ನು ಕೊಂದಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.
ಸಿಎಎ ವಿರೋಧಿಸಿದವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ, ಎಫ್‍ಐಆರ್ ದಾಖಲಿಸಲಾಗುತ್ತದೆ. ಪೊಲೀಸರು ಸರ್ಕಾರದ ಕೈಗೊಂಬೆ ಆಗಿದ್ದಾರೆ. ಸಿಎಎ ಸಂವಿಧಾನ ವಿರೋಧಿಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ವಿರುದ್ಧ ನಡೆದುಕೊಂಡವರು ನೀವು ಎಂದು ಗೃಹ ಸಚಿವ ಬೊಮ್ಮಾಯಿ ತಿರುಗೇಟು ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಅಂತ ಆರೋಪಿಸಿದರು.
ಮೇಲ್ಮನೆಯಲ್ಲೂ ಮಂಗಳೂರು ಗೋಲಿಬಾರ್ ಸಂಬಂಧ ಗದ್ದಲ ನಡೆಯಿತು. ಗೋಲಿಬಾರ್ ನಲ್ಲಿ ಸತ್ತವರ ಮನೆಗೆ ಯಾಕೆ ಹೋಗಿಲ್ಲ ಎಂಬ ಐವಾನ್ ಡಿಸೋಜಾ ಪ್ರಶ್ನೆಗೆ ಉಗ್ರರ ಮನೆಗೆ ಹೋಗುವುಕ್ಕೆ ಆಗುತ್ತಾ ಅಂತ ರವಿಕುಮಾರ್ ಕೇಳಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ಹೊರಹಾಕಿದರು. ಕ್ಷಮೆಗೆ ಪಟ್ಟು ಹಿಡಿದರು. ಇದಕ್ಕೆ ಮಣಿದ ರವಿಕುಮಾರ್, ನಾನು ಉಗ್ರ ಅಂದಿಲ್ಲ ಆದ್ರೂ ಕ್ಷಮೆ ಕೇಳ್ತೀನಿ ಎಂದರು.
ತುಕ್ಡೇ ಗ್ಯಾಂಗ್:
ಕಲಾಪದಲ್ಲಿ ಆಡಳಿತ-ವಿಪಕ್ಷಗಳ ನಡುವೆ ತುಕ್ಡೇ ತುಕ್ಡೇ ಫೈಟ್ ಸಖತ್ ಜೋರಾಗಿತ್ತು. ಸಿದ್ದರಾಮಯ್ಯ ಮಾತನಾಡುತ್ತಾ, ಭಾರತ ಮಾತೆಯನ್ನು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿಲ್ಲ. ದೇಶದ 135 ಕೋಟಿ ಜನ ಭಾರತ ಮಾತೆಯ ಮಕ್ಕಳು ಎಂದರು. ಇದಕ್ಕೆ ಕೂಡ್ಲೇ ತಿರುಗೇಟು ನೀಡಿದ ಸಚಿವ ಬಸವರಾಜ ಬೊಮ್ಮಾಯಿ, ನೀವು ತುಕ್ಡೇ ಗ್ಯಾಂಗ್ ಮಾಲೀಕರು ಎಂದು ಜರೆದರು. ಇದರಿಂದ ಸಿಟ್ಟಾದ ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ, ನಾವ್ ತುಕ್ಡೇ ಗ್ಯಾಂಗ್ ಆಗಿದ್ದರೆ ನಮ್ಮನ್ನು ಬಂಧಿಸಿ ಅಂತ ಸವಾಲು ಹಾಕಿದರು. ಆಡಳಿತ ಮಾಡಿ ಅಂದ್ರೆ ಪಾಕಿಸ್ತಾನ ಅಂತೀರಿ. ನಿಮ್ಮ ಪ್ರಧಾನಿ ಪಾಕಿಸ್ತಾನದಲ್ಲಿ ಪುಗ್ಸಟ್ಟೆ ಬಿರಿಯಾನಿ ತಿಂದು ಬಂದವರು ಅಂತ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಸಹ ಸಿಟ್ಟಾದರು. ಮಸೂದ್ ಅಜರ್‍ನನ್ನು ಕಂದಹಾರ್‍ಗೆ ಬಿಟ್ಟು ಬಂದವರು ನೀವು. ನಿಮ್ಮಿಂದ ನಾವು ದೇಶ ಪ್ರೇಮದ ಪಾಠ ಕಲಿಯಬೇಕಾಗಿಲ್ಲ ಅಂತ ತಿವಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸ್ಪೀಕರ್ ಕಾಗೇರಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸದನದಲ್ಲಿ ಹುಲಿಯಾ-ರಾಜಾಹುಲಿ ನಡುವಿನ ವಾಕ್ಸಮರ ಜೋರಾಗಿತ್ತು. ಕಾನೂನು ಸುವ್ಯವಸ್ಥೆ ಕುರಿತ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಈಗಲೇ ಅವಕಾಶ ಮಾಡಿಕೊಡಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ನಾಳೆ ಮಧ್ಯಾಹ್ಮ 3 ಗಂಟೆಗೆ ನಿಯಮ 69ರ ಅಡಿ ಚರ್ಚೆ ನಡೆಸಲು ಸ್ಪೀಕರ್ ಅವಕಾಶ ನೀಡುವುದಾಗಿ ತಿಳಿಸಿದರು. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪದೇ ಈ ರೀತಿಯಾದರೆ ನಾವು ಸದನಕ್ಕೆ ಯಾಕೆ ಬರ್ಬೇಕು. ನಿಮಗೆ ಇಷ್ಟ ಬಂದ ಹಾಗೆ ಮಾಡಿಕೊಳ್ಳಿ. ನಮ್ಮನ್ನು ಕರೆಯಲೇಬೇಡಿ ಅಂತ ಕೋಪದಿಂದ ನುಡಿದರು.
ಈ ವೇಳೆ ಸಿಎಂ ಯಡಿಯೂರಪ್ಪ ಫುಲ್ ಗರಂ ಆದರು. ಸ್ಪೀಕರ್ ಕಾಗೇರಿ ಅವರಿಗೆ ನೀವು ಹೀಗೆ ಆದೇಶ ನೀಡಿ ಎಂದು ಸೂಚಿಸವಂತಿಲ್ಲ ಎಂದರು. ಇದೇ ವಿಚಾರವಾಗಿ ಅರ್ಧ ಗಂಟೆಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಆದರೆ ಚರ್ಚೆ ನಡೆಸಲು ಸ್ಪೀಕರ್ ಅವಕಾಶ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದರು. ಮಧ್ಯಾಹ್ನದ ಬಳಿಕ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ನಡೆಯಿತು. ಬಳಿಕ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಪಾಲ್ಗೊಂಡರು.
ಬಳ್ಳಾರಿಯ ಮರಿಯಮ್ಮನ ಬಳಿ ನಡೆದ ಅಪಘಾತ ಪ್ರಕರಣ ಮೇಲ್ಮನೆಯಲ್ಲಿ ಸದ್ದು ಮಾಡಿದೆ. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್, ನಲ್ಪಾಡ್ ಕಾರು ಅಪಘಾತ ಪ್ರಕರಣದಲ್ಲಿ ಯಾವುದೇ ಜೀವ ಹಾನಿ ಆಗದಿದ್ರೂ, ಅದನ್ನು ವೈಭವೀಕರಣ ಮಾಡಲಾಯ್ತು. ಆದ್ರೆ, ಮಂತ್ರಿ ಮಗನೊಬ್ಬ ಅಪಘಾತ ಮಾಡಿ 2 ಸಾವುಗಳಿಗೆ ಕಾರಣನಾಗಿದ್ದಾನೆ. ಆದ್ರೂ ಮಂತ್ರಿಮಗನ ವಿರುದ್ಧ ಕೇಸ್ ದಾಖಲಿಸಿಲ್ಲ. ಇದು ದಪ್ಪ ಚರ್ಮದ ಸರ್ಕಾರ. ಇಂತಹ ಭಂಡ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರು: ಡಿಸೆಂಬರ್19 ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣ ತನಿಖೆ ವೇಗ ಪಡೆದಿದೆ. ಮ್ಯಾಜಿಸ್ಟ್ರೇಟ್ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಈವರೆಗೆ 201 ಮಂದಿಯ ಸಾಕ್ಷ್ಯ ನುಡಿದಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯಾಗುತ್ತಿದ್ದು, ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಒಟ್ಟು ಎರಡು ಬಾರಿ ಸಾರ್ವಜನಿಕರಿಗೆ ಸಾಕ್ಷ್ಯ ನುಡಿಯಲು ಅವಕಾಶ ನೀಡಿದ್ದು, ಇಂದು ಕೂಡಾ 75 ಕ್ಕೂ ಹೆಚ್ಚು ಮಂದಿ ತನಿಖಾಧಿಕಾರಿಗಳ ಮುಂದೆ ಸಾಕ್ಷ್ಯ ನುಡಿದಿದ್ದಾರೆ. ಫೆಬ್ರವರಿ 13 ರಂದು ಮತ್ತೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಸಾಕ್ಷ್ಯ ಜೊತೆಗೆ ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ನೀಡುವಂತೆ ಮ್ಯಾಜಿಸ್ಟ್ರೀಯಲ್ ಜಗದೀಶ್ ಮನವಿ ಮಾಡಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿಎಸ್ ಹರ್ಷರವರಿಗೂ ನೋಟಿಸ್ ನೀಡಲಾಗಿದ್ದು, ಪೊಲೀಸರ ಬಳಿ ಇರುವ ವಿಡಿಯೋವನ್ನೂ ಫೆಬ್ರವರಿ 13 ರಂದು ಒಪ್ಪಿಸುವಂತೆ ಸೂಚನೆ ನೀಡಲಾಗಿದೆ.
ಈ ನಡುವೆ ತನಿಖೆಯಲ್ಲಿ ಪೊಲೀಸ್ ಹಸ್ತಕ್ಷೇಪವಾಗುತ್ತಿದೆ ಎಂದು ಸಾಕ್ಷ್ಯ ನುಡಿಯಲು ಬಂದವರು ಆರೋಪಿಸಿದ್ದಾರೆ. ಈವರೆಗೆ ಒಟ್ಟು 30 ಮಂದಿಯನ್ನು ಬಂಧನ ಮಾಡಲಾಗಿದ್ದು, ಜಾಮೀನು ಸಿಗದಂತೆ ಪೊಲೀಸರು ವರ್ತಿಸುತ್ತಿರೋದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಾಪರಾಧಿಗಳಿಗೆ ಪ್ರಕರಣದಲ್ಲಿ ಶಿಕ್ಷೆಯಾಗುತ್ತಿದ್ದು, ಕೇಸ್ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.
ಈ ಮಧ್ಯೆ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ. ಗೋಲಿಬಾರ್ ಜಸ್ಟಿಸ್ ಫಾರಂ, ಗೋಲಿಬಾರ್ ನಡೆಸಿದ ತಪ್ಪಿತಸ್ಥ ಪೊಲೀಸರ ಮೇಲೆ ಕೊಲೆ ಪ್ರಕರಣ ಮತ್ತು ಲಾಠಿ ಚಾರ್ಜ್ ನಡೆಸಿದ ಪೊಲೀಸರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ. ಇದಲ್ಲದೆ ಗೋಲಿಬಾರ್ ನಲ್ಲಿ ಸಾವಿಗೀಡಾದ ಅಬ್ದುಲ್ ಜಲೀಲ್ ಮತ್ತು ನೌಸೀನ್ ಮೇಲಿನ ಪ್ರಕರಣ ಕೈಬಿಡಬೇಕು, ಜಲೀಲ್ ಮತ್ತು ನೌಸೀಬ್ ಕುಟುಂಬಕ್ಕೆ ತಲಾ 25 ಲಕ್ಷ ಮತ್ತು ಗಂಭೀರ ಗಾಯಗೊಂಡವರಿಗೆ 15 ಲಕ್ಷ ಪರಿಹಾರ ನೀಡಬೇಕೆಂದು ವೇದಿಕೆ ಆಗ್ರಹಿಸಿದೆ. ತನಿಖೆಯ ನೆಪದಲ್ಲಿ, ಘಟನಾ ಸ್ಥಳದಲ್ಲಿದ್ದ ಕೇರಳ ನಾಗರಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದ್ದು, ಪೊಲೀಸರು ತಕ್ಷಣ ಈ ಕ್ರಮವನ್ನು ನಿಲ್ಲಿಸಬೇಕೆಂದು ಗೋಲಿಬಾರ್ ಜಸ್ಟಿಸ್ ಫಾರಂ ಒತ್ತಾಯಿಸಿದೆ.
ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಪ್ರಕರಣ ಮ್ಯಾಜಿಸ್ಟ್ರೇಟ್ ತನಿಖೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಪೊಲೀಸರ ಮೇಲೆ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿದ್ದು, ಕಾನೂನು ಹೋರಾಟದಲ್ಲಿ ತಪ್ಪು ಒಪ್ಪುಗಳು ನಿರ್ಣಯವಾಗಲಿದೆ.
ಮಂಗಳೂರು: ಮಂಗಳೂರಿನ ಗಲಭೆ, ಗೋಲಿಬಾರ್ ಘಟನೆಗೂ ಕೇರಳಕ್ಕೂ ಡೈರೆಕ್ಟ್ ಲಿಂಕ್ ಇದೆಯಾ ಅನ್ನೋ ಅನುಮಾನ ಕೇಳಿಬಂದಿತ್ತು. ಕೆಲವರಂತೂ, ಈ ಘಟನೆ ಹಿಂದೆ ಕೇರಳದ ಜಿಹಾದಿಗಳು ಭಾಗಿಯಾಗಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯ ಅಂತಲೇ ಆರೋಪಿಸಿದ್ದರು.
ಇದೀಗ ಹಿಂಸಾಚಾರ ಘಟನೆಯ ಬೆನ್ನು ಬಿದ್ದಿರುವ ಪೊಲೀಸರು ಕೃತ್ಯದಲ್ಲಿ ಕೇರಳದ ಲಿಂಕ್ ಇರುವುದನ್ನು ಪತ್ತೆ ಮಾಡಲು ಹೊಸ ಉಪಾಯ ಹೂಡಿದ್ದಾರೆ. ಡಿಸೆಂಬರ್ 19ರಂದು ನಡೆದ ಮಂಗಳೂರಿನ ಹಿಂಸಾಚಾರ ಮತ್ತು ಗೋಲಿಬಾರ್ ಘಟನೆಯಾಗಿ ಒಂದು ತಿಂಗಳು ಕಳೆದಿದೆ. ಹಿಂಸಾಚಾರ ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಪೊಲೀಸರು ವಿಡಿಯೋ ಫೂಟೇಜ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ಆದರೆ ವಿಡಿಯೋದಲ್ಲಿ ಸಾವಿರಾರು ಮಂದಿ ಇರುವುದರಿಂದ ಅವರನ್ನು ಪತ್ತೆ ಮಾಡುವುದು ಸುಲಭದ ಕಾರ್ಯವಲ್ಲ. ಹೀಗಾಗಿ ಅಂದು ಘಟನೆ ನಡೆದ ಬಂದರು ಠಾಣೆ ಪರಿಸರಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಮಂದಿಯನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ. ಮೊಬೈಲ್ ಟವರ್ ಲೊಕೇಶನ್ ಆಧರಿಸಿ, ಹೊರಜಿಲ್ಲೆ ಮತ್ತು ಕೇರಳ ಮೂಲದ ನಿವಾಸಿಗಳನ್ನು ಪಟ್ಟಿ ಮಾಡಿದ್ದು ಸಾವಿರಕ್ಕೂ ಹೆಚ್ಚು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಹಿಂಸಾಚಾರ ಘಟನೆಯ ಬಳಿಕ ಬಂದರು ಠಾಣೆಯಲ್ಲಿ ದೊಂಬಿ, ಪೊಲೀಸರ ಕೊಲೆಯತ್ನ, ಗಲಭೆ, ಕಲ್ಲು ತೂರಾಟ ಸೇರಿ ಗಂಭೀರ ಅಪರಾಧ ಕೃತ್ಯಗಳ ಬಗ್ಗೆ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು. ಇದೇ ಆಧಾರದಲ್ಲಿ ಆವತ್ತು ಬಂದರು ಠಾಣೆ ವ್ಯಾಪ್ತಿಗೆ ಆಗಮಿಸಿದ್ದ ಪ್ರಮುಖವಾಗಿ ಕೇರಳದ ನಿವಾಸಿಗಳಿಗೆ ಈಗ ನೋಟಿಸ್ ಜಾರಿಯಾಗಿದೆ. ನಿಗದಿಗೊಳಿಸಿದ ದಿನಾಂಕಗಳಂದು ನೋಟಿಸ್ ಪಡೆದವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಿದೆ. ಪೊಲೀಸರ ಈ ಕ್ರಮದಿಂದಾಗಿ ಸಾವಿರಾರು ಮಂದಿ ಈಗ ಪೊಲೀಸರ ತನಿಖೆ ಎದುರಿಸುವಂತಾಗಿದೆ.
ಮಂಗಳೂರು ಗಲಭೆಯಲ್ಲಿ ಆಗಿದ್ದೇನು
ಡಿ.19ರಂದು 144 ಸೆಕ್ಷನ್ ಉಲ್ಲಂಘಿಸಿ, ಪ್ರತಿಭಟನೆಗೆ ಯತ್ನಿಸಲಾಗಿತ್ತು. ಮುಸ್ಲಿಂ ಯುವಕರ ಗುಂಪು ಸೇರಿ ಪೊಲೀಸರ ಸೂಚನೆ ಲೆಕ್ಕಿಸದೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಬಳಿಕ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಟಿಯರ್ ಗ್ಯಾಸ್ ಮೂಲಕ ಚದುರಿಸಲು ಯತ್ನಿಸಿದ್ದರು. ಘಟನೆ ಬಳಿಕ ಸಿಸಿಟಿವಿ ಮತ್ತು ಮೊಬೈಲ್, ಕ್ಯಾಮೆರಾ ವಿಡಿಯೋಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ಸಂಬಂಧಿಸಿ ಈವರೆಗೆ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಕೃತ್ಯದಲ್ಲಿ ಕೇರಳದ ನಿವಾಸಿಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಈವರೆಗೆ ಬಂಧಿತರಲ್ಲಿ ಕೇರಳದ ಮಂದಿ ಯಾರೂ ಇಲ್ಲ. ಹೀಗಾಗಿ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಬಿಲ ತೋಡುವ ಕೆಲಸ ಮಾಡಿದ್ದಾರೆ. ಪೊಲೀಸರ ಈ ಕ್ರಮದಿಂದಾಗಿ ಅಮಾಯಕರಿಗೂ ನೋಟಿಸ್ ಜಾರಿಯಾಗುವಂತಾಗಿದ್ದು ವಿನಃ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ಬಡ ಮಹಿಳೆಯರಿಗೂ ನೋಟಿಸ್ ಜಾರಿಯಾಗಿದ್ದು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗಂಭೀರ ಅಪರಾಧ ಆಗಿರುವ ಹಿನ್ನೆಲೆಯಲ್ಲಿ ನೋಟಿಸ್ ಪಡೆದವರು ತಾವು ಆಗಮಿಸಿದ್ದ ಬಗ್ಗೆ ಸೂಕ್ತ ಕಾರಣಗಳನ್ನು ಪೊಲೀಸರಿಗೆ ನೀಡಬೇಕಾಗಿದೆ. ವಿಚಾರಣೆ ವೇಳೆ ಸಂಶಯಾಸ್ಪದ ಕಂಡುಬಂದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರ, ಉಪ್ಪಳ, ಕುಂಬ್ಳೆ ಪರಿಸರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಮಂಗಳೂರಿನ ಹಿಂಸಾಚಾರ ಘಟನೆಯ ನೈಜ ಆರೋಪಿಗಳು ತಲೆಮರೆಸಿಕೊಂಡಿದ್ದರೆ, ಈಗ ಅಮಾಯಕರು ತಾವು ಮಾಡದ ತಪ್ಪಿಗೆ ಪರಿತಪಿಸುವಂತಾಗಿದೆ.
ಮಂಗಳೂರು: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯ ವೇದಿಕೆಗೆ ಗೊಲೀಬಾರ್ ನಲ್ಲಿ ಮೃತಪಟ್ಟ ಇಬ್ಬರ ಹೆಸರು ಹಾಕಿರೋದು ಎಲ್ಲರನ್ನು ಸೆಳೆಯಿತು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಸಿ.ಎ.ಎ, ಎನ್.ಆರ್.ಸಿ ವಿರೋಧಿಸಿ ಮಂಗಳೂರಿನ ಅಡ್ಯಾರ್ ಮೈದಾನದಲ್ಲಿನಡೆದ ಬೃಹತ್ ಪ್ರತಿಭಟನೆ ಭಾರೀ ಯಶಸ್ಸು ಕಂಡಿದೆ. ಈ ಬೃಹತ್ ಸಮಾವೇಶಕ್ಕಾಗಿ ಹಾಕಲಾದ ವೇದಿಕೆಗೆ ಶಹೀದ್ ಅಬ್ದುಲ್, ಜಲೀಲ್ ಕಂದಕ್ ಹಾಗೂ ನೌಶೀನ್ ಕುದ್ರೋಳಿಯ ಹೆಸರು ಹಾಕಿರೋದು ಬಂದ ಪ್ರತಿಭಟನಾಕಾರರನ್ನು ಸೆಳೆಯಿತು.
ಡಿಸೆಂಬರ್ 19 ರಂದು ನಡೆದ ಪ್ರತಿಭಟನೆಯ ವೇಳೆ ಲಾಠಿಚಾರ್ಚ್ ನಡೆದು ಬಳಿಕ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಗೊಲೀಬಾರ್ ಗೆ ಬಲಿಯಾಗಿದ್ದರು. ಈ ಘಟನೆಯ ಬಳಿಕ ನಡೆದ ಮೊದಲ ಬೃಹತ್ ಸಮಾವೇಶ. ಹೀಗಾಗಿ ಈ ಪ್ರತಿಭಟನೆಯ ವೇಳೆ ಗೊಲೀಬಾರ್ ಗೆ ಮೃತಪಟ್ಟ ಒಬ್ಬರ ಹೆಸರನ್ನು ಇಟ್ಟಿರೋದು ಮಾತ್ರವಲ್ಲ ಇಬ್ಬರ ಸಾವಿಗೂ ನ್ಯಾಯ ಸಿಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಮಂಗಳೂರು: ನಗರದಲ್ಲಿ ಡಿಸೆಂಬರ್ 18ರಂದು ನಡೆದ ಗೋಲಿಬಾರ್ ಹಾಗೂ ಗಲಭೆಗೆ ಸಂಬಂಧಿಸಿದ ಆಯ್ದ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.
ಮಂಗಳೂರು ಗಲಭೆ ಸಂಬಂಧ ವಾಟ್ಸಪ್‍ನಲ್ಲಿ ಹರಿದಾಡುತ್ತಿರುವ ವಿಡಿಯೋ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ಕೆಲವರು ಆಯ್ದ ವಿಡಿಯೋವನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಗಲಭೆಗೆ ಸಂಬಂಧಿಸಿದ ವಿಡಿಯೋಗಳನ್ನು ಅನುಕ್ರಮದಲ್ಲಿ ಹಾಗೂ ಸರಿಯಾದ ಸಂದರ್ಭಗಳೊಂದಿಗೆ ಹೊಂದಿಸಿ ನೋಡದಿದ್ದರೆ ನೈಜ ಚಿತ್ರಣವನ್ನು ಅರಿಯಲು ಸಾಧ್ಯವಾಗುವುದಿಲ್ಲ ಎಂದರು.
ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮಂಗಳೂರು ಗಲಭೆಯ ಮೂಲ ಸತ್ಯ ಬಯಲಾಗಲಿದೆ. ಅಲ್ಲಿಯವರೆಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರು.
ಗಲಭೆಯ ಸತ್ಯಾಂಶ ಮುಂದೆ ತನಿಖೆಯಲ್ಲಿ ತಿಳಿದು ಬರಲಿದೆ. ಈಗಾಗಲೇ ಪೊಲೀಸರು ಗಲಭೆಯ ಎಲ್ಲಾ ವಿಡಿಯೋಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಿದ್ದಾರೆ. ಡಿಸೆಂಬರ್ 19ರಂದು ಮಂಗಳೂರು ಪೊಲೀಸರು ಗಲಭೆ ನಿಯಂತ್ರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರುದ್ಧ ಡಿಸೆಂಬರ್ 19ರಂದು ನಡೆದ ಹಿಂಸಾಚಾರ, ಗೋಲಿಬಾರ್ ಕುರಿತ ಮ್ಯಾಜಿಸ್ಟೀರಿಯಲ್ ತನಿಖೆ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ಇಂದು ಆರಂಭಗೊಂಡಿದೆ.
ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ವೇಳೆ ಸಾಕ್ಷ್ಯ, ಅಹವಾಲು ಸಲ್ಲಿಕೆಗೆ ಅವಕಾಶವಿದ್ದು, ಪೊಲೀಸರು ಹಾಗೂ ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ ನಡೆಯಿತು.
ಈ ಹಿಂದೆಯೇ ತನಿಖಾಧಿಕಾರಿ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದು, ಯಾರು ಬೇಕಾದರೂ ಸಾಕ್ಷಿ ಹೇಳಬಹುದು ಎಂದಿದ್ದರು. ಅದರಂತೆ ಬಂದ ಸಾರ್ವಜನಿಕರ ಹಾಗೂ ಪೊಲೀಸರಿಂದ ಸಾಕ್ಷ್ಯ ದಾಖಲೀಕರಣ ಮಾಡಿದ ತನಿಖಾಧಿಕಾರಿ ಜಿ.ಜಗದೀಶ್ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಪ್ರತ್ಯಕ್ಷದರ್ಶಿಗಳಿಗೆ ಸಾಕ್ಷ್ಯ ನುಡಿಯಲು ಅವಕಾಶ ನೀಡಲಾಗಿತ್ತು. ಒಟ್ಟು 14 ಜನರು ಸಾಕ್ಷಿ ಹೇಳಲು ಆಗಮಿಸಿದ್ದು, ಅದರಲ್ಲಿ ಹಲವರು ಪ್ರತ್ಯಕ್ಷ ದರ್ಶಿಗಳು ಇದ್ದರು. ಲಿಖಿತ ರೂಪದಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಸಾಕ್ಷಿಗಳು ನೀಡಿರುವ ದಾಖಲೆಗಳನ್ನು ಪಡೆದುಕೊಂಡಿದ್ದೇವೆ. ಮುಂದೆ ಮೃತರ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ನೋಟೀಸ್ ನೀಡಿ ವಿಚಾರಣೆ ಮಾಡುತ್ತೇವೆ ಎಂದು ಜಗದೀಶ್ ತಿಳಿಸಿದ್ದಾರೆ.
ಮಂಗಳೂರು: ಪೌರತ್ವ ಮಸೂದೆಯ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಗೋಲಿಬಾರ್‌ಗೆ ಬಲಿಯಾದ ಅಬ್ದುಲ್ ಜಲೀಲ್ ಮತ್ತು ನೌಶೀನ್ ಮನೆಗೆ ಬೆಂಗಳೂರಿನ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಇಂದು ಭೇಟಿ ನೀಡಿದರು.
ಶಾಸಕ ರಿಜ್ವಾನ್ ಅವರು ಮೃತ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಎರಡೂ ಕುಟುಂಬದವರಿಗೆ ತಲಾ 2.5 ಲಕ್ಷ ರೂಪಾಯಿ ಪರಿಹಾರ ನೀಡಿದರು. ಬಳಿಕ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿ ನಂತರ ವಾಪಸ್ ಪಡೆದಿದ್ದು ಸರಿಯಾದ ಕ್ರಮವಲ್ಲ. ಸರ್ಕಾರದ ಈ ನಡೆ ಮೃತಪಟ್ಟವರಿಗೆ ಅವಮಾನ ಮಾಡಿದಂತೆ ಎಂದು ಹೇಳಿದರು.
ರಾಜ್ಯ ಸರ್ಕಾರ ಈಗ ನಡೆಸುತ್ತಿರುವ ಸಿಐಡಿ ತನಿಖೆಯಿಂದ ಮೃತಪಟ್ಟವರ ಕುಟುಂಬಕ್ಕೆ ಖಂಡಿತವಾಗಿಯೂ ನ್ಯಾಯ ಸಿಗುವುದಿಲ್ಲ. ಹೀಗಾಗಿ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಐವನ್ ಡಿಸೋಜ, ಮಿಥುನ್ ರೈ ಮತ್ತಿತರರು ಜೊತೆಗಿದ್ದರು.
Met family of victims who were killed in Mangaluru police firing during the #CAA_NRC protest & extended my sympathies.
As a mark of respect, provided monetary support to the family
A thorough investigation must take place & Police officials guilty of excesses must be penalised pic.twitter.com/kj1IbC54eX
ಮಂಗಳೂರು: ಪೌರತ್ವ ಮಸೂದೆ ಜಾರಿಯ ವಿರುದ್ಧ ಡಿ. 19ರಂದು ಮಂಗಳೂರಿನಲ್ಲಿ ನಡೆದ ಗೊಲೀಬಾರ್ ರಾಜ್ಯದ ಬಿಜೆಪಿ ಸರ್ಕಾರದ ಪ್ರಾಯೋಜಿತ ಹತ್ಯೆ, ಪೊಲೀಸರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡಿ ಅಮಾಯಕ ಪ್ರತಿಭಟನಾಕಾರರನ್ನು ಹತ್ಯೆ ಮಾಡಿಸಿದೆ ಎಂದು ಡಿವೈಎಫ್‍ಐನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಆರೋಪಿಸಿದ್ದಾರೆ.
ಮಂಗಳೂರಿಗೆ ಆಗಮಿಸಿದ ಡಿವೈಎಫ್‍ಐನ ರಾಷ್ಟ್ರೀಯ ನಿಯೋಗ, ಗೊಲೀಬಾರ್ ನಡೆದ ಸ್ಥಳಕ್ಕೆ ತೆರಳಿ ಪರಿಸೀಲನೆ ನಡೆಸಿತು. ಬಳಿಕ ಗೊಲೀಬಾರ್ ನಲ್ಲಿ ಮೃತಪಟ್ಟ ಜಲೀಲ್ ಕಂದುಕ ಹಾಗೂ ನೌಶೀನ್ ಕುದ್ರೋಳಿಯವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ರಿಯಾಝ್, ಪೊಲೀಸ್ ಗೊಲೀಬಾರ್ ಗೆ ಬಲಿಯಾದವರು ಅಮಾಯಕರು. ಮಂಗಳೂರಿನ ಪೊಲೀಸ್ ಆಯುಕ್ತರು ಆರ್‍ಎಸ್‍ಎಸ್ ಹಾಗೂ ಬಿಜೆಪಿಯವರೊಂದಿಗೆ ಸಂಪರ್ಕದಲ್ಲಿದ್ದು, ರಾಜ್ಯ ಸರ್ಕಾರದ ಪ್ರಾಯೋಜಿತ ಹತ್ಯೆಯ ಏಜೆಂಟರಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ಘಟನೆಯ ಎಫ್‍ಐಆರ್ ನಲ್ಲಿ ಅಪರಿಚಿತ ಮುಸ್ಲಿಂ ಯುವಕರು ಎಂದು ದಾಖಲಿಸಿಕೊಂಡಿರೋದು ದೇಶದ ಬೇರೆಲ್ಲೂ ಇಲ್ಲ. ಧರ್ಮದ ಆಧಾರದಲ್ಲಿ ಪೊಲೀಸರು ಹಾಗೂ ರಾಜ್ಯ ಸರ್ಕಾರ ಯುವ ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಪೊಲೀಸರು ನಡೆಸಿದ ಗೊಲೀಬಾರ್ ಪ್ರಕರಣವನ್ನು ಸಿಓಡಿಗೆ ನೀಡಿದ್ದು ಸರಿಯಲ್ಲ. ಇದರಿಂದ ನ್ಯಾಯ ಸಿಗದು. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕೆಂದರು.
ಗೊಲೀಬಾರ್ ನಲ್ಲಿ ಮೃತರಾದ ಇಬ್ಬರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಅಮಾಯಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕೆಂದು ಎಂದು ಇದೇ ವೇಳೆ ಆಗ್ರಹಿಸಿದರು.
ಡಿವೈಎಫ್‍ಐ ರಾಷ್ಟ್ರೀಯ ನಿಯೋಗದಲ್ಲಿ ಡಿವೈಎಫ್‍ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೇರಳ ರಾಜ್ಯಾಧ್ಯಕ್ಷ ಎ.ಸತೀಶ್, ಕಾರ್ಯದರ್ಶಿ ಎ.ಎ.ರಹೀಂ,ಕೇಂದ್ರ ಸಮಿತಿಯ ಸದಸ್ಯರಾದ ಎಸ್.ಕೆ.ಸಾಜಿಶ್, ಯು.ಕೆ.ಜ್ಞಾನೇಶ್ ಕುಮಾರ್ ಹಾಗೂ ಸ್ಥಳೀಯ ನಾಯಕರು ಜೊತೆಗಿದ್ದರು.