Tag: ಗೆಳೆತನ

  • ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ಡಾ. ವಿಷ್ಣುವರ್ಧನ್ (Vishnuvardhan) ಜೊತೆ ಸಿನಿಮಾ ಮಾಡಲು ಅತಿರಥ ಮಹಾರಥ ನಿರ್ದೇಶಕರು, ನಿರ್ಮಾಪಕರು ದುಂಬಾಲು ಬೀಳುತ್ತಿದ್ದರು ಎನ್ನುವುದಕ್ಕೆ ಅವರ ಚಿತ್ರಗಳೇ ಸಾಕ್ಷಿ. ಡಾ. ರಾಜಕುಮಾರ್ ಗರಡಿಯಿಂದ ಬಂದ ಸಾಕಷ್ಟು ನಿರ್ದೇಶಕರು ಮತ್ತು ನಿರ್ಮಾಪಕರು ವಿಷ್ಣುವರ್ಧನ್ ಅವರ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. ಎಲ್ಲ ಹಂಗುಗಳನ್ನು ತೊರೆದುಕೊಂಡು ಬಂದು ವಿಷ್ಣು ಮುಂದೆ ನಿಲ್ಲುತ್ತಿದ್ದರು. ಅಂತಹ ಕಾಲ್‌ಶೀಟ್‌ಗಾಗಿ ಕಾದ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಲ್ಲಿ ದ್ವಾರಕೀಶ್ ಕೂಡ ಒಬ್ಬರು.

    ವಿಷ್ಣುವರ್ಧನ್ ಮತ್ತು ದ್ವಾರಕೀಶ್ (Dwarakish) ಅವರ ಚೊಚ್ಚಲ ಸಿನಿಮಾ `ಕಳ್ಳ ಕುಳ್ಳ’ ಬರುವ ಹೊತ್ತಿಗೆ ದ್ವಾರಕೀಶ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು. ಹೆಸರಾಂತ ನಟರಾಗಿ ಗುರುತಿಸಿಕೊಂಡಿದ್ದರು. ದ್ವಾರಕೀಶ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ದಿನಮಾನಗಳವು. ಅಂತಹ ವೇಳೆಯಲ್ಲಿ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಬೇಕು ಎಂದು ಕನಸುಕಂಡರು ಕನ್ನಡದ ಕುಳ್ಳ ದ್ವಾರಕೀಶ್. ತಮ್ಮ ಮನೆಯ ಬಾಗಿಲಿಗೆ ಬಂದ ಯಾರನ್ನೂ ವಿಷ್ಣು ನಿರಾಸೆಗೊಳಿಸುತ್ತಿರಲಿಲ್ಲ. ದ್ವಾರಕೀಶ್‌ನಂತಹ ಮೇರು ನಟ ಬಂದರೆ, ಖಾಲಿ ಕೈಯಲ್ಲಿ ಕಳುಹಿಸುವ ಮಾತೇ ಇಲ್ಲ. `ಆಯಿತು ಒಟ್ಟಿಗೆ ಸಿನಿಮಾ ಮಾಡೋಣ’ ಎಂದು ಹೇಳಿಬಿಟ್ಟಿದ್ದರು ವಿಷ್ಣು. ಆಗ ತಯಾರಾಗಿದ್ದೆ `ಕಳ್ಳ ಕುಳ್ಳ’ ಚಿತ್ರ. 1975ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ `ಕಳ್ಳ ಕುಳ್ಳ ಜೋಡಿ’ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು.

    ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು… ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಾ ಹೋಯಿತು. ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತೆಂದರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ನಿಜವೂ ಆಗಿತ್ತು. ಈ ಧೈರ್ಯದಿಂದಲೇ ಅವರು `ರಾಜಾ ಕುಳ್ಳ’ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು.

    ಎಪ್ಪತ್ತರ ದಶಕದಲ್ಲಿ ಮದರಾಸು, ಬೆಂಗಳೂರು, ಮೈಸೂರಿನ ಸುತ್ತಲಿನ ಸ್ಟುಡಿಯೋಗಳಲ್ಲಿ ಅಥವಾ ಆ ಸ್ಟುಡಿಯೋಗಳನ್ನೇ ಆಶ್ರಯಿಸಿಕೊಂಡಿದ್ದ ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವ ವಾಡಿಕೆಯಿತ್ತು. ಬಜೆಟ್ ಕೂಡ ಹಿಗ್ಗಿಸುವಂತಹ ಧೈರ್ಯ ಮಾಡುತ್ತಿರಲಿಲ್ಲ. ಆದರೆ, ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಲ್ಲಿ ಯಶಸ್ವಿ ಕೂಡ ಆದರು ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ `ರಾಜಾ ಕುಳ್ಳ’ ಪಾತ್ರವಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ `ನೀ ಬರೆದ ಕಾದಂಬರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಜೋಡಿಯ ಮಧ್ಯೆಯೂ ಬಿರುಕುಂಟಾಯಿತು.

     

    ಯಶಸ್ಸು ಯಾವತ್ತಿಗೂ ಒಂದಾಗಿರುವುದಕ್ಕೆ ಬಿಡುವುದಿಲ್ಲ. ಅದನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಯಶಸ್ಸಿನ ಅಮಲು ತಲೆಗೇರಿಸಿಕೊಂಡರೆ ಎಂತಹ ಅನಾಹುತ ಆಗುತ್ತದೆ ಎನ್ನುವುದಕ್ಕೆ ದ್ವಾರಕೀಶ್ ನಡೆಯೇ ಸಾಕ್ಷಿ. ಸಿನಿಮಾಗಳು ಗೆಲ್ಲುತ್ತಾ ಹೋದವು. ಹಣವೂ ಹಾಗೆಯೇ ಹರಿದು ಬಂತು. ಗೆಲ್ಲುವ ಕುದುರೆ ಎಂಬ ವಿಷ್ಣುವರ್ಧನ್ ಎಲ್ಲರಿಗೂ ಪ್ರಿಯವಾಗಿ ಹೋದರು. ಬರೀ ದ್ವಾರಕೀಶ್ ಮಾತ್ರ ಶ್ರೀಮಂತನಾಗಬೇಕಾ? ನಮಗೂ ಕಾಲ್‌ಶೀಟ್ ಕೊಡಿ ಎಂದು ನಿರ್ಮಾಪಕರು ದುಂಬಾಲು ಬಿದ್ದರು. ನಮಗೂ ಒಂದು ಯಶಸ್ಸು ದಯಪಾಲಿಸಿ ಎಂದು ಇತರ ನಿರ್ದೇಶಕರು ವಿಷ್ಣುವರ್ಧನ್ ಅವರಲ್ಲಿ ಮನವಿ ಮಾಡಿಕೊಂಡರು. ಕಷ್ಟ ಅಂತ ಬಂದರೆ ತಕ್ಷಣವೇ ಕರಗುತ್ತಿದ್ದ ಅವರು ಇತರರಿಗೆ ಕಾಲ್‌ಶೀಟ್ ಕೊಡಲು ಶುರು ಮಾಡಿದರು. ಅಲ್ಲಿಗೆ ದ್ವಾರಕೀಶ್ ಕೋಪಗೊಂಡರು. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದನಲ್ಲ ಎಂದು ಅಪಾರ್ಥ ಮಾಡಿಕೊಂಡರು. ಗೆಳೆತನದ ವಿಷಯದಲ್ಲಿ ವ್ಯಾಪಾರವನ್ನೂ ಎಳೆತಂದರು. ಅದು ವಿಷ್ಣುವರ್ಧನ್ ಅವರಿಗೆ ಇಷ್ಟವಾಗಲಿಲ್ಲ. ಯಾರಾದರೂ ತಮ್ಮನ್ನು ಬೆಳೆಸಿದೆ ಎಂದು ಹೇಳಿಬಿಟ್ಟರೆ ವಿಷ್ಣುವರ್ಧನ್ ಅವರಿಗೆ ಆಗುತ್ತಿರಲಿಲ್ಲ. ಯಾರೂ, ಯಾರನ್ನೂ ಬೆಳೆಸುವುದಿಲ್ಲ ಎನ್ನುವ ಸಿದ್ಧಾಂತದಲ್ಲಿ ಬದುಕಿದ್ದ ಜೀವವದು. ದ್ವಾರಕೀಶ್ ಮಾತು ಇಷ್ಟವಾಗಲಿಲ್ಲ. ಪರಸ್ಪರ ಕಿತ್ತಾಡಿಕೊಂಡರು. ದ್ವಾರಕೀಶ್ ಅವರಿಂದ ದೂರವೇ ಆದರು. ಇಬ್ಬರೂ ಕೂತು ಮಾತನಾಡಿದ್ದರೆ ಸರಿ ಹೋಗಬಹುದಿತ್ತು. ಹರಿದ ಕೌದಿ ಹೊಳೆಯಲು ತುಂಬಾ ಜಾಣ್ಮೆ ಬೇಕಿರಲಿಲ್ಲ. ಎದುರು ಕೂತು ಮಾತನಾಡಿದ್ದರೆ ಸಾಕಿತ್ತು. ಆದರೆ ದ್ವಾರಕೀಶ್ ಹಾಗೆ ಮಾಡಲಿಲ್ಲ. ವಿಷ್ಣು ಎದುರಿಗೆ ಹೊಸ ಹೀರೋಗಳನ್ನು ತಂದು ನಿಲ್ಲಿಸುತ್ತೇನೆ ಎಂದು ಘೋಷಿಸಿದರು. ಹೊಸಬರನ್ನು ಹಾಕಿಕೊಂಡು ಡಾನ್ಸ್ ರಾಜ ಡಾನ್ಸ್, ಶ್ರುತಿ ಹಾಕಿದ ಹೆಜ್ಜೆ-ಹೀಗೆ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಗೆದ್ದದ್ದು ಮೂರು ಮತ್ತೊಂದು ಮಾತ್ರ. ಬಹುತೇಕ ಚಿತ್ರಗಳು ನೆಲಕಚ್ಚಿದ ಪರಿಣಾಮ ಆರ್ಥಿಕವಾಗಿ ಕುಸಿದು ಬಿಟ್ಟರು. ಮಾಡಿಟ್ಟಿದ್ದ ಆಸ್ತಿ ಮಾರಬೇಕಾಗಿ ಬಂತು. ದ್ವಾರಕೀಶ್ ಅಕ್ಷರಶಃ ಕಂಗಾಲಾದರು. ದ್ವಾರಕೀಶ್ ಜೊತೆ ವಿಷ್ಣುವರ್ಧನ್ ಮಾತಾಡದೇ ಇದ್ದರೂ, ಹಿರಿಜೀವಕ್ಕೆ ಹೀಗಾಗುತ್ತಿದೆಯಲ್ಲ ಎಂದು ಒಳಗೊಳಗೆ ಸಂಕಟ ಪಟ್ಟರು. ದ್ವಾರಕೀಶ್ ದುಡುಕಬಾರದಿತ್ತು ಎಂದು ಕಣ್ಣೀರಿಟ್ಟರು. ಕನ್ನಡ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿರುವ, ಕಲಾವಿದರಿಗೆ ಅನ್ನ ಹಾಕಿರುವ, ಅಸಂಖ್ಯಾತ ಅಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟರೊಬ್ಬರು ಬೀದಿಗೆ ಬೀಳಬಾರದು ಎನ್ನುವ ಕಕ್ಕುಲಾತಿಯಿಂದಾಗ ವಿಷ್ಣು ಮತ್ತೆ ದ್ವಾರಕೀಶ್ ಅವರ ಕೈ ಹಿಡಿದರು. ಮತ್ತೆ ಕಾಲ್‌ಶೀಟ್ ಕೊಟ್ಟರು. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು `ಆಪ್ತಮಿತ್ರ’ ಸಿನಿಮಾ ತೀರಿಸಿತು. ವಿಷ್ಣುವರ್ಧನ್ ಜೊತೆಗಿನ ತಮ್ಮ ವೈಷಮ್ಯವನ್ನು ದ್ವಾರಕೀಶ್ ಅವರೇ ಸ್ವತಃ ಹಲವಾರು ಬಾರಿ ಹೇಳಿಕೊಂಡಿದ್ದಿದೆ. `ನಾನು ಅಹಂ ತೋರಿಸಬಾರದಿತ್ತು. ತಪ್ಪು ಮಾಡಿಬಿಟ್ಟೆ. ನನ್ನೊಂದಿಗೆ ವಿಷ್ಣು ಇದ್ದಿದ್ದರೆ ಇನ್ನೂ ಸಾಕಷ್ಟು ದಾಖಲೆಗಳನ್ನು ಮಾಡಬಹುದಿತ್ತು. ನಮ್ಮ ಯಶಸ್ಸಿನ ಜೋಡಿಯ ಮುಂದೆ ಇತರರು ಹೆದರುತ್ತಿದ್ದರು. ಅದೇ ನನ್ನನ್ನು ಮೂರ್ಖನನ್ನಾಗಿ ಮಾಡಿಸಿತು. ದೂರವಾದ ನಂತರ ಆರ್ಥಿಕ ಮುಗ್ಗಟ್ಟಿಗೆ ಬಳಲಿದೆ, ಆರೋಗ್ಯ ಹಾಳಾಯಿತು, ಆಸ್ತಿ ಕಳೆದುಕೊಂಡೆ. ಕೇವಲ ವಿಷ್ಣು ಮೇಲಿನ ಕೋಪದಿಂದ ಹಲವಾರು ಹೊಸ ಕಲಾವಿದರನ್ನು ಪರಿಚಯಿಸಿದೆ. ನೆಲಕ್ಕೆ ಬಿದ್ದೆ. ಆದರೆ, ಮತ್ತೆ ನನ್ನನ್ನು ಮೇಲಕ್ಕೆ ಎತ್ತಲಿಕ್ಕೆ ನನ್ನ ವಿಷ್ಣುನೇ ಬರಬೇಕಾಯಿತು’ ಎಂದು ಭಾವುಕರಾಗಿ ಹೇಳಿಕೊಂಡಿದ್ದಿದೆ. ನಾನು ವಿಷ್ಣುವನ್ನು ಮರೆತರೆ ದೇವರು ಎಂದೂ ನನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದೂ ಇದೆ. `ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಆಲದ ಮರವಿದ್ದಂತೆ. ಈಗ ಅವರು ಕುಸಿದಿದ್ದಾರೆ. ಬಸವಳಿದಿದ್ದಾರೆ. ಮತ್ತೆ ಅವರಿಗೆ ನಾವೆಲ್ಲ ಚೈತನ್ಯ ತುಂಬಬೇಕು. ಶಕ್ತಿಯಾಗಿ ನಿಲ್ಲಬೇಕು’ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲೂ ವಿಷ್ಣು ಹೇಳಿದ್ದರು. ಆಪ್ತಮಿತ್ರ ಸಿನಿಮಾಗೆ ಕಾಲ್‌ಶೀಟ್ ಕೊಟ್ಟರು. ಈ ಸಿನಿಮಾದ ಗೆಲುವು ದ್ವಾರಕೀಶ್ ಅವರಿಗೆ ಮರುಜನ್ಮ ನೀಡಿತು.

  • ಸಿದ್ದರಾಮಯ್ಯ ಹೆಡ್‌ಫೋನ್ ತೆಗೆದ ಯಡಿಯೂರಪ್ಪ – ಸಿದ್ದುಗೆ ಶಾಕ್!

    ಸಿದ್ದರಾಮಯ್ಯ ಹೆಡ್‌ಫೋನ್ ತೆಗೆದ ಯಡಿಯೂರಪ್ಪ – ಸಿದ್ದುಗೆ ಶಾಕ್!

    ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವೆ ಕುಚುಕು ಕುಚುಕು ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ವಿಧಾನಸಭೆ ಕಲಾಪ ಆರಂಭವಾಗಿ ಪ್ರಶ್ನೋತ್ತರ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಮಾಜಿ ಸಿಎಂ ಯಡಿಯೂರಪ್ಪ ಹೋಗಿ ಕುಳಿತಿದ್ದರು.

    ಗುರುವಾರ ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಸಕರು ಹಾಗೂ ಮಾಧ್ಯಮದವರಿಗೆ ಮಾಜಿ ಸಿಎಂ ಯಡಿಯೂರಪ್ಪ ಭೋಜನಕೂಟ ಏರ್ಪಡಿಸಿದ್ದಾರೆ. ಈ ಭೋಜನಕೂಟಕ್ಕೆ ಆಹ್ವಾನಿಸಲು ಯಡಿಯೂರಪ್ಪ ಸಿದ್ದರಾಮಯ್ಯ ಬಳಿ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕೈ-ಕೈ ಹಿಡಿದು ಕೆಲಕಾಲ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವರ್ತಕರಿಗೆ ವ್ಯಾಪಾರ ನಿಷೇಧ ವಿಚಾರ: ಸಿಡಿದೆದ್ದ ಕರಾವಳಿ ಶಾಸಕರು

    ಇಬ್ಬರ ನಡುವಿನ ಮಾತುಕತೆ ವಿಧಾನಸಭೆಯಲ್ಲಿದ್ದ ಎಲ್ಲರ ಗಮನ ಸೆಳೆಯಿತು. ನಗುನಗುತ್ತಾ ಇಬ್ಬರು ನಾಯಕರು ಉಭಯಕುಶಲೋಪರಿ ವಿಚಾರಿಸಿಕೊಂಡರು. ಸಿದ್ದರಾಮಯ್ಯ ಹೆಡ್‌ಫೋನ್ ಹಾಕಿಕೊಂಡಿದ್ದಾಗ ಹಿಂದಿನಿಂದ ಹೋಗಿ ಯಡಿಯೂರಪ್ಪ ಹೆಡ್‌ಫೋನ್ ತೆಗೆದಿದ್ದರು. ಹೆಡ್‌ಫೋನ್ ತೆಗೆದಿದ್ದು ಯಾರು ಎಂದು ಸಿದ್ದರಾಮಯ್ಯ ಗಾಬರಿಯಿಂದ ನೋಡಿದಾಗ ಅದು ಯಡಿಯೂರಪ್ಪ ಎಂಬುದು ತಿಳಿದು ನಕ್ಕಿದ್ದರು. ಇದನ್ನೂ ಓದಿ: ಚರಂಡಿಗಿಳಿದು ಕೊಳಚೆ ಶುಚಿಗೊಳಿಸಿದ ಆಪ್ ಕೌನ್ಸಿಲರ್‌ಗೆ ಹಾಲಿನ ಸ್ನಾನ..!

    ಅಂದಹಾಗೆ ಯಡಿಯೂರಪ್ಪ, ಸಿದ್ದರಾಮಯ್ಯ ನಡುವಿನ ವೈಯಕ್ತಿಕ ಸಂಬಂಧ ಚೆನ್ನಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಒಟ್ಟಾಗಿ ಮಾತನಾಡುವ, ಕೆಲ ಕಡೆ ಒಟ್ಟಾಗಿ ಕಾಣಿಸಿಕೊಂಡಿರುವ ಹಲವು ನಿದರ್ಶನಗಳು ಇವೆ.

    ಇದೇ ವೇಳೆ ಇಬ್ಬರು ನಾಯಕರ ಬಳಿ ಮಂಗಳೂರಿನಲ್ಲಿ ಮುಸ್ಲಿಂ ವರ್ತಕರಿಗೆ ಅವಕಾಶ ನೀಡದ ಬಗ್ಗೆ ಯುಟಿ ಖಾದರ್ ಪ್ರಸ್ತಾಪಿಸಿದ ಘಟನೆಯೂ ನಡೆಯಿತು.

  • ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

    ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಈಗಾಗಲೇ ಸಿಸಿಬಿ ತನಿಖೆ ಎದುರಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಾಂತ್ವನ ಕೇಂದ್ರದಲ್ಲಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು ಎಂದು ಮೂಲಗಳು ತಿಳಿಸಿತ್ತು. ಆದರೆ ಇಂದು ಈ ಇಬ್ಬರು ನಟಿಯರ ನಡುವೆ ಫ್ರೆಂಡ್‍ಶಿಪ್ ಆದ ಪ್ರಸಂಗ ನಡೆಯಿತು.

    ಹೌದು. ವಿಚಾರಣೆ ನಡೆಸುತ್ತಿರುವಾಗ ಈ ಇಬ್ಬರು ನಟಿಯರೂ ಪದೇ ಪದೇ ಅನಾರೋಗ್ಯದ ನೆಪವೊಡ್ಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಬ್ಬರ ಆರೋಗ್ಯ ತಪಾಸಣೆಗಾಗಿ ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದರು.

    ತನಿಖೆಯ ವೇಳೆ ಹುಷಾರಿಲ್ಲ ಎಂದು ಹಲವು ಬಾರಿ ಹೇಳಿದ್ದರಿಂದ ಇವರೇನೂ ನಕ್ರಾ ಮಾಡುತ್ತಿದ್ದರಾ ಅಥವಾ ನಿಜ ಹೇಳುತ್ತಿದ್ದಾರೋ ಎಂದು ಪರೀಕ್ಷಿಸಲು ಪೊಲೀಸರು ಚೆಕಪ್ ಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಪರೀಕ್ಷೆಯ ವೇಳೆ ಇಬ್ಬರ ಬಿಪಿ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಆರೋಗ್ಯ ತಪಾಸಣೆಯ ಬಳಿಕ ಇಬ್ಬರನ್ನೂ ಅದೇ ಪೊಲೀಸ್ ವಾಹನದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯಲಾಯಿತು. ಈ ವೇಳೆ ನಟಿಯರಿಬ್ಬರು ಪೊಲೀಸ್ ವಾಹನದಲ್ಲಿ ಮಾತುಕತೆ ನಡೆಸಿದರು. ಪೊಲೀಸ್ ವಾಹನದಲ್ಲಿ ರಾಗಿಣಿ- ಸಂಜನಾ ಇಬ್ಬರ ಮಧ್ಯೆ ಮುಕ್ತವಾಗಿ ಸಂಭಾಷಣೆ ನಡೆದಿದೆ.

    ಸಾಂತ್ವನ ಕೇಂದ್ರದಲ್ಲಿ ಗಲಾಟೆ:
    ಮೊದಲು ರಾಗಿಣಿಯನ್ನು ಬಂಧಿಸಿ ಸಾಂತ್ವನ ಕೇಂದ್ರದಲ್ಲಿ ಇರಿಸಲಾಯಿತು. ಅದಾದ ಬಳಿಕ ಸಂಜನಾಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಇಬ್ಬರನ್ನೂ ಸಾಂತ್ವನ ಕೇಂದ್ರದಲ್ಲಿ ಇರಿಸಲಾಯಿತು. 5 ಹಾಸಿಗೆಗಳ ಪೈಕಿ ಮೊದಲ ಮತ್ತು ಕೊನೆಯ ಹಾಸಿಗೆಯನ್ನು ಇಬ್ಬರಿಗೆ ನೀಡಿದ್ದರೆ ಮಧ್ಯದಲ್ಲಿರುವ ಮೂರು ಬೆಡ್‍ಗಳನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೆ ನೀಡಲಾಗಿತ್ತು.

    ರಾಗಿಣಿ ನೋಡಿ ನಟಿ ಸಂಜನಾ ಈಗ ಸಮಾಧಾನ ಆಯ್ತಾ ಕೇಳಿದ್ದಾರೆ. ರಾತ್ರಿ ಊಟ ಬೇಡ ಎಂದು ಹೇಳಿದ್ದ ಸಂಜನಾ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಕೆಪಿಎಲ್ ವಿಚಾರದಲ್ಲಿ ಇಬ್ಬರು ನಟಿಯ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೊದಲೇ ಮಾತುಕತೆ ಕಡಿಮೆ ಇತ್ತು. ಹೀಗಾಗಿ ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಯಾವುದೇ ಜಾಸ್ತಿ ಮಾತುಕತೆ ನಡೆದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿತ್ತು.

  • ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ರಷ್ಯಾ ಯುವಕನ ಗೆಳೆತನ

    ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ರಷ್ಯಾ ಯುವಕನ ಗೆಳೆತನ

    – ರಾಜಸ್ಥಾನಕ್ಕೆ ಬಂದು ಅತ್ಯಾಚಾರಗೈದು ಪರಾರಿ

    ಜೈಪುರ: ರಷ್ಯಾ ಯುವಕನೊಬ್ಬ ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡಿಕೊಂಡು ಬಳಿಕ ಆಕೆ ಇರುವ ಸ್ಥಳಕ್ಕೆ ಬಂದು ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ರಾಜಸ್ಥಾನದ ದುಂಗರಪುರ ಜಿಲ್ಲೆಯ ಸಾಗ್ವಾರಾದಲ್ಲಿ ನಡೆದಿದೆ.

    ಆರೋಪಿ ಮೂಲತಃ ರಾಜಸ್ಥಾನದವನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ರಷ್ಯಾಗೆ ತೆರಳಿದ್ದನು. ಈ ವೇಳೆ ಆರೋಪಿ ಅಪ್ರಾಪ್ತೆಯನ್ನು ಫೇಸ್‍ಬುಕ್‍ನಲ್ಲಿ ಫ್ರೆಂಡ್ ಮಾಡಿಕೊಂಡಿದ್ದಾನೆ. ಬಳಿಕ ಇಬ್ಬರು ಪರಸ್ಪರ ಇಷ್ಟಪಡಲು ಶುರು ಮಾಡಿದ್ದು, ಮದುವೆ ಆಗಲು ನಿರ್ಧರಿಸಿದ್ದರು.

    ನನ್ನನ್ನು ಮದುವೆ ಆಗಲು ಆತ ಸಾಗ್ವಾರಾಕ್ಕೆ ಬಂದಿದ್ದು, ಭೇಟಿ ಮಾಡಲು ಹತ್ತಿರದ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದನು. ಬಳಿಕ ಮದುವೆ ಆಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಆರೋಪಿ ಅತ್ಯಾಚಾರ ಮಾಡಿದ ನಂತರ ರಷ್ಯಾಗೆ ಪರಾರಿ ಆಗಿದ್ದಾನೆ. ಅಲ್ಲಿ ಆರೋಪಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸದ್ಯ ಆತನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಅಪ್ರಾಪ್ತೆ ಮೊದಲು ಆರೋಪಿಯನ್ನು ಫೇಸ್‍ಬುಕ್ ಫ್ರೆಂಡ್ ಮಾಡಿಕೊಂಡಿದ್ದಳು. ಬಳಿಕ ಫೇಸ್‍ಬುಕ್ ಅಲ್ಲದೆ ಕಳೆದ ಒಂದು ವರ್ಷದಿಂದ ಆರೋಪಿ ಜೊತೆ ಇನ್‍ಸ್ಟಾಗ್ರಾಂ ಹಾಗೂ ವಾಟ್ಸಾಪ್‍ನಲ್ಲಿ ಚಾಟಿಂಗ್ ಮಾಡುತ್ತಿದ್ದಳು ಎಂಬ ವಿಷಯ ತನಿಖೆ ವೇಳೆ ತಿಳಿದು ಬಂದಿದೆ.

    ಅಲ್ಲದೆ ಆರೋಪಿ ಮುಂದಿನ ಬಾರಿ ಭಾರತಕ್ಕೆ ಬಂದಾಗ ಮದುವೆ ಆಗುತ್ತೇನೆ ಎಂದು ಹೇಳಿ ಅತ್ಯಾಚಾರ ಮಾಡಿದ್ದಾನೆ. ರಷ್ಯಾಗೆ ತೆರಳುತ್ತಿದ್ದಂತೆ ಆರೋಪಿ ಸಂತ್ರಸ್ತೆ ಜೊತೆಗಿನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿದ್ದಾನೆ. ಹೀಗಾಗಿ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸುವಂತೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿಕೊಂಡಿದ್ದಾರೆ.

  • ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ ಮೂಕಪ್ರಾಣಿಗಳ ಗೆಳೆತನ!

    ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ ಮೂಕಪ್ರಾಣಿಗಳ ಗೆಳೆತನ!

    ಚಿಕ್ಕೋಡಿ: ಕೋತಿ ಹಾಗೂ ಶ್ವಾನ ಬದ್ಧ ವೈರಿಗಳು. ಆದ್ರೆ ಇಲ್ಲಿ ದಿನನಿತ್ಯ ಕೋತಿ ಹಾಗೂ ಎರಡು ಶ್ವಾನಗಳು ಅನ್ಯೋನ್ಯವಾಗಿ ಬಾಳುತ್ತಿದ್ದು, ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ.

    ಹೌದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂಥ ಅಪರೂಪದ ಘಟನೆ ಸಾಕ್ಷಿಯಾಗಿದೆ. ಕೋತಿಗಳ ಗುಂಪಿನಿಂದ ಮಿಸ್ ಆಗಿ ಅನಾಥವಾಗಿದ್ದ ಮಂಗವನ್ನು ಸ್ಥಳೀಯ ನಿವಾಸಿ ದೊಡ್ಡಮನಿ ಕುಟುಂಬ ಸಾಕಿ ಸಲುಹುತ್ತಿದೆ. ಹೀಗೆ ಸಾಕಿದ್ದ ಕೋತಿಗೆ ಅವರ ಮನೆಯಲ್ಲಿದ್ದ ಶ್ವಾನಗಳ ಜೊತೆಗೆ ಫ್ರೆಂಡ್‍ಶಿಪ್ ಆಗಿ ಅನ್ಯೋನ್ಯವಾಗಿ ಬಾಳುತ್ತಿವೆ. ಕೋತಿಗೆ ಏನಾದ್ರೂ ಆದ್ರೆ ಅದರ ರಕ್ಷಣೆಗೆ ನಾಯಿ ನಿಲ್ಲುತ್ತದೆ.

    ಬಹುತೇಕ ಕಡೆ ಕೋತಿಗಳು ಬಂದ್ರೆ ಶ್ವಾನಗಳು ದಾಳಿ ಮಾಡಿ ಅವುಗಳನ್ನ ಓಡಿಸುತ್ತವೆ. ಆದ್ರೆ ಇಲ್ಲಿ ಕೋತಿಗೆ ಯಾವುದೇ ಬೇರೆ ಕಡೆಯಿಂದ ಬಂದ ಶ್ವಾನ ಆವಾಜ್ ಹಾಕಿದ್ರೆ ಈ ಶ್ವಾನ ಕೋತಿಯ ರಕ್ಷಣೆಗೆ ನಿಲ್ಲುತ್ತದೆ. ಶ್ವಾನ ಹಾಗೂ ಕೋತಿಯ ಅನ್ಯೋನ್ಯತೆಗೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಧರ್ಮ ಹಾಗೂ ಜಾತಿ ಜಾತಿಗಳ ಹೆಸರಿನಲ್ಲಿ ಹೊಡೆದಾಡುತ್ತಿರುವ ಮನುಷ್ಯ ಜೀವಿಗೆ ಅನ್ಯೋನ್ಯತೆಯ ಪಾಠವನ್ನ ಈ ಮೂಕ ಪ್ರಾಣಿಗಳು ಹೇಳಿಕೊಡುವಂತಿವೆ.

    https://www.youtube.com/watch?v=LXcfjgHior8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೂವಿನ ಅಂಗಿ ತೊಟ್ಟರು ದರ್ಶನ್

    ಹೂವಿನ ಅಂಗಿ ತೊಟ್ಟರು ದರ್ಶನ್

    ಬೆಂಗಳೂರು: ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿರುವ ದರ್ಶನ್ ಅದರ ನಡುವೆಯೂ ಮೈಸೂರಿನ ಹಳೆಯ ಸ್ನೇಹಿತರೊಂದಿಗೆ ಒಂದಿಷ್ಟು ಕಾಲ ಕಳೆದರು. ಬೆಳೆದು ದೊಡ್ಡವರಾಗುತ್ತಲೇ ಜೊತೆಗಿದ್ದವರನ್ನು ಮರೆತುಬಿಡುವ ಕಾಲಿವಿದೆ. ಆದರೆ ಅಂಥಾ ಕೆಟ್ಟ ಮರೆವು ನಮಗೆ ಬೇಡ ಅಂತಾ ತೀರ್ಮಾನಿಸಿರುವವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು.

    ಇವತ್ತಿಗೆ ನಾವೆಲ್ಲಾ ಏನೇ ಆಗಿರಬಹುದು ಆದರೆ ಹಳೆಯದನ್ನು ಮರೆಯಬಾರದು. ಕಡೇ ಪಕ್ಷ ವರ್ಷಕ್ಕೊಮ್ಮೆಯಾದರೂ ಜೊತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಬೇಕು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಳ್ಳಬೇಕು. ಭವಿಷ್ಯದ ಪ್ಲಾನುಗಳನ್ನು ಚರ್ಚಿಸಬೇಕು ಅನ್ನೋದು ದರ್ಶನ್ ಅವರ ಅಭಿಪ್ರಾಯ. ಈ ಕಾರಣದಿಂದಲೇ ಸುಮಾರು ವರ್ಷಗಳಿಂದ ಸ್ಕೂಲ್ ಮತ್ತು ಕಾಲೇಜಲ್ಲಿ ಜೊತೆಗೆ ಬೆಳೆದ ಸ್ನೇಹಿತರೊಂದಿಗೆ ಒಂದು ಔತಣಕೂಟವನ್ನು ಏರ್ಪಡಿಸಲಾಗುತ್ತಿದೆ. ದರ್ಶನ್ ಅವರ ಜೊತಗೆ ಸಂಪರ್ಕದಲ್ಲಿರುವ ಎಲ್ಲ ಗೆಳೆಯ-ಗೆಳತಿಯರೂ ಒಂದೆಡೆ ಸೇರುತ್ತಾರೆ.

    ಹಾಗೆ ನಿನ್ನೆ ಕೂಡಾ ರೀಯೂನಿಯನ್ ಸಭೆ ಏರ್ಪಾಡಾಗಿತ್ತು. ಅಲ್ಲಿಗೆ ಬಂದ ದರ್ಶನ್ ಗೆಳೆಯರು ಹೂವಿನಿಂದ ಸಿಂಗರಿಸಿದ ಅಂಗಿಯೊಂದನ್ನು ತೊಡಿಸಿದ್ದು ವಿಶೇಷವಾಗಿತ್ತು. ಮಲ್ಲಿಗೆ ಗುಲಾಬಿಗಳಿಂದ ತಯಾರಿಸಿದ್ದ ಆ ಅಂಗಿ ದರ್ಶನ್ ಅವರನ್ನು ಪೂರ್ತಿಯಾಗಿ ಆವರಿಸಿತ್ತು.

    ಈ ಸಂದರ್ಭದಲ್ಲಿ ದರ್ಶನ್ ಅವರ ಚಿತ್ರರಂಗದ ಗೆಳೆಯರಾದ ಸೃಜನ್, ಧರ್ಮ ಕೀರ್ತಿ ಮತ್ತು ಯಶಸ್ ಸೂರ್ಯ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.