Tag: ಗೋಧ್ರಾ

  • ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

    ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

    ನವದೆಹಲಿ: 2002ರ ಗೋಧ್ರಾ (Godhra) ರೈಲು ಬೋಗಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣದ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಜಾಮೀನು (Bail) ಮಂಜೂರು ಮಾಡಿದೆ.

    ಪ್ರಕರಣದ ಇತರ ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (Chief Justice of DY Chandrachud) ನೇತೃತ್ವದ ಪೀಠವು 17 ವರ್ಷಗಳಿಂದ ಜೈಲುವಾಸ ಅನುಭವಿಸಿದ ಎಂಟು ಅಪರಾಧಿಗಳಿಗೆ ಜಾಮೀನು ನೀಡಿದೆ. ಇದನ್ನೂ ಓದಿ: ಸುಪ್ರೀಂ ಆದೇಶ ಗೊತ್ತಿದ್ದರೂ ಹೈಕಮಾಂಡ್ ನಿಮಗೆ ಅಲ್ಲಿ ಟಿಕೆಟ್ ನೀಡಿದ್ಯಾ – ವಿನಯ್ ಕುಲಕರ್ಣಿ ಪರ ವಕೀಲರಿಗೆ ಹೈಕೋರ್ಟ್ ಚಾಟಿ

    ವಿಚಾರಣಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ಅವರ ಜಾಮೀನು ಅರ್ಜಿಯನ್ನು ಈಗ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಪ್ರಕರಣದಲ್ಲಿ 11 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದರೆ, ಇತರೆ 20 ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ದೋಷಿಗಳು ರೈಲಿನ ಬೋಗಿಗಳ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದ ಪ್ರಕರಣ ಗಂಭೀರ ಅಪರಾಧವಾಗಿದೆ ಎಂದು ಗುಜರಾತ್ ಸರ್ಕಾರ ಕೋರ್ಟ್ ಗಮನಕ್ಕೆ ತಂದಿತ್ತು.

    ಏನಿದು ಪ್ರಕರಣ?
    ಫೆಬ್ರವರಿ 27, 2002 ರಂದು ಗುಜರಾತ್‍ನ (Gujarat) ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಸ್‍ಪ್ರೆಸ್‍ನ ಕೆಲವು ಬೋಗಿಗಳನ್ನು ಅಪರಾಧಿಗಳು ಸುಟ್ಟು ಹಾಕಿದ್ದರು. ಈ ಘಟನೆಯಲ್ಲಿ ಕನಿಷ್ಠ 58 ಜನರು ಪ್ರಾಣ ಕಳೆದುಕೊಂಡಿದ್ದರು. ನಂತರ ಈ ಘಟನೆ ಗುಜರಾತ್‍ನಲ್ಲಿ ದೊಡ್ಡ ಪ್ರಮಾಣದ ಗಲಭೆಗೆ ಕಾರಣವಾಗಿತ್ತು. 2011ರಲ್ಲಿ ಸ್ಥಳೀಯ ನ್ಯಾಯಾಲಯವು 31 ಆರೋಪಿಗಳಿಗೆ ಶಿಕ್ಷೆ ವಿಧಿಸಿ 63 ಜನರನ್ನು ಖುಲಾಸೆಗೊಳಿಸಿತ್ತು.

    ನಂತರ ಗುಜರಾತ್ ಹೈಕೋರ್ಟ್ 31 ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ 11 ಮಂದಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.

    ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2018 ರಿಂದ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ – ಸುಪ್ರೀಂ ಕೋರ್ಟ್

  • ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

    ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

    ನ್ನಡದ ಹೆಸರಾಂತ ನಟ ಸತೀಶ್ ನೀನಾಂಸ ನಟನೆಯ ನಿರೀಕ್ಷಿತ ‘ಗೋಧ್ರಾ’ ಸಿನಿಮಾದ ಹೆಸರು ಬದಲಾಗಿದೆ. ಈ ಚಿತ್ರಕ್ಕೆ ಈಗ ‘ಡಿಯರ್ ವಿಕ್ರಂ’ ಎಂದು ಹೆಸರಿಡಲಾಗಿದೆ. ಶ್ರದ್ಧಾ ಶ್ರೀನಾಥ್ ಮತ್ತು ಸತೀಶ್ ಕಾಂಬಿನೇಷನ್ನ ಸಿನಿಮಾ ಇದಾಗಿದ್ದು, ನಂದೀಶ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಚೊಚ್ಚಲ ಸಿನಿಮಾ ಇದಾಗಿದ್ದರೂ, ಈಗಾಗಲೇ ಟ್ರೇಲರ್ ನಿಂದಾಗಿ ಭಾರೀ ಸದ್ದು ಮಾಡಿದೆ.

    ಸಿನಿಮಾದ ಟೈಟಲ್ ಬದಲಾವಣೆ ಕುರಿತು ಸತೀಶ್ ಮಾತನಾಡಿದ್ದಾರೆ, “ಈ ಸಿನಿಮಾ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಿದೆ. ಗೋಧ್ರಾ ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈ ಗನ್ನಡಿ ಆಗಿದೆ. ಆದರೀಗ ಸಿನಿಮಾದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿದೆ. ನಿಜ ಹೇಳುವುದಾದರೇ ನಮ್ಮ ಸಿನಿಮಾ ಯಾವುದೇ ನೈಜ ಘಟನೆಗೆ, ಪ್ರದೇಶವನ್ನು ಆಧರಿಸಿದ ಸಿನಿಮಾವಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಅನ್ನೋ ಕಾರಣದಿಂದ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ಚಿತ್ರತಂಡ ಯೋಚಿಸಿದೆ. ಇಂದಿನಿಂದ ಗೋಧ್ರಾ.. ‘ಡಿಯರ್ ವಿಕ್ರಂ’ ಆಗಿ ಪ್ರೇಕ್ಷಕರೆದುರು ಬರಲಿದೆ” ಎಂದಿದ್ದಾರೆ.

    ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಸಿನಿಮಾದ ನಾಯಕ- ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್, ಸೋನುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, KP ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕಾಡಲಿದೆ. ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣದ ಜುಗಲ್ ಬಂಧಿ ಖಂಡಿತಾ ಇಷ್ಟವಾಗಲಿದೆ. ಈ ಸಿನಿಮಾ ಮೂಲಕ ನಂದೀಶ ಭರವಸೆಯ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಅಂದಹಾಗೆ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೇ ನೇರವಾಗಿ VOOT Select OTT ವೇದಿಕೆಯಲ್ಲಿ ಬಿಡುಗಡೆ ಆಗಲಿದೆಯಂತೆ. ಯಾವತ್ತಿನಿಂದ ಈ ಸಿನಿಮಾ ನೋಡಬಹುದು ಎನ್ನುವ ಕುರಿತು ಇನ್ನೂ ಡೇಟ್ ಅನೌನ್ಸ್ ಆಗಿಲ್ಲ. ಆದರೆ, ಅತೀ ಶೀಘ್ರದಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ ಎನ್ನಲಾಗುತ್ತಿದೆ.

  • ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾದ ‘ಗೋಧ್ರಾ’ ಚಿತ್ರತಂಡ

    ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾದ ‘ಗೋಧ್ರಾ’ ಚಿತ್ರತಂಡ

    ಸಿನಿಮಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಚತುರನಾಗಿರೋ ನಟ ನೀನಾಸಂ ಸತೀಶ್ ಸದ್ಯದಲ್ಲೇ ‘ಗೋಧ್ರಾ’ ಚಿತ್ರದ ಮೂಲಕ ರಂಜಿಸಲು ಬರ್ತಿದ್ದಾರೆ. ಚಂಬಲ್ ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ಸತೀಶ್ ‘ಗೋಧ್ರಾ’ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಚಿತ್ರೀಕರಣ ಮುಗಿಸಿ ಚಿತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿರುವ ಚಿತ್ರತಂಡ ಚಿತ್ರದ ಹೈಬಜೆಟ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧವಾಗಿದೆ.

    ನಾಯಕನ ಎಂಟ್ರಿ ಸಾಂಗ್ ಇದಾಗಿದ್ದು, ಒಂದು ಹಾಡಿಗಾಗಿ ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಚಿತ್ರತಂಡ. ಸತೀಶ್ ನೀನಾಸಂ ಕೆರಿಯರ್ ನಲ್ಲೇ ಇದು ಬಿಗ್ ಬಜೆಟ್ ಪ್ರಾಜೆಕ್ಟ್ ಆಗಿರೋದ್ರ ಜೊತೆಗೆ ಹಾಡಿಗಾಗಿ ಇಷ್ಟು ವೆಚ್ಚ ಮಾಡುತ್ತಿರೋದು ಇದೇ ಮೊದಲ ಸಿನಿಮಾ ಅಂತಾರೆ ಅಭಿನಯ ಚತುರ ಸತೀಶ್. ಚೇತನ್ ಕುಮಾರ್ ಸಾಹಿತ್ಯದಲ್ಲಿ ಮೂಡಿ ಬರ್ತಿರೋ ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಅದ್ಧೂರಿ ಸೆಟ್‍ನಲ್ಲಿ ಹಾಡನ್ನು ಸೆರೆಹಿಡಿಯಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಇಲ್ಲಿಯವರೆಗೂ ಚಿತ್ರದ ಬಗ್ಗೆ ಕೊಂಚ ಸುಳಿವನ್ನು ಕೊಡದ ಚಿತ್ರತಂಡ ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಗೋಧ್ರಾ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ.

    ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ ವ್ಯಕ್ತಿಯ ಕಥೆಯನ್ನು ಗೋಧ್ರಾ ಚಿತ್ರತಂಡ ಹೇಳ ಹೊರಟಿದೆ. ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ. ಕೆ.ಎಸ್.ನಂದೀಶ್ ಗೋಧ್ರಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದೆ.

  • ಗೋಧ್ರಾ ಹತ್ಯಾಕಾಂಡಕ್ಕೆ 15 ವರ್ಷ- ಮೋದಿ ಹೇಗಾದ್ರು ಗೊತ್ತಾ ಹಿಂದೂ ಸಾಮ್ರಾಟ್?-12 ವರ್ಷದಿಂದ ಇಲ್ಲಿ ಬಿಜೆಪಿ ವನವಾಸ…!

    ಗೋಧ್ರಾ ಹತ್ಯಾಕಾಂಡಕ್ಕೆ 15 ವರ್ಷ- ಮೋದಿ ಹೇಗಾದ್ರು ಗೊತ್ತಾ ಹಿಂದೂ ಸಾಮ್ರಾಟ್?-12 ವರ್ಷದಿಂದ ಇಲ್ಲಿ ಬಿಜೆಪಿ ವನವಾಸ…!

    ಕೆ.ಪಿ.ನಾಗರಾಜ್, ವಿಶೇಷ ಪ್ರತಿನಿಧಿ
    ಅಹಮದಾಬಾದ್: ಗುಜರಾತ್ ರಾಜಧಾನಿ ಗಾಂಧಿನಗರದಿಂದ ಸುಮಾರು 130 ಕಿ.ಮೀ. ದೂರ ಇರುವ ಗೋಧ್ರಾ ಈ ದೇಶದಲ್ಲೇ ಅತಿ ಸೂಕ್ಷ್ಮ ಪ್ರದೇಶ. 2002ರ ಫೆಬ್ರವರಿ 27ರ ಬೆಳಗ್ಗಿನ ಜಾವ 8.30ಕ್ಕಿಂತಾ ಮುಂಚೆ ಇಂಥದ್ದೊಂದು ಪ್ರದೇಶ ಇದೆ ಎಂದು ದೇಶದ ಜನರಿಗೆ ಗೊತ್ತಿರಲಿಲ್ಲ. ದೇಶದ ಜನರಿಗೇಕೆ ಗುಜರಾತ್ ಎಂಬ ರಾಜ್ಯದ ಜನರಿಗೂ ಕೂಡಾ ಗೋಧ್ರಾ ಬಗ್ಗೆ ಅರಿವು ಇರಲಿಲ್ಲ. ಅಷ್ಟರ ಮಟ್ಟಿಗೆ ಈ ಪ್ರದೇಶ ಎಲೆ ಮರೆ ಕಾಯಿಯಂತೆ ಇತ್ತು.

    ಬೆಳಕಿಗೆ ಬಂದ ಗೋಧ್ರಾ: ಅವತ್ತು 2002ರ ಫೆಬ್ರವರಿ 27ರ ಬೆಳಗ್ಗೆ 8.30. ಅಯೋಧ್ಯೆಗೆ ತೆರಳಿದ್ದ ಹಿಂದೂ ಕರಸೇವಕರು ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬರುತ್ತಿದ್ದರು. ರೈಲು ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ನಿಂತಿತ್ತು. ರೈಲಿನ ಎಸ್ 6 ಬೋಗಿಯ ಮೇಲೆ ಏಕಾಏಕಿ ಬೆಂಕಿ ಉಂಡೆಗಳ ದಾಳಿಯಾಯಿತು. 56 ಜನ ಕರಸೇವಕರು ಕ್ಷಣಾರ್ಧದಲ್ಲಿ ಸಜೀವವಾಗಿ ದಹನವಾದರು. ಇಡೀ ದೇಶಕ್ಕೆ ಈ ಸುದ್ದಿ ಕಾಳ್ಗಿಚಿನಂತೆ ಹಬ್ಬಿ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿತ್ತು.

    ರೈಲಿನ ಇತರ ಬೋಗಿಗಳಲ್ಲಿ ಇದ್ದ ಕರಸೇವಕರು ತಮ್ಮ ಬೋಗಿಯಿಂದ ಹೊರ ಬಂದು ಏನಾಗುತ್ತಿದೆ ಎಂದು ನೋಡುವುದರೊಳಗೆ 56 ಜನ ಸಜೀವವಾಗಿ ದಹನಗೊಂಡಿದ್ದರು. ಯಾರು ಬೆಂಕಿ ಹಚ್ಚಿದ್ದು ಎಂಬ ಪ್ರಶ್ನೆಗೆ ತನಿಖೆಯೇ ಇಲ್ಲದೆ ಉತ್ತರವನ್ನು ಸ್ಪಷ್ಟ ಮಾಡಿಕೊಳ್ಳಲಾಗಿತ್ತು. ಪರಿಣಾಮ, ದೇಶದ ಹಲವೆಡೆ ಕೋಮು ಗಲಭೆಗಳು ನಡೆದವು. ನೂರಾರು ಜನರು ಪ್ರಾಣ ಬಿಟ್ಟರು. ದೇಶದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಬದುಕಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ವಾತಾವರಣ ಕೆಟ್ಟು ಹೋಯಿತು.

    ಈಗಲೂ ಇದೆ ಅದೇ ಬೋಗಿ!: ಇದೇ ಸಬರಮತಿ ರೈಲಿನ ಇನ್ನೊಂದು ಬೋಗಿಯಲ್ಲಿದ್ದ ಕರಸೇವಕರ ಕಣ್ಣಿನಲ್ಲಿ ಘಟನೆ ನಡೆದು 15 ವರ್ಷ ಕಳೆದರೂ ಬೆಂಕಿಯ ಕ್ಷಣಗಳು ಹಾಗೇ ಇವೆ. ಗೋಧ್ರಾ ಹತ್ಯಾಕಾಂಡ ನಡೆದು 15 ವರ್ಷ ಕಳೆದಿವೆ. ಈಗಲೂ ಘಟನೆಯ ತನಿಖೆ ನಡೆಯುತ್ತಿದೆ. ಈ ಕಾರಣ ಅವತ್ತು ಬೆಂಕಿಗೆ ಆಹುತಿಯಾದ ಸಬರಮತಿ ರೈಲಿನ ಎಸ್6 ಕೋಚ್ ಅನ್ನು ಇನ್ನೂ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಇಡಲಾಗಿದೆ. ಬೋಗಿಗೆ ತುಕ್ಕ ಹಿಡಿದಿದ್ದರೂ ಸುಟ್ಟು ಕರಕಲಾಗಿರುವ ಒಳ ಹೊರಗಿನ ಬಿಡಿ ಭಾಗಗಳು ದುರಂತದ ಕರಾಳ ಅಧ್ಯಾಯವನ್ನು ಬಿಚ್ಚಿಡುತ್ತಿದೆ. ಸಾರ್ವಜನಿಕರ ವೀಕ್ಷಣೆಗೆ ಹಾಗೂ ಮಾಧ್ಯಮದವರು ಅದನ್ನು ಚಿತ್ರೀಕರಿಸುವುದಕ್ಕೆ ಅವಕಾಶ ಇಲ್ಲ. ಈ ಬೋಗಿಯನ್ನು ನೋಡಿಕೊಳ್ಳಲೆಂದು ಪೊಲೀಸರ ನಿಯೋಜನೆ ಆಗಿದೆ.

    ಗೋಧ್ರಾ ಹತ್ಯಾಕಾಂಡ ನಡೆಯುವವರೆಗೂ ನರೇಂದ್ರ ಮೋದಿ ಒಬ್ಬ ಸಾಮಾನ್ಯ ಜನ ನಾಯಕ. ಜಾತಿಯ ಬಲವಿಲ್ಲದೆ ಬೆಳೆದು ನಿಂತು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಮನುಷ್ಯ ಎಂಬ ಹೆಗ್ಗಳಿಕೆಗೆ ಮಾತ್ರ ಪಾತ್ರವಾಗಿದ್ದರು. ಆದರೆ, ಈ ಘಟನೆ ಗುಜರಾತ್ ರಾಜಕಾರಣದ ಮಗ್ಗಲು ಬದಲಾಯಿಸಿ ಬಿಟ್ಟಿತ್ತು. ಒಬ್ಬ ಸಾಮಾನ್ಯ ನಾಯಕನನ್ನು ಹಿಂದೂ ಸಾಮ್ರಾಜ್ಯದ ಸಾಮ್ರಾಟ್ ಎಂಬ ರೀತಿ ಮಾಡಿಬಿಟ್ಟಿತ್ತು.

    ಒಡೆದ ಮನ ಒಂದುಗೂಡಲಿಲ್ಲ: ಗುಜರಾತ್ ರಾಜ್ಯದ ಪಂಚಮಹಲ್ ಜಿಲ್ಲೆಯಲ್ಲಿ ಗೋಧ್ರಾ ಸೇರಿ ಸೇರಾ, ಮೆರ್ವಾಹಧಾಪ್, ಕಾಲೋಲ್ ಹಾಗೂ ಹಾಲೋಲ್ ಎಂಬ ಐದು ವಿಧಾನಸಭಾ ಕ್ಷೇತ್ರಗಳಿವೆ. ಗೋಧ್ರಾದಲ್ಲಿ ಒಟ್ಟು ಮೂರೂವರೆ ಲಕ್ಷ ಜನರು ಇದ್ದಾರೆ. ಇದರಲ್ಲಿ 52% ರಷ್ಟು ಮುಸ್ಲಿಮರು ಮತ್ತು 48% ರಷ್ಟು ಹಿಂದೂಗಳಿದ್ದಾರೆ. ಹೀಗಾಗಿ, ಗೋಧ್ರಾದಲ್ಲಿ ಮುಸ್ಲಿಮರ ಪ್ರಾಬಲ್ಯ ದೊಡ್ಡದಿದೆ. ಎರಡು ಕೋಮಿನ ಜನರು ಈ ಕಾರಣಕ್ಕೆ ಇಲ್ಲಿ ಜಿದ್ದಾಜಿದ್ದಿನ ಬದುಕನ್ನು ಸದಾ ನಡೆಸುತ್ತಿದ್ದಾರೆ. ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ಮುಸ್ಲಿಮರು ಸೌಹಾರ್ದವಾಗಿ ಬದುಕಿದ ಉದಾಹರಣೆಗಳು ಕೊಂಚ ಕಡಿಮೆ ಇವೆ. ಅದರಲ್ಲೂ ಗೋಧ್ರಾ ಹತ್ಯಾಕಾಂಡ ನಡೆದ ಮೇಲಂತೂ ಗೋಧ್ರಾದ ಒಳಗೆ ಎರಡು ಗಡಿಗಳು ಸೃಷ್ಟಿಯಾಗಿವೆ. ಒಂದೇ ನೆಲದಲ್ಲಿ ಇದ್ದರು ಪರಸ್ಪರ ವಿರುದ್ಧವಾಗಿಯೇ ಬದುಕುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಹಿಂದೂಗಳು ಇರುವ ಏರಿಯಾಕ್ಕೆ ಮುಸ್ಲಿಮರು ಹೋಗುವುದಿಲ್ಲ. ಮುಸ್ಲಿಮರು ಇರುವ ಏರಿಯಾಕ್ಕೆ ಹಿಂದೂಗಳು ಹೋಗುವುದಿಲ್ಲ. ಇದು ಅಚ್ಚರಿ ಎನ್ನಿಸಿದರೂ ವಾಸ್ತವ.

    12 ವರ್ಷದಿಂದ ಬಿಜೆಪಿ ಗೆದ್ದಿಲ್ಲ, ಆದರೆ ಈ ಬಾರಿ ‘ಕೈ’ ಶಾಸಕನೇ ಬಿಜೆಪಿಯಲ್ಲಿ!: ಗೋಧ್ರಾ ಹತ್ಯೆ ನಡೆದ ವೇಳೆ 2002 ರಲ್ಲಿ ಇಲ್ಲಿನ ಮತದಾರರು ಬಿಜೆಪಿ ಗೆಲ್ಲಿಸಿದ್ದರು. ಆದರೆ 2005ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಠಾಕೂರ್ ಸಮುದಾಯದ ಸಿ.ಕೆ.ರಾಹುಲ್ ಇಲ್ಲಿ ನಿರಂತರವಾಗಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಹೆಚ್ಚು ಕಡಿಮೆ ಗೋಧ್ರಾ ಬಿಜೆಪಿ ಪಾಲಿಗೆ 12 ವರ್ಷದಿಂದ ವನವಾಸದ ರೀತಿ ಮಾರ್ಪಟ್ಟಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‍ನಿಂದ ನಿರಂತರವಾಗಿ ಗೆದ್ದು ಬರುತ್ತಿದ್ದ ಸಿ.ಕೆ.ರಾಹುಲ್ ಈಗ ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಕಣಕ್ಕೆ ಕೂಡ ಇಳಿಯಲಿದ್ದಾರೆ. ಇದು ಈಗ ನಿಜಕ್ಕೂ ಕಾಂಗ್ರೆಸ್ ನಿದ್ದೆ ಕೆಡಿಸಿದೆ. ಆದರೆ, ಕಾಂಗ್ರೆಸ್ ಇನ್ನೂ ಆಶಾಭಾವನೆಯಲ್ಲಿದೆ. ಇದಕ್ಕೆ ಕಾರಣ ಠಾಕೂರ್ ಸಮುದಾಯದ ಯುವ ನಾಯಕ ಅಲ್ಪೇಶ್ ಠಾಕೂರ್. ಗೋಧ್ರಾದ 48% ರಷ್ಟು ಹಿಂದುಗಳಲ್ಲಿ ಒಬಿಸಿಗಳ ಪಾಲು ಹೆಚ್ಚಿದೆ. ಅದರಲ್ಲಿ 70% ರಷ್ಟು ಹಿಂದುಳಿದ ಬಾರ್ಯ ಮತಗಳಿವೆ. ಈ ಮತಗಳನ್ನು ಸೆಳೆಯುವ ಶಕ್ತಿ ಅಲ್ಪೇಶ್ ಠಾಕೂರ್ ಗೆ ಇದೆ ಎಂದು ಕಾಂಗ್ರೆಸ್ ನಂಬಿ ಗೆಲುವಿನ ಲೆಕ್ಕ ಮಾಡಿದೆ.

    ಗೋಧ್ರಾ ಹತ್ಯಾಕಾಂಡದ ವಿಚಾರ ಹಿಡಿದುಕೊಂಡು ಹಿಂದುತ್ವದ ಹೆಸರಿನಲ್ಲಿ ದೇಶದ ಬಹುತೇಕ ಕ್ಷೇತ್ರಗಳಲ್ಲಿ ಮತಗಳನ್ನು ಬಿಜೆಪಿ ಕ್ರೋಢೀಕರಿಸಿ ಗೆದ್ದಿದೆ. ಆದರೆ, ಅದೇ ಗೋಧ್ರಾದಲ್ಲಿ ಬಿಜೆಪಿಗೆ ಹಿಂದುತ್ವದ ಹೆಸರಿನಲ್ಲಿ ಮತಗಳನ್ನು ಒಟ್ಟು ಮಾಡಲು ಆಗುತ್ತಿಲ್ಲ. ಹಿಂದೂಗಳ 48% ರಷ್ಟು ಮತಗಳಲ್ಲಿ ವಿಭಜನೆ ಹೆಚ್ಚಿದೆ. ಆದರೆ ಮುಸ್ಲಿಂ ಮತಗಳ ನಿಷ್ಠೆ ಒಂದು ಪಕ್ಷದ ಪರವಾಗಿದೆ. ಇದು ಇಲ್ಲಿ ಕಾಂಗ್ರೆಸ್ ಶಕ್ತಿಯಾಗಿತ್ತು. ಆದರೆ ಕಳೆದ 12 ವರ್ಷದಿಂದ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಶಾಸಕರೇ ಈಗ ಬಿಜೆಪಿಗೆ ಬಂದಿರುವುದರಿಂದ ಇಲ್ಲಿ ಕಮಲ ಅರಳುತ್ತಾ, ಇಲ್ಲ ಜನ ಕೈ ಹಿಡಿಯುತ್ತಾರಾ ಎಂದು ತಿಳಿದುಕೊಳ್ಳಲು ಎಲ್ಲರೂ ಚುನಾವಣಾ ಫಲಿತಾಂಶದ ದಿನವಾದ ಡಿಸೆಂಬರ್ 18ರವರೆಗೆ ಕಾಯಲೇಬೇಕು.( ಗುಜರಾತ್ ಚುನಾವಣೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಗುಜರಾತ್ ಚುನಾವಣೆ)