Tag: ಗೋಧಿ

  • ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ಪ್ಯಾರಿಸ್: ಭಾರತದಲ್ಲಿ ಗೋಧಿ ರಫ್ತು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.

    ಯುರೋಪ್ ಮಾರುಕಟ್ಟೆಯಲ್ಲಿ ಪ್ರತಿ ಟನ್‍ಗೆ 435 ಯುರೋಗಳಿಗೆ (35,311 ರೂ.) ಏರಿಕೆ ಕಂಡಿದೆ. ಅಂದರೆ ಪ್ರತಿ ಟನ್‍ಗೆ ಅಂದಾಜು 1,053 ರೂ.ನಷ್ಟು ಹೆಚ್ಚಳವಾಗಿದೆ.

    ಗೋಧಿ ರಫ್ತು ಮಾಡುವ ರಾಷ್ಟ್ರಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರಮುಖವಾಗಿದ್ದವು. ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಲ್ಲಾ ಬೆಲೆಯೂ ಗಗನಕ್ಕೆ ಏರಿತ್ತು. ಅದರ ಜೊತೆಗೆ ಗೋಧಿ ಬೆಲೆಯೂ ಏರಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಗೋಧಿಗೆ ಹೆಚ್ಚಿನ ಬೆಲೆ ಬಂದಿತ್ತು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

    ರಫ್ತಿಗೆ ನಿಷೇಧ ಹೇರಿದ್ದು ಯಾಕೆ?: ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು.

    ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ತರಾಟೆಗೆ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಗೋಧಿಯ ರಫ್ತು ನಿಷೇಧ ಮಾಡಿರುವುದಕ್ಕೆ ಚೀನಾ ಬೆಂಬಲ ನೀಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಸರಿಯಲ್ಲ. G7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುವುದಿಲ್ಲ ಎಂದು ಚೀನಾ ಪ್ರಶ್ನಿಸಿದೆ. ಇದನ್ನೂ ಓದಿ: ಭೂ ವಿವಾದದ ತೀರ್ಪು 108 ವರ್ಷದ ಬಳಿಕ ಪ್ರಕಟ

  • ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    ನವದೆಹಲಿ: ಭಾರತದಿಂದ ಗೋಧಿಯನ್ನು ಖರೀದಿಸಲು ಈಜಿಪ್ಟ್‌ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಈಜಿಪ್ಟ್‌ ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿಯನ್ನು ಆಮದು ಮಾಡುತ್ತಿತ್ತು. ಆದರೆ ಯುದ್ಧದಿಂದಾಗಿ ಈಜಿಪ್ಟ್‌ ಈಗ ಭಾರತದಿಂದ 3 ಮಿಲಿಯನ್‌ ಟನ್‌ ಗೋಧಿ ಖರೀದಿಸಲು ಮುಂದಾಗಿದೆ.

    ಈಜಿಪ್ಟ್‌ ದೇಶದ ಕೃಷಿ ಅಧಿಕಾರಿಗಳು ಭಾರತದ ವಿವಿಧ ಸಂಸ್ಕರಣಾ ಘಟಕ, ಬಂದರುಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್‌ನ ಕೃಷಿ ಭೂಮಿಗಳನ್ನು ವೀಕ್ಷಣೆ ಮಾಡಿದ್ದರು. ಈಗ ಈಜಿಪ್ಟ್‌ಗೆ ಉತ್ತಮ ಗುಣಮಟ್ಟದ ಗೋಧಿಯನ್ನು ರಫ್ತು ಮಾಡಲಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದಾರೆ.  ಇದನ್ನೂ ಓದಿ: ಸ್ಥಳೀಯ ಉತ್ಪನ್ನ ಮಾತ್ರ ಖರೀದಿಸಲು ಜನರನ್ನು ಪ್ರೇರೇಪಿಸಿ: ಸ್ವಾಮೀಜಿಗಳಿಗೆ ಮೋದಿ ಮನವಿ

    ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಹಿನ್ನೆಯಲ್ಲಿ ಗೋಧಿ ಆಮದಿಗಾಗಿ ಈಜಿಪ್ಟ್‌ ಅಧಿಕಾರಿಗಳು ಬೇರೆ ಬೇರೆ ದೇಶಗಳನ್ನು ಸಂಪರ್ಕಿಸಿತ್ತು. ಕಳೆದ ತಿಂಗಳು ದುಬೈನಲ್ಲಿ ಪಿಯೂಶ್‌ ಗೋಯಲ್‌ ಈಜಿಪ್ಟ್‌ ಸರ್ಕಾರದ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸಿದ್ಧವಾಗಿದೆ ಎಂದು ತಿಳಿಸಿದ್ದರು.

    2021 ರಲ್ಲಿ ಈಜಿಪ್ಟ್ 6.1 ದಶಲಕ್ಷ ಟನ್ (mt) ಗೋಧಿಯನ್ನು ಆಮದು ಮಾಡಿಕೊಂಡಿದೆ. ಭಾರತವು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯಲ್ಲಿ ಇಲ್ಲಿಯವರೆಗೆ ಸ್ಥಾನ ಪಡೆದಿರಲಿಲ್ಲ.

    ರಷ್ಯಾ ಮತ್ತು ಉಕ್ರೇನ್‌ನಿಂದ ಈಜಿಪ್ಟ್‌ ಶೇ.80ರಷ್ಟು ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು 2021ರಲ್ಲಿ ಅಂದಾಜು 2 ಶತಕೋಟಿ ಡಾಲರ್‌ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿದೆ.

    ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಶ್ರೀಲಂಕಾ, ಓಮನ್ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆಯಿದ್ದು ಭಾರತ ರಫ್ತು ಮಾಡುತ್ತಿದೆ. ಅಷ್ಟೇ ಅಲ್ಲದೇ ಯೆಮೆನ್, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಗೋಧಿ ರಫ್ತು ಹೆಚ್ಚಿಸಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ದನ್ನೂ ಓದಿ: ತಾಯ್ನಾಡಲ್ಲಿ 108 ಅಡಿ ಎತ್ತರದ ಹನುಮ ಮೂರ್ತಿಯನ್ನು ಅನಾವರಣಗೊಳಿಸಿದ ಮೋದಿ

    2020-21ರವರೆಗೆ ಜಾಗತಿಕ ಗೋಧಿ ವ್ಯಾಪಾರದಲ್ಲಿ ಭಾರತದ ರಫ್ತು ಪ್ರಮಾಣ ಕಡಿಮೆ ಇದೆ. ಭಾರತವು 2019-20 ಮತ್ತು 2020-21 ರಲ್ಲಿ ಕ್ರಮವಾಗಿ ಸುಮಾರು 0.2 ಮತ್ತು 2 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ರಫ್ತು ಮಾಡಿದೆ.

    2021-22ರ ಹಣಕಾಸು ವರ್ಷದಲ್ಲಿ ಭಾರತ 418 ಕೋಟಿ ಡಾಲರ್‌( ಅಂದಾಜು 31.4 ಲಕ್ಷ ಕೋಟಿ ರೂ.) ದಾಖಲೆ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈಗ ಗೋಧಿ ರಫ್ತಿನಿಂದಾಗಿ ರೈತರಿಗೂ ಅನುಕೂಲಕರವಾಗಲಿದೆ.

    ಭಾರತದಿಂದ ಆಹಾರ ಉತ್ಪನ್ನಗಳು ರಫ್ತು ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಆಹಾರ ಪರೀಕ್ಷೆ ಮಾಡುವ ಲ್ಯಾಬ್‌ಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದೆ. ರೈಲ್ವೇ ಮತ್ತು ವಾಣಿಜ್ಯ ಸಚಿವಾಲಯ ಹೆಚ್ಚುವರಿ ಬೋಗಿಗಳನ್ನು ಸೇರಿಸಿ ವೇಗವಾಗಿ ಸರಕು ಬಂದರು ತಲುಪವಂತೆ ಮಾಡಲು ಈಗ ಕೆಲಸ ಮಾಡುತ್ತಿದೆ. ಗೋಧಿಯನ್ನು ತ್ವರಿತವಾಗಿ ರಫ್ತು ಮಾಡಲು ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಆಹಾರ ಸಚಿವಾಲಯ ಅಧಿಕಾರಿಗಳ ಪ್ರಕಾರ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಭಾರತ ವಾರ್ಷಿಕ 10 ದಶಲಕ್ಷ ಟನ್‌ ಗೋಧಿ  ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    ಮೋದಿ ಹೇಳಿದ್ದೇನು?
    ಗುಜರಾತ್‌ನ ಅದಾಲಾಜ್‌ನಲ್ಲಿರುವ ಅನ್ನಪೂರ್ಣ ಧಾಮದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್‌ ಉದ್ಘಾಟನೆ ಮಾಡಿದ ಭಾಷಣ ಮಾಡಿದ್ದ ಮೋದಿ, ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿಗೆ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದರು.

    ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಸುಮಾರು 80 ಕೋಟಿ ಜನರಿಗೆ 2 ವರ್ಷಗಳ ಕಾಲ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಿದೆ. ಇದನ್ನು ನೋಡಿ ಇಡೀ ವಿಶ್ವವೇ ಬೆರಗಾಗಿದೆ. ಈಗ ಉಕ್ರೇನ್‌-ರಷ್ಯಾ ಯುದ್ಧ ನಡೆಯುತ್ತಿರುವುದರಿಂದ ಜಗತ್ತು ಆಹಾರದ ಅಭಾವವನ್ನು ಎದುರಿಸುತ್ತಿದೆ. ಹಾಗಾಗಿ ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಜೊತೆಗಿನ ಮಾತುಕತೆಯ ವೇಳೆ ತಿಳಿಸಿದ್ದೇನೆ ಎಂದು ಹೇಳಿದ್ದರು.

