Tag: ಗೈಡೆಡ್‌ ಟೂರ್‌

  • ವಿಧಾನಸೌಧ ನೋಡ್ಬೇಕಾ? ಶುರುವಾಗಿದೆ ಗೈಡೆಡ್ ಟೂರ್ – ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

    ವಿಧಾನಸೌಧ ನೋಡ್ಬೇಕಾ? ಶುರುವಾಗಿದೆ ಗೈಡೆಡ್ ಟೂರ್ – ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

    – ಭವ್ಯ ಕಟ್ಟಡ ನೋಡಿ ಕಣ್ಮನ ತುಂಬಿಕೊಂಡ ಪ್ರವಾಸಿಗರು ಫುಲ್ ಖುಷ್

    ಬೆಂಗಳೂರು: ದೂರದಿಂದ ವಿಧಾನಸೌಧ (Vidhana Soudha) ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಕಾಲ ಹೋಯ್ತು. ಈಗ ನೀವು ವಿಧಾನಸೌಧದ ಒಳಗೆ ಹೋಗಬಹುದು, ಅದರೊಳಗೆಲ್ಲ ಸುತ್ತಾಡಬಹುದು. ಆ ಭವ್ಯ ಕಟ್ಟಡವನ್ನು ಸ್ಪರ್ಶಿಸಬಹುದು. ಫೋಟೋ, ಸೆಲ್ಫಿ ತೆಗೆಯಬಹುದು. ಹೌದು, ಇಂದಿನಿಂದ ವಿಧಾನಸೌಧ ಗೈಡೆಡ್ ಟೂರ್ (Guided Tour) ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ವಿಧಾನಸೌಧ ವೀಕ್ಷಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಇಂದಿನಿಂದಲೇ ಪ್ರವಾಸ ಆರಂಭವಾಗಿದೆ. ಬೆಂಗಳೂರಿನಲ್ಲೇ (Bengaluru) ಅತ್ಯಂತ ಆಕರ್ಷಣೆಯ ಕೇಂದ್ರವೆಂದರೆ ಅದು ವಿಧಾನಸೌಧ. ರಾಜಧಾನಿಗೆ ಯಾರೇ ಬಂದರೂ ವಿಧಾನಸೌಧ ನೋಡದೇ ಹೋಗುವವರು ಅಪರೂಪ. ವಿಧಾನಸೌಧದ ಒಳಗೆ ಹೋಗಬೇಕು ಎನ್ನುವ ಬಯಕೆಯನ್ನು ತಮ್ಮೊಳಗೆ ಇಟ್ಟುಕೊಂಡು ಅನೇಕರು ರಸ್ತೆಯಲ್ಲೇ ನಿಂತು ಕಣ್ತುಂಬಿಕೊಳ್ತಿದ್ದರು. ಅಂತವರಿಗೆ ಇದೀಗ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಇನ್ಮುಂದೆ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಒಳಗೆ ನೋಡಲು ಮಾರ್ಗದರ್ಶಿ ಪ್ರವಾಸ ಶುರು ಮಾಡಿದೆ.ಇದನ್ನೂ ಓದಿ: ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರ ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಇಂದಿನಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ವಿಧಾನಸೌಧ ಪ್ರವಾಸಕ್ಕೆ ಮುಕ್ತ. ಮೊದಲ ದಿನವೇ ವಿಧಾನಸೌಧ ಟೂರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ತಲಾ 25-30 ಜನ ಇರುವ ನಾಲ್ಕೈದು ಬ್ಯಾಚ್‌ಗಳ ಮೂಲಕ ಪ್ರವಾಸಿಗರು ವಿಧಾನಸೌಧದ ಒಳಗೆಲ್ಲಾ ಸುತ್ತಾಡಿ, ಅದರ ಸೌಂದರ್ಯ ತಮ್ಮ ಕಣ್ಮನದೊಳಗೆ ತುಂಬಿಕೊಂಡರು. ಕುಟುಂಬ, ಸ್ನೇಹಿತರೊಂದಿಗೆ ಬಂದ ಹಲವರು ವಿಧಾನಸೌಧದ ಒಳಗೆ, ಹೊರಗೆ ಸುತ್ತಾಡಿ ಖುಷಿಪಟ್ಟರು.

    ಸದ್ಯಕ್ಕೆ ಹತ್ತು ಗೈಡ್‌ಗಳು ಪ್ರವಾಸಿಗರಿಗೆ ವಿಧಾನಸೌಧ ವೀಕ್ಷಣೆ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಮಹಾತ್ಮಾಗಾಂಧಿ ಪ್ರತಿಮೆ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಪ್ರತಿಮೆ, ವಿಧಾನಸೌಧ ಫೌಂಡೇಷನ್ ಕಲ್ಲು, ಗ್ಯಾಲರಿಗಳು, ವಿಧಾನಸೌಧದ ಕಾರಿಡಾರ್‌ಗಳು, ಕಟ್ಟಡ ವೈಶಿಷ್ಟ್ಯಗಳ ಮಾಹಿತಿ ನೀಡಿದರು.

    ಪ್ರತೀ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ವಿಧಾನಸೌಧ ಟೂರ್‌ಗೆ ಅವಕಾಶವಿರುತ್ತದೆ. 16 ವರ್ಷ ಮೇಲ್ಪಟ್ಟ ಎಲ್ಲರಿಗೂ ತಲಾ 50 ರೂ, 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಅವಕಾಶವಿರಲಿದೆ. ಟೂರ್‌ಗಾಗಿ ಟಿಕೆಟ್‌ನ್ನು ಕೆಎಸ್‌ಟಿಡಿಸಿ ಆನ್‌ಲೈನ್ ಮೂಲಕ ಬುಕ್ ಮಾಡಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗಿದ್ದು, ಒಂದು ಗ್ರೂಪ್‌ಗೆ ವೀಕ್ಷಣೆಗೆ 90 ನಿಮಿಷಗಳ ಅವಕಾಶ ಇರಲಿದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗೈಡ್ ಮಾಹಿತಿ ಕೊಡಲಿದ್ದಾರೆ.ಇದನ್ನೂ ಓದಿ: 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

  • ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧ (Vidhana Soudha) ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಹೀಗಾಗಿ ಶಕ್ತಿಸೌಧವನ್ನ ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಜನರಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಗೈಡೆಡ್ ಟೂರ್ʼ (Guided Tour) ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ.

    ನಿತ್ಯ 25 ರಿಂದ 30 ಸದಸ್ಯರ 10 ಬ್ಯಾಚ್‌ಗಳಿಗೆ ವೀಕ್ಷಣೆಗೆ ಅವಕಾಶ ಇರುತ್ತದೆ. ಇಂದಿನಿಂದ ಗೈಡೆಡ್‌ ಟೂರ್‌ ಶುರುವಾಗಿದ್ದು, ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಭವ್ಯ ಮೆಟ್ಟಿಲುಗಳ ವಿವರಣೆ ಕೊಡುವ ಕೆಲಸವನ್ನ ಮಾರ್ಗದರ್ಶಿಗಳು ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ

    ಗುರುತಿನ ಚೀಟಿ ಕಡ್ಡಾಯ?
    ವಿಧಾನಸೌಧದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡಲು ಸದ್ಯ 10 ಗೈಡ್‌ಗಳನ್ನ ನೇಮಕ ಮಾಡಿಕೊಳ್ಳಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳ ಪ್ರವಾಸಿಗರೂ ವಿಧಾನಸೌಧ ವೀಕ್ಷಣೆಗೆ ಬರ್ತಿದ್ದಾರೆ. ವಿಧಾನಸೌಧ ಪ್ರವಾಸಕ್ಕೆ ಪ್ರತಿ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ. ವಿಕಾಸಸೌಧದ ಎಂಟ್ರಿ ಗೇಟ್ (ನಂಬರ್ 3) ಮೂಲಕ ಟೂರ್ ಆರಂಭವಾಗಲಿದೆ. 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು, ಟಿಕೆಟ್ ಬುಕ್ ಮಾಡಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು. ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ.

    ಟಿಕೆಟ್‌ ದರ ಎಷ್ಟು?
    ಪ್ರತೀ ಪ್ರವಾಸಿಗರಿಗೂ ತಲಾ 50 ರೂ. ಟಿಕೆಟ್‌ ನಿಗದಿ ಮಾಡಲಾಗಿದೆ. ಇನ್ನೂ 15 ವರ್ಷದೊಳಗಿನ ಮಕ್ಕಳು, ಎಸ್‌ಎಸ್‌ಎಲ್‌ಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ಇದನ್ನೂ ಓದಿ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ ಕೇಸ್ – ಓರ್ವ ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಕಳೆದ ವಾರವಷ್ಟೇ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಹೊತಟ್ಟಿಯವರು ಗೈಡೆಡ್‌ ಟೂರ್‌ಗೆ ಚಾಲನೆ ನೀಡಿದ್ದರು. ಬೆಂದಕಾಳೂರಿನ ಹೆಗ್ಗುರುತು, ರಾಜ್ಯದ ಆಡಳಿತ ಶಕ್ತಿಸೌಧ ಅಂತನೇ ಕರೆಯಿಸಿಕೊಳ್ಳುವ ವಿಧಾನಸೌಧ ಈಗ ಪ್ರವಾಸಿ ತಾಣ. ಇಲ್ಲಿಯವರೆಗೂ ಕೇವಲ ಗೇಟ್ ಹೊರಭಾಗದಿಂದ, ರಸ್ತೆಯಿಂದ ಕಾಣಿಸುತ್ತಿದ್ದ ವಿಧಾನಸೌಧ ಇನ್ಮುಂದೆ ಪ್ರವಾಸಿ ಸ್ಥಳ ಆಗಲಿದೆ. ಗೈಡೆಡ್ ಟೂರ್ ಹೆಸರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸರ್ಕಾರ ಅವಕಾಶ ನೀಡಿದೆ‌. ಇನ್ಮುಂದೆ ವಿಧಾನಸೌಧದ ಒಳಗೆ ಹೋಗಿ ಭವ್ಯ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ: Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್