Tag: ಗೋಪಾಲಕ

  • ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

    ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

    ನೆಲಮಂಗಲ: ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿ ಹಸು ರಕ್ಷಣೆಗೆ ತೆರಳಿದ್ದ ಗೋಪಾಲಕ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೇಕೆರೆಯಲ್ಲಿ ನಡೆದಿದೆ.

    ಲೋಕೇಶ್ ಮೃತಪಟ್ಟ ಗೋಪಾಲಕ. ಮನೆಯ ನೀರು ಕಾಯಿಸುವ ಒಲೆಯಿಂದ ವ್ಯಾಪಿಸಿದ ಅಗ್ನಿ ಅವಘಡ ಇಡೀ ಕೊಟ್ಟಿಗೆ ಮನೆಗೆ ವ್ಯಾಪಿಸಿದೆ.

    ಬೆಂಕಿ ಬಿದ್ದ ವಿಷಯ ತಿಳಿದು ಲೋಕೇಶ್‌ ಕೂಡಲೇ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಎಳೆದು ಹೊರ ತಂದಿದ್ದಾರೆ. ಈ ವೇಳೆ ನಾಲ್ಕು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

    ರಾತ್ರಿಯೇ ಶೇ.90 ರಷ್ಟು ಲೋಕೇಶ್‌ ಅವರ ದೇಹ ಸುಟ್ಟು ಹೋಗಿತ್ತು. ಗಂಭೀರವಾಗಿದ್ದ ಲೋಕೇಶ್‌ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್‌ ಮೃತಪಟ್ಟಿದ್ದಾರೆ.

  • ಕರು ಸತ್ತ ದುಃಖದಲ್ಲಿ ಆಹಾರ ಬಿಟ್ಟ ತಾಯಿ ಹಸು- ಗೋಪಾಲಕ ಮಾಡಿದ ಕೆಲಸಕ್ಕೆ ಎಲ್ಲರ ಮೆಚ್ಚುಗೆ

    ಕರು ಸತ್ತ ದುಃಖದಲ್ಲಿ ಆಹಾರ ಬಿಟ್ಟ ತಾಯಿ ಹಸು- ಗೋಪಾಲಕ ಮಾಡಿದ ಕೆಲಸಕ್ಕೆ ಎಲ್ಲರ ಮೆಚ್ಚುಗೆ

    ಮೈಸೂರು: ಮಾತು ಬಾರದ ಮೂಕ ಪ್ರಾಣಿಗಳ ವರ್ತನೆ ಕೆಲವೊಮ್ಮೆ ಮಾನವರ ಪ್ರೀತಿಯನ್ನು ಮೀರಿಸುವಂತಿರುತ್ತದೆ. ಈ ಮಾತಿಗೆ ಪೂರಕ ಎಂಬಂತೆ ನಗರದಲ್ಲಿ ಘಟನೆ ನಡೆದಿದ್ದು, ಗೋ ಮಾಲೀಕ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ರಾಮಕೃಷ್ಣನಗರ ಎಚ್ ಬ್ಲಾಕ್‍ನ ಗೋ ಪಾಲಕ ಜಗದೀಶ್ ಸಾಕುತ್ತಿರುವ ಹಸುವೊಂದು ನಾಲ್ಕು ದಿನಗಳ ಹಿಂದೆ ಕರು ಹಾಕಿತ್ತು. ಆದರೆ ಎರಡು ದಿನಗಳ ನಂತರ ಆ ಕರು ಮೃತಪಟ್ಟಿತ್ತು. ಕರುವಿನ ಸಾವು ತಾಯಿ ಹಸುವಿಗೆ ದೊಡ್ಡ ಆಘಾತ ಉಂಟು ಮಾಡಿತ್ತು.

    ಕರುವಿನ ಸಾವಿನಿಂದ ಆಘಾತದಲ್ಲಿ ತಾಯಿ ಹಸು ಆಹಾರ ತ್ಯಜಿಸಿ ಹಾಲು ನೀಡುವುದನ್ನು ನಿಲ್ಲಿಸಿತ್ತು. ಇದನ್ನು ಮನಗೊಂಡ ಗೋ ಪಾಲಕ ಜಗದೀಶ್ ಮೃತಪಟ್ಟ ಕರುವಿನ ಅವಶೇಷವನ್ನು ಸ್ವಚ್ಛಗೊಳಿಸಿದ್ದರು. ನಂತರ ಮೃತಪಟ್ಟ ಕರುವಿನ ಚರ್ಮದ ಮುಖಾಂತರವೇ ಜೀವಂತ ಕರುವಿನ ರೀತಿ ಆಕೃತಿ ತಯಾರು ಮಾಡಿದ್ದಾರೆ. ಈ ಆಕೃತಿಯನ್ನು ತಾಯಿ ಹಸುವಿನ ಬಳಿ ಬಿಟ್ಟಾಗ ಹಸು ಎಂದಿನಂತೆ ಆಹಾರ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಹಾಲು ನೀಡಲು ಆರಂಭಿಸಿದೆ.

    ಕೆಲ ದಿನಗಳ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕೊತ್ತನಹಳ್ಳಿ ಬಳಿ ಭತ್ತದ ಗದ್ದೆಯಲ್ಲಿ ತಾಯಿ ಆನೆಯೊಂದು ಮೃತಪಟ್ಟ ತನ್ನ ಕಂದನನ್ನು ಬದುಕಿಸಲು ಹರಸಾಹಸ ಪಟ್ಟಿತ್ತು. ಭತ್ತದ ಗದ್ದೆಯಲ್ಲಿ ಆನೆಯೊಂದು ಮರಿಯಾನೆಗೆ ಜನ್ಮ ನೀಡಿತ್ತು. ಆದರೆ ಮರಿಯಾನೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತ್ತು. ಇದರ ಅರಿವಿಲ್ಲದೆ ತಾಯಿ ಆನೆ ತನ್ನ ಮರಿಯ ಮೃತದೇಹವನ್ನು ಬಿಟ್ಟು ಕದಲದೇ ಎದ್ದೇಳಿಸಲು ಪ್ರಯತ್ನಿಸಿತ್ತು. ಅಷ್ಟೇ ಅಲ್ಲದೇ ತನ್ನ ಸಂಗಡಿಗ ಆನೆಯ ರೋಧನೆ ಕಂಡು ಇತರೆ 12ಕ್ಕೂ ಹೆಚ್ಚು ಆನೆಗಳ ದಂಡು ತಾಯಿಯಾನೆಯನ್ನು ಬಿಟ್ಟು ಹೋಗದೆ ತಮ್ಮ ಮಮತೆಯನ್ನೂ ಕೂಡ ತೋರಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪಶು ವೈದ್ಯ ಮುರಳಿ, ರಾತ್ರಿ ಆಹಾರವನ್ನು ಅರಸಿಕೊಂಡ ಬಂದ ಈ ಆನೆಗಳ ದಂಡಿನಲ್ಲಿ ತಾಯಿ ಆನೆ ಮರಿಯಾನೆಗೆ ಜನ್ಮ ನೀಡಿತ್ತು. ತಾಯಿ ಆನೆಗೆ ಮರಿಯಾನೆ ಮೃತಪಟ್ಟ ವಿಚಾರ ಗೊತ್ತಿತ್ತೋ ಅಥವಾ ಇಲ್ಲವೋ ನಮಗೆ ತಿಳಿದಿಲ್ಲ. ಆದರೆ ತನ್ನ ಮಗುವಿನ ದೇಹವನ್ನು ಅಲ್ಲಿಂದ 200 ಮೀಟರ್ ವರೆಗೆ ಎಳೆದುಕೊಂಡು ಹೋಯಿತು. ಮರಿಗೆ ಜನ್ಮ ನೀಡಿದ ಕೂಡಲೇ ಆನೆ ತನ್ನ ಮರಿಗೆ ಹಾಲನ್ನು ಉಣಿಸಬೇಕು. ಇಲ್ಲವಾದಲ್ಲಿ ಸಹಜವಾಗಿ ತಾಯಿ ಆನೆಗೆ ನೋವು ಆರಂಭವಾಗುತ್ತದೆ. ಹಾಗಾಗಿ ತಾಯಿ ಆನೆ ತನ್ನ ಮಗುವನ್ನು ಏಳಿಸಲು ಪ್ರಯತ್ನಿಸಿತ್ತು. ಈ ರೀತಿಯ ತಾಯಿ ಮಮತೆ ಕೇವಲ ಮನುಷ್ಯರಲ್ಲಷ್ಟೆ ಅಲ್ಲ ಪ್ರಾಣಿಗಳಲ್ಲೂ ಇರುತ್ತೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv