Tag: ಗೊಂಬೆ

  • ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ಬೆಂಗಳೂರು: ನಾಡಹಬ್ಬ ದಸರಾಕ್ಕೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ದಸರಾ ಅಂದರೆ ಮೊದಲು ನೆನಪಾಗೋದು ಜಂಬು ಸವಾರಿ ಹಾಗೂ ಗೊಂಬೆಗಳು. ನವರಾತ್ರಿಯ ಪೂರ್ವ ತಯಾರಿಯಾಗಿ ಅಂದ-ಚೆಂದದ ಗೊಂಬೆಗಳು ಬೆಂಗಳೂರಿಗೆ ಲಗ್ಗೆಯಿಟ್ಟಿದ್ದು, ಎಲ್ಲರನ್ನು ಕೈ ಬೀಸಿ ಕರೆಯುತ್ತಿವೆ.

    ನಗರದ ಮಲ್ಲೇಶ್ವರಂ, ಗಾಂಧಿ ಬಜಾರ್, ಚಿಕ್ಕಪೇಟೆ, ಕೆ.ಆರ್ ಮಾರುಕಟ್ಟೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಎಲ್ಲೆಡೆ ದಸರಾ ಗೊಂಬೆಗಳು ಮಾರಾಟವಾಗುತ್ತಿವೆ. ಇಲ್ಲಿ ಸರಿಸುಮಾರು 500 ವರ್ಷಗಳಿಂದ ಮೈಸೂರು ಸೇರಿದಂತೆ ಹಲವೆಡೆಯಿಂದ ಬಂದಿರೋ ಬೊಂಬೆ ಕೂಡಿಸುವ ಪದ್ಧತಿಯಿದೆ. ಇಲ್ಲಿ ಕಟ್ಟಿಗೆಯಲ್ಲಿ ಕಟ್ಟಿದ ಮೈಸೂರು ಅರಮನೆ, ಅದರ ಮುಂದೆ ಜಂಬೂ ಸವಾರಿ ಮತ್ತು ರಾಜದರ್ಬಾರ್ ಗೊಂಬೆಗಳು ಮನಸೂರೆಗೊಳಿಸುತ್ತಿವೆ.

    ಜೊತೆಗೆ ತಲೆಯಾಡಿಸುವ ನರ್ತಕಿ, ಗಣೇಶ, ಸಂಗೀತಗಾರರು, ಮಕ್ಕಳ ಆಟಿಕೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಈ ಬಾರಿಯ ವಿಶೇಷವೆಂದರೆ ದಶವತಾರ ಗೊಂಬೆಗಳು. ಈ ಮುದ್ದು ಮುದ್ದಾದ ಗೊಂಬೆಗಳಿಗೆ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಒಂದೊಂದು ಗೊಂಬೆಗಳು ಒಂದೊಂದು ಕಥೆ ಹೇಳುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿವೆ. 50 ರೂಪಾಯಿಂದ ಹಿಡಿದು 5 ಸಾವಿರ ರೂ. ಮೌಲ್ಯದ ಗೊಂಬೆಗಳೂ ಸಿಗುತ್ತಿವೆ.

  • ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ನವದೆಹಲಿ: ಗೊಂಬೆಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು 11 ತಿಂಗಳ ಮಗುವಿನ ಕಾಲು ನೋವನ್ನು ಗುಣಪಡಿಸಿದ ಅಪರೂಪದ ಸಂಗತಿಯೊಂದು ರಾಷ್ಟ್ರರಾಜಧಾನಿ ನವದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

    11 ತಿಂಗಳ ಮಗು ಝಿಕ್ರಾಳ ಕಾಲು ಮೂಳೆ ಮುರಿದು ಹೋಗಿತ್ತು. ಈ ವೇಳೆ ಮಗುವಿನ ಜೊತೆಗೆ ಆಕೆಯ ಗೊಂಬೆಗೂ ಕೂಡ ಚಿಕಿತ್ಸೆ ನೀಡಲಾಯಿತು. ಮಗು 13 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೊಂಬೆ ಆ ಮಗುವಿಗೆ ಸಾಥ್ ನೀಡಿದೆ. ಝಿಕ್ರಾ, ಮಹಮ್ಮದ್ ಶಹಜಾದ್ ಮಲಿಕ್ ಮಗಳಾಗಿದ್ದು ಇವರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. 13 ದಿನಗಳ ಹಿಂದೆ ಝಿಕ್ರಾ ಮಲಗಿದ್ದಾಗ ಹಾಸಿಗೆ ಮೇಲಿಂದ ಕೆಳಗೆ ಬಿದಿದ್ದಳು. ಆಗ ಅವರ ತಂದೆ ಮಲಿಕ್ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಈ ವೇಳೆ ಕಾಲು ಫ್ರ್ಯಾಕ್ಚರ್ ಆಗಿರುವ ವಿಷಯ ತಿಳಿದು ಬಂದಿದೆ. ಆಗ ವೈದ್ಯರು ಟ್ರ್ಯಾಕ್ಷನ್ ರಾಡ್ ಮೂಲಕ ಚಿಕಿತ್ಸೆ ನೀಡಬೇಕಾಯಿತು. ಚಿಕ್ಕ ಮಕ್ಕಳಿಗೆ ಟ್ರ್ಯಾಕ್ಷನ್ ರಾಡ್ ಹಾಕಿದರೆ ಕಾಲುಗಳನ್ನು ಮೇಲೆ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ ಕಾಲಿನ ಮೂಳೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಹೀಗಾಗಿ ಚಿಕಿತ್ಸೆಗೆಂದು ಝಿಕ್ರಾಳನ್ನು ವೈದ್ಯರು ಹಾಸಿಗೆ ಮೇಲೆ ಮಲಗಿಸಿದಾಗ ಆಕೆ ಒಂದೇ ಕಡೆ ಮಲಗುತ್ತಿರಲಿಲ್ಲ. ಹಾಗಾಗಿ ವೈದ್ಯರಿಗೆ ಝಿಕ್ರಾಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಕೆಯ ಕಾಲಿಗೆ ಬ್ಯಾಂಡೇಜ್ ಹಾಕಲು ಆಗುತ್ತಿರಲಿಲ್ಲ. ಝಿಕ್ರಾ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಝಿಕ್ರಾ ತಾಯಿ ಫರೀನ್‍ಗೆ ಆಕೆಯ ಅಜ್ಜಿ ನೀಡಿದ ಗೊಂಬೆ ನೆನಪಾಗಿದೆ. ಝಿಕ್ರಾ ಈ ಗೊಂಬೆಯನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಬಳಿಕ ಫರೀನ್ ಆ ಗೊಂಬೆಯನ್ನು ಆಸ್ಪತ್ರೆಗೆ ತಂದಾಗ ಝಿಕ್ರಾ ಖುಷಿಪಟ್ಟಿದ್ದಾಳೆ.

    ಝಿಕ್ರಾಗೆ ಬ್ಯಾಂಡೇಜ್ ಹಾಕುವ ಮೊದಲು ವೈದ್ಯರು ಗೊಂಬೆಗೆ ಬ್ಯಾಂಡೇಜ್ ಹಾಕಿದ್ದಾರೆ. ಇದನ್ನು ನೋಡಿದ ಝಿಕ್ರಾ ಸುಮ್ಮನೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾಳೆ. ಈಗ ಝಿಕ್ರಾ ಹಾಗೂ ಆಕೆಯ ಗೊಂಬೆ ‘ಪರಿ’ ಒಂದೇ ಹಾಸಿಗೆಯಲ್ಲಿ ದಾಖಲಾಗಿದ್ದಾರೆ. ಗೊಂಬೆ ಇಲ್ಲದಿದ್ದರೆ ಮಗುವಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಗೊಂಬೆಯ ಕಾರಣ ಝಿಕ್ರಾ ಖುಷಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಆದಷ್ಟು ಬೇಗ ಸರಿಹೋಗಲಿ. ಬೇರೆ ವಿಭಾಗದ ವೈದ್ಯರು ಕೂಡ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಝಿಕ್ರಾ ತಂದೆ ಹೇಳಿದ್ದಾರೆ.

  • ಸಿದ್ದರಾಮಯ್ಯ ಕಾರಿನಲ್ಲಿ ಗೊಂಬೆ ಪತ್ತೆ

    ಸಿದ್ದರಾಮಯ್ಯ ಕಾರಿನಲ್ಲಿ ಗೊಂಬೆ ಪತ್ತೆ

    ದಾವಣಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸುತ್ತಿದ್ದು, ಸಿಬ್ಬಂದಿ ಹೆಲಿಪ್ಯಾಡ್ ಮತ್ತು ಸಿದ್ದರಾಮಯ್ಯ ಪ್ರಯಾಣ ಮಾಡುವ ಕಾರು ತಪಾಸಣೆ ಮಾಡಿದ್ದಾರೆ.

    ತಪಾಸಣೆಯ ವೇಳೆ ಸಿದ್ದರಾಮಯ್ಯ ಕಾರಿನಲ್ಲಿ ಒಂದು ಸಣ್ಣ ಆಟ ಸಾಮಾನಿನ ಗೊಂಬೆ ಪತ್ತೆಯಾಗಿದೆ. ಅದನ್ನು ಸಿಬ್ಬಂದಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    ಸಿದ್ದರಾಮಯ್ಯ ದಾವಣಗೆರೆ ಲೋಕಸಭಾ ಅಭ್ಯರ್ಥಿ ಹೆಚ್.ಬಿ ಮಂಜಪ್ಪರ ಪರ ಮತಯಾಚಿಸಲಿದ್ದಾರೆ. ಮಧ್ಯಾಹ್ನದ ವೇಳೆಗೆ ದಾವಣಗೆರೆ ತಾಲೂಕಿನ ತ್ಯಾವಣಗಿ, ಉಚ್ಚಂಗಿದುರ್ಗದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ.

    ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಪರ ತೇಜಸ್ವಿ ಸೂರ್ಯ ಪ್ರಚಾರ ಮಾಡಲಿದ್ದಾರೆ. ಚನ್ನಗಿರಿ ಹಾಗೂ ಹರಿಹರದಲ್ಲಿ ರೋಡ್ ಶೋ ಮೂಲಕ ತೇಜಸ್ವಿ ಸೂರ್ಯ ಮತಯಾಚನೆ ಮಾಡಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ಎರಡೇ ದಿನ ಬಾಕಿ ಇದ್ದು, ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

  • ಕೇರಳದಲ್ಲಿ ತೈಮೂರ್ ಪ್ರತಿರೂಪದ ಗೊಂಬೆ

    ಕೇರಳದಲ್ಲಿ ತೈಮೂರ್ ಪ್ರತಿರೂಪದ ಗೊಂಬೆ

    ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಕರೀನಾ-ಸೈಫ್ ಅವರ ಮುದ್ದಾದ ಮಗ ತೈಮೂರ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ತನ್ನ ಕ್ಯೂಟ್ ಫೋಟೋಗಳಿಂದ ಸುದ್ದಿ ಮಾಡುತ್ತಲೇ ಇರುತ್ತಾನೆ. ಆದರೆ ಕೇರಳದಲ್ಲಿ ತೈಮೂರ್ ನನ್ನು ಹೋಲುವ ಮುದ್ದಾದ ಮೊಗದ ಸ್ಪೂರ್ತಿಯಿಂದ ಗೊಂಬೆಯೊಂದನ್ನ ಸೃಷ್ಟಿಸಿದ್ದು, ಈ ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

    ಓ ಮೈ ಗಾಡ್ ಮತ್ತು ಸಿಂಗ್ ಇಸ್ ಬ್ಲಿಂಗ್ ಚಿತ್ರಗಳ ಖ್ಯಾತಿಯ ನಿರ್ಮಾಪಕರಾದ ಅಶ್ವಿನಿ ಯಾರ್ಡಿ ಕೇರಳದ ಆಟಿಕೆ ಅಂಗಡಿಗೆ ಭೇಟಿ ಕೊಟ್ಟಿದ್ದರು. ಅಲ್ಲಿ ತೈಮೂರ್ ನಂತೆ ಹೋಲುವ ಗೊಂಬೆಗಳ ಸಾಲನ್ನ ನೋಡಿ, ಅದರ ಫೋಟೋ ಕ್ಲಿಕ್ಕಿಸಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ “ಈ ನಡುವೆ ಕೇರಳದ ಆಟಿಕೆಯ ಅಂಗಡಿಯಲ್ಲಿ” ಎಂದು ಬರೆದುಕೊಂಡು ಆ ಫೋಟೋವನ್ನ ಹಂಚಿಕೊಂಡಿದ್ದಾರೆ.

    ತೈಮೂರ್ ಹೋಲುವ ಗೊಂಬೆಗಳ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದ್ದು, ಟ್ವಿಟ್ಟರ್ ನಲ್ಲಿ ಈ ಕುರಿತು ಸಾಕಷ್ಟು ಜನರು ಕಮೆಂಟ್‍ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ದಿನಕಳೆದಂತೆ ತೈಮೂರ್ ಅಭಿಮಾನಿ ಬಳಗ ಹೆಚ್ಚುತಿದ್ದು, ಈ ರೀತಿಯ ಘಟನೆಗಳು ಎಲ್ಲರನ್ನ ಹುಬ್ಬೇರಿಸುವಂತೆ ಮಾಡುತ್ತಿವೆ.

    “ಈ ಫೋಟೋ ನನ್ನ ಯೋಚನೆಗೂ ನಿಲುಕದ್ದಾಗಿದೆ. ನಾನು ಎಂದಿಗೂ ತೈಮೂರ್ ಗೊಂಬೆಯನ್ನ ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಹಲವರು ಪ್ರತಿಕ್ರಿಯೆ ನೀಡಿದ್ರೆ, ಇನ್ನು ಕೆಲವು ಜನರು ಈ ವಿಚಾರವೂ ಭಯಾನಕವಾಗಿದ್ದು, ಮಕ್ಕಳಿಗೆ ಇನ್ನೊಂದು ಮಗುನಂತೆ ಹೋಲುವ ಗೊಂಬೆಯನ್ನ ಕೊಟ್ಟು, ಅದರ ಜೊತೆ ಆಟವಾಡುವುದು ಅಥವಾ ಅವುಗಳನ್ನ ಸಂಗ್ರಹಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಮಾಧಿ ಮೇಲೆ ಕೂತು ಕ್ಯಾಮೆರಾ ತಿರುಗಿಸಿದ ಕಡೆಗೆಲ್ಲಾ ಕಣ್ಣು ಹೊರಳಿಸೋ ಗೊಂಬೆ- ಈ ವೈರಲ್ ವಿಡಿಯೋ ಇನ್ನೂ ನೋಡಿಲ್ವಾ?

    ಸಮಾಧಿ ಮೇಲೆ ಕೂತು ಕ್ಯಾಮೆರಾ ತಿರುಗಿಸಿದ ಕಡೆಗೆಲ್ಲಾ ಕಣ್ಣು ಹೊರಳಿಸೋ ಗೊಂಬೆ- ಈ ವೈರಲ್ ವಿಡಿಯೋ ಇನ್ನೂ ನೋಡಿಲ್ವಾ?

    ಮೆಕ್ಸಿಕೋ: ಕೆಲವು ಹಾರರ್ ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಗೊಂಬೆಗಳನ್ನ ದೆವ್ವದ ರೀತಿ ತೋರಿಸಿರೋದನ್ನ ನೋಡಿರ್ತೀರ. ಅದೇ ರೀತಿ ಸಮಾಧಿಯ ಮೇಲೆ ಕುಳಿತಿರುವಂತೆ ಕಾಣುವ ಗೊಂಬೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ಗೊಂಬೆ, ಪಕ್ಕದಲ್ಲಿರೋ ಫೀಡಿಂಗ್ ಬಾಟಲಿಯಲ್ಲಿ ರಕ್ತದಂತೆ ಕಾಣೋ ಕೆಂಪು ಬಣ್ಣದ ದ್ರಾವಣ. ನೋಡಿದಾಕ್ಷಣ ಎಂಥವರಿಗೂ ಬೆಚ್ಚಿಬೀಳಿಸುತ್ತದೆ. ಇದು ನಿಜವಾದ ಮಗುನಾ ಅಥವಾ ಗೊಂಬೆನಾ ಅನ್ನೋ ಅನುಮಾನ ಕೂಡ ಬರದೇ ಇರದು. ಈ ವಿಡಿಯೋವನ್ನ ಹಂಚಿಕೊಂಡ ನಾಲ್ಕು ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    ಈ ವಿಡಿಯೋವನ್ನ ಮಹಿಳೆಯೊಬ್ಬರು ಬ್ರೆಜಿಲ್‍ನಲ್ಲಿ ಚಿತ್ರೀಕರಿಸಿದ್ದು, ಮೆಕ್ಸಿಕನ್ ಮಾಧ್ಯಮಗಳಲ್ಲೂ ಕೂಡ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದವರು ಹೌಹಾರಿದ್ದು, ದೆವ್ವದ ಗೊಂಬೆ ಎಂದು ಕಮೆಂಟ್ ಮಾಡಿದ್ದಾರೆ.

    ಗೊಂಬೆಯ ಚಲಿಸುವ ಕಣ್ಣುಗಳು ಕೇವಲ ಒಂದು ಟ್ರಿಕ್ ಅಷ್ಟೇ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. ಇದೊಂದು ದೃಷ್ಟಿಭ್ರಮೆ(ಆಪ್ಟಿಕಲ್ ಇಲ್ಲ್ಯೂಷನ್), ಹಾಗಂತ ಇದನ್ನ ನೋಡಿದ್ರೆ ಭಯ ಆಗಲ್ಲ ಅಂತೇನಿಲ್ಲ, ಯಾರಾದ್ರೂ ಕಾಪಾಡಿ ಅಂತ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮೆಕ್ಸಿಕೋದ ಸ್ಥಳೀಯ ಮಾಧ್ಯಮಗಳು ಈ ಗೊಂಬೆಯನ್ನ ಚೈಲ್ಡ್ ಪ್ಲೇ ಸರಣಿ ಚಿತ್ರದ ಗೊಂಬೆ ಚಕ್ಕಿ ಗೆ ಹೋಲಿಸಿದ್ದಾರೆ.

    ಆದ್ರೆ ಮೆಕ್ಸಿಕೋದಲ್ಲಿ ಭಯಾನಕ ಗೊಂಬೆಗಳೇನೂ ಹೊಸದಲ್ಲ. ಮೆಕ್ಸಿಕೋ ನಗರಕ್ಕೆ ಹತ್ತಿರವಿರುವ ಕ್ಸೋಚಿಮಿಕೋದ ಕಾಲುವೆಗಳ ನಡುವೆ ಗೊಂಬೆಗಳ ದ್ವೀಪವೇ ಇದೆ. ಇಲ್ಲಿನ ಮರಗಳಲ್ಲಿ ಗೊಂಬೆಗಳನ್ನ ಹಗ್ಗದಿಂದ ನೇತು ಹಾಕಲಾಗಿದ್ದು ಭಯ ಹುಟ್ಟಿಸುತ್ತದೆ.

