Tag: ಗೋಧಿ

  • ರಸ್ತೆಯಲ್ಲಿ ತೊಗರಿ ಒಣಗಿಸುವುದನ್ನು ಕಂಡು ಬೆಂಕಿ ಹಚ್ಚಲು ಮುಂದಾದ ಪಿಎಸ್‍ಐ

    ರಸ್ತೆಯಲ್ಲಿ ತೊಗರಿ ಒಣಗಿಸುವುದನ್ನು ಕಂಡು ಬೆಂಕಿ ಹಚ್ಚಲು ಮುಂದಾದ ಪಿಎಸ್‍ಐ

    ಬಳ್ಳಾರಿ: ಕಟಾವು ಮಾಡಿದ ತೊಗರಿ, ಗೋಧಿ ಸೇರಿದಂತೆ ಹಲವು ಬೆಳೆಗಳನ್ನು ಹಳ್ಳಿಯಲ್ಲಿನ ರೈತರು ರಸ್ತೆಗೆ ಹಾಕುವುದು ಸಾಮಾನ್ಯ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವುದೂ ಸತ್ಯ. ಈ ಕುರಿತು ಎಷ್ಟೇ ಹೇಳಿದರೂ ಕೇಳದ ರೈತರಿಂದ ಬೇಸತ್ತು ಪಿಎಸ್‍ಐಯೊಬ್ಬರು ರಸ್ತೆಯಲ್ಲಿ ಹಾಕಿದ್ದ ತೊಗರಿ ಬೆಳೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ.

    ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಡಗಲಿ ರಸ್ತೆಯಲ್ಲಿ ಘಟನೆ ನಡೆದಿದ್ದು, ರೈತರು ತೊಗರಿ ಬೆಳೆ ಕಟಾವು ಮಾಡಿ, ರಸ್ತೆಯಲ್ಲಿ ಹಾಕಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಕುರಿತು ರೈತರಿಗೆ ಹರಪನಹಳ್ಳಿ ಪಿಎಸ್‍ಐ ಶ್ರೀಧರ್ ಸಾಕಷ್ಟು ಬಾರಿ ಹೇಳಿದರೂ, ರಸ್ತೆಯಲ್ಲೇ ತೊಗರಿ ಹಾಕಿಕೊಂಡು ಒಣಗಿಸುತ್ತಿದ್ದರು.

    ಇದರಿಂದ ಬೇಸತ್ತ ಪಿಎಸ್‍ಐ ಶ್ರೀಧರ್ ರಸ್ತೆಯಲ್ಲಿ ಹಾಕಿದ್ದ ತೊಗರಿಗೆ ಬೆಂಕಿ ಹಚ್ಚಲು ಹೋಗಿದ್ದಾರೆ. ಬೆಂಕಿ ಹಚ್ಚಲು ಹೋಗುತ್ತಿದ್ದಂತೆ ರೈತರು ಅಂಗಲಾಚಿ ಬೇಡಿಕೊಂಡಿದ್ದಾರೆ. ಪಿಎಸ್‍ಐ ಬೆಂಕಿ ಹಚ್ಚಲು ಯತ್ನಿಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕೂಲಿ ಕಾರ್ಮಿಕರು ಸಿಗದ ಹಿನ್ನೆಲೆ ರೈತರು ತೊಗರಿ, ಗೋಧಿ, ಸಜ್ಜೆ, ನವಣೆಗಳನ್ನು ರಸ್ತೆಗೆ ಹಾಕಿ ಬಿಡಿಸುತ್ತಾರೆ. ಅಲ್ಲದೆ ಒಣಗಿಸಲು ಸಹ ಹಾಕುತ್ತಾರೆ. ಆದರೆ ರೈತರ ಈ ಪದ್ಧತಿಯಿಂದಾಗಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಪೊಲೀಸರು ರೈತರಿಗೆ ಮನವಿ ಮಾಡುತ್ತಾರೆ. ಆದರೆ ರೈತರು ಒಕ್ಕಲು ಮಾಡಲು ಆಳು ಸಿಗದ ಕಾರಣ ಈ ಪದ್ಧತಿ ಅನಿವಾರ್ಯ ಎಂಬಂತಾಗಿದೆ.

  • ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಳಸಬೇಕಿದ್ದ 350 ಕ್ವಿಂಟಾಲ್ ಗೋಧಿ ಗೋದಾಮಿನಲ್ಲಿ ವೇಸ್ಟ್

    ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಳಸಬೇಕಿದ್ದ 350 ಕ್ವಿಂಟಾಲ್ ಗೋಧಿ ಗೋದಾಮಿನಲ್ಲಿ ವೇಸ್ಟ್

    ಮಡಿಕೇರಿ: ಕೊಡಗು ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಚಪಾತಿ, ಉಪ್ಪಿಟ್ಟು ಸೇರಿದಂತೆ ವಿವಿಧ ಆಹಾರಕ್ಕಾಗಿ ಖರೀದಿಸಿದ್ದ 350 ಕ್ವಿಂಟಾಲ್‍ಗೂ ಹೆಚ್ಚು ಗೋಧಿ ಗೋದಾಮಿನಲ್ಲಿ ವೇಸ್ಟ್ ಆಗಿ ಬಿದ್ದಿದೆ.

    ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರ ಹಾಸ್ಟೆಲ್‍ಗಳನ್ನು ತೆರೆದಿದೆ. ಈ ಮೂಲಕ ಅವರ ಶಿಕ್ಷಣದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸುತ್ತಿದ್ದು, ಅದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತದೆ. ಕೊಡಗಿನ ಎಲ್ಲಾ ಹಾಸ್ಟೆಲ್‍ಗಳಿಗಾಗಿ 400 ಕ್ವಿಂಟಾಲ್ ಗೋಧಿಯನ್ನು ಖರೀದಿಸಿ ವಿರಾಜಪೇಟೆಯ ಎಪಿಸಿಎಂಎಸ್ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಗೋಧಿಯನ್ನು ಸಂಗ್ರಹಿಸಿ ಮೂರು ತಿಂಗಳಾದರೂ ಇದುವರೆಗೂ ಹಾಸ್ಟೆಲ್‍ಗಳಿಗೆ ಅಧಿಕಾರಿಗಳು ಅಥವಾ ವಾರ್ಡನ್‍ಗಳು ಎತ್ತುವಳಿ ಮಾಡಿಲ್ಲ.

    ಮೂರು ತಿಂಗಳಲ್ಲಿ ಕೇವಲ 35 ಕ್ವಿಂಟಾಲ್‍ನಷ್ಟು ಗೋಧಿಯನ್ನು ಮಾತ್ರ ಬಳಕೆ ಮಾಡಲಾಗಿದೆ. ಉಳಿದ 365 ಕ್ವಿಂಟಾಲ್ ಗೋಧಿ ಗೋದಾಮಿನಲ್ಲೇ ಕೊಳೆಯುತ್ತಿದೆ. ಒಮ್ಮೆ ಗೋಧಿಯನ್ನು ಸಂಗ್ರಹಿಸಿದರೆ ಅದನ್ನು ಹೆಚ್ಚೆಂದರೆ 6 ತಿಂಗಳವರೆಗೆ ಮಾತ್ರವೇ ಸಂಗ್ರಹಿಸಿಡಬಹುದು. ನಂತರ ಅದು ಹಾಳಾಗಿ ಹುಳುಹಿಡಿಯುತ್ತದೆ. ಆದರೆ ಈಗಾಗಲೇ ಸಂಗ್ರಹಿಸಿ ಮೂರು ತಿಂಗಳು ಪೂರೈಸಿದರೂ ಗೋದಾಮಿನಲ್ಲಿರುವ ಗೋಧಿ ಇನ್ನೂ ಒಂದು ವರ್ಷಕ್ಕೆ ಆಗುವಷ್ಟು ಸಂಗ್ರಹವಾಗಿದೆ.

    ಒಂದು ಕೆ.ಜಿ. ಗೋಧಿಗೆ 26 ರೂಪಾಯಿಯಂತೆ ಲೆಕ್ಕ ಹಾಕಿದರೂ, 350 ಕ್ವಿಂಟಾಲ್ ಗೋಧಿಗೆ ಸರ್ಕಾರದ ಸುಮಾರು 10 ಲಕ್ಷ ರೂ. ನಷ್ಟವಾಗಲಿದೆ. ಅದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಪೌಷ್ಠಿಕಾಂಶಯುಕ್ತ ಆಹಾರದಿಂದ ವಂಚಿತರಾಗಲಿದ್ದಾರೆ. ಕೊಡಗಿನ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೂ ಶಿಕ್ಷಣದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕಾಗಿದ್ದ ಅಧಿಕಾರಿಗಳು, ನೂರಾರು ಕ್ವಿಂಟಾಲ್ ಗೋಧಿಯನ್ನು ಹಾಳು ಮಾಡುತ್ತಿರುವುದು ಮಾತ್ರ ವಿಪರ್ಯಾಸ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

  • ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

    ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

    ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ಕೊಳೆಯುತ್ತಿದ್ದು, ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದ ಪಡಿತರ ವ್ಯರ್ಥವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಟನ್‍ಗಟ್ಟಲೇ ಗೋಧಿ ಕೊಳೆಯುತ್ತಿದೆ.

    ಆನೇಕಲ್ ತಾಲೂಕಿನ ಕೇಂದ್ರ ಭಾಗವಾಗಿರುವ ಆನೇಕಲ್ ಪಟ್ಟಣದ ಗೋದಾಮಿನಲ್ಲಿ 331 ಕ್ವಿಂಟಾಲ್, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಪತ್ತೆಯಾಗಿದ್ದು ಸಂಪೂರ್ಣವಾಗಿ ಹಾಳಾಗಿದ್ದು ಮನುಷ್ಯ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

    ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆಯೇ ಈ ಗೋಧಿಯನ್ನು ಖರಿದೀ ಮಾಡಿದ್ದು, ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಇಲಿಗಳ ಪಾಲಾಗಿದೆ. ರಾಜ್ಯ ಸರ್ಕಾರ ಗೋಧಿ ವಿತರಣೆಯನ್ನು ಅವೈಜ್ಞಾನಿಕವಾಗಿ ನಿಲ್ಲಿಸಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇಲಾಖೆಯ ಮೂಲಗಳ ಪ್ರಕಾರ ರಾಜ್ಯಾದ್ಯಂತ 1,25 ಲಕ್ಷ ಕ್ವಿಂಟಾಲ್ ಗೋಧಿ ಹೀಗೆ ಕೊಳೆಯುತ್ತಿದೆ ಎಂದು ತಿಳಿದುಬಂದಿದೆ.

    ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಇತರೇ ಆಹಾರ ಪದಾರ್ಥಗಳಾದ ರಾಗಿಯೂ ಇದೇ ರೀತಿ ಕೊಳೆಯುತ್ತಿದೆ. ಬಡ ಜನರ ಹಸಿವನ್ನು ನೀಗಿಸುವ ಪ್ರಮುಖ ಯೋಜನೆಯಾಗಿ ರಾಜ್ಯ ಸರ್ಕಾರ ಹೆಮ್ಮೆಯಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಬಡವರ ಹಸಿವನ್ನು ನೀಗಿಸ ಬೇಕಾದ ಆಹಾರ ಕೊಳೆಯುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ನಾವು ಈಗಾಗಲೇ ಆಹಾರ ಪದಾರ್ಥದ ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದೇವೆ. ವರದಿ ಬಂದ ನಂತರ ಆಹಾರ ಜನರು ತಿನ್ನಲು ಯೋಗ್ಯವಾಗಿದ್ದಲ್ಲಿ ಅದನ್ನು ವಿತರಣೆ ಮಾಡುತ್ತೇವೆ. ಮುಂದಿನ ಕ್ರಮವನ್ನು ಉನ್ನತ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂಬ ಉತ್ತರವನ್ನು ನೀಡಿದ್ದಾರೆ.