Tag: ಗೃಹಿಣಿಯರು

  • ಪಕ್ಷ ಗೆದ್ದರೆ ಗೃಹಿಣಿಯರ ಮನೆಗೆಲಸಕ್ಕೂ ವೇತನ – ಕಮಲ್ ಹಾಸನ್ ಘೋಷಣೆ

    ಪಕ್ಷ ಗೆದ್ದರೆ ಗೃಹಿಣಿಯರ ಮನೆಗೆಲಸಕ್ಕೂ ವೇತನ – ಕಮಲ್ ಹಾಸನ್ ಘೋಷಣೆ

    ಚೆನ್ನೈ: ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯ್ಯಮ್(ಎಂಎನ್‍ಎಂ) ಪಕ್ಷ ಗೆದ್ದರೆ ಗೃಹಿಣಿಯರ ಮನೆಗೆಲಸಕ್ಕೂ ವೇತನ ನೀಡುವುದಾಗಿ ನಟ ಕಮಲ್ ಹಾಸನ್ ಘೊಷಣೆ ಮಾಡಿದ್ದಾರೆ.

    ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 7 ಅಂಶಗಳುಳ್ಳ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ವೇಳೆ 2021ರ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿದರೆ ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರಿಗೂ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.

    ಮನೆಯನ್ನು ನಿಭಾಯಿಸುವ ಗೃಹಿಣಿಯರ ಗೌರವವನ್ನು ಹೆಚ್ಚಿಸಲು ಅವರಿಗೆ ಈ ವೇತನ ನೀಡಲಾಗುವುದು. ಅಲ್ಲದೆ ಮನೆಯ ಎಲ್ಲಾ ಮಂದಿಗೆ ಕಂಪ್ಯೂಟರ್ ಜೊತೆ ಅತಿ ವೇಗದ ಇಂಟರ್ನೆಟ್ ಆಶ್ವಾಸನೆ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.

    ಬಡತನ ರೇಖೆಗಿಂತ ಕೆಳಗಿನವರ ಆರ್ಥಿಕ ಉನ್ನತೀಕರಣಕ್ಕೆ ತಮ್ಮ ಪಕ್ಷ ಕ್ರಮ ಕೈಗೊಳ್ಳಲಿದೆ. ಗ್ರಾಮಗಳಲ್ಲಿ ರೈತರಿಗೆ ವಿಶ್ವದರ್ಜೆಯ ಶೀತಲೀಕರಣ ವ್ಯವಸ್ಥೆ, ಸಾವಯವ ಕೃಷಿಗೆ ಒತ್ತು ನೀಡುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.

  • ಉಪ್ಪಿನಕಾಯಿ- ಹಪ್ಪಳ ಸಂಡಿಗೆ ಮಾಡಿ ಜನತಾ ಕರ್ಫ್ಯೂ ವಿಧಿಸಿಕೊಂಡ ಉಡುಪಿ ಜನ

    ಉಪ್ಪಿನಕಾಯಿ- ಹಪ್ಪಳ ಸಂಡಿಗೆ ಮಾಡಿ ಜನತಾ ಕರ್ಫ್ಯೂ ವಿಧಿಸಿಕೊಂಡ ಉಡುಪಿ ಜನ

    ಉಡುಪಿ: ಕೊರೊನಾ ವಿರುದ್ಧ ಹೋರಾಡುವ ಉದ್ದೇಶದಿಂದ ಜನರೇ ಭಾರತವನ್ನು ಬಂದ್ ಮಾಡಿದ್ದಾರೆ. ಮನೆಯಿಂದ ಹೊರಗೆ ಬಾರದ ಜನ ಏನು ಮಾಡುತ್ತಿದ್ದಾರೆ ಎನ್ನುವುದು ಕುತೂಹಲ ಎಲ್ಲರಲ್ಲೂ ಇದೆ. ಸದಾ ಓಡಾಡುವ ಪುರುಷರು ಮನೆಯಲ್ಲಿದ್ದೇನೆ ಮಾಡ್ತಾರೆ ಎನ್ನುವ ಒಂದು ಯಕ್ಷ ಪ್ರಶ್ನೆಯೂ ಇದೆ. ಮನೆಯಿಂದ ಹೊರಬಾರದ ಜನ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