  • ಉಕ್ರೇನ್ ಯುದ್ಧ – ಭಾರತದ ಗೋಧಿಗೆ ಬೇಡಿಕೆ

    ಉಕ್ರೇನ್ ಯುದ್ಧ – ಭಾರತದ ಗೋಧಿಗೆ ಬೇಡಿಕೆ

    ನವದೆಹಲಿ: ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಗೋಧಿ ಹೆಚ್ಚಿನ ಮಟ್ಟದಲ್ಲಿ ರಫ್ತಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

    ವರ್ಷದ ಹಿಂದೆ ಭಾರತದಿಂದ 1.08 ಕೋಟಿ ಮೆಟ್ರಿಕ್ ಟನ್‌ನಷ್ಟು ಗೋಧಿ ರಫ್ತಾಗಿತ್ತು. ಉಕ್ರೇನ್ ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಈ ವರ್ಷ ಭಾರತದಿಂದ 1.10 ಕೋಟಿ ಮೆಟ್ರಿಕ್ ಟನ್ ಗೋಧಿ ರಫ್ತಾಗುವ ನಿರೀಕ್ಷೆ ಇದೆ ಎಂದು ಎಸ್ ಆ್ಯಡ್ ಪಿ ಗ್ಲೋಬಲ್ ಪ್ಲಾಟ್ಸ್ ಸಮೀಕ್ಷೆ ಬಹಿರಂಗಪಡಿಸಿದೆ.

    ರಷ್ಯಾ ವಿಶ್ವದಲ್ಲೇ ಅತೀ ಹೆಚ್ಚು ಗೋಧಿಯನ್ನು ರಫ್ತು ಮಾಡುವ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಕ್ರೇನ್ 5ನೇ ಸ್ಥಾನದಲ್ಲಿದ್ದರೆ ಭಾರತ ಸದ್ಯ 10ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಇನ್ನು ಮುಂದೆ ಪಾಸ್‌ವರ್ಡ್ ಹಂಚಿಕೆಗೂ ಹೆಚ್ಚುವರಿ ಶುಲ್ಕ ವಿಧಿಸಲಿದೆ ನೆಟ್‌ಫ್ಲಿಕ್ಸ್

    ಜಾಗತಿಕವಾಗಿ ಉಕ್ರೇನ್ ಹಾಗೂ ರಷ್ಯಾ ಶೇ.25 ರಷ್ಟು ಪಾಲಿನ ಗೋಧಿಯನ್ನು ರಫ್ತು ಮಾಡುತ್ತಿತ್ತು. ಇದೀಗ ಭಾರತದಲ್ಲಿ ಗೋಧಿ ರಫ್ತು ಹೆಚ್ಚಾದಲ್ಲಿ ಉಕ್ರೇನ್ ಹಾಗೂ ರಷ್ಯಾದ ರಫ್ತಿನ ಸ್ಥಾನ ಕೆಳಗಿಳಿಯಲಿದ್ದು, ಭಾರತದ ಸ್ಥಾನ ಏರಲಿದೆ.

    ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಲೋಕಸಭೆಯಲ್ಲಿ ಬುಧವಾರ ಭಾರತದ ರಫ್ತಿನ ಬಗ್ಗೆ ಉಲ್ಲೇಖಿಸಿದ್ದರು. ಭೀಕರ ಯುದ್ಧದ ಮಧ್ಯೆ ಉಕ್ರೇನ್ ಹಾಗೂ ರಷ್ಯಾದ ರಫ್ತಿಗೆ ತಡೆ ಬೀಳಲಿವೆ. ಅಲ್ಲಿ ತಡೆಯಾಗುವ ಉತ್ಪನ್ನಗಳಿಂದ ಭಾರತಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

    ರಷ್ಯಾ ಹಾಗೂ ಉಕ್ರೇನ್‌ನಿಂದ ಅತೀ ಹೆಚ್ಚು ರಫ್ತಾಗುವ ಟೆಲಿಕಾಂ ಉಪಕರಣಗಳು, ಕಬ್ಬಿಣ, ಉಕ್ಕು, ಚಹಾ, ರಾಸಾಯನಿಕ ಉತ್ಪನ್ನಗಳು, ಪೆಟ್ರೋಲಿಯಂ ಹೀಗೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇತರ ದೇಶಗಳು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ.

  • ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ

    ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ

    ಕಾಬೂಲ್‌: ತಿನ್ನಲಾಗದ ಕಳಪೆ ಗುಣಮಟ್ಟದ ಗೋಧಿಯನ್ನು ನೀಡಿದ ಪಾಕಿಸ್ತಾನದ ವಿರುದ್ಧ ತಾಲಿಬಾನ್ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ.

    ಕಳಪೆ ಗುಣಮಟ್ಟದ ಗೋಧಿಯನ್ನು ಪಾಕಿಸ್ತಾನ ನೀಡಿದೆ. ಇದು ಸೇವಿಸಲು ಯೋಗ್ಯವಾಗಿಲ್ಲ. ಆದರೆ ಭಾರತೀಯ ಸರ್ಕಾರ ಕಳುಹಿಸಿದ 50,000 ಮೆಟ್ರಿಕ್ ಟನ್ ಗೋಧಿ ತುಂಬ ಚೆನ್ನಾಗಿದೆ ಎಂದು ಬರೆದು, ಗೋಧಿಯ ಗುಣಮಟ್ಟದ ಬಗ್ಗೆ ದೂರು ನೀಡುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಲಾಗಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಉತ್ತಮ ಗುಣಮಟ್ಟದ ಗೋಧಿ ಕಳುಹಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಲಾಗಿದೆ. ಆಫ್ಘಾನ್ ಜನರಿಗೆ ನಿರಂತರ ಬೆಂಬಲ ನೀಡುತ್ತಿರುವುದಕ್ಕಾಗಿ ಭಾರತಕ್ಕೆ ಧನ್ಯವಾದಗಳು. ನಮ್ಮ ಸಾರ್ವಜನಿಕ ಮತ್ತು ಸಾರ್ವಜನಿಕ ಸ್ನೇಹಿ ಸಂಬಂಧ ಶಾಶ್ವತವಾಗಿರುತ್ತದೆ. `ಜೈ ಹಿಂದ್’ ಎಂದು ಹಮ್ದುಲ್ಲಾ ಅರ್ಬಾಬ್ ಟ್ವೀಟ್ ಮಾಡಿದ್ದಾರೆ. ವೈರಲ್ ವೀಡಿಯೋ ಪಾಕಿಸ್ತಾನದ ಪರವಾದ ಆಫ್ಘಾನ್ ಸರ್ಕಾರವನ್ನು ಕೆರಳಿಸಿದೆ. ಈ ಹೇಳಿಕೆ ನೀಡಿದ ತಾಲಿಬಾನ್ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

    ಕಳೆದ ತಿಂಗಳು, ಭಾರತವು ಆಫ್ಘಾನ್ ಜನರ ಸಹಾಯಕ್ಕಾಗಿ ಗೋಧಿಯನ್ನು ರವಾನಿಸಿತ್ತು. 2000 ಮೆಟ್ರಿಕ್ ಟನ್ ಗೋಧಿಯನ್ನು ಹೊತ್ತ ವಾಹನಗಳು ಅಮೃತಸರದ ಅಟ್ಟಾರಿಯಿಂದ ಜಲಾಲಾಬಾದ್, ಅಫ್ಘಾನಿಸ್ತಾನಕ್ಕೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಭಾರತವು ಅಫ್ಘಾನಿಸ್ತಾನದ ಜನರೊಂದಿಗೆ ತನ್ನ ವಿಶೇಷ ಸಂಬಂಧಕ್ಕೆ ಬದ್ಧವಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಭಾರತವು 50,000 ಮೆಟ್ರಿಕ್ ಟನ್ ಗೋಧಿಯನ್ನು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಕಳುಹಿಸುವುದಾಗಿ ಘೋಷಿಸಿತ್ತು.

  • ಅಫ್ಘಾನಿಸ್ತಾನದ ಜನತೆಗೆ ತಾಲಿಬಾನ್ ಸರ್ಕಾರದಿಂದ ಉಚಿತ ಗೋಧಿ ವಿತರಣೆ

    ಅಫ್ಘಾನಿಸ್ತಾನದ ಜನತೆಗೆ ತಾಲಿಬಾನ್ ಸರ್ಕಾರದಿಂದ ಉಚಿತ ಗೋಧಿ ವಿತರಣೆ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಭಾನುವಾರ ಹಸಿವನ್ನು ನೀಗಿಸುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಜನತೆಗೆ ಗೋಧಿಯನ್ನು ನೀಡಿದೆ.

    ಅಫ್ಘಾನ್ ನ ಈ ಯೋಜನೆಯು ನಗರದ ಪ್ರಮುಖ ಪಟ್ಟಣಗಳು ಮತ್ತು ನಗರಗಳ ಸುತ್ತ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿಯೂ ಅಫ್ಘಾನ್ ನ ರಾಜಧಾನಿಯಲ್ಲಿ ಮಾತ್ರ 40,000 ಪುರುಷರಿಗೆ ಉದ್ಯೋಗ ನೀಡಲಾಗುವುದು ಎಂದು ತಾಲಿಬಾನ್‍ನ ಮುಖ್ಯ ವಕ್ತಾರರು ದಕ್ಷಿಣ ಕಾಬೂಲ್‍ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

    ಈ ಕುರಿತು ಮಾತನಾಡಿದ ಜಬಿಹುಲ್ಲಾ ಮುಜಾಹಿದ್, ನಿರುದ್ಯೋಗದ ವಿರುದ್ಧ ಹೋರಾಡಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಪರಿಣಾಮ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಾಗರದ ಮಾಲ್ವೆ ಬಳಿ ಕಾರು ಅಪಘಾತ – ಚಾಲಕ ಸ್ಥಳದಲ್ಲೇ ಸಾವು

    ಅಫ್ಘಾನಿಸ್ತಾನ ಈಗಾಗಲೇ ಬಡತನ, ಬರ, ವಿದ್ಯುತ್ ಸಮಸ್ಯೆ ಮತ್ತು ವಿಫಲ ಆರ್ಥಿಕ ವ್ಯವಸ್ಥೆಯಿಂದ ಬಳಲುತ್ತಿದ್ದು, ಈಗ ಕಠಿಣ ಚಳಿಗಾಲವನ್ನು ಎದುರಿಸುತ್ತಿದೆ. ತಾಲಿಬಾನ್‍ನ ಆಹಾರ ಯೋಜನೆಯ ಕೆಲಸಕ್ಕಾಗಿ ಕಾರ್ಮಿಕರಿಗೆ ವೇತನವನ್ನು ನೀಡುತ್ತಿಲ್ಲ. ಪ್ರಸ್ತುತ ನಿರುದ್ಯೋಗಿಗಳು ಮತ್ತು ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿರುವವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

    ಈ ಎರಡು ತಿಂಗಳ ಕಾರ್ಯಕ್ರಮದಿಂದ ರಾಜಧಾನಿಯಲ್ಲಿ 11,600 ಟನ್ ಗೋಧಿಯನ್ನು ವಿತರಿಸಲಾಗಿದೆ. ಹೆರಾತ್, ಜಲಾಲಾಬಾದ್, ಕಂದಹಾರ್, ಮಜರ್-ಐ-ಷರೀಫ್ ಮತ್ತು ಪೋಲ್-ಐ-ಖೋಮ್ರಿ ಸೇರಿದಂತೆ ದೇಶದ ಇತರೆಡೆಗಳಿಗೆ ಸುಮಾರು 55,000 ಟನ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

    ರಾಜಧಾನಿಯ ಗ್ರಾಮೀಣ ರಿಶ್ ಖೋರ್ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮುಜಾಹಿದ್, ಕೃಷಿ ಸಚಿವ ಅಬ್ದುಲ್ ರಹ್ಮಾನ್ ರಶೀದ್ ಮತ್ತು ಕಾಬೂಲ್ ಮೇಯರ್ ಹಮ್ದುಲ್ಲಾ ನೊಮಾನಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಇದನ್ನೂ ಓದಿ: ತೋಳನಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ವಹಿಸಿ: ಶೆಟ್ಟರ್ ಸೂಚನೆ

  • 2 ರೂ.ಗೆ ಗೋಧಿ, 3 ರೂ.ಗೆ ಅಕ್ಕಿ, 80 ಕೋಟಿ ಜನರಿಗೆ ಪಡಿತರ – ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವ ನಿರ್ಣಯ

    2 ರೂ.ಗೆ ಗೋಧಿ, 3 ರೂ.ಗೆ ಅಕ್ಕಿ, 80 ಕೋಟಿ ಜನರಿಗೆ ಪಡಿತರ – ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವ ನಿರ್ಣಯ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತ ಬಂದ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಪ್ರತಿಕ್ರಿಸಿದ್ದಾರೆ.

    ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ದೇಶದ ಹಿತ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿದೆ. ಅಲ್ಲದೇ ಸಾಮಾಜಿಕ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತ ಬಂದ್ ಮಾಡಿರುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ದೇಶದ 80 ಕೋಟಿ ಜನರಿಗೆ ಪಡಿತರ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಜಾವೇಡ್ಕರ್ ಹೇಳಿದರು.

    ಪ್ರತಿ ವ್ಯಕ್ತಿಗೆ ಏಳು ಕೆ.ಜಿ ಪಂಡಿತರ ನೀಡಲು ನಿರ್ಧರಿಸಿದ್ದು, ಗೋಧಿ ಎರಡು ರೂಪಾಯಿ, ಅಕ್ಕಿ ಮೂರು ರೂಪಾಯಿಗೆ ಕೆ.ಜಿಯಂತೆ ವಿತರಣೆ ಮಾಡಲಾಗುವುದು. ಈ ಮೂಲಕ ದೇಶದ ಜನರ ನೆರವಿಗೆ ಕೇಂದ್ರ ಸರ್ಕಾರ ಬರಲಿದೆ. ಹೀಗಾಗಿ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.

    ಜನರು ಮನೆಯಲ್ಲಿದ್ದು ಸಹಕಾರ ನೀಡಬೇಕು. ಪ್ರತಿ ಬಾರಿ ಯಾವುದಾದರೂ ಕೆಲಸ ಮಾಡಿದ ಬಳಿಕ ಸಾಬೂನಿನಿಂದ ಕೈ ತೊಳೆಯಬೇಕು. ಗಾಳಿ ಮಾತಿಗೆ ಕಿವಿಗೊಟ್ಟು ಮನೆಯಿಂದ ಆಚೆ ಬಾರಬಾರದು. ಕೆಮ್ಮು ಕಫ, ಜ್ವರ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕಲ್ಲಿ ಮನವಿ ಮಾಡಿಕೊಂಡರು.

    ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ಸಭೆಯಲ್ಲಿ ಸೋಶಿಯಲ್ ಡಿಸ್ಟೇನ್ಸ್ ಫಾಲೋ ಮಾಡುವ ಮೂಲಕ ನುಡಿದಂತೆ ನಡೆದು ತೋರಿಸಿದರು. ಮಂಗಳವಾರ ಭಾಷಣದಲ್ಲಿ ಮಾತನಾಡಿದ್ದ ಅವರು ಪ್ರಧಾನಿನಿಂದ ಸಾಮಾನ್ಯನ ವರೆಗೂ ಎಲ್ಲರೂ ಅಂತರ ಕಾಯ್ದೆಕೊಳ್ಳಬೇಕು ಎಂದಿದ್ದರು.

    ಅದರಂತೆ ಇಂದು ನಡೆದ ಸಭೆಯಲ್ಲಿ ಎಲ್ಲ ಕೇಂದ್ರ ಸಚಿವರು ದೂರದಲ್ಲಿ ಕೂತು ಸಭೆ ನಡೆಸಿದ್ದಾರೆ. ಈ ಮೂಲಕ ದೇಶಕ್ಕೆ ಹೊಸ ಸಂದೇಶ ರವಾನಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದರು.

  • ಮತ್ತೆ ಎಲ್ಲರಿಗೂ ಅಕ್ಕಿ, ಗೋಧಿ ಕೊಡುವಂತೆ ಸರ್ಕಾರದ ಆದೇಶ

    ಮತ್ತೆ ಎಲ್ಲರಿಗೂ ಅಕ್ಕಿ, ಗೋಧಿ ಕೊಡುವಂತೆ ಸರ್ಕಾರದ ಆದೇಶ

    ಬೆಂಗಳೂರು: ದಾಸೋಹ ಯೋಜನೆಯ ವೆಲ್ ಫೇರ್ ಸ್ಕೀಮ್ ನ ಅಡಿಯಲ್ಲಿ ಮಠ ಮಾನ್ಯಗಳಿಗೆ ಪುನಃ ಅಕ್ಕಿ ಹಾಗೂ ಗೋಧಿ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದೆ.

    ವೆಲ್ ಫೇರ್ ಸ್ಕೀಮ್ ಅಡಿಯಲ್ಲಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠ ಸೇರಿದಂತೆ ಪ್ರಮುಖ ಮಠ ಮಾನ್ಯಗಳಿಗೆ ನೀಡುತ್ತಿದ್ದ ಅಕ್ಕಿ ಹಾಗೂ ಗೋದಿಯನ್ನ ಕಳೆದ ಕೆಳವು ತಿಂಗಳ ಹಿಂದೆ ಸರ್ಕಾರ ಏಕಾಏಕಿ ಸ್ಥಗಿತಗೊಳಿಸಿತ್ತು. ಆದರೆ ಮಠ ಮಾನ್ಯಗಳಿಗೆ ನೀಡುತ್ತಿದ್ದ ದವಸ ಧಾನ್ಯ ಸ್ಥಗಿತಗೊಳಿಸಿದ್ದು ದೊಡ್ಡ ವಿವಾದವಾಗಿತ್ತು. ಸಿಎಂ ಯಡಿಯೂರಪ್ಪ ಮೊದಲಿನಂತೆ ಎಲ್ಲಾ ಮಠ ಹಾಗೂ ಸಂಘ ಸಂಸ್ಥೆಗಳಿಗೆ ಪುನಃ ಅಕ್ಕಿ ಹಾಗೂ ಗೋಧಿ ಕೊಡುವುದಾಗಿ ಹೇಳಿದ್ದರು. ಅದರಂತೆ ಫೆಬ್ರವರಿ ಮೊದಲ ವಾರದಿಂದ ಈ ಹಿಂದೆ ಕೊಡುತ್ತಿದ್ದ ಎಲ್ಲಾ ಸಂಸ್ಥೆಗಳಿಗೆ ಮಠ ಮಾನ್ಯಗಳಿಗೆ ಅಕ್ಕಿ ಹಾಗೂ ಗೋಧಿ ಮೊದಲಿನಂತೆ ನೀಡಲಾಗುತ್ತಿದೆ. ಆ ಸಂಬಂಧ ಅಧಿಕೃತ ಆದೇಶವಾಗಿದೆ.

    91 ಅನುದಾನಿತ, 16 ಅನುದಾನೇತರ, 222 ಖಾಸಗಿ ಮತ್ತು 22 ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಒಟ್ಟು 351 ಸರ್ಕಾರೇತರ ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ ಹಾಗೂ ಗೋಧಿ ನೀಡಿಕೆ ಮೊದಲಿನಂತೆ ಯಥಾವತ್ತಾಗಿ ಮುಂದುವರಿಸಲು ಆದೇಶಿಸಲಾಗಿದೆ.

  • ಸಿದ್ದಗಂಗಾ ಮಠಕ್ಕೆ ಅಕ್ಕಿ ಕಡಿತ- ಸಚಿವೆ ಶಶಿಕಲಾ ಜೊಲ್ಲೆ ಭೇಟಿ

    ಸಿದ್ದಗಂಗಾ ಮಠಕ್ಕೆ ಅಕ್ಕಿ ಕಡಿತ- ಸಚಿವೆ ಶಶಿಕಲಾ ಜೊಲ್ಲೆ ಭೇಟಿ

    – ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಸರ್ಕಾರ

    ತುಮಕೂರು: ಸಿದ್ದಗಂಗಾ ಮಠ ಸೇರಿದಂತೆ ಕೆಲ ಮಠ ಮಾನ್ಯಗಳಿಗೆ ದಾಸೋಹ ಯೋಜನೆಯಡಿ ವಿತರಿಸಲಾಗುತ್ತಿದ್ದ ಅಕ್ಕಿಯನ್ನ ಕಡಿತಗೊಳಿಸಿ ಮುಜುಗರಕ್ಕೀಡಾಗಿದ್ದ ರಾಜ್ಯ ಸರ್ಕಾರ, ಈಗ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದೆ.

    ಸಿಎಂ ಸೂಚನೆ ಮೇರೆಗೆ ಬುಧವಾರ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕೇಂದ್ರದಿಂದ ನೀಡುವ ಅಕ್ಕಿ ಗೋಧಿ ಕಡಿತಗೊಂಡಿರುವ ಬಗ್ಗೆ ಶ್ರೀಗಳು ಪತ್ರ ಬರೆದಿದ್ದರು. ಈ ವಿಚಾರವಾಗಿ ಮಂಗಳವಾರ ಸಿಎಂ ತಕ್ಷಣದಿಂದಲೇ ಉಚಿತವಾಗಿ ಅಕ್ಕಿ, ಗೋಧಿ ನೀಡಲು ನಿರ್ಧರಿಸಿದ್ದು ಅಗತ್ಯ ಅಕ್ಕಿ ಹಾಗೂ ಗೋಧಿಯನ್ನ ಮಠಕ್ಕೆ ಸರಬರಾಜು ಮಾಡ್ತೀವಿ ಎಂದು ಸಮರ್ಥಿಸಿಕೊಂಡಿದ್ದಾರೆ.

    ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾದ ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋಧಿ ಕಡಿತಗೊಂಡ ಹಿನ್ನೆಲೆಯಲ್ಲಿ ಸಾಕಷ್ಟು ಮುಜುಗರಕ್ಕೊಳಗಾಗಿದ್ದ ರಾಜ್ಯ ಸರ್ಕಾರ ಇದೀಗ ಉಚಿತವಾಗಿ ಅಕ್ಕಿ ಗೋಧಿ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಸಚಿವೆ ಶಶಿಕಲಾ ಜೊಲ್ಲೆ, ಸಿದ್ದಲಿಂಗ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ರು. ಶ್ರೀ ಮಠಕ್ಕೆ ಬೇಕಾಗಿರುವ 755 ಕ್ವಿಂಟಾಲ್ ಅಕ್ಕಿ, 350 ಕ್ವಿಂಟಾಲ್ ಗೋಧಿಯನ್ನ ಪ್ರತಿ ತಿಂಗಳು ಉಚಿತವಾಗಿ ನೀಡಲಾಗುವುದು ಎಂದರು. ಇದನ್ನೂ ಓದಿ: ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಶಶಿಕಲಾ ಜೊಲ್ಲೆ, ಸಿಎಂ ಗರಂ ಆಗಿಲ್ಲ, ಏನೂ ಆಗಿಲ್ಲ. ಶ್ರೀಗಳು ಒಂದು ಪತ್ರ ಬರೆದಿದ್ದರು. ಫೈಲ್ ತರಿಸಿಕೊಂಡಿದ್ದೇನೆ. ಪತ್ರ ನಾನು ನೋಡಿ ಪ್ರಕ್ರಿಯೆ ಆರಂಭಿಸಿದ್ದೆ, ಅಷ್ಟರಲ್ಲೇ ನಿನ್ನೆ ಸಚಿವ ಸಂಪುಟದಲ್ಲಿ ಸಿಎಂ ಅನುಮತಿ ಕೊಟ್ಟರು. ಕೇಂದ್ರದಿಂದ ಸ್ಥಗಿತಗೊಂಡರೂ ರಾಜ್ಯದಿಂದ ಅಕ್ಕಿ ಸಿಗಲಿದೆ ಎಂಬ ವಿಶ್ವಾಸ ಶ್ರೀಗಳು ಇಟ್ಟುಕೊಂಡಿದ್ದರು. ಅದನ್ನ ಶ್ರೀಗಳು ನನ್ನ ಬಳಿ ಹೇಳಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ನಾನು ಏಕೈಕ ಮಹಿಳಾ ಸಚಿವೆ, ಸಾಮಾನ್ಯ ಕಾರ್ಯಕರ್ತಳಾಗಿ ದುಡಿದಿದ್ದೆನೆ. ಹಾಗಾಗಿ ಸಚಿವ ಸಂಪುಟದಿಂದ ನನ್ನನ್ನು ಕೈ ಬಿಡಲ್ಲ, ನಾನು ಮುಂದುವರಿಯುತ್ತೆನೆ ಎಂಬ ವಿಶ್ವಾಸ ಇದೆ ಹೇಳಿದರು.

  • ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ

    ತುಮಕೂರು: ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.

    ಖಾದರ್ ಆರೋಪ ಏನು?:
    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಚಿವ ಯು.ಟಿ.ಖಾದರ್ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದ್ದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದ್ದರು.

    ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದ್ದರು.

  • ಬಿಜೆಪಿಯಿಂದ ಸಿದ್ದಗಂಗಾ ಮಠದ ಊಟಕ್ಕೂ ಕತ್ತರಿ: ಯು.ಟಿ.ಖಾದರ್ ಆರೋಪ

    ಬಿಜೆಪಿಯಿಂದ ಸಿದ್ದಗಂಗಾ ಮಠದ ಊಟಕ್ಕೂ ಕತ್ತರಿ: ಯು.ಟಿ.ಖಾದರ್ ಆರೋಪ

    – 3 ತಿಂಗಳಿಂದ ಮಠಗಳಿಗೆ ನೀಡುತ್ತಿದ್ದ ಅಕ್ಕಿ, ಗೋಧಿ ಸ್ಟಾಪ್

    ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದ ಊಟಕ್ಕೂ ರಾಜ್ಯ ಸರ್ಕಾರ ಕತ್ತರಿ ಹಾಕಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದರು.

    ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದರು.

    ಇದೇ ವೇಳೆ ಬೀದರ್ ಶಾಹೀನ್ ಕಾಲೇಜ್ ಮೇಲೆ ದೇಶದ್ರೋಹ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯದರ್ಶಿ ಹೇಳಿದರು ಅಂತ ಇಂತ ಕೆಲಸ ಮಾಡಿರುವುದು ಸರಿಯಲ್ಲ. ಪೊಲೀಸರು ದೇಶದ್ರೋಹ ಕೇಸ್ ಹಾಕಿದ್ದು ಹಾಗೂ ಮಕ್ಕಳು, ಶಿಕ್ಷಕರನ್ನು ವಿಚಾರಣೆಗೆ ಗುರಿಪಡಿಸಿದ್ದು ಸರಿಯಲ್ಲ. ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದರು.

    ಅಧಿಕಾರಿಗಳು ರಾಜಕೀಯ ಒತ್ತಡ, ವರ್ಗಾವಣೆಗೆ ಮಣಿಯಬಾರದು. ರಾಜಕೀಯ ಒತ್ತಡಕ್ಕೆ ಮಣೆದು ಸಮಾಜಕ್ಕೆ ಮಾರಕಾಗುವ ನಿರ್ಧಾರ ತಗೆದುಕೊಳ್ಳಬಾರದು. ಮಂಗಳೂರು ಬಾಂಬ್ ಇಟ್ಟ ಪ್ರಕರಣದ ರೂವಾರಿ ಆದಿತ್ಯ ರಾವ್ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯವರ ಮೇಲೆ ಜನರಿಗೆ ನಂಬಿಕೆಯೇ ಇಲ್ಲ. ಬಾಂಬ್ ಇಟ್ಟವರಿಗೆ ಸ್ಥಾನಮಾನ ಕೊಡುವ ಕೆಲಸ ನಡೆಯುತ್ತಿದೆ. ಶಾಸಕರ ಭವನಕ್ಕೆ ಬಾಂಬ್ ಇಟ್ಟವರಿಗೆ ಬಿಜೆಪಿ ವಿಧಾನಸಭಾ ಚುನಾವಣೆ ಟಿಕೆಟ್ ಕೊಡುತ್ತೆ. ಸಂಸದೆ ಪ್ರಜ್ಞಾಸಿಂಗ್ ಬಗ್ಗೆಯೂ ಮೃದು ಧೋರಣೆ ತಾಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಸಂಸದ ಅನಂತಕುಮಾರ್ ಹೆಗ್ಡೆ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅವರಿಂದ ಇಂತಹ ಹೇಳಿಕೆ ಬರುತ್ತಲೇ ಇವೆ. ಸಂವಿಧಾನದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇಂತವರ ಮೇಲೆ ಯಾಕೆ ಕೇಸ್ ಆಗುತ್ತಿಲ್ಲ? ಇದನ್ನು ನೋಡಿದರೆ ಬಿಜೆಪಿಯವರ ಹಸ್ತಕ್ಷೇಪವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗಾಂಧೀಜಿ ಅವರ ಬಗ್ಗೆ ಬಿಜೆಪಿ ಕ್ಲಿಯರ್ ಸ್ಟಾಂಡ್ ಏನು? ಬಗ್ಗೆ ನಿಮ್ಮ ಸ್ಟ್ಯಾಂಡ್ ಏನು ಎಂದು ಪ್ರಶ್ನಿಸಿದರು.