Tag: ಗೃಹಬಂಧನ

  • 4 ತಿಂಗಳು, 120 ದಿನ ಬರೀ ಅರಿಶಿಣ ನೀರು, ನಿಂಬೆ ರಸ- ಗೃಹಬಂಧನದಲ್ಲಿದ್ದ ಯುವತಿ ರಕ್ಷಣೆ

    4 ತಿಂಗಳು, 120 ದಿನ ಬರೀ ಅರಿಶಿಣ ನೀರು, ನಿಂಬೆ ರಸ- ಗೃಹಬಂಧನದಲ್ಲಿದ್ದ ಯುವತಿ ರಕ್ಷಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಜ್ಯೋತಿಷಿಯ ಮಾತು ಕೇಳಿ ಯುವತಿಯನ್ನು ಮನೆಯೊಳಗೆ ಕೂಡಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಲಗ್ಗೆರೆಯಲ್ಲಿ (Laggere) ನಡೆದಿದೆ.

    ಸದ್ಯ 26 ವರ್ಷದ ಯುವತಿಯನ್ನು (Woman Home Arrest) ಬೆಂಗಳೂರು ಉತ್ತರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಶಶಿಧರ್ ಟೀಂ ನೇತೃತ್ವದಲ್ಲಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇತ್ತ ಅಧಿಕಾರಿಗಳು ಯುವತಿ ಹಾಗೂ ಕುಟುಂಬಸ್ಥರ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಘಟನೆ ಏನು..?: ಮೂಲತಃ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದ ಯುವತಿ ಡಿಗ್ರಿ ಮುಗಿಸಿದ್ದಾಳೆ. ಈಕೆಗೆ 4 ತಿಂಗಳ ಹಿಂದೆ ಬೆನ್ನುನೋವು ಶುರುವಾಗಿತ್ತು. ಈ ವೇಳೆ ಯುವತಿ ತಮ್ಮ ಈ ಸಮಸ್ಯೆಯ ಕುರಿತು ವೈದ್ಯರ ಬಳಿ ತೆರಳದೆ ಜ್ಯೋತಿಷಿ ಮೊರೆ ಹೋಗಿದ್ದಾನೆ. ಅಂತೆಯೇ ಜ್ಯೋತಿಷಿ ಮಾತು ಕೇಳಿ ಕಳೆದ ಮೂರು ತಿಂಗಳಿನಿಂದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಪರಿಣಾಮ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ.

    3 ತಿಂಗಳಿನಿಂದ ಅರಿಶಿಣ ನೀರು, ನಿಂಬೆ ಹಣ್ಣು ರಸ ಕುಡಿಸ್ತಿದ್ರು. ಊಟನೇ ನೀಡ್ತಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಗೆ ಕ್ಯಾನ್ಸರ್ ಇರೋದು ದೃಢವಾಗಿದೆ. ನಾಲ್ಕು ತಿಂಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದರೆ ಈ ವೇಳೆಗಾಗ್ಲೇ ನಿವಾರಣೆಯ ಹಂತಕ್ಕೆ ಬರುತ್ತಿತ್ತು. ಆದರೆ ಮಂತ್ರವಾದಿಯ ಮಾತು ಕೇಳಿ ಯುವತಿಯ ತಮ್ಮ ಹಾಗೂ ತಾಯಿ ಚಿಕಿತ್ಸೆ ಕೊಡಿಸದೇ ಜೀವಕ್ಕೆ ಕುತ್ತು ತಂದಿದ್ದಾರೆ.

    ಯುವತಿ ಮೆಸೇಜ್: ಯುವತಿಯನ್ನ ಮನೆಯೊಳಗೆ ಕೂಡಿಟ್ಟು ನಾಲ್ಕು ಗೋಡೆಗಳ ಮಧ್ಯೆ ಚಿತ್ರಹಿಂಸೆ ನೀಡಲಾಗುತ್ತಿತ್ತು. 4 ತಿಂಗಳು, 120 ದಿನ, 2880 ಗಂಟೆ ಮನೆಯಲ್ಲೇ ನರಳಾಟ ಅನುಭವಿಸಿದ್ದಾಳೆ. ಪರಿಣಾಮ ಹೊಟ್ಟೆ ಊದ್ಕೊಂಡು ಮನೆಯಲ್ಲೇ ನರಳಾಡುತ್ತಿದ್ದರೂ ಮನೆಯವರು ಆಸ್ಪತ್ರೆಗೆ ಕರೆದೊಯ್ದಿಲ್ಲ. ತೀವ್ರ ಹೊಟ್ಟೆ ನೋವು ತಾಳದೇ ಯುವತಿ ಕಿರುಚಾಡುತ್ತಿದ್ದಾಗ ತಮ್ಮ ಹಲ್ಲೆ ಕೂಡ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಪ್ಲೀಸ್ ನನ್ನನ್ನ ಕಾಪಾಡಿ.. ಸಹಾಯ ಮಾಡಿ ಎಂದು ಪರಿಚಯಸ್ಥರಿಗೆ ಮೆಸೇಜ್ ಹಾಕಿದ್ದಾಳೆ.

    ಸ್ವಾಮೀಜೀಗೆ ಗೂಸಾ: ಇಂಜಿನಿ ಆಯಿಲ್, ನಿಂಬೆಹಣ್ಣು ನೀರು ಕುಡಿಸಿ ಯುವತಿಯ ಕುಟುಂಬಸ್ಥರನ್ನ ನಂಬಿಸಿದ್ದ ನಕಲಿ ಜ್ಯೋತಿಷಿಯನ್ನು ಹಿಡಿದು ಸ್ಥಳೀಯರು ಗೂಸಾ ನೀಡಿದ್ದಾರೆ. ಇತ್ತ ಗೃಹಬಂಧನದಲ್ಲಿದ್ದ ಯುವತಿಯನ್ನು ರಕ್ಷಣೆ ಮಾಡಿ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.

  • 13ರಲ್ಲಿದ್ದಾಗ ಮಗನಿಗೆ ಗೃಹಬಂಧನ – 41 ವರ್ಷವಾದ್ರೂ ಹೊರಗೆ ಬಿಡ್ಲಿಲ್ಲ ಕ್ರೂರಿ ತಾಯಿ

    13ರಲ್ಲಿದ್ದಾಗ ಮಗನಿಗೆ ಗೃಹಬಂಧನ – 41 ವರ್ಷವಾದ್ರೂ ಹೊರಗೆ ಬಿಡ್ಲಿಲ್ಲ ಕ್ರೂರಿ ತಾಯಿ

    – 28 ವರ್ಷಗಳ ಕಾಲ ಮಗನ್ನು ರೂಮ್‍ನಲ್ಲಿ ಕೂಡಿ ಹಾಕಿದ್ಲು
    – ಸಂಬಂಧಿಕರಿಂದ ಪ್ರಕರಣ ಬೆಳಕಿಗೆ

    ಸ್ಟಾಕ್ಹೋಮ್: 70 ವರ್ಷದ ಮಹಿಳೆ ತನ್ನ 41 ವರ್ಷದ ಮಗನನ್ನು ಸುಮಾರು 28 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್‍ನ ಅಪಾರ್ಟ್‍ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಮಹಿಳೆ ತನ್ನ ಮಗನನ್ನೇ 28 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿದ್ದಾಳೆ. ಕಾನೂನುಬಾಹಿರವಾಗಿ ಕೂಡಿ ಹಾಕಿ ವ್ಯಕ್ತಿಯ ಸ್ವಾತಂತ್ರ್ಯ ಹರಣ ಹಾಗೂ ಆತನಿಗೆ ದೈಹಿಕ ಹಾನಿ ಮಾಡಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವ್ಯಕ್ತಿ ಕಾಣೆಯಾಗಿ ಬರೋಬ್ಬರಿ 28 ವರ್ಷಗಳು ಕಳೆದಿದ್ದು, ಆತ 13 ವರ್ಷದ ಬಾಲಕನಿರುವಾಗಲೇ ರಾಕ್ಷಸಿ ತಾಯಿ ಬಾಲಕನನ್ನು ಕೂಡಿ ಹಾಕಿದ್ದಳು. 40 ವರ್ಷವಾದರೂ ಮಹಿಳೆ ಮಾತ್ರ ವ್ಯಕ್ತಿಯನ್ನು ಬಂಧನದಿಂದ ಮುಕ್ತಗೊಳಿಸಿರಲಿಲ್ಲ. ಸಂಬಂಧಿಕರೊಬ್ಬರು ದಿಢೀರನೆ ಮನೆಗೆ ಭೇಟಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. 41 ವರ್ಷದ ವ್ಯಕ್ತಿಯನ್ನು ಕೂಡಿ ಹಾಕಿರುವುದು ತಿಳಿಯುತ್ತಿದ್ದಂತೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಇಷ್ಟಾದರೂ ಮಹಿಳೆ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾಳೆ. ಇದೀಗ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೈಹಿಕ ಗಾಯಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ ವ್ಯಕ್ತಿಗೆ ಈ ರೀತಿಯ ಗಾಯಗಳಾಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    70 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಬಳಿಕ ಮನೆಗೆ ಆಗಮಿಸಿದಾಗ ಸಂಬಂಧಿ ಮಹಿಳೆ ವ್ಯಕ್ತಿಯನ್ನು ಕೂಡಿಹಾಕಿರುವುದನ್ನು ಗಮನಿಸಿದ್ದಾರೆ. ಭಾನುವಾರ ಸಂಬಂಧಿ ಫ್ಲ್ಯಾಟ್‍ಗೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮುಖ್ಯದ್ವಾರ ಬೀಗ ಹಾಕದಿರುವುದನ್ನು ಕಂಡು ಒಳಗೆ ಪ್ರವೇಶಿಸಿದ್ದು, ಈ ವೇಳೆ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.

    ಒಳಗೆ ಪ್ರವೇಶಿಸುತ್ತಿದ್ದಂತೆ ಎಲ್ಲೆಡೆ ಮೂತ್ರ, ಕೊಳಕು ಹಾಗೂ ಧೂಳು ತುಂಬಿತ್ತು. ಅಲ್ಲದೆ ಕೊಳೆತ ವಾಸನೆಯಿಂದಾಗಿ ಉಸಿರಾಡುವುದು ಸಹ ಕಷ್ಟವಾಗಿತ್ತು ಎಂದು ಸಂಬಂಧಿ ಮಹಿಳೆ ರೂಮ್ ಪ್ರವೇಶಿಸಿದಾಗಿನ ತನ್ನ ಅನುಭವವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಅಡುಗೆ ಮನೆಯಿಂದ ಶಬ್ದ ಬಂತು, ಬ್ಲಾಂಕೆಟ್ ಹಾಗೂ ದಿಂಬುಗಳ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಕಂಡೆ. ಅವನಿಗೆ ಹಲ್ಲುಗಳಿರಲಿಲ್ಲ, ಕಾಲುಗಳ ಮೇಲೆ ಗಾಯಗಳಿದ್ದವು. ನಿಧಾನವಾಗಿ ಮಾತನಾಡುತ್ತಿದ್ದ. ಬಳಿಕ ವೇಗವಾಗಿ ಏನೇನೋ ಮಾತನಾಡುತ್ತಿದ್ದ. ಆದರೂ ನಾನು ಅವನಿಗೆ ಹೆದರಲಿಲ್ಲ ಎಂದು ಮಹಿಳೆಯ ಹೇಳಿಕೆಯನ್ನಾಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತಾಯಿ, ಮಗ ಹಾಗೂ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಳಿಕ ನೈಜ ಕಾರಣ ಏನೆಂದು ತಿಳಿಯಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

  • ಗೃಹಬಂಧನದಲ್ಲಿದ್ದ ಮಹಿಳೆ ಮನೆಯಿಂದ ಹೊರಗೆ- ಅಕ್ಕಪಕ್ಕದ ನಿವಾಸಿಗಳಿಂದ ಗಲಾಟೆ

    ಗೃಹಬಂಧನದಲ್ಲಿದ್ದ ಮಹಿಳೆ ಮನೆಯಿಂದ ಹೊರಗೆ- ಅಕ್ಕಪಕ್ಕದ ನಿವಾಸಿಗಳಿಂದ ಗಲಾಟೆ

    ಚಿಕ್ಕಬಳ್ಳಾಪುರ: ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದ ಮಹಿಳೆ ಮನೆಯಿಂದ ಹೊರಗಡೆ ಬಂದಿದ್ದು, ಇದನ್ನು ಕಂಡ ಅಕ್ಕಪಕ್ಕದ ನಿವಾಸಿಗಳ ನಡುವೆ ಗಲಾಟೆ ನಡೆದಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಯ ಕ್ವಾರಂಟೈನ್ ವಾರ್ಡ್‍ಗೆ ಶಿಫ್ಟ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ನಿವಾಸಿಯೊಬ್ಬರು ಅಜ್ಮೇರ್ ಗೆ ತೆರಳಿ ವಾಪಸ್ಸಾಗಿದ್ದರು. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಹೋಂ ಕ್ವಾರಂಟೈನ್ ಸೂಚಿಸಲಾಗಿತ್ತು. ಆದರೆ ಆ ಮಹಿಳೆಯ ಮನೆ ವಠಾರದಲ್ಲಿರುವ ಕಾರಣ ಮನೆಯಿಂದ ಹೊರಗಡೆ ಬಂದು ಓಡಾಡುತ್ತಿದ್ದರು ಎನ್ನಲಾಗಿದೆ.

    ತಮ್ಮ ಚಿಕ್ಕ ಮಗಳು ಮನೆಯಿಂದ ಹೊರಗೆ ಬಂದಾಗ ಬೀದಿಗೆ ಸಹ ಬಂದಿದ್ದಾರೆ. ಹೀಗಾಗಿ ಅಕ್ಕಪಕ್ಕದ ನಿವಾಸಿಗಳು ಅವರ ಜೊತೆ ವಾಗ್ವಾದ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಗೆ ಮನೆಯಿಂದ ಹೊರಗಡೆ ಬಾರದಂತೆ ಬುದ್ದಿವಾದ ಹೇಳಿದ್ದಾರೆ.

    ಕೊನೆಗೆ ಅಕ್ಕಪಕ್ಕದ ನಿವಾಸಿಗಳು ಮಹಿಳೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಪಟ್ಟು ಹಿಡಿದ ಕಾರಣ ಸ್ಥಳಕ್ಕೆ ಬಂದ ತಾಲೂಕು ಆರೋಗ್ಯಾಧಿಕಾರಿ ಮಹಿಳೆ, ಆಕೆಯ ಮಗ ಹಾಗೂ ಚಿಕ್ಕ ಮಗಳನ್ನು ಜಿಲ್ಲಾಸ್ಪತ್ರೆಯ ಕ್ವಾರಂಟೈನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಮಹಿಳೆಯ ಸಂಬಂಧಿಕರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಗಲಾಟೆ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

  • ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಕಾನೂನು ಉಲ್ಲಂಘನೆ- ಮಡಿಕೇರಿಯಲ್ಲಿ ಮೊದಲ ಪ್ರಕರಣ ದಾಖಲು

    ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಕಾನೂನು ಉಲ್ಲಂಘನೆ- ಮಡಿಕೇರಿಯಲ್ಲಿ ಮೊದಲ ಪ್ರಕರಣ ದಾಖಲು

    ಮಡಿಕೇರಿ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ದುಬೈನಿಂದ ಬಂದು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರೂ ಸಾಮಾನ್ಯನಂತೆ ಓಡಾಡಿಕೊಂಡಿದ್ದ ವ್ಯಕ್ತಿಯ ವಿರುದ್ಧ ಕೊಡಗಿನಲ್ಲಿ ಮೊದಲ ಪ್ರಕರಣ ದಾಖಲಾಗಿದೆ.

    ಮಡಿಕೇರಿ ನಗರದ ಗಣಪತಿ ಬೀದಿಯ 39 ವರ್ಷದ ವ್ಯಕ್ತಿ ಕಳೆದ ಒಂದು ವಾರದ ಹಿಂದೆ ದುಬೈನಿಂದ ಬಂದಿದ್ದನು. ಬಳಿಕ ಆಸ್ಪತ್ರೆಯಲ್ಲಿ ಪರಿಶೀಲನೆಗೆ ಒಳಪಟ್ಟು ಹೋಂ ಕ್ವಾರಂಟೈನ್ ನಲ್ಲಿದ್ದನು. ಆದರೆ ಆ ವ್ಯಕ್ತಿ ಮನೆಯಲ್ಲಿ ಸುಮ್ಮನಿರುವುದು ಬಿಟ್ಟು ಮಡಿಕೇರಿಯಲ್ಲಿ ಓಡಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ಹೀಗಾಗಿ ಅಕ್ಕಪಕ್ಕದ ಮನೆಯ ಜನರು ಆತನ ವಿರುದ್ಧ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಕೂಡಲೇ ಎಚ್ಚೆತ್ತುಕೊಂಡ ಮಡಿಕೇರಿ ನಗರಸಭೆ ಪೌರಾಯುಕ್ತ ರಮೇಶ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು, ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ಮತ್ತು 271 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿಯೇ ಪ್ರಕರಣ ಕೊಠಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

  • ಕೈಗೆ ಸೀಲ್ ಹಾಕಿದ್ರಿಂದ ಸ್ಕಿನ್ ಕ್ಯಾನ್ಸರ್ ಬರುತ್ತೆ – ಯುವಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

    ಕೈಗೆ ಸೀಲ್ ಹಾಕಿದ್ರಿಂದ ಸ್ಕಿನ್ ಕ್ಯಾನ್ಸರ್ ಬರುತ್ತೆ – ಯುವಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

    ಬೆಂಗಳೂರು: ಕೈಗೆ ಸೀಲ್ ಹಾಕಿದ್ದಕ್ಕೆ ಕ್ಯಾನ್ಸರ್ ಬರುತ್ತದೆ ಎಂದು ವಿದೇಶದಿಂದ ಬಂದ ಯುವಕನೊಬ್ಬ ಹೇಳಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.

    ಮೈಸೂರಿನ ಯುವಕನೊಬ್ಬ ವಿದೇಶದಿಂದ ಮರಳಿದ್ದ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸೀಲ್ ಹಾಕಿ ಮನೆಯಲ್ಲೇ ಗೃಹಬಂಧನದಲ್ಲಿ ಇರಬೇಕೆಂದು ಸೂಚಿಸಲಾಗಿತ್ತು.

    ಎಡಗೈಗೆ ಹಾಕಿರುವ ಸೀಲ್ ನೋಡಿ ಸಿಟ್ಟಾದ ಯುವಕ ಭಾರತ ನನಗೆ ಚರ್ಮದ ಕ್ಯಾನ್ಸರ್ ಸಹ ನೀಡುತ್ತದೆ ಎಂದು ಫೇಸ್‍ಬುಕ್ ಸ್ಟೇಟಸ್ ಹಾಕಿಕೊಂಡಿದ್ದ.

    ಈ ಸ್ಟೇಟಸ್ ನೋಡಿದವರ ಪೈಕಿ ಒಬ್ಬರು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಚಾರ ತಿಳಿದ ಜನ ಚೆನ್ನಾಗಿ ಕ್ಲಾಸ್ ಮಾಡುತ್ತಿದ್ದಾರೆ. ನಿಮ್ಮಂತವರು ಗೃಹ ಬಂಧನದಲ್ಲಿರಬೇಕು ಹೊರಗಡೆ ಬಂದರೆ ತಿಳಿಯಬೇಕು ಎನ್ನುವ ಕಾರಣಕ್ಕೆ ಈ ಸೀಲ್ ಹಾಕಲಾಗಿದೆ. ನಿಮ್ಮಂತವರಿಗೆ ಭಾರತಕ್ಕೆ ಇಳಿಯಲು ಅವಕಾಶ ನೀಡಿದ್ದೇ ದೊಡ್ಡ ತಪ್ಪು ಎಂದು ಹೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ವಿದೇಶದಿಂದ ಮರಳಿದ ವ್ಯಕ್ತಿಗಳಿಂದಾಗಿ ದೇಶದಲ್ಲಿ ಕೊರೊನಾ ಹರಡದೇ ಇರಲು ಅವರ ಕೈಗೆ ಸೀಲ್ ಹಾಕಲಾಗುತ್ತಿದೆ. ಭಾರತದ ಚುನಾವಣಾ ಆಯೋಗ ಬಳಕೆ ಮಾಡುವ ಶಾಯಿಯನ್ನು ಬಳಸಿ ಸೀಲ್ ಹಾಕಲಾಗುತ್ತಿದೆ. 21 ದಿನಗಳ ಕಾಲ ಈ ಶಾಯಿ ಕೈಯಲ್ಲಿ ಇರುತ್ತದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಂಬಂಧ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ವಿದೇಶದಿಂದ ಆಗಮಿಸಿ ಗೃಹಬಂಧನದಲ್ಲಿ ಇರಬೇಕಾದ ವ್ಯಕ್ತಿಗಳು ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರು ಬಂದಿದೆ. ಈ ವ್ಯಕ್ತಿಗಳು ಕಂಡು ಬಂದರೆ ದಯವಿಟ್ಟು 100ಕ್ಕೆ ಕರೆ ಮಾಡಿ ತಿಳಿಸಿ. ಅವರನ್ನು ನಮ್ಮ ಸಿಬ್ಬಂದಿ ಹಿಡಿದು ಬಂಧಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡುತ್ತಾರೆ.

    ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾದ ವ್ಯಕ್ತಿ ಸಾರ್ವಜನಿಕವಾಗಿ ಓಡಾಡಿದರೆ ಅವರ ವಿರುದ್ಧ ಐಪಿಸಿ ಸೆಕ್ಷನ್ 269(ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು) ಅಡಿ ಕೇಸ್ ದಾಖಲಾಗಲಿದೆ. ಸಾರ್ವಜನಿಕವಾಗಿ ಸಂಚರಿಸಬಾರದು ಎಂದು ತಿಳಿದಿದ್ದರೂ ಈ ಕೃತ್ಯ ಎಸಗಿದರೆ ಗರಿಷ್ಠ ಆರು ತಿಂಗಳ ಶಿಕ್ಷೆ ಅಥವಾ ದಂಡ ಅಥವಾ ದಂಡ ಹಾಗೂ ಶಿಕ್ಷೆ ಎರಡನ್ನು ವಿಧಿಸಲು ಅವಕಾಶವಿದೆ.

  • ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

    ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

    ಬೆಂಗಳೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಮನೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

    ಲಗ್ಗೆರೆ ನಿವಾಸಿ ವೆಂಕಟೇಶ್ ಗೌಡ ತನ್ನ ತಾಯಿ ಮುನಿಯಮ್ಮರನ್ನು(60) ಕೂಡಿಹಾಕಿದ್ದನು. ಮುನಿಯಮ್ಮರಿಗೆ ಲೋಹಿತ್, ವೆಂಕಟೇಶ್ ಗೌಡ ಅನ್ನೋ ಇಬ್ಬರು ಗಂಡು ಮಕ್ಕಳಿದ್ದಾರೆ. ದೊಡ್ಡ ಮಗನಿಗೆ ಲಗ್ಗೆರೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಮತ್ತು ಎರಡನೇ ಮಗನಿಗೆ ಹೆಸರುಗಟ್ಟದ ಮನೆಯನ್ನು ವಿಭಾಗ ಮಾಡಿ ಕೊಡಲಾಗಿತ್ತು. ಆದರೆ ಎರಡನೇ ಮಗ ವೆಂಕಟೇಶ್ ಲಗ್ಗೆರೆಯ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಕಣ್ಣು ಹಾಕಿದ್ದನು. ಆ ಕಟ್ಟಡದಲ್ಲಿ 60 ಸಾವಿರ ರೂ. ಬಾಡಿಗೆ ಬರ್ತಿದ್ದು, ಅದು ನನಗೆ ಬೇಕು ಅಂತ ವೆಂಕಟೇಶ್ ತಾಯಿ ಜೊತೆ ಜಗಳ ಶುರುಮಾಡಿದ್ದನು. ಇದಕ್ಕೆ ತಾಯಿ ನಿರಾಕರಿಸಿದ ಹಿನ್ನೆಲೆ ಅವರನ್ನು ವೆಂಕಟೇಶ್ ಮನೆಯಲ್ಲೇ ಕೂಡಿ ಹಾಕಿದನು. ಹಾಗೆಯೇ ಆಸ್ತಿ ವಿಚಾರವಾಗಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದನು.

    ವಿಚಾರಣೆ ವೇಳೆ ಮುನಿಯಮ್ಮ ಎಲ್ಲಿ ಹೋದರು ಗೊತ್ತಿಲ್ಲ ಎಂದು ಕೋರ್ಟಿಗೆ ಮಾಹಿತಿ ನೀಡಿದ್ದನು. ಅದರಿಂದ ಅನುಮಾನಗೊಂಡ ಮುನಿಯಮ್ಮರ ಹೆಣ್ಣು ಮಕ್ಕಳು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೆಂಕಟೇಶ್ ಮನೆ ಪರಿಶೀಲನೆ ಮಾಡಿದ ವೇಳೆ ಮನೆಯ ರೂಮ್‍ವೊಂದರಲ್ಲಿ ತಾಯಿಯನ್ನು ಗೃಹಬಂಧನದಲ್ಲಿಟ್ಟಿರೋದು ಬೆಳಕಿಗೆ ಬಂದಿದೆ.

    ಸುಮಾರು 6 ತಿಂಗಳಿಂದ ತಾಯಿಯನ್ನು ಇದೇ ರೀತಿ ಕೂಡಿ ಹಾಕಿದ್ದು, ಸರಿಯಾಗಿ ಆಹಾರ ಕೂಡ ನೀಡದೆ ಮಗ ಚಿತ್ರಹಿಂಸೆ ಕೊಟ್ಟಿದ್ದಾನೆ. ಸದ್ಯ ವೃದ್ಧೆ ಮುನಿಯಮ್ಮರನ್ನು ಅವರ ಹೆಣ್ಣು ಮಕ್ಕಳು ಕರೆದುಕೊಂಡು ಹೋಗಿದ್ದು, ಮಗ ವೆಂಕಟೇಶ್, ಆತನ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಬರೋಬ್ಬರಿ 15 ವರ್ಷ ನಗ್ನವಾಗಿಯೇ ಬಂಧಿಯಾಗಿದ್ದ ಗೋವಾ ಮಹಿಳೆಯ ರಕ್ಷಣೆ!

    ಬರೋಬ್ಬರಿ 15 ವರ್ಷ ನಗ್ನವಾಗಿಯೇ ಬಂಧಿಯಾಗಿದ್ದ ಗೋವಾ ಮಹಿಳೆಯ ರಕ್ಷಣೆ!

    ಪುಣೆ: ಅಸಹಜ ವರ್ತನೆ ತೋರುತ್ತಿದ್ದ 50 ವರ್ಷದ ಮಹಿಳೆಯನ್ನು ಬರೋಬ್ಬರಿ 15 ವರ್ಷ ಕೋಣೆಯೊಳಗೆ ನಗ್ನವಾಗಿಯೇ ಕೂಡಿ ಹಾಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ ಘಟನೆ ಬುಧವಾರ ಉತ್ತರ ಗೋವಾದ ಕಾಂಡೋಲಿಂ ಗ್ರಾಮದಲ್ಲಿ ನಡೆದಿದೆ.

    ಮಹಿಳೆಯನ್ನು ಸುನಿತಾ ವರ್ಲೆಕರ್ ಎಂದು ಗುರುತಿಸಲಾಗಿದ್ದು, ಈಕೆಯ ಸಹೋದರನ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸದ್ಯ ಸುನಿತಾರನ್ನು ಮಹಿಳಾ ಹಕ್ಕುಗಳ ಆಯೋಗದ ಕಾರ್ಯಕರ್ತೆಯರು ರಕ್ಷಿಸಿದ್ದಾರೆ.

    ಏನಿದು ಘಟನೆ?: ಸುನಿತಾ ಅಸಹಜ ವರ್ತನೆ ತೋರುತ್ತಿದ್ದಾರೆ ಅಂತಾ ಆಕೆಯ ಸಹೋದರ ಹಾಗೂ ಕುಟುಂಬಸ್ಥರು ಕತ್ತಲ ಕೋಣೆಯೊಳಗೆ ಕೂಡಿ ಹಾಕಿದ್ದರು. ಈ ಕುರಿತು ಸರ್ಕಾರೇತರ ಸಂಸ್ಥೆ(ಎನ್‍ಜಿಒ)ದವರು ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತೆಯರಿಗೆ ಮಾಹಿತಿ ರವಾನಿಸಿದ್ದು, ಸದ್ಯ ಕಾರ್ಯಕರ್ತೆಯರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಂತರ ಪಣಜಿ ಮೂಲದ ಮನೋಚಿಕಿತ್ಸೆ ಮತ್ತು ಮಾನವ ನಡತೆ ಸುಧಾರಣೆ ಕೇಂದ್ರಕ್ಕೆ ಸೇರಿಸಲಾಗಿದೆ.

    ಸುನಿತಾರಿಗೆ ಕರೆಂಟಿಲ್ಲದ ಕತ್ತಲ ಕೋಣೆಯೊಳಗೆ ಒಡೆದ ಗೋಡೆಯ ಸಂದಿಯ ಮೂಲಕ ಆಹಾರವನ್ನು ಕೊಡುತ್ತಿದ್ದರು. ತೊಡಲು ಬಟ್ಟೆಯನ್ನು ಕೂಡ ಕೊಡುತ್ತಿರಲಿಲ್ಲ. ಒಟ್ಟಿನಲ್ಲಿ ಹೊರಗಡೆ ಪ್ರಪಂಚವನ್ನೇ ಕಾಣದ ಸುನೀತಾ ಕೋಣೆಯೊಳಗೆ ನಗ್ನವಾಗಿಯೇ ಇದ್ದು, ಎಲ್ಲವನ್ನೂ ಅಲ್ಲೇ ಮಾಡುತ್ತಿದ್ದರು. ಹೀಗಾಗಿ ಕೋಣೆಯೊಳಗೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿತ್ತು ಎಂದು ಎಸ್‍ಪಿ ಕಾರ್ತಿಕ್ ಕಶ್ಯಪ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಆಕೆಯ ಸಹೋದರ ಮೋಹನ್ ದಾಸ್ ಹಾಗೂ ಕುಟುಂಬಸ್ಥರೇ ಮಹಿಳೆಯನ್ನು ಕೋಣೆಯೊಳಗೆ ಬಂಧಿಸಿದ್ದಾರೆ. ಹೀಗಾಗಿ ಸುಜಾತಾಳನ್ನು ಅಕ್ರಮವಾಗಿ ಕೋಣೆಯಲ್ಲಿ 15 ವರ್ಷಗಳಿಂದ ಕೂಡಿಟ್ಟ ಅಪರಾಧಕ್ಕಾಗಿ ಆಕೆಯ ಅಣ್ಣ ಮೋಹನ್ದಾಸ್ ಮತ್ತು ಆತನ ಮನೆಯವರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 342(ಅಕ್ರಮ ಬಂಧನ)ದ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಈ ಸಂಬಂಧ ಈಗಿನ್ನೂ ಅವರು ಯಾರನ್ನೂ ಬಂಧಿಸಿಲ್ಲ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ ಎಂದು ಕಶ್ಯಪ್ ತಿಳಿಸಿದ್ದಾರೆ.