Tag: ಗುರುತು

  • ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

    ಐಸಿಯುನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಇಲಿ ಕಚ್ಚಿದ ಗುರುತುಗಳು ಪತ್ತೆ!

    ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಮೃತಪಟ್ಟಿದ್ದ 70 ವರ್ಷದ ವ್ಯಕ್ತಿಯ ದೇಹದಲ್ಲಿ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

    ಸೋಮವಾರ ರಾತ್ರಿ ಸುಖಾ ಸಪ್ತಾರ ಹಳ್ಳಿಯ ವಿರೇಂದ್ರ ಚಾದರ್ ಅವರ ತಂದೆ ಜಗದೀಶ್ ಚಾದರ್(70) ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಸೋಮವಾರ ಐಸಿಯುನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಮೃತದೇಹವನ್ನು ಪಡೆದುಕೊಳ್ಳುವಾಗ ಇಲಿ ಕಚ್ಚಿದ ಗುರುತುಗಳು ಪತ್ತೆಯಾಗಿದೆ.

    ಮಧ್ಯರಾತ್ರಿ 2 ಗಂಟೆಗೆ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು. ಮೃತಪಟ್ಟ ದೇಹವನ್ನು ಪಡೆದುಕೊಳ್ಳುವಾಗ ದೇಹದ ಎಡಗಣ್ಣಿನ ಬಳಿ ಕೆಲವು ಗಂಭೀರ ಗುರುತುಗಳಾಗಿದ್ದವು ಮತ್ತು ಆ ಗಾಯಗಳಿಗೆ ಮುಲಾಮು ಹಾಕಲಾಗಿತ್ತು. ಅದನ್ನು ಕಂಡು ಏನಿದು ಎಂದು ಪ್ರಶ್ನಿಸಿದ್ದಾಗ ಸಿಬ್ಬಂದಿ ಇಲಿ ಕಚ್ಚಿದೆ ಎಂದು ಹೇಳಿದ್ದಾರೆ ಎಂಬುದಾಗಿ ವೀರೇಂದ್ರ ಚಾದರ್ ತಿಳಿಸಿದ್ದಾರೆ.

    ಸಿವಿಲ್ ಸರ್ಜನ್ ಡಾ. ಮಮ್ತಾ ಟಿಮೊರಿರವರು ಈ ಘಟನೆ ನನಗೆ ಬುಧವಾರ ಬೆಳಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಯಾರೊಬ್ಬ ಸಿಬ್ಬಂದಿಯೂ ನನ್ನ ಗಮನಕ್ಕೆ ತಂದಿಲ್ಲ. ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದು ತನಿಖೆಗೆ ಆದೇಶಿಸಿದ್ದೇನೆ. ಇಲಿಗಳನ್ನು ನಿಯಂತ್ರಿಸಲು ಈಗಾಗಲೇ ಇಂದೋರ್ ಮೂಲದ ಕ್ರೀಮಿನಾಶಕ ಕಂಪೆನಿಯನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದರು.

    ಮಾನವ ಹಕ್ಕು ಕಾರ್ಯಕರ್ತ ಮನೋಜ್ ದಿವಾರಿಯಾ ಪ್ರತಿಕ್ರಿಯಿಸಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ಇದೇ ಮೊದಲ ಬಾರಿ ಅಲ್ಲ ಈ ಹಿಂದೆಯೂ ಸಂಭವಿಸಿತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಐಸಿಯು ನಲ್ಲಿ ಇಲಿಗಳು ಕಂಡುಬಂದಿರುವುದು ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ವಿಚಾರಣೆ ಮಾಡಲು ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅತ್ಯಾಚಾರ ಸಂತ್ರಸ್ತ ಮಕ್ಕಳ ಬ್ಲರ್ ಫೋಟೋಗಳನ್ನೂ ಪ್ರಕಟಿಸುವಂತಿಲ್ಲ: ಮಾಧ್ಯಮಗಳಿಗೆ ಸುಪ್ರೀಂ

    ಅತ್ಯಾಚಾರ ಸಂತ್ರಸ್ತ ಮಕ್ಕಳ ಬ್ಲರ್ ಫೋಟೋಗಳನ್ನೂ ಪ್ರಕಟಿಸುವಂತಿಲ್ಲ: ಮಾಧ್ಯಮಗಳಿಗೆ ಸುಪ್ರೀಂ

    ನವದೆಹಲಿ: ಇನ್ನು ಮುಂದೆ ಅತ್ಯಾಚಾರ ಸಂತ್ರಸ್ತ ಮಕ್ಕಳ ಫೋಟೋವನ್ನು ಬ್ಲರ್ ಮಾಡಿ ಮಾಧ್ಯಮಗಳು ಸುದ್ದಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ.

    ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಮಕ್ಕಳ ಗುರುತು ಬಹಿರಂಗ ಕುರಿತು ಸ್ವಯಃ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಾಲಯ ಮಾಧ್ಯಮಗಳಿಗೆ ಸೂಚನೆ ನೀಡಿದೆ.

    ಕಳೆದ ಕೆಲ ದಿನಗಳ ಬಿಹಾರದ ಅಪ್ರಾಪ್ತ ಬಾಲಕಿಯರ ಮೇಲೆ ವಸತಿ ನಿಯಲಯದ ಅಧಿಕಾರಿಗಳೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದ ಬಳಿಕ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಸರ್ಕಾರ ಹಾಗೂ ಬಿಹಾರ ರಾಜ್ಯಕ್ಕೆ ನೋಟಿಸ್ ಜಾರಿ ಮಾಡಿದೆ.

    ಬಿಹಾರದ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸುತ್ತಿದ್ದ ವಸತಿ ನಿಲಯದಲ್ಲಿದ್ದ ಸುಮಾರು 40 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೇ ಈ ಕುರಿತು ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಸಹ ಲೈಂಗಿಕ ದೌಜನ್ಯ ನಡೆದಿರುವುದನ್ನು ಖಚಿತ ಪಡಿಸಿತ್ತು. ಈ ವರದಿಯ ಅನ್ವಯ ಎನ್‍ಜಿಒ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ವಸತಿ ನಿಲಯದಲ್ಲಿದ್ದ ಎಲ್ಲಾ ಬಾಲಕಿಯನ್ನು ರಕ್ಷಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ರಾಜ್ಯಪಾಲರು ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಇಂತಹ ಇತರೇ ಎನ್‍ಜಿಒ ಗಳ ವಿರುದ್ಧ ನೇರ, ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.

    ಬಿಹಾರದ ಮುಜಾಫರ್ ನಗರದ ಬ್ರಿಜೆಷ್ ಠಾಕೂರ್ ಎಂಬಾತ ತನ್ನ ಎನ್‍ಜಿಒ ಅಡಿ ಎರಡು ಬಾಲಕಿಯರ ವಸತಿ ನಿಲಯಗಳನ್ನು ನಡೆಸುತ್ತಿದ್ದ. ಈ ವಸತಿ ನಿಲಯದಲ್ಲಿದ್ದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೇ 11 ಬಾಲಕಿಯರು ವಸತಿ ನಿಲಯದಿಂದ ನಾಪತ್ತೆಯಾಗಿದ್ದರು.

    ವಿಚಾರಣೆ ವೇಳೆ ದೇಶದಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಉದಾಹಣೆಯಾಗಿ ನೀಡಿದ ನ್ಯಾಯಾಲಯ, ಅಪ್ರಾಪ್ತ ಮಕ್ಕಳ ಗುರುತು ಬಹಿರಂಗವಾದ ಬಳಿಕ ಬಾಲಕಿಯರ ಭವಿಷ್ಯ ಮೇಲೆ ಬೀಳುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿತು.

    ಜಮ್ಮು ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ವೇಳೆ ಬಾಲಕಿಯ ಫೋಟೋ ಹಾಗೂ ಧರ್ಮವನ್ನು ಕೆಲ ಮಾಧ್ಯಮಗಳು ಬಹಿರಂಗಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸದಂತೆ ದೆಹಲಿ ಹೈಕೋರ್ಟ್ 12 ಮಾಧ್ಯಮಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶಿಸಿತ್ತು. ದಂಡ ಹಣವನ್ನು ಜಮ್ಮು ಕಾಶ್ಮೀರದ ಸಂತ್ರಸ್ತ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಿತ್ತು.

    ಈ ವಿಚಾರಣೆ ವೇಳೆ ಮಾಧ್ಯಮಗಳ ಪರ ವಕೀಲರು ಕಾನೂನನ್ನು ಅರ್ಥ ಮಾಡಿಕೊಳ್ಳುವಲ್ಲಿ ಲೋಪವಾಗಿದೆ. ಸಂತ್ರಸ್ತ ಬಾಲಕಿ ಮೃತಪಟ್ಟ ಕಾರಣ ನಾವು ಆಕೆಯ ಫೋಟೋವನ್ನು ಪ್ರಕಟಿಸಿದ್ದೇವೆ. ನಾವು ಎಸಗಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದರು. ಆದರೆ ಹೈಕೋರ್ಟ್ ಮಾಧ್ಯಮಗಳ ಕ್ಷಮೆಯನ್ನು ಒಪ್ಪದೇ 10 ಲಕ್ಷ ರೂ. ದಂಡವನ್ನು ವಿಧಿಸಿತ್ತು. ಈ ಪ್ರಕರಣ ಬಳಿಕ ನ್ಯಾಯಾಲಯ ಮತ್ತೊಮ್ಮೆ ಮಾಧ್ಯಮಗಳಿಗೆ ಸೂಚನೆ ರವಾನಿಸಿದೆ.

    ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ದಾಖಲಾಗುತ್ತದೆ. ಈ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾದರೆ ಸಂತ್ರಸ್ತರ ವಿವರ, ಫೋಟೋ ಸೇರಿದಂತೆ ಯಾವುದೇ ಮಾಹಿತಿಯನ್ನು ಪ್ರಕಟಿಸುವಂತಿಲ್ಲ.