Tag: ಗುರಗಾಂವ್

  • ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

    ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

    ಗುರ್ಗಾವ್: 2ನೇ ತರಗತಿ ಬಾಲಕನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕೊಲೆ ಮಾಡಿರುವ ಘಟನೆ ದೆಹಲಿ ಸಮೀಪದ ಗುರ್ಗಾವ್ ನಲ್ಲಿರುವ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.

    7 ವರ್ಷದ ಪ್ರದ್ಯುಮನ್ ಕೊಲೆಯಾದ ಬಾಲಕ. ಪ್ರದ್ಯುಮನ್‍ನ ಕತ್ತು ಸೀಳಲಾಗಿದ್ದು, ಮೃತದೇಹದ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಬಾಲಕನ ಸಾವಿನ ಬಗ್ಗೆ ವಿಷಯ ಹರಡುತ್ತಿದ್ದಂತೆ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಶಾಲೆಯ ಬಳಿ ಧಾವಿಸಿದ್ದಾರೆ. ಶಾಲೆಯ ಪೀಠೋಪಕರಣಗಳನ್ನ ಎಸೆದಾಡಿದ್ದು, ಕಿಟಕಿ ಗಾಜುಗಳನ್ನ ಮುರಿದಿದ್ದಾರೆ. ಕೊನೆಗೆ ಪೊಲೀಸರು ಬಂದು ಪೋಷಕರನ್ನ ಕಟ್ಟಡದಿಂದ ತೆರವುಗೊಳಿಸಿದ್ದಾರೆ.

    ಇಂದು ಬೆಳಿಗ್ಗೆ 8.45ರ ವೇಳೆಗೆ ಶಾಲೆಯ ಅಧಿಕಾರಿಯೊಬ್ಬರು ಟಾಯ್ಲೆಟ್‍ಗೆ ಹೋದಾಗ ಬಾಲಕನ ಶವ ಪತ್ತೆಯಾಗಿದೆ. ಬಾಲಕನ ತಂದೆ ವರುಣ್ ಠಾಕೂರ್ ಖಾಸಗಿ ಕಂಪೆನಿಯೊಂದರಲ್ಲಿ ಕ್ವಾಲಿಟಿ ಮ್ಯಾನೇಜರ್ ಆಗಿದ್ದು, ಮಗನನ್ನು ಶಾಲೆಗೆ ಬಿಟ್ಟು ಹೋದ ಸ್ವಲ್ಪ ಸಮಯದಲ್ಲೇ ಈ ಘಟನೆ ನಡೆದಿದೆ.

    ನಾನು ಇಂದು ಬೆಳಿಗ್ಗೆ 7.55ರ ವೇಳೆಗೆ ಆತನನ್ನು ಡ್ರಾಪ್ ಮಾಡಿದೆ. ಅವನು ಖುಷಿಯಾಗಿದೇ ಇದ್ದ. ಬೆಳಿಗ್ಗೆ 9 ಗಂಟೆಗೆ ನನಗೆ ವಿಷಯ ತಿಳಿಯಿತು. ಆತನಿಗೆ ತೀವ್ರ ರಕ್ತಸ್ರಾವವಾಗುತ್ತಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೀವಿ ಎಂದು ಶಾಲೆಯವರು ಹೇಳಿದ್ರು. ನನಗೂ ಬರಲು ಹೇಳಿದ್ರು. ಅವರು ನನ್ನ ಮಗನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಬದುಕುಳಿಯುತ್ತಿದ್ದ ಎಂದು ಠಾಕುರ್ ಹೇಳಿದ್ದಾರೆ.

    ಪೊಲೀಸರು ಶಾಲೆಯ ಸಿಬ್ಬಂದಿ, ಶಿಕ್ಷಕರು ಹಾಗೂ ಪ್ರದ್ಯುಮನ್‍ನ ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ. ಟಾಯ್ಲೆಟ್ ಹೊರಗಡೆ ಕಾರಿಡಾರ್‍ನಲ್ಲಿರುವ ಸಿಸಿಟಿವಿಯಿಂದ ಏನಾದ್ರೂ ಸುಳಿವು ಸಿಗಬಹುದು ಎಂದು ಪೊಲೀಸರು ಭರವಸೆ ಹೊಂದಿದ್ದಾರೆ.

    ಎಲ್ಲಾ ರೀತಿಯಲ್ಲೂ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ. ಶಾಲಾ ಆವರಣದಲ್ಲಿರುವ ಮಾರು 30 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪೊಲೀಸ್ ತಂಡ ಪರೀಶೀಲನೆ ಮಾಡುತ್ತಿದೆ ಎಂದು ಗುರಗಾಂವ್ ಪೊಲೀಸ್ ವಕ್ತಾರರಾದ ರವಿಂದರ್ ಕುಮಾರ್ ಹೇಳಿದ್ದಾರೆ.

    ಕಳೆದ ವರ್ಷ ವಸಂತ್‍ಕುಂಜ್‍ನಲ್ಲಿ ಇದೇ ಶಾಲೆಯ ಮತ್ತೊಂದು ಶಾಖೆಯಲ್ಲಿ 1ನೇ ತರಗತಿಯ 6 ವರ್ಷದ ಬಾಲಕನ ಶವ ನೀರಿನ ಟ್ಯಾಂಕ್‍ನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

  • ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

    ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

    ಗುರ್‍ಗಾಂವ್: ಅವಳಿ ಸಹೋದರಿಯರು ಒಂದೇ ದಿನ ಸಾವನ್ನಪ್ಪಿರುವ ಘಟನೆ ದೆಹಲಿ ಬಳಿಯ ಗುರ್‍ಗಾಂವ್‍ನಲ್ಲಿ ಬುಧವಾರ ನಡೆದಿದೆ.

    ಐದು ವರ್ಷದ ಹರ್ಷ ಮತ್ತು ಹರ್ಷಿತ ಸಾವನ್ನಪ್ಪಿದ ಕಂದಮ್ಮಗಳು. ಬೇಸಿಗೆ ರಜೆಗೆಂದು ಅಜ್ಜಿಯ ಊರಾದ ಪಟೋಡಿ ವಿಭಾಗದ ಜಮಲ್‍ಪುರ್‍ಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಹರ್ಷ ಮತ್ತು ಹರ್ಷಿತಾ ಆಟ ಆಡುತ್ತಾ ಮನೆಯ ಹಿಂದುಗಡೆಯ ಹುಂಡೈ ಕಾರಿನ ಒಳಗಡೆ ಹೋಗಿದ್ದಾರೆ.

    ಕಾರಿನ ಒಳಗಡೆ ಆಡುವಾಗ ಕಾರ್ ಆಟೋಮೆಟಿಕ್ ಲಾಕ್ ಅಗಿದೆ. ಮಕ್ಕಳು ಕಾರಿನ ಲಾಕ್ ತೆಗೆಯಲು ಪ್ರಯತ್ನಿಸಿದ್ರೂ ಅದು ಓಪನ್ ಆಗಿಲ್ಲ. ಸಂಜೆ 4 ಗಂಟೆಗೆ ಮನೆಯ ಸದಸ್ಯರಿಗೆ ಹರ್ಷ ಮತ್ತು ಹರ್ಷಿತಾ ನಾಪತ್ತೆಯಾಗಿದ್ದು ತಿಳಿದಿದೆ. ಮಕ್ಕಳನ್ನು ಹುಡುಕಲು ಆರಂಭಿಸಿದಾಗ ಕಾರಿನಲ್ಲಿ ಹರ್ಷ ಮತ್ತು ಹರ್ಷಿತಾಳ ದೇಹಗಳು ಪತ್ತೆಯಾಗಿವೆ. ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಅವಳಿ ಸಹೋದರಿಯರು ಸಾವನ್ನಪ್ಪಿದ್ದಾರೆ.

    ನನ್ನ ಮಕ್ಕಳಿಬ್ರೂ ಹುಟ್ಟಿದಾಗ ನಮ್ಮ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು. ಇಬ್ಬರನ್ನು ಮೀರತ್‍ನ ಸೆಂಟ್ರಲ್ ಸ್ಕೂಲ್ ದಾಖಲು ಮಾಡಲಾಗಿತ್ತು. ಮಕ್ಕಳಿಬ್ಬರೂ ತುಂಬಾ ಚೂಟಿಯಾಗಿದ್ದರು ಎಂದು ಮಕ್ಕಳ ತಂದೆ ಗೋವಿಂದ್ ಕಣ್ಣೀರು ಹಾಕುತ್ತಾ ಹೇಳಿದರು.

    ಹರ್ಷ ಮತ್ತು ಹರ್ಷಿತಾ ಒಂದೇ ದಿನ ಹುಟ್ಟಿ ನಮಗೆಲ್ಲ ಖುಷಿ ನೀಡಿದ್ದರು. ಇಬ್ಬರು ಒಂದೇ ದಿನ ಸಾವನ್ನಪ್ತಾರೆ ಎಂದು ಗೊತ್ತಿರಲಿಲ್ಲ ಎಂದು ಮಕ್ಕಳ ಚಿಕ್ಕಪ್ಪ ಕನ್ವಾಲ್ ಸಿಂಗ್ ತಿಳಿಸಿದರು.

  • ಕಾಮುಕನಿಗೆ ಚಪ್ಪಲಿಯಿಂದ ಬಾರಿಸಿದ ಪಬ್‍ನ ಮಹಿಳಾ ನೌಕರರು- ವಿಡಿಯೋ ವೈರಲ್

    ಕಾಮುಕನಿಗೆ ಚಪ್ಪಲಿಯಿಂದ ಬಾರಿಸಿದ ಪಬ್‍ನ ಮಹಿಳಾ ನೌಕರರು- ವಿಡಿಯೋ ವೈರಲ್

    ಗುರಗಾಂವ್: ಇಲ್ಲಿನ ಪಬ್‍ವೊಂದರ ಮಹಿಳಾ ನೌಕರರು ಕಾಮುಕನನ್ನು ಚಪ್ಪಲಿಯಿಂದ ಸಾರ್ವಜನಿಕವಾಗಿಯೇ ಥಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶನಿವಾರ ರಾತ್ರಿ ಗುರಗಾಂವ್‍ನ ಎಂಜಿ ರೋಡ್‍ನಲ್ಲಿ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಪಬ್‍ನ ಮಹಿಳಾ ನೌಕರೆಯೊಬ್ಬರ ಬಳಿ ಬಂದು ಹಿಂದಿನಿಂದ ಹಿಡಿದುಕೊಂಡಿದ್ದಾನೆ. ತಕ್ಷಣವೇ ಮಹಿಳೆಯ ಸಹೋದ್ಯೋಗಿಗಳು ಆಕೆಯ ನೆರವಿಗೆ ಧಾವಿಸಿದ್ದು, ಆ ವ್ಯಕ್ತಿಗೆ ಚಪ್ಪಲಿಯಿಂದ ಬಾರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗ್ತಿದೆ.

    ಘಟನೆ ನಡೆದ ವೇಳೆ ಸ್ಥಳದಲ್ಲಿ ಪೊಲೀಸರು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಪುರುಷ ಹಾಗೂ ಮಹಿಳಾ ಪೇದೆಗಳನ್ನ ನಿಯೋಜಿಸಿದ್ದೇವೆ. ಸಂತ್ರಸ್ಥರು ಪೊಲೀಸರ ಬಳಿ ಬಂದಾಗ ಎಫ್‍ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಮನಿಷ್ ಸೆಹ್ಗಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.