Tag: ಗೋಕಾಕ್

  • ದೊಡ್ಡವರನ್ನೂ ಮೀರಿಸುತ್ತಾನೆ ಕಳ್ಳತನದಲ್ಲಿ ಈ ಬಾಲಕ

    ದೊಡ್ಡವರನ್ನೂ ಮೀರಿಸುತ್ತಾನೆ ಕಳ್ಳತನದಲ್ಲಿ ಈ ಬಾಲಕ

    ಬೆಳಗಾವಿ: ಬಾಲಕನೊಬ್ಬ ಯಾರಿಗೂ ಗೊತ್ತಾಗದಂತೆ ನುಸುಳಾಡಿ ಹಣ ಪೀಕಿ ಪರಾರಿಯಾದ ಘಟನೆ ನಗರದ ಗೋಕಾಕ್ ತಾಲೂಕಿನ ನಾಕಾ ನಂ. 1ರ ದುರ್ಗಾ ಹೋಟೆಲ್‍ನಲ್ಲಿ ನಡೆದಿದೆ.

    ಬಾಲಕನು ಹಾಡಹಗಲೇ ಮಾಲೀಕರ ಕಣ್ಣಿಗೆ ಮಣ್ಣೆರಚಿ ಹಣ ದೋಚಿದ್ದಾನೆ. ಬಾಲಕನು ನೋಡ ನೋಡುತ್ತಿದ್ದಂತೆಯೇ ಹೋಟೆಲಿನ ಗಲ್ಲಾದಲ್ಲಿದ್ದ 9 ಸಾವಿರ ರೂ. ಹಣ ಕದ್ದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶಿಕ್ಷಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಯ ಕಣ್ಣು ಹೋಯ್ತು!

    ಈ ಕೃತ್ಯವು ಹೋಟೆಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೇಲಿನ ಮಾಲೀಕರು ಬಾಲಕನ ಈ ಖತರ್ನಾಕ್ ಕೃತ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

     

  • ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ನಾಳೆ ಉದ್ಘಾಟನೆ

    ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ನಾಳೆ ಉದ್ಘಾಟನೆ

    ಬೆಂಗಳೂರು: ಗೋಕಾಕ್‌ನ ಲೈಂಗಿಕ ವೃತ್ತಿನಿರತರ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘ ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ವಂತ ಕಟ್ಟಡವನ್ನು ಹೊಂದಲಿದ್ದು, ನಾಳೆ ಉದ್ಘಾಟನೆಯಾಗಲಿದೆ.

    ಮಾಜಿ ಸಂಸದ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಅವರ ಕಾಳಜಿಯಿಂದ ನೆಲೆಯಿಲ್ಲದೆ ಹಾದಿ ಬೀದಿಗಳಲ್ಲಿ ಜನರ ಕಣ್ಣು ತಪ್ಪಿಸಿ ಸಭೆ-ಸಮಾರಂಭ ಮಾಡುವ ಅಸಹಾಯಕ ಸ್ಥಿತಿಯಲ್ಲಿದ್ದ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳೆಯರ ಸಂಸ್ಥೆಗೆ ಸೂರು ಸಿದ್ದವಾಗಿದೆ. ಈ ಕಟ್ಟಡವನ್ನು ಶುಕ್ರವಾರ ಶಾಸಕ ಸತೀಶ್‌ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಸರ್ಕಾರಿ ಯೋಜನೆ ಏಡ್ಸ್‌ ನಿಯಂತ್ರಣ ಅಭಿಯಾನ ಈ ವೃತ್ತಿಯಲ್ಲಿರುವ ಮಹಿಳೆಯರು ಸಂಘಟಿತರಾಗಲು ದಾರಿ ಮಾಡಿ ಕೊಟ್ಟಿದೆ. ರಾಜ್ಯದಲ್ಲೂ ಈ ವೃತ್ತಿ ಸಾಂದ್ರತೆಯ ಪ್ರದೇಶಗಳಲ್ಲಿ ಅವರದ್ದೇ ಸಮುದಾಯದ ನಡುವೆ ಜಾಗೃತಿಯ ಭಾಗವಾಗಿ ಏಡ್ಸ್‌ ನಿಯಂತ್ರಣ ಸಂಘಗಳು ರೂಪುಗೊಂಡಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಕೂಡ ಇಂತಹ ಲೈಂಗಿಕ ವೃತ್ತಿನಿರತರ ಆರೋಗ್ಯ ಜಾಗೃತಿ ಕೇಂದ್ರಗಳಲ್ಲಿ ಒಂದು. ಸಾವಿರಾರು ಮಹಿಳೆಯರು ತಾವು ಬಯಸದೇ ದೂಡಲ್ಪಟ್ಟ ಕ್ಷೇತ್ರದ ಬಗ್ಗೆ ಅರಿಯಲು, ಆರೋಗ್ಯ ಜಾಗೃತಿ ಹೊಂದಲು ಸಾಧ್ಯವಾಗುವಲ್ಲಿ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಪಾತ್ರ ಅತ್ಯಂತ ಹಿರಿದು.

    ಪೊಲೀಸ್, ರೌಡಿಗಳು, ಸಮಾಜಘಾತುಕರು ಹೀಗೆ ನಾನಾ ಪಟ್ಟಭದ್ರರ ಕೆಂಗಣ್ಣು, ಬೆದರಿಕೆಗಳ ನಡುವೆಯೂ ಈ ಮಹಿಳೆಯರು ಆರೋಗ್ಯವೆಂಬ ಕೊಡೆಯಲ್ಲಿ ಸಂಘಟಿತರಾಗಿದ್ದಾರೆ. ತಮ್ಮದೇ ಸಂಸ್ಥೆಯನ್ನು ಎಲ್ಲಾ ಮೂದಲಿಕೆ ಪ್ರತಿರೋಧದ ನಡುವೆ ಕಟ್ಟಿ ಬೆಳೆಸಿದರು. ಇವರಿಗೆ ಧೈರ್ಯ ತುಂಬಿ ಸಂಘಟನೆಗೆ ಬಲ ತುಂಬಿದವರು ಲಲಿತಾ ಹೊಸಮನಿ. ಅವರ ಸಂಘಟನಾ ಚಾತುರ್ಯದ ಫಲ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ. ನೋಂದಾಯಿತ ಸಂಸ್ಥೆ ಈಗ ತನ್ನ ಕಾರ್ಯಚಟುವಟಿಕೆಗಳಿಂದಲೇ ದೇಶದ ಗಮನ ಸೆಳೆದಿದೆ. ಸಾವಿರಾರು ನೊಂದು-ಬೆಂದ ಲೈಂಗಿಕ ವೃತ್ತಿ ಮಹಿಳೆಯರ ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ಸಂಘ ಕಾರ್ಯಪ್ರವೃತ್ತವಾಗಿದೆ. ಇದನ್ನೂ ಓದಿ: ಕೋವಿಡ್‌ ಲಸಿಕೆ ಹಾಕಿಸಲ್ಲವೆಂದು ಮಕ್ಕಳನ್ನೇ ಕಿಡ್ನ್ಯಾಪ್‌ ಮಾಡಿದ ತಾಯಿ – ಮಾಜಿ ಪತಿಯಿಂದ ದೂರು

    ಈ ಕ್ಷೇತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಲೈಂಗಿಕ ವೃತ್ತಿನಿರತ ಮಹಿಳೆಯರ ಮಾನವ ಹಕ್ಕು, ಅವರ ಮಕ್ಕಳ ಪುನರ್ವಸತಿ ಮತ್ತು ಅವರ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಕಾರ್ಯವೆಸಗಿ ಡಾಕ್ಟರೇಟ್‌ ಪದವಿ ಪಡೆದಿರುವ ಡಾ. ಲೀಲಾ ಸಂಪಿಗೆ ಅವರು ಈ ಮಹಿಳೆಯ ಸಾಂಘಿಕ ಒಗ್ಗೂಡುವಿಕೆಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕಿಯಾಗಿದ್ದಾರೆ. ಬೆಳಗಾಗಿ ಜಿಲ್ಲೆಯ ಗೋಕಾಕದ ಈ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದ ಸಾಧನೆ ಬೆಳವಣಿಗೆಗೂ ಇವರ ಮಾರ್ಗದರ್ಶನವೇ ಸ್ಪೂರ್ತಿಯಾಗಿದೆ.

    ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೀಲಾ ಸಂಪಿಗೆ ಅವರ ಸಹಾಯದಿಂದ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಈ ವೃತ್ತಿನಿರತ ಹೆಣ್ಣುಮಕ್ಕಳ ಬರ್ಬರ ಬದುಕಿನ ಬಗ್ಗೆ ಕಾಳಜಿಯಿದ್ದ ಅವರು ತಮ್ಮ ಶಾಸಕ ನಿಧಿಯ ಅನುದಾನದಿಂದ ನೆರವಿನ ಭರವಸೆ ನೀಡಿ, ಕೂಡಲೇ ಜಾರಿಯಾಗುವಂತೆ ಮಾಡಿದರು. ಅದರ ಪ್ರತಿಫಲವೇ ಇದೀಗ ತಲೆಯೆತ್ತಿ ನಿಂತಿರುವ ಶಕ್ತಿ ತಡೆಗಟ್ಟುವ ಮಹಿಳೆಯರ ಸಂಘದ ಈ ಸ್ವಂತ ಕಟ್ಟಡ.

    ಕಾರ್ಯಕ್ರಮದ ವಿಶೇಷ: ಹೊಸ ವರ್ಷದ ಮೊದಲ ವಾರ ಬೆಳಗ್ಗೆ 10:30 ಕ್ಕೆ ಗೋಕಾಕ್‌ನ ಸತೀಶ್ ನಗರದ, 5ನೇ ಕ್ರಾಸ್‌ನಲ್ಲಿ ತಲೆಯೆತ್ತಿ ನಿಂತಿರುವ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಕಟ್ಟಡವನ್ನು ಶಾಸಕ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ವೃತ್ತಿನಿರತ ಮಹಿಳೆಯರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ಕಟ್ಟಡ ಈ ಮಾದರಿಯ ದೇಶದ ಪ್ರಯತ್ನಗಳಲ್ಲಿಯೇ ವಿಶಿಷ್ಟವಾದುದು.

  • ಮಾಜಿ ಸಚಿವ ಜಾರಕಿಹೊಳಿ ಕೇಸಿಗೆ ಕೋವಿಡ್ ಟ್ವಿಸ್ಟ್ – ರೇಪ್ ಕೇಸ್ ತನಿಖೆಗೆ ಅಡ್ಡಿಯಾಗುತ್ತಾ?

    ಮಾಜಿ ಸಚಿವ ಜಾರಕಿಹೊಳಿ ಕೇಸಿಗೆ ಕೋವಿಡ್ ಟ್ವಿಸ್ಟ್ – ರೇಪ್ ಕೇಸ್ ತನಿಖೆಗೆ ಅಡ್ಡಿಯಾಗುತ್ತಾ?

    – ಮುಂದೇನಾಗುತ್ತೆ ಸಿಡಿ ಕೇಸ್? ಜಾರಕಿಹೊಳಿ ಪ್ಲಾನ್ ಏನು?

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಕೋವಿಡ್ ಟ್ವಿಸ್ಟ್ ಸಿಕ್ಕಿದೆ. ಇಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದ್ದ ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಕೊರೊನಾ ಸೋಂಕಿನಿಂದ ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಎಸ್‍ಐಟಿ ತನಿಖೆ ಇನ್ನಷ್ಟು ದಿನ ವಿಳಂಬವಾಗುವ ಸಾಧ್ಯತೆಗಳಿವೆ. ಜಾರಕಿಹೊಳಿ ಜೊತೆ ಅವರ ಕಾರಿನ ಚಾಲಕರು ಹಾಗೂ ಅಡುಗೆ ಭಟ್ಟನಿಗೂ ಸೋಂಕು ತಗುಲಿದೆ ಅಂತ ತಿಳಿದುಬಂದಿದೆ.

    ಕಳೆದ ವಾರ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದ ನಂತ್ರ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ, ನಿನ್ನೆ ರಾತ್ರಿ ಗೋಕಾಕ್‍ನ ಸರ್ಕಾರಿ ಆಸ್ಪತ್ರೆಗೆ ತೆರಳಿ, ಅಡ್ಮಿಟ್ ಆಗಿದ್ದಾರೆ. ರಮೇಶ್ ಜಾರಕಿಹೊಳಿಯವರಿಗೆ ಕೋವಿಡ್ ಸೇರಿ ಹಲವು ರೋಗಗಳು ಬಾಧಿಸುತ್ತಿವೆ. ಹೀಗಾಗಿ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಆಂಟೀನ್ ಮಾಹಿತಿ ನೀಡಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದ್ರೇ ರಮೇಶ್ ಜಾರಕಿಹೊಳಿ ಕನಿಷ್ಠ ಮೂರ್ನಾಲ್ಕು ದಿನವಾದರೂ ಐಸಿಯೂನಲ್ಲಿ ಇರಬೇಕಾಗಲಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಇದಕ್ಕೂ ಮುನ್ನವೇ ಸಚಿವ ಬೈರತಿ ಬಸವರಾಜ್, ಜಾರಕಿಹೊಳಿಗೆ ಕೊರೋನಾ ಬಂದಿದೆ ಅಂತಾ ಹೇಳಿದ್ರು. ಯುವತಿಯ ವಕೀಲರು ಮಾತ್ರ ಜಾರಕಿಹೊಳಿಗೆ ಕೊರೊನಾ ಬಂದಿರೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಇದರ ಸತ್ಯಾಸತ್ಯತೆ ಅರಿಯಲು ಸಂತ್ರಸ್ತೆ ಪರ ವಕೀಲ ಜಗದೀಶ್, ತಮ್ಮ ಆಪ್ತ ವಕೀಲ ಚಂದನ್‍ರನ್ನು ಗೋಕಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಜಾರಕಿಹೊಳಿ ಬೆಂಬಲಿಗರು ವಕೀಲ ಚಂದನ್ ಅವರನ್ನು ಆಸ್ಪತ್ರೆ ಹೊರಗೆ ತಡೆದು ಗಲಾಟೆ ಮಾಡಿದ್ದಾರೆ. ಈ ಬೆನ್ನಲ್ಲೇ ಜಾರಕಿಹೊಳಿ ಐಸಿಯುನಲ್ಲಿರುವ ವಿಡಿಯೋ ರಿಲೀಸ್ ಆಗಿದೆ. ಜಾರಕಿಹೊಳಿ ಐಸಿಯುನಲ್ಲೇ ಇದ್ದಾರೆ ಎಂದು ಟಿಹೆಚ್‍ಓ ರವೀಂದ್ರ ಸ್ಪಷ್ಪಪಡಿಸಿದ್ದಾರೆ.

    ವೈದ್ಯರ ಪ್ರಕಾರ ರಮೇಶ್ ಜಾರಕಿಹೊಳಿ ಆರೋಗ್ಯ ಸಮಸ್ಯೆಗಳು:
    * ಉಸಿರಾಟದ ಸಮಸ್ಯೆ ತೀವ್ರ, ಕೃತಕ ಉಸಿರಾಟ ವ್ಯವಸ್ಥೆ
    * ಮಧುಮೇಹದ ಪ್ರಮಾಣದಲ್ಲಿ ತೀವ್ರ ಏರಿಳಿತ
    * ರಕ್ತದೊತ್ತಡದ ಪ್ರಮಾಣದಲ್ಲಿ ತೀವ್ರ ಏರಿಳಿತ
    * ತೀವ್ರ ಜ್ವರ, ಕೆಮ್ಮು, ಮೈಕೈ ನೋವು
    * ಕೋವಿಡ್ 19 ವೈರಸ್

    ರಮೇಶ್ ಜಾರಕಿಹೊಳಿ ಟ್ರಾವೆಲ್ ಹಿಸ್ಟರಿ
    * ಮಾ.29ರ ತಡರಾತ್ರಿ ಬೆಂಗಳೂರಿಂದ ಬೆಳಗಾವಿಗೆ ಆಗಮನ
    * ರಸ್ತೆ ಮಾರ್ಗವಾಗಿ ಬೆಳಗಾವಿಯಿಂದ ಗೋಕಾಕ್‍ಗೆ ಪ್ರಯಾಣ
    * ಮಾ.30ರಂದು ಗೋಕಾಕ್‍ನಿಂದ ಕೊಲ್ಹಾಪುರಕ್ಕೆ ಪ್ರಯಾಣ
    (ರಸ್ತೆ ಮಾರ್ಗವಾಗಿ ಮಹಾಲಕ್ಷ್ಮಿದೇವಿ ದೇಗುಲಕ್ಕೆ ಆಗಮನ)
    * ಮಾ.30 ಮತ್ತು 31ರಂದು ರಹಸ್ಯ ಸ್ಥಳದಲ್ಲಿ ವಾಸ್ತವ್ಯ
    * ಏಪ್ರಿಲ್ 1ರಂದು ಗೋಕಾಕ್‍ಗೆ ವಾಪಸ್, ಜ್ವರ, ಕೆಮ್ಮು ಬಾಧೆ
    * ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಜಾರಕಿಹೊಳಿಗೆ ಕೋವಿಡ್ ಟೆಸ್ಟ್
    * ಏಪ್ರಿಲ್ 2ರಂದು ಕೋವಿಡ್ ಪಾಸಿಟಿವ್ ರಿಪೋರ್ಟ್, ಹೋಂ ಐಸೋಲೇಷನ್
    * ಏಪ್ರಿಲ್ 4ರಂದು ರಾತ್ರಿ 10:30ಕ್ಕೆ ಉಸಿರಾಟ ಸಮಸ್ಯೆ ತೀವ್ರ
    * ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲು

    ಜಾರಕಿಹೊಳಿ ಪ್ಲಾನ್ ಏನು?: ಕೊರೊನಾ ಸೋಂಕು ತಗುಲಿದ ಪರಿಣಾಮ ರಮೇಶ್ ಜಾರಕಿಹೊಳಿ ಕಡ್ಡಾಯವಾಗಿ ಕ್ವಾರಂಟೈನ್ ಪೂರ್ಣಗೊಳಿಸಬೇಕು. ಆರೋಪಿ ಸಿಗದ ಹಿನ್ನೆಲೆ ಸಿಡಿ ಪ್ರಕರಣದ ತನಿಖೆಗೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಕೋವಿಡ್ ಕಾರಣದಿಂದ ರಮೇಶ್ ಜಾರಕಿಹೊಳಿ ಸುಮಾರು 24 ದಿನ ವಿಚಾರಣೆಯಿಂದ ವಿನಾಯಿತಿ ಪಡೆದು, ಸೇಫ್ ಆಗುವ ಬಗ್ಗೆ ಪ್ಲಾನ್ ಮಾಡಿಕೊಳ್ಳಬಹುದು ಅಥವಾ ಪ್ರಕರಣಕ್ಕೆ ಹೊಸ ತಿರುವು ಸಹ ಸಿಗಬಹುದು.

    ಈ 24 ದಿನದಲ್ಲಿ ತನಿಖೆಯಲ್ಲಿ ಮಹತ್ವದ ಪ್ರಗತಿ ಆಗಬಹುದು. ಅಂದ್ರೆ ಬ್ಲಾಕ್‍ಮೇಲ್ ಪ್ರಕರಣದಲ್ಲಿ ಕಿಂಗ್‍ಪಿನ್‍ಗಳು ಬಂಧನವಾಗಬಹುದು. ಕಿಂಗ್‍ಪಿನ್‍ಗಳ ಬಂಧನದಿಂದ ಸಂತ್ರಸ್ತೆಗೆ ಸಂಕಷ್ಟ ಎದುರಾಗಬಹುದು.

  • ಸದ್ಯಕ್ಕೆ ಎಲೆಕ್ಷನ್ ಮಾಡೋಣ – ಬೆಳಗಾವಿಗೆ ಹೊರಟ ಡಿಕೆಶಿ

    ಸದ್ಯಕ್ಕೆ ಎಲೆಕ್ಷನ್ ಮಾಡೋಣ – ಬೆಳಗಾವಿಗೆ ಹೊರಟ ಡಿಕೆಶಿ

    – ಜಾರಕಿಹೊಳಿ ಬೆಂಬಲಿಗರಿಂದ ಮುತ್ತಿಗೆ ಸಾಧ್ಯತೆ

    ಬೆಂಗಳೂರು: ಸಿಡಿ ಲೇಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರು ತಳುಕು ಹಾಕಿಕೊಂಡಿದೆ. ಬೆಳಗಾವಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಕರಣದಲ್ಲಿ ಪೊಲೀಸರು ತಮ್ಮ ಗೌರವ ಕಾಪಾಡಿಕೊಳ್ಳಲಿ ಎಂದು ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿಯಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಯಾವ ಘನಕಾರ್ಯ ಮಾಡಿದ್ದಾರೆ ಎನ್ನುವುದಕ್ಕೆ ಪ್ರತಿಭಟನೆ ಮಾಡುತ್ತಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭೇಟಿ ನೀಡುತ್ತೇನೆ. ನನಗೆ ಯಾವ ಭದ್ರತೆಯೂ ಬೇಡ ಎಂದು ಹೇಳಿದರು.

    ಅವರು ಏನ್ ಏನೋ ಹೇಳಿಕೆ ಕೊಟ್ಟು ಎಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲೆಲ್ಲಿಂದನೋ ಕರೆದುಕೊಂಡು ಬಂದು ಹೇಳಿಕೆಯನ್ನು ಕೊಡಿಸುತ್ತಿದ್ದಾರೆ. ಪೋಲಿಸರು ತನ್ನ ಗೌರವವನ್ನು ಕಾಪಾಡಿಕೊಳ್ಳಲಿ, ಸರ್ಕಾರ ಏನೋ ಮಾಡಿಕೊಳ್ಳುತ್ತದೆ ಮಾಡಿಕೊಳ್ಳಲಿ. ನಾನು ಮಾನಹಾನಿ ಕೇಸ್ ಹಾಕಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಮಾಡಲಿ. ಪೋಷಕರು ದೂರು ಕೊಟ್ಟಿದ್ದಾರೆ ಕೊಡಲಿ. ಅದಕ್ಕೆ ಮಹಿಳೆ ವೀಡಿಯೋ ಮೂಲಕವಾಗಿ ಉತ್ತರಿಸಿದ್ದಾಳೆ. ತನಿಖೆ ಆಗುತ್ತದೆ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.

    ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗಾವಿ ಆಗಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಮುತ್ತಿಗೆ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

  • ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗ ಗಂಭೀರ

    ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗ ಗಂಭೀರ

    ಬೆಳಗಾವಿ: ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಹುಚ್ಚಾಟ ಹೆಚ್ಚಾಗಿದ್ದು, ವ್ಯಕ್ತಿಯೊಬ್ಬ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ಗಣಪತಿ ರಜಪೂತ (55) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗೋಕಾಕ್ ನಗರದ ಚಿನವಾರ ಗಲ್ಲಿಯ ನಿವಾಸಿಯಾಗಿರುವ ಈತನ ಸ್ಥಿತಿ ಸದ್ಯ ಗಂಭೀರವಾಗಿದೆ.

    ಸಾಹುಕಾರನ ರಾಸಲೀಲೆ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಅಂತ ಅವರ ಅಭಿಮಾನಿಗಳು ಸಿಡಿ ಹೊರಬಂದಾಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಇಂದು ಗೋಕಾಕ್‍ನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಣಪತಿ ಅವರು ಬೆಂಕಿಯಿದ್ದ ಟೈಯರ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

    ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಅವರನ್ನು ಪೊಲೀಸರ ಸಹಾಯದಿಂದ ಅಂಬುಲೆನ್ಸ್‍ನಲ್ಲಿ ರವಾನೆ ಮಾಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಮ್ಮ ಸಾಹುಕಾರ್ ಅಂಥವನಲ್ಲ, ಅಂಥ ತಪ್ಪು ಮಾಡಲ್ಲ. ತಪ್ಪು ಮಾಡುವುದು ಹೇಗೆ ಎಂಬುದು ಗೊತ್ತು ಕೂಡ ಇಲ್ಲ. ಈ ಕಲ್ಲಳ್ಳಿ ಯಾರಿವನು, ಈ ಪ್ರಕರಣ ಸಿಬಿಐ ತನಿಖೆ ಆಗಲೇ ಬೇಕು. ನಾನು ಸತ್ತು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆಸ್ಪತ್ರೆಯಲ್ಲಿಯೇ ಗಣಪತಿ ಹೇಳಿದ್ದಾರೆ.

  • ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷ – ಪವಾಡ ವೀಕ್ಷಿಸಲು ದೇವಾಲಯದತ್ತ ಸೇರಿದ ಜನರ ದಂಡು

    ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷ – ಪವಾಡ ವೀಕ್ಷಿಸಲು ದೇವಾಲಯದತ್ತ ಸೇರಿದ ಜನರ ದಂಡು

    ಬೆಳಗಾವಿ: ಕಲ್ಲಿನ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂಬ ವದಂತಿ ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಹರಿದಾಡುತ್ತಿದೆ. ಶಿವಲಿಂಗ ಮೂರ್ತಿಯನ್ನು ನೋಡಲು ದೇವಾಲಯದತ್ತ ಭಕ್ತಸಾಗರವೇ ಹರಿದುಬರುತ್ತಿದೆ.

    ಬೆಳಗಾವಿ ಜಿಲ್ಲೆ ಗೋಕಾಕ್‍ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಿದ್ದಾರೆ. ಅದನ್ನು ನೋಡಲು ಭಕ್ತರು ತಂಡೋಪತಂಡವಾಗಿ ಶಂಕರಲಿಂಗ ದೇವಾಲಯಕ್ಕೆ ಬರುತ್ತಿದ್ದಾರೆ.

    ಶಿವಲಿಂಗ ವೀಕ್ಷಿಸಿದ ಜನರು ಇಂದು ರಾತ್ರಿ ಸಂಕಷ್ಠಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದೇವಾಲಯದ ಆರ್ಚಕರು ಈ ಹಿಂದೆ 2004 ರಲ್ಲಿಯೂ ಇದೇ ರೀತಿ ಶಿವಲಿಂಗದಲ್ಲಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು. ಇದೀಗ ಪುನಃ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷವಾಗಿದೆ. ಇದು ಶುಭ ಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ.

    ಈ ಹಿಂದೆ ಸಾಯಿಬಾಬಾ ಫೋಟೋದಲ್ಲಿ ವಿಭೂತಿ ಉದುರಿತ್ತು, ಗಣೇಶ ಹಾಲು ಕುಡಿದಿತ್ತು, ಹೀಗೆ ಹಲವಾರು ರೀತಿಯ ವದಂತಿಗಳು ಹಬ್ಬಿದ್ದವು. ಇದೀಗ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಜನ ದಂಡೇ ದೇವಾಲಯದತ್ತಾ ಹರಿದುಬರುತ್ತಿದೆ.

  • ಅತಿ ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ: ರಮೇಶ್ ಜಾರಕಿಹೊಳಿ

    ಅತಿ ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ: ರಮೇಶ್ ಜಾರಕಿಹೊಳಿ

    ಬೆಳಗಾವಿ: ಅತಿ ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ ಮಾಡಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇಂದು ಗೋಕಾಕ್ ಪ್ರತ್ಯೇಕ ಜಿಲ್ಲೆ ಮಾಡುವಂತೆ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯ್ತು.

    ಈ ವೇಳೆ ಮಾತನಾಡಿದ ಸಚಿವರು, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಗೋಕಾಕ್- ಚಿಕ್ಕೋಡಿ ಜಿಲ್ಲೆ ರಚನೆಗೆ ನಿರ್ಣಯಿಸಲಾಗಿತ್ತು. ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಕೇಳಿದರು. ಹಾಗಾಗಿ ಪ್ರತ್ಯೇಕ ಜಿಲ್ಲೆಯ ವಿಚಾರ ಅಷ್ಟಕ್ಕೆ ನಿಂತಿದೆ. ಹೊಸ ತಾಲೂಕು ರಚನೆ ಮಾಡಿ ಬಳಿಕ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆಗೆ ಸಲಹೆ ನೀಡಲಾಗಿದೆ. ಇದೇ ತಾಂತ್ರಿಕ ಕಾರಣದಿಂದ ಗೋಕಾಕ್ ಜಿಲ್ಲೆಯಾಗುವುದು ಬಾಕಿ ಉಳಿದಿದೆ ಎಂದರು.

    ಕೋವಿಡ್ ಮತ್ತು ಆರ್ಥಿಕ ಕಾರಣದಿಂದ ತಾಲೂಕು ರಚನೆ ಬಾಕಿ ಉಳಿದಿದೆ. ಸುಳ್ಳು ಹೇಳುವುದು ನನಗೆ ಬರೋದಿಲ್ಲ. ಬಳ್ಳಾರಿ ಜಿಲ್ಲೆ ವಿಭನೆ ಏಕೆ ಆಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ಕಾರಣವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬಜೆಟ್ ಮುಗಿದ ಬಳಿಕ ನಿಯೋಗದ ಜೊತೆ ಹೋಗಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡೋಣ. ಅತಿ ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ಮಾಡೋಣ ಎಂದು ಸಚಿವರು ಭರವಸೆ ನೀಡಿದರು.

  • ಬೆಂಗ್ಳೂರು ಮಾದರಿಯಲ್ಲಿ ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್

    ಬೆಂಗ್ಳೂರು ಮಾದರಿಯಲ್ಲಿ ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್

    ಬೆಳಗಾವಿ: ಕೊರೊನಾ ಚೈನ್ ಕಟ್ ಮಾಡುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ. ಇದೀಗ ಬೆಂಗಳೂರು ಮಾದರಿಯಲ್ಲಿ ಗೋಕಾಕ್ ತಾಲೂಕಿನಲ್ಲಿ 7 ರಿಂದ 10 ದಿನ ಲಾಕ್‍ಡೌನ್ ಮಾಡಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.

    ಸಂಡೇ ಲಾಕ್‍ಡೌನ್ ಮಧ್ಯೆ ಸಚಿವರಿಂದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಮಾಡಲಾಗಿದೆ. ಗೋಕಾಕ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್‍ಗೆ ನಿರ್ಧಾರ ಮಾಡಲಾಗಿದೆ.

    ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಮಂಗಳವಾರ ರಾತ್ರಿ 8 ಗಂಟೆಯಿಂದ ಗೋಕಾಕ್ ತಾಲೂಕಿನಲ್ಲಿ ಲಾಕ್‍ಡೌನ್ ಜಾರಿಯಾಗಲಿದೆ. ಕೊರೊನಾ ಚೈನ್ ಕಟ್ ಮಾಡಲು ಬೆಂಗಳೂರನ್ನು ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಶಾಸಕರು, ಅಧಿಕಾರಿಗಳು ಆಯಾ ತಾಲೂಕು ಅಧಿಕಾರಿಗಳು ಲಾಕ್‍ಡೌನ್ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ. ಯಾಕೆಂದರೆ ನಮಗೆ ಜನರ ಜೀವಕ್ಕಿಂತ ಬೇರೆ ಯಾವುದೇ ಮುಖ್ಯವಲ್ಲ. ಹೀಗಾಗಿ 7 ರಿಂದ 10 ದಿನ ಲಾಕ್‍ಡೌನ್ ಜಾರಿ ಮಾಡಲಾಗುತ್ತಿದೆ.

    ಗೋಕಾಕ್ ಜನರು ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್‍ಗೆ ಸಲಹೆ ಕೊಟ್ಟಿದ್ದಾರೆ. ಲಾಕ್‍ಡೌನ್ ವೇಳೆ ಹಾಲು, ತರಕಾರಿ ಅಗತ್ಯ ಸೇವೆ ಪೂರೈಕೆ ಮಾಡುತ್ತೇವೆ. ಜನರು ಯಾರೂ ಮನೆಯಿಂದ ಹೊರಗೆ ಬರಬಾರದು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅಂಗಡಿ ತೆರೆಯಲು ಕೂಡ ಅವಕಾಶ ಇಲ್ಲ. ಈ ಬಾರಿ ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಗೋಕಾಕ್‍ನಲ್ಲಿ ಕಠಿಣ ಲಾಕ್‍ಡೌನ್ ಜಾರಿ ಮಾಡಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

  • ಮಗನ ಎದೆಗೆ ಕೊಡಲಿ ಏಟು ಹಾಕಿ ಕೊಲೆಗೈದ ತಂದೆ

    ಮಗನ ಎದೆಗೆ ಕೊಡಲಿ ಏಟು ಹಾಕಿ ಕೊಲೆಗೈದ ತಂದೆ

    ಬೆಳಗಾವಿ: ತಂದಯೇ ಮಗನ ಎದೆಗೆ ಕೊಡಲಿ ಏಟು ಹಾಕಿ ಕೊಲೆಗೈದ ಘಟನೆ ಗೋಕಾಕ್ ತಾಲೂಕಿನ ಮೇಲ್ಮನಹಟ್ಟಿಯಲ್ಲಿ ನಡೆದಿದೆ.

    ಮೇಲ್ಮನಹಟ್ಟಿಯ ಯಮನಪ್ಪ(41) ಕೊಲೆಯಾದ ಮಗ. ಬಾಳಪ್ಪ ಗುತ್ತಿಗೆ ಹತ್ಯೆಗೈದ ತಂದೆ. ದನಕ್ಕೆ ಮೇವು ಹಾಕುವ ವಿಚಾರಕ್ಕೆ ತಂದೆ ಮಗನ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

    ಬಾಳಪ್ಪ ಇಂದು ದನಕ್ಕೆ ಮೇವು ಹಾಕುವಂತೆ ಮಗನಿಗೆ ಹೇಳಿದ್ದ. ಆದರೆ ಯಮನಪ್ಪ ತಂದೆಯ ಮಾತನ್ನು ನಿರ್ಲಕ್ಷಿಸಿ ಸುಮ್ಮನಾಗಿದ್ದ. ಇದರಿಂದ ಕೋಪಗೊಂಡ ಬಾಳಪ್ಪ ಮಗ ಜೊತೆಗೆ ಜಗಳ ಆರಂಭಿಸಿದ್ದ. ಪರಿಣಾಮ ಮಾತಿಗೆ ಮಾತು ಬೆಳೆದು ಕೊಡಲಿ ಹಿಡಿದಿದ್ದ ಬಾಳಪ್ಪ ಮಗನ ಎದೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯಮನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಳಪ್ಪ ಪರಾರಿಯಾಗಿದ್ದಾನೆ.

    ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನಿಗೆ ಬಲೆ ಬೀಸಿದ್ದಾರೆ.

  • ಪೂಜೆಗೆ ಬರುತ್ತೆ, ಪ್ರಸಾದ ತಿನ್ನುತ್ತೆ, ಕಣ್ಮರೆ ಆಗುತ್ತೆ-ಏನಿದು ಯೋಗಿಕೊಳ್ಳದ ಏಡಿ ಮಹಿಮೆ?

    ಪೂಜೆಗೆ ಬರುತ್ತೆ, ಪ್ರಸಾದ ತಿನ್ನುತ್ತೆ, ಕಣ್ಮರೆ ಆಗುತ್ತೆ-ಏನಿದು ಯೋಗಿಕೊಳ್ಳದ ಏಡಿ ಮಹಿಮೆ?

    ಬೆಳಗಾವಿ: ಈ ಭೂಮಂಡಲದಲ್ಲಿ ದೇವರು ಇದ್ದಾನೆಂದು ಮನುಷ್ಯ ಹೇಗೆ ನಂಬಿದ್ದಾನೋ ಅದರಂತೆ ವಿಸ್ಮಯಗಳು ಕೂಡ ನಡೆಯುತ್ತಿರುವುದು ಸತ್ಯ. ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ಏಡಿ ಸಹ ಪೂಜೆ ಸಮಯಕ್ಕೆ ಬಂದು ಪ್ರಸಾದ ತಿಂದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

    ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ನೂರಾರು ಅಡಿ ಎತ್ತರದ ಬಂಡೆಯ ಗೂಹೆಯೊಂದರಲ್ಲಿ ಗಂಗಾಮಾತೆ ನೆಲೆಸಿದ್ದಾಳೆ. ಗಂಗಾಮಾತೆಗೆ ಪ್ರತಿದಿನ ಪೂಜೆ ನಡೆಯುತ್ತದೆ. ಈ ಪೂಜಾ ಸಮಯದಲ್ಲಿ ವಿಶೇಷ ಅತಿಥಿಯಾಗಿ ಏಡಿ ಪ್ರತ್ಯಕ್ಷವಾಗುತ್ತೆ. ಪೂಜೆಯ ಪ್ರಸಾದ ತಿಂದು ನಂತರ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಗಂಗಾಮಾತೆಯ ಪೂಜಾ ವೇಳೆ ಏಡಿಯ ಈ ನಡೆಯನ್ನು ನೋಡಿ ಅರ್ಚಕರೇ ಬೆರಗಾಗಿದ್ದಾರೆ.

    ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಗಂಗಾಮಾತೆಗೆ ಪೂಜೆ ಸಲ್ಲಿಸುಲಾಗುತ್ತದೆ. ಪೂಜೆ ಸಮಯಕ್ಕೆ ಸರಿಯಾಗಿ ಕಾಣಿಸಿಕೊಳ್ಳುವ ಏಡಿ, ಪ್ರಸಾದ ಸೇವಿಸಿದ ಬಳಿಕ ಹೋಗುತ್ತದೆ. ಆದ್ರೆ ಅದು ಎಲ್ಲಿ ಹೋಗುತ್ತೆ ಎಂಬುದರ ಬಗ್ಗೆ ಗೊತ್ತಿಲ್ಲ. ಪೂಜೆ ಬಳಿಕ ಏಡಿ ಯಾರಿಗೂ ಕಾಣಲ್ಲ ಎಂದು ಯೋಗಿಕೊಳ್ಳಮಠ ಅರ್ಚಕ ಮಲ್ಲಯ್ಯ ಪೂಜಾರಿ ಹೇಳುತ್ತಾರೆ.

    ಈ ಗುಹೆಯೊಳಗೆ ಐನೂರು ವರ್ಷಗಳ ಹಳೆಯದಾದ ಮಲ್ಲಯ್ಯ ದೇವರ ಉದ್ಭವ ಮೂರ್ತಿ ಇದೆ. ಆದರೆ ಗಂಗಾದೇವತೆಯ ಪೂಜಾ ಸಮಯದ ವೇಳೆ ದಿನನಿತ್ಯ ಏಡಿ ಬರುವುದು ವಿಶೇಷವಾಗಿದೆ. ಸಹಜವಾಗಿ ಬೆಂಕಿ ಎಂದಾಕ್ಷಣ ಪ್ರಾಣಿ ಪಕ್ಷಿಗಳು ಭಯಪಡುವುದು ಸಹಜ. ಆದರೆ ಕರ್ಪೂರ ಹಚ್ಚಿ ದೀಪ ಬೆಳಗುತ್ತಿದ್ದಂತೆ ಏಡಿ ಬಂದು ದರ್ಶನ ಪಡೆಯುವುದು ವಿಸ್ಮಯಕಾರಿ. ಈ ವಿಸ್ಮಯ ನೋಡಲು ಭಕ್ತರು ಬೆಳ್ಳಂಬೆಳಗ್ಗೆ ಜಮಾಯಿಸಿರುತ್ತಾರೆ. ಒಟ್ಟಾರೆಯಾಗಿ ಗಂಗಾಮಾತೆಯ ಪೂಜೆಯ ವೇಳೆ ಈ ವಿಸ್ಮಯ ನೋಡಿ ಪವಾಡವೇ ಎಂದು ಜನರು ನಂಬಿದ್ದಾರೆ.