Tag: ಗೆಳತಿ

  • ಮಂಡ್ಯ: ತನ್ನ ಸಮಯಪ್ರಜ್ಞೆಯಿಂದ ಗೆಳತಿಯ ಜೀವ ಉಳಿಸಿದ 4 ವರ್ಷದ ಬಾಲಕಿ

    ಮಂಡ್ಯ: ತನ್ನ ಸಮಯಪ್ರಜ್ಞೆಯಿಂದ ಗೆಳತಿಯ ಜೀವ ಉಳಿಸಿದ 4 ವರ್ಷದ ಬಾಲಕಿ

    ಮಂಡ್ಯ: ನಾಲ್ಕು ವರ್ಷದ ಚಿಕ್ಕ ಬಾಲಕಿಯ ಸಮಯಪ್ರಜ್ಞೆಯಿಂದ ಆಕೆಯ ಪುಟಾಣಿ ಗೆಳತಿಯ ಜೀವ ಉಳಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ನಾಲ್ಕು ವರ್ಷದ ಚಂದನಾ ಮತ್ತು ರಿತು ಇಬ್ಬರೂ ಎದುರು ಬದುರು ಮನೆಯವರು. ಜೊತೆಗೆ ಇಬ್ಬರೂ ಕೂಡ ಆತ್ಮೀಯ ಗೆಳತಿಯರು. ನವೆಂಬರ್ 10 ರಂದು ಅಜಿತ್ ಕುಮಾರ್ ಮತ್ತು ಶಿಲ್ಪಾ ದಂಪತಿ ಪುತ್ರಿ ಚಂದನಾ ಅಂಗಡಿಯಿಂದ ತಿಂಡಿ ತೆಗೆದುಕೊಂಡು ಬರುತ್ತಿದ್ದಳು. ಈ ವೇಳೆ ತನ್ನ ಗೆಳತಿ ಚಂದ್ರಶೇಖರ್ ಮತ್ತು ವಿನುತಾ ಅವರ ಮಗಳಾದ ರಿತು ತನ್ನ ಚಪ್ಪಲಿಗೆ ಮೆತ್ತಿಕೊಂಡಿರುವ ಸಗಣಿ ತೊಳೆಯಲು ಚಿಕ್ಕ ಕಟ್ಟೆಗೆ ಹೋಗುತ್ತಿರುವುದನ್ನು ನೋಡಿದ್ದಳು. ಚಂದನಾ ಕೂಡ ರಿತುವನ್ನು ಮಾತನಾಡಿಸಲು ಕಟ್ಟೆ ಬಳಿ ಹೋಗಿದ್ದಳು.

     ಚಂದನಾ

    ಆದರೆ ಅಷ್ಟರಲ್ಲಿ ಕಾಲು ಜಾರಿ ರಿತು ಕಟ್ಟೆಯೊಳಗೆ ಬಿದ್ದಿದ್ದಾಳೆ. ಇದನ್ನು ನೋಡಿ ಚಂದನಾ ಮನೆಯ ಬಳಿ ತೆರಳಿ ರಿತುವಿನ ಪೋಷಕರು ಮತ್ತು ತನ್ನ ತಂದೆಗೆ ವಿಷಯ ತಿಳಿಸಿ ಅಳಲಾರಂಭಿಸಿದ್ದಾಳೆ. ಆರಂಭದಲ್ಲಿ ಮನೆಯವರು ಚಿಕ್ಕ ಹುಡುಗಿ ಏನೇನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದರು. ಇದನ್ನು ನೋಡಿ ಚಂದನಾ ಅಳುವನ್ನು ಜೋರು ಮಾಡಿದ್ದಳು. ಇದರಿಂದ ಗಾಬರಿಗೊಂಡ ಪೋಷಕರು ಕಟ್ಟೆ ಬಳಿ ಓಡಿ ಬಂದು ನೋಡಿದಾಗ ರಿತು ನೀರಿಗೆ ಬಿದ್ದಿರುವುದು ಕಂಡಿದೆ. ತಕ್ಷಣ ರಿತುವನ್ನು ನೀರಿನಿಂದ ಮೇಲೆತ್ತಿದ್ದು, ಆಕೆ ತೀವ್ರ ಅಸ್ವಸ್ಥಳಾಗಿದ್ದಳು.

    ಕೂಡಲೇ ರಿತುವನ್ನು ಕೆಎಂದೊಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎರಡು ದಿನಗಳ ಕಾಲ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ. ಒಟ್ಟಾರೆ ಪುಟಾಣಿ ಹುಡುಗಿ ಚಂದನಾಳ ಸಮಯಪ್ರಜ್ಞೆಯಿಂದ ಆಕೆಯ ಗೆಳತಿ ರಿತು ಬದುಕುಳಿದಿದ್ದು, ಎಲ್ಲರೂ ಚಂದನಾಳ ಗುಣಗಾನ ಮಾಡುತ್ತಿದ್ದಾರೆ.

  • ಇನ್ಶುರೆನ್ಸ್ ಪಾಲಿಸಿ ಮಾಡಿಸಲು ಹೋದ ಹೊಸ ಗೆಳತಿಯ ಮನೆಯಲ್ಲಿಯೇ ಮಹಿಳೆ ಹೆಣವಾದ್ಳು!

    ಇನ್ಶುರೆನ್ಸ್ ಪಾಲಿಸಿ ಮಾಡಿಸಲು ಹೋದ ಹೊಸ ಗೆಳತಿಯ ಮನೆಯಲ್ಲಿಯೇ ಮಹಿಳೆ ಹೆಣವಾದ್ಳು!

    ಮುಂಬೈ: ವಿಮಾ ಏಜೆಂಟ್ ಮಹಿಳೆಯೊಬ್ಬರು ತನ್ನ ಹೊಸ ಗೆಳತಿಯ ಮನೆಯಲ್ಲಿಯೇ ಕತ್ತು ಸೀಳಿದ ಸ್ಥಿತಿಯಲ್ಲಿ ಕೊಲೆಯಾಗಿರೋ ಆಘಾತಕಾರಿ ಘಟನೆ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು ಕೀರ್ತಿನಿಧಿ ವಿದ್ಯಾಧರ್ ಶರ್ಮಾ(67) ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಗೆಳತಿಯನ್ನು ಅರ್ನಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಏನಿದು ಘಟನೆ?: ವಿರಾರ್ ನ ರಜಾಂಜಿ ಎವರ್ ಶೈನ್ ಗ್ಲೋಬಲ್ ಸಿಟಿ ಅವೆನ್ಯೂ ಸೊಸೈಟಿಯಲ್ಲರೋ ಫ್ಲ್ಯಾಟ್ ನಲ್ಲಿ ಮಹಿಳೆಯ ಶವಪತ್ತೆಯಾಗಿದೆ. ಕತ್ತು ಸೀಳಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಮೃತದೇಹದ ಮೇಲೆ ಗಾಯಗಳಿದ್ದವು ಅಂತ ಪೊಲೀಸರು ತಿಳಿಸಿದ್ದಾರೆ.

    ಇದೇ ಫ್ಲ್ಯಾಟ್ ನಲ್ಲಿ ಗೆಳತಿ ರಿಯಲ್ ಎಸ್ಟೇಟ್ ಏಜೆಂಟ್ 49 ವರ್ಷದ ಪುಷ್ಪಾ ವಾಸುಮ್ದಾನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಳೆದ 2 ವರ್ಷದಿಂದ ವಾಸಿಸುತ್ತಿದ್ದರು. ವಾಸುಮ್ದಾನಿ ಮತ್ತು ಮೃತ ಶರ್ಮಾ ಅವರನ್ನು 15 ದಿನಗಳ ಹಿಂದೆಯಷ್ಟೇ ಬ್ಯೂಟಿ ಪಾರ್ಲರೊಂದರಲ್ಲಿ ಭೇಟಿಯಾಗಿದ್ದರು. ಆ ಬಳಿಕ ಅವರಿಬ್ಬರು ಗೆಳತಿಯರಾದ್ರು. ಅಂತೆಯೇ ಕಳೆದ ಭಾನುವಾರ ಶರ್ಮಾ ಅವರು ವಾಸುಮ್ದಾನಿ ಮನೆಗೆ ತೆರಳಿದ್ದವರು ವಾಪಸ್ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶರ್ಮಾರಿಗಾಗಿ ಅವರ ಕುಟುಂಬ ಹುಡುಕಾಟ ನಡೆಸಿತ್ತು. ಅಂತೆಯೇ ಅವರು ವಾಸುಮ್ದಾನಿ ಮನೆಗೆ ತೆರಳಿದ್ದರು. ಆದ್ರೆ ಆ ಸಂದರ್ಭ ಮನೆಗೆ ಬೀಗ ಜಡಿದಿತ್ತು. ಹೀಗಾಗಿ ಅಲ್ಲಿಂದ ವಾಪಾಸ್ಸಾದ ಶರ್ಮಾ ಕುಟುಂಬ ಅರ್ನಲಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಅಂತ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

    ಶರ್ಮಾ ಇನ್ಶುರೆನ್ಸ್ ಪಾಲಿಸಿ ಮಾಡುವ ಸಲುವಾಗಿ ವಾಸುಮ್ದಾನಿ ಮನೆಗೆ ತೆರಳಿರಬಹುದು. ಈ ವೇಳೆ ದರೋಡೆ ನಡೆಸಿ ವಾಸುಮ್ದಾನಿಯೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಯಾಕಂದ್ರೆ ಶರ್ಮಾ ಮೈಯಲಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಅಂತ ಅವರು ತಿಳಿಸಿದ್ದಾರೆ.

    ಆದ್ರೆ ಘಟನೆ ನಡೆದ ವೇಳೆ ನಾನು ಕೆಲಸದ ನಿಮಿತ್ತ ಹೊರಗಡೆ ಬಂದಿದ್ದೆ. ಹೀಗಾಗಿ ಸೋಮವಾರ ರಾತ್ರಿ ಮನೆಗೆ ವಾಪಾಸ್ಸಾದ ಸಂದರ್ಭದಲ್ಲಿ ತನ್ನ ಫ್ಲ್ಯಾಟ್ ನಲ್ಲಿ ಶರ್ಮಾ ಮೃತದೇಹ ಕಂಡಿದ್ದೇನೆ ಅಂತ ಗೆಳತಿ ವಾಸುಮ್ದಾನಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ವಾಸುಮ್ದಾನಿಯನ್ನು ವಶಕ್ಕೆ ಪಡಿದ್ದೇವೆ. ಅಲ್ಲದೇ ಈಕೆ ಬಂಧನವಾಗುವ ಸಂಭವವಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯ ಘಟನೆಗೆ ಸಂಬಂಧಿಸಿದಂತೆ ಗೆಳತಿಯನ್ನು ವಶಕ್ಕೆ ಪಡೆದಿದ್ದು, ಅಪರಿಚಿತರಿಂದ ಕೊಲೆ ನಡೆದಿರುವುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ವಿರಾರ್ ವಿಭಾಗದ ಎಸ್‍ಡಿಪಿಒ ಜಯಂತ್ ಬಜ್‍ಬಲೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಸ್ನೇಹಿತೆಯ ಆತ್ಮಹತ್ಯೆಗೆ ಮನನೊಂದು ಯುವತಿ ಆತ್ಮಹತ್ಯೆ

    ಸ್ನೇಹಿತೆಯ ಆತ್ಮಹತ್ಯೆಗೆ ಮನನೊಂದು ಯುವತಿ ಆತ್ಮಹತ್ಯೆ

    ಬೆಂಗಳೂರು: ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆಕೆಯ ಗೆಳತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಶ್ರೀರಾಂಪುರ ಬಳಿ ಇರುವ ಎಲ್ ಎನ್ ಪುರದಲ್ಲಿ ನಡೆದಿದೆ.

    21 ವರ್ಷದ ಭುವನೇಶ್ವರಿ ಆತ್ಮಹತ್ಯೆಗೆ ಶರಣಾದ ಯುವತಿ. ಮೂರು ತಿಂಗಳ ಹಿಂದೆ ಭುವನೇಶ್ವರಿಯ ಆಪ್ತ ಸ್ನೇಹಿತೆ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರೂ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಲಕ್ಷ್ಮೀ ಸಾವಿನ ಬಳಿಕ ನಿದ್ದೆಯಲ್ಲೂ ಸ್ನೇಹಿತೆಯ ಆತ್ಮಹತ್ಯೆ ಬಗ್ಗೆ ಭುವನೇಶ್ವರಿ ಕನವರಿಸುತ್ತಿದ್ದರು ಎಂದು ಹೇಳಲಾಗಿದೆ.

    ಗೆಳತಿಯ ಸಾವಿನಿಂದ ಖಿನ್ನತೆಗೊಳಗಾಗಿದ್ದ ಭುವನೇಶ್ವರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭುವನೇಶ್ವರಿಯವರ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.