Tag: ಗುಳೆ

  • ಮಹಾನಗರಗಳತ್ತ  ನಿರಂತರ ಗುಳೆ ಹೊರಟ ಜನ

    ಮಹಾನಗರಗಳತ್ತ ನಿರಂತರ ಗುಳೆ ಹೊರಟ ಜನ

    ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಜೋರಾಗಿ ನಡೆದಿದ್ದರೂ, ಕೃಷಿ ಕೂಲಿಕಾರ್ಮಿಕರು ಮಾತ್ರ ಮಹಾನಗರಗಳಿಗೆ ನಿರಂತರವಾಗಿ ಗುಳೆ ಹೊರಟಿದ್ದಾರೆ.

    ದೇವದುರ್ಗ ತಾಲೂಕಿನ ಜಾಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ನಿತ್ಯ ಬೆಂಗಳೂರು ಸೇರಿದಂತೆ ಹಲವೆಡೆ ಗುಳೆಹೊರಟಿದ್ದಾರೆ. ಲಾಕ್‍ಡೌನ್ ಸಡಿಲಿಕೆಯಾಗಿರುವುದರಿಂದ ಕಾರ್ಮಿಕರು ಉದ್ಯೋಗ ಹರಿಸಿ ಗುಳೆ ಹೋಗುತ್ತಿದ್ದಾರೆ. ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ ನಿತ್ಯ ಕೂಲಿ ಕೆಲಸ ಸಿಗುವುದಿಲ್ಲ. ವಾರದಲ್ಲಿ ಎರಡು ಮೂರು ದಿನ ಮಾತ್ರ ಕೆಲಸ ಸಿಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗಿದೆ.

    ಲಾಕ್‍ಡೌನ್ ನಿಂದ ಇಷ್ಟುದಿನ ಕೆಲಸವಿಲ್ಲದೆ ಕಷ್ಟಪಟ್ಟಿದ್ದೇವೆ ಈಗಲೂ ನಿತ್ಯ ಕೆಲಸವಿಲ್ಲದೆ ಬದುಕು ನಡೆಸಲು ಸಾಧ್ಯವಿಲ್ಲ, ಅಂತ ಕೂಲಿಕಾರ್ಮಿಕರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಗಾರೆಕೆಲಸ ಮಾಡುತ್ತಿದ್ದ ಕೂಲಿಕಾರರು ಪುನಃ ಗಾರೆಕೆಲಸಕ್ಕೆ ಗುಳೆ ಹೊರಟಿದ್ದಾರೆ.

    ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ದೇವದುರ್ಗದ ಜಾಲಹಳ್ಳಿ ಗ್ರಾಮಪಂಚಾಯತಿಯನ್ನ ಮೇಲ್ದರ್ಜೆಗೆರಿಸಿರುವುದರಿಂದ ಉದ್ಯೋಗ ಖಾತ್ರಿ ಯೋಜನೆ ರದ್ದಾಗಿದೆ. ಇಲ್ಲಿನ ಕರಡಿಗುಡ್ಡ, ಚಿಂಚೋಡಿ ಗ್ರಾಮ ಪಂಚಾಯತಿಗೆ ಚುನಾವಣೆಯಾಗದೆ ಯೋಜನೆ ಸ್ಥಗಿತಗೊಂಡಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸಿಗದೆ ಜನ ಗಟ್ಟುಮೂಟೆ ಕಟ್ಟಿಕೊಂಡು ಗುಳೆ ಹೊರಟಿದ್ದಾರೆ.

  • ಜನ ಗುಳೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳಿಂದ ಹರಸಹಾಸ

    ಜನ ಗುಳೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳಿಂದ ಹರಸಹಾಸ

    – ನರೇಗಾ ಯೋಜನೆ ಸದ್ಬಳಕೆಗೆ ಮುಂದಾದ ಅಧಿಕಾರಿಗಳು

    ಯಾದಗಿರಿ: ಜಿಲ್ಲೆಯ ಜನ ಬೆಂಗಳೂರು, ಮುಂಬೈ ಹಾಗೂ ಪುಣೆಗೆ ಗೂಳೆ ಹೋಗುವುದನ್ನು ತಪ್ಪಿಸಲು, ನರೇಗಾ ಯೋಜನೆ ಅಡಿ ಅವರ ಊರಲ್ಲೇ ಕೆಲಸ ನೀಡಲು ಜಿ.ಪಂ ಮುಂದಾಗಿದೆ.

    ಗ್ರಾಪಂಚಾಯ್ತಿ ವ್ಯಾಪ್ತಿಯಲ್ಲಿ ಉಳು ತೆಗೆವುದು, ಬಸಿಗೌಲಿ ಸ್ವಚ್ಛತೆ, ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಕೆಲಸಗಳು ನಡೆಯುತ್ತಿವೆ. ಒಂದು ಕುಟುಂಬಕ್ಕೆ 100 ದಿನ ಕೆಲಸ ಕೊಟ್ಟಿದ್ದು, ಪ್ರತಿಯೊಬ್ಬರಿಗೆ ದಿನಕ್ಕೆ 289 ರೂಪಾಯಿ ಕೂಲಿ ಸಿಗುತ್ತದೆ. ಅಲ್ಲದೇ ಒಂದು ವಾರದ ನಂತರ ನೇರವಾಗಿ ಅವರ ಖಾತೆ ಹಣ ಜಮೆಯಾಗುತ್ತದೆ. ಇದನ್ನೂ ಓದಿ: ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    ವಲಸೆ ಹೋದಾಗ ಕಟ್ಟಡ ಕೆಲಸ ಮಾಡುವಾಗ ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ ಇಲ್ಲೇ ನರೇಗಾದಲ್ಲಿ ಕೆಲಸ ಕೊಡಲಾಗಿದೆ. ಉತ್ತಮವಾಗಿ ಕೆಲಸವೂ ನಡೆಯುತ್ತಿದೆ. ಬಸ್, ರೈಲಿನಲ್ಲಿ ಮೂಲಕ ಗುಳೆ ಹೋಗುವ ಜನರನ್ನು, ತಡೆದು ಅವರಿಗೆ ಜಾಗೃತಿ ಮೂಡಿಸಿ, ಜಿಲ್ಲೆಯಲ್ಲಿಯೆ ದುಡಿಯುವಂತೆ ಮನವೊಲಿಸಲು ಮುಂದಾಗಿ ಕೆಲವನ್ನು ಕೊಡುತ್ತಿದ್ದಾರೆ.

  • ಅನ್‍ಲಾಕ್ ಘೋಷಣೆ- ರಾತ್ರೋರಾತ್ರಿ ಕೂಲಿ ಕಾರ್ಮಿಕರ ಮಹಾಗುಳೆ

    ಅನ್‍ಲಾಕ್ ಘೋಷಣೆ- ರಾತ್ರೋರಾತ್ರಿ ಕೂಲಿ ಕಾರ್ಮಿಕರ ಮಹಾಗುಳೆ

    ರಾಯಚೂರು: ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್‍ಡೌನ್ ಸಡಿಲಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಮಸ್ಕಿ ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ನೂರಾರು ವಾಹನಗಳಲ್ಲಿ ಜನ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿ ಕಾರ್ಮಿಕರು, ಅನ್‍ಲಾಕ್ ಘೋಷಣೆ ಯಾಗುತ್ತಿದ್ದಂತೆ ಗಂಟು ಮೂಟೆ ಸಹಿತ ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಅಡುಗೆ ಸಾಮಾನುಗಳು, ಬಟ್ಟೆ, ಬೈಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು ಜನ ಗುಳೆ ಹೊರಟಿದ್ದಾರೆ.

     

    ಮಸ್ಕಿ ಪಟ್ಟಣದಲ್ಲೇ ನೂರಾರು ಜನ ಸಾಲು ಸಾಲಾಗಿ ಟೆಂಪೋ ವಾಹನಗಳಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಬೆಂಗಳೂರಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಹಿನ್ನೆಲೆ ಅನ್‍ಲಾಕ್ ಆಗಿರುವುದರಿಂದ ಕೆಲಸಗಳು ಸಿಗುವ ಭರವಸೆಯಲ್ಲಿ ಜನ ಹೊರಟಿದ್ದಾರೆ. ಅಲ್ಲದೆ ಈಗಾಗಲೇ ಕಟ್ಟಡ ಕೆಲಸಗಳು ಆರಂಭಗೊಂಡಿರುವುದರಿಂದ ಗುತ್ತಿಗೆದಾರರು ಕೂಲಿಕಾರರನ್ನು ಕರೆಸಿಕೊಳ್ಳುತ್ತಿದ್ದಾರೆ.

  • ಕೊರೊನಾ ಭೀತಿಗೆ ಗುಳೆ ಹೋದವರು ವಾಪಸ್ – ಆಸ್ಪತ್ರೆಗೆ ಬರುತ್ತಿರುವವರ ತಪಾಸಣೆಗೆ ವೈದ್ಯರ ಪರದಾಟ

    ಕೊರೊನಾ ಭೀತಿಗೆ ಗುಳೆ ಹೋದವರು ವಾಪಸ್ – ಆಸ್ಪತ್ರೆಗೆ ಬರುತ್ತಿರುವವರ ತಪಾಸಣೆಗೆ ವೈದ್ಯರ ಪರದಾಟ

    ಹಾವೇರಿ: ಗೋವಾ, ಕೇರಳ, ಮಂಗಳೂರು ಸೇರಿದಂತೆ ಕೆಲಸ ಅರಸಿಕೊಂಡು ಗುಳೆ ಹೋಗಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಜನರು ಕೊರೊನಾ ವೈರಸ್ ಭೀತಿಗೆ ಈಗ ಊರಿಗೆ ಮರಳಿದ್ದಾರೆ.

    ಊರಿಗೆ ಮರಳಿ ಬರುತ್ತಿರುವ ಮಂದಿಯಿಂದ ಕೊರೊನಾ ಸೋಂಕು ಹರಡೋ ಭೀತಿ ಇರುವ ಹಿನ್ನೆಲೆ ತಪಾಸಣೆ ಮಾಡಿಸಿಕೊಂಡು, ವೈದ್ಯರಿಂದ ಕೊರೊನಾ ಸೋಂಕು ತಗುಲಿಲ್ಲವೆಂದ ದೃಢಕರಣ ಪತ್ರ ತೆಗೆದುಕೊಂಡು ಊರಿಗೆ ಬರುವಂತೆ ಗ್ರಾಮಸ್ಥರು ಕಟ್ಟಪ್ಪಣೆ ಹೊರಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೋವಾ, ಕೇರಳ ಮತ್ತು ಮಂಗಳೂರು ಭಾಗದಿಂದ ಬಂದ ನೂರಾರು ಜನರು ತಪಾಸಣೆಗಾಗಿ ಒಮ್ಮೆಲೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

    ಒಂದೇ ಬಾರಿ ನೂರಾರು ಮಂದಿ ಆಸ್ಪತ್ರೆಗೆ ಆಗಮಿಸುತ್ತಿರುವುದರಿಂದ ಎಲ್ಲರಿಗೂ ಚಿಕಿತ್ಸೆ ನೀಡಿ, ವರದಿ ಕೊಡಲು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಾಲ್ವರು ವೈದ್ಯರು ಮತ್ತು 15ಕ್ಕೂ ಅಧಿಕ ಸಿಬ್ಬಂದಿ ಇದ್ದರೂ 300ಕ್ಕೂ ಅಧಿಕ ಮಂದಿ ಒಂದೇ ಬಾರಿ ಬಂದು ಕ್ಯೂ ನಿಂತ್ತಿರುವುದರಿಂದ ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ನೀಡೋದು ಕಷ್ಟಕರವಾಗಿದೆ. ಆದರೂ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಯಾರಿಗೂ ತೊಂದರೆ ಆಗದಂತೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.

  • ಭೀಕರ ಬರಗಾಲಕ್ಕೆ ಬೇಸತ್ತು ಗುಳೆ ಹೊರಟ ಬಿಸಿಲನಾಡಿನ ಜನ!

    ಭೀಕರ ಬರಗಾಲಕ್ಕೆ ಬೇಸತ್ತು ಗುಳೆ ಹೊರಟ ಬಿಸಿಲನಾಡಿನ ಜನ!

    – ಇದುವರೆಗೆ 50 ಸಾವಿರಕ್ಕೂ ಹೆಚ್ಚು ಜನ ಗುಳೆ
    – ಉದ್ಯೋಗ ಖಾತ್ರಿ ಹೆಸ್ರಿಗೆ ಮಾತ್ರ, ಕೂಲಿ ಕೆಲಸವೇ ಇಲ್ಲ
    – ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಿಂದಲೇ ಗುಳೆ

    ರಾಯಚೂರು: ಭೀಕರ ಬರಗಾಲದಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಶನಿವಾರ, ಭಾನುವಾರ ಬಂದರೆ ಸಾಕು ಒಂದಿಲ್ಲೊಂದು ಗ್ರಾಮ ಖಾಲಿಯಾಗುತ್ತಿದೆ. ಮಹಾನಗರಗಳತ್ತ ಜೀವನ ನಡೆಸಲು ಕೆಲಸ ಅರಸಿ ಹಳ್ಳಿ ಜನರು ಗುಳೆ ಹೋಗುತ್ತಿದ್ದಾರೆ.

    ಸಿಂಧನೂರು ಬಸ್ ನಿಲ್ದಾಣದಿಂದ ಶನಿವಾರ ತಡರಾತ್ರಿ ಹತ್ತಾರು ಹಳ್ಳಿಗಳ ನೂರಾರು ಜನ ದುಡಿಯಲು ಬೆಂಗಳೂರಿಗೆ ಗುಳೆ ಹೋಗಿದ್ದಾರೆ. ತಡರಾತ್ರಿ ಗಂಟು- ಮೂಟೆ ಕಟ್ಟಿಕೊಂಡು ಮಕ್ಕಳೊಂದಿಗೆ ಬಂದ ಜನ, ಬಸ್ ಇಲ್ಲದೆ ಪರದಾಡಿದರು. ನಂತರ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಮಾಡಿ ಜನರನ್ನ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಮಳೆ ಬೆಳೆ ಇಲ್ಲದೆ, ಕೂಲಿ ಕೆಲಸವೂ ಸಿಗದೆ ಜನ ತಮ್ಮ ಗ್ರಾಮಗಳನ್ನು ಬಿಡುತ್ತಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ಸ್ವಕ್ಷೇತ್ರ ಸಿಂಧನೂರು ನೀರಾವರಿ ಪ್ರದೇಶವಾದರು ಬರ ನಿರ್ವಹಣೆ ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೆ ಮಾನವಿ ತಾಲೂಕಿನ ಜನರು ತಂಡೋಪತಂಡವಾಗಿ ಗುಳೆ ಹೋಗಿದ್ದರು. ಆಗ ಕೂಡ ಗುಳೆ ಹೋಗುವವರಿಗಾಗಿಯೇ ಹೆಚ್ಚುವರಿಯಾಗಿ ನಾಲ್ಕು ಬಸ್‍ಗಳನ್ನ ಬಿಡಲಾಗಿತ್ತು.

    ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2019-20 ನೇ ಸಾಲಿನಲ್ಲಿ ಕೇವಲ ಶೇಕಡಾ 12.08 ರಷ್ಟು ಜನರಿಗೆ ಮಾತ್ರ ಕೂಲಿ ಕೆಲಸ ನೀಡಲಾಗಿದೆ. 85 ಲಕ್ಷ ಮಾನವ ದಿನಗಳನ್ನ ಸೃಜನೆ ಮಾಡಬೇಕಾದಲ್ಲಿ ಕೇವಲ 10 ಲಕ್ಷ 27 ಸಾವಿರ ದಿನಗಳನ್ನ ಮಾತ್ರ ಸೃಜನೆ ಮಾಡಲಾಗಿದ್ದು, 23 ಕೋಟಿ 79 ಲಕ್ಷ ಅನುದಾನ ಬಳಕೆ ಮಾಡಲಾಗಿದೆ. ಕಳೆದ ವರ್ಷ ಶೇಕಡಾ 114.59 ರಷ್ಟು ಸಾಧನೆ ಮಾಡಿ, 268 ಕೋಟಿ 65 ಲಕ್ಷ ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿತ್ತು. ಹೀಗಾಗಿ ಕಳೆದ ವರ್ಷ ಗುಳೆ ಹೋಗುವವರ ಸಂಖ್ಯೆ ಸ್ವಲ್ಪ ಕಡಿಮೆಯಿತ್ತು. ಆದರೆ ಈ ಬಾರಿ ಭೀಕರ ಬರಗಾಲ ಎದುರಾಗಿರುವುದರಿಂದ ಜನ ಜಾನುವಾರುಗಳು ತತ್ತರಿಸಿ ಹೋಗಿವೆ. ಜಾನುವಾರುಗಳನ್ನ ಮಾರಾಟ ಮಾಡಿ ಜನ ಗುಳೆ ಹೋಗುತ್ತಿದ್ದಾರೆ.

  • ಹಾಸನದಲ್ಲಿ ನೀರಿಲ್ಲದೇ ಗುಳೆ ಹೊರಟ ಗ್ರಾಮಸ್ಥರು

    ಹಾಸನದಲ್ಲಿ ನೀರಿಲ್ಲದೇ ಗುಳೆ ಹೊರಟ ಗ್ರಾಮಸ್ಥರು

    ಹಾಸನ: ಮಳೆಯಿಲ್ಲ, ಬೆಳೆಯಿಲ್ಲ ಅನ್ನೋ ಕಾರಣಕ್ಕೆ ಗುಳೆ ಹೋಗೋದನ್ನು ನಾವು ಕಂಡಿದ್ದೇವೆ. ಆದ್ರೆ ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಕುಡಿಯಲು ಮತ್ತು ಬಳಕೆಗೆ ನೀರಿಲ್ಲ ಅಂತ ಹಳ್ಳಿಯ ಶೇಕಡ 60 ರಿಂದ 70ರಷ್ಟು ಮಂದಿ ಗ್ರಾಮ ಬಿಟ್ಟು ಹೋಗಿದ್ದಾರೆ. ಬೇಲೂರು ತಾಲೂಕಿನ ಬೋವಿಕಾಲೋನಿ ಅನ್ನೋ ಗ್ರಾಮದಲ್ಲಿ ಇಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೇ ಪಡಬಾರದ ಕಷ್ಟ ಪಡುತ್ತಿರುವ ಪರಿಶಿಷ್ಟರು, ಸರ್ಕಾರದ ಭಾಗ್ಯ ಯೋಜನೆಗಳು ಹೋಗಲಿ, ನಮಗೆ ಮೊದಲು ನೀರು ಕೊಡಿ ಅಂತ ಪರಿ ಪರಿಯಾಗಿ ಬೇಡುತ್ತಿದ್ದಾರೆ.

    ಇದು ಶಿಲ್ಪಸೌಂದರ್ಯದ ನೆಲೆವೀಡು, ಹಳೇಬೀಡಿನ ಕೂಗಳತೆ ದೂರದಲ್ಲಿರುವ ನರಸೀಪುರ ಬೋಬಿ ಕಾಲೋನಿ. ಇಲ್ಲಿ ಸುಮಾರು 200 ಕುಟುಂಬಗಳು ವಾಸವಿದ್ದು, ಸುಮಾರು 1 ಸಾವಿರ ಜನಸಂಖ್ಯೆ ಇದೆ. ಇವರೆಲ್ಲರೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಈ ಗ್ರಾಮಕ್ಕೆಂದೇ ಕೊರೆಸಿದ್ದ ಹಲವು ಕೊಳವೆ ಬಾವಿಗಳು ನೀರಿನ ಅಭಾವದಿಂದ ಬತ್ತಿಹೋಗಿವೆ. ಬೇಲೂರಿನ ಯಗಚಿ ಜಲಾಶಯದಿಂದ ನೀರಿನ ಸಂಪರ್ಕವಿದ್ದರೂ ಅಲ್ಲಿಂದು ನೀರು ಪೂರೈಕೆಯಾಗೋದು ಅಮಾವಾಸ್ಯೆಗೋ, ಹುಣ್ಣಿಮೆಗೋ. ಗ್ರಾಮದಲ್ಲಿ ನೀರಿನ ಸಮಸ್ಯೆ ಹೇಗಿದೆ ಅಂದ್ರೆ ಯಾರಾದ್ರು ಹೊರಗಿನವರು ಬಂದು ಕುಡಿಯಲು ನೀರು ಕೇಳಿದ್ರೂ ಕೂಡ ಮನೆಯಲ್ಲಿ ನೀರಿರೋದಿಲ್ಲ.

    ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ರೂ ಒಂದು ಟ್ಯಾಂಕ್ ನೀರು ಬಂದರೆ ಮನೆಗೊಂದು ಬಿಂದಿಗೆ ಸಿಗೋದು ಕಷ್ಟ. ನೀರಿನ ಅಭಾವದಿಂದಲೇ ಗ್ರಾಮದ ಶೇ.60 ರಿಂದ 70ರಷ್ಟು ಮಂದಿ ಮನೆಗೆ ಬೀಗ ಜಡಿದು ಊರು ಬಿಟ್ಟು ಮೂಡಿಗೆರೆ, ಮಡಿಕೇರಿ ಕಡೆಗೆ ವಲಸೆ ಹೋಗಿದ್ದಾರೆ. ಇನ್ನೂ ಕೆಲವರು ನಮಗೇ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಎಲ್ಲಿಂದ ತರೋದು ಅಂತ ಮೂಕಪ್ರಾಣಿಗಳನ್ನು ಮಾರಾಟ ಮಾಡಿದ್ದಾರೆ.

    ಗ್ರಾಮದಲ್ಲಿ ಉಳಿದಿರುವುದು ವಯೋವೃದ್ಧರು, ಶಾಲೆಗೆ ಹೋಗುವ ಮಕ್ಕಳು, ಬಾಣಂತಿಯರು ಮಾತ್ರ. ಆಗೊಮ್ಮೆ ಈಗೊಮ್ಮೆ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾರೆ. ಆದರೆ ಅದರಿಂದ ಒಂದು ಮನೆಗೆ 4 ಕೊಡ ನೀರು ಸಿಗೋದು ಕಷ್ಟ. ಇದೇ ಕಾರಣಕ್ಕೆ ಗ್ರಾಮದ ಪಕ್ಕ ಇರೋ ಪಾಚಿಗಟ್ಟಿದ ಕೆರೆ ನೀರನ್ನೇ ಬಳಕೆ ಮಾಡೋದು ಬಡಜನರಿಗೆ ಅನಿವಾರ್ಯವಾಗಿದೆ. ನೀರು ಕೊಡಿ ಸ್ವಾಮಿ ಅಂದ್ರೆ ಒಬ್ಬರತ್ತ ಇನ್ನೊಬ್ಬರು ಬೊಟ್ಟು ಮಾಡುತ್ತಾರೆ. ಕೊರೆಸಿದ್ದ ಕೊಳವೆಬಾವಿಗಳೆಲ್ಲಾ ಸತ್ತು ಹೋಗಿವೆ. ಗ್ರಾಮದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದ್ರೆ ಸ್ವಚ್ಛಭಾರತ್ ನಿರ್ಮಾಣ ಅಭಿಯಾನ ಯೋಜನೆಯಡಿ ರೇಷನ್ ಕಾರ್ಡ್ ಕಟ್ ಮಾಡುವ ಬೆದರಿಕೆ ಹಾಕಿ ಬಹುತೇಕ ಮನೆಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಳಕೆ ಮಾಡಲು ನೀರೇ ಇಲ್ಲ. ಇದರಿಂದಾಗಿ ಬಾಣಂತಿಯರ ಪಾಡಂತೂ ಹೇಳತೀರದ್ದಾಗಿದೆ.

    ಶುಚಿಯಾದ ನೀರಿಲ್ಲದ ಕಾರಣ ಗ್ರಾಮದ ಹೆಚ್ಚು ಜನರು ಕಜ್ಜಿ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ನಮಗೇನೂ ಬೇಡ, ಮೊದಲು ನೀರು ಕೊಡಿ ಅನ್ನೋದು ನೊಂದ ಜನರ ಮನವಿಯಾಗಿದೆ.