Tag: ಗೂಗಲ್

  • ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್‌

    ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್‌

    ಬೆಂಗಳೂರು: ಮುಂದಿನ ದಿನಗಳಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಅದರಲ್ಲೂ ಭಾರತದಲ್ಲಿ ಭಾರೀ ಬೆಳವಣಿಗೆ ಆಗಲಿದೆ ಎಂಬುದನ್ನು ಊಹಿಸಿರುವ ಬಹುರಾಷ್ಟ್ರೀಯ ಕಂಪನಿಗಳು ಈಗ ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದು, ಗೂಗಲ್‌ ಒಟ್ಟು 10 ಶತಕೋಟಿ ಡಾಲರ್‌(75 ಸಾವಿರ ಕೋಟಿ ರೂ.) ಹೂಡಿಕೆ ಮಾಡುವುದಾಗಿ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಬಳಿಕ ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಡಿಜಿಟೈಸೇಶನ್‌ಗಾಗಿ ಗೂಗಲ್‌ ಕಂಪನಿ 10 ಶತಕೋಟಿ ಡಾಲರ್‌ ಫಂಡ್‌ ಘೋಷಿಸಲು ಬಹಳ ಉತ್ಸುಕನಾಗಿದ್ದೇನೆ. ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿ ಮೋದಿಯವರ ದೂರದೃಷ್ಟಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ಮುಂದಿನ 5-7 ವರ್ಷಗಳಲ್ಲಿ ನಾವು 75 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡುತ್ತೇವೆ. 100 ಕೋಟಿ ಜನ ಆನ್‌ಲೈನ್‌ಗೆ ಬರುವ ಮೂಲಕ ದೇಶ ಪ್ರಗತಿಯನ್ನು ಸಾಧಿಸಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು, ಕೈಗೆಟುಕುವ ದತ್ತಾಂಶ ಮತ್ತು ವಿಶ್ವ ದರ್ಜೆಯ ಟೆಲಿಕಾಂ ಮೂಲಸೌಕರ್ಯಗಳು ಈ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಪಿಚೈ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    4 ಕ್ಷೇತ್ರದಲ್ಲಿ ಹೂಡಿಕೆ:
    1. ಮೊದಲನೆಯದಾಗಿ ಸ್ಥಳೀಯ ಭಾಷೆಗಳಲ್ಲಿ ಸುಲಭವಾಗಿ ಜನರ ಕೈಗೆ ಮಾಹಿತಿ ಒದಗಿಸುವುದು.
    2. ಭಾರತದ ವಿಶಿಷ್ಟ ಅಗತ್ಯಕ್ಕೆ ತಕ್ಕಂತೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ತಯಾರಿಸುವುದು.
    3. ಡಿಜಿಟಲ್‌ ರೂಪಾಂತರ ವ್ಯವಹಾರಕ್ಕೆ ಪ್ರೋತ್ಸಾಹಿಸುವುದು.
    4. ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌(ಎಐ) ಅನ್ನು ಸಾಮಾಜಿಕ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳುವುದು.

    ಸುಂದರ್‌ ಪಿಚೈ ಜೊತೆಗಿನ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ಇಂದು ಬೆಳಗ್ಗೆ ಸುಂದರ್‌ ಪಿಚೈ ಅವರ ಜೊತೆ ಅತ್ಯಂತ ಫಲಪ್ರದವಾದ ಸಂವಾದ ನಡೆಸಿದ್ದೇನೆ. ನಾವು ಬಹಳಷ್ಟು ವಿಚಾರಗಳ ಕುರಿತು ಮಾತನಾಡಿದ್ದೇವೆ. ವಿಶೇಷವಾಗಿ ತಂತ್ರಜ್ಞಾನದ ಶಕ್ತಿಯ ಮೂಲಕ ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

  • ಭಾರತದ ಡಿಜಿಟಲ್ ಸ್ಟ್ರೈಕ್‌ಗೆ ಗೂಗಲ್‌ನಿಂದ ಬಂತು ಮೊದಲ ಪ್ರತಿಕ್ರಿಯೆ

    ಭಾರತದ ಡಿಜಿಟಲ್ ಸ್ಟ್ರೈಕ್‌ಗೆ ಗೂಗಲ್‌ನಿಂದ ಬಂತು ಮೊದಲ ಪ್ರತಿಕ್ರಿಯೆ

    ನವದೆಹಲಿ: ಚೀನಾದ 59 ಅಪ್ಲಿಕೇಶನ್‌ಗಳು ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದ ಬಳಿಕ ಮೊದಲ ಬಾರಿಗೆ ಗೂಗಲ್‌ ಪ್ರತಿಕ್ರಿಯೆ ನೀಡಿದೆ.

    ಭಾರತ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಡೆವಲಪರ್‌ಗಳಿಗೆ ಮಾಹಿತಿ ನೀಡಿದ್ದು, ಈ ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡಿದ್ದೇವೆ ಎಂದು ಗೂಗಲ್‌ ವಕ್ತಾರರು ತಿಳಿಸಿದ್ದಾರೆ.

    ಗೂಗಲ್‌ ವಕ್ತಾರರು ಎಷ್ಟು ಅಪ್ಲಿಕೇಶನ್‌ ಬ್ಲಾಕ್‌ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಆದರೆ ಡೆವಲಪರ್‌ಗಳೇ ಕೆಲ ಅಪ್ಲಿಕೇಶನ್‌ಗಳನ್ನೆ ಪ್ಲೇ ಸ್ಟೋರ್‌ನಿಂದ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೀಗಿದ್ದರೂ ಕೆಲವೊಂದು ಅಪ್ಲಿಕೇಶನ್‌ಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ವಿಬೋ, ಎಸ್‌ ಫೈಲ್‌ ಎಕ್ಸ್‌ಪ್ಲೋರರ್‌, ಯುಕ್ಯಾಮ್‌ ಮೇಕ್‌, ಕ್ಯೂಕ್ಯೂ ಆ್ಯಪ್‌ಗಳು  ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ಈ ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಮಾಡಿದರೆ ಪೂರ್ಣವಾಗಿ ಕೆಲಸ ಮಾಡುತ್ತದೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್‌ ಸ್ಟ್ರೈಕ್‌. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಒಂದೇ ಕ್ಲಿಕ್‍ನಲ್ಲಿ ಚೀನಾ ಆ್ಯಪ್‍ಗಳು ಡಿಲೀಟ್ – 10 ದಿನದಲ್ಲಿ 10 ಲಕ್ಷ ಡೌನ್‍ಲೋಡ್

    ಒಂದೇ ಕ್ಲಿಕ್‍ನಲ್ಲಿ ಚೀನಾ ಆ್ಯಪ್‍ಗಳು ಡಿಲೀಟ್ – 10 ದಿನದಲ್ಲಿ 10 ಲಕ್ಷ ಡೌನ್‍ಲೋಡ್

    ಬೆಂಗಳೂರು: ಭಾರತದ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ಈಗ ದೇಶದಲ್ಲಿ ಸೈಬರ್ ಸಮರ ಆರಂಭಗೊಂಡಿದ್ದು, ಚೈನಾ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡುವ ಮೂಲಕ ಜನ ಬಿಸಿ ಮುಟ್ಟಿಸುತ್ತಿದ್ದಾರೆ.

    ಹೌದು, ಭಾರತದ ಜನಸಂಖ್ಯೆಯೇ ಚೀನಾಗೆ ಈಗ ದೊಡ್ಡ ಮಾರುಕಟ್ಟೆಯಾಗಿದ್ದು, ಹಲವಾರು ಅಪ್ಲಿಕೇಶನ್ ಕಂಪನಿಗಳಿಗೆ ಭಾರತವೇ ಆದಾಯದ ಮೂಲವಾಗಿದೆ. ಭಾರತದಿಂದಲೇ ತನ್ನ ಕಂಪನಿಗಳು ಅತಿ ಹೆಚ್ಚು ಆದಾಯ ಪಡೆಯುತ್ತಿರುವ ವಿಚಾರ ತಿಳಿದಿದ್ದರೂ ಚೀನಾ ಮಾತ್ರ ಗಡಿಯಲ್ಲಿ ಕ್ಯಾತೆ ತೆಗೆಯುವುದನ್ನು ಬಿಟ್ಟಿಲ್ಲ.

    ಚೀನಾದ ಕಾಟ ಹೆಚ್ಚಾಗುತ್ತಿದ್ದಂತೆ ಭಾರತದ ಜನ ರೊಚ್ಚಿಗೆದ್ದು ಚೀನಾ ಅಪ್ಲಿಕೇಶನ್ ಗಳನ್ನು ಬಳಸಂತೆ ಕರೆ ನೀಡುತ್ತಿದ್ದಾರೆ. ಈ ಅಭಿಯಾನ ಜಾಸ್ತಿ ಆಗುತ್ತಿದ್ದಂತೆ ಫೋನಿನಲ್ಲಿರುವ ಚೀನಾ ಅಪ್ಲಿಕೇಶನ್ ಗಳು ಯಾವುದು? ಹೊರ ದೇಶದಲ್ಲಿರುವ ಆಪ್ ಯಾವುದು ಎಂದು ಸುಲಭವಾಗಿ ತಿಳಿಯಲು ‘ರಿಮೂವ್ ಚೀನಾ ಆ್ಯಪ್’ ಹೆಸರಿನ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ಲ್ಯಾಂಡ್ ಆಗಿದೆ.

    ಮೇ 17ಕ್ಕೆ ಆ್ಯಪ್ ರಿಲೀಸ್ ಆಗಿದ್ದೆ ತಡ ಕೇವಲ 10 ದಿನದಲ್ಲಿ 10 ಲಕ್ಷ ಅಪ್ಲಿಕೇಶನ್ ಗಳು ಡೌನ್ ಲೋಡ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಲಭ್ಯ ಇರುವ ಈ ಉಚಿತ ಆ್ಯಪ್ ಅನ್ನು  ಜನ ಬಳಸುತ್ತಿದ್ದಾರೆ. ಈ ಆ್ಯಪ್ ಬಳಕೆ ಮಾಡಿದರೆ ಒಂದೇ ಕ್ಲಿಕ್ ನಲ್ಲಿ ಚೀನಾ ಮೂಲದ ಎಲ್ಲ ಅಪ್ಲಿಕೇಶನ್ ಗಳು ಡಿಲೀಟ್ ಆಗುತ್ತಿವೆ.

    3.8 ಎಂಬಿ ಗಾತ್ರದ ಅಪ್ಲಿಕೇಶನ್ ಅನ್ನು ಒನ್ ಟಚ್ ಆ್ಯಪ್ ಕಂಪನಿ ಅಭಿವೃದ್ಧಿಪಡಿಸಿದ್ದು, ಅತಿ ಹೆಚ್ಚು ಜನರು 5 ಸ್ಟಾರ್ ನೀಡಿದ್ದಾರೆ. ಪರಿಣಾಮ ಪ್ಲೇ ಸ್ಟೋರ್ ನಲ್ಲಿ 4.8 ರೇಟಿಂಗ್ ಪಡೆದುಕೊಂಡಿದೆ.

    ನಾವು ಶೈಕ್ಷಣಿಕ ಉದ್ದೇಶಕ್ಕಾಗಿ ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದೇವೆಯೇ ಹೊರತು ಬಲವಂತವಾಗಿ ಅಪ್ಲಿಕೇಶನ್ ಗಳನ್ನು ಡಿಲೀಟ್ ಮಾಡಲು ಅಲ್ಲ. ಯಾವ ದೇಶದ ಯಾವ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿ ಪಡಿಸಿದೆ ಎಂಬ ಮಾಹಿತಿ ಬಳಕೆದಾರರಿಗೆ ತಿಳಿಯಲು ನಾವು ಈ ಆ್ಯಪ್ ಬಿಟ್ಟಿದ್ದೇವೆ. ಈ ಕಾರಣಕ್ಕೆ ಇದು ಶಿಕ್ಷಣ ವಿಭಾಗದಲ್ಲಿ ಕಾಣಿಸುತ್ತಿದೆ. ಈ ಅಪ್ಲಿಕೇಶನ್ ಅನ್ನು ವಾಣಿಜ್ಯ ಬಳಕೆಗೆ ಮಾಡುವುದಿಲ್ಲ ಎಂದು ಒನ್ ಟಚ್ ಆಪ್ ಲ್ಯಾಬ್ಸ್ ಕಂಪನಿ ತಿಳಿಸಿದೆ.

  • ಕೊಹ್ಲಿ, ಸಲ್ಲುವನ್ನು ಮೀರಿಸಿದ ಪ್ರಿಯಾಂಕ, ಸನ್ನಿ- ಗೂಗಲ್‍ನಲ್ಲಿ ನಂ.1 ಯಾರು ಗೊತ್ತಾ?

    ಕೊಹ್ಲಿ, ಸಲ್ಲುವನ್ನು ಮೀರಿಸಿದ ಪ್ರಿಯಾಂಕ, ಸನ್ನಿ- ಗೂಗಲ್‍ನಲ್ಲಿ ನಂ.1 ಯಾರು ಗೊತ್ತಾ?

    – ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರು

    ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರಿಗಿಂತ ಜಾಸ್ತಿ ಗೂಗಲ್‍ನಲ್ಲಿ ಬಾಲಿವುಡ್‍ನ ಹಾಟ್ ಬೆಡಗಿಯರಾದ ಪ್ರಿಯಾಂಕ ಚೋಪ್ರಾ ಮತ್ತು ಸನ್ನಿ ಲಿಯೋನ್ ಅವರನ್ನು ಸರ್ಚ್ ಮಾಡಲಾಗಿದೆ.

    ಭಾರತದಲ್ಲಿ ಗೂಗಲ್‍ನಲ್ಲಿ ಯಾರು ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಎಂಬ ಪಟ್ಟಿಯನ್ನು ಎಸ್‍ಇಎಂ ರಶ್ ಸ್ಟಡಿ (ಗ್ಲೋಬಲ್ ಡಾಟಾ ವಿಶ್ಲೇಷಣಾ ಸಂಸ್ಥೆ) ಬಿಡುಗಡೆ ಮಾಡಿದೆ. ಇದರ ಪ್ರಕಾರ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕ ಚೋಪ್ರಾ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ ಸನ್ನಿ ಲಿಯೋನ್ ಇದ್ದಾರೆ.

    ಕಳೆದ ಕೆಲ ವರ್ಷದಿಂದಲೂ ಸನ್ನಿ ಲಿಯೋನ್ ಅವರು ಗೂಗಲ್‍ನಲ್ಲಿ ಹೆಚ್ಚು ಹುಡುಕಲ್ಪಟ್ಟ ತಾರೆಯಾಗಿ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಮಾತ್ರ ಗ್ಲೋಬಲ್ ಸ್ಟಾರ್ ಆಗಿರುವ ಪ್ರಿಯಾಂಕ ಚೋಪ್ರಾ ಅವರು ಈ ಪಟ್ಟಿಯಲ್ಲಿ ನಂಬರ್ ಒನ್ ಆಗಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಕ್ಕಿದ್ದಾರೆ. ಈ ಬಾರಿ ಸ್ವಲ್ಪ ಕಡಿಮೆ ಸರ್ಚ್ ಆಗಿರುವ ಸನ್ನಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಬಾಲಿವುಡ್‍ನಲ್ಲಿ ರಾಣಿಯಾಗಿ ಮೆರೆದು ಈಗ ಹಾಲಿವುಡ್‍ನಲ್ಲೂ ನಟಿಸಿ ಸೈ ಅನಿಸಿಕೊಂಡಿರುವ ಪ್ರಿಯಾಂಕ ಕಳೆದ ವರ್ಷ ಮದುವೆಯಾಗಿದ್ದರು. ಅವರ ಮದುವೆಯ ಸುದ್ದಿ ಸಖತ್ ವೈರಲ್ ಆಗಿತ್ತು ಈ ಕಾರಣದಿಂದ ಅವರನ್ನು ಹೆಚ್ಚು ಸರ್ಚ್ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಿಯಾಂಕ ಚೋಪ್ರಾ ಅವರನ್ನು ಈ ವರ್ಷ ಸುಮಾರು 39 ಲಕ್ಷ ಬಾರಿ ಗೂಗಲ್‍ನಲ್ಲಿ ಸರ್ಚ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಪ್ರಿಯಾಂಕ ನಂತರ ಎರಡನೇ ಸ್ಥಾನದಲ್ಲಿರುವ ಸನ್ನಿ ಕಳೆದ ಕೆಲ ವರ್ಷಗಳಿಂದ ಈ ಪಟ್ಟಿಯಲ್ಲಿ ಟಾಪ್‍ನಲ್ಲಿ ಇದ್ದರು. ಪಡ್ಡೆ ಹುಡುಗರ ಹಾಟ್ ಫೇವರೆಟ್ ಸನ್ನಿಯನ್ನು ಅವರ ಅಭಿಮಾನಿಗಳು ಗೂಗಲ್‍ನಲ್ಲಿ ಬಹಳ ಸರ್ಚ್ ಮಾಡುತ್ತಿರುತ್ತಾರೆ. ಅಂತೆಯೇ ಈ ಬಾರಿ ಕೂಡ ಅವರನ್ನು ಸುಮಾರು 31 ಲಕ್ಷ ಬಾರಿ ಹುಡುಕಿದ್ದಾರೆ. ಆದರೆ ಇವರಗಿಂತ ಹೆಚ್ಚು ಪ್ರಿಯಾಂಕ ಅವರನ್ನು ಸರ್ಚ್ ಮಾಡಿದ್ದು, ಸನ್ನಿ ಲಿಯೋನ್ ಅವರು ಒಂದು ಸ್ಥಾನ ಕೆಳಗೆ ಇಳಿದಿದ್ದಾರೆ.

    ಈ ಇಬ್ಬರನ್ನು ಬಿಟ್ಟರೆ ಸಲ್ಮಾನ್ ಖಾನ್ ಅವರು ಮೂರನೇ ಸ್ಥಾನದಲ್ಲಿ ಇದ್ದು, ಇವರನ್ನು 21 ಲಕ್ಷ ಬಾರಿ ಗೂಗಲ್‍ನಲ್ಲಿ ಹುಡುಕಲಾಗಿದೆ. ನಂತರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು 20 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. ಇವರನ್ನು ಬಿಟ್ಟರೆ ಪುರಷರ ಪೈಕಿ ಈ ಪಟ್ಟಿಯಲ್ಲಿ, ರೋಹಿತ್ ಶರ್ಮಾ, ಅಲ್ಲು ಅರ್ಜುನ್, ಶಾರುಖ್ ಖಾನ್, ಟೈಗರ್ ಶ್ರಾಫ್, ವಿಜಯ್ ದೇವರಕೊಂಡ, ಎಂ.ಎಸ್.ಧೋನಿ, ಮತ್ತು ಮಹೇಶ್ ಬಾಬು ಇದ್ದಾರೆ.

    ಸನ್ನಿ ಮತ್ತು ಪ್ರಿಯಾಂಕ ಅವರನ್ನು ಬಿಟ್ಟರೆ ಮಹಿಳೆಯರ ಪೈಕಿ ಕತ್ರಿನಾ ಕೈಫ್ ಅವರನ್ನು ಹೆಚ್ಚು ಸರ್ಚ್ ಮಾಡಲಾಗಿದೆ. ಇವರನ್ನು 19 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. ಈ ಮೂವರನ್ನು ಬಿಟ್ಟರೆ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ದಿಶಾ ಪಟಾನಿ, ಸಾರಾ ಅಲಿ ಖಾನ್, ಕರೀನಾ ಕಪೂರ್ ಖಾನ್, ಶ್ರದ್ಧಾ ಕಪೂರ್, ಮತ್ತು ರಶ್ಮಿಕಾ ಮಂದಣ್ಣ ಇದ್ದಾರೆ.

  • ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ 5 ಕೋಟಿ ನೀಡಿದ ಸುಂದರ್ ಪಿಚೈ

    ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ 5 ಕೋಟಿ ನೀಡಿದ ಸುಂದರ್ ಪಿಚೈ

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕೆ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಅವರು 5 ಕೋಟಿ ದೇಣಿಗೆ ನೀಡಿದ್ದಾರೆ.

    ಕೊರೊನಾ ಮಹಾಮಾರಿ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಭಾರತದಲ್ಲೂ ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ. ಇದರ ವಿರುದ್ಧ ಹೋರಾಡಲು ಸರ್ಕಾರಗಳು ಬಹಳ ಕಷ್ಟಪಡುತ್ತಿವೆ. ಈ ಹೋರಾಟದಲ್ಲಿ ಸರ್ಕಾರದ ಕೈಯನ್ನು ಬಲಪಡಿಸಲು ಕೆಲ ಉದ್ಯಮಿಗಳು ಸರ್ಕಾರಕ್ಕೆ ದೇಣಿಗೆ ರೂಪದಲ್ಲಿ ಸಹಾಯ ಮಾಡುತ್ತಿದ್ದಾರೆ. ಅಂತಯೇ ಸುಂದರ್ ಪಿಚೈ ಅವರು ಕೂಡ ಸರ್ಕಾರೇತರ ಸಂಸ್ಥೆಯಾದ ಗಿವ್‍ಇಂಡಿಯಾ ಐದು ಕೋಟಿ ದೇಣಿಗೆ ನೀಡಿದ್ದಾರೆ.

    ಗಿವ್‍ಇಂಡಿಯಾ ಎಂಬುದು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಆನ್‍ಲೈನ್ ಮೂಲಕ ದೇಣಿಗೆ ಸಂಗ್ರಹಿಸುತ್ತದೆ. ಈ ದೇಣಿಗೆಯನ್ನು ಉತ್ತಮ ರೀತಿಯಲ್ಲಿ ಉಪಯೋಗ ಮಾಡುವ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಪಿಚೈ ಅವರ ವಿಚಾರವಾಗಿ ಟ್ವೀಟ್ ಮಾಡಿರುವ ಗಿವ್‍ಇಂಡಿಯಾ ಸಂಸ್ಥೆ, ದೇಣಿಗೆ ನೀಡಿದ್ದಕ್ಕೆ ಧನ್ಯವಾದಗಳು ಸುಂದರ್ ಪಿಚೈ, ನೀವು ನೀಡಿದ 5 ಕೋಟಿ ಹಣ ಕೂಲಿ ಕಾರ್ಮಿಕರ ಕುಟುಂಬಕ್ಕೆ ಉಪಯೋಗವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಗೂಗಲ್ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿಶ್ವದದ್ಯಾಂತ 800 ಮಿಲಿಯನ್ ನೀಡುವುದಾಗಿ ಘೋಷಿಸಿಕೊಂಡಿತ್ತು. ಇದರಲ್ಲಿ ಸಣ್ಣ ಉದ್ಯಮಿಗಳಿಗೆ ಸಹಾಯವಾಗಲಿ ಎಂದು ಎನ್‍ಜಿಒ ಮತ್ತು ಬ್ಯಾಂಕ್‍ಗಳಿಗೆ 200 ಮಿಲಿಯನ್ ಹೂಡಿಕೆ ನಿಧಿಯನ್ನು ನೀಡುವುದಾಗಿ ಗೂಗಲ್ ಹೇಳಿತ್ತು. ಇದರ ಜೊತೆಗೆ ಸುಂದರ್ ಪಿಚೈ ಅವರು ಪ್ರತ್ಯೇಕವಾಗಿ 5 ಕೋಟಿ ನೀಡಿದ್ದಾರೆ.

    ಕಾರ್ಪೊರೇಟ್ ಸಂಸ್ಥೆಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರದ ಜೊತೆ ಕೈಜೋಡಿಸಿವೆ. ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ಸ್ ಜೊತೆಗೂಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ 1,500 ಕೋಟಿ ದೇಣಿಗೆ ನೀಡಿದೆ. ಇದರ ಜೊತೆಗೆ ವಿಪ್ರೋ ಕಂಪನಿ ಕೂಡ ಭಾರತ ಸರ್ಕಾರಕ್ಕೆ 1,125 ಕೋಟಿ ನೀಡಿದೆ. ಹೀಗೆ ಎಲ್ಲಾ ಭಾರತದ ಕಂಪನಿಗಳು ತಮಗಾದಷ್ಟು ಸಹಾಯ ಮಾಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ನಿಂತಿವೆ.

  • ಹನಿಮೂನ್‍ಗೆ ಹೋಗಿದ್ದ ಬೆಂಗ್ಳೂರಿನ ಗೂಗಲ್ ಟೆಕ್ಕಿ ಪತ್ನಿಗೂ ಬಂತು ಕೊರೊನಾ

    ಹನಿಮೂನ್‍ಗೆ ಹೋಗಿದ್ದ ಬೆಂಗ್ಳೂರಿನ ಗೂಗಲ್ ಟೆಕ್ಕಿ ಪತ್ನಿಗೂ ಬಂತು ಕೊರೊನಾ

    – ಯಾರಿಗೂ ತಿಳಿಸದೇ ಆಸ್ಪತ್ರೆಯಿಂದ ತೆರಳಿದ್ದ ಪತ್ನಿ
    – ಮನೆಗೆ ತೆರಳಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ ವೈದ್ಯರು

    ಆಗ್ರಾ: ಹನಿಮೂನ್‍ಗೆ ಗ್ರೀಸ್ ದೇಶಕ್ಕೆ ತೆರಳಿದ್ದ ಬೆಂಗಳೂರಿನ ದಂಪತಿ ಪೈಕಿ ಪತಿಗೆ ಕೊರೊನಾ ವೈರಸ್ ಸೋಂಕು ಇರುವ ಬಗ್ಗೆ ದೃಢಪಟ್ಟಿತ್ತು. ಇದೀಗ ಗೂಗಲ್ ಉದ್ಯೋಗಿಯ ಪತ್ನಿಗೂ ಕೊರೊನಾ ಬಂದಿದೆ.

    ಪತ್ನಿಗೆ ಕೊರೊನಾ ವೈರಸ್ ಬಂದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಗೂಗಲ್ ಟೆಕ್ಕಿಯ ಪತ್ನಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ದಂಪತಿ ಹನಿಮೂನ್‍ಗಾಗಿ ಗ್ರೀಸ್ ದೇಶಕ್ಕೆ ಭೇಟಿ ನೀಡಿ ಮಾರ್ಚ್ ಮೊದಲ ವಾರದಲ್ಲಿ ಅಲ್ಲಿಂದ ವಾಪಸ್ ಬಂದಿದ್ದರು. ಇದನ್ನೂ ಓದಿ: ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಹನಿಮೂನ್ ಮುಗಿಸಿ ಬಂದ ಟೆಕ್ಕಿ ಬೆಂಗಳೂರಿನಲ್ಲಿ ತನ್ನ ಉದ್ಯೋಗಕ್ಕೆ ಸೇರಿಕೊಂಡಿದ್ದರೆ, ಇತ್ತ ಪತ್ನಿ ತನ್ನ ಹುಟ್ಟೂರು ಆಗ್ರಾಕ್ಕೆ ಹೋಗಿದ್ದಳು. ಟೆಕ್ಕಿಯ ರಕ್ತದ ಮಾದರಿಯಲ್ಲಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

    ಕೇವಲ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಈಕೆಯನ್ನು ಸಂಪರ್ಕಿಸಿ ರಕ್ತದ ಮಾದರಿಯನ್ನು ಪಡೆದು ಪ್ರತ್ಯೇಕ ನಿಗಾದಲ್ಲಿ ಇಡಲಾಗಿತ್ತು. ಆದರೆ ವೈದ್ಯಕೀಯ ವರದಿ ಬರುವುದರ ಒಳಗಡೆ ಆಕೆ ಯಾರಿಗೂ ತಿಳಿಸದೇ ಆಸ್ಪತ್ರೆಯಿಂದ ತೆರಳಿದ್ದಳು.

    ಲ್ಯಾಬ್ ವರದಿಯಲ್ಲಿ ಆಕೆಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಆಕೆಯ ಪೋಷಕರನ್ನು ಸಂಪರ್ಕಿಸಿದಾಗ ದೆಹಲಿಯನ್ನು ಮಗಳು ತೊರೆದಿದ್ದಾಳೆ ಎಂದು ತಿಳಿಸಿದ್ದರು. ಬಳಿಕ ಆಗ್ರಾಕ್ಕೆ ಪೊಲೀಸರ ಜೊತೆ ವೈದ್ಯರ ತಂಡ ತೆರಳಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಉತ್ತರ ಪ್ರದೇಶದಲ್ಲಿ ಇದವರೆಗೂ 12 ಕೊರೊನಾ ವೈರಸ್ ಕೇಸ್‍ಗಳು ಪತ್ತೆಯಾಗಿದೆ. ಅದರಲ್ಲೂ 8 ಆಗ್ರಾದಲ್ಲೇ ಕಂಡು ಬಂದಿದೆ.

     

    ಫೆಬ್ರವರಿ 23ರಂದು ದಂಪತಿ ಹನಿಮೂನ್‍ಗೆಂದು ಗ್ರೀಸ್‍ಗೆ ತೆರಳಿದ್ದರು. ಮಾರ್ಚ್ 6ರಂದು ಮುಂಬೈಗೆ ಈ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. ಮಾರ್ಚ್ 9ರಂದು ಕಚೇರಿಗೆ ಸೋಂಕಿತ ವ್ಯಕ್ತಿ ಕಚೇರಿಗೆ ಹೋಗಿದ್ದ. ಕಚೇರಿಯಲ್ಲಿ 154 ಉದ್ಯೋಗಿಗಳಿದ್ದರೂ, ನಾಲ್ವರ ಜೊತೆ ಮಾತ್ರ ಸಂಪರ್ಕದಲ್ಲಿದ್ದ. ಮಾರ್ಚ್ 10 ರಂದು ವ್ಯಕ್ತಿಗೆ ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಆಗ ಕೊರೊನಾ ವೈರಸ್ ಸೋಂಕು ಇರುವ ಬಗ್ಗೆ ದೃಢಪಟ್ಟಿತ್ತು.

  • ಗೂಗಲ್ ಹೊಸ ಟ್ರಿಕ್, ಸ್ಮಾರ್ಟ್ ಫೋನ್‍ನಲ್ಲಿ ಆಡಬಹುದು ಬಣ್ಣದಾಟ

    ಗೂಗಲ್ ಹೊಸ ಟ್ರಿಕ್, ಸ್ಮಾರ್ಟ್ ಫೋನ್‍ನಲ್ಲಿ ಆಡಬಹುದು ಬಣ್ಣದಾಟ

    ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ಈ ಬಾರಿ ಹೋಳಿ ಆಡಬೇಕಾ ಅಥವಾ ಬೇಡ ಎಂಬ ಗೊಂದಲದಲ್ಲಿದ್ದಾರೆ. ಈ ಎಲ್ಲ ಗೊಂದಲಗಳಿಗೆ ಗೂಗಲ್ ಹೊಸ ಟ್ರಿಕ್ ನಿಮ್ಮ ಮುಂದೆ ಇಟ್ಟಿದ್ದು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ನೀವು ಬಣ್ಣದಾಟ ಆಡಬಹುದು.

    ಗೂಗಲ್ ಟ್ರಿಕ್ ಬಳಸಿ ನೀವು ಎಲ್ಲಿಯಾದ್ರೂ ನಿಮ್ಮ ಸ್ಮಾರ್ಟ್ ಫೋನ್ ಜೊತೆ ಹೋಳಿ ಆಡಬಹುದು. ಕೆಲವೇ ಕ್ಷಣಗಳಲ್ಲಿ ನಿಮ್ಮ ಮೊಬೈಲ್ ಸ್ಕ್ರೀನ್ ಕಲರ್ ಫುಲ್ ಆಗುತ್ತದೆ. ಮೊಬೈಲಿನಲ್ಲಿ ಈ ಕೆಳಗಿನಂತೆ ಮಾಡಿದ್ರೆ ನೀವು ಬಣ್ಣದಾಟದಲ್ಲಿ ಭಾಗಿಯಾಗಬಹುದು.

    1. ಮೊದಲು ಗೂಗಲ್ ಸರ್ಚ್ ಆ್ಯಪ್ ಓಪನ್ ಮಾಡಿ.
    2. ಹೋಲಿ (Holi) ಎಂದು ಟೈಪ್ ಮಾಡಿ.
    3. ಈಗ ಕೆಳಗೆ ಕಾಣಿಸುವ ಬಣ್ಣ ತುಂಬಿದ ಬೌಲ್ ಟ್ಯಾಪ್ ಮಾಡಿ
    4. ಹಾಗೆಯೇ ನಿಮ್ಮ ಸ್ಕ್ರೀನ್ ಟ್ಯಾಪ್ ಮಾಡುತ್ತಾ ಹೋಗಿ
    5. ಹೀಗೆ ಮಾಡುತ್ತಾ ಹೋದಂತೆ ನಿಮ್ಮ ಮೊಬೈಲ್ ಸ್ಕ್ರೀನ್ ಬಣ್ಣಮಯ ಆಗುತ್ತದೆ.

    ಮೊದಲಿನಂತೆ ನಿಮ್ಮ ಸ್ಕ್ರೀನ್ ಮಾಡಲು ಮೇಲ್ಭಾಗದಲ್ಲಿರುವ ‘ನೀರಿನಿ ಹನಿ’ ಮೇಲೆ ಟ್ಯಾಪ್ ಮಾಡಬೇಕು. ವಾಟರ್ ಡ್ರಾಪ್ ಮೇಲೆ ಟ್ಯಾಪ್ ಮಾಡುತ್ತಿದ್ದಂತೆ ನಿಮ್ಮ ಸ್ಕ್ರೀನ್ ಮೊದಲಿನಂತೆ ಆಗುತ್ತದೆ.

  • ಹ್ಯಾಕಿಂಗ್ ಅಪಾಯದಲ್ಲಿ 100 ಕೋಟಿ ಆ್ಯಂಡ್ರಾಯ್ಡ್ ಮೊಬೈಲ್‍ಗಳು- ಯಾವ್ಯಾವ ಫೋನ್‍ ಅಪಾಯದಲ್ಲಿವೆ?

    ಹ್ಯಾಕಿಂಗ್ ಅಪಾಯದಲ್ಲಿ 100 ಕೋಟಿ ಆ್ಯಂಡ್ರಾಯ್ಡ್ ಮೊಬೈಲ್‍ಗಳು- ಯಾವ್ಯಾವ ಫೋನ್‍ ಅಪಾಯದಲ್ಲಿವೆ?

    ಸ್ಯಾನ್ ಫ್ರಾನ್ಸಿಸ್ಕೋ: ಸುಮಾರು 1 ಬಿಲಿಯನ್(100 ಕೋಟಿ)ಗೂ ಹೆಚ್ಚು ಆಂಡ್ರಾಯ್ಡ್ ಮೊಬೈಲ್ ಹಾಗೂ ಟ್ಯಾಬ್ಲೆಟ್ಸ್ ಹ್ಯಾಕಿಂಗ್ ಅಪಾಯದಲ್ಲಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕನ್ಸೂಮರ್ ವಾಚ್‍ಡಾಗ್ ಸಂಸ್ಥೆ ವ್ಹಿಚ್? ಬಹಿರಂಗಪಡಿಸಿದೆ.

    ಸಂಶೋಧನಾ ವರದಿ ಪ್ರಕಾರ, ಆಂಡ್ರಾಯ್ಡ್ 4 (ಐಸ್‍ ಕ್ರೀಮ್‍ ಸ್ಯಾಂಡ್‍ವಿಜ್‍) ಹಾಗೂ ಇದಕ್ಕೂ ಹಳೆಯ ಸಾಫ್ಟ್ ವೇರ್ ಹೊಂದಿದ ಮೊಬೈಲ್‍ಗಳು ಹೆಚ್ಚು ಹ್ಯಾಕ್ ಗೆ ಒಳಗಾಗುತ್ತಿವೆ ಎಂದು ತಿಳಿದಿದೆ. ಮಾತ್ರವಲ್ಲದೆ ಅಪ್‍ಡೇಟ್ ಆಗದ ಆಂಡ್ರಾಯ್ಡ್ 7.0(ನೌಗಾಟ್‍) ಸಾಫ್ಟ್ ವೇರ್ ಹೊಂದಿದ ಮೊಬೈಲ್‍ಗಳೂ ಸಹ ಅಪಾಯದಲ್ಲಿವೆ ಎಂದು ವರದಿಯಲ್ಲಿ ತಿಳಿಸಿದೆ.

    ಗೂಗಲ್ ಡಾಟಾ ಆಧರಿಸಿ ವ್ಹಿಚ್? ಸಂಸ್ಥೆ ವಿಶ್ಲೇಷಿಸಿದ್ದು, ವಿಶ್ವಾದ್ಯಂತ ಐದು ಆಂಡ್ರಾಯ್ಡ್ ಸಾಧನ ಬಳಕೆದಾರರ ಪೈಕಿ ಇಬ್ಬರು ಪ್ರಮುಖ ಅಪ್‍ಡೇಟ್‍ಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಲಾಗಿದೆ. ಪ್ರಸ್ತುತ ಈ ಡಿವೈಸ್‍ಗಳು ಸಮಸ್ಯೆ ಹೊಂದಿರುವ ಸಾಧ್ಯತೆ ಕಡಿಮೆ. ಆದರೆ ಸುರಕ್ಷತೆಯ ಕೊರತೆಯಿಂದಾಗಿ ಹ್ಯಾಕರ್ಸ್ ಸುಲಭವಾಗಿ ಅಟ್ಯಾಕ್ ಮಾಡಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ದುಬಾರಿ ಆಂಡ್ರಾಯ್ಡ್ ಮೊಬೈಲ್‍ಗಳು ಭದ್ರತೆ ಕಳೆದುಕೊಳ್ಳುವ ಮೊದಲು ಕಡಿಮೆ ಅವಧಿಯಲ್ಲಿ ಹಾಳಾಗುತ್ತವೆ. ಆದರೆ ಲಕ್ಷಾಂತರ ಬಳಕೆದಾರರು ಹ್ಯಾಕರ್ಸ್ ಗೆ ಬಲಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವ್ಹಿಚ್? ಸಂಸ್ಥೆ ಸಂಪಾದಕ ಕೇಟ್ ಬೆವನ್ ಎಚ್ಚರಿಕೆ ನೀಡಿದ್ದಾರೆ.

    ಗೂಗಲ್ ಹಾಗೂ ಮೊಬೈಲ್ ತಯಾರಿಕಾ ಸಂಸ್ಥೆಗಳು ಭದ್ರತಾ ನವೀಕರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ಮೊಬೈಲ್ ಎಷ್ಟು ದಿನಗಳ ಕಾಲ ಸೇಫ್ ಆಗಿರುತ್ತದೆ. ಒಂದು ವೇಳೆ ಮೊಬೈಲ್ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಾದರೆ ಗ್ರಾಹಕರು ಏನು ಮಾಡಬೇಕು ಎಂಬುದರ ಕುರಿತು ಸೂಕ್ತ ಜಾಗೃತಿ, ಮಾಹಿತಿ ನೀಡಬೇಕು. ಸ್ಮಾರ್ಟ್ ಫೋನ್‍ಗಳ ಭದ್ರತಾ ನವೀಕರಣಗಳ ಕುರಿತು ಮೊಬೈಲ್ ತಯಾರಿಕಾ ಸಂಸ್ಥೆಗಳು ಪಾರದರ್ಶಕವಾಗಿರುವುದನ್ನು ತಿಳಿಯಲು ಸರ್ಕಾರಗಳು ಸಹ ಕಡ್ಡಾಯವಾಗಿ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕೇಟ್ ಎಚ್ಚರಿಸಿದ್ದಾರೆ.

    ಯಾವ ಫೋನ್‍ಗಳು ಅಪಾಯದಲ್ಲಿವೆ?
    ಪ್ರಸಿದ್ಧ ಕಂಪನಿಯ ಮೊಬೈಲ್ ಗಳಾದ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್-3 ಹಾಗೂ ಸೋನಿ ಎಕ್ಸ್ ಪಿರಿಯಾ ಎಸ್ ಹೆಚ್ಚು ಅಪಾಯದಲ್ಲಿವೆಯಂತೆ. ಅಲ್ಲದೆ 2012ರ ಆಸುಪಾಸಿನಲ್ಲಿ ಬಿಡುಗಡೆಯಾದ ಮೊಬೈಲ್‍ಗಳು ಹ್ಯಾಕರ್ಸ್‍ಗೆ ಬಲಿಯಾಗುತ್ತಿವೆ ಎಂದು ವ್ಹಿಚ್? ಸಂಸ್ಥೆ ತಿಳಿಸಿದೆ.

    ನೀವು ಏನು ಮಾಡಬೇಕು?
    ಆಂಡ್ರಾಯ್ಡ್ ಬಳಕೆದಾರರು ಹಳೆಯ ಫೋನ್ ಹೊಂದಿದ್ದರೆ ಅಪಾಯವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ವ್ಹಿಚ್? ಕಂಪನಿ ಸಲಹೆ ನೀಡಿದೆ. ಎರಡು ವರ್ಷಕ್ಕಿಂತ ಹಳೆಯದಾದ ಯಾವುದೇ ಆಂಡ್ರಾಯ್ಡ್ ಸಾಧನವನ್ನು ಆಪರೇಟಿಂಗ್ ಸಿಸ್ಟಂನ ಹೊಸ ವರ್ಷನ್‍ಗೆ ಅಪ್‍ಡೇಟ್ ಮಾಡಬಹುದೇ ಪರಿಶೀಲಿಸಿ. ಆಂಡ್ರಾಯ್ಡ್ 7.0 ನೌಗಾಟ್ ವರ್ಷನ್‍ಗಿಂತ ಹಳೆಯದಾಗಿದ್ದರೆ ಅಪ್‍ಡೇಟ್ ಮಾಡಲು ಯತ್ನಿಸಿ. ನಿಮ್ಮ ಮೊಬೈಲ್‍ನಲ್ಲಿ ಸೆಟ್ಟಿಂಗ್ಸ್- ಸಿಸ್ಟಮ್- ಅಡ್ವಾನ್ಸಡ್ ಸಿಸ್ಟಮ್ ಅಪ್‍ಡೇಟ್ ಮೂಲಕ ಮೊಬೈಲ್ ಅಪ್‍ಡೇಟ್ ಮಾಡಬಹುದು.

    ಮೊಬೈಲ್ ಅಪ್‍ಡೇಟ್ ಆಗದಿದ್ದಲ್ಲಿ, ಆ ಮೊಬೈಲ್ ಆಂಡ್ರಾಯ್ಡ್ ವರ್ಷನ್ 4 ಅಥವಾ ಅದಕ್ಕಿಂತ ಹಳೆದಾಗಿದ್ದರೆ ಹ್ಯಾಕ್ ಆಗಿರುವ ಸಂಭವ ಹೆಚ್ಚು. ಅಲ್ಲದೆ ಗೂಗಲ್ ಪ್ಲೇ ಸ್ಟೋರ್ ಹೊರಗಿನಿಂದ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮುನ್ನ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಆ್ಯಂಟಿ ವೈರಸ್ ಆ್ಯಪ್‍ನ್ನು ಸಹ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.

  • ರೈಲ್ವೇ ನಿಲ್ದಾಣಗಳಲ್ಲಿನ ಉಚಿತ ವೈಫೈ ಸ್ಥಗಿತಕ್ಕೆ ಗೂಗಲ್ ನಿರ್ಧಾರ

    ರೈಲ್ವೇ ನಿಲ್ದಾಣಗಳಲ್ಲಿನ ಉಚಿತ ವೈಫೈ ಸ್ಥಗಿತಕ್ಕೆ ಗೂಗಲ್ ನಿರ್ಧಾರ

    ನವದೆಹಲಿ: ದೇಶದ ಜನನಿಬಿಡ ರೈಲ್ವೇ ನಿಲ್ದಾಣಗಳಿಗೆ ನೀಡಲಾಗಿರುವ ಉಚಿತ ವೈಫೈ ಸೌಲಭ್ಯವನ್ನು ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಕಳೆದ ಐದು ವರ್ಷಗಳಿಗೆ ತುಲನೆ ಮಾಡಿದ್ರೆ ಡೇಟಾ ಬಳಕೆ ಅತ್ಯಂತ ಸರಳವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂದು ಗೂಗಲ್ ತಿಳಿಸಿದೆ.

    2015ರಂದು ಗೂಗಲ್ ರೈಲ್ವೇ ಇಲಾಖೆಯ ಸಹಭಾಗಿತ್ವದಲ್ಲಿ ಜನಿನಿಬಿಡ ನಿಲ್ದಾಣಗಳಲ್ಲಿ ಉಚಿತ ವೈಫೈ ವ್ಯವಸ್ಥೆಯ ಯೋಜನೆಯನ್ನು ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೆ ಈ ಸೇವೆ 400 ರೈಲ್ವೇ ನಿಲ್ದಾಣಗಳಿಗೆ ವ್ಯಾಪಿಸಿದೆ. ಐಎಸ್‍ಪಿ, ದೂರಸಂಪರ್ಕ ಕಂಪನಿಗಳು ಮತ್ತು ಸ್ಥಳೀಯ ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು.

    ಜೂನ್ 2018ರಲ್ಲಿಯೇ ನಾವು ನಮ್ಮ ಗುರಿಯನ್ನು ತಲುಪಿದ್ದೇವೆ. ವಿಶ್ವದ ಇತರೆ ದೇಶಗಳಿಗಿಂದ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಿದೆ. ಹಾಗಾಗಿ 2020ರೊಳಗೆ ಹಂತ ಹಂತವಾಗಿ ರೈಲ್ವೇ ನಿಲ್ದಾಣಗಳಲ್ಲಿ ನೀಡಿರುವ ಉಚಿತ ವೈಫೈ ವ್ಯವಸ್ಥೆಯನ್ನು ಕಡಿತಗೊಳಿಸುತ್ತವೆ. ಮುಂದಿನ ದಿನಗಳಲ್ಲಿಯೂ ರೈಲ್ವೇ ಇಲಾಖೆಯ ಇತರೆ ಸೇವೆಗಳಿಗೆ ಸಹಕಾರ ನೀಡುತ್ತೇವೆ ಎಂದು ಗೂಗಲ್ ಸಂಸ್ಥೆ ಯ ಪೇಮೆಂಟ್ ಮತ್ತು ನೆಕ್ಸ್ಟ್ ಬಿಲಿಯನ್ ಯೂಸರ್ಸ್ ವಿಭಾಗದ ಉಪಾಧ್ಯಕ್ಷ ಸೀಸರ್ ಸೆನ್‍ಗುಪ್ತಾ ತಿಳಿಸಿದ್ದಾರೆ.

  • 99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ!

    99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ!

    ಬರ್ಲಿನ್: ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ.

    ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ.

    ಮಾಡಿದ್ದೇನು?
    ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್ ನಲ್ಲಿರುವ ಗೂಗಲ್ ಕಚೇರಿಯ ಮುಂದೆ 99 ಮೊಬೈಲ್ ಗಳನ್ನು ಸಣ್ಣ ಗಾಡಿಯಲ್ಲಿ ಎಳೆದುಕೊಂಡು ಹೋಗಿದ್ದಾನೆ. 99 ಮೊಬೈಲ್ ಗಳಲ್ಲಿ ಜಿಪಿಎಸ್ ಆನ್ ಆಗಿದ್ದ ಕಾರಣ ಸಹಜವಾಗಿ ಗೂಗಲ್ ಕಚೇರಿಯ ಮುಂದೆ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ತೋರಿಸಿದೆ.

    ಸೈಮನ್ ವೆಕರ್ಟ್ ತಂತ್ರಜ್ಞಾನವನ್ನು ನಾವು ಹೇಗೆ ಮೂರ್ಖರನ್ನಾಗಿ ಮಾಡಬಹುದು ಎಂದು ತೋರಿಸಲು ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತಾನು ಸಣ್ಣ ಗಾಡಿಯಲ್ಲಿ ಮೊಬೈಲ್‍ಗಳನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಈ ವಿಡಿಯೋಗೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಸೈಮನ್ ವೆಕರ್ಟ್ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು, ಬೇರೆ ಏನು ಕೆಲಸ ಇಲ್ಲದ ಈ ವ್ಯಕ್ತಿ ತುಂಬಾ ಫ್ರೀ ಇರಬೇಕು. ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾನೆ. ತಂತ್ರಜ್ಞಾನ ಇಂತವರಿಂದಲೇ ದುರುಪಯೋಗ ಆಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.