Tag: ಗೋಕಾಕ್

  • ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

    ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಇಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಸೋದರರಿಬ್ಬರು ಕಣಕ್ಕೆ ಇಳಿದಿರೋದರಿಂದ ಗೋಕಾಕ್ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ. ಇಂದು ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಮತ್ತು ಜೆಡಿಎಸ್ ನಿಂದ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ. ಸೋದರ ಲಖನ್ ಜಾರಕಿಹೊಳಿ ಜೊತೆ ಬಂದ ಸತೀಶ್ ಜಾರಕಿಹೊಳಿ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.

    ಒಂದು ವೇಳೆ ಲಖನ್ ಜಾರಕಿಹೊಳಿ ನಾಮಪತ್ರ ತಿರಸ್ಕøತವಾದ್ರೆ, ಸತೀಶ್ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ತಂತ್ರ ರಚಿಸಿಕೊಂಡಿದೆ ಎನ್ನಲಾಗುತ್ತಿದೆ. ಇತ್ತ ಮೂವರ ಅಭ್ಯರ್ಥಿಗಳ ಹೆಸರಿನ ಕೊನೆಗೆ ‘ಜಾರಕಿಹೊಳಿ’ ಎಂದು ಇರೋದರಿಂದ ಮತದಾರರು ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸಹೋದರ ಲಖನ್ ಜೊತೆ ಸತೀಶ್ ಅವರು ನಾಮಪತ್ರ ಸಲ್ಲಿಕೆ ಮಾಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಮಂಡ್ಯ ಲೋಕಸಭಾ ಅಖಾಡದಲ್ಲಿ ಒಂದೇ ಹೆಸರಿನ ನಾಲ್ವರು ಅಭ್ಯರ್ಥಿಗಳು

  • ಗೋಕಾಕ್ ರಾಜಕೀಯಕ್ಕೆ ಎಚ್‍ಡಿಕೆ ಎಂಟ್ರಿ- ಅಶೋಕ್ ಪೂಜಾರಿಗೆ ನೇರ ಬೆಂಬಲಕ್ಕೆ ಪ್ಲ್ಯಾನ್

    ಗೋಕಾಕ್ ರಾಜಕೀಯಕ್ಕೆ ಎಚ್‍ಡಿಕೆ ಎಂಟ್ರಿ- ಅಶೋಕ್ ಪೂಜಾರಿಗೆ ನೇರ ಬೆಂಬಲಕ್ಕೆ ಪ್ಲ್ಯಾನ್

    ಬೆಳಗಾವಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ನಡೆಯುತ್ತಿವೆ. ಮೈತ್ರಿ ಸರ್ಕಾರ ಪತನಗೊಳಿಸಿದ ಸೇಡನ್ನು ತೀರಿಸಿಕೊಳ್ಳಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೋಕಾಕ್ ಉಪ ಚುನಾವಣೆಗೆ ಎಂಟ್ರಿ ಕೊಟ್ಟಿದ್ದಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೊಂದು ಪ್ರಭಲವಾಗಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಅಸಮಾಧಾನಿತರಿಗೆ ಬಲೆ ಬೀಸಿದೆ. ಬಿಜೆಪಿಯು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಗೋಕಾಕ್ ಕ್ಷೇತ್ರದ ಟಿಕೆಟ್ ನೀಡಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಅವರು ಅಸಮಾಧಾನ ಹೊರ ಹಾಕಿದ್ದು, ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.

    ಈ ನಡುವೆ ಅಶೋಕ್ ಪೂಜಾರಿ ಅವರನ್ನು ಪಕ್ಷಕ್ಕೆ ಸೆಳೆಯಲು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ ಅಶೋಕ್ ಪೂಜಾರಿ ಪಕ್ಷಕ್ಕೆ ಸೇರದೆ ಸ್ವತಂತ್ರವಾಗಿ ಸ್ಪರ್ಧೆಗೆ ನಿಲ್ಲಲು ಮುಂದಾದರೂ ನೆರ ಬೆಂಬಲ ನೀಡಲು ಜೆಡಿಎಸ್ ಪ್ಲ್ಯಾನ್ ರೂಪಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಗೋಕಾಕ್ ಕ್ಷೇತ್ರ ಉಪಚುನಾವಣೆ ತೀವ್ರ ರಂಗೇರಿದ್ದು, ಸೋಮವಾರ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ನಡುವೆ ಜೆಡಿಎಸ್ ಅಶೋಕ್ ಪೂಜಾರಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಬಹುದು. ಹೀಗಾಗಿ ಗೋಕಾಕ್‍ನಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಅವರು ಸಹೋದರ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಜೊತೆ ಸೇರಿ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 9ಕ್ಕೆ ಗೋಕಾಕ್ ನಗರದ ಕೊಳವಿ ಹನುಮಂತ ದೇವಸ್ಥಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

    ಇತ್ತ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಬೆಳಗ್ಗೆ 10ಕ್ಕೆ ಎನ್‍ಎಸ್‍ಎಫ್ ಅತಿಥಿ ಗೃಹದಿಂದ ಮೆರವಣಿಗೆ ಮೂಲಕ ಕೊಳವಿ ಹಣುಮಂತ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ರಮೇಶ ಜಾರಕಿಹೊಳಿ ಅವರಿಗೆ ಸಹೋದರ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಾಥ್ ನೀಡಲಿದ್ದಾರೆ.

    ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ ಸೋಮವಾರವೇ ಅಖಾಡ್ ಪ್ರವೇಶ ಮಾಡಲಿದ್ದಾರೆ. ಬಿಜೆಪಿ ನಡೆಸಿದ ಸಂಧಾನ ಎಲ್ಲಾ ವಿಫಲಗೊಂಡಿದ್ದು, ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಶೋಕ್ ಪೂಜಾರಿಗೆ ಸ್ವತಃ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

  • ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

    ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

    – ಅಥಣಿಯಿಂದ ಗೋಕಾಕ್‍ಗೆ ಹೆಬ್ಬಾಳ್ಕರ್ ಶಿಫ್ಟ್

    ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಭಾರೀ ಧೂಳೆಬ್ಬಿಸಿ ಸಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೆ ಬಿಗ್ ವಾರ್ ಆರಂಭವಾಗಿದೆ.

    ಬಿಜೆಪಿ ಸೇರಿದ ಬಳಿಕ ಬಹಿರಂಗ ಭಾಷಣ ಮಾಡಿದ್ದ ರಮೇಶ್ ಮಾತುಗಳು ಲಕ್ಷ್ಮಿಯನ್ನು ಕೆರಳಿಸಿವೆ. ಹೀಗಾಗಿ ನೇರವಾಗಿ ಗೋಕಾಕ್ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಅಥಣಿ ಕ್ಷೇತ್ರದಿಂದ ಗೋಕಾಕ್ ಕ್ಷೇತ್ರಕ್ಕೆ ತಮ್ಮ ಉಸ್ತುವಾರಿಯನ್ನು ಬದಲಿಸಿಕೊಂಡ ಲಕ್ಷ್ಮಿ, ಉಪಚುನಾವಣೆಯನ್ನು ಗಂಭೀರವಾಗಿ ಸ್ವಿಕರಿಸಿದ್ದಾರೆ.

    ಕುಂದಾನಗರಿಯ ಬೆಳಗಾವಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ (ಪಿಎಲ್‍ಡಿ) ಬ್ಯಾಂಕ್ ವಿಚಾರವಾಗಿ ಬಡಿದಾಡಿಕೊಂಡ ಗೋಕಾಕ್‍ನ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣದ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಹಾವು-ಮುಂಗುಸಿಯಂತಾಗಿದ್ದಾರೆ. ಇದರ ಜೊತೆಗೆ ಇದೀಗ ಸಹೋದರರ ಸವಾಲ್ ಕೂಡ ಸೇರಿಕೊಂಡಿದೆ.

    ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಬೆಳೆಯುತ್ತಾ ದಾಯಾದಿಗಳು ಅನ್ನೋದಕ್ಕೆ ತಾಜಾ ನಿದರ್ಶನ ಗೋಕಾಕ್ ಆಗಿದೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಂಪ್ ಆಗಿರೋ ರಮೇಶ್ ಜಾರಕಿಹೊಳಿ ವಿರುದ್ಧ ಇದೀಗ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಈ ಮೂಲಕ, ರಮೇಶ್‍ಗೆ ಈ ಬಾರಿ ಶತಾಯಗತಾಯ ಸೋಲುಣಿಸಲೇಬೇಕು ಅನ್ನೋ ಕಾಂಗ್ರೆಸ್ಸಿನ ದ್ವೇಷ ಮತ್ತಷ್ಟು ತೀವ್ರವಾಗಿದೆ.

    ಸತೀಶ್ ಜಾರಕಿಹೊಳಿಯ ಸಹೋದರನೂ ಆಗಿರೋ ಲಖನ್‍ಗೆ ಶಕ್ತಿ ತುಂಬೋಕೆ, ರಮೇಶ್ ಮಟ್ಟ ಹಾಕೋಕೆ ಕಾಂಗ್ರೆಸ್ ಲಕ್ಷ್ಮಿ ಹೆಬ್ಬಾಳ್ಕರ್ ಮೂಲಕ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ. ಅಥಣಿಯ ಚುನಾವಣಾ ಸಹ ಉಸ್ತುವಾರಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಲಖನ್‍ಗೆ ಟಿಕೆಟ್ ಘೋಷಿಸಿರುವ ಕೊನೇ ಗಳಿಗೆಯಲ್ಲಿ ಗೋಕಾಕ್‍ಗೆ ಶಿಫ್ಟ್ ಮಾಡಲಾಗಿದೆ. ಇದರಿಂದಾಗಿ, ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಎನ್ನುವ ರಮೇಶ್ ಮತ್ತು ಲಕ್ಷ್ಮೀ ವಿರೋಧಿಗಳಾಗಿ ಗೋಕಾಕ್ ಮತದಾರರ ಬಳಿ ಹೋಗಲಿದ್ದಾರೆ.

    ಒಂದು ಕಾಲದಲ್ಲಿ ಒಡನಾಡಿಗಳಂತಿದ್ದ ರಮೇಶ್-ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ದ್ವೇಷದ ಕಿಚ್ಚೊತ್ತಿಸಿದ್ದು ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಈ ವೇಳೆ, ಪರಸ್ಪರ ಕೆಸರೆರಚಿಕೊಂಡ ಉಭಯ ನಾಯಕರು ವೈಯಕ್ತಿಕ ನಿಂದನೆ ಮಾಡ್ಕೊಂಡಿದ್ದರು.

    ಒಟ್ಟಿನಲ್ಲಿ ಈ ಬಾರಿಯ ಗೋಕಾಕ್ ಎಲೆಕ್ಷನ್ ಬಿಜೆಪಿ-ಕಾಂಗ್ರೆಸ್ ಅನ್ನೋ ಪಕ್ಷಗಳ ಹೋರಾಟಕ್ಕಿಂತ ರಮೇಶ್ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಲಖನ್, ಸತೀಶ್ ಜಾರಕಿಹೊಳಿ ಎಂಬಂತಾಗಿದೆ. ಒಟ್ಟಿನಲ್ಲಿ ಗೋಕಾಕ್ ರಣಕಣ ಭಾರೀ ಕುತೂಹಲ ಕೆರಳಿಸಿದೆ.

  • ಬೆಳಗಾವಿ ಪಾಲಿಟಿಕ್ಸ್‌ಗೆ ಬಿಗ್ ಟ್ವಿಸ್ಟ್- ಗೋಕಾಕ್ ಉಪಸಮರ ಅಖಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ ಪಾಲಿಟಿಕ್ಸ್‌ಗೆ ಬಿಗ್ ಟ್ವಿಸ್ಟ್- ಗೋಕಾಕ್ ಉಪಸಮರ ಅಖಾಡಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್

    – ‘ತೋಳ ಅಲ್ಲ, ಹುಲಿ’ಗೆ ರಿಯಲ್ ಟೆಸ್ಟ್

    ಬೆಳಗಾವಿ: ಗೋಕಾಕ್ ಕ್ಷೇತ್ರದ ಉಪಸಮರದ ಕಾವು ಜೋರಾಗಿದ್ದು, ಕಾಂಗ್ರೆಸ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಅಥಣಿ ಕ್ಷೇತ್ರದ ಚುನಾವಣಾ ಜವಾಬ್ದಾರಿ ವಹಿಸಿಕೊಂಡಿದ್ದ ಹೆಬ್ಬಾಳ್ಕರ್ ಅವರು ಗೋಕಾಕ್ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ನೇರ ನೇರ ವಾಗ್ದಾಳಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಕಾಂಗ್ರೆಸ್‍ನಲ್ಲಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಷರತ್ತು ವಿಧಿಸಿದ್ದಾಗಿ ಹೇಳಿದ್ದರು. ಹೆಬ್ಬಾಳ್ಕರ್ ಅವರ ತೋಳ ಬಂತು ತೋಳ ಹೇಳಿಕೆಗೆ ತಿರುಗೇಟು ನೀಡಿ, ‘ಹುಲಿ ಬಂತು ಹುಲಿ’ ಎಂದು ಟಾಂಗ್ ನೀಡಿದ್ದರು.

    ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬೆನ್ನಲ್ಲೇ ನೇರ ನೇರ ಸೆಡ್ಡು ಹೊಡೆಯಲು ಸಿದ್ಧತೆ ನಡೆಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈ ಹಿಂದೆ ತಮಗೆ ನೀಡಲಾಗಿದ್ದ ಅಥಣಿ ಕ್ಷೇತ್ರದ ಜವಾಬ್ದಾರಿಯನ್ನು ತಿರಸ್ಕರಿಸಿ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಗೋಕಾಕ್‍ನಲ್ಲಿ ಠಿಕಾಣಿ ಹೂಡಿ ಕಾಂಗ್ರೆಸ್ ಪಕ್ಷ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಸದ್ಯದ ಬೆಳವಣಿಗೆಯಿಂದ ಗೋಕಾಕ್ ಚುನಾವಣೆ ಮತ್ತಷ್ಟು ರಂಗೇರುವ ನಿರೀಕ್ಷೆ ಇದ್ದು, ಯಾರಿಗೆ ಗೆಲುವು ಲಭಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ನಡೆಗೆ ಪ್ರಮುಖ ಕಾರಣವೂ ಇದ್ದು, ಈ ಹಿಂದೆ ಹೆಬ್ಬಾಳ್ಕರ್ ಅವರು ಅಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪ್ರಕರಣದ ಕುರಿತು ತೀರ್ಪು ನೀಡುತ್ತಿದಂತೆ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದರು. ವಿರೋಧಿಗಳು ಪದೇ ಪದೇ ತಮ್ಮ ಹೆಸರನ್ನು ಪ್ರಸ್ತಾಪ ಮಾಡುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದ ಹೆಬ್ಬಾಳ್ಕರ್ ಅವರು, ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ನೀಡಲು ಗೋಕಾಕ್ ಉಸ್ತುವಾರಿಯನ್ನು ದೆಹಲಿ ನಾಯಕರಿಂದಲೇ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇತ್ತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಲಖನ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು, ಸತೀಸ್ ಜಾರಕಿಹೊಳಿ ಅವರೊಂದಿಗೆ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಹೆಬ್ಬಾಳ್ಕರ್ ಅವರು ಹೇಗೆ ನಿರ್ವಹಿಸಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ.

    ಇತ್ತ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಸೇರಿದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ, ಬಿಜೆಪಿ ಅಸಮಾಧಾನಿತ ಅಶೋಕ್ ಪೂಜಾರಿ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ. ಅಲ್ಲದೇ ಮನವೊಲಿಕೆಯಲ್ಲಿ ಯಶಸ್ವಿಯಾಗಿದ್ದು, ತಮ್ಮ ಅಂತಿಮ ನಿರ್ಧಾರ ಹೇಳಲು ಭಾನುವಾರದ ವರೆಗೂ ಸಮಯವನ್ನು ನೀಡಿ ಎಂದು ಅಶೋಕ್ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಬೆಳಗಾವಿ: ಕುಂದಾ ನಗರಿಯ ಗೋಕಾಕ್ ಉಪ ಸಮರ ಕಾವೇರಿದೆ. ಬಿಜೆಪಿ ಸೇರಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇವತ್ತು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಗೊಂದಲ ಮುಂದುವರಿದಿದೆ. ರಮೇಶ್ ವಿರುದ್ಧ ಅಖಾಡ ಸಿದ್ಧಗೊಳಿಸಿಕೊಂಡಿರುವ ಲಖನ್ ಮತ್ತು ಕಾಂಗ್ರೆಸ್ ಟಿಕೆಟ್‍ಗಾಗಿ ಕಾದಿರೋ ಬಿಜೆಪಿಯ ಅಶೋಕ್ ಪೂಜಾರಿಗೆ ಇಲ್ಲೂ ಟಿಕೆಟ್ ತಪ್ಪಿದ ಟೆನ್ಷನ್. ಹಾಗಾಗಿ ಇಬ್ಬರು ನಾಯಕರು ಸಭೆಗಳನ್ನು ನಡೆಸುತ್ತಿದ್ದಾರೆ.

    ಇಂದು ಗೋಕಾಕ್‍ನ ಕೇಸರಿ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮನೆ ಮುಂಭಾಗ ಮೈದಾನದಲ್ಲಿ ಸಂಕಲ್ಪ ಸಮಾವೇಶ ಆಯೋಜಿಸಿದ್ದಾರೆ. ಇದಕ್ಕಾಗಿ ಎಲ್ಲಾ ಗ್ರಾಮದ ಪಂಚಾಯಿತಿ ಸದಸ್ಯರು ತಲಾ 10ರಿಂದ 15 ಸಾವಿರ ಕಾರ್ಯಕರ್ತರನ್ನು ಸೇರಿಸುವ ಹೊಣೆ ಒಪ್ಪಿಸಿದ್ದಾರೆ.

    ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆಯಾದ್ರೆ, ಕಾಂಗ್ರೆಸ್‍ನಲ್ಲಿ ಇನ್ನೂ ಟಿಕೆಟ್ ಗೊಂದಲ ಮಾತ್ರ ಬಗೆ ಹರಿಯುತ್ತಿಲ್ಲ. ಅಶೋಕ್ ಪೂಜಾರಿಗೆ ಟಿಕೆಟ್ ಕೈತಪ್ಪಿದ್ದು ಈ ಕಾರಣಕ್ಕಾಗಿ ದಿಢೀರನೇ ಶನಿವಾರ ಕಾರ್ಯಕರ್ತರ ಸಭೆ ಕರೆದಿದ್ದಾರೆ.

    ಅಶೋಕ್ ಪೂಜಾರಿಗೆ ಟಿಕೆಟ್ ಕೊಡದಂತೆ ಈಗಾಗಲೇ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವರಿಷ್ಠರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ,, ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡೋದು ಬೇಡ ಡಿಕೆಶಿ-ಲಕ್ಷ್ಮಿ ಹೆಬ್ಬಾಳ್ಕರ್ ಅಂಡ್ ಟೀಮ್ ವಿರೋಧ ಮಾಡುತ್ತಿದೆದೆ. ಸಿದ್ದರಾಮಯ್ಯರನ್ನು ಭೇಟಿಯಾಗಿರೋ ಸತೀಶ್‍ ಸಹೋದರ ಲಖನ್‍ಗೆ ಟಿಕೆಟ್ ಕನ್ಫರ್ಮ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

  • ಬೆಳಗಾವಿ ಪಾಲಿಟಿಕ್ಸ್‌ಗೆ ಮತ್ತೆ ಡಿಕೆಶಿ ಎಂಟ್ರಿ- ರೋಚಕ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಾ ಗೋಕಾಕ್?

    ಬೆಳಗಾವಿ ಪಾಲಿಟಿಕ್ಸ್‌ಗೆ ಮತ್ತೆ ಡಿಕೆಶಿ ಎಂಟ್ರಿ- ರೋಚಕ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಾ ಗೋಕಾಕ್?

    ಬೆಂಗಳೂರು: ಜಿಲ್ಲೆಯ ಅತೃಪ್ತ ಶಾಸಕರ ಅಸಮಾಧಾನ ಬೆಂಕಿನೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯ ಕಾರಣ. ಇಷ್ಟು ದಿನ ಕೊಂಚ ಶಾಂತಗೊಂಡಿದ್ದ ಕ್ಷೇತ್ರಕ್ಕೆ ಈಗ ಮತ್ತೆ ಬಂಡೆ ಕಾಲಿಡೋಕೆ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗಿದೆ.

    ಹೌದು. ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಅಂದರೇನೆ ಈಗ ರಾಜಕಾರಣಿಗಳು ಭಯಬೀಳುತ್ತಾರೆ. ಮೈತ್ರಿ ಸರ್ಕಾರ ಪತನಕ್ಕೆ, ಶಾಸಕರ ಮುನಿಸು ಸ್ಫೋಟಗೊಳ್ಳೋಕೆ ಮುಖ್ಯ ಕಾರಣ ಬೆಳಗಾವಿ ಪಾಲಿಟಿಕ್ಸ್ ಎನ್ನಲಾಗುತ್ತಿದೆ.

    ಹಿಂದೆ ಕನಕಪುರ ಬಂಡೆ ಬೆಳಗಾವಿ ರಾಜಕಾರಣದಲ್ಲಿ ಎಂಟ್ರಿಯಾಗಿದ್ದಕ್ಕೆ ಸಾಹುಕಾರರು ಸಿಡಿದೆದ್ದಿದ್ದರು. ಪರಿಣಾಮ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವೇ ಪತನವಾಯ್ತು. ನಂತರ ಡಿಕೆಶಿ ಕೂಡ ತಣ್ಣಗಾಗಿದ್ದರು. ಆದರೆ ಇಡಿಯಿಂದ ಬಂಧನವಾಗಿ ಜೈಲಿಗೆ ಹೋಗಿ ಬಂದ ಬಳಿಕ ಡಿಕೆ ಎಲ್ಲೆಡೆ ಶಕ್ತಿಪ್ರದರ್ಶಿಸ್ತಿದ್ದಾರೆ. ಮೊದಲನೆಯದಾಗಿ ಟಗರು ಅಡ್ಡಾದಲ್ಲೇ ಡಿಚ್ಚಿಕೊಟ್ಟಿದ್ದಾರೆ. ಈಗ ಡಿಕೆ ಕಣ್ಣು ಮತ್ತೆ ಕುಂದಾನಗರಿಯತ್ತ ಹೊರಳಿದೆ.

    ಈ ಅನುಮಾನಕ್ಕೆ ಕಾರಣವಾಗಿದ್ದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಭೇಟಿ. ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್‍ಗೆ ಬಿಜೆಪಿ ಮಣೆ ಹಾಕಲು ಮುಂದಾಗಿರೋದನ್ನು ವಿರೋಧಿಸಿ ರಾಜು ಕಾಗೆ ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್‍ನತ್ತ ಚಿತ್ತ ಹರಿಸಿದ್ದಾರೆ. ಇದರ ಭಾಗವಾಗಿ ಭಾನುವಾರ ರಾಜು ಕಾಗೆ, ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅಂದು ಬೆಳಗಾವಿ ರಾಜಕಾರಣದಲ್ಲಿ ತಲೆಹಾಕಿದ್ದಕ್ಕೆ ಸಾಹುಕಾರರು ಸಮರ ಸಾರಿದ್ದರು. ಆದರೆ ಇಷ್ಟು ದಿನ ಸೈಲೆಂಟ್ ಆಗಿ, ಈಗ ಎಲ್ಲೆಡೆ ಓಡಾಡುತ್ತಿರುವ ಡಿಕೆಶಿ ಗೋಕಾಕ್ ಪಾಲಿಟಿಕ್ಸ್‍ನಲ್ಲಿ ಮತ್ತೆ ಮೂಗು ತೂರಿಸ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಒಂದೆಡೆ, ರಮೇಶ್ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿ ಕಣಕ್ಕಿಳಿಸಲು ಸಿದ್ದು ಆಪ್ತ ಸತೀಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಈ ಹೊತ್ತಲ್ಲೇ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಜೆಪಿಯ ಅಶೋಕ್ ಪೂಜಾರಿ, ಡಿಕೆಶಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಶೋಕ್ ಪೂಜಾರಿ ಪರ ಡಿಕೆ ಲಾಬಿ ನಡೆಸುವ ಸಂಭವವೂ ಇದೆ.

    ಇದರ ಬೆನ್ನಲ್ಲೇ ಮತ್ತೆ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿಯೇ ಗುಡುಗಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ. ಗೋಕಾಕ್‍ನಲ್ಲಿ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಪಕ್ಕಾ ಆಗಿದೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆ ಆಗಲಿದೆ. ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಅಶೋಕ್ ಪೂಜಾರಿ ಕಾಂಗ್ರೆಸ್‍ಗೆ ಬರೋದಕ್ಕೆ ನಮ್ಮ ಬೆಂಬಲ ಇಲ್ಲ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಲಖನ್ ಬಿಟ್ಟು ಹೊರಗಿನವರು ಬಂದು ಗೋಕಾಕ್‍ನಲ್ಲಿ ಚುನಾವಣೆ ಮಾಡೋದು ಕಷ್ಟ ಎಂದಿದ್ದಾರೆ.

    ಸದ್ಯ ಬೆಳಗಾವಿ ಪಾಲಿಟಿಕ್ಸ್ ಮತ್ತೆ ಸದ್ದು ಮಾಡ್ತಿದ್ದು, ಇಷ್ಟು ದಿನ ಕೂಲ್ ಆಗಿದ್ದ ಕುಂದಾನಗರಿ ರಾಜಕಾರಣದಲ್ಲಿ ಈಗ ಬಂಡೆ ಎಂಟ್ರಿಯಾಗುತ್ತಾರೆ ಎನ್ನಲಾಗಿದೆ.

  • ರಂಗೇರಿದ ಗೋಕಾಕ್ ಉಪಚುನಾವಣಾ ಕಣ- ಜಾರಕಿಹೊಳಿ ಸಹೋದರರ ವಾಕ್ಸಮರ

    ರಂಗೇರಿದ ಗೋಕಾಕ್ ಉಪಚುನಾವಣಾ ಕಣ- ಜಾರಕಿಹೊಳಿ ಸಹೋದರರ ವಾಕ್ಸಮರ

    ಬೆಳಗಾವಿ: ಜಿಲ್ಲೆಯ ಗೋಕಾಕ್ ಉಪಚುನಾವಣೆ ಅಖಾಡ ಮತ್ತಷ್ಟು ರಂಗೇರಿದ್ದು, ಜಾರಕಿಹೊಳಿ ಸಹೋದರ ನಡುವಿನ ವಾಕ್ಸಮರ ಜೋರಾಗಿದೆ. ಅಳಿಯ-ಮಾವನ ವಿರುದ್ಧ ಹೋರಾಟ ನಿರಂತರ, ಗೋಕಾಕ್ ಭ್ರಷ್ಟಾಚಾರದ ವಿಡಿಯೋ ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಕಳೆದು ಹೋಗಿರುವ ವಸ್ತು ಬಗ್ಗೆ ಹೇಳುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ್ದಾರೆ.

    ಸಹೋದರ ಸತೀಶ್ ಅವರ ಮಾತಿಗೆ ತಿರುಗೇಟು ನೀಡಿರುವ ರಮೇಶ್, ಸತೀಶನ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡುತ್ತೇನೆ. ಸತೀಶ್ ಆಪ್ತರನ್ನು ಕರೆದು ಕೇಳಿದ್ದೇನೆ. ಅವರ ಪ್ರಕಾರ ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು. ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಟಿಪ್ಪಣಿ ಮಾಡಬಾರದು. ಅವನಿಗೆ ಸ್ವಲ್ಪ ಮೈಂಡ್ ಔಟ್ ಆಗಿದೆ. ಧಾರವಾಡ ಹುಚ್ಚಾಸ್ಪತ್ರೆಗೆ ಕಳಿಸಬೇಕು ಎಂದರು.

    ಇತ್ತ ಸಹೋದರ ಲಖನ್ ಜಾರಕಿಹೊಳಿ ಅವರು ಕೂಡ ರಮೇಶ್ ವಿರುದ್ಧ ಕಿಡಿಕಾರಿದ್ದು, ಅವರ ಗೇಮ್ ಗೊತ್ತಿದೆ. ಅದು ಗಿಮಿಕ್, ನಾಟಕ ಆಡುತ್ತಿದ್ದಾರೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮೊನ್ನೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಅಳಿಯ ಸೋತಿದ್ದು, ಈ ಬಾರಿ ಜನ ಎದ್ದು ಕುಳಿತ್ತಿದ್ದಾರೆ. ನ.5ರ ವರೆಗೂ ಬಹಳ ನಾಟಕ ಮಾಡುತ್ತಾರೆ. ನನ್ನ ಪ್ರೀತಿಯ ಸಹೋದರನ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಗಿಮಿಕ್ ಮಾಡುತ್ತಾರೆ. ನಾನೂ 25 ವರ್ಷ ರಮೇಶ್ ಪರವಾಗಿ ಚುನಾವಣೆ ಮಾಡಿದ್ದು, ಈ ರೀತಿಯ ಹೇಳಿಕೆಗಳು ಕೇವಲ ನಾಟಕವಷ್ಟೇ ಎಂದರು.

  • ಮಕ್ಕಳೊಂದಿಗೆ ಮೀನು ಹಿಡಿದು ಸತೀಶ್ ಜಾರಕಿಹೊಳಿ ಎಂಜಾಯ್

    ಮಕ್ಕಳೊಂದಿಗೆ ಮೀನು ಹಿಡಿದು ಸತೀಶ್ ಜಾರಕಿಹೊಳಿ ಎಂಜಾಯ್

    ಬೆಳಗಾವಿ: ಗೋಕಾಕ್ ಉಪಚುನಾವಣೆ ಪ್ರಚಾರದ ಟೆನ್ಷನ್ ನಡುವೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಕ್ಕಳೊಂದಿಗೆ ಮೀನು ಹಿಡಿದು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

    ಜಿಲ್ಲೆಯ ಗೋಕಾಕ್ ನಗರದ ಯೋಗಿ ಕೊಳ್ಳದಲ್ಲಿ ಸತೀಶ್ ಜಾರಕಿಹೊಳಿ ಮೀನು ಹಿಡಿದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಉಪಚುನಾವಣೆ ಹಿನ್ನೆಲೆ ಗೋಕಾಕ್ ಕ್ಷೇತ್ರದಲ್ಲಿ ಸತೀಶ್ ಅವರು ನಿರಂತರ ಸುತ್ತಾಟದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ದೀಪಾವಳಿ ಹಬ್ಬ ನಿಮಿತ್ತ ತಮ್ಮ ಓಡಾಟಕ್ಕೆ ಸತೀಶ್ ಕೊಂಚ ಬ್ರೇಕ್ ಕೊಟ್ಟಿದ್ದಾರೆ. ಫುಲ್ ರಿಲ್ಯಾಕ್ಸ್ ಆಗಿ ಮಕ್ಕಳ ಜೊತೆ ಸೇರಿ ಮೀನು ಹಿಡಿದು ಖುಷಿಪಟ್ಟಿದ್ದಾರೆ.

    ಇತ್ತ ಗೋಕಾಕ್ ಉಪಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪ್ಲಾನ್ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಅನರ್ಹತೆ ಅರ್ಜಿ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ತೀರ್ಪು ಹೇಗಿದ್ದರೂ ಚುನಾವಣೆಗೆ ನಿಲ್ಲುವ ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ಅವಕಾಶ ನಿಲ್ಲುವ ಅವಕಾಶ ದೊರೆಯುವ ಭಾವನೆಯಿದೆ. ಚುನಾವಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಈ ಹಿಂದೆ ರಮೇಶ್ ಜಾರಕಿಹೊಳಿ ಹೇಳಿದ್ದರು.

    ಹಾಗೆಯೇ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧವೂ ವಾಗ್ದಾಳಿ ನಡೆಸಿ, ಸತೀಶ್ ಮಾಡಿರುವ ದ್ರೋಹವನ್ನು ಕಥೆ ಮಾಡಿದರೆ ಅವನು ಮನೆಗೆ ಓಡಿಹೋಗುತ್ತಾನೆ. ಹುಚ್ಚನಂತೆ ಓಡಾಡುತ್ತಾ ಹೇಳಿಕೆ ನೀಡುತ್ತಿದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿತ್ತು. ಅವನೊಬ್ಬ ನಾಯಕನಲ್ಲ, ಅವನೊಬ್ಬ ಷಂಡ ಎಂದು ಏಕವಚನದಲ್ಲೇ ಗುಡುಗಿದ್ದರು.

    ಜಾರಕಿಹೊಳಿ ಕುಟುಂಬಕ್ಕೆ ಅಪಮಾನ ಮಾಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ನಾನು ಮತ್ತು ಬಾಲಚಂದ್ರ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ ಮಾತುಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದ್ದರು.

  • ಗೋಕಾಕ್  ಫಾಲ್ಸ್ ಬಳಿ ಮತ್ತೆ ಗುಡ್ಡ ಕುಸಿತ- ಆತಂಕದಲ್ಲಿ ವಾಹನ ಸವಾರರು

    ಗೋಕಾಕ್ ಫಾಲ್ಸ್ ಬಳಿ ಮತ್ತೆ ಗುಡ್ಡ ಕುಸಿತ- ಆತಂಕದಲ್ಲಿ ವಾಹನ ಸವಾರರು

    ಬೆಳಗಾವಿ: ಗೋಕಾಕ್ ತಾಲೂಕಿನಾದ್ಯಂತ ಭಾರಿ ಮಳೆಗೆ ಸುರಿಯುತ್ತಿದ್ದು, ಪರಿಣಾಮ ಗೋಕಾಕ್  ಫಾಲ್ಸ್ ಬಳಿ 2ನೇ ಬಾರಿಗೆ ಗುಡ್ಡ ಕುಸಿತ ಸಂಭವಿಸಿದೆ.

    ಬೆಳಗಾವಿ ಹಾಗೂ ಗೋಕಾಕ್ ಮಧ್ಯೆ ಸಂಪರ್ಕಿಸುವ ರಸ್ತೆಯಲ್ಲಿ ಸಂಜೆ ವೇಳೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಗೋಕಾಕ್  ಫಾಲ್ಸ್ ಗೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲೇ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮೇಲೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿದೆ. ಪರಿಣಾಮ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನ ಸವಾರರು ಆತಂಕಗೊಂಡಿದ್ದು, ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ.

    ಗೋಕಾಕ್ ನಗರಕ್ಕೆ ಹೊಂದಿಕೊಂಡಿರುವ ಗುಡ್ಡ ಮಳೆಗೆ ಈಗಾಗಲೇ ಕುಸಿಯುತ್ತಿರುವುದರಿಂದ ಸತತ 12 ಗಂಟೆಗಳ ಕಾಲ ಎನ್‍ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಎನ್‍ಡಿಆರ್‍ಎಫ್  ಸಿಬ್ಬಂದಿ ಸಂಜೆ ವೇಳೆಗೆ ಗುಡ್ಡ ಕುಸಿಯುತ್ತಿದ್ದ ಸ್ಥಳ ಪರಿಶೀಲನೆ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮತ್ತೆ ನಾಳೆ ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಬೃಹತ್ ಬಂಡೆಗಲ್ಲು ಮುಂಭಾಗದಲ್ಲಿ ಮೊದಲು 20 ಅಡಿ ತಗ್ಗು ನಿರ್ಮಾಣ ಮಾಡಿರುವ ಎನ್‍ಡಿಆರ್ ಎಫ್ ತಂಡ ಬಳಿಕ 2 ಬಂಡೆಗಳನ್ನು ಸ್ಫೋಟ ಮಾಡಲು ಸಿದ್ಧತೆ ನಡೆಸಿದೆ. ಸ್ಫೋಟದ ಸಂದರ್ಭದಲ್ಲಿ ಚೂರಾದ ಬಂಡೆಗಲ್ಲುಗಳನ್ನು ತಗ್ಗಿನಲ್ಲಿ ಹಾಕಲು ತಜ್ಞರು ಕಾರ್ಯಾಚರಣೆ ನಡೆಸಿದ್ದಾರೆ.

  • ಇಬ್ಬರು ಮಕ್ಕಳಿಗೆ ನೇಣುಹಾಕಿ, ದಂಪತಿ ಆತ್ಮಹತ್ಯೆ

    ಇಬ್ಬರು ಮಕ್ಕಳಿಗೆ ನೇಣುಹಾಕಿ, ದಂಪತಿ ಆತ್ಮಹತ್ಯೆ

    ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಬೇಸರಗೊಂಡ ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ಬಳಿಕ ತಾವು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೈತನಾಳ ಹೊಸುರು ಗ್ರಾಮದಲ್ಲಿ ನಡೆದಿದೆ.

    ಭೀಮಮಪ್ಪಾ ಚೂನಪ್ಪಗೋಳ (35) ಮಂಜುಳಾ (30) ಹಾಗೂ ಅವರ ಮಕ್ಕಳಾದ 8 ವರ್ಷದ ಪ್ರದೀಪ, 6 ವರ್ಷದ ಮೌನೇಶ ಸಾವನ್ನಪಿದ್ದಾರೆ. ಈ ನಾಲ್ವರ ಏಕಾಏಕಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ.

    ಈ ಕುರಿತು ಮಾಹಿತಿ ಪಡೆದ ಗೋಕಾಕ್ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ಕಾರ್ಯಮಾಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.