    ಉಡುಪಿ ನಗರದ ಲಾಲಾ ಲಜಪತ್ರಾಯ್ ರೆಸಿಡೆನ್ಷಿಯಲ್ ರಸ್ತೆಯ ಅಶ್ವಿನಿ ಕಾಮತ್ ಎಂಬವರ ಮನೆ ಮನೆಯಲ್ಲಿ ಇಡೀ ಕುಟುಂಬವೇ ಇತ್ತು. ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ದಿನಪೂರ್ತಿ ಹೊರಗೆ ಬಾರದೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಜನತಾ ಕರ್ಫ್ಯೂ ಎಂದು ಮನೆಯೊಳಗೆ ಇದ್ದ ಕುಟುಂಬ ಉಪ್ಪಿನಕಾಯಿ ಹಾಕುವುದರಲ್ಲಿ ಬಿಸಿಯಾಗಿತ್ತು. ಕಫ್ರ್ಯೂ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಾವಿನಕಾಯಿ ನಿಂಬೆಹುಳಿ ಮತ್ತಿತರ ವಸ್ತುಗಳನ್ನು ಜೋಡಿಸಿತ್ತು. ಕುಟುಂಬದ ನಾಲ್ವರು ಸದಸ್ಯರು ಮನೆಯಲ್ಲಿದ್ದುಕೊಂಡು ಉಪ್ಪಿನಕಾಯಿ ಹಾಕಿದ್ದಾರೆ. ಅಶ್ವಿನಿ ಕಾಮತ್ ಅವರ ಮಗ ಬೆಂಗಳೂರಿನಲ್ಲಿ ಎಂಬಿಎ ಪದವಿ ಮಾಡುತ್ತಿದ್ದು, ಸದ್ಯ ರಜೆ ಘೋಷಿಸಿರುವುದರಿಂದ ಉಡುಪಿಗೆ ಬಂದಿದ್ದಾರೆ. ರಜೆ ಮುಗಿಸಿ ಬೆಂಗಳೂರಿಗೆ ಹೋಗುವಾಗ ಮಗನಿಗೆ ಚಟ್ನಿಪುಡಿ ಉಪ್ಪಿನಕಾಯಿ ಗೊಜ್ಜು, ಸಾಂಬಾರು ಹುಡಿ ಸಾರು ಹುಡಿ ತಯಾರು ಮಾಡುವುದರಲ್ಲಿ ತಂಗಿ, ತಂದೆ ಮತ್ತು ತಾಯಿ ತೊಡಗಿಸಿಕೊಂಡಿದ್ದರು. ಜನತಾ ಕರ್ಫ್ಯೂ ನಿಂದ ಕೊರೊನಾ ವಿರುದ್ಧ ಒಂದು ಕಡೆಯಿಂದ ಜನ ಜಾಗೃತಿಯಾದರೆ ಇಡೀ ಕುಟುಂಬ ಮನೆಯಲ್ಲಿ ಇದ್ದು ಒಂದು ದಿನ ಕಳೆಯುವುದಕ್ಕೆ ಈ ಭಾನುವಾರ ಅವಕಾಶ ಆಯಿತು.

    ಪಣಿಯಾಡಿ ನಾಗರತ್ನ ಅವರ ಮನೆಯಲ್ಲಿ ನಾಲ್ಕೈದು ಗೃಹಿಣಿಯರು ಸೇರಿ ಹಪ್ಪಳ ಮತ್ತು ಸಂಡಿಗೆಯನ್ನ ತಯಾರು ಮಾಡುತ್ತಿದ್ದರು. ಸಂಬಂಧಿಕರೇ ಆಗಿರುವ ಮೂರ್ನಾಲ್ಕು ಮಂದಿ ಜೊತೆ ಸೇರಿಕೊಂಡು ಮುಂದಿನ ಮಳೆಗಾಲಕ್ಕೆ ಬೇಕಾದ ಹಪ್ಪಳ ಮತ್ತು ಸಂಡಿಗೆಯನ್ನು ಸಿದ್ಧಪಡಿಸುವ ಪ್ಲಾನ್ ಅನ್ನು ಶನಿವಾರ ಮಾಡಿಕೊಂಡಿದ್ದರು. ಬೆಳಗ್ಗೆದ್ದು ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದರು. ಬಿಸಿಲು ಏರುತ್ತಿದ್ದಂತೆ ತಮ್ಮ ಟೆರೇಸ್ ಮೇಲೆ ಹಪ್ಪಳ ಸೆಂಡಿಗೆ ಇಟ್ಟರು. ಮನೆಯ ಮಕ್ಕಳು ಕೂಡ ತಂದೆ ತಾಯಿಗೆ ಸಹಕಾರ ನೀಡಿದರು.

    ಪ್ರಧಾನಿ ಮೋದಿ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಜನ ಹೊರಗೆ ಬರಲಿಲ್ಲ. ಹಾಗಂತ ದಿನವನ್ನು ಸಂಪೂರ್ಣ ಸುಖಾಸುಮ್ಮನೆ ಕಳೆಯದೆ, ಕುಟುಂಬದ ಜೊತೆ ದಿನಪೂರ್ತಿ ಬೆರೆಯಲು ಉಪಯೋಗ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಏನೆಲ್ಲ ಕ್ರಮಗಳನ್ನು ಮಾಡಬಹುದು ಎಂಬುದಕ್ಕೆ ಈ ಭಾನುವಾರ ಸಾಕಷ್ಟು ಮಂದಿಗೆ ಪರೋಕ್ಷವಾಗಿ ಪಾಠ ಕಲಿಸಿದೆ. ಎಂತಹ ವಿಷಮ ಸ್ಥಿತಿ ಬಂದರೂ ಹತಾಶರಾಗದೆ ತಮ್ಮ ಕುಟುಂಬವನ್ನು ಸಮಸ್ಯೆಗಳಿಂದ, ಕರೋನಾ ವೈರಸ್ ನಿಂದ ಹೇಗೆ ದೂರ ಇಡಬಹುದು ಎಂಬ ಬಗ್ಗೆಯೂ ಹಲವಷ್ಟು ಕುಟುಂಬ ಸದಸ್ಯರು ಕೂತು ಚರ್ಚೆ ಮಾಡಿದ್ದಾರೆ.

  • ಹಿಮಾಲಯ ಏರಿ ತ್ರಿವರ್ಣ ಧ್ವಜ ಹಾರಿಸಿ ಬಂದ ಮೈಸೂರಿನ ಗೃಹಿಣಿಯರು!

    ಹಿಮಾಲಯ ಏರಿ ತ್ರಿವರ್ಣ ಧ್ವಜ ಹಾರಿಸಿ ಬಂದ ಮೈಸೂರಿನ ಗೃಹಿಣಿಯರು!

    ಮೈಸೂರು: ನಗರದ ಗೃಹಿಣಿಯರ ತಂಡವೊಂದು ಹಿಮಾಲಯ ಪರ್ವತ ಏರಿ ಯಶಸ್ವಿಯಾಗಿ ಹಿಂದಿರುಗಿ ಬಂದಿದ್ದಾರೆ.

    ಮೈಸೂರಿನ 27 ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಹಿಮಾಲಯ ಪರ್ವತದ ಮೌಂಟ್ ಬರಾಟ್ ಪರ್ವತವನ್ನು ಮಹಿಳೆಯರು ಯಶಸ್ವಿಯಾಗಿ ಏರಿ ಇದೀಗ ವಾಪಾಸ್ ಆಗಿದ್ದಾರೆ. ಸುಮಾರು 14.500 ಸಾವಿರ ಅಡಿ ಎತ್ತರದ ಕಡಿದಾದ ಮೌಂಟ್ ಬರಾಟ್ ಪರ್ವತವನ್ನು ಏರಿದ್ದು, ಪರ್ವತದ ಮೇಲೆ ಗೃಹಿಣಿಯರು ತ್ರಿವರ್ಣ ಧ್ವಜ ಹಾರಿಸಿದ್ದಾರೆ.

    ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಮಹಿಳೆಯರು ಈ ಸಾಹಸ ಮಾಡಿದ್ದಾರೆ. ಪರ್ವತ ಏರಿ ಇಳಿಯಲು 8 ದಿನ ಆಗಿದೆ. 27 ಮಹಿಳೆಯರ ಈ ತಂಡದಲ್ಲಿ 14 ಗೃಹಿಣಿಯರು ಇದ್ದರು. ಇವರು ಕಳೆದ ಮೇ ತಿಂಗಳಲ್ಲಿ ಹೋಗಿದ್ದು, ಮೂರು ದಿನಗಳ ಹಿಂದೆ ಪ್ರವಾಸ ಮುಗಿಸಿ ಹಿಂದಿರುಗಿ ಬಂದಿದ್ದಾರೆ.