Tag: ಗುಪ್ತಚರ ವರದಿ

  • ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ ಮೇಲುಗೈ – ಎರಡೂ ಕ್ಷೇತ್ರದಲ್ಲಿ ಗೆಲ್ತಾರಂತೆ ಸಿದ್ದರಾಮಯ್ಯ!

    ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ ಮೇಲುಗೈ – ಎರಡೂ ಕ್ಷೇತ್ರದಲ್ಲಿ ಗೆಲ್ತಾರಂತೆ ಸಿದ್ದರಾಮಯ್ಯ!

    ಬೆಂಗಳೂರು: ಕರ್ನಾಟಕ ರಾಜಕೀಯ ಭವಿಷ್ಯ ನಾಳೆ ಬಯಲಾಗಲಿದ್ದು, ಈಗಾಗಲೇ ಬಂದಿರೋ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಇತ್ತ ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ ಜಯದ ಪತಾಕೆ ಹಾರಿಸಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಕೇಂದ್ರ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ 95 ರಿಂದ 102 ಸ್ಥಾನಗಳನ್ನು ಗೆಲ್ಲೋ ನಿರೀಕ್ಷೆ ಇದ್ಯಂತೆ. ಬಿಜೆಪಿಗೆ 80 ರಿಂದ 85 ಸ್ಥಾನಗಳು ಸಿಗಲಿದ್ಯಂತೆ. ಜೆಡಿಎಸ್ 35 ರಿಂದ 40 ಸೀಟುಗಳಲ್ಲಿ ಜಯಿಸಲಿದೆ ಅಂತಾ ಊಹಿಸಲಾಗಿದೆ.

    ರಾಜ್ಯ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ 102 ಸ್ಥಾನ, ಬಿಜೆಪಿ 70, ಜೆಡಿಎಸ್‍ಗೆ 28 ಸ್ಥಾನ ಸಿಗಲಿದೆ. 20 ಕ್ಷೇತ್ರಗಳಲ್ಲಿ 10ರಲ್ಲಿ ಜೆಡಿಎಸ್, 10 ಕ್ಷೇತ್ರಗಳಲ್ಲಿ ಬಿಜೆಪಿ ನಡುವೆ ಕಾಂಗ್ರೆಸ್‍ಗೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳಿವೆ. 30 ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಲಾಗಿದೆ.

    ಈ ಬಾರಿ ಬದಾಮಿ ಹಾಗು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದು, ಎರಡೂ ಕ್ಷೇತ್ರಗಳಲ್ಲಿ ಸಿಎಂ ಗೆಲ್ಲಲಿದ್ದಾರೆ ಅಂತಾ ವರದಿಗಳು ಹೇಳ್ತಿವೆ. ಚಾಮುಂಡೇಶ್ವರಿಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯ ಸಾಧಿಸಿದ್ರೆ, ಬದಾಮಿಯಲ್ಲಿ ಬಹುಮತಗಳ ಅಂತರದಿಂದ ಸಿಎಂ ಜಯ ಸಾಧಿಸಲಿದ್ದಾರೆ ಅಂತಾ ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಗಳು ಭವಿಷ್ಯ ನುಡಿದಿವೆ.

  • ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಜಯ ಯಾರಿಗೆ? ಗುಪ್ತಚರ ಇಲಾಖೆಯ ವರದಿ ಇಲ್ಲಿದೆ

    ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಜಯ ಯಾರಿಗೆ? ಗುಪ್ತಚರ ಇಲಾಖೆಯ ವರದಿ ಇಲ್ಲಿದೆ

    ಬೆಂಗಳೂರು: ಪ್ರತಿಷ್ಠೆ, ಸವಾಲು, ಅನುಕಂಪದ ವಿಷಯವಾಗಿ ಭಾರೀ ಕುತೂಹಲ ಕೆರಳಿಸಿರೋ ನಂಜನಗೂಡಿನಲ್ಲಿ ಶೇ.77.56 ಹಾಗೂ ಗುಂಡ್ಲುಪೇಟೆಯಲ್ಲಿ ಶೇ.87.10 ಯಷ್ಟು ಮತದಾನವಾಗಿದೆ. ನಂಜನಗೂಡು ನಗರದಲ್ಲಿರುವ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆದ್ರೆ, ಗುಂಡ್ಲುಪೇಟೆಯಲ್ಲಿರುವ ಸೆಂಟ್ ಜಾನ್ ಫ್ರೌಢಶಾಲೆಯಲ್ಲಿ ಭದ್ರತಾ ಕೊಠಡಿ ಸ್ಥಾಪಿಸಲಾಗಿದೆ. ಸ್ಟ್ರಾಂಗ್‍ರೂಮ್‍ನಲ್ಲಿ ಭದ್ರವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಗುರುವಾರ ಹೊರಬರಲಿದೆ.

    ಈಗಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಗೆಲುವು ನಮ್ಮದೇ ಅಂತ ಎದೆಯುಬ್ಬಿಸಿ ಬೀಗುತ್ತಿವೆ. ಮತದಾನದ ನಂತರ ನಂಜನಗೂಡಿನಲ್ಲಿ ಎರಡೂ ಪಕ್ಷಗಳು ಬೂತ್ ಮಟ್ಟದಲ್ಲಿ ಡಾಟಾ ಕಲೆಕ್ಷನ್ ಮಾಡ್ತಿವೆ. ಯಾವ್ಯಾವ ಬೂತ್‍ನಲ್ಲಿ ಎಷ್ಟೆಷ್ಟು ಬೆಂಬಲಿಗರಿದ್ದಾರೆ ಅಂತ ಲೆಕ್ಕಾಚಾರದಲ್ಲಿ ತೊಡಗಿವೆ.

    ನಂಜನಗೂಡಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವ್ರು ಮೈಸೂರಿನಲ್ಲೇ ಕುಳಿತು ವಿಶ್ಲೇಷಣೆ ಮಾಡ್ತಿದ್ರೆ, ಕಾಂಗ್ರೆಸ್‍ನ ಕಳಲೇ ಕೇಶವಮೂರ್ತಿ ನಂಜನಗೂಡಿನಲ್ಲಿ ಕಾರ್ಯಕರ್ತರಿಂದ ಮಾಹಿತಿ ತರಿಸಿಕೊಳ್ತಿದ್ದಾರೆ. ಗುಂಡ್ಲುಪೇಟೆಯಲ್ಲಿ ಆಯಾ ಪಕ್ಷದ ಕಚೇರಿಯಲ್ಲಿ ಮುಖಂಡರು ಲೆಕ್ಕಾಚಾರ ನಡೆಸ್ತಿದ್ದಾರೆ.

    ಈ ಬಾರಿ ಮಹಿಳೆಯರು ಹೆಚ್ಚಾಗಿ ವೋಟ್ ಮಾಡಿರೋ ಕಾರಣ ಕಾಂಗ್ರೆಸ್‍ನ ಗೀತಾಪ್ರಸಾದ್ ಉತ್ಸುಕರಾಗಿದ್ದಾರೆ. ಆದರೆ ಇಬ್ಬರು ಅಭ್ಯರ್ಥಿಗಳು ಅನುಕಂಪದ ವಿಚಾರವಾಗಿ ಚುನಾವಣೆ ಎದುರಿಸಿರುವುದರಿಂದ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಅನ್ನೋದನ್ನ ಏಪ್ರಿಲ್ 13ರವರೆಗೆ ಕಾದುನೋಡಬೇಕಿದೆ.

    ಈ ಕೌತುಕ, ಆತಂಕ ಹೆಚ್ಚಾಗಿರುವ ಈ ಟೈಮಲ್ಲೇ ರಾಜ್ಯ ಮತ್ತು ಕೇಂದ್ರದ ಗುಪ್ತಚರ ಇಲಾಖೆಗಳು ಎರಡೂ ವಿಭಿನ್ನ ಮತ್ತು ವ್ಯತಿರಿಕ್ತ ವರದಿ ನೀಡಿರೋದು ಗೊತ್ತಾಗಿದೆ. ನಂಜನಗೂಡಿನಲ್ಲಿ 4 ರಿಂದ 5 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದರೆ, ಸಾವಿರ ಮತಗಳಿಂದ ಬಿಜೆಪಿಗೆ ಜಯ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಗುಂಡ್ಲುಪೇಟೆ 5 ರಿಂದ 6 ಸಾವಿರ ಮತಗಳಿಂದ ಕಾಂಗ್ರೆಸ್‍ಗೆ ವಿಜಯಮಾಲೆ ಸಿಗಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದರೆ, 2000 ಮತಗಳಿಂದ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ.