Tag: ಗುರುಮಿಠಕಲ್

  • ಬಸ್ ನಿಲ್ದಾಣದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಸಿಮೆಂಟ್ ಲಾರಿ

    ಬಸ್ ನಿಲ್ದಾಣದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಸಿಮೆಂಟ್ ಲಾರಿ

    – ಬಾಲಕಿ ದೇಹ ಛಿದ್ರ ಛಿದ್ರ, ನಾಲ್ವರ ಸ್ಥಿತಿ ಚಿಂತಾಜನಕ

    ಯಾದಗಿರಿ: ಬಸ್ ನಿಲ್ದಾಣದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಸಿಮೆಂಟ್ ಲಾರಿ ಹರಿದ ಪರಿಣಾಮ, ಬಾಲಕಿ ದೇಹ ಛಿದ್ರ ಛಿದ್ರವಾಗಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಸಮೀಪದ ಬೋರಬಂಡದಲ್ಲಿ ಈ ದುರ್ಘಟನೆ ನಡೆದಿದೆ. ಗುರುಮಿಠಕಲ್ ಗೆ ಬರಲು ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಪ್ರಯಾಣಿಕರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂರು ವರ್ಷದ ಬಾಲಕಿ ಮೋನಿಕಾ ಮೃತಪಟ್ಟಿದ್ದಾಳೆ.

    ಉಳಿದ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಗುರುಮಿಠಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಕಾಲಕ್ಕೆ ಅಂಬ್ಯುಲೆನ್ಸ್ ಬಾರದ ಹಿನ್ನಲೆ 112 ಮತ್ತು ಹೈವೆ ಪ್ಯಾಟ್ರೋಲಿಂಗ್ ವಾಹನದಲ್ಲಿ ಗಾಯಗೊಂಡ ಪ್ರಯಾಣಿಕರ ಆಸ್ಪತ್ರೆಗೆ ಶಿಫ್ಟ್ ಮಾಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಸದ್ಯ ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗುರುಮಿಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

    ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

    ಯಾದಗಿರಿ: ಜಿಲ್ಲೆಯ ಗುರುಮಿಠಕಲ್ ತಾಲೂಕಿನ ತಹಶೀಲ್ದಾರ್ ಸಂಗಮೇಶ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ದೊಡ್ಡಬನ್ನಪ್ಪ ಎಂಬವರ ಜಮೀನು ಮುಟಿಗೇಷನ್ ಮಾಡಿಕೊಡಲು ಸಂಗಮೇಶ್ ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನಿಟ್ಟಿದರು. ಇಂದು ಸಂಗಮೇಶ್ ತಮ್ಮ ಕಚೇರಿಯಲ್ಲಿ ಐದು ಸಾವಿರ ಮುಂಗಡ ಲಂಚ ಪಡೆಯುತ್ತಿರುವಾಗ ಎಸಿಬಿ ದಾಳಿ ನಡೆಸಿದೆ. ಎಸಿಬಿ ಎಸ್.ಪಿ. ಮಹೇಶ್ ಮೇಘಣ್ಣವರ್ ಮತ್ತು ಡಿವೈಎಸ್ ಪಿ ಉಮಾಶಂಕರ್, ಪಿಎಸ್ ಐ ಗುರುಪಾದ್ ಬಿರಾದಾರ್, ಸಿಬ್ಬಂದಿ ಅಮರ್, ವಿಜಯ್, ಗುತ್ತಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ದೊಡ್ಡ ಬನ್ನಪ್ಪ ಎಂಬವರು ಬಹಳಷ್ಟು ದಿನಗಳಿಂದ ತಮ್ಮ ಜಮೀನು ರೂಪಾಂತರ ಪತ್ರಕ್ಕಾಗಿ ತಹಶೀಲ್ದಾರರ ಕಚೇರಿಗೆ ಅಲೆದಾಡುತ್ತಿದ್ದರು. ತಹಶೀಲ್ದಾರರ ಲಂಚದ ದುರಾಸೆಯಿಂದ ದೊಡ್ಡ ಬನ್ನಪ್ಪನವರ ಕೆಲಸವನ್ನು ಮುಂದೂಡುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ದೊಡ್ಡಬನ್ನಪ ಎಸಿಬಿಯಲ್ಲಿ ದೂರು ದಾಖಲು ಮಾಡಿದ್ದರು. ಈ ವಿಚಾರವಾಗಿ ತಹಶೀಲ್ದಾರರ ಸಂಗಮೇಶ್ ಮೇಲೆ ತೀವ್ರ ನಿಗಾಯಿಟ್ಟಿದ್ದ ಎಸಿಬಿ ತಂಡ, ವಿಶೇಷ ಕಾರ್ಯಾಚರಣೆ ಮೂಲಕ ತಹಶೀಲ್ದಾರರನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

  • ಸೇಂದಿ ಕಾಯಿಸುವ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

    ಸೇಂದಿ ಕಾಯಿಸುವ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

    ಯಾದಗಿರಿ: ಸೇಂದಿ ಕಾಯಿಸುವ ಅಡ್ಡೆ ಮೇಲೆ ಯಾದಗಿರಿ ಅಬಕಾರಿ ಇಲಾಖೆ ಇಂದು ದಾಳಿ ನಡೆಸಿದೆ. ದಾಳಿಯಲ್ಲಿ ಸಂಗ್ರಹಿಸಿಟ್ಟ 1,030 ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕುರಬಗೇರಾ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದಲೂ ಕಳ್ಳಭಟ್ಟಿ ತಯಾರು ಮತ್ತು ಮಾರಾಟ ಮಾಡುವ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆಯ ಪೊಲೀಸರು, ಯಾದಗಿರಿ ಅಬಕಾರಿ ಉಪ ಅಧೀಕ್ಷಕರ ಸೂಚನೆ ಮೇರೆಗೆ, ಉಪ ವಿಭಾಗ ಶಹಾಪೂರ ಅಧಿಕಾರಿ ಬಸವರಾಜ ಜಾಮಗೊಂಡ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ತಾಯಪ್ಪ ಕಲಾಲ ಅಕ್ರಮವಾಗಿ ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿಯಾಗಿದ್ದು, ಈತ ಅಬಕಾರಿ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ. ಸದ್ಯ ಸೇಂದಿ ವಶಕ್ಕೆ ಪಡೆದಿರುವ ಅಧಿಕಾರಿಗಳು, ಆರೋಪಿ ತಾಯಪ್ಪನಿಗಾಗಿ ತೀವ್ರ ಶೋಧಕಾರ್ಯ ನಡೆಸಿದ್ದಾರೆ.

    ಗುರುಮಿಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾಳಿ ನಡೆಸಲಾಗಿದೆ. ಇನ್ನೂ ಇಷ್ಟು ದೊಡ್ಡ ಮಟ್ಟದಲ್ಲಿ ಕಳ್ಳಭಟ್ಟಿ ಮಾರಾಟ ದಂಧೆ ನಡೆಯುತ್ತಿದ್ದರು, ಗುರುಮಿಠಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಇಷ್ಟು ದಿನ ಜಾಣ ನಿದ್ದೆಗೆ ಜಾರಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗುರುಮಿಠಕಲ್ ಪೊಲೀಸರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಉದ್ರಿ ಭಾಷಣ ಮಾಡ್ಬೇಡಿ, ಮೊದಲು ಕೆಲ್ಸಾ ಮಾಡ್ರಿ: ಮಾಜಿ ಸಚಿವರಿಗೆ ಜನರಿಂದ ತರಾಟೆ

    ಉದ್ರಿ ಭಾಷಣ ಮಾಡ್ಬೇಡಿ, ಮೊದಲು ಕೆಲ್ಸಾ ಮಾಡ್ರಿ: ಮಾಜಿ ಸಚಿವರಿಗೆ ಜನರಿಂದ ತರಾಟೆ

    ಯಾದಗಿರಿ: ಉದ್ರಿ ಭಾಷಣ ಮಾಡಬೇಡಿ, ಮೊದಲು ಕೆಲಸ ಮಾಡಿ ಅಂತಾ ಮಾಜಿ ಸಚಿವ ಬಾಬು ರಾವ್ ಚಿಂಚನಸೂರ್ ಅವರಿಗೆ ಕ್ಷೇತ್ರದ ಜನರು ವೇದಿಕೆಯ ಮೇಲೆಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಎರಡು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಬಳಿಯ ನಸಲವಾಯಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ಸಚಿವರು ತೆರಳಿದ್ದರು. ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡು ಸಚಿವರ ವಿರುದ್ಧ ಹರಿಹಾಯ್ದರು.

    ಈ ಹಿಂದೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಎಚ್‍ಕೆಆರ್‍ಡಿಬಿಯಿಂದ ಬಂದ 15 ಕೋಟಿ ರೂಪಾಯಿ ಹಣವನ್ನು ನುಂಗಿದ್ದೀರಿ ಎಂದು ಜನರು ಆರೋಪಿಸಿದರು. ಅಪರೂಪಕ್ಕೆ ಎಂಬಂತೆ ಕ್ಷೇತ್ರಕ್ಕೆ ಬರುವ ನೀವು ಉದ್ರಿ ಭಾಷಣ ಮಾಡಿ ಹೋಗಬೇಡಿ, ಕೆಲಸ ಮಾಡಿ ಅಂತಾ ಜನರು ಆಕ್ರೋಶಗೊಂಡರು. ಮಾಜಿ ಸಚಿವರಿಗೆ ಜನ ತರಾಟೆ ತೆಗೆದುಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಾಬುರಾವ್ ಚಿಂಚನಸೂರ್ ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದು ಬಂದಿದ್ದಾರೆ. ಈ ಬಾರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಚಿಂಚನಸೂರ್ ಅವರಿಗೆ ತಮ್ಮ ಕ್ಷೇತ್ರದಲ್ಲಾದ ಘಟಯಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ಗುರುಮಿಠಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ.