Tag: ಗೋಕಾಕ್

  • ಬಿಎಸ್‍ವೈ ಕರ್ಣ, ರಮೇಶ್ ಜಾರಕಿಹೊಳಿ ಗೋವು ಇದ್ದಂತೆ: ಮುನಿರತ್ನ

    ಬಿಎಸ್‍ವೈ ಕರ್ಣ, ರಮೇಶ್ ಜಾರಕಿಹೊಳಿ ಗೋವು ಇದ್ದಂತೆ: ಮುನಿರತ್ನ

    – 17 ಜನ ಶಾಸಕರು ಹೋಟೆಲ್ ಸ್ನೇಹಿತರು

    ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ಣ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವು ಇದ್ದಂತೆ ಎಂದು ಅನರ್ಹ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.

    ಗೋಕಾಕ್ ಕ್ಷೇತ್ರದ ಧೂಪದಾಳ ಗ್ರಾಮದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಯಾರಿಗೂ ಕೆಟ್ಟದ್ದನ್ನು ಬಯಸಿದವರಲ್ಲ. ಅವರನ್ನು ಹತ್ತಿರದಿಂದ ನೋಡಲು ಆರಂಭಿಸಿದಾಗಿನಿಂದ ಅವರಲ್ಲಿರುವ ಮುಗ್ಧತೆ ಅರ್ಥವಾಯಿತು. ರಮೇಶ್ ಜಾರಕಿಹೊಳಿ ಅವರನ್ನು ನಾನು ಗೋವಿಗೆ ಹೋಲಿಸುತ್ತೇನೆ. ಗೋವು ಹಾಲು ಕೊಡುತ್ತದೆಯೇ ಹೊರತು, ವಿಷ ಕೊಡುವುದಿಲ್ಲ. ಕೆಲವರು ಹಾಲು ಕುಡಿದು ವಿಷ ಕೊಡುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಅಂತಹ ವ್ಯಕ್ತಿಯಲ್ಲ ಎಂದು ಹೇಳಿದರು.

    ರಮೇಶ್ ಜಾರಕಿಹೊಳಿ ಅವರು ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಸಚಿವರಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ನಾವು 17 ಮಂದಿ ಶಾಸಕರು ಮುಂಬೈನ ಹೋಟೆಲ್ ಸ್ನೇಹಿತರು. ಈ ಲಿಸ್ಟ್ ನಲ್ಲಿ ಅನರ್ಹ ಶಾಸಕ ಆರ್.ಶಂಕರ್ ಅವರು ಕೂಡ ಇದ್ದಾರೆ. ಅವರು ಕೂಡ ಸಚಿವರಾಗುತ್ತಾರೆ ಎಂದು ತಿಳಿಸಿದರು.

    ನೀವು ಕುರುಕ್ಷೇತ್ರ ಸಿನಿಮಾ ನೋಡಿದ್ದೀರಾ? ಎಷ್ಟು ಜನ ನೋಡಿದ್ದೀರಾ ಕೈ ಎತ್ತಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು. ಜನರು ಕೈ ಎತ್ತುತ್ತಿದ್ದಂತೆ ನಿಮ್ಮ ದುಡ್ಡು ನನಗೆ ಬಂದಿದೆ ಎಂದರು. ಬಳಿಕ ಮಾತು ಮುಂದುವರಿಸಿ, ಬಿ.ಎಸ್.ಯಡಿಯೂರಪ್ಪ ಅವರು ಕರ್ಣ ಇದ್ದಂತೆ. ಸಿಎಂ ಕೊಟ್ಟ ಮಾತನ್ನು ಹಿಂಪಡೆಯುವುದಿಲ್ಲ. ಅವರು ಕೊಟ್ಟ ಮಾತನ್ನು ಎಂತಹ ಸಂದರ್ಭದಲ್ಲಾದರೂ ಉಳಿಸಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ಅವರನ್ನು ನಂಬಿ 17 ಜನ ಶಾಸಕರು ಬಿಜೆಪಿಗೆ ಸೇರಿದ್ವಿ ಎಂದರು.

    17 ಜನ ಶಾಸಕರಲ್ಲಿ ಯಾರೂ ದಡ್ಡರಿಲ್ಲ. ಒಬ್ಬರಿಗಿಂತ ಒಬ್ಬರು ಮೇಧಾವಿಗಳಿದ್ದಾರೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಜೊತೆಗೆ ಕೈ ಜೋಡಿಸಿದ್ದೇನೆ ಎಂದು ಹೇಳಿದರು.

  • ‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

    ‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

    ಬೆಳಗಾವಿ: ಉಪಚುನಾವಣೆಯ ಕಣದಲ್ಲಿ ಗೋಕಾಕ್ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಒಂದೇ ಮನೆತನದ ಇಬ್ಬರು ಸಹೋದರರ ಎರಡು ಪಕ್ಷಗಳ ಸ್ಪರ್ಧೆಯಿಂದ ಈ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಈ ಅಖಾಡಕ್ಕೆ ಇಂದು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಡಿಕೆಶಿ ಮಾತಿನ ವರಸೆ ಕೇಳಲು ಕ್ಷೇತ್ರದ ಜನತೆ ಕಾತುರರಾಗಿದ್ದಾರೆ.

    ಕುಂದಾನಗರಿ ಬೆಳಗಾವಿ ಗಡಿ ವಿಷಯಕ್ಕೆ ಸುದ್ದಿಯಲ್ಲಿದ್ದರೆ, ಗೋಕಾಕ್ ಕ್ಷೇತ್ರ ರಮೇಶ್ ಜಾರಕಿಹೂಳಿ ರಾಜೀನಾಮೆಯಿಂದ ಉಪಚುನಾವಣೆ ಕಣದ ಭಾರೀ ಹೈವೋಲ್ಟೇಜ್ ಕದನ ಕಣವಾಗಿದೆ. ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಈಗ ವೈರಿಗಳಾಗಿದ್ದಾರೆ. ಕೈ ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರಕ್ಕೆ ಇಂದು ಡಿಕೆಶಿ ಆಗಮಿಸ್ತಿದ್ದು, ತಮ್ಮ ಬತ್ತಳಿಕೆಯಲ್ಲಿರುವ ಯಾವ ಬಾಣಗಳನ್ನು ರಮೇಶ್ ವಿರುದ್ಧ ಬಿಡುತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

    ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ನನ್ನ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸದಿದ್ದರೆ ಎಲ್ಲವೂ ಬಹಿರಂಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ರಮೇಶ್, ಮೈಸೂರು ಭಾಗದವರ ಆಟ ಇಲ್ಲಿ ನಡೆಯುವುದಿಲ್ಲ. ಅಲ್ಲಿಯ ರಾಜಕೀಯವೇ ಬೇರೆ ಇಲ್ಲಿಯ ರಾಜಕೀಯ ಬೇರೆಯೆಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್‍ಗೂ ಎಚ್ಚರಿಕೆ ನೀಡಿದರು. ಈಗ ಡಿಕೆಶಿ ಎಂಟ್ರಿಯಾಗುತ್ತಿರೋದ್ರಿಂದ ಸಾಹುಕಾರ ಮತ್ತಷ್ಟು ಅಲರ್ಟ್ ಆಗುವ ಸಾಧ್ಯತೆ ಇದೆ. ಡಿಕೆಶಿಗೆ ಸರಿಸಮನಾಗಿ ಪ್ರಚಾರಕ್ಕೆ ತಯಾರಿ ನಡೆಸಿದ್ದಾರೆ.

  • ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

    ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

    ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿನ ಹಿಂದೆ ಬೇರೆಯದೆ ಕಹಾನಿ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದ್ದು, ಪರಸ್ಪರ ಸವಾಲು ಹಾಕಿಕೊಂಡು ತೊಡೆ ತಟ್ಟಿರುವ ಸಹೋದರರ ನಡೆಯ ಹಿಂದೆ ಮ್ಯಾಚ್ ಫಿಕ್ಸಿಂಗ್ ನೆರಳಿದೆಯಾ ಎಂಬ ಅನುಮಾನವೊಂದು ಇದೀಗ ಕೈ ನಾಯಕರಲ್ಲಿ ಹುಟ್ಟಿಕೊಂಡಿದೆ.

    ಹೌದು. ಗೋಕಾಕ್ ಅಂಗಳದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ನಡುವೆ ನಡೆಯುತ್ತಿರುವ ಫೈಟ್ ಅಸಲಿನಾ ಅಥವಾ ನಕಲಿನಾ ಅನ್ನೋ ಅನುಮಾನವೊಂದು ಕೈ ನಾಯಕರನ್ನ ಕಾಡುತ್ತಿದೆ. ಈ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ.

    ಆದ್ದರಿಂದ ಗೋಕಾಕ್ ನಲ್ಲಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆಯುತ್ತಿದೆಯಾ ಎಂಬ ಬಗ್ಗೆ ತಿಳಿಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ .ಕೆ.ಸಿ ವೇಣುಗೋಪಾಲ್ ಅವರೇ ಇಂದು ಬೆಳಗಾವಿಗೆ ಬರಲಿದ್ದಾರೆ. ಗೋಕಾಕ್ ಗೆ ಭೇಟಿ ನೀಡಲಿರುವ ವೇಣುಗೋಪಾಲ್, ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರ ಅಷ್ಟೆ ಅಲ್ಲದೆ ಗೋಕಾಕ್ ಅಖಾಡದ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲಿದ್ದಾರೆ.

    ಹೀಗೆ ಗೋಕಾಕ್ ಅಖಾಡದಲ್ಲಿ ಜಾರಕಿಹೊಳಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆದಿದೆಯಾ ಎಂಬುದರ ಬಗ್ಗೆ ಕೈ ಹೈಕಮಾಂಡ್ ಕಣ್ಣಿಟ್ಟಿದ್ದು ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೇ ಭೇಟಿಗೆ ಮುಂದಾಗಿದ್ದಾರೆ. ಸಾಹುಕಾರ್ ಸಹೋದರರ ಪಾಲಿಗೆ ಲಕ್ಷ್ಮಿ ದೂರಿನಿಂದ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಗೋಕಾಕ್ ಅಖಾಡಕ್ಕೆ ಡಿಕೆಶಿ ಎಂಟ್ರಿ ಆಗ್ತಾರಾ? ಹೆಬ್ಬಾಳ್ಕರ್ ಉತ್ತರ

    ಗೋಕಾಕ್ ಅಖಾಡಕ್ಕೆ ಡಿಕೆಶಿ ಎಂಟ್ರಿ ಆಗ್ತಾರಾ? ಹೆಬ್ಬಾಳ್ಕರ್ ಉತ್ತರ

    ಬೆಳಗಾವಿ: ಉಪಚುನಾವಣೆ ಕಾವು ಜೋರಾಗಿದ್ದು, ಗೋಕಾಕ್ ಅಖಾಡಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಯಾಕೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೋ ಕಮೆಂಟ್ಸ್ ಎಂದು ಜಾರಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಏನೇ ಪ್ರಶ್ನೆ ಕೇಳಿದರೂ ನಾನು ಈ ಬಗ್ಗೆ ಈಗ ಪ್ರತಿಕ್ರಿಯಿಸಲ್ಲ, ಮುಂದೆ ಮಾತನಾಡಬಹುದು, ಈಗ ಚುನಾವಣೆ ಸಮಯ ಹೀಗಾಗಿ ನಾನು ಮಾತನಾಡಲು ಇಷ್ಟಪಡಲ್ಲ ಎಂದು ಜಾಣತನದ ಉತ್ತರ ಕೊಟ್ಟಿದ್ದಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಶಿಸ್ತಿನ ಸಿಪಾಯಿಗಳ ರೀತಿ ಪಕ್ಷದ ಮಾತನ್ನು ಕೇಳಬೇಕು ಎಂದಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಪಣತೊಟ್ಟಿ ನಿಂತಿದ್ದ ನೀವು ಗೋಕಾಕ್ ಬಿಟ್ಟು ಅಥಣಿಯಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ, ನನಗೆ ಪಕ್ಷ ಇಲ್ಲಿ ಪ್ರಚಾರ ನಡೆಸಲು ಜವಾಬ್ದಾರಿ ನೀಡಿದೆ. ಹೀಗಾಗಿ ಅಥಣಿಗೆ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.

    ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಆದ್ರೆ ಯಾಕೆ ಡಿಕೆಶಿ ಅವರು ಇನ್ನೂ ಗೋಕಾಕ್ ಕಣಕ್ಕೆ ಬಂದಿಲ್ಲ ಎಂದು ಕೇಳಿದಾಗ, ಈ ಬಗ್ಗೆ ನೀವು ಡಿಕೆಶಿ ಅವರನ್ನೇ ಕೇಳಿದರೆ ಉತ್ತಮ. ನಾನು ಅವರ ಪಿಆರ್‍ಓ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಜಾರಕಿಹೊಳಿ ಬ್ರದರ್ಸ್ ಹೊಂದಾಣಿಕೆ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಸದ್ಯಕ್ಕೆ ನೋ ಕಮೆಂಟ್ಸ್. ಮುಂದೆ ನಾನು ಈ ಬಗ್ಗೆ ಮಾತನಾಡಬಹುದು. ಆದ್ರೆ ಚುನಾವಣೆ ಸಮಯವಾಗಿರುವುದರಿಂದ ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡಲ್ಲ ಎಂದು ಹೇಳಿದರು.

    ಗೋಕಾಕ್ ಬಗ್ಗೆ ಹೆಚ್ಚು ಆಸಕ್ತಿ ಇತ್ತಾ ಎಂದು ಕೇಳಿದಾಗಲೂ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ಕಾಲಾಯ ತಸ್ಮೈ ನಮಃ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಎಷ್ಟು ಲೀಡ್‍ನಲ್ಲಿ, ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ನಾನು ಭವಿಷ್ಯ ಹೇಳಲ್ಲ. ನಾನು ಭವಿಷ್ಯಗಾರ್ತಿ ಅಲ್ಲ ಎನ್ನುವ ಮೂಲಕ ಚುನಾವಣೆ ಇರುವುದಕ್ಕೆ ಸದ್ಯ ನಾನು ಮೌನವಾಗಿರುತ್ತೇನೆ ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎನ್ನುವ ಹಾಗೆ ಲಕ್ಷ್ಮೀ ಅವರು ಎಲ್ಲದಕ್ಕೂ ನೋ ಕಮೆಂಟ್ಸ್ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ.

  • ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ ವಿರುದ್ಧ- ಸತೀಶ್ ಜಾರಕಿಹೊಳಿ

    ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ ವಿರುದ್ಧ- ಸತೀಶ್ ಜಾರಕಿಹೊಳಿ

    ಬೆಳಗಾವಿ: ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ಬದಲಿಗೆ ರಮೇಶ್ ಜಾರಕಿಹೊಳಿ ವಿರುದ್ಧ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

    ಗೋಕಾಕ್‍ನಲ್ಲಿ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹಾಗೂ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಕೈ ಕೆಳಗಿನ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೆ, ಬೀಟ್ ಪೊಲೀಸರು ಪಿಎಸ್‍ಐ ನನ್ನು ಭೇಟಿಯಾಗಲು ಬಿಡುವುದಿಲ್ಲ. ಹಾಗೇ ಇವರೂ ಸಹ ಜನರು ಶಾಸಕರನ್ನು ಭೇಟಿಯಾಗಲು ಬಿಡುವುದಿಲ್ಲ. ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು. ಆದರೆ ಇವರು ಐದು ಊರುಗಳಲ್ಲಷ್ಟೇ ಜಾಸ್ತಿ ಇದ್ದಾರೆ, ಉಳಿದ ಊರುಗಳಲ್ಲಿ ಅವರನ್ನು ಮುಗಿಸಿದ್ದೇವೆ. ಸರ್ಕಾರ ಬಿಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ. ಆದರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ಅವರ ಬಳಿ ಇಲ್ಲ ಎಂದು ಹರಿಹಾಯ್ದರು.

    ಕ್ಷೇತ್ರದಲ್ಲಿ ಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ, ಕುಡಿಯಲು ನೀರು ಇಲ್ಲ. ಯಾವುದೇ ವ್ಯಾಪಾರವಿಲ್ಲ, ಸಮಾಜಸೇವೆ ಇಲ್ಲ ಆದರೂ ಇವರು ಅಷ್ಟು ಬ್ಯುಸಿ ಇರುತ್ತಾರೆ. ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಲೂಟಿ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇಲ್ಲಿ, ಅರ್ಧಪಾಲು ಅವರಿಗೆ ಎಂಬ ಪದ್ಧತಿ ಇದೆ. ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಆಗಿಲ್ಲ. ರಮೇಶ್ ಜಾರಕಿಹೊಳಿ ಹಿಂದಿನ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿದ್ದರು. ಅವರೂ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ ಎನ್ನುತ್ತಿದ್ದಾರೆ. ಯಾರ ಅಭಿವೃದ್ಧಿ ಎನ್ನುವುದು ತಿಳಿಯುತ್ತಿಲ್ಲ ಎಂದು ಟಾಂಗ್ ನೀಡಿದರು.

    ರಮೇಶ ಜಾರಕಿಹೊಳಿ ಸೋಲಿಸುವುದೇ ನಮ್ಮ ಗುರಿ. ಅವರು ಗೆದ್ದರೆ ಮೂರು ಲಾಭ ಆಗುತ್ತೆ ಎಂದು ಪ್ರಚಾರ ಮಾಡಲಾಗುತ್ತಿದೆ. ಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿ ಸಚಿವರು ಆಗುತ್ತಾರೆ ಎಂದು ಅಂತಾ ಪ್ರಚಾರ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರಾದರೆ ಯಾರಿಗೆ ಲಾಭ, ಮತ್ತೆ ಅವರಿಗೇ ಲಾಭ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಏನು ಅಭಿವೃದ್ಧಿ ಮಾಡಿದ್ದಾರೆ? ಜನ ಬದಲಾವಣೆಗೆ ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.

    ರಮೇಶ್ ಜಾರಕಿಹೊಳಿ ಮನೆ ಮುಂದಿನ ರಸ್ತೆ ಮಾಡಲು ಐದು ವರ್ಷ ಬೇಕಾಯಿತು. ಇನ್ನೂ ಅವರ ಮನೆಯ ಮುಂದಿನ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಬಿಎಸ್‍ವೈ ಬಿಟ್ಟರೆ ರಮೇಶ್ ಜಾರಕಿಹೊಳಿಗೆ ಬೇರೆ ಆಯ್ಕೆ ಇಲ್ಲ. ಬಿಎಸ್‍ವೈ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಜನ ಹೊರಗೆ ಬರಬೇಕಾದಲ್ಲಿ ಲಖನ್ ಜಾರಕಿಹೊಳಿಯೇ ಬೇಕಾಗಿಯಿತು.

    ಲಖನ್ ಶಕ್ತಿ, ಪಕ್ಷದ ಶಕ್ತಿ, ನಮ್ಮ ಶಕ್ತಿ ಎಲ್ಲವೂ ಇದೆ. ಡಿಸೆಂಬರ್ 9ರ ವರೆಗೆ ನಾವು ಕಾಯುವ ಅವಶ್ಯಕತೆಯಿಲ್ಲ. ನಮ್ಮ ಪಟಾಕಿ ಡಿ.5ನೇ ತಾರೀಖು ಸಂಜೆಯೇ ಹಾರಲಿವೆ. ಗೆಲುವಿಗಾಗಿ 9ನೇ ತಾರೀಖಿನ ವರೆಗೆ ನಾವು ಕಾಯುವ ಅವಶ್ಯಕತೆಯಿಲ್ಲ. ನಮ್ಮ ಗೆಲುವಿನ ಪಟಾಕಿ 5ನೇ ತಾರೀಖಿನಂದೆ ಹಾರಲಿವೆ. ಸರ್ಕಾರ ಕೆಡವಿದವರನ್ನು ನಾವು ಕೆಡವಬೇಕಾಗಿದೆ, ಆಗ ನಮಗೆ ಒಂದು ಶಕ್ತಿ ಬರುತ್ತದೆ. ರಾಜಕೀಯ ಇತಿಹಾಸ ಬರೆಯುವ ಸುವರ್ಣ ದಿನ ನಮ್ಮ ಮುಂದಿದೆ. ಗೆಲುವಿಗೆ ಶ್ರಮಿಸೋಣ ಎಂದು ಬೆಂಬಲಿಗರಿಗೆ ಕರೆ ನೀಡಿದರು.

  • ಉರುಳಾಟ, ಹೊರಳಾಟ, ಕಣ್ಣೀರು, ಘೋಷಣೆ-ಅಶೋಕ್ ಪೂಜಾರಿ ಆಪರೇಷನ್ ಫೇಲ್

    ಉರುಳಾಟ, ಹೊರಳಾಟ, ಕಣ್ಣೀರು, ಘೋಷಣೆ-ಅಶೋಕ್ ಪೂಜಾರಿ ಆಪರೇಷನ್ ಫೇಲ್

    -ಗೋಕಾಕ್‍ನಲ್ಲಿ ತ್ರಿಕೋನ ಸ್ಪರ್ಧೆ

    ಬೆಳಗಾವಿ: ನಾಮಪತತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದರಿಂದ ಗೋಕಾಕ್ ಜೆಡಿಎಸ್ ಅಭ್ಯರ್ಥಿಯಾಗಿರುವ ಅಶೋಕ್ ಪೂಜಾರಿ ಮನವೊಲಿಸುವಲ್ಲಿ ಬಿಜೆಪಿ ವಿಫಲವಾಯ್ತು.

    ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿಯವರ ಧ್ಯಾನ ಮಂದಿರ ಇಂದು ರಣರಂಗವಾಗಿತ್ತು. ಬಿಜೆಪಿಯವರು ನಾಮಪತ್ರ ಹಿಂದೆ ಪಡೆಯುವಂತೆ ನಡೆಸಿದ ಕಡೆ ಕಸರತ್ತು ವಿಫಲಗೊಂಡಿತು. ಜೆಡಿಎಸ್ ಕಾರ್ಯಕರ್ತರು ಕೆಲಕಾಲ ಅಪರೇಷನ್ ಮಾಡಲು ಬಂದ ಬಿಜೆಪಿ ಮುಖಂಡರನ್ನು ಘೇರಾವ್ ಹಾಕಿದರು. ಕಾರ್ಯಕರ್ತರನ್ನು ಕಡೆಗಣಿಸಿ ಅಶೋಕ್ ಪೂಜಾರಿ ಬಿಜೆಪಿಗೆ ಹೋದರೆ ನಾವು ವಿಷ ಕುಡಿಯುತ್ತೇವೆ. ನಮ್ಮ ಹೆಣದ ಮೇಲೆ ದಾಟಿ ಹೋಗಿ ರಾಜಕಾರಣ ಮಾಡಿ ಎಂದು ಜೆಡಿಎಸ್ ಅಭ್ಯರ್ಥಿಗೂ ಬೆವರಿಳಿಸಿದರು.

    ಕೆಲ ಕಾರ್ಯಕರ್ತರು ಭಾವುಕರಾಗಿ ಅಳಲಾರಂಭಿಸುತ್ತಿದ್ದಂತೆ ಅಶೋಕ್ ಪೂಜಾರಿ ಅವರು ಮತ್ತೊಮ್ಮೆ ಕಣ್ಣೀರು ಹಾಕಿದರು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬಂದಿದ್ದ ಬಿಜೆಪಿ ಮುಖಂಡರು ಮರಳಿದರು. ಒಂದೆಡೆ ಕಾರ್ಯಕರ್ತರು ಎಂ.ಎಲ್.ಸಿ ಮಹಾಂತೇಶ್ ಕವಟಗಿಮಠ ಗೆ ಘೇರಾವ್ ಹಾಕಿ ಘೋಷಣೆ ಕೂಗುತ್ತಿದ್ದರೆ, ಇನ್ನೊಂದೆಡೆ ಸಿಎಂ, ಮಾಜಿ ಸಿಎಂ ದೂರವಾಣಿಯಲ್ಲಿ ಮಾತನಾಡಲು ಭಾರೀ ಯತ್ನ ನಡೆಸಿದರು. ಇದಾವುದಕ್ಕೂ ಜಗ್ಗದ ಬಗ್ಗದ ಕಾರ್ಯಕರ್ತರು ಅಭ್ಯರ್ಥಿ ಕೈಗೆ ಮೊಬೈಲ್ ತಲುಪಿಸಲೇ ಇಲ್ಲ. ಗೊಂದಲ ಗದ್ದಲದ ನಡುವೆ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದು ಉರುಳಾಟ ಮಾಡುತ್ತಿದ್ದಂತೆ ಅಶೋಕ್ ಪೂಜಾರಿ ತಾಳ್ಮೆಯಿಂದ ಇರುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ನಾಮಪತ್ರ ವಾಪಸ್ ಪಡೆದ ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು

    ಗೊಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ನಾಮಪತ್ರವನ್ನು ಹಿಂದಕ್ಕೆ ಪಡೆಯುವ ಬಿಜೆಪಿ ಕಸರತ್ತು ವ್ಯರ್ಥವಾಯ್ತು. ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ ಹಾಗೂ ಜೆಡಿಎಸ್ ನಿಂದ ಅಶೋಕ್ ಪೂಜಾರಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಹೈ ವೊಲ್ಟೇಜ್ ಕ್ಷೇತ್ರದಲ್ಲಿ ಜೆಡಿಎಸ್ ಭಾರೀ ಕಸರತ್ತು ನಡೆಸಿ ಅಭ್ಯರ್ಥಿಯನ್ನು ಉಳಿಸಿಕೊಂಡಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ  ಪ್ರಕಾಶ್ ಬಾಗೋಜಿ ಅಸಮಾಧಾನ ಹೊರಹಾಕದೇ ಅಶೋಕ್ ಪೂಜಾರಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು ದಿನದಿಂದ ದಿನಕ್ಕೆ ಗೋಕಾಕ್ ಉಪಕದನ ಕುತೂಹಲಕ್ಕೆ ಕಾರಣವಾಗಿದೆ.

  • ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್

    ಕಾಂಗ್ರೆಸ್ ಪರ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಸಾಹುಕಾರ್

    ಬೆಳಗಾವಿ: ಚುನಾವಣಾ ಪ್ರಚಾರದಲ್ಲಿ ಸಂದರ್ಭದಲ್ಲಿ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪರ ಮತಯಾಚಿಸುವ ಬದಲು ಬಾಯಿ ತಪ್ಪಿ ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಹೇಳಿದ ಪ್ರಸಂಗ ನಡೆಯಿತು.

    ನಾವು ಕಾಂಗ್ರೆಸ್ ಪಕ್ಷ ಬಿಡದೇ ಇದ್ದರೆ ರಾಜಕೀಯವಾಗಿ ನಾವು ನಿರ್ನಾಮವಾಗುತ್ತಿದ್ದೆವು. ಮೊದಲಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು. ಹೀಗಾಗಿ ಪದೇ, ಪದೇ ಕಾಂಗ್ರೆಸ್ ಅಂತ ಬಾಯಿ ತಪ್ಪಿ ಬಂತು. ಕಾಕಾ ನನಗೆ ಬಿಜೆಪಿ ಅಂತ ಹೇಳಿದ್ದು ಒಳ್ಳೆಯದಾಯಿತು. ಆ ಪಕ್ಷಕ್ಕಾಗಿ ನಾನು ಬಹಳ ದುಡಿದಿದ್ದೇನೆ. ಆದರೆ ಆ ಪಕ್ಷದಿಂದ ನನಗೆ ಅನ್ಯಾಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ಕಾರ್ಯಕರ್ತರ ಪ್ರಚಾರ ವೈಖರಿ ಕಂಡು ಖುಷಿ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ, ನಾನು ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷ ಬಿಡುವ ಪ್ರಶ್ನೆಯೇ ಇರಲಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇರಲಿಲ್ಲ ಎಂದು ಮಾತೃ ಪಕ್ಷವನ್ನು ಇದೇ ವೇಳೆ ಸಾಹುಕಾರ್ ನೆನಪಿಸಿಕೊಂಡರು.

    ನಾನು ಕಾಂಗ್ರೆಸ್ ಪಕ್ಷ ಬಿಟ್ಟ ಕಾರಣವನ್ನು ನಾನು ಹೇಳುವುದಕ್ಕಿಂತಲೂ, ಟಿವಿ ಮಾಧ್ಯಮಗಳಲ್ಲಿ ನೀವೆಲ್ಲ ನೋಡಿ ತಿಳಿದುಕೊಂಡಿದ್ದೀರಿ. ನನಗೂ ಸಹ ದುಃಖವಾಗುತ್ತಿದೆ. ಆದರೆ ರಾಜಕೀಯವಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

  • ಏಕವಚನದಲ್ಲಿ ಮಾತಾಡಲು ಇಷ್ಟವಿಲ್ಲ, ಕೆಲವು ಬಾರಿ ಹೀಗಾಗುತ್ತೆ- ಸತೀಶ್ ಜಾರಕಿಹೊಳಿ

    ಏಕವಚನದಲ್ಲಿ ಮಾತಾಡಲು ಇಷ್ಟವಿಲ್ಲ, ಕೆಲವು ಬಾರಿ ಹೀಗಾಗುತ್ತೆ- ಸತೀಶ್ ಜಾರಕಿಹೊಳಿ

    ಬೆಳಗಾವಿ: ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ಮಾತಾಡಿದ್ದರ ಕುರಿತು ಬಿಜೆಪಿಯವರು ದೂರು ನೀಡಿರುವುದರ ಕುರಿತು ಗೋಕಾಕ್ ನಲ್ಲಿ ಮತನಾಡಿದರು. ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತದೆ. ದೂರು ಣಿಢೀ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂದುಕೊಳ್ಳುವುದಿಲ್ಲ. ಚುನಾವಣೆ ಇಲಾಖೆಯವರು ಸಹ ಏಕವಚನದಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ಆದರೂ ರಾಜಕೀಯದಲ್ಲಿ ಕೆಲವು ಮಾತುಗಳು ಬರುತ್ತವೆ ಎಂದರು.

    ನಾನು ಸಲ್ಲಿಸಿದ ನಾಮಪತ್ರಕ್ಕೆ ಬಿ ಫಾರಂ ಇರಲಿಲ್ಲ ಹೀಗಾಗಿ ನಾಮಪತ್ರ ತಿರಸ್ಕಾರ ಆಗಿದೆ. ನಮ್ಮ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ವಿರುದ್ಧ ಹಾಡಿನ ಮೀಮ್ಸ್ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಮಿಡಿಯಾಗಿರಲಿ ಜನ ಡೈವರ್ಟ್ ಆಗಲಿ ಎಂದು ಈ ರೀತಿ ಮಾಡಿದ್ದೇವೆ. ಅಲ್ಲದೆ ಆತ ಹೇಳಿದ್ದಕ್ಕೂ ಆ ವಿಡಿಯೋ ಮ್ಯಾಚ್ ಆಯ್ತು ಹೀಗಾಗಿ ಮೀಮ್ಸ್ ಮಾಡಿದ್ದೆವು ಎಂದರು.

    ಜಾರಕಿಹೊಳಿ ಬ್ರದರ್ಸ್ ಒಂದೇ ಎಂದು ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂ ಬಿಂಬಿಸಿ ಲಾಭ ಪಡೆಯಲು ಯೋಚಿಸುತ್ತಿದ್ದಾರೆ. ಜನರು ಈಗ ಅವರ ಮಾತನ್ನು ನಂಬುವುದಿಲ್ಲ. ಗೋಕಾಕ್ ನಲ್ಲಿ ರಾಜಕೀಯ ಬದಲಾವಣೆ, ಎಲ್ಲರಿಗೂ ಸಮಾನತೆ ಆಗಬೇಕೆಂಬ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

  • ಅಣ್ಣನ ವಿರುದ್ಧ ಡ್ಯಾನ್ಸ್ ವಿಡಿಯೋ ಬಿಟ್ಟ ಸತೀಶ್

    ಅಣ್ಣನ ವಿರುದ್ಧ ಡ್ಯಾನ್ಸ್ ವಿಡಿಯೋ ಬಿಟ್ಟ ಸತೀಶ್

    ಬೆಳಗಾವಿ: ಡಿಸೆಂಬರ್ 5ರಂದು ನಡೆಯಲಿರುವ ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಅಣ್ಣ-ತಮ್ಮಂದಿರ ಕಾಳಗ ಜೋರಾಗಿದೆ. ಅಣ್ಣನ ವಿರುದ್ಧ `ವಿಡಿಯೋ’ ಬಿಟ್ಟು ತಮ್ಮ ಚಮಕ್ ಕೊಟ್ಟಿದ್ದಾರೆ. ಡ್ಯಾನ್ಸ್ ವೀಡಿಯೋ ಮೂಲಕ ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.

    ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಸ್ಪರ್ಧಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣದಲ್ಲಿದ್ದಾರೆ. ಹೀಗಾಗಿ ಅಣ್ಣ-ತಮ್ಮಂದಿರು ಮಾತಿನ ಏಟು-ಎದರೇಟು ನೀಡುತ್ತಿದ್ದರು. ಈ ಮಧ್ಯೆ ಸತೀಶ್, ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿ ವಿಭಿನ್ನವಾಗಿ ಅಣಕಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    `ಬಾಲಾ ಬಾಲಾ’ ಹಾಡಿಗೆ ಮೀಮ್ಸ್ ಡ್ಯಾನ್ಸ್ ವೈರಲ್ ಮಾಡಿದ್ದಾರೆ. ಹೀಗೆ ಹೊಸದಾಗಿ ಮಿಮ್ಸ್ ಮಾಡಿ ರಮೇಶ್ ಜಾರಕಿಹೊಳಿ ತಾಳಕ್ಕೆ ಯಾವ ರೀತಿ ಕುಣಿಯಬೇಕೆಂದು ಸತೀಶ್ ಹೇಳಿದ್ದಾರೆ. ಇತ್ತಿಚೇಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಾಡಿಗೆ ರಮೇಶ್ ಕಾರ್ಯವೈಖರಿಯನ್ನು ಹೋಲಿಕೆ ಮಾಡಲಾಗಿದೆ.

    “ಲಖನ್ ನನಗೆ ಮೋಸ ಮಾಡಿದ ಬೆನ್ನಿಗೆ ಚೂರಿ ಹಾಕಿದ ಎಂಬ ರಮೇಶ್ ಮಾತಿಗೆ ತಿರುಗೇಟು ನೀಡಲಾಗಿದೆ. ಲಖನ್ ಬಿಜೆಪಿಯಲ್ಲಿದ್ದು ಕಾಂಗ್ರೆಸ್ಸಿಗೆ ಬಂದಿದ್ದರೆ ಮೋಸ ಅನ್ನಬಹದು. ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ. ರಮೇಶ್ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು. ಅಂದಾಗ ಮಾತ್ರ ಆತ ಒಳ್ಳೆಯವ ಮತ್ತು ಪ್ರಶಂಸೆಗೆ ಒಳಗಾಗುತ್ತಾನೆ. ರಮೇಶ್ ಗೆ ವಿರೋಧ ಮಾಡಿದರೆ ಯಾವುದೋ ಒಂದು ಹಣೆ ಪಟ್ಟಿ ಕಟ್ಟುತ್ತಾನೆ. ರಮೇಶ್ ಜಾರಕಿಹೊಳಿ ಹೇಳಿದಂತೆ ಕುಣಿಯಬೇಕು. ಯಾವ ರೀತಿ ಕುಣಿಯಬೇಕು ಅಂದ್ರೆ ಈ ಚಿತ್ರದ ರೀತಿ”. ಹೀಗೆ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿ ಆ ನಂತರ ಮಿಮ್ಸ್ ಗೆ ಲಿಂಕ್ ಮಾಡಲಾಗಿದೆ. ಈ ಮಿಮ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.