ಮಂಡ್ಯ: ಕಾರ್ಯಕ್ರಮದ ನಡುವೆ ರಸಗೊಬ್ಬರ ಕೇಳಿದ್ದಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಅವರು ವೇದಿಕೆಯಲ್ಲೇ ಕೆಂಡಾಮಂಡರಾದ ಪ್ರಸಂಗ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆಯಿತು.
ಬಿತ್ತಿನೆ ರಾಗಿ ವಿತರಣೆ ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಮಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಕುರಿತು ಭಾಷಣ ಮಾಡುತ್ತಿದ್ದ ವೇಳೆ, ರೈತರೊಬ್ಬರು (Farmer) ಮೊದಲು ರಸಗೊಬ್ಬರ ಕೊಡುವಂತೆ ಕೇಳಿದರು. ಅಲ್ಲದೇ ಮಾತಿಗೆ ಮಾತು ಬೆಳೆಸಿ ಸಚಿವರ ಜೊತೆಗೆ ರೈತ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಕೋಪಗೊಂಡ ಸಚಿವರು ರೈತನಿಗೆ ವೇದಿಕೆಯಲ್ಲೇ ನಿಂತು ಗದರಿದರು. ಮಾತು ಕೇಳಲು ಇಷ್ಟ ಇಲ್ಲದಿದ್ರೆ ಹತ್ತಿ ಕೊಡಿ, ಇಲ್ಲ ಅಂದ್ರೆ ಟವೆಲ್ ಸುತ್ತಿಕೊಳ್ಳಲಿ. ನಾನು ಇಲ್ಲಿ ಚೌಕಾಸಿ ಮಾಡೋದಕ್ಕೆ ಬಂದಿಲ್ಲ. ಕರೆಕ್ಟಾಗಿ ಕೇಳಿದ್ರೆ ನಾನು ಕರೆಕ್ಟಾಗಿ ಹೇಳ್ತೀನಿ. ಪ್ರತೀ ಮನೆಗೆ ತಿಂಗಳಿಗೆ 2 ಸಾವಿರ ಕೊಡ್ತಿದ್ದೀವಿ. ವರ್ಷಕ್ಕೆ ನಾಗಮಂಗಲಕ್ಕೆ 200 ಕೋಟಿ ಕೊಡ್ತಿದ್ದೀವಿ. ತಾಲ್ಲೂಕು ಪಂಚಾಯತಿ ಬಿಲ್ಡಿಂಗ್ ಕಟ್ಟಿದ್ದು ಯಾರು? ನಾಗಮಂಗಲಕ್ಕೆ ಕೆಇಬಿ ಆಫೀಸ್ ತಂದಿದ್ದು ಯಾರು? ಎಂದೆಲ್ಲ ರೈತನ ಮೇಲೆ ಗದರಿದರು.
ಬೀದರ್: ರಾಜ್ಯದ ಹಲವೆಡೆ ರಸಗೊಬ್ಬರ ಸಮಸ್ಯೆ ಇದೆ. ರೈತರು ಪರದಾಡ್ತಾ ಇದ್ದಾರೆ. ಆದ್ರೆ ಈ ವಿಚಾರದಲ್ಲಿ ಕೇಂದ್ರದ ರಸಗೊಬ್ಬರ ಸಚಿವ ಭಗವಂತ್ ಖೂಬಾ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ. ಜೊತೆಗೆ ರೈತರೊಬ್ಬರು ನಮ್ಮ ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದರು. ಇದಕ್ಕೆ ಖಾರವಾಗಿ ಪ್ರತ್ಯುತ್ತರ ನೀಡಿದ್ದು ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ರಸಗೊಬ್ಬರ ವಿತರಣೆ ವಿಚಾರವಾಗಿ ತಮಗೆ ಕರೆ ಮಾಡಿದ ರೈತ ಶ್ರೀಮಂತ ಪಾಟೀಲ್ ಜೊತೆ ಭಗವಂತ್ ಖೂಬಾ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಜೊತೆಗೆ ಸಚಿವರು ಮತ್ತು ರೈತರ ನಡುವಿನ ಸಂಭಾಷಣೆಯ ಆಡಿಯೋ ಕೂಡ ವೈರಲ್ ಆಗಿದೆ. ರೈತನಿಗೆ ಅವಾಚ್ಯ ಶಬ್ಧಗಳಿಂದ ಖೂಬಾ ನಿಂದಿಸಿದ್ದಾರೆ ಎಂದು ಆರೋಪವಿದ್ದು, ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡ ಜಮೀನು ಮಾರುಕಟ್ಟೆ ದರದಲ್ಲಿ ಖರೀದಿಸಲು ರೈತರರಿಂದ ಸಚಿವ ಮುರುಗೇಶ್ ನಿರಾಣಿಗೆ ಒತ್ತಾಯ
ಭಗವಂತ್ ಖೂಬಾ ಬೀದರ್ ಸಂಸದರು ಕೂಡ ಹೌದು. ಹೀಗಾಗಿ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಹೆಡಗಾಪುರದ ರೈತ ಶ್ರೀಮಂತ ಪಾಟೀಲ್, ಸಚಿವರಿಗೆ ಫೋನ್ ಮಾಡಿ ಸರ್ ನಮ್ಮೂರಲ್ಲಿ ಗೊಬ್ಬರ ಸಿಗುತ್ತಿಲ್ಲ ಸಮಸ್ಯೆ ಬಗಹರಿಸಿ ಎಂದು ಕೇಳಿದ್ದಾರೆ. ಇದಕ್ಕೆ ಉಡಾಫೆ ಉತ್ತರ ನೀಡಿದ ಅವರು, ಅದಕ್ಕೆ ನಾನೇನು ಮಾಡ್ಲಿ. ರಾಜ್ಯಕ್ಕೆ ಕಳಿಸೊದಷ್ಟೇ ನನ್ನ ಕೆಲಸ. ಅಲ್ಲಿನ ಶಾಸಕನ್ನು ಕೇಳಿ. ಸಾವಿರಾರು ನೌಕರರು ಇದ್ದಾರೆ ಅವರು ನೋಡ್ಕೋತಾರೆ, ಅವರನ್ನೇ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ ಎಂದಿದ್ದಾರೆ. ಇದರಿಂದ ಸಿಟ್ಟಾದ ರೈತ, ಮುಂದಿನ ಬಾರಿ ಹೇಗೆ ಆರಿಸಿ ಬರ್ತೀರಿ ನೋಡ್ತಿನಿ ಎಂದಿದ್ದಾರೆ. ಇದಕ್ಕೆ, ಮುಂದಿನ ಬಾರಿ ಹೇಗೆ ಗೆಲ್ಲೋದು ನನಗೆ ಗೊತ್ತಿದೆ. ಪ್ರತಿಯೊಬ್ಬ ರೈತರಿಗೂ ಗೊಬ್ಬರ ಸಿಕ್ಕಿದ್ಯಾ ಅಂತಾ ನಾನು ನೋಡೋಕೆ ಆಗುತ್ತಾ ಎಂದು ಅವಾಜ್ ಹಾಕಿದ್ದಾರೆ. ಈ ಅಡಿಯೋ ವೈರಲ್ ಆಗುತ್ತಿದೆ.
ಮಡಿಕೇರಿ: ದೇಶವನ್ನು ಸ್ವಚ್ಛವಾಗಿರಿಸಬೇಕೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವೇ ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇಂದಿಗೂ ಅದು ಪರಿಪೂರ್ಣವಾಗಿ ಜಾರಿಗೊಂಡಿಲ್ಲ. ಆದರೆ ಇಲ್ಲೊಬ್ಬರು ಜನಪ್ರತಿನಿಧಿ ಕಸವನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಸ್ವಚ್ಛ ಪಟ್ಟಣವನ್ನಾಗಿ ಮಾಡುವುದಕ್ಕಾಗಿ ಪಣತೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಅವರೆ ಒಂದು ಯುವಕರ ತಂಡ ಕಟ್ಟಿಕೊಂಡು ಕಸಮುಕ್ತ ಪಟ್ಟಣವನ್ನು ಮಾಡಲು ಮುಂದಾಗಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣ ಪಂಚಾಯಿತಿ ಬಿಜೆಪಿಯ ಸದಸ್ಯ ಮನು ಅವರು ಅಳಿಲು ಸೇವೆ ಸಂಸ್ಥೆ ಹೆಸರಿನಲ್ಲಿ ‘ನಮ್ಮ ಕಸ, ನಮ್ಮಲೇ ಗೊಬ್ಬರ’ ಪರಿಕಲ್ಪನೆ ಮೂಲಕ ವಿನೂತನ ಜಾಗೃತಿ ಮೂಡಿಸುತ್ತಿದ್ದಾರೆ. ಪಟ್ಟಣ, ನಗರಗಳು ಬೆಳೆದಂತೆ ದಿನನಿತ್ಯ ಕಸ ಉತ್ಪಾದನೆಯಾಗುವ ಪ್ರಮಾಣ ಹೆಚ್ಚುತ್ತಲೇ ಇದೆ. ಆ ಕಸವನ್ನು ಶುದ್ಧವಾಗಿ ಪರಿಷ್ಕರಣೆ ಮಾಡಿ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗುತ್ತಿದೆ. ಇದನ್ನು ತಪ್ಪಿಸುವ ವೈಜ್ಞಾನಿಕ ಕ್ರಮ ‘ನಮ್ಮ ಕಸ, ನಮ್ಮಲೇ ಗೊಬ್ಬರ’ ಪರಿಕಲ್ಪನೆ. ಇದನ್ನೂ ಓದಿ: ಗೋಮಾಂಸ ಸಾಗಾಟ – ಇಬ್ಬರು ಆರೋಪಿಗಳು ಸೆರೆ
ಕೋವಿಡ್ ತೀವ್ರಗೊಂಡು ದೇಶದಲ್ಲಿ ಲಾಕ್ಡೌನ್ ಜಾರಿಯಾದಾಗ ಮನೆಯಲ್ಲಿಯೇ ಇದ್ದ ಮನು ಅವರು, ತಮ್ಮ ಮನೆಯಲ್ಲಿ ಉತ್ಪಾದನೆ ಆಗುತ್ತಿದ್ದ ಕಸವನ್ನು ವಿಲೇವಾರಿ ಮಾಡುವುದು ಕಷ್ಟವಾಗಿ ಅದನ್ನು ಮನೆಯಲ್ಲೇ ಕರಗಿಸಿ ಗೊಬ್ಬರ ಮಾಡಲು ಚಿಂತಿಸಿದ್ದರು. ಆಗಲೇ ಈ ಯೋಜನೆ ತಲೆಗೆ ಒಳೆದಿದ್ದು ಎಂದು ವಿವರಿಸಿದ್ದಾರೆ.
ಮಾಡುವುದು ಹೇಗೆ?
ತರಕಾರಿ ಸಿಪ್ಪೆ, ಉಳಿದ ಆಹಾರ ಪದಾರ್ಥಗಳು, ಆಹಾರದ ವೇಸ್ಟ್ ಸೇರಿದಂತೆ ಯಾವುದೇ ರೀತಿಯ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಅದಕ್ಕಾಗಿ ಮನೆಯ ಸುತ್ತಮುತ್ತ ಕೇವಲ ಒಂದಡಿ ಜಾಗವಿದ್ದರೆ ಸಾಕು. ಜೊತೆಗೆ ಆರು ಅಡಿ ಎತ್ತರ, ಒಂದಡಿ ಅಗಲದ ಪ್ಲಾಸ್ಟಿಕ್ ಪೈಪು ಇದ್ದರೆ ಸಾಕು. ಒಂದಡಿ ಆಳದ ಗುಂಡಿ ತೆಗೆದು ಪ್ಲಾಸ್ಟಿಕ್ ಪೈಪನ್ನು ನೆಟ್ಟಗೆ ಹೂತರೆ ಕಸ ವಿಲೇವಾರಿ ಘಟಕ ರೆಡಿ.
ಆರು ಅಡಿ ಉದ್ದದ ಪೈಪಿಗೆ ಮೂರು ತಿಂಗಳ ಹಸಿ ಕಸವನ್ನು ಅದಕ್ಕೆ ತುಂಬಬಹುದು. ಕಸ ತುಂಬುವುದಕ್ಕೂ ಮೊದಲು ಮೂರು ಹಿಡಿ ಬೆಲ್ಲದ ಪುಡಿ ಮತ್ತು ಮೂರು ಹಿಡಿಯಷ್ಟು ಸಗಣಿ ಹಾಕಬೇಕು. ಹೀಗೆ ಹಾಕಿದರೆ ನಾವು ತುಂಬುವ ಹಸಿಕಸ ಸುಲಭವಾಗಿ ಕರಗುತ್ತೆ ಎನ್ನುತ್ತಾರೆ ಮನು.
ತಮ್ಮ ಅಳಿಲು ಸೇವಾ ಸಂಸ್ಥೆ ಮೂಲಕ ಇದುವರೆಗೆ 150 ಕುಟುಂಬಗಳಿಗೆ ಈ ಘಟಕ ಮಾಡಿಸಿದ್ದಾರೆ. ಇದೀಗ ಆ ಕುಟುಂಬಗಳಲ್ಲಿ ಕೆಲವರು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದೇ ಗೊಬ್ಬರ ಬಳಸಿ ಮನೆಯ ತಾರಸಿಗಳಲ್ಲಿ ಹಣ್ಣು ತರಕಾರಿ ಮತ್ತು ಹೂವುಗಳನ್ನು ಬೆಳೆಯುತ್ತಿದ್ದಾರೆ. ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಮಾಡಿರುವ ಈ ಒಂದು ಘಟಕ ಮೂರು ಜನರಿಗೆ ಮೂರು ರೀತಿಯ ಅನುಕೂಲಗಳನ್ನು ಒದಗಿಸುತ್ತಿದೆ.
ಒಂದೆಡೆ ಕಸವಿಲೇವಾರಿ ಸರಳವಾಗಿದ್ದರೆ, ಮತ್ತೊಂದೆಡೆ ಅಲ್ಲಿ ಉತ್ಪಾದನೆಯಾಗುವ ಸಾವಯವ ಗೊಬ್ಬರದಿಂದ ಮನೆಯ ತಾರಸಿಗಳಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಹಣ ಉಳಿಸಿಕೊಳ್ಳುತ್ತಿದ್ದಾರೆ. ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಯಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆ ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ
150 ಕುಟುಂಬಗಳಲ್ಲಿ ಮಾಡಿರುವ ಈ ಕಸ ಸಂಸ್ಕರಣಾ ಘಟಕಗಳನ್ನು ಇನ್ನಷ್ಟು ಕುಟುಂಬಗಳಿಗೆ ವಿಸ್ತರಣೆ ಮಾಡುವ ಚಿಂತನೆಯಲ್ಲಿ ಇದ್ದಾರೆ. ಅಳಿಲು ಸೇವಾ ಸಂಸ್ಥೆಯವರು ಹೆಚ್ಚು ಸಾವಯವ ಗೊಬ್ಬರ ಉತ್ಪಾದನೆ ಆದಲ್ಲಿ ಅದನ್ನು ಅಳಿಲು ಸೇವಾ ಸಂಸ್ಥೆಯೇ ಖರೀದಿ ಮಾಡುವ ಚಿಂತನೆಯಲ್ಲಿದೆ ಎಂದು ವಿರಿಸಿದರು.
ಬೆಂಗಳೂರು: ನಕಲಿ ಬಿತ್ತನೆ ಬೀಜ ಮತ್ತು ನಕಲಿ ಗೊಬ್ಬರ ಮಾರಾಟ ಮಾಡುವ ಕಂಪನಿ ಹಾಗೂ ಮಾಲೀಕರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಉತ್ತರ ನೀಡಿದ ಈಶ್ವರಪ್ಪ, ರೈತರಿಗೆ ಮೋಸ ಮಾಡುವ ಕಂಪನಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಬಿಜೆಪಿ ಸದಸ್ಯ ರವಿಕುಮಾರ್, ರಾಜ್ಯದಲ್ಲಿ ನಕಲಿ ಬೀಜಗಳ ಹಾವಳಿ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ 8,500 ಕ್ವಿಂಟಾಲ್ ನಕಲಿ ಬೀಜ ಸಿಕ್ಕಿದೆ. ಕೃಷಿ ಇಲಾಖೆಯೇ ದಾಳಿ ಮಾಡಿ ಸುಮಾರು 500 ಕ್ವಿಂಟಾಲ್ ವಶ ಮಾಡಿಕೊಂಡಿದೆ. 12-15 ಕೋಟಿ ಮೊತ್ತ ಇದರ ಬೆಲೆಯಾಗಿದೆ. ನಕಲಿ ಹಾಗೂ ಅಕ್ರಮ ಬೀಜದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಇದನ್ನೂ ಓದಿ: ಓಬಿಸಿ ಮೀಸಲಾತಿ ಕೈ ಬಿಟ್ಟು ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ನಡೆಸುವುದಿಲ್ಲ: ಈಶ್ವರಪ್ಪ
ಇಷ್ಟೆಲ್ಲಾ ಆದರೂ ಕೇವಲ 10 ಕೇಸ್‌ಗಳು ಮಾತ್ರ ಈ ವರ್ಷ ದಾಖಲಾಗಿವೆ. ಇದು ಸರಿಯಲ್ಲ. ಲೈಸೆನ್ಸ್ ಇಲ್ಲದೆ ಕಂಪನಿಗಳು ನಕಲಿ ಬೀಜ ಮಾರಾಟ ಮಾಡುತ್ತಿವೆ. ಓದಲು ಬಾರದ ರೈತರಿಗೆ ಕಂಪನಿಗಳು ಅನ್ಯಾಯ ಮಾಡುತ್ತಿವೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಕುಮಾರ್ ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಈಶ್ವರಪ್ಪ, ನಕಲಿ ಬಿತ್ತನೆ ಬೀಜ ಮಾರಾಟ ಮಾಡುವುದು ಆಘಾತಕಾರಿ ವಿಷಯ. ರೈತರಿಗೆ ಮೋಸ ಮಾಡುವ ಯಾವುದೇ ಕಂಪನಿಗಳನ್ನು ಬಿಡುವುದಿಲ್ಲ. ಬಿತ್ತನೆ ಬೀಜ ಆಗಲಿ ಅಥವಾ ಗೊಬ್ಬರದಲ್ಲಿಯೇ ಆಗಲಿ ಯಾರೇ ಮೋಸ ಮಾಡಿದರೂ ಅಂತಹ ಕಂಪನಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಎಷ್ಟೇ ಪ್ರಭಾವಿಗಳಾದರೂ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಂಚರಾಜ್ಯಗಳ ಸೋಲು ಕಾಂಗ್ರೆಸ್‍ಗೆ ಬದಲಾವಣೆ ಆಗೋದಕ್ಕೆ ಪಾಠ: ಸತೀಶ್ ಜಾರಕಿಹೊಳಿ
ಈ ಬಗ್ಗೆ ಶೀಘ್ರವೇ ಕೃಷಿ ಇಲಾಖೆ, ಸಚಿವರ ಜೊತೆ ಪರಿಷತ್ ಸದಸ್ಯರ ಸಭೆ ಮಾಡಿ ಅಂತಹ ಕಂಪನಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ನವದೆಹಲಿ: ರಾಜ್ಯದಲ್ಲಿನ ರೈತರಿಗೆ ಅನುಕೂಲ ಕಲ್ಪಿಸಲು ಹಿಂಗಾರು ಹಂಗಾಮಿಗೆ 32,000 ಟನ್ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಗೊಬ್ಬರ ಪೂರೈಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶುಕ್ರವಾರ ಮನವಿ ಸಲ್ಲಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿ ಈ ಕುರಿತ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ
ಡಿಎಪಿ ಮಾತ್ರವಲ್ಲದೆ, ರಾಜ್ಯಕ್ಕೆ 10,000 ಟನ್ ಪೊಟ್ಯಾಷ್ ಗೊಬ್ಬರದ ಬೇಡಿಕೆ ಇದೆ. ಅದರ ಪೂರೈಕೆಗೂ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಬೇಡಿಕೆ ಈಡೇರಿಸುವ ಭರವಸೆ ದೊರೆತಿದೆ. ಸದ್ಯ ರಾಜ್ಯದಲ್ಲಿ ಯುರಿಯಾ ಗೊಬ್ಬರದ ಕೊರತೆ ಇಲ್ಲ. ಕೊರತೆ ಇರುವ ಗೊಬ್ಬರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ
ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನ ಯಶಸ್ವಿ ಅಗಿರುವ ಬಗ್ಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಶೇ 90ರಷ್ಟು ಜನತೆಗೆ ಮೊದಲ ಹಂತದ ಲಸಿಕೆಯನ್ನೂ, ಶೇ 70ರಷ್ಟು ಅರ್ಹರಿಗೆ ಎರಡನೇ ಹಂತದ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಈಗ ರಾಜ್ಯದಲ್ಲಿ 51 ಲಕ್ಷ ಡೋಸ್ ಲಸಿಕೆ ಸಂಗ್ರಹ ಇದೆ ಎಂದೂ ಅವರು ವಿವರಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಜರಿದ್ದರು. ಇದನ್ನೂ ಓದಿ: ಫ್ಯಾಬ್ರಿಕ್ ಗೋಡೌನ್‍ನಲ್ಲಿ ಬೆಂಕಿ – ಸ್ಥಳಕ್ಕೆ ಆಗಮಿಸಿದ 18 ಅಗ್ನಿ ಶಾಮಕ ವಾಹನ
ಹಾಸನ: ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ ಆದರೆ ಗೊಬ್ಬರ ಖರೀದಿಸಲು ಅವಕಾಶವಿಲ್ಲ ಇದೆಂಥಾ ನ್ಯಾಯ ಎಂದು ಜಿಲ್ಲಾಡಳಿತ ಎಡಬಿಡಂಗಿ ಕ್ರಮದ ಬಗ್ಗೆ ರೈತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ರೈತರಿಗೆ ಬಹುಮುಖ್ಯವಾಗಿ ಬೇಕಾದ ಗೊಬ್ಬರದಂಗಡಿ, ಬಿತ್ತನೆ ಬೀಜದ ಅಂಗಡಿಗಳನ್ನು ಬಾಗಿಲು ಮುಚ್ಚಿಸಲಾಗಿದೆ. ಆದರೆ ವೈನ್ ಶಾಪ್ ಗಳನ್ನು ತೆರೆಯಲು ರಾಜಾರೋಷವಾಗಿ ಅವಕಾಶ ಕಲ್ಪಿಸಿದ್ದಾರೆ. ನಿಮ್ಮದು ಅದೆಂಥ ಸರ್ಕಾರ, ನಿಮಗೆ ಮಾನ ಮರ್ಯಾದೆ ಇಲ್ಲ. ಮುಂಗಾರು ಸಮಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ರೈತರಿಗೆ ಬಹುಮುಖ್ಯವಾಗಿ ಬೇಕಾದ ಕೃಷಿ ಚಟುವಟಿಕೆ ಅಂಗಡಿಗಳನ್ನು ಬಾಗಿಲು ಹಾಕಿಸಿದ್ದೀರಲ್ಲ, ನಿಮಗೆ ನಾಚಿಕೆಯಾಗಬೇಕು ಎಂದು ಬಾಗಿಲು ತೆರೆದಿರುವ ಮದ್ಯದಂಗಡಿ ಮತ್ತು ಬಾಗಿಲು ಹಾಕಿರುವ ಗೊಬ್ಬರದಂಗಡಿ ಎರಡರ ಮುಂದೆಯೂ ನಿಂತು ಕಿಡಿಕಾರಿದ್ದಾರೆ.
ಏಳು ದಿನಗಳ ಕಾಲ ಲಾಕ್‍ಡೌನ್
ಇಂದಿನಿಂದ ಏಳು ದಿನಗಳ ಕಾಲ ಹಾಸನ ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಏಳು ದಿನಗಳ ಲಾಕ್ ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಗೆ ಮಾತ್ರ ಅವಕಾಶ ನೀಡಿದೆ. ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ ಅಗತ್ಯ ವಸ್ತುಗಳು ಹೋಂ ಡೆಲಿವರಿಗೆ ಮಾತ್ರ ವಿನಾಯಿತಿ ಕಲ್ಪಿಸಲಾಗಿದೆ. ಉಳಿದಂತೆ ವೈದ್ಯಕೀಯ ಸೇವೆ, ನ್ಯಾಯಬೆಲೆ ಅಂಗಡಿ, ಹಾಲಿನಬೂತ್ ಗಳನ್ನು ಪ್ರತಿ ದಿನ ತೆರೆಯಲು ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸೋಮವಾರವಾದ್ದರಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಹಳ್ಳಿಯಿಂದ ಜನ ಆಗಮಿಸಿದ್ದರು. ಆದರೆ ಗ್ರಾಮೀಣ ಭಾಗದ ಜನರನ್ನು ಪಟ್ಟಣದ ಹೊರಗಡೆಯೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದು, ಇಂದಿನಿಂದ ಜೂನ್ 14 ರವರೆಗೆ ಸಂಪೂರ್ಣ ಲಾಕ್‍ಡೌನ್ ಇದೆ, ಮನೆಗೆ ವಾಪಸ್ ಹೋಗಿ ಎಂದಿದ್ದಾರೆ. ಲಾಕ್ ಡೌನ್ ಮುಂದುವರಿಕೆ ಬಗ್ಗೆ ಅರಿವಿಲ್ಲದ ಜನರು ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆಯಿತು. ಚನ್ನರಾಯಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಒಂದು ವಾರಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಿದ್ದೀರಿ. ಈ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಲು ವಿಫಲರಾಗಿದ್ದೀರಿ. ನಮ್ಮ ಬಳಿ ದಿನನಿತ್ಯದ ವಸ್ತುಗಳೂ ಇಲ್ಲ. ಸೋಮವಾರ ಖರೀದಿಸಲು ಅವಕಾಶ ಇದೆ ಎಂದು ಕೊಂಡಿದ್ದೆವು ಈಗ ಏನು ಮಾಡಬೇಕು ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದರು. ಹಾಸನದಲ್ಲಿ ಬೆಳಿಗ್ಗೆ 7.30 ರಿಂದಲೇ ಬ್ಯಾಂಕ್‍ಗಳ ಮುಂದೆ ಜನರು ಕ್ಯೂ ನಿಂತಿದ್ದರು. ತರಕಾರಿ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಹೆಚ್ಚಿತ್ತು.
ಹಾವೇರಿ: ರಾಜ್ಯದಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಕಳೆದ ವರ್ಷ ರಾಜ್ಯದ ಹಲವೆಡೆ ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಈ ಬಾರಿ ಈ ರೀತಿ ಕಂಡು ಬಂದಲ್ಲಿ ಅಂತವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರದ ಮಾರಾಟಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ರಾಜ್ಯದ ಬೀದರ್, ಕೊಪ್ಪಳ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ದಾಳಿ ಮಾಡಿ ಕಳಪೆ ಬೀಜ ಮತ್ತು ಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ಕಳ್ಳರನ್ನು ನಾವು ಹಿಡಿತಾನೆ ಇರುತ್ತೇವೆ, ಆದರೂ ಕಳ್ಳರು ಇರುತ್ತಾರೆ. ಕಳ್ಳತನವನ್ನು ಕಂಟ್ರೋಲ್ ಮಾಡುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ:ಬರುತ್ತಿದೆ ರಹಸ್ಯ ಬಿತ್ತನೆ ಬೀಜಗಳು – ರೈತರೇ ಚೀನಾದ ಕುತಂತ್ರಕ್ಕೆ ಬಲಿಯಾಗಬೇಡಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳಪೆ ಬೀಜದ ಮಾರಾಟ ಅಷ್ಟಾಗಿ ನಡಿತಿಲ್ಲ. ರೈತ ಸಂಪರ್ಕ ಕೇಂದ್ರ ಮತ್ತು ಅಧಿಕೃತ ಅಂಗಡಿಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡಬೇಕು. ಐವತ್ತು, ನೂರು ರೂಪಾಯಿ ಉಳಿಯುತ್ತದೆ ಎಂದು ರೈತರು ಎಲ್ಲೆಲ್ಲೋ ಬಿತ್ತನೆ ಬೀಜ ತಗೆದುಕೊಂಡರೆ ಅದಕ್ಕೆ ಸರ್ಕಾರ ಜವಾಬ್ದಾರಿ ಆಗುವುದಿಲ್ಲ. ಚೀನಾದಿಂದ ಯಾವುದೇ ರೀತಿಯ ಬಿತ್ತನೆ ಬೀಜದ ಪ್ಯಾಕೇಟ್‍ಗಳು ರೈತರ ಮನೆಗೆ ಬಂದರೆ ಅವುಗಳನ್ನು ಬಿತ್ತನೆ ಮಾಡಬಾರದು. ಕಳೆದ ವರ್ಷ ಈ ರೀತಿ ಕಂಡು ಬಂದಿತ್ತು. ಈ ವರ್ಷ ಚೀನಾ ಬೀಜಗಳು ಬಂದ ಉದಾಹರಣೆಗಳು ನಡೆದಿಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿ: ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿ ಬರಿಸುತ್ತದೆ.
ರೈತರ ಪರ ಸ್ಪಷ್ಟ ಕಾಳಜಿ ಹೊಂದಿರುವ ಯಡಿಯೂರಪ್ಪನವರು ತಕ್ಷಣವೇ ಕೃಷಿ, ಸಹಕಾರ ಹಾಗೂ ಹಣಕಾಸು ಇಲಾಖೆಯಿಂದ ಮಾಹಿತಿ ಪಡೆದು ವಿವಿಧ ಜಿಲ್ಲೆ ಉಗ್ರಾಣಗಳಲ್ಲಿರುವ ಕಾಪು ದಾಸ್ತಾನು ಡಿಎಪಿ ಗೊಬ್ಬರವನ್ನು ರೂ. 1413.25 ರ ಬದಲಾಗಿ ರೂ1200 ನಂತೆ ನಾಳೆಯಿಂದಲೇ ರೈತರಿಗೆ ಒದಗಿಸಲು ಆದೇಶಿಸಿದ್ದಾರೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್ ಯಡಿಯೂರಪ್ಪ, ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸಲು ಆದೇಶಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ದರದಲ್ಲಿ ಖರೀದಿಸಿದ ಡಿಎಪಿ ರಸಗೊಬ್ಬರ ಒಟ್ಟು, 46474.15 ಮೆಟ್ರಿಕ್ ಟನ್ ಸಂಗ್ರಹವಿದೆ. ಕ್ಟಿಂಟಲ್ ಗೊಬ್ಬರಕ್ಕೆ 1413.25 ರೂಪಾಯಿ ರೈತರಿಗೆ ಹೊರೆಯಾಗಲಿದೆ. ಆದರೆ ಕೇಂದ್ರ ಸರ್ಕಾರ ಪ್ರಕಟಿಸಿದ ಸಬ್ಸಿಡಿಯಿಂದ ಡಿಪಿಎ ದರ ಪ್ರಸಕ್ತ ಮಾರುಕಟ್ಟೆಯಲ್ಲಿ 1200 ರೂಪಾಯಿಗೆ ದೊರೆಯುತ್ತಿದೆ.
<
ದೇಶದಲ್ಲಿ ರಸಗೊಬ್ಬರಕ್ಕೆ ದಾಖಲೆಯ ಪ್ರಮಾಣದ(PerMT 2431Rs)ಸಬ್ಸಿಡಿ ನೀಡುವ ಮೂಲಕ ಪ್ರಧಾನಮಂತ್ರಿ ಶ್ರೀ @narendramodi ನೇತೃತ್ವದ ಕೇಂದ್ರ ಸರಕಾರ ರೈತರ ಬೆನ್ನುಲೆಬಾಗಿ ನಿಂತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಈ ಹಿಂದಿನ ದರದಲ್ಲಿ ಖರೀದಿಸಿದ ಕಾಪು ದಾಸ್ತಾನು 46474.15 MT ಸಂಗ್ರಹವಿದ್ದು, ಈ ಡಿಪಿಪಿ ಗೊಬ್ಬರದ ಬೆಲೆ ರೂ1413.25 ಆಗಿದೆ pic.twitter.com/tViA2oOXDW
ಹೀಗಾಗಿ ಹಲವು ಜಿಲ್ಲೆಗಳಲ್ಲಿ ಗೊಬ್ಬರ ದಾಸ್ತಾನು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲ ರೈತರಿಗೂ ರಸಗೊಬ್ಬರ ಒಂದೇ ದರದಲ್ಲಿ ಸಿಗುತ್ತಿರಲಿಲ್ಲ. ಎಲ್ಲ ಜಿಲ್ಲೆಗಳ ಉಗ್ರಾಣಗಳಲ್ಲಿರುವ ಡಿಎಪಿ ದರವನ್ನ ತಕ್ಷಣ ಕಡಿಮೆ ದರಕ್ಕೆ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಮಾರಾಟ ಮಂಡಳಿಗೆ 213.25 ರೂಪಾಯಿ ಮೊತ್ತವನ್ನ ಪಾವತಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಿಎಸ್‍ವೈಗೆ ಫೋನ್ ಮೂಲಕ ಮನವಿ ಮಾಡಿದ್ದರು. ಇದನ್ನೂ ಓದಿ: ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ
ಧಾರವಾಡ ಜಿಲ್ಲೆಯಲ್ಲಿಯ 18122 ಮೆ.ಟನ್ ಡಿಎಪಿ ರೈತರಿಗೆ ದೊರೆಯಲಿದ್ದು, ರಾಜ್ಯದಲ್ಲಿ 46474.15 ಮೆ. ಟನ್ ಡಿಎಪಿ ಗೊಬ್ಬರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿರುವ ಜಿಲ್ಲಾವಾರು ಮಾಹಿತಿಯನ್ನು ಲಗತ್ತಿಸಲಾಗಿದೆ.
ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್‍ವೈ ತಕ್ಷಣವೇ ಡಿಎಪಿ ಗೊಬ್ಬರದ ಬೆಲೆಯನ್ನ 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ಸಿಗುವಂತೆ ಆದೇಶ ಮಾಡಿದ್ದು, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸುವಂತೆ ಆದೇಶ ಮಾಡಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿ ಡಿಎಪಿ ರಸಗೊಬ್ಬರದ ಬೆಲೆಯನ್ನ ಕಡಿತಗೊಳಿಸಿದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಸಿಎಂ ಬಿಎಸ್ ವೈ ಹಾಗೂ ಕೃಷಿ ಸಚಿವ ಬಿಸಿ ಪಾಟೀಲಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮುಂಗಾರಿನ ಈ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳ ಉಗ್ರಾಣಗಳಲ್ಲಿರುವ ಡಿಎಪಿ ಗೊಬ್ಬರವನ್ನು ರೈತರಿಗೆ ತಕ್ಷಣ ದೊರೆಯುವಂತೆ ಮಾಡಲು ರಾಜ್ಯಸರಕಾರವು ಮಾರಾಟ ಮಂಡಳಿಗೆ ರೂ.1200 ಮೇಲಿನ ರೂ. 213.25 ಮೊತ್ತವನ್ನು ಪಾವತಿ ಮಾಡುವಂತೆ ಇಂದು ಮುಖ್ಯಮಂತ್ರಿಗಳಾದ ಶ್ರೀ @BSYBJP ರೈತರ ಪರವಾಗಿ ದೂರವಾಣಿ ಮೂಲಕ ವಿನಂತಿಸಿದ್ದೆ.
ಗದಗ: ಜಿಲ್ಲೆಯಲ್ಲಿ 2 ದಿನ ಲಾಕ್‍ಡೌನ್ ಸಡಿಲಿಕೆ ಇರುವುದರಿಂದ ಅನೇಕ ಕಡೆಗಳಲ್ಲಿ ಬೀಜ, ಗೊಬ್ಬರ ಖರೀದಿಗಾಗಿ ರೈತರು ಮುಗಿಬಿದ್ದಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇದರಿಂದ ಗದಗ, ಲಕ್ಷ್ಮೇಶ್ವರ, ಗಜೇಂದ್ರಗಡ ಪಟ್ಟಣಗಳಲ್ಲಿ ಬೀಜ, ಗೊಬ್ಬರ ಖರೀದಿ ವೇಳೆ ಮಾಸ್ಕ್, ಸಾಮಾಜಿಕ ಅಂತರ ಮರೆತು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಂತರ ರೈತರು ಸರದಿ ಸಾಲಿನಲ್ಲಿ ನಿಂತು ರಸಗೊಬ್ಬರ ಪಡೆದರು. ಇದನ್ನೂ ಓದಿ: ಅನಾಥ ವೃದ್ಧೆಗೆ ತುತ್ತು ತಿನ್ನಿಸಿದ ಪೊಲೀಸ್ ಕಾರ್ಯಕ್ಕೆ ಭಾರೀ ಮೆಚ್ಚುಗೆ
ರಾಜ್ಯಕ್ಕೆ ಜೂನ್ 2ನೇ ವಾರದಲ್ಲಿ ಮುಂಗಾರು ಪ್ರವೇಶ ಮಾಡಲಿದ್ದು, ಮಳೆಯ ನಿರೀಕ್ಷೆ ಹಿನ್ನೆಲೆ ರೈತರು ಬೀಜ, ಗೊಬ್ಬರವನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದ್ದು, ವಾರದಲ್ಲಿ 2 ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ತಂಡೋಪತಂಡವಾಗಿ ಆಗಮಿಸಿ ಬೀಜ, ಗೊಬ್ಬರ ಖರೀದಿಸುತ್ತಿದ್ದಾರೆ.
ಉಡುಪಿ: ಕೊರೊನಾ ಎಂಬ ಮಹಾಮಾರಿ ರಾಜ್ಯಕ್ಕೆ ಕಾಲಿಟ್ಟು ಲಾಕ್‍ಡೌನ್ ಘೋಷಣೆಯಾದ ಬಳಿಕ ಉದ್ಯೋಗಕ್ಕೆಂದು ಮನೆ ಬಿಟ್ಟು ಹೊರ ಹೋದವರು ತಮ್ಮ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಅಲ್ಲದೇ ತಮ್ಮನ್ನು ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ನಟನೆ, ವಿದ್ಯಾಭ್ಯಾಸ ಎಂದು ಸಿಲಿಕಾನ್ ಸಿಟಿಗೆ ತೆರಳಿದ್ದ ಬಿಗ್‍ಬಾಸ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಕೂಡ ಇದೀಗ ಮನೆಗೆ ಬಂದಿದ್ದು, ಗದ್ದೆ ನಾಟಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು. ಓದಿನ ಜೊತೆಗೆ ನಟನೆ ಮಾಡಿಕೊಂಡು ಭೂಮಿ ಶೆಟ್ಟಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊರೊನಾ ಲಾಕ್‍ಡೌನ್ ಆದ ಪರಿಣಾಮ ಕೆಲ ಕಾಲ ಬೆಂಗಳೂರಿನಲ್ಲೇ ಇದ್ದ ಅವರು, ನಂತರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯಲ್ಲಿರುವ ತಮ್ಮ ಮನೆಗೆ ಬಂದಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ರಾಜಕೀಯದಿಂದ ಗದ್ದೆ ಬೇಸಾಯಕ್ಕಿಳಿದ ಶಕುಂತಲಾ ಶೆಟ್ಟಿ
ಹೀಗೆ ಮನೆಗೆ ಬಂದಿರುವ ಭೂಮಿ ಶೆಟ್ಟಿ, ಸುಮ್ನೆ ಮನೆಯಲ್ಲೇ ಕುಳಿತು ಯಾಕೆ ಕಾಲ ಕಳೆಯುವುದು ಎಂದು ತಿಳಿದು ಅವರು ಕೂಡ ತಮ್ಮನ್ನ ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಾವು ಗೊಬ್ಬರ ಹೊರುವ ಹಾಗೂ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭೂಮಿ ಶೆಟ್ಟಿ, ಈ ಬಾರಿ ಬೇಸಾಯ ಬೇಡ ಎಂದು ಮನೆಯವರು ಹೇಳಿದ್ದರು. ನಾವೆಲ್ಲರೂ ಮನೆಯಲ್ಲಿಯೇ ಇದ್ದು, ಯಾಕೆ ವ್ಯವಸಾಯ ಮಾಡಬಾರದು ಎಂದು ಅಂದುಕೊಂಡು ನಾನು ಸಹಾಯ ಮಾಡುವುದಾಗಿ ತಿಳಿಸಿದೆ. ಹೀಗಾಗಿ ಈ ಬಾರಿ ಕೃಷಿ ಚಟುವಟಿಕೆಯಲ್ಲಿ ನಾನೂ ಭಾಗಿಯಾಗಿದ್ದು, ಈ ಕೆಲಸ ತುಂಬಾನೆ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈ-ಕೈ ಕೆಸರಿನ ಫೋಟೋದ ಬಳಿಕ ಟ್ರ್ಯಾಕ್ಟರ್ ಏರಿದ ಸಲ್ಲು ಭಾಯ್- ವಿಡಿಯೋ ವೈರಲ್
ಭೂಮಿ ಬೆಳಗ್ಗಿನಿಂದ ಸಂಜೆಯವರೆಗೂ ಗೊಬ್ಬರ ಹೊತ್ತು ಗದ್ದೆಯಲ್ಲಿ ನಾಟಿ ಮಾಡಿದ್ದು, ಈ ಮೂಲಕ ತಾನೊಬ್ಬಳು ಅಪ್ಪಟ ಕೃಷಿಕಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.