     

    ಇಲ್ಲಿನವರು ಹೇಳುವ ಪ್ರಕಾರ, ದ್ವೀಪವನ್ನ ನೋಡಿಕೊಳ್ತಿದ್ದ ಜುಲೀಯಾನ್ ಸಂಟಾನಾ ಬರ್ರೇರಾ ಒಂದು ದಿನ ಬೆಳಗ್ಗೆ ಇಲ್ಲಿ ಹುಡುಗಿಯ ಮೃತದೇಹವನ್ನ ನೋಡಿದ್ದರು. ಇದರಿಂದ ಅವರು ತುಂಬಾ ಭಯಗೊಂಡಿದ್ದರು. ಬಳಿಕ ಅದೇ ಹುಡುಗಿಗೆ ಸೇರಿರಬಹುದು ಎನ್ನಲಾದ ಗೊಂಬೆಯ ಮೇಲೆ ಎಡವಿದ್ದರು. ನಂತರ ಆ ಗೊಂಬೆಯನ್ನ ಅಲ್ಲಿನ ಮರಕ್ಕೆ ಸಿಕ್ಕಿಸಿದ್ದರು. ಆದ್ರೆ ಮೃತ ಮಗುವಿನ ಬಗ್ಗೆ ಮರೆಯಲಾಗದೆ ಮರಗಳಿಗೆ ಗೊಂಬೆಗಳನ್ನ ನೇತುಹಾಕೋದನ್ನ ಮುಂದುವರೆಸಿದ್ದರು ಎಂದು ಹೇಳಲಾಗುತ್ತದೆ. ಈಗ ಈ ಮರಗಳಲ್ಲಿ ನೇತುಹಾಕಲಾಗಿರೋ ನೂರಾರು ಗೊಂಬೆಗಳನ್ನ ಕಾಣಬಹುದು.

    https://www.youtube.com/watch?v=6WbEPnlr0CA

  • ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ನವದೆಹಲಿ: ಮೊದಲ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ನಾಮ್‍ಗೆಲ್ ವಾಗ್ಚುಕ್ ಅವರ ಒಂದೂವರೆ ವರ್ಷದ ಪುತ್ರನಿಗೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ್ದಾರೆ.

    ಮಹಾರಾಜ, ರಾಣಿ ಮತ್ತು ಯುವ ರಾಜಕುಮಾರನ ಬಳಿ ಇದ್ದ ಚನ್ನಪಟ್ಟಣದ ಗೊಂಬೆಯನ್ನು ನೋಡಿದ್ದಾರೆ. ಚನ್ನಪಟ್ಟಣದ ಗೊಂಬೆಯಂತೆಯೇ ಇರುವ ಯುವರಾಜನನ್ನು ನೋಡಲು ಸಂತೋಷವಾಗುತ್ತದೆಂದು ಹರ್ಷ ವ್ಯಕ್ತಪಡಿಸಿ ನಿರ್ಮಾಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ಬುಧವಾರ ರಾಜ ಪರಿವಾರದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಓತಣಕೂಟದಲ್ಲಿ ಇತ್ತೀಚೆಗಷ್ಟೆ ಮುಕ್ತಾಯವಾದ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯ ಚೆಂಡೊಂದನ್ನು ಉಡುಗೊರೆಯನ್ನು ನೀಡಿದ್ದರು. ಈ ಓತಣ ಕೂಟದಲ್ಲೇ ಸಚಿವೆ ನಿರ್ಮಲಾ ಚನ್ನಪಟ್ಟಣದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮೊದಲ ಬಾರಿಗೆ ಭಾರತಕ್ಕೆ ಬಂದ ಪುಟ್ಟ ಯುವರಾಜಕುಮಾರ ಎಲ್ಲರ ಗಮನ ಕೇಂದ್ರಿಕರಿಸಿದ್ದರು. ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ರಾಜನ ಪರಿವಾರವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿ ಯುವರಾಜನ ಕೈಹಿಡಿದು ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.