ಕನ್ನಡ ಚಿತ್ರರಂಗದ ಯಶಸ್ವೀ ನಿರ್ದೇಶಕರ ಸಾಲಿನಲ್ಲಿ ಬಹು ಹಿಂದಿನಿಂದಲೇ ಸ್ಥಾನ ಗಿಟ್ಟಿಸಿಕೊಂಡಿರುವವರು ಗುರು ದೇಶಪಾಂಡೆ. ರಾಜಾಹುಲಿಯಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟು ಆ ಯಶಸ್ಸಿನ ಹಂಗಾಮವನ್ನು ಇದುವರೆಗೂ ಅನೂಚಾನವಾಗಿ ಮುಂದುವರೆಸಿಕೊಂಡು ಬರುತ್ತಿರುವವರು ಗುರು ದೇಶಪಾಂಡೆ. ಅವರು ಇತ್ತೀಚಿನದಿನಗಳಲ್ಲಿ ಜಿ ಸಿನಿಮಾಸ್ ಎಂಬ ಬ್ಯಾನರ್ ಹುಟ್ಟುಹಾಕಿ ಅದರಡಿಯಲ್ಲಿ ಸಿನಿಮಾನಿರ್ಮಾಣಕ್ಕಿಳಿದಿರೋದು ಗೊತ್ತೇ ಇದೆ. ಈ ಬ್ಯಾನರಿನಲ್ಲಿಯೇ ಅವರು ನಿರ್ಮಾಣ ಮಾಡಿರುವ ಜಂಟಲ್ ಮನ್ ಚಿತ್ರವೀಗ ನಾನಾ ದಿಕ್ಕಿನಲ್ಲಿ ಚರ್ಚೆಗೀಡಾಗುತ್ತಿದೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣದ ಹಂತದಲ್ಲಿಯೇ ಜಂಟಲ್ ಮನ್ ಜೋರಾಗಿಯೇ ಸುದ್ದಿ ಮಾಡಿದೆ. ಇದೀಗ ಈ ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ ತಿಂಗಳ ಹದಿನೆಂಟನೇ ತಾರೀಕಿನಂದು ಈ ಲಿರಿಕಲ್ ಸಾಂಗನ್ನು ಅನಾವರಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಆ ಕ್ಷಣಗಳೀಗ ಹತ್ತಿರಾಗುತ್ತಿವೆ. ಹಲವಾರು ವರ್ಷಗಳಿಂದ ಗುರು ದೇಶಪಾಂಡೆಯವರ ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಜಡೇಶ್ ಕುಮಾರ್ ಹಂಪಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಗುರು ದೇಶಪಾಂಡೆ, ಜಡೇಶ್ ಕುಮಾರ್ ಗೆ ಅವಕಾಶ ಕಲ್ಪಿಸಲು ಕಾರಣವಾಗಿರೋದು ಅವರು ಸಿದ್ಧಪಡಿಸಿಕೊಂಡಿದ್ದ ಅಪರೂಪದ ಕಥೆ. ಕನ್ನಡದ ಮಟ್ಟಿಗೆ ತೀರಾ ವಿಶೇಷವಾದ ಕಥೆ ಈ ಸಿನಿಮಾದಲ್ಲಿದೆ. ಈಗಾಗಲೇ ಥರ ಥರದ ಪಾತ್ರಗಳಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್ ಅಂತೂ ಪ್ರೇಕ್ಷಕರೆಲ್ಲ ಅಚ್ಚರಿಗೊಳ್ಳುವಂಥಾ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರಂತೆ. ಪ್ರಜ್ವಲ್ ದೇವರಾಜ್ ಇಡೀ ಜಗತ್ತಿನಲ್ಲಿ ಕೆಲವೇ ಕೆಲವರನ್ನು ಬಾಧಿಸುವಂಥಾ ವಿಚಿತ್ರ ಕಾಯಿಲೆ ಪೀಡಿತ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದು ದಿನದ ಬಹುಣಾಗವನ್ನು ನಿದ್ರೆಯಲ್ಲಿಯೇ ಕಳೆದು ಉಳಿದ ಕೆಲವೇ ಕೆಲ ಗಂಟೆಗಳಲ್ಲಿ ಓರ್ವ ಯುವಕ ಏನೆಲ್ಲ ಮಾಡುತ್ತಾನೆ, ಅಲ್ಲೆದುರಾಗೋಸವಾಲುಗಳನ್ನು ಹೇಗೆಲ್ಲ ಎದುರಿಸುತ್ತಾನೆಂಬ ರೋಚಕ ಕಥೆ ಈ ಸಿನಿಮಾದಲ್ಲಿದೆ. ಈ ಹಿಂದೆ ಮೈಸೂರಿನಲ್ಲಿ ಡಂಪಿಂಗ್ ಯಾರ್ಡಿನ ಕಸದ ರಾಶಿಯಲ್ಲಿ ಮಲಗಿ ಚಿತ್ರೀಕರಣದಲ್ಲಿ ಭಾಗಿಯಾಗುವ ಮೂಲಕ ಪ್ರಜ್ವಲ್ ಸುದ್ದಿ ಮಾಡಿದ್ದರು. ಮುಂದಿನ ವರ್ಷಾರಂಭದಲ್ಲಿ ತೆರೆಗಾಣಲು ಸಜ್ಜಾಗಿರೋ ಜಂಟಲ್ ಮನ್ ಈಗ ಲಿರಿಕಲ್ ವಿಡಿಯೋ ಮೂಲಕ ಪ್ರೇಕ್ಷಕರನ್ನುಮುಖಾಮುಖಿಯಾಗಲು ತಯಾರಾಗಿದ್ದಾನೆ.
ಬೆಂಗಳೂರು: ರಾಜಾಹುಲಿಯಂಥಹ ಹಿಟ್ ಚಿತ್ರವನ್ನು ಕೊಟ್ಟಿರೋ ನಿರ್ದೇಶಕ ಗುರುದೇಶಪಾಂಡೆ ಇದೀಗ ನಿರ್ಮಾಪಕರಾಗಿಯೂ ಹೊಸ ಯಾನ ಆರಂಭಿಸಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿರುವ ಅವರ ಪಾಲಿಗೆ ಚಿತ್ರರಂಗದ ಒಳಹೊರಗಿನ ಆಳವಾದ ಪರಿಚಯವಿದೆ. ಸಿನಿಮಾ ಬಗ್ಗೆ ಎಲ್ಲ ದಿಕ್ಕಿನಿಂದಲೂ ತಿಳಿದುಕೊಂಡೇ ಯುವ ಪ್ರತಿಭೆಗಳು ಸಿನಿಮಾ ಮಾಡುವಂತಾಗಬೇಕೆಂಬುದು ಗುರು ದೇಶಪಾಂಡೆಯವರ ಬಹುಕಾಲದ ಕನಸು. ಆದರೆ ಅದಕ್ಕೆ ಸುಸಜ್ಜಿತವಾದ ಅವಕಾಶಗಳಿಲ್ಲ ಎಂಬುದನ್ನು ಮನಗಂಡಿರುವ ಅವರೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದರ ಫಲವಾಗಿ ಸಿನಿಮಾಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ತಯಾರು ಮಾಡುವಂಥಹ ಜಿ ಸಿನಿಮಾಸ್ ಸಿನಿಮಾ ತರಬೇತಿ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ.
ಎಲ್ಲ ಕ್ಷೇತ್ರಗಳಿಗೂ ಶೈಕ್ಷಣೀಯವಾಗಿ ತಯಾರು ಮಾಡುವಂಥಹ ವ್ಯವಸ್ಥೆ ಇದೆ. ಆದರೆ ಸಿನಿಮಾಗೆ ಮಾತ್ರ ಅಂತಹ ಯಾವ ಸುಸಜ್ಜಿತವಾದ ವ್ಯವಸ್ಥೆಗಳೂ ಇಲ್ಲ. ಆ ಕೊರತೆಯನ್ನು ನೀಗಿ ಪ್ರತಿಭಾವಂತರಿಗೆ ಸಿನಿಮಾ ಕನಸನ್ನು ಸಲೀಸು ಮಾಡುವ ಉದ್ದೇಶದೊಂದಿಗೇ ಜಿ ಅಕಾಡೆಮಿಗೆ ಚಾಲನೆ ಸಿಕ್ಕಿದೆ. ಇದೇ ತಿಂಗಳ 25ರಂದು ಜಿ ಅಕಾಡೆಮಿಯ ತರಗತಿಗಳೆಲ್ಲ ಆರಂಭವಾಗಲಿವೆ. ಅದರೊಳಗಾಗಿ ಆಸಕ್ತರು ದಾಖಲಾತಿ ಪಡೆದುಕೊಳ್ಳಬಹುದು. ಯಾರಿಗೆ ಯಾವ ವಿಭಾಗದಲ್ಲಿಯೇ ಆಸಕ್ತಿ ಇದ್ದರೂ ಅನುಭವಸ್ಥರಿಂದಲೇ ಪಾಠ ಹೇಳಿಸಿಕೊಂಡು, ಪ್ರಾಕ್ಟಿಕಲ್ ಆಗಿಯೂ ತಯಾರಾಗುವಂಥಾ ಅದ್ಭುತ ಅವಕಾಶವನ್ನು ಗುರುದೇಶಪಾಂಡೆ ಈ ಮೂಲಕ ಕಲ್ಪಿಸಿದ್ದಾರೆ.
ಕೆ.ಮಂಜು, ಉದಯ್.ಕೆ ಮೆಹ್ತಾ, ನಿರ್ದೇಶಕರಾದ ದಯಾಳ್ ಪದ್ಮನಾಭನ್, ಭರ್ಜರಿ ಚೇತನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಬಿ.ಎಂ.ಗಿರಿರಾಜ್, ಮೌನೇಶ್ ಬಡಿಗೇರ್, ನವೀನ್ ಕೃಷ್ಣ, ಕೆಂಪರಾಜು, ಕೆ.ಎಸ್.ಚಂದ್ರಶೇಖರ್, ಆರ್.ಜೆ.ನೇತ್ರಾ, ಹೇಮಲತಾ, ಸಂತೋಷ್ ನಾಯಕ್, ಮದನ್-ಹರಿಣಿ, ಗಿರೀಶ್, ಡಿಫರೆಂಟ್ ಡ್ಯಾನಿ, ದೀಪಕ್ ಮತ್ತು ಶ್ರೀನಿವಾಸ್ ಸೇರಿದಂತೆ ಅತಿರಥ ಮಹಾರಥರೆಲ್ಲ ಆಯಾ ವಿಭಾಗಕ್ಕೆ ಬೋಧಿಸಲಿದ್ದಾರೆ. ಹೀಗೆ ನಿರ್ದೇಶನ, ನಿರ್ಮಾಣ ಸೇರಿದಂತೆ ಎಲ್ಲದರಲ್ಲಿಯೂ ಸಂಪೂರ್ಣವಾಗಿ ಪಳಗಿಕೊಳ್ಳುವಂತೆ ಮಾಡಬಲ್ಲ ಭರವಸೆಯನ್ನು ಜಿ ಸಿನಿಮಾಸ್ ನೀಡುತ್ತಿದೆ. ನಾಗರಬಾವಿಯ ದೀಪಾ ಕಾಂಪ್ಲೆಕ್ಸ್ ಸಮೀಪದಲ್ಲಿ ಸುಸಜ್ಜಿತವಾಗಿ ಜಿ ಅಕಾಡೆಮಿ ತರಗತಿಗಳು ನಡೆಯಲಿವೆ.
ಗುರು ದೇಶಪಾಂಡೆ ನಿರ್ದೇಶಕರಾಗಿ ಇದೀಗ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ಶಿಬಿರಾರ್ಥಿಗಳಾಗಿರುವ ಪ್ರತಿಭಾವಂತರನ್ನು ತಮ್ಮ ಅನುಭವದ ಆಧಾರದಲ್ಲಿ ಎಲ್ಲ ನಿಟ್ಟಿನಲ್ಲಿಯೂ ಪರ್ಫೆಕ್ಟ್ ಎಂಬಂತೆ ರೂಪಿಸೋ ಹಂಬಲ ಅವರಲ್ಲಿದೆ. ಒಟ್ಟಾರೆಯಾಗಿ ಜಿ ಅಕಾಡೆಮಿ ಮೂಲಕ ಎಲ್ಲ ವಿಭಾಗಗಳನ್ನು ಅರಿತುಕೊಂಡ ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡುವ ಮಹತ್ವಾಕಾಂಕ್ಷೆ ಗುರುದೇಶಪಾಂಡೆಯವರಿಗಿದೆ.
ಬೆಂಗಳೂರು: ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ನಿರ್ಮಾಪಕರಾಗಿ ರೈನ್ ಬೋ ಚಿತ್ರದ ಮೂಲಕ ಎರಡನೇ ಹೆಜ್ಜೆಯಿಟ್ಟಿದ್ದಾರೆ. ಕೃಷ್ಣ ಅಜೇಯ್ ರಾವ್ ಸೂಪರ್ ಕಾಪ್ ಆಗಿ ಮಿಂಚಲಿರೋ ಈ ಸಿನಿಮಾ ಮುಹೂರ್ತ ಸಮಾರಂಭ ಕೆಲದಿನಗಳ ಹಿಂದಷ್ಟೇ ನಡೆದಿತ್ತು. ಆ ಸಂದರ್ಭದಲ್ಲಿ ಈ ಚಿತ್ರದ ಬಗ್ಗೆ ಕೆಲ ಇಂಟರೆಸ್ಟಿಂಗ್ ವಿಚಾರಗಳೂ ಜಾಹೀರಾಗಿದ್ದವು. ಇದೀಗ ರೈನ್ ಬೋ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ರೈನ್ ಬೋ ಕ್ರೈಂ ಥ್ರಿಲ್ಲರ್ ಜಾನರಿನ ಚಿತ್ರ. ಇದನ್ನು ಎಸ್. ರಾಜವರ್ಧನ್ ನಿರ್ದೇಶನ ಮಾಡಿದ್ದಾರೆ. ಗುರುದೇಶಪಾಂಡೆಯವರ ಗರಡಿಯಲ್ಲಿ ಹಲವಾರು ವರ್ಷಗಳ ಕಾಲ ಪಳಗಿಕೊಂಡಿರುವ ರಾಜವರ್ಧನ್ ಪಾಲಿಗಿದು ಮೊದಲ ಚಿತ್ರ. ಈ ಆರಂಭಿಕ ಹೆಜ್ಜೆಯಲ್ಲಿಯೇ ತಾಂತ್ರಿಕವಾಗಿಯೂ ಮಹತ್ವ ಹೊಂದಿರುವ, ಈವರೆಗೆ ಯಾರೂ ಗಮನಹರಿಸದಂಥಾ ಅಪರೂಪದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈಗ ವಿಶ್ವವನ್ನೇ ವ್ಯಾಪಿಸಿಕೊಂಡಿರೋ ಸೈಬರ್ ಕ್ರೈಂನ ಬೆಚ್ಚಿ ಬೀಳಿಸೋ ವೃತ್ತಾಂತಕ್ಕೆ ಈ ಸಿನಿಮಾ ಕನ್ನಡಿಯಾಗಲಿದೆ ಅನ್ನೋದಕ್ಕೆ ಸಾಕ್ಷಿಯೆಂಬಂತೆ ಈ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಕೃಷ್ಣ ಅಜೇಯ್ ರಾವ್ ಆರಂಭದಿಂದ ಒಂದು ಹಂತದವರೆಗೂ ಲವರ್ ಬಾಯ್ ಆಗಿಯೇ ಕಂಗೊಳಿಸಿದ್ದವರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಆಕ್ಷನ್ ಸ್ವರೂಪದ ಚಿತ್ರಗಳತ್ತಲೇ ವಾಲಿಕೊಂಡಿದ್ದಾರೆ. ರೈನ್ ಬೋದಲ್ಲಂತೂ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರಂತೆ. ಈವತ್ತಿಗೆ ಜನಸಾಮಾನ್ಯರ ಅರಿವಿಗೆ ಬಾರದಂತೆ ಅನಾಹುತ ಸೃಷ್ಟಿಸುತ್ತಿರುವ ಸೈಬರ್ ಕ್ರೈಂನ ಕರಾಳ ಮುಖವೊಂದನ್ನು ಈ ಸಿನಿಮಾ ಪ್ರೇಕ್ಷಕರೆದುರು ಬಿಚ್ಚಿಡಲು ಮುಂದಾಗಿದೆ. ಈಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್ ಕುತೂಹಲಕಾರಿಯಾಗಿ ಮೂಡಿ ಬಂದಿರೋದರಿಂದ ಪ್ರೇಕ್ಷಕರೆಲ್ಲ ರೈನ್ ಬೋದತ್ತ ಆಕರ್ಷಿತರಾಗಿದ್ದಾರೆ.
ಹೆಜ್ಜೆ ಹೆಜ್ಜೆಗೂ ಅಬ್ಬರಿಸುತ್ತಾ ಸಾಗಿ ಬಂದಿದ್ದ ಪಡ್ಡೆಹುಲಿಯೀಗ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಈ ಚಿತ್ರ ನೆಲದ ಸೊಗಡಿನ ಯುವ ಸಮುದಾಯದ ಕಥೆಯೊಂದಿಗೆ, ಎಲ್ಲವನ್ನೂ ದಾಟಿಕೊಂಡು ಗುರಿಯತ್ತ ಮುನ್ನುಗ್ಗೋ ಛಲಕ್ಕೆ ಕಸುವು ತುಂಬುವಂತೆ ಮತ್ತು ಕೇವಲ ಯುವ ಸಮೂಹ ಮಾತ್ರವಲ್ಲದೇ ಒಂದಿಡೀ ಫ್ಯಾಮಿಲಿ ಒಟ್ಟಾಗಿ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಮೂಡಿ ಬಂದಿದೆ. ಉಳಿದೆಲ್ಲ ಭಾವಗಳ ಜೊತೆಗೆ ಕನ್ನಡತನ, ಸಂಗೀತ ಪ್ರೇಮವನ್ನೂ ಉಸಿರಾಗಿಸಿಕೊಂಡಿರೋ ಮಾಸ್ ಗೆಟಪ್ಪಿನ ಪಡ್ಡೆಹುಲಿ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.
ಗುರುದೇಶಪಾಂಡೆ ನಿರ್ದೇಶನದ ಚಿತ್ರಗಳೆಂದರೇನೇ ನೆಲದ ಘಮಲಿನ ಕಥೆಯ ನಿರೀಕ್ಷೆಗಳೇಳುತ್ತವೆ. ಆದರೆ ಕಾಲೇಜು ಸ್ಟೋರಿ ಎಂಬಂತೆ ಬಿಂಬಿತವಾಗಿದ್ದ ಪಡ್ಡೆಹುಲಿಯೂ ಅಂಥಾದ್ದೇ ಸಾರ ಹೊಂದಿರುತ್ತದಾ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು. ಆದರೆ, ಪಡ್ಡೆಹುಲಿಯ ಕಥೆ ಕಾಲೇಜು ಕಾರಿಡಾರಿನಾಚೆಗೂ ಬಳಸಿ ಬಂದು, ಅಪ್ಪಟ ನೆಲದ ಸೊಗಡಿನ ಘಮಲನ್ನು ಪ್ರೇಕ್ಷಕರೆದೆಗೂ ಮೊಗೆದು ತಂದು ಸುರುವಿದೆ. ಅಂಥಾ ಪುಳಕ, ಥ್ರಿಲ್ಲಿಂಗ್, ಮೈನವಿರೇಳಿಸೋ ಸಾಹಸ, ಹನಿಗಣ್ಣಾಗುವಂಥಾ ತಿರುವುಗಳು, ಗಾಢ ಪ್ರೇಮ ಮತ್ತು ಸಂಗೀತಮಯ ಪಯಣ… ಇದಿಷ್ಟೂ ಭಾವಗಳೊಂದಿಗೆ ಪಡ್ಡೆಹುಲಿ ಅಪರೂಪದ ಚಿತ್ರ ನೋಡಿದ ಅನುಭವವೊಂದಕ್ಕೆ ಪ್ರೇಕ್ಷಕರನ್ನೆಲ್ಲ ವಾರಸುದಾರರನ್ನಾಗಿಸುತ್ತದೆ.
ಶಾಲಾ ಆವರಣದಲ್ಲಿ ಕನ್ನಡ ಪ್ರೇಮದ ಹಿಮ್ಮೇಳದೊಂದಿಗೇ ಪಡ್ಡೆಹುಲಿಯ ಕಥೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಕನ್ನಡಕ್ಕೆ ಅವಮಾನಿಸಿದರೆ ಶಾಲೆಯ ಮುಖ್ಯಸ್ಥರ ಕಪಾಳಕ್ಕೆ ಬಾರಿಸಲೂ ಹಿಂದೆ ಮುಂದೆ ನೋಡದ ತಂದೆಯಾಗಿ ಕ್ರೇಜಿóಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಕಥೆಯೆಂಬುದು ಕಾಲೇಜಿನೊಳಗೇ ನಡೆದರೂ ಕೂಡಾ ಅದರ ಭಾವಗಳು ಬದುಕಿನ ನಾನಾ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಕಾಲೇಜೊಂದರ ಭಾವಲೋಕವನ್ನು ಹಸಿ ಹಸಿಯಾಗಿ ಹಿಡಿದಿಡೋ ಚಿತ್ರಗಳು ಸಾಕಷ್ಟು ಬಂದಿರಬಹುದು. ಆದರೆ ಪಡ್ಡೆಹುಲಿಯಷ್ಟು ಪರಿಣಾಮಕಾರಿಯಾದ ಎನರ್ಜಿಟಿಕ್ ಕಥೆಗಳು ತುಂಬಾನೇ ವಿರಳ. ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು ಹಾಕಿರುವ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.
ಇಲ್ಲಿ ಕಷ್ಟದಿಂದಲೇ ಕಾಲೇಜು ಕಾರಿಡಾರಿಗೆ ಕಾಲಿಟ್ಟು ಆ ಬಳಿಕ ತಾನೇ ತಾನಾಗಿ ಆ ಲೋಕದ ನಾನಾ ಪಲ್ಲಟಗಳಿಗೆ ಪಕ್ಕಾಗುವ ಮಧ್ಯಮ ವರ್ಗದ ಹುಡುಗನ ಕಥೆಯಿದೆ. ಈ ಹಾದಿಯಲ್ಲೆದುರಾಗೋ ಎಲ್ಲ ಸವಾಲುಗಳನ್ನೂ ಎದುರಿಸುತ್ತಾ ತಾನಂದುಕೊಂಡಿದ್ದನ್ನು ಸಾಧಿಸಲು ಮುಂದಾಗುವ ಪಕ್ಕಾ ಮಾಸ್ ಪಾತ್ರಕ್ಕೆ ನಾಯಕ ಶ್ರೇಯಸ್ ಜೀವ ತುಂಬಿದ್ದಾರೆ. ಪ್ರತೀ ಫ್ರೇಮಿನಲ್ಲಿಯೂ ಪಳಗಿದ ನಟನಂಥಾ ಪ್ರೌಢ ನಟನೆಯನ್ನೂ ಅವರು ನೀಡಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಅದಕ್ಕೆ ಭರ್ಜರಿಯಾಗಿಯೇ ಸಾಥ್ ಕೊಟ್ಟಿದ್ದಾರೆ. ರವಿಚಂದ್ರನ್, ಸುಧಾ ರಾಣಿ, ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರೂ ಪಡ್ಡೆಹುಲಿಯ ಆವೇಗಕ್ಕೆ ಕಸುವು ತುಂಬಿದ್ದಾರೆ.
ಪಡ್ಡೆಹುಲಿಯ ಕಥೆ ತೆರೆದುಕೊಳ್ಳೋದೇ ಚಿತ್ರದುರ್ಗದ ನೆಲದಿಂದ. ಇಲ್ಲಿನ ಮಧ್ಯಮವರ್ಗದ ಕನ್ನಡ ಮೇಷ್ಟರ ಕುಟುಂಬದ ಕೂಸಾದ ನಾಯಕ ಸಂಪತ್ ರಾಜ್ ಪಾಲಿಗೆ ಸಂಗೀತವೆಂದರೆ ಬಾಲ್ಯದಿಂದಲೂ ಪ್ರಾಣ. ತಾನು ಜಗತ್ತೇ ಬೆರಗಾಗಿ ನೋಡುವಂಥಾ ಸಂಗೀತಗಾರನಾಗಬೇಕೆಂಬ ಕನಸು ಆತನ ಮನಸಲ್ಲಿ ಎಳವೆಯಿಂದಲೇ ಮೊಳಕೆಯೊಡೆದು ಬಿಟ್ಟಿರುತ್ತೆ. ಆದರೆ ಹೆತ್ತವರಿಗೆ ಮಗ ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸ ಪಡೆಯಬೇಕೆಂಬ ಆಸೆ. ಅತ್ತ ಜೀವದಂತೆ ಪ್ರೀತಿಸೋ ಹೆತ್ತವರ ಆಸೆಯನ್ನೂ ಹೊಸಕುವಂತಿಲ್ಲ. ತನ್ನ ಕನಸನ್ನೂ ಕೈ ಬಿಡುವಂತಿಲ್ಲ. ಕಡೆಗೂ ಹೆತ್ತವರ ಆಸೆಯಂತೆಯೇ ದುರ್ಗದಿಂದ ಬೆಂಗಳೂರಿಗೆ ಬಂದು ಇಂಜಿನಿಯರಿಂಗ್ ಕಾಲೇಜಿಗೆ ಅಡಿಯಿರಿಸೋ ದುರ್ಗದ ಪಡ್ಡೆ ಹುಲಿಗೆ ನಾನಾ ಸವಾಲುಗಳೆದುರಾಗುತ್ತವೆ. ಅವಮಾನಗಳು ಎದೆಗಿರಿಯುತ್ತವೆ. ಇದೆಲ್ಲದರಾಚೆಗೆ ಪಡ್ಡೆಹುಲಿ ಸಂಗೀತಗಾರನಾಗೋ ಕನಸನ್ನು ನನಸು ಮಾಡಿಕೊಳ್ತಾನಾ ಎಂಬುದೇ ಅಸಲೀ ಕುತೂಹಲ. ಇದನ್ನಿಟ್ಟುಕೊಂಡು ಯಾರೇ ಚಿತ್ರಮಂದಿರಕ್ಕೆ ತೆರಳಿದರೂ ಪಡ್ಡೆ ಹುಲಿಯ ಕಡೆಯಿಂದ ಅಪೂರ್ವ ಅನುಭವವಾಗೋದು ಗ್ಯಾರೆಂಟಿ!
ದುರ್ಗದಿಂದ ಆರಂಭವಾಗಿ ಕಾಲೇಜು ಕಾರಿಡಾರಿನಲ್ಲಿ ಹರಿದಾಡೋ ಈ ಕಥೆ ಅಪರೂಪದ್ದು. ಫ್ಯಾಮಿಲಿ, ಪ್ರೀತಿ, ಸಾಹಸ, ಸೆಂಟಿಮೆಂಟ್ ಸೇರಿದಂತೆ ನಾನಾ ಭಾವ ಹೊಂದಿರೋ ಈ ಕಥೆಯಲ್ಲಿ ಆಪ್ತವಾಗೋದು ಪಡ್ಡೆಹುಲಿಯ ಗೆಲ್ಲುವ ಛಲ. ಈ ಚಿತ್ರವನ್ನು ಯಾರೇ ನೋಡಿದರೂ ಪಡ್ಡೆಹುಲಿಯಾಗಿ ಅಬ್ಬರಿಸಿರೋ ಶ್ರೇಯಸ್ ಪಾತ್ರ ಮನಸೊಳಗೆ ಪ್ರತಿಷ್ಠಾಪಿತವಾಗುತ್ತೆ. ಶ್ರೇಯಸ್ ಅವರಂತೂ ಇದು ಮೊದಲ ಚಿತ್ರವೆಂಬ ಸುಳಿವೇ ಬಿಟ್ಟುಕೊಡದಂತೆ ಅಬ್ಬರಿಸಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ. ಥರ ಥರದ ಗೆಟಪ್ಪುಗಳಲ್ಲಿ ಅದಕ್ಕೆ ತಕ್ಕುದಾಗಿ ಅಭಿನಯಿಸೋ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಈ ಮೂಲಕವೇ ಮಾಸ್ ಹೀರೋ ಆಗಿ ನೆಲೆಗೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಅಖಂಡ ಹನ್ನೊಂದು ಹಾಡುಗಳು ಹೊರ ಬಂದಿದ್ದಕ್ಕೂ ಕಥೆಗೂ ನೇರಾ ನೇರ ಕನೆಕ್ಷನ್ನುಗಳಿವೆ. ಅದೇನೆಂಬುದೂ ಕೂಡಾ ಈ ಕಥೆಯ ಪ್ರಧಾನ ಸಾರ.
ಹೊಸಾ ನಾಯಕನ ಆಗಮನಕ್ಕೆ ಏನೇನು ಬೇಕೋ ಅಂಥಾ ಎಲ್ಲ ಅಂಶಗಳೊಂದಿಗೆ ಗುರುದೇಶಪಾಂಡೆ ಅವರು ಪಡ್ಡೆಹುಲಿಯನ್ನು ರೂಪಿಸಿದ್ದಾರೆ. ರವಿಚಂದ್ರನ್ ಸೇರಿದಂತೆ ಎಲ್ಲ ಪಾತ್ರಗಳಲ್ಲಿಯೂ ಹೊಸತನವಿದೆ. ನಿರ್ಮಾಪಕ ರಮೇಶ್ ರೆಡ್ಡಿಯವರ ಧಾರಾಳತನವೆಂಬುದು ಪಡ್ಡೆಹುಲಿಯನ್ನು ಪ್ರತೀ ಹಂತದಲ್ಲಿಯೂ ಲಕ ಲಕಿಸುವಂತೆ ಮಾಡಿದೆ. ಕೊಂಚ ಆಚೀಚೆ ಆಗಿದ್ದರೂ ಸಾಮಾನ್ಯ ಕಥೆಯಾಗಬಹುದಾಗಿದ್ದ ಪಡ್ಡೆಹುಲಿಯ ಚಮತ್ಕಾರವನ್ನು ವಿಶೇಷವಾಗಿಸಿರೋದು ನಿರ್ದೇಶಕರ ಜಾಣ್ಮೆ. ಒಟ್ಟಾರೆಯಾಗಿ ಕನ್ನಡಕ್ಕೆ ಮಾಸ್ ಹೀರೋ ಎಂಟ್ರಿಯಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಶ್ರೇಯಸ್ ಪಡ್ಡೆಹುಲಿಯಾಗಿ ಖಂಡಿತಾ ಇಷ್ಟವಾಗುತ್ತಾರೆ.
ಸಿನಿಮಾಗಳಲ್ಲಿ ಜನಮೆಚ್ಚಿದ ನಟರ ಪ್ರಭೆಯನ್ನು ಬಳಸಿಕೊಳ್ಳೋದು ಮಾಮೂಲು. ಆದರೆ ಅಂಥಾ ನಟರ ಅಸಲಿ ಅಭಿಮಾನಿಗಳೇ ಥ್ರಿಲ್ ಆಗುವಂತೆ ಚಿತ್ರವೊಂದನ್ನು ರೂಪಿಸೋದು ಸವಾಲಿನ ಸಂಗತಿ. ಈ ವಿಚಾರದಲ್ಲಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರ ಗೆದ್ದಿದೆ. ಅದರಿಂದಾಗಿಯೇ ಇಡೀ ಕರ್ನಾಟಕದ ಉದ್ದಗಲಕ್ಕೂ ಹರಡಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳೆಲ್ಲ ಪಡ್ಡೆಹುಲಿಯತ್ತ ಆಕರ್ಷಿತರಾಗಿದ್ದಾರೆ.
ಎಂ.ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ಈ ಸಿನಿಮಾದೊಳಗಿನ ವಿಷ್ಣು ಅಭಿಮಾನ ಥರ ಥರದಲ್ಲಿ ಅನಾವರಣಗೊಳ್ಳುತ್ತಲೇ ಬಂದಿದೆ. ಈ ಅಭಿಮಾನದ ಹಿಂದೆ ರಿಯಲ್ ಆದ ಕಥಾನಕಗಳೂ ಇವೆ. ಯಾಕಂದ್ರೆ ಈ ಚಿತ್ರದಲ್ಲಿ ವಿಷ್ಣು ಅಭಿಮಾನಿಯಾಗಿ ನಟಿಸಿರೋ ಶ್ರೇಯಸ್ ನಿಜ ಜೀವನದಲ್ಲಿಯೂ ಸಾಹಸ ಸಿಂಹನ ಅಪ್ಪಟ ಅಭಿಮಾನಿ!
ಅಷ್ಟಕ್ಕೂ ಶ್ರೇಯಸ್ ಅವರ ತಂದೆ ನಿರ್ಮಾಪಕರಾದ ಕೆ.ಮಂಜು ಅವರೂ ವಿಷ್ಣು ಅಭಿಮಾನಿಯೇ. ಮಂಜು ಅವರು ವಿಷ್ಣುವರ್ಧನ್ ಅವರ ನಿಕಟ ಸಂಪರ್ಕ ಹೊಂದಿದ್ದವರು. ವಿಷ್ಣು ಮೇಲೆ ಅಪಾರವಾದ ಪ್ರೀತಿ ಹೊಂದಿರೋ ಮಂಜು ತಮ್ಮ ಮಗನ ಮೊದಲ ಚಿತ್ರದ ಮೂಲಕ ಅದನ್ನು ಹೊರಗೆಡವಿದ್ದಾರೆ. ವಿಷ್ಣು ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ರಾಪ್ ಸಾಂಗ್ ಸೇರಿದಂತೆ ಎಲ್ಲದರಲ್ಲಿಯೂ ಪಡ್ಡೆಹುಲಿ ವಿಷ್ಣು ಅಭಿಮಾನದಿಂದಲೇ ಮಿರುಗುತ್ತಿದೆ!
ಬೆಂಗಳೂರು: ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದ ಅದ್ದೂರಿತನ ಎಂಥಾದ್ದೆಂಬುದಕ್ಕೆ ಹಾಡುಗಳೇ ಸೂಕ್ತ ಉದಾಹರಣೆಯಾಗಿ ಎಲ್ಲೆಡೆ ಹರಿದಾಡುತ್ತಿವೆ. ಬಹುಶಃ ಓರ್ವ ಹೊಸಾ ಹೀರೋನನ್ನು ನಂಬಿಕೊಂಡು ಇಷ್ಟು ದೊಡ್ಡ ಮಟ್ಟದ ಬಜೆಟ್ಟಿನಲ್ಲಿ ತಯಾರಾದ ಕನ್ನಡದ ಮೊದಲ ಸಿನಿಮಾ ಪಡ್ಡೆಹುಲಿಯೇ ಇರಬೇಕು!
ಹೊಸಾ ಹೀರೋ ಅಂದರೇನೇ ಬೆಚ್ಚಿಬಿದ್ದು ಹಿಂದೆ ಸರಿಯೋರೇ ಹೆಚ್ಚು. ಆದರೆ ಹೊಸಾ ಹುಡುಗ ಶ್ರೇಯಸ್ ನಾಯಕನಾಗಿರೋ ಪಡ್ಡೆಹುಲಿ ಚಿತ್ರಕ್ಕೆ ನಿರ್ಮಾಪಕ ಎಂ.ರಮೇಶ್ ರೆಡ್ಡಿಯವರು ಹಣ ಖರ್ಚು ಮಾಡುತ್ತಿರೋ ಪರಿ ಕಂಡು ಗಾಂಧಿನಗರದ ಮಂದಿಯೇ ಅವಾಕ್ಕಾಗಿದ್ದಾರೆ. ಪ್ರೇಕ್ಷಕರೂ ಅಚ್ಚರಿಗೊಂಡಿದ್ದಾರೆ. ಆದರೆ ನಿರ್ಮಾಪಕ ರಮೇಶ್ ರೆಡ್ಡಿಯವರದ್ದು ಮಾತ್ರ ಹೇಗಾದರೂ ಸರಿ, ಸಿನಿಮಾ ಅಚ್ಚಕಟ್ಟಾಗಿ, ಅದ್ದೂರಿಯಾಗಿ ಮೂಡಿ ಬರಬೇಕೆನ್ನುವುದೊಂದೇ ಅಚಲ ಉದ್ದೇಶ!
ಚಿತ್ರೀಕರಣಕ್ಕೂ ಮುನ್ನ ಮಾಡಿರೋ ಪ್ಲಾನಿಗಿಂತಲೂ ಕೊಂಚ ಕಾಸು ಖರ್ಚಾದರೂ ಕೊಸರಾಡೋದು ಮಾಮೂಲು. ನಿರ್ಮಾಪಕರ ಬಾಧೆಯೂ ಅಂಥಾದ್ದೇ ಇರುತ್ತೆ. ಆದರೆ ರಮೇಶ್ ರೆಡ್ಡಿಯವರ ಔದಾರ್ಯ ಕಂಡು ನಿರ್ದೇಶಕ ಗುರುದೇಶಪಾಂಡೆ ಸೇರಿದಂತೆ ಇಡೀ ಚಿತ್ರತಂಡವೇ ಅಚ್ಚರಿಗೊಂಡಿದೆ. ಯಾಕೆಂದರೆ ಪಡ್ಡೆಹುಲಿಯನ್ನು ಅಂದಗಾಣಿಸೋ ಯಾವ ಐಡಿಯಾಗಳಿಗೂ ರಮೇಶ್ ರೆಡ್ಡಿಯವರು ಬೇಡ ಅನ್ನಲೇ ಇಲ್ಲ. ಅವರು ಅಷ್ಟೊಂದು ಪ್ರೀತಿ, ಕಾಳಜಿ ತೋರಿಸದೇ ಇದ್ದಿದ್ದರೆ ಬರೋಬ್ಬರಿ ಹನ್ನೊಂದು ಹಾಡುಗಳು ರೂಪುಗೊಳ್ಳೋದೂ ಸಾಧ್ಯವಿರುತ್ತಿರಲಿಲ್ಲ!
ನಿರ್ಮಾಪಕರು ಹೀಗೆ ಪ್ರೀತಿಯಿಂದ ಆರೈಕೆ ಮಾಡಿ ಮೈ ನೇವರಿಸುತ್ತಾ ಬಂದ ಕಾರಣದಿಂದಲೇ ಪಡ್ಡೆಹುಲಿ ಈವತ್ತು ಕೊಬ್ಬಿ ಘರ್ಜಿಸುತ್ತಿದೆ. ಆದ್ದರಿಂದಲೇ ಪ್ರೇಕ್ಷಕರೆಲ್ಲ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಪ್ರೇಕ್ಷಕರಿಗೆ ಹತ್ತಿರವಾದದ್ದೇ ಹಾಡುಗಳ ಮೂಲಕ. ಈ ವಿಚಾರದಲ್ಲಿ ಈ ಚಿತ್ರದ ದಾಖಲೆಯನ್ನು ಯಾರೂ ಸದ್ಯಕ್ಕೆ ಮುರಿಯೋದು ಕಷ್ಟವಿದೆ. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ!
ಬದುಕು ಜಟಕಾ ಬಂಡಿ ಎಂಬ ಈ ಹಾಡು ಇಂದು ರಾತ್ರಿ ಒಂಬತ್ತು ಘಂಟೆಗೆ ಪಿಆರ್ ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ. ಹೀಗೆ ಹೊರ ಬರಲಿರೋ ಲಿರಿಕಲ್ ವೀಡಿಯೋ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ.
ಹಲವಾರು ವಿಚಾರಗಳಲ್ಲಿ ಪಡ್ಡೆಹುಲಿ ಮುಖ್ಯವಾಗುತ್ತದಾದರೂ ಶ್ರೇಯಸ್ ನಾಯಕನಾಗಿ ಲಾಂಚ್ ಆಗುತ್ತಿರೋ ಈ ಚಿತ್ರದ ಬಗ್ಗೆ ಹೇಳ ಹೊರಟರೆ ಮೊದಲು ಕಾಣಸಿಗೋದೇ ಹಾಡುಗಳ ಮೆರವಣಿಗೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಮಾಡಿರೋ ಹನ್ನೊಂದು ಹಾಡುಗಳೂ ಈಗ ಟ್ರೆಂಡಿಂಗ್‍ನಲ್ಲಿವೆ. ಅದರಲ್ಲಿ ಐದು ಹಾಡುಗಳಂತೂ ನಿಜಕ್ಕೂ ವಿಶೇಷವಾದವುಗಳು. ಅದರಲ್ಲಿ ಈಗ ಬಿಡುಗಡೆಯಾಗಲಿರೋ ಬದುಕು ಜಟಕಾಬಂಡಿ ಕೂಡಾ ಸೇರಿಕೊಂಡಿದೆ.
ಬಹುಶಃ ಪ್ರೇಮಲೋಕದ ನಂತರದಲ್ಲಿ ಪಡ್ಡೆಹುಲಿಯೇ ಹಾಡುಗಳ ವಿಚಾರದಲ್ಲಿ ಫಸ್ಟ್. ಇಷ್ಟು ಸಂಖ್ಯೆಯ ಹಾಡುಗಳು ಯಾವ ಚಿತ್ರದಲ್ಲಿಯೂ ಇರಲಿಲ್ಲ. ಅಷ್ಟು ಸಂಖ್ಯೆಯ ಹಾಡುಗಳೆಲ್ಲವೂ ಹಿಟ್ ಆಗಿವೆ ಅನ್ನೋದು ಪಡ್ಡೆಹುಲಿಯ ನಿಜವಾದ ಹೆಗ್ಗಳಿಕೆ.
ಬೆಂಗಳೂರು: ಪ್ರತೀ ಹಾಡುಗಳನ್ನೂ ಕೂಡಾ ವಿಶೇಷವಾಗಿಯೇ ಹೊರ ತರಬೇಕೆಂಬ ಇರಾದೆ ಪಡ್ಡೆಹುಲಿ ಚಿತ್ರದ ನಿರ್ದೇಶಕ ಗುರುದೇಶಪಾಂಡೆ ಅವರದ್ದು. ಇಂಥಾ ಇಂಗಿತ ಮತ್ತು ಶ್ರದ್ಧೆಯ ಕಾರಣದಿಂದಲೇ ಈವರೆಗೆ ಹೊರ ಬಂದಿರೋ ಹಾಡುಗಳೆಲ್ಲವೂ ಹೊಸಾ ಅಲೆಯೊಂದಿಗೆ ಪ್ರೇಕ್ಷಕರ ಮನಸು ತಟ್ಟಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಇದಂತೂ ಪಕ್ಕಾ ಡಿಫರೆಂಟಾಗಿದೆ!
ನಿರ್ದೇಶಕ ಗುರುದೇಶಪಾಂಡೆಯವರ ಕನಸಿಗೆ ಸದಾ ಸಾಥ್ ನೀಡುತ್ತಾ ಬಂದಿರುವವರು ಅಜನೀಶ್ ಲೋಕನಾಥ್. ಸಮ್ಮೋಹಕವಾದ ಹಾಡುಗಳನ್ನೇ ನೀಡುತ್ತಾ ಬಂದಿರೋ ಅಜನೀಶ್ ಇದೀಗ ಪ್ರಸಿದ್ಧ ಭಾವಗೀತೆಯೊಂದಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಬಿ.ಆರ್.ಲಕ್ಷ್ಮಣರಾಯರು ಬರೆದಿರುವ ಹೇಳಿ ಹೋಗು ಕಾರಣ ಎಂಬ ಭಾವ ಗೀತೆಗೆ ಬೆರಗಾಗಿಸುವಂಥಾ ಸಂಗೀತ ನೀಡಿದ್ದಾರೆ.
ಸಿದ್ಧಾರ್ಥ್ ಮಹಾದೇವನ್ ಮತ್ತು ಗುಬ್ಬಿ ಹಾಡಿರುವ ಈ ಹಾಡೀಗ ಅನಾವರಣಗೊಂಡಿದೆ. ಒಂದು ಕಾಲದಲ್ಲಿ ಹೇಳಿ ಹೋಗು ಕಾರಣ ಎಂಬ ಈ ಹಾಡು ಸಿ.ಅಶ್ವತ್ಥ್ ಅವರ ಕಂಠದಲ್ಲಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಅದು ಸಾರ್ವಕಾಲಿಕ. ಇದೀಗ ಅಜನೀಶ್ ಅದೇ ಹಾಡನ್ನು ಈ ತಲೆಮಾರಿನ ಮನಸ್ಥಿತಿಗೆ ಒಪ್ಪುವಂಥಾ ಸಂಗೀತದೊಂದಿಗೆ ಸಿದ್ಧಗೊಳಿಸಿದ್ದಾರೆ. ಈ ಹಾಡೀಗ ಈ ಹಿಂದೆ ಬಿಡುಗಡೆಯಾಗಿದ್ದ ಪಡ್ಡೆ ಹುಲಿ ಹಾಡುಗಳನ್ನೇ ಮೀರಿಸುವಂತೆ ಎಲ್ಲೆಡೆ ಹರಿದಾಡುತ್ತಿದೆ.
ಈ ಮೂಲಕವೇ ಶ್ರೇಯಸ್ ಅಭಿನಯದ ಪಡ್ಡೆಹುಲಿ ಮತ್ತೊಂದು ಥರದಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆಯ ಹಾದಿಯಲ್ಲಿರೋ ಈ ಸಿನಿಮಾದ ಬಗೆಗಿರುವ ಕ್ರೇಜ್ ಈಗ ಹಾಡುಗಳ ಮೂಲಕವೇ ಮತ್ತಷ್ಟು ಲಕಲಕಿಸಲಾರಂಭಿಸಿದೆ.
ಬೆಂಗಳೂರು: ಇನ್ನೇನು ವಾರ ಕಳೆದರೆ ಪ್ರೇಮಿಗಳ ದಿನ ಬರುತ್ತೆ. ತುಸು ಕಂಪಿಸುತ್ತಲೇ ಅದೆಷ್ಟೋ ಯುವ ಮನಸುಗಳು ಆ ದಿನದ ಪ್ರೇಮ ಪರೀಕ್ಷೆಗೆ ತಯಾರಾಗುತ್ತಿವೆ. ಇಂಥಾ ಯಾವ ಭಯವೂ ಇಲ್ಲದೇ ಯಶಸ್ವಿಯಾಗಿ ಉತ್ತಮ ಶ್ರೇಣಿಯೊಂದಿಗೇ ಈ ಪರೀಕ್ಷೆ ಪಾಸು ಮಾಡಬಹುದಾದ ಸೂತ್ರವೊಂದನ್ನು ಪಡ್ಡೆಹುಲಿ ಹಾಡು ಹೊತ್ತು ತರುತ್ತಿದೆ. ಪ್ರೇಮಿಗಳಿಗೆಂದೇ ತಯಾರಾಗಿರೋ ಈ ಹಾಡಿನ ಮೂಲಕ ಪಡ್ಡೆಹುಲಿಯ ಪ್ರೇಮ ಪಾಂಡಿತ್ಯವೂ ಜಾಹೀರಾಗಲಿದೆ.
ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಂಬಂಥಾ ಈ ಹಾಡನ್ನು ಇದೇ ಫೆಬ್ರವರಿ 11ರಂದು ಸಂಜೆ 7 ಘಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ವೀಡಿಯೋ ಸಾಂಗ್ ಪ್ರೇಮ ಪರೀಕ್ಷೆಯನ್ನ ಯಶಸ್ವಿಯಾಗಿ ಎದುರಿಸೋ ಸೂತ್ರಗಳು, ಅಮೂಲ್ಯವಾದ ಟಿಪ್ಸ್ ಗಳನ್ನೂ ಹೊಂದಿದೆಯಂತೆ.
ಇದು ನಿರ್ದೇಶಕ ಗುರುದೇಶಪಾಂಡೆಯವರ ಬತ್ತಳಿಕೆಯಿಂದ ಹೊರ ಬರುತ್ತಿರುವ ಮತ್ತೊಂದು ಬಾಣ. ಇದೊಂಥರಾ ಪ್ರತೀ ಯುವ ಮನಸುಗಳನ್ನು ನೇರವಾಗಿ ತಲುಪುವಂಥಾ ಪ್ರೇಮ ಬಾಣವೂ ಹೌದು. ಈಗಾಗಲೇ ಹಾಡುಗಳ ಮೂಲಕ ಪಡ್ಡೆಹುಲಿ ಯುವ ಮನಸುಗಳನ್ನ ಆವರಿಸಿಕೊಂಡಿದೆ. ಈ ಕಾರಣದಿಂದಲೇ ಈ ವರೆಗೆ ಬಿಡುಗಡೆಯಾಗಿರೋ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್‍ನಲ್ಲಿವೆ.
ಪ್ರೇಮಿಗಳಿಗೆ ಗಿಫ್ಟ್ ಎಂಬಂತೆ ಬಿಡುಗಡೆಗೆ ರೆಡಿಯಾಗಿರೋ ಹಾಡೂ ಕೂಡಾ ಅಂಥಾದ್ದೇ ಕಮಾಲ್ ಸೃಷ್ಟಿಸೋ ಭರವಸೆ ಚಿತ್ರತಂಡದಲ್ಲಿದೆ.
ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಹಾಡೀಗ ಎಲ್ಲೆಂದರಲ್ಲಿ ಹರಿದಾಡುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋ ನಾ ತುಂಬಾ ಹೊಸಬ ಬಾಸು ಎಂಬ ಹಾಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ. ಇದೇ ಖುಷಿಯಲ್ಲಿ ಮಿಂದೇಳುತ್ತಿದ್ದ ಚಿತ್ರತಂಡಕ್ಕೆ ಮತ್ತೊಂದು ಸಂತಸವೂ ಕೈ ಹಿಡಿದಿದೆ. ಅದಕ್ಕೆ ಕಾರಣವಾಗಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಈ ಹಾಡಿನ ಬಗ್ಗೆ ವ್ಯಕ್ತಪಡಿಸಿರೋ ಮೆಚ್ಚುಗೆ!
ಅತ್ತ ಯೂಟ್ಯೂಬ್ ನಲ್ಲಿ ಸದರಿ ಹಾಡು ಟ್ರೆಂಡ್ ಕ್ರಿಯೇಟ್ ಮಾಡುತ್ತಲೇ ಇತ್ತ ದರ್ಶನ್ ಅವರು ಇದನ್ನು ಕೊಂಡಾಡಿದ್ದಾರೆ. ನಾಯಕನಾಗಿ ಶ್ರೇಯಸ್ ಹಾಕಿರೋ ಎಫರ್ಟ್ ಬಗ್ಗೆಯೂ ಮನದುಂಬಿ ಮೆಚ್ಚುಗೆ ಸೂಚಿಸಿದ್ದಾರೆ.
ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂದಿರೋ ದರ್ಶನ್, ಚಿತ್ರರಂಗಕ್ಕೆ ಅನೇಕರು ಬರುತ್ತಾರೆ. ಆದರೆ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡು ಅಖಾಡಕ್ಕಿಳಿಯುವವರು ಕಡಿಮೆ. ಆದರೆ ಕೆ.ಮಂಜು ಅವರ ಪುತ್ರ ಶ್ರೇಯಸ್ ಸಂಪೂರ್ಣ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಅದು ಈಗಾಗಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಶ್ರೇಯಸ್, ನಿರ್ದೇಶಕರಾದ ಗುರುದೇಶಪಾಂಡೆ ಸೇರಿ ಇಡೀ ಚಿತ್ರ ತಂಡಕ್ಕೆ ಒಳ್ಳೇದಾಗಲಿ. ಪಡ್ಡೆಹುಲಿ ಚಿತ್ರ ದೊಡ್ಡ ಮಟ್ಟದ ಯಶ ದಾಖಲಿಸಲಿ ಅಂತ ದರ್ಶನ್ ಹಾರೈಸಿದ್ದಾರೆ.
ನಾ ತುಂಬಾ ಹೊಸಬ ಬಾಸು ಹಾಡಂತೂ ಈಗ ಎಲ್ಲ ಪ್ರೇಕ್ಷಕರನ್ನೂ ಮೋಡಿ ಮಾಡಿ ಮಾಡಿದೆ. ಯೂಟ್ಯೂಬ್‍ನಲ್ಲಂತೂ ಟ್ರೆಂಡಿಂಗ್ ಅನ್ನು ಈ ಕ್ಷಣದವರೆಗೂ ಕಾಯ್ದುಕೊಂಡಿದೆ. ಶ್ರೇಯಸ್ ಎನರ್ಜಿ, ಅಭಿನಯ ಮತ್ತು ಸಾಹಿತ್ಯದ ಖದರ್ ಸೇರಿದಂತೆ ಎಲ್ಲವೂ ಜನಮನ ಸೆಳೆದುಕೊಂಡಿದೆ.