Tag: ಗುರುಪೂರ್ಣಿಮೆ

  • ಹರಿದ್ವಾರ ಪೇಜಾವರ ಮಠದಲ್ಲಿ ಉಮಾಭಾರತಿ ಗುರು ಪೂಜೆ ಸಲ್ಲಿಕೆ

    ಹರಿದ್ವಾರ ಪೇಜಾವರ ಮಠದಲ್ಲಿ ಉಮಾಭಾರತಿ ಗುರು ಪೂಜೆ ಸಲ್ಲಿಕೆ

    ಡೆಹ್ರಾಡೂನ್: ಗುರುಪೂರ್ಣಿಮೆಯ ಪರ್ವ ದಿನವಾದ ಇಂದು ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರು ಹರಿದ್ವಾರದಲ್ಲಿರುವ ಪೇಜಾವರ ಮಠದ ಶಾಖೆ ಮಧ್ವಾಶ್ರಮದಲ್ಲಿ ಗುರುಪೂಜೆ ನೆರವೇರಿಸಿದರು. ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥರಲ್ಲಿ ಮಂತ್ರದೀಕ್ಷೆ ಪಡೆದ ಅವರು, ಶ್ರೀ ವಿಶ್ವೇಶತೀರ್ಥರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಭಕ್ತಿ ನಮನ ಸಲ್ಲಿಸಿದರು.

    ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥರಿಗೆ ಗುರುಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಶ್ರೀ ವಿಶ್ವೇಶತೀರ್ಥರು ಇದ್ದಷ್ಟು ಸಮಯ ಪ್ರತಿ ವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿಗೆ ಬಂದು ಅಥವಾ ದೆಹಲಿಗೆ ಆಮಂತ್ರಿಸಿ ವಿಶೇಷ ಕಾರ್ಯಕ್ರಮ ನೆರವೇರಿಸಿ, ಉಮಾಭಾರತಿಯವರು ಗುರು ಭಕ್ತಿ ನಮನ ಸಲ್ಲಿಸುತ್ತಿದ್ದರು. ಈ ಬಾರಿ ಹರಿದ್ವಾರದ ಶಾಖಾ ಮಠದಲ್ಲಿ ಗುರುಗಳಿಗೆ ಭಕ್ತಿ ನಮನ ಅರ್ಪಿಸಿದರು.

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರಕೂಟ ಆಶ್ರಮದ ಶ್ರೀರಾಮಕಿಶನ್ ಮಹಾರಾಜ್ ಅವರಿಗೂ ಗುರುನಮನ ಅರ್ಪಿಸಿದ ಉಮಾಭಾರತಿ, ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು. ಗುರುಪೂರ್ಣಿಮೆಯ ಅಂಗವಾಗಿ ಆಶ್ರಮದಲ್ಲಿರುವ ಜಗದ್ಗುರು ಮಧ್ವಾಚಾರ್ಯರ ಶಿಲಾಪ್ರತಿಮೆಗೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಅಭಿಷೇಕ ಪೂಜೆ ನೆರವೇರಿತು.

    ಎರಡು ದಿನಗಳ ಹಿಂದೆ ಉಮಾಭಾರತಿಯವರ ಸಂಕಲ್ಪದಂತೆ ಆಶ್ರಮದಲ್ಲಿ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಯಾಗ ಸಂಪನ್ನಗೊಂಡಿತು. ಆಶ್ರಮದ ವ್ಯವಸ್ಥಾಪಕ ಮನೋಜ್ ಕಾರ್ಯಕ್ರಮ ಸಂಯೋಜಿಸಿದರು.

    ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ 1992ರ ನವೆಂಬರ್ 17ರಂದು ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರಕಂಟಕ್‍ನಲ್ಲಿ ಉಮಾಭಾರತಿಯವರಿಗೆ ಮಂತ್ರದೀಕ್ಷೆ ನೀಡಿದ್ದರು. ಆ ಕಾಲಕ್ಕೆ ಇಡೀ ದೇಶದಲ್ಲಿ ಈ ಘಟನೆ ಸಂಚಲನ ಮೂಡಿಸಿತ್ತು. ಬಳಿಕ ಪ್ರತಿ ವರ್ಷ ಉಮಾಭಾರತಿ ಗುರು ಪೂರ್ಣಿಮೆಯಂದು ತಮಗೆ ದೀಕ್ಷೆ ಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿದ್ದರು. ಪೇಜಾವರ ಶ್ರೀಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಉಮಾಭಾರತಿ, 2018ರಲ್ಲಿ ಪೇಜಾವರ ಶ್ರೀಗಳಿಗೆ ಅಪಘಾತವಾಗಿ ವಿಶ್ರಾಂತಿಯಲ್ಲಿದ್ದಾಗ ಉಡುಪಿಗೆ ಆಗಮಿಸಿ, ಆರೋಗ್ಯ ವಿಚಾರಿಸಿದ್ದರು.

    ಶ್ರೀಗಳ ಅಂತಿಮ ದಿನಗಳಲ್ಲಿ ಅವರು ಮಣಿಪಾಲ ಆಸ್ಪತ್ರೆಯಲ್ಲಿದ್ದಾಗಲೂ ಉಡುಪಿಗೆ ಆಗಮಿಸಿದ ಉಮಾಭಾರತಿ, ನಾಲ್ಕೈದು ದಿನಗಳ ಕಾಲ ಉಡುಪಿ, ಆಸ್ಪತ್ರೆಯಲ್ಲಿಯೇ ಇದ್ದು ತಮ್ಮ ಗುರು ಭಕ್ತಿಯನ್ನು ಮೆರೆದಿದ್ದರು. ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ 75ನೇ ವರ್ಧಂತಿಯನ್ನು ಉಮಾಭಾರತಿಯವರು ದೆಹಲಿಯಲ್ಲಿ ತಮ್ಮ ಮನೆಯಲ್ಲಿ ನಡೆಸಿದ್ದರು. 80ನೇ ವರ್ಧಂತಿಯನ್ನು ಉಡುಪಿಯಲ್ಲಿ ವಿಜ್ರಂಭಣೆಯಿಂದ ಮಾಡಬೇಕೆಂಬ ಮಹದಾಸೆ ಇತ್ತು. ಆ ಅಪೇಕ್ಷೆ ಮಾತ್ರ ಈಡೇರದೇ ಬಾಕಿ ಉಳಿಯಿತು. ಅತೀವ ನೋವು ಮನಸ್ಸಿನಲ್ಲಿ ಉಳಿದಿದೆ ಎಂದು ಈ ಸಂದರ್ಭದಲ್ಲಿ ಉಮಾಭಾರತಿ ನೆನಪಿಸಿಕೊಂಡರು.

  • ದಕ್ಷಿಣ ಶಿರಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದ ರಾಜಮಾತೆ

    ದಕ್ಷಿಣ ಶಿರಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದ ರಾಜಮಾತೆ

    ಬೆಂಗಳೂರು: ಗುರುಪೂರ್ಣಿಮೆ ನಿಮಿತ್ತ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ವಡ್ಡರಹಳ್ಳಿ ಬಳಿಯ ಇರುವ ಪ್ರಸಿದ್ಧ ದಕ್ಷಿಣ ಶಿರಡಿ ಸಾಯಿಬಾಬಾ ದೇಗುಲಕ್ಕೆ ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾ ದೇವಿ, ದೇವರಲ್ಲಿ ನಂಬಿಕೆ ಇಟ್ಟರೆ ಯಾವ ಆಂತಕವೂ ಬರಲ್ಲ. ಚಂದ್ರಗ್ರಹಣ ಪ್ರಕೃತಿಯಲ್ಲಿ ಆಗಾಗ ಸಂಭವಿಸುತ್ತದೆ. ಒಂದು ವೇಳೆ ಏನಾದರೂ ಸಮಸ್ಯೆ, ದೋಷ ಇದ್ದರೆ ಪೂಜೆ ಮಾಡಿಸಿದರೆ ಪರಿಹಾರವಾಗುತ್ತದೆ. ಆದ್ದರಿಂದ ಇಂದು ರಾತ್ರಿ ಸಂಭವಿಸುವ ರಕ್ತ ಚಂದ್ರ ಗ್ರಹಣದ ಬಗ್ಗೆ ಜನರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ದೇವರು ಎಲ್ಲಾ ಒಳ್ಳೆಯದನ್ನೇ ಮಾಡುತ್ತಾನೆ. ದೇವರಲ್ಲಿ ನಂಬಿಕೆ ಇರಬೇಕು ಒಳಿತಾಗಲಿದೆ ಎಂದು ಹೇಳಿದರು.

    ಇಂದು ರಾತ್ರಿ 11.44ರಿಂದ ನಸುಕಿನ ಜಾವ 3.49ರರೆಗೂ ಚಂದ್ರಗ್ರಹಣ ಇರಲಿದ್ದು, ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದೇ ಬಣ್ಣಿಸಲಾಗಿದೆ. ಈ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಕೆಂಬಣ್ಣಕ್ಕೆ ತಿರುಗಲಿದೆ. ಹೀಗಾಗಿ ಇದನ್ನ ರಕ್ತಚಂದ್ರಗ್ರಹಣ ಎಂದು ಬಿಂಬಿಸಲಾಗ್ತಿದೆ. ಗ್ರಹಣದ ವೇಳೆ ಮಂಗಳ ಗ್ರಹ ಭೂಮಿಗೆ ನಿಕಟವಾಗಲಿದ್ದು, ಬುಧ ಗ್ರಹ ತನ್ನ ಕಕ್ಷೆಯಿಂದ ದೂರ ಸರಿಯಲಿದೆ.