Tag: ಗುರುಗ್ರಾಮ ರೆಸಾರ್ಟ್

  • ಗುರುಗ್ರಾಮದಲ್ಲಿ ಶಾಸಕರನ್ನು ಇಟ್ಟಿದ್ಯಾಕೆ? ಕೊನೆಗೂ ಉತ್ತರ ನೀಡಿದ ಬಿಎಸ್‍ವೈ

    ಗುರುಗ್ರಾಮದಲ್ಲಿ ಶಾಸಕರನ್ನು ಇಟ್ಟಿದ್ಯಾಕೆ? ಕೊನೆಗೂ ಉತ್ತರ ನೀಡಿದ ಬಿಎಸ್‍ವೈ

    ಬೆಂಗಳೂರು: ಲೋಕಸಭಾ ಚುನಾವಣೆ ಚರ್ಚೆಯ ಉದ್ದೇಶದಿಂದ ಗುರುಗ್ರಾಮದ ರೆಸಾರ್ಟ್ ನಲ್ಲಿ ನಮ್ಮ ಶಾಸಕರು ಸೇರಿದ್ದಾರೆ ಅಂತ ಹೇಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ನಿಜವಾದ ಕಾರಣ ಬಿಚ್ಚಿಟ್ಟಿದ್ದಾರೆ.

    ಸಿಎಲ್‍ಪಿ ಸಭೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯ ಐದು ಶಾಸಕರು ನಮ್ಮ ಬಳಿ ಇದ್ದಾರೆ ಅಂತ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ನಮ್ಮ ಶಾಸಕರನ್ನು ದೆಹಲಿಗೆ ಕರೆಸಿಕೊಂಡು ಅಲ್ಲಿಂದ ಗುರುಗ್ರಾಮದ ರೆಸಾರ್ಟ್ ಗೆ ಕಳುಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

    ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿ.ಎಸ್.ಯಡಿಯೂರಪ್ಪ ಅವರು, ಒಂದು ವಾರದಿಂದ ಕಾಂಗ್ರೆಸ್‍ನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. 3 ಗಂಟೆಗೆ ಆರಂಭವಾಗಬೇಕಿದ್ದ ಸಿಎಲ್‍ಪಿ ಸಭೆ 5 ಗಂಟೆಗೆ ಆರಂಭವಾಗಿದೆ. ಇದರಿಂದಾಗಿ ಅವರಲ್ಲಿಯೇ ಅಸಮಧಾನ ಹೊಗೆ ಆಡುತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಕಿಡಿಕಾರಿದರು.

    ದೇಶದಲ್ಲಿ ಆಯರಾಂ ಗಯಾರಾಂ ಎನ್ನವುದನ್ನು ಹುಟ್ಟು ಹಾಕಿದವರು ಕಾಂಗ್ರೆಸ್‍ನವರು. ಸಿಎಲ್‍ಪಿ ಸಭೆಯಲ್ಲಿ ಕುಳಿತು ಶಾಸಕರಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಇದರಿಂದಾಗಿ ನಾಯಕರು ಬಲವಂತದಿಂದ ಶಾಸಕರು ಸಭೆಗೆ ಹಾಜರಾಗಿದ್ದಾರೆ. ಈ ಮಧ್ಯೆಯೂ 4 ಜನ ಶಾಸಕರು ಗೈರು ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಮಂತ್ರಿಗಳು ರಾಜ್ಯ ಪ್ರವಾಸ ಮಾಡುವುದನ್ನು ಬಿಟ್ಟು ಬಿಜೆಪಿ ವಿರುದ್ಧ ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮೈತ್ರಿ ಸರ್ಕಾರವು ಇನ್ನು ಮುಂದೆಯಾದರೂ ಬರಗಾಲ ಬಗ್ಗೆ ಗಮನ ಕೊಡಬೇಕು. ಒಂದು ವೇಳೆ ನಿಷ್ಕಾಳಜಿ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ. ಬೀದಿಗಿಳಿದು ಸರ್ಕಾರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

    ಬರ ವೀಕ್ಷಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ 20 ರಿಂದ 25 ಕ್ಷೇತ್ರ ಗೆಲ್ಲುವತ್ತ ನಮ್ಮ ಚಿತ್ತವಿದೆ. ಪಕ್ಷೇತರರ ಶಾಸಕರ ಬೆಂಬಲದಿಂದ ನಮ್ಮ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ನಾನು ಸಿಎಲ್‍ಪಿ ಸಭೆಯ ಬೆಳವಣಿಗೆ ಗಮನಿಸಿದ್ದೇನೆ. ನಿಮ್ಮ ಕಿತ್ತಾಟ ಏನೇ ಇರಲಿ. ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ ಎಂದು ಬಿ.ಎಸ್.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರುಗ್ರಾಮ ಬಿಟ್ಟು ಇನ್ನೊಂದು ರೆಸಾರ್ಟ್ ಗೆ ಬಿಜೆಪಿ ಶಾಸಕರು ಶಿಫ್ಟ್!

    ಗುರುಗ್ರಾಮ ಬಿಟ್ಟು ಇನ್ನೊಂದು ರೆಸಾರ್ಟ್ ಗೆ ಬಿಜೆಪಿ ಶಾಸಕರು ಶಿಫ್ಟ್!

    – ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ಮೇಲೆ ಇನ್ನೂ ವಿಶ್ವಾಸವಿಟ್ಟ ಬಿಜೆಪಿ

    ನವದೆಹಲಿ: ಗುರುಗ್ರಾಮ ರೆಸಾರ್ಟ್ ನಲ್ಲಿರುವ ಅರ್ಧಕ್ಕಿಂತ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಸಿಎಲ್‍ಪಿ ಸಭೆಯ ಬೆಳವಣಿಗೆ ನೋಡಿಕೊಂಡು ಅವರನ್ನು ರಾಜ್ಯಕ್ಕೆ ಕರೆತರುವ ನಿರ್ಧಾರವನ್ನು ಬಿಜೆಪಿಯ ನಾಯಕರು ಕೈಗೊಂಡಿದ್ದಾರೆ.

    ಸಾರಾಯ್‍ನ ಲೆಮೆನ್ ಟ್ರೀ ಹೋಟೆಲ್ ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್‍ನಿಂದ 2 ಕಿಮೀ ದೂರದಲ್ಲಿದೆ. ಇಲ್ಲಿಗೆ ಹೊಸದಾಗಿ ಆಯ್ಕೆಯಾಗಿರುವ ಕೆಲ ಶಾಸಕರು ಸೇರಿದಂತೆ 23 ಜನ ಶಾಸಕರನ್ನು ರಹಸ್ಯವಾಗಿ ಹರ್ಯಾಣದ ಬಿಜೆಪಿ ನಾಯಕರು ಶಿಫ್ಟ್ ಮಾಡಿದ್ದಾರಂತೆ. ಈ ಮೂಲಕ ಇನ್ನೂ ಒಂದು ದಿನ ಕಾದು ನೋಡಿ ಆಪರೇಷನ್ ಕಮಲದ ಎರಡನೇ ಹಂತವನ್ನು ಯಶಸ್ವಿಯಾಗಿಸಲು ಬಿಜೆಪಿ ನಾಯಕರು ಮೆಗಾ ಪ್ಲಾನ್ ರೂಪಿಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ಮೇಲೆ ಬಿಜೆಪಿ ಇನ್ನೂ ವಿಶ್ವಾಸದಲ್ಲಿದ್ದು, ಒಂದು ವೇಳೆ ಕಾಂಗ್ರೆಸ್ ಶಾಸಕಾಂಗ ಸಭೆಗೆ ಅತೃಪ್ತ ಕಾಂಗ್ರೆಸ್ ಶಾಸಕರು ಗೈರಾದರೆ ಬಿಜೆಪಿ ಶಾಸಕರು ರೆಸಾರ್ಟ್ ನಲ್ಲಿ ವಾಸ್ತವ್ಯ ಮುಂದುವರಿಸಲಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿಗೆ ಬಿಜೆಪಿ ಶಾಸಕರು ವಾಪಸ್ ಆದರೂ ಅಗತ್ಯ ಬಿದ್ದರೆ ಮತ್ತೆ ರೆಸಾರ್ಟ್ ಗೆ ಸೇರಿಸಲು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿದ್ದು, ರಾಜಕೀಯ ಬೆಳವಣಿಗೆ ನೋಡಿಕೊಂಡು ದೆಹಲಿಯಲ್ಲಿರುವ ಶಾಸಕರಿಗೆ ಏನು ಮಾಡಬೇಕು ಎನ್ನುವ ಮಾಹಿತಿ ನೀಡುತ್ತಿದ್ದಾರೆ. ಇತ್ತ ಲೆಮೆನ್ ಟ್ರೀ ರೆಸಾರ್ಟ್ ಗೆ ಶಾಸಕ ಹರತಾಳು ಹಾಲಪ್ಪ ಆಗಮಿಸಿ ಕೈಯಿಂದ ಮುಖಮುಚ್ಚಿಕೊಂಡೇ ಕಾರಿನೊಳಗೆ ಕುಳಿತಿದ್ದರು. ಈ ಎಲ್ಲ